ವಾಕ್‌ಸ್ವಾತಂತ್ರ್ಯ, ಸೇನೆಯ ಅತಿ ವೈಭವೀಕರಣ, ಮಾಧ್ಯಮಗಳು ಮತ್ತು ಮೋದಿ ಸರಕಾರ
ಭಾಗ- 2
ಮೋದಿ ಓರ್ವ ಅತಿಮಾನುಷ, ರಾಕ್ಷಸ ಸಂಹಾರಿ ರಾಮ, ಸೋಲರಿ ಯದ ಅಜೇಯ ನಾಯಕ, ಕಠಿಣ ನಿರ್ಧಾರಗಳಿಗೆ ಇನಿತೂ ಹಿಂಜರಿಯದ ಪ್ರಧಾನಿ ಎಂಬಂತೆ ಬಿಂಬಿಸಲಾಗುತ್ತಿದೆ. ಅಂದು ಉತ್ತರಾಖಂಡದಲ್ಲಾದ ಮಹಾಪೂರದ ಸಂದರ್ಭದಲ್ಲಿ ಸಾವಿರಾರು ಯಾತ್ರಿಕರನ್ನು ಮೋದಿಯೊಬ್ಬರೇ ರಕ್ಷಿಸಿದ್ದರೆಂಬ ಸುಳ್ಳನ್ನು ಹರಿಯಬಿಟ್ಟುದನ್ನು ನೆನಪಿಸಿಕೊಳ್ಳಬಹುದು. ವಿದೇಶೀ ರಾಷ್ಟ್ರಗಳ ನಾಯಕರ ಮೇಲೆ, ಶೃಂಗಸಭೆಗಳ ಮೇಲೆ ಪ್ರಭಾವ ಬೀರುವವನಂತೆ ತೋರಿಸಿಕೊಳ್ಳುತ್ತಿರುವುದೂ ಇದೇ ಇಮೇಜು ಬೆಳೆಸುವ ಕಾರ್ಯಕ್ರಮದ ಭಾಗವಾಗಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಸೆಪ್ಟಂಬರ್ 29ರಂದು ನಡೆದುದೆನ್ನಲಾದ ನಿರ್ದಿಷ್ಟ ದಾಳಿಗಳು. ಅದಕ್ಕೂ ಮೊದಲು ಭಾರತೀಯ ಸೇನೆ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ನಡೆಸಿದ (ಮತ್ತು ಈಗಲೂ ನಡೆಸುತ್ತಿರುವ) ಇಂತಹುದೆ ದಾಳಿಗಳಿಗೆ ವ್ಯಾಪಕ ಪ್ರಚಾರ ನೀಡಿ ಅದರ ದುರ್ಲಾಭ ಪಡೆಯುವ ಯತ್ನ ಮೋದಿ ಸರಕಾರದಿಂದ ನಡೆದಿತ್ತು. ಆದರೆ ವಾಸ್ತವವಾಗಿ ಉಭಯ ದೇಶಗಳ ನಡುವಿನ ಒಪ್ಪಂದದನ್ವಯ ಇಂತಹ ಕಾರ್ಯಾಚರಣೆಗಳನ್ನು ರಹಸ್ಯವಾಗಿಡಬೇಕಾಗಿತ್ತು. ಮ್ಯಾನ್ಮಾರ್ ಸರಕಾರದಿಂದ ಭಾರೀ ಆಕ್ಷೇಪ ವ್ಯಕ್ತವಾದ ಬಳಿಕ ಮುಖ ಸಪ್ಪೆಮಾಡಿಕೊಂಡ ಮೋದಿ ಸರಕಾರ ಮನಸ್ಸಿಲ್ಲದ ಮನಸ್ಸಿನಿಂದ ಪ್ರಚಾರವನ್ನು ನಿಲ್ಲಿಸಬೇಕಾಗಿ ಬಂದಿದೆ! ನಿರ್ದಿಷ್ಟ ದಾಳಿಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಲಾಗದೆಂದು ಹೇಳಿದ್ದ ಸಂಘಪರಿವಾರ ನಂತರ ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಲು ಶುರುಮಾಡಿದೆೆೆ. ವರ್ತಮಾನ ಹಾಗೂ ಭವಿಷ್ಯತ್ತಿನಲ್ಲಿ ಗರಿಷ್ಠ ಚುನಾವಣಾ ಲಾಭ ಪಡೆದುಕೊಳ್ಳುವುದು ಸಂಘಪರಿವಾರದ ರಾಜಕೀಯ ಮುಖವಾದ ಬಿಜೆಪಿಯ ಉದ್ದೇಶವಾಗಿದೆ. ಆರಂಭದಲ್ಲಿ ನಿರ್ದಿಷ್ಟ ದಾಳಿಗಳ ಸಂಪೂರ್ಣ ಶ್ರೇಯಸ್ಸು ಕೇವಲ ಸೇನೆಗಷ್ಟೆ ಸಲ್ಲಬೇಕು ಎಂದ ಬಿಜೆಪಿ ನಾಯಕರು ಹತ್ತೇ ದಿನಗಳಲ್ಲಿ ಪಲ್ಲವಿ ಬದಲಾಯಿಸಿದರು. ವಿಷಯವನ್ನು ಜನತೆಯ ಬಳಿಗೊಯ್ಯಬೇಕೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರೆ ರಕ್ಷಣಾಮಂತ್ರಿ ಪಾರಿಕ್ಕರ್ ಪ್ರಶಂಸೆಯ ಗರಿಷ್ಠ ಪಾಲು ಮೋದಿಗೆ ಸಿಗಬೇಕು ಎಂದರು. ತರುವಾಯ ಇದೇ ಪಾರಿಕ್ಕರ್ ಅಹ್ಮದಾಬಾದ್‌ನಲ್ಲ್ಲಿ ಮತ್ತೊಂದು ಹೊಸ ರಾಗ ಹಾಡಿದ್ದಾರೆ. ನಿರ್ಮಾ ವಿಶ್ವವಿದ್ಯಾನಿಲಯದ ಭಾರತೀಯ ಸೇನೆ ಕುರಿತು ಅರಿವು ಮೂಡಿಸುವಿಕೆಗಾಗಿ ಎನ್ನಲಾದ ಟೆಕ್‌ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ನಿರ್ದಿಷ್ಟ ದಾಳಿ ನಡೆಸುವ ತಮ್ಮಿಬ್ಬರ (ತಾನು ಮತ್ತು ಮೋದಿ) ನಿರ್ಧಾರಕ್ಕೆ ಆರೆಸ್ಸೆಸ್ ನೀಡಿರುವ ಶಿಕ್ಷಣವೇ ಕಾರಣವೆಂಬ ರೀತಿ ಮಾತಾಡಿದ್ದಾರೆ. ಹೀಗೆ ರಹಸ್ಯವಾಗಿರಿಸಬೇಕಿದ್ದ ಸೇನಾ ಕಾರ್ಯಾಚರಣೆಗಳಿಗೆ ಇಷ್ಟೊಂದು ಪ್ರಚಾರ ಕೊಡುತ್ತಿರುವುದು ದೇಶದ ಗಡಿ ರಕ್ಷಣೆ ಮಾಡಲು ಕೇವಲ ಮೋದಿಯೊಬ್ಬರೇ ಸಮರ್ಥರೆಂದು ಬಿಂಬಿಸಲು. ಮೋದಿಯೂ ಹೆಚ್ಚುಕಮ್ಮಿ ಎಲ್ಲಾ ಭಾಷಣಗಳಲ್ಲಿ ಒಂದಲ್ಲ ಒಂದು ವಿಧದಲ್ಲಿ ಸೇನೆಯ ಪ್ರಸ್ತಾಪ ಮಾಡತೊಡಗಿದ್ದಾರೆ. ಅಕ್ಟೋಬರ್ 18ರಂದು ಹಿಮಾಚಲ ಪ್ರದೇಶದಲ್ಲಿ ನಡೆಸಿದ ಸಭೆಯೊಂದರ ವೇಳೆ ಮೋದಿ ಭಾರತೀಯ ಸೇನೆಯನ್ನು ಇಸ್ರೇಲಿ ಸೇನೆಗೆ ಹೋಲಿಸಿದ್ದಾರೆ. ಆದರೆ ಇಸ್ರೇಲಿ ಸೇನೆ ವಿಶ್ವಸಂಸ್ಥೆಯ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ. ಅದರ ಮೇಲೆ ಯುದ್ಧಾಪರಾಧಗಳ ಆರೋಪಗಳಿವೆ. ಪ್ರಧಾನ ಮಂತ್ರಿ ಸ್ಥಾನದಲ್ಲಿರುವವರು ಇಸ್ರೇಲಿನ ಸೇನಾ ಕಾರ್ಯಾಚರಣೆಗಳನ್ನು ಹೊಗಳುವುದೆಂದರೆ ಅಧಿಕೃತವಾಗಿ ಸರಕಾರದ ನಿಲುವುಗಳು ಬದಲಾಗಿರುವುದರ ಸೂಚಕ. ಇಸ್ರೇಲ್ ಅಂತಾರಾಷ್ಟ್ರೀಯ ಮಾನವೀಯತಾ ಕಾನೂನನ್ನು ಉಲ್ಲಂಘಿಸುತ್ತಿರುವುದನ್ನು ಖಂಡಿಸುತ್ತಾ ಬಂದಿರುವ ಭಾರತ ಎಪ್ರಿಲ್ 2016ರ ನಂತರದಲ್ಲಿ ತನ್ನ ನಿಲುವನ್ನು ಬದಲಾಯಿಸಿದೆ. ಈ ಬಾರಿ ವಿಶ್ವಸಂಸ್ಥೆಯಲ್ಲಿ ಈ ಕುರಿತಂತೆ ನಡೆದ ಮತದಾನದ ವೇಳೆ ಭಾರತ ಗೈರು ಹಾಜರಾಗಿದೆ. ವಾಸ್ತವವಾಗಿ ಮುಸ್ಲಿಂ ದ್ವೇಷಿಯೂ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶವೂ ಆದ ಇಸ್ರೇಲ್ ಅಂದರೆ ಸಂಘಪರಿವಾರಕ್ಕೆ ಮೊದಲಿನಿಂದಲೂ ಅಚ್ಚುಮೆಚ್ಚು. ಆರೆಸ್ಸೆಸ್‌ನ ಶಾಖೆಗಳಲ್ಲೆಲ್ಲ ಇಸ್ರೇಲ್‌ಅನ್ನು ಭರ್ಜರಿಯಾಗಿ ಹೊಗಳಲಾಗುತ್ತದೆ. ಮತ್ತೊಂದು ಮುಖ್ಯ ವಿಷಯವೆಂದರೆ ಇಸ್ರೇಲ್‌ನಲ್ಲಿಯೂ ಸೇನಾಪಡೆಗಳನ್ನು ವೈಭವೀಕರಿಸಲಾಗುತ್ತದೆ. ಹೀಗಾಗಿ ಅಲ್ಲಿ ಸೇನಾಪಡೆ ಕುರಿತ ಬರಹಗಳು ಪ್ರಕಟನೆಗೆ ಮುನ್ನ ಸೆನ್ಸಾರ್‌ಶಿಪ್‌ಗೆ ಒಳಪಡುತ್ತವೆ.
ಭಾರತೀಯ ಮಾಧ್ಯಮಗಳು
ಪ್ರಜಾಪ್ರಭುತ್ವವೊಂದರಲ್ಲಿ ಜನ ತಮ್ಮ, ತಮ್ಮಿಂದ, ತಮಗಾಗಿ ಇರುವ ಸರಕಾರವನ್ನು ಪ್ರಶ್ನಿಸಬಹುದಾದರೆ ಸರಕಾರದ ಅಂಗವಾದ ಸೇನೆಯನ್ನೂ ಖಂಡಿತ ಪ್ರಶ್ನಿಸಬಹುದಾಗಿದೆ ಮಾತ್ರವಲ್ಲ ಪ್ರಶ್ನಿಸಲೇಬೇಕಾಗಿದೆ. ಆದರೆ ಈ ವಿಷಯದಲ್ಲಿ ಇಂದಿನ ಭಾರತೀಯ ಮಾಧ್ಯಮಗಳ ನಡೆ ಪಾಕಿಸ್ತಾನಕ್ಕಿಂತಲೂ ನಿಕೃಷ್ಟವಾಗಿದೆ ಎಂದು ಬ್ರಿಟನ್‌ನ ಇಕನಾಮಿಸ್ಟ್ ಪತ್ರಿಕೆ ಹೇಳಿದೆ. ಅದು ಉಭಯ ದೇಶಗಳ ಮಾಧ್ಯಮಗಳ ವರದಿಗಾರಿಕೆಗಳನ್ನು ಹೋಲಿಸಿದ ಬಳಿಕ ಈ ಅಭಿಪ್ರಾಯಕ್ಕೆ ಬಂದಿದೆ. ಇತ್ತೀಚೆಗೆ ಸರಕಾರ, ಸೇನೆಗಳ ಮಧ್ಯೆ ಜಗಳ ನಡೆದ ಬಗ್ಗೆ ಬರೆದ ಪಾಕಿಸ್ತಾನಿ ಪತ್ರಕರ್ತ ಅಲ್ಮೇಡಾರ ಮೇಲೆ ಪಾಕ್ ಸರಕಾರ ಕೆಂಗಣ್ಣು ಬೀರಿದಾಗ ಆತನ ಬೆಂಬಲಕ್ಕೆ ಕೇವಲ ಆತ ಕೆಲಸ ಮಾಡುತ್ತಿರುವ ಡಾನ್ ಪತ್ರಿಕೆಯೊಂದೆ ಅಲ್ಲ ಇತರ ಮಾಧ್ಯಮಗಳೂ ನಿಂತವು. ಆದರೆ ಭಾರತದ ಬಹುತೇಕ ಮಾಧ್ಯಮಗಳು ನಿರ್ದಿಷ್ಟ ದಾಳಿಯನ್ನು ಭಾರೀ ಯಶಸ್ವಿ ಕಾರ್ಯಾಚರಣೆ ಎನ್ನುತ್ತಾ ಸರಕಾರವನ್ನು ಅಭಿನಂದಿಸಿದವು ಹೊರತು ಪ್ರಶ್ನೆಗಳನ್ನೆತ್ತುವ ಗೋಜಿಗೆ ಹೋಗಲಿಲ್ಲ. ಕೂಗುಮಾರಿ ಎಂದೇ ಖ್ಯಾತನಾದ ಟಿವಿ ಆ್ಯಂಕರ್ ಒಬ್ಬ ಸೇನೆಯನ್ನು ಪ್ರಶ್ನಿಸುವ ಪತ್ರಕರ್ತರನ್ನು ಬಂಧಿಸಿ ಜೈಲಿಗಟ್ಟಬೇಕೆಂದ. ಮತ್ತೊಂದು ವಾಹಿನಿ ಸ್ಟುಡಿಯೊವನ್ನು ಯುದ್ಧ ನಿಯಂತ್ರಣ ಕೊಠಡಿಯಂತೆ ಸಿಂಗರಿಸಿ ತಾವೆಲ್ಲ ಮಹಾ ತಜ್ಞರೆಂಬಂತೆ ತೋರಿಸಿಕೊಳ್ಳಲು ಯತ್ನಿಸಿತು. ಮಗದೊಂದು ಟಿವಿ ವಾಹಿನಿ ಮಾಜಿ ಗೃಹಸಚಿವರೊಬ್ಬರ ಸಂದರ್ಶನವನ್ನು ಪ್ರಸಾರ ಮಾಡಲು ಹಿಂಜರಿಯಿತು. ಹಿಂದೆ ಭಾರತದ ಮಾಧ್ಯಮಗಳಲ್ಲಿ ಆಳುವ ಸರಕಾರ, ಸೇನಾ ಕಾರ್ಯಾಚರಣೆಗಳು ಇತ್ಯಾದಿಗಳನ್ನು ಪ್ರಶ್ನಿಸುವ ಆರೋಗ್ಯಕರ ವಾತಾವರಣ ಇತ್ತು. ಇದಕ್ಕೆ ಉದಾಹರಣೆಯಾಗಿ ಅದೆಷ್ಟೋ ಘಟನೆಗಳನ್ನು ಉಲ್ಲೇಖಿಸಬಹುದಾದರೂ ಸದ್ಯ ಒಂದೆರಡನ್ನು ಜ್ಞಾಪಿಸಿಕೊಳ್ಳೋಣ. 2005ರಲ್ಲಿ ನೌಕಾ ಸೇನೆಯ ಮುಖ್ಯಸ್ಥನ ಪತ್ನಿಯ ಸಂಬಂಧಿಯೊಬ್ಬ ಯುದ್ಧ ರಹಸ್ಯಗಳನ್ನು ಬಹಿರಂಗಪಡಿಸಿದ ಘಟನೆ ನಡೆದಿತ್ತು. ಈ ವಿಚಾರ ತಿಳಿದ ಬಳಿಕವೂ ಆತ ರಾಜೀನಾಮೆ ನೀಡುವ ಪ್ರಾಮಾಣಿಕತೆ ಪ್ರದರ್ಶಿಸಿರಲಿಲ್ಲ. ಆದರೆ ಯುದ್ಧ ರಹಸ್ಯಗಳನ್ನು ದಾಟಿಸಿದ ಈ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಆತ ರಾಜೀನಾಮೆ ನೀಡದೆ ಗತ್ಯಂತರ ವಿಲ್ಲ ಎಂದಾಯಿತು. 2012ರಲ್ಲಿ ಅಂದು ಸೇನಾ ಮುಖ್ಯಸ್ಥನಾಗಿದ್ದ ಜ ವಿ.ಕೆ. ಸಿಂಗ್ ಪ್ರಧಾನಿಗೆ ಪತ್ರವೊಂದನ್ನು ಬರೆದು ಸೇನೆಯಲ್ಲಿ ಸಾಕಷ್ಟು ಬಿಡಿಭಾಗಗಳು, ಆಯುಧಗಳು ಇಲ್ಲದೆ ಉಂಟಾಗಿರುವ ಅಭದ್ರ ಪರಿಸ್ಥಿತಿ ಕುರಿತು ಗಮನ ಸೆಳೆದಿದ್ದರು. ಗುಟ್ಟಾಗಿ ಇರಿಸಲಾಗಿದ್ದ ಈ ವಿಷಯ ಸಂಸತ್ತಿನ ಸ್ಥಾಯಿ ಸಮಿತಿಗೆ ತಿಳಿದುಬಂದುದು ಪತ್ರ ಮಾಧ್ಯಮಗಳಿಗೆ ಸೋರಿಕೆಯಾದ ನಂತರವೆ. ಆಗ ಸಮಿತಿ ಕೂಡಲೇ ಸಭೆ ಸೇರಿ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
ಆದರೆ ಇವತ್ತಿನ ಮೋದಿ ಸರಕಾರದ ಆಡಳಿತದಲ್ಲಿ ಸೇನೆಯ ಕಾರ್ಯಾಚರಣೆಗಳನ್ನು ಪ್ರಶ್ನಿಸುವುದು ದೇಶದ್ರೋಹ ಎಂದಾಗಿಬಿಟ್ಟಿದೆ! ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದರಲ್ಲಿ ಸೇನೆಯ ಉನ್ನತ ಮಟ್ಟ, ಸೈನಿಕರ ವೃತ್ತಿಪರತೆ, ಸ್ಥೈರ್ಯ, ಆತ್ಮವಿಶ್ವಾಸಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೇನೆಯ ಕ್ರಮಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಹಾಗೆಯೆ ಪ್ರಜಾಸತ್ತೆಯ ಉಳಿವಿನ ದೃಷ್ಟಿಯಲ್ಲಿ ಸರಕಾರವನ್ನು ಪ್ರಶ್ನಿಸುವ ಹಕ್ಕೂ ಅತ್ಯಗತ್ಯವಾಗಿದೆ. ಆದರೆ ಮೋದಿ ಸರಕಾರ ಆ ಸ್ವಾತಂತ್ರ್ಯವನ್ನು, ಆ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುತ್ತಿದೆ. ಇಂದು ಹೆಚ್ಚಿನ ಮಾಧ್ಯಮ ಗಳು ಒಂದೊ ಅಂಬಾನಿಯಂತಹ ಮೋದಿ ನಿಕಟವರ್ತಿಗಳ ಒಡೆತನದಲ್ಲಿವೆ ಅಥವಾ ಆಯಕಟ್ಟಿನ ಜಾಗಗಳಲ್ಲಿ ಸಂಘಪರಿವಾರದವರನ್ನು ಕೂರಿಸಲಾಗಿದೆ; ಇನ್ನುಳಿದ ಮಾಧ್ಯಮಗಳು ಜಾಹೀರಾತು ಮತ್ತಿತರ ಪರೋಕ್ಷ ವಿಧಾನಗಳ ಮೂಲಕ ಸರಕಾರದ ನಿಯಂತ್ರಣಕ್ಕೊಳಪಟ್ಟಿವೆ. ಪರಿಣಾಮವಾಗಿ ಅಂದು ಆಳುವ ಸರಕಾರಗಳನ್ನು ಪ್ರಶ್ನಿಸುತ್ತಿದ್ದ ಭಾರತೀಯ ಮಾಧ್ಯಮಗಳು ಇಂದು ಆ ಕೆಲಸವನ್ನು ಮಾಡುತ್ತಿಲ್ಲ. ವಾಸ್ತವದಲ್ಲಿ ಬೆರಳೆಣಿಕೆಯ ಮಾಧ್ಯಮಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಮೋದಿ ಸರಕಾರದ ವಕ್ತಾರರಂತಾಗಿಬಿಟ್ಟಿವೆ. ಅವುಗಳ ವರದಿಗಳಿಗೂ ಸರಕಾರದ ಅಧಿಕೃತ ಹೇಳಿಕೆಗಳಿಗೂ ವ್ಯತ್ಯಾಸವಿಲ್ಲ ಎಂದಾಗಿದೆ. ಉದಾಹರಣೆಗೆ 2015-16ರಲ್ಲಿ ಇರುವಷ್ಟು ನಿರುದ್ಯೋಗದ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಎಂದೂ ಇರಲಿಲ್ಲ ಎಂಬ ಕಹಿಸತ್ಯವನ್ನು ಎಷ್ಟು ಮಾಧ್ಯಮಗಳು ಪ್ರಕಟಿಸಿವೆ? ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ಮೇಕ್ ಇನ್ ಇಂಡಿಯ’ ಮುಂತಾದ ಘೋಷಣೆಗಳು ಏನಾದುವೆಂದು ಎಷ್ಟು ಮಾಧ್ಯಮಗಳು ಪ್ರಶ್ನಿಸಿವೆ?
ಭಾರತದ ಪ್ರಜಾಪ್ರಭುತ್ವಕ್ಕೆ ಎಂಥಾ ದೊಡ್ಡ ಕಂಟಕ ಎದುರಾಗಿದೆಯೆಂದು ಹೆಚ್ಚಿನ ಪ್ರಜೆಗಳಿಗೆ ತಿಳಿದಿರುವಂತಿಲ್ಲ. ಇದರ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಇತ್ತಾದರೂ ಅದರಿಂದ ಪ್ರಯೋಜನವಾಗಿಲ್ಲ. ಇತಿಹಾಸವನ್ನು ಮರೆತವರು ಅದರ ಪುನರಾವರ್ತನೆಯನ್ನು ಅನುಭವಿಸಬೇಕಾಗುತ್ತದೆ ಎಂದು ದಾರ್ಶನಿಕರು ಹೇಳಿರುವುದು ನಿಜವಾಗುತ್ತಿದೆ.
(ಆಧಾರ: ವಿವಿಧ ಮೂಲಗಳಿಂದ)