ಮುಂಬಯಿ ಮನಪಾ ಆಸ್ಪತ್ರೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ

Update: 2016-10-31 18:21 GMT

ಮುಂಬೈ ಮನಪಾ ಆಡಳಿತವು ಹಬ್ಬದ ಸಮಯ ಬಿಡುಗಡೆಗೊಳಿಸಿದ ಒಂದು ಸುತ್ತೋಲೆಯಿಂದ ಸಿಬ್ಬಂದಿ ಬೇಸರಗೊಂಡಿದ್ದಾರೆ. ಈ ಸುತ್ತೋಲೆಯಲ್ಲಿ ಮಹಾನಗರ ಪಾಲಿಕೆಯ ಆಸ್ಪತ್ರೆಗಳ ನೌಕರರು ಧಾರ್ಮಿಕ ಕಾರ್ಯಕ್ರಮವನ್ನು ಆಸ್ಪತ್ರೆಯೊಳಗೆ ಮಾಡುವಂತಿಲ್ಲ ಎಂದು ತಿಳಿಸಿದೆ. ಮನಪಾ ಆಡಳಿತದ ಅನುಸಾರ ಆಸ್ಪತ್ರೆಯೊಳಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದರಿಂದ ರೋಗಿಗಳಿಗೆ ತೊಂದರೆ ಉಂಟಾಗುತ್ತದೆಯಂತೆ.
ಮನಪಾ ಆಡಳಿತವು ಮಹಾನಗರ ಪಾಲಿಕೆಯ ಮೂರು ಮುಖ್ಯ ಆಸ್ಪತ್ರೆಗಳಾದ ಸಯನ್, ನಾಯರ್ ಮತ್ತು ಕೆ.ಇ.ಎವ್. ಸಹಿತ ಉಪನಗರದ ಆಸ್ಪತ್ರೆಗಳು ಮತ್ತು ದವಾಖಾನೆ ಒಳಗೊಂಡಂತೆ ಮಹಾನಗರ ಪಾಲಿಕೆಯ ದಂತ ಚಿಕಿತ್ಸಾ ಆಸ್ಪತ್ರೆಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗಡೆ, ಪರಿಸರದಲ್ಲಿ ನಡೆಸಬಾರದು ಎಂದು ಸುತ್ತೋಲೆಯಲ್ಲಿ ಆದೇಶಿಸಿದೆ. ಆದರೆ ಮನಪಾ ಕಾರ್ಯಕ್ರಮಗಳಲ್ಲಿ ರಾಷ್ಟ್ರದಿನಕ್ಕೆ ಸಂಬಂಧಿಸಿದ ಮತ್ತು ಕಾಲೇಜ್‌ಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ರಿಯಾಯಿತಿ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಇತರ ಯಾವುದೇ ಕಾರ್ಯಕ್ರಮಗಳನ್ನು ನಡೆಸುವ ಮೊದಲು ವರಿಷ್ಠ ಅಧಿಕಾರಿಗಳ ಅನುಮತಿ ಪಡೆಯುವುದು ಅವಶ್ಯವಾಗಿದೆ.
ಆದರೆ ಮನಪಾ ಸಿಬ್ಬಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಯೂನಿಯನ್ ನೇತಾರರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಂದ ರೋಗಿಗಳಿಗೆ ತೊಂದರೆ ಆಗುವುದಿಲ್ಲ, ಅವರಿಗೆ ಹೆಚ್ಚಿನ ಖುಷಿ ಆಗುತ್ತದೆ. ಆಸ್ಪತ್ರೆಯಲ್ಲಿ ಸೇವಾ ನಿವೃತ್ತರಾಗುವ ಡಾಕ್ಟರ್‌ಗಳಿಗೆ ವಿದಾಯಕೂಟ ಏರ್ಪಡಿಸುತ್ತಾರಲ್ಲ? ಅದನ್ನು ಕೂಡಾ ನಿಲ್ಲಿಸಬೇಕೇ? ಇದರಿಂದ ರೋಗಿಗಳಿಗೆ ತೊಂದರೆ ಆಗುವುದಿಲ್ಲವೇ ಎಂದು ಯೂನಿಯನ್ ಪ್ರಶ್ನಿಸಿದೆ.
* * * * * * * * * * * * * * *
ಧಾರಾವಿಯ ಹಣತೆಗಳು
ಅಮೆರಿಕಕ್ಕೆ

ಮುಂಬೈಯಲ್ಲಿ ಯಾವುದೇ ಹಬ್ಬಗಳನ್ನು ಆಚರಿಸುವಾಗ ಏಶ್ಯಾದ ಬಹುದೊಡ್ದ ಸ್ಲಂ ಕ್ಷೇತ್ರ ಧಾರಾವಿಯ ನೆನಪು ಆಗಲೇಬೇಕು. ದೀಪಾವಳಿ ಹಬ್ಬದಲ್ಲೂ ಧಾರಾವಿಯ ಪಾತ್ರ ಮಹತ್ವದ್ದು. ಇಲ್ಲಿಯ ಕುಂಬಾರವಾಡಾ ಮುಂಬೈಗೆ ಬೆಳಕು ಕಾಣಿಸುತ್ತಾ ಬಂದಿದೆ. ಮುಂಬೈ ಮಾರುಕಟ್ಟೆಯಲ್ಲಿ ಸಿಗುವ ಮಣ್ಣಿನ ಹಣತೆಗಳಲ್ಲಿ ಎಪ್ಪತ್ತು ಶೇಕಡಾಕ್ಕೂ ಹೆಚ್ಚು ಕುಂಬಾರವಾಡಾದಲ್ಲೇ ತಯಾರಾಗುತ್ತದೆ. ಸುಮಾರು ಹನ್ನೆರಡು ಎಕರೆಯಲ್ಲಿ ಹರಡಿರುವ ಧಾರಾವಿಯ ಕುಂಬಾರವಾಡಾದಲ್ಲಿ ಮಣ್ಣಿನ ವಾಸನೆ ಒಳಕಾಲಿಟ್ಟಾಗಲೇ ಮೂಗಿಗೆ ತಾಗುತ್ತದೆ. ಇಲ್ಲಿ ಸುಮಾರು ಒಂದೂವರೆ ಸಾವಿರ ಕುಟುಂಬಗಳು ಪ್ರತೀದಿನ ಮಣ್ಣಿನ ಹಣತೆ, ಮಡಕೆಗಳನ್ನು ತಯಾರಿಸುತ್ತವೆ. ಇದರಲ್ಲಿ ಗುಜರಾತಿ ಸಮುದಾಯದ ಪಾಲು ದೊಡ್ಡದು. ಈ ಬಾರಿ ಕುಂಬಾರವಾಡಾದ ಉತ್ಪಾದನೆ ಏರಿದೆ. ಈ ಸಲದ ದೀಪಾವಳಿಗೆ 35 ಪ್ರತಿಶತ ಮಣ್ಣಿನ ಹಣತೆಯ ಬೇಡಿಕೆ ಹೆಚ್ಚಿಗೆ ಬಂದಿದೆಯಂತೆ. ಈ ಬಾರಿಯ ದೀಪಾವಳಿಗೆ ಒಂದೂಕಾಲು ಕೋಟಿ (1.25 ಕೋಟಿ) ರೂಪಾಯಿಯ ಮಣ್ಣಿನ ಹಣತೆಗಳ ಕಾರುಬಾರು ನಿರೀಕ್ಷಿಸಲಾಯಿತು. ಅಖಿಲ ಭಾರತೀಯ ಪ್ರಜಾಪತಿ ಕುಂಬಾರ ಸಮಾಜದ ಸದಸ್ಯ ಕಮಲೇಶ್ ವಾರಿಯಾ ತಿಳಿಸಿದಂತೆ ಈ ವರ್ಷ ಧಾರಾವಿಯಲ್ಲಿ ತಯಾರಿಸಲಾದ ಮಣ್ಣಿನ ದೀಪಗಳಿಗೆ ಅಮೇರಿಕದಿಂದಲೂ ಬೇಡಿಕೆ ಬಂದಿದೆ. ಅಲ್ಲಿಗೆ ಹತ್ತು ಲಕ್ಷ ರೂಪಾಯಿಯ ಹಣತೆಗಳನ್ನು ಕಳುಹಿಸಲಾಗಿದೆ. ಅಲ್ಲಿನ ಭಾರತೀಯ ಹಿಂದೂಗಳು ಧಾರಾವಿಯ ಮಣ್ಣಿನ ಹಣತೆಗಳಿಂದ ದೀಪ ಉರಿಸಿದ್ದಾರೆ.
 ಅಖಿಲ ಭಾರತೀಯ ಪ್ರಜಾಪತಿ ಕುಂಬಾರ ಸಮಾಜದ ಮಹಾರಾಷ್ಟ್ರ ಅಧ್ಯಕ್ಷ ಧನ್‌ಸುಖ್ ಪರ್ಮಾರ್ ತಿಳಿಸಿದಂತೆ ಈ ಬಾರಿ ಕುಂಬಾರವಾಡಾದಲ್ಲಿ 1,500 ಟನ್ ಮಣ್ಣಿನ ಹಣತೆಗಳನ್ನು ತಯಾರಿಸಲಾಗಿದೆಯಂತೆ. ಇದಕ್ಕಾಗಿ ಪೇಣ್, ಪನ್ವೇಲ್ ಮತ್ತು ಗುಜರಾತ್‌ನ ಹಳ್ಳಿಗಳಿಂದ ಮಣ್ಣನ್ನು ತರಿಸಿಕೊಂಡಿದ್ದಾರೆ. ಈ ಬಾರಿ ಮಣ್ಣಿನ ಹಣತೆಗಳು ಸ್ವಸ್ತಿಕ್, ಕಲಶ, ಪುಷ್ಪ, ನಾಗ, ಪಂಚವಟಿ,....... ಹೀಗೆ ನೂರಕ್ಕೂ ಹೆಚ್ಚು ಪ್ರಕಾರಗಳಲ್ಲಿ ಹಣತೆಗಳು ಮಾರುಕಟ್ಟೆಗೆ ಬಂದಿತ್ತು.
* * * * * * * * * * * * * * * * * *
ಬಿಜೆಪಿಯೊಳಗೇ ಮುಖ್ಯಮಂತ್ರಿ ಫಡ್ನವೀಸ್‌ಗೆ ಶಿವಸೇನೆ ಮೈತ್ರಿಗೆ ಅಡ್ಡಗಾಲು
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶಿವಸೇನೆಯ ಜೊತೆ ಎಷ್ಟೇ ಸಾಮರಸ್ಯಕ್ಕಾಗಿ ಬೈಠಕ್ ನಡೆಸಲು ಮುಂದಾದರೂ ತನ್ನದೇ ಬಿಜೆಪಿಯ ಕೆಲವು ನಾಯಕರು ಅಡ್ಡಗಾಲು ಇಡುತ್ತಲೇ ಇದ್ದಾರೆ. ಇದನ್ನು ಗಮನಿಸಿದರೆ ಇಂತಹ ನಾಯಕರನ್ನು ನಿಯಂತ್ರಣದಲ್ಲಿರಿಸಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಯವರು ಈ ದಿನಗಳಲ್ಲಿ ಸರಕಾರಕ್ಕೆ ಸಂಬಂಧಿಸಿದ ಏನೇ ವಿಷಯಗಳಿಗೂ ತನ್ನದೇ ಉತ್ತರ ನೀಡುವುದರಲ್ಲಿ ನಿಸ್ಸೀಮರು. ಹಾಗಾಗಿ ವಿಪಕ್ಷದ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತಲೇ ಇದ್ದಾರೆ. ಆದರೆ ತನ್ನದೇ ಬಿಜೆಪಿಯ ಕೆಲವು ನೇತಾರರ ಮೇಲೆ ಫಡ್ನವೀಸ್‌ಗೆ ಹಿಡಿತವಿಲ್ಲ.
ಇದನ್ನು ಗಮನಿಸುವಾಗ ಕೆಲವು ನಾಯಕರು ಎಲ್ಲವೂ ಸರಿಯಾಗಿ ನಡೆದರೆ ಫಡ್ನವೀಸ್‌ರಿಗೆ ಹೆಚ್ಚಿನ ಪ್ರಶಂಸೆ ಸಿಗುತ್ತದೆ. ಅವರು ಇನ್ನಷ್ಟು ಗಟ್ಟಿಯಾಗುತ್ತಾರೆ ಎಂಬ ಭಯ ಉಂಟಾಗಿದೆಯಂತೆ.
ಪ್ರಧಾನಿ ಮೋದಿಯವರ, ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕೃಪೆ ಪಡೆದಿರುವ ಫಡ್ನವೀಸ್‌ರ ಕುರ್ಚಿ ಗಟ್ಟಿಯಾಗಿದೆ. ಇದು ಇತರ ಕೆಲವು ಬಿಜೆಪಿ ನಾಯಕರಿಗೆ ಒಳಗೊಳಗೇ ಸಂಕಟವಾಗುತ್ತಿದೆ. ಬಿಜೆಪಿ ಸರಕಾರ ಬಂದು ಎರಡು ವರ್ಷಗಳಾಗುತ್ತಿವೆ. ಕೆಲವರಿಗೆ ಇನ್ನೂ ಮಂತ್ರಿ ಪಟ್ಟ ಸಿಕ್ಕಿಲ್ಲ. ಆದರೂ ಅವರೆಲ್ಲ ನಿರೀಕ್ಷೆ ಮಾಡುತ್ತಲೇ ಇದ್ದಾರೆ.

ಈ ಎಲ್ಲಾ ಕಾರಣಗಳಿಂದ ಅವರಿಗೆಲ್ಲ ಶಿವಸೇನೆ ಜೊತೆ ಸೇರಿದರೆ ಮತ್ತೆ ತಾವು ಮೂಲೆ ಗುಂಪಾಗುವ ಭಯ ಕಾಡುತ್ತಿದೆ. ಹಾಗಾಗಿ ಬರಲಿರುವ ಸ್ಥಳೀಯ ಚುನಾವಣೆಗಳಲ್ಲಿ ಶಿವಸೇನೆ ಜೊತೆ ಸೇರುವುದು ಬಿಜೆಪಿಯ ಇಂತಹ ನಾಯಕರಿಗೆ ಇಷ್ಟವಿಲ್ಲ ಎನ್ನಲಾಗಿದೆ. ಇಲ್ಲಿ ಇನ್ನೂ ಒಂದು ಲಾಭವಿದೆ ಬಿಜೆಪಿಯ ಈ ಕುರ್ಚಿ ಆಕಾಂಕ್ಷೆಯ ನಾಯಕರಿಗೆ. ಅಂದರೆ ಮನಪಾ ಚುನಾವಣೆಯಲ್ಲಿ ಶಿವಸೇನೆಗಿಂತ ಕಡಿಮೆ ಸೀಟುಗಳು ಬಿಜೆಪಿಗೆ ಸಿಕ್ಕಿದರೆ ಅದನ್ನು ಮುಂದಿಟ್ಟು ಫಡ್ನವೀಸ್‌ರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಬಹುದಾಗಿದೆ ಎನ್ನುವುದು!
ಸದ್ಯ ಬಿಜೆಪಿಯು ಇರಿಸಿದ ನಂಬಿಕೆ ಏನೆಂದರೆ ಮುಂಬೈ ಮತ್ತು ಥಾಣೆ ಮನಪಾ ಚುನಾವಣೆಯಲ್ಲಿ ಮರಾಠಿ ಮತಗಳ ವಿಭಜನೆಯೇ ತನ್ನ ಲಾಭ ಎನ್ನುವುದಾಗಿದೆ. ಹೀಗಾಗಿ ಮರಾಠಿ ಮತಗಳನ್ನು ಚೆಲ್ಲಾ ಪಿಲ್ಲಿ ಮಾಡಲು ಎಂ.ಎನ್.ಎಸ್.ನ ರಾಜ್‌ಠಾಕ್ರೆಗೂ ಫಡ್ನವೀಸರು ಮಣೆ ಹಾಕುತ್ತಿರುವ ಲಕ್ಷಣಗಳು ಕಾಣಿಸಿವೆ. ಹೀಗಾಗಿ ಯಾರು ಪಕ್ಷಾಂತರ ಮಾಡುವುದಕ್ಕೆ ಸಿದ್ಧರಿದ್ದಾರೋ ಅವರಿಗೂ ಮಾನ್ಯತೆ ಕೊಡುವ ಅಸಹಾಯಕತೆ ಕೂಡಾ ಎದುರಾಗಿದೆ. ಈ ನಡುವೆ ನಗರ ಪರಿಷತ್ ಚುನಾವಣೆಯಲ್ಲಿ ಶಿವಸೇನೆ ಜೊತೆ ಹೊಂದಾಣಿಕೆ ನಡೆದಿದೆ.
* * * * * * * * * * * * * * * * *
ಶ್ವಾನಗಳಿಗೆ ಡೈಫರ್
ಮುಂಬೈಯಲ್ಲಿ ಸಾಕುನಾಯಿಗಳನ್ನು ಬೆಳಗ್ಗೆ ಮತ್ತು ರಾತ್ರಿ ಹೊರಗಡೆ ಸುತ್ತಾಡಿಸಿಕೊಂಡು ಬರುವ ಶ್ವಾನಪ್ರಿಯ ಮನೆ ಮಾಲಕರು ಈ ದಿನಗಳಲ್ಲಿ ಹೆಚ್ಚೆಚ್ಚು ಡೈಫರ್ ಬಳಕೆಯನ್ನು ಮಾಡುತ್ತಿರುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚ ಮಾಡುವ ಶ್ವಾನಗಳ ಮಾಲಕರಿಗೆ ದಂಡವನ್ನು ವಿಧಿಸಲಾಗುತ್ತಿದೆ. ಹೀಗಾಗಿ ಶ್ವಾನ ಮಾಲಕರು ಸಾಕು ನಾಯಿಗಳಿಗಾಗಿ ಇಂದಿನ ದಿನಗಳಲ್ಲಿ ಶ್ವಾನಕ್ಕಾಗಿ ಡೈಪರ್ ಉಪಯೋಗಿಸಲು ಶುರುಮಾಡಿದ್ದಾರೆ.
ಪ್ರತಿಯೊಂದು ಶ್ವಾನದ ಶಾರೀರಿಕ ಆಧಾರದ ಮೇಲೆ ವಿವಿಧ ಆಕಾರಗಳ ಡೈಫರ್ ಆನ್‌ಲೈನ್ ಮಾರ್ಕೆಟ್‌ನಲ್ಲಿ ಉಪಲಬ್ದವಿದೆ. ಬಜಾರ್‌ನಲ್ಲಿ ಒಂದು ಡೈಫರ್‌ನ ಬೆಲೆ 45 ರಿಂದ 150 ರೂಪಾಯಿ ತನಕವೂ ಕಂಡು ಬರುತ್ತಿದೆ. ಇವುಗಳಿಗೆ ದಿನೇ ದಿನೇ ಬೇಡಿಕೆ ಏರುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 50 ಕೋಟಿ ರೂಪಾಯಿಯಷ್ಟು ಡೈಫರ್‌ನ ಕಾರುಬಾರು ನಡೆದಿದೆ. ಈ ಆರ್ಥಿಕ ವರ್ಷದಲ್ಲಿ 90 ಕೋಟಿ ರೂಪಾಯಿ ತನಕ ಕಾರುಬಾರು ನಡೆಯಬಹುದು ಎನ್ನುತ್ತಾರೆ. ಅನೇಕ ಶ್ವಾನಗಳ ಮಾಲಕರು ಶ್ವಾನಗಳ ಶೌಚವನ್ನು ತೆಗೆಯುವ, ಸ್ವಚ್ಛಗೊಳಿಸುವ ಬದಲು ಡೈಫರ್ ಉಪಯೋಗಿಸುವುದೇ ಉತ್ತಮ. ಅದನ್ನು ಎಸೆದರಾಯ್ತು ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.
* * * * * * * * * * * * * * * *
ಮನಪಾ ಕಪ್ಪುಸೂಚಿಯಲ್ಲಿರಿಸಿದ ಕಂಪೆನಿಗೆ
ಮೆಟ್ರೋ ರೈಲ್ ಯೋಜನೆಯ ಗುತ್ತಿಗೆ!

ಒಂದೆಡೆ ಮುಂಬೈ ಮೆಟ್ರೋ ರೈಲ್ವೆ ಯೋಜನೆಯ ಗುತ್ತಿಗೆ ಇತ್ತೀಚೆಗೆ ಯಾರಿಗೆ ನೀಡಲಾಗಿದೆಯೋ ಮತ್ತೊಂದೆಡೆ ಅವರನ್ನು ಮುಂಬೈ ಮನಪಾ ಕಪ್ಪುಸೂಚಿಯಲ್ಲಿರಿಸುವ ಪ್ರಕ್ರಿಯೆ ಆರಂಭಿಸಿದೆ. ಹೀಗಿರುವಾಗ ಇಂತಹ ಕಂಪೆನಿಗೆ ಮೆಟ್ರೋದ 5,000 ಕೋಟಿ ರೂಪಾಯಿಯ ಗುತ್ತಿಗೆಯನ್ನು ಮುಂಬೈ ಮತ್ತು ನಾಗಪುರ ಮೆಟ್ರೋ ರೈಲ್ವೆಗಾಗಿ ಆಯ್ದುಕೊಂಡಿರುವುದು ಭ್ರಷ್ಟಾಚಾರ ಎಸಗಿದಂತೆ ಎಂದು ಕಾಂಗ್ರೆಸ್ ವಕ್ತಾರರು ಪತ್ರಿಕಾ ಗೋಷ್ಟಿ ನಡೆಸಿ ಆರೋಪಿಸಿದ್ದಾರೆ. ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು ಹೇಳಿದಂತೆ ಮುಂಬೈ ಮೆಟ್ರೋ -7 ರಲ್ಲಿ 5 ಸಾವಿರ ಕೋಟಿ ರೂಪಾಯಿಯ ಗುತ್ತಿಗೆಯನ್ನು ಜೆ.ಕುಮಾರ್‌ಗೆ ನೀಡಿದೆ. ಆದರೆ ಮುಂಬೈ ಮನಪಾ ಅದನ್ನು ಕಪ್ಪುಸೂಚಿಯಲ್ಲಿ ಇರಿಸಲು ಮುಂದಾಗಿದೆ. ಇದು ಗೊತ್ತಿದ್ದೂ ಮುಂಬೈ ಮಹಾನಗರ ಕ್ಷೇತ್ರೀಯ ವಿಕಾಸ ಪ್ರಾಧೀಕರಣ (ಎಂ.ಎಂ.ಆರ್.ಡಿ.ಎ) ಮೆಟ್ರೋದ ಗುತ್ತಿಗೆಯನ್ನು ಅದೇ ಜೆ.ಕುಮಾರ್ ಕಂಪೆನಿಗೆ ನೀಡಿದೆ ಎಂದು ಆರೋಪಿಸಿದರು. ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯದ ಮಹಾಧಿವಕ್ತಾ ಅವರ ಅಭಿಪ್ರಾಯ ಪಡೆಯುವುದಾಗಿ ತಿಳಿಸಿದ್ದಾರೆ. ಹಾಗಿದ್ದೂ ಮುಖ್ಯಮಂತ್ರಿ ಮತ್ತು ಬಿಜೆಪಿಯ ಉತ್ತರವನ್ನು ಕಾಂಗ್ರೆಸ್ ವಕ್ತಾರರು ನಿರೀಕ್ಷಿಸುತ್ತಿದ್ದಾರೆ. ವಕ್ತಾರ ಸಾವಂತ್ ಅವರು ನಾಗ್ಪುರ ಮೆಟ್ರೋದ ಗುತ್ತಿಗೆ ಆರ್.ಪಿ.ಎಸ್. ಇನ್ಫಾಗೆ ನೀಡಿದ್ದನ್ನು ಆಕ್ಷೇಪಿಸಿದ್ದಾರೆ. ಇದೇ ಕಂಪೆನಿ ಮುಂಬೈ ಮನಪಾದಲ್ಲಿ ರಸ್ತೆ ಹಗರಣ ನಡೆಸಿದ ಕಂಪೆನಿಯಾಗಿದೆಯಂತೆ! ಹೀಗಾಗಿ ಮನಪಾ ಇದನ್ನು ಕಪ್ಪುಸೂಚಿಯಲ್ಲಿ ಇರಿಸಿದೆ. ಹಾಗಿದ್ದರೂ ಮತ್ತೆ ಈ ಕಂಪೆನಿಗೆ ನಾಗ್ಪುರ ಮನಪಾ 35 ಸಾವಿರ ಕೋಟಿ ರೂಪಾಯಿಯ ಗುತ್ತಿಗೆ ನೀಡಿದೆ ಎಂದವರು ಆರೋಪಿಸಿದರು. ಅತ್ತ ಎಂ.ಎಂ.ಆರ್.ಡಿ.ಎ. ಪ್ರತಿಕ್ರಿಯಿಸುತ್ತಾ, ಜೆ.ಕುಮಾರ್ ಕಂಪೆನಿಯನ್ನು ಮನಪಾ ಕಪ್ಪುಸೂಚಿಯಲ್ಲಿ ಇನ್ನೂ ಇರಿಸಿಲ್ಲ. ಹಾಗಂತ ಜೆ.ಕುಮಾರ್‌ನ್ನು ಎಂ.ಎಂ.ಆರ್.ಡಿ.ಎ. ಕಪ್ಪುಸೂಚಿಯಲ್ಲಿ ಇರಿಸಬೇಕಾಗಿಲ್ಲ. ಸರಕಾರದ ಏಜನ್ಸಿಗಳ ಬೇರೆ ಕೆಲಸ ಅವರಿಗೆ ನೀಡಬಾರದು ಎಂದೇನೂ ಇಲ್ಲ ಎಂಬ ಪ್ರತಿಕ್ರಿಯೆ ನೀಡಿದೆ.
* * * * * * * * * * * * * * * * *
ಮೆಟ್ರೋ ಪ್ರಯಾಣಿಕರಿಗೆ ಓಲಾ ಟ್ಯಾಕ್ಸಿ
ಇದೀಗ ಮೆಟ್ರೋ ಪ್ರಯಾಣಿಕರಿಗೆ ಓಲಾ ಕ್ಯಾಬ್‌ನ ಸೌಲಭ್ಯಗಳು ಅಕ್ಟೋಬರ್ 24 ರಿಂದ ಆರಂಭವಾಗಿದೆ. ಆರಂಭದಲ್ಲಿ ಕೇವಲ 3 ಮೆಟ್ರೋ ಸ್ಟೇಷನ್‌ಗಳಲ್ಲಿ ಮಾತ್ರ ಲಭ್ಯವಿರುವುದು. ಘಾಟ್‌ಕೋಪರ್, ಸಾಕಿನಾಕಾ ಮತ್ತು ವೆಸ್ಟರ್ನ್ ಎಕ್ಸ್‌ಪ್ರೆಸ್ ಹೈವೇ ಈ 3 ಸ್ಟೇಷನ್‌ಗಳಲ್ಲಿ ವಾತ್ರ. ಬೇಡಿಕೆಯನ್ನು ಗಮನಿಸಿ ವರ್ಸೋವಾ ಮತ್ತು ಅಂಧೇರಿ ಹಾಗೂ ಘಾಟ್‌ಕೋಪರ್‌ನ ನಡುವಿನ 11.40 ಕಿ.ಮೀ. ದೂರದ ಎಲ್ಲಾ 12 ಸ್ಟೇಷನ್‌ಗಳಲ್ಲೂ ವಾತಾನುಕೂಲಿತ ಓಲಾ ಟ್ಯಾಕ್ಸಿಯ ಸೌಲಭ್ಯ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಸುರಕ್ಷಾ ವ್ಯವಸ್ಥೆಯೂ ಇರುವುದು.
ಮೆಟ್ರೋ ಪ್ರೊಜೆಕ್ಟ್ ಕ್ಷೇತ್ರದಲ್ಲಿ
ಜೋಪಡಿ - ಪ್ಲ್ಯಾಟ್ಸ್‌ಗಳ ಬೆಲೆ ವೃದ್ಧಿ
 ಮುಂಬೈಯಲ್ಲಿ ಪ್ರತೀದಿನ 80 ಲಕ್ಷ ಪ್ರಯಣಿಕರು ಲೋಕಲ್ ರೈಲ್‌ನಲ್ಲಿ ಪ್ರಯಾಣಿಸುತ್ತಾರೆ. ಈ ಒತ್ತಡ ಕಡಿಮೆ ಮಾಡಲು ಮೆಟ್ರೋ ರೈಲ್‌ಗೆ ಆದ್ಯತೆ ಹೆಚ್ಚುತ್ತಿದೆ. ದೇಶದ ಬಹು ದುಬಾರಿ ಎನಿಸಲಿರುವ ಮೆಟ್ರೋ 3 ರ ಪ್ರೊಜೆಕ್ಟ್‌ನ ಕೆಲಸ ಕಾರ್ಯ ಮುಂಬೈಯಲ್ಲಿ ಆರಂವಾಗಿ ಅತ್ತ ದಹಿಸರ್ ತನಕದ ಪ್ರೊಜೆಕ್ಟ್ ಕೂಡಾ ಮುಂದುವರಿದಿದೆ. ಈ ಕಾರ್ಯದಿಂದ ಸ್ಥಳೀಯ ಜನರು ಸಂಕಟ ಸ್ಥಿತಿ ಅನುವಿಸುವಂತಾದರೆ, ಅತ್ತ ೂಮಾಪಿಯಾಗಳ ಲಾಬಿ ದೊಡ್ಡ ಮೊತ್ತದ ಸಂಪಾದನೆ ಒಟ್ಟುಗೂಡಿಸುವತ್ತ ಚುರುಕುಗೊಂಡಿದೆ. ಕೆಲವರಿಗೆ ತೊಂದರೆಯಾದರೆ ಮತ್ತೆ ಕೆಲವರಿಗೆ ಲಾಭದ ದೃಷ್ಟಿ.
2022 ರೊಳಗೆ ಮುಂಬೈ ಶಹರದಲ್ಲಿ ಇನ್ನೂ 6 ಮೆಟ್ರೋ ಕಾರಿಡೋರ್ ರೆಡಿಯಾಗಲಿದೆ. ಮುಂಬೈಯಲ್ಲಿ ದ್ವಿತೀಯ ಯೋಜನೆಯ ನಂತರ ಮೆಟ್ರೋ ಲೈನ್ ಕೊಲಬಾ - ಬಾಂದ್ರ - ಸೀಪ್ಜ್‌ನ ನಿರ್ಮಾಣ ಕಾರ್ಯ ಆರಂಗೊಂಡಿದ್ದು ಶಹರದ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಇನ್ಫಾಸ್ಟ್ರಕ್ಚರ್ ಕಂಪೆನಿಗಳು ಕೆಲಸ ಆರಂಭಿಸಿವೆ.
  ಬಾಂದ್ರಾ ಕೊಲಬಾ - ಸೀಪ್ಜ್ ನಡುವೆ 33.7 ಕಿ.ಮೀ ಉದ್ದದ ೂಗತ ಮೆಟ್ರೋಕಾರಿಡೋರ್ ನಿರ್ಮಿಸುವ ನಿರ್ಣಯ ತಳೆಯಲಾಗಿದೆ. ಮುಂಬೈ ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ಜುಲೈ ತಿಂಗಳಲ್ಲಿ ಮೆಟ್ರೋ 3 ರ ನಿರ್ಮಾಣ ಕಾರ್ಯಕ್ಕಾಗಿ 18 ಕೋಟಿ ರೂಪಾಯಿಯ ಗುತ್ತಿಗೆಯನ್ನು ಐದು ಬೇರೆ ಬೇರೆ ಕಂಪೆನಿಗಳಿಗೆ ನೀಡಿತ್ತು. ಕೆಲಸವನ್ನು ವಿಸ್ತರಿಸುತ್ತಾ ಇನ್ಫ್ರಾಸ್ಟಕ್ಚರ್ ಕಂಪೆನಿಗಳು ಕಪ್ ಪರೇಡ್, ಆಜಾದ್ ಮೈದಾನ, ಸಯನ್ಸ್ ಮ್ಯೂಸಿಯಂ, ವಿದ್ಯಾನಗರಿ, ಸಹಾರ ರೋಡ್ ಮತ್ತು ಎಂ.ಐ.ಡಿ.ಸಿ. ಸ್ಟೇಷನ್‌ಗಳಲ್ಲಿ ನಿರ್ಮಾಣ ಕಾರ್ಯ ಶುರುಮಾಡಿದೆ. ಕೊಲಬಾ -ಬಾಂದ್ರಾ - ಸೀಪ್ಚ್‌ನ ನಡುವೆ ೂಗತ ಮಾರ್ಗಕ್ಕಾಗಿ ಕೇವಲ ಸುರಂಗ ನಿರ್ಮಿಸಲು ಪ್ರತಿ ಕಿಲೋಮೀಟರ್‌ಗೆ 540 ಕೋಟಿ ರೂಪಾಯಿ ಖರ್ಚು ಬರಲಿದೆಯಂತೆ! ಇದು ಬಾರತದಲ್ಲಿ ಈ ತನಕ ನಿರ್ಮಿಸಿದ ಎಲ್ಲಾ ಮೆಟ್ರೋ ಕಾರಿಡೋರ್‌ನ ಖರ್ಚುಗಳಿಗಿಂತ ಅಧಿಕವಿದೆ. ಕೊಲಬಾ - ಬಾಂದ್ರಾ -ಸೀಪ್ಜ್‌ನ ಈ 33.5 ಕಿ.ಮೀ. ೂಗತ ಮಾರ್ಗದಲ್ಲಿ 27 ಸ್ಟೇಷನ್‌ಗಳಿರುವುದು. ಈ ಯೋಜನೆಯು 2022 ರ ತನಕ ನಿರ್ಮಾಣವಾಗಲಿದ್ದು ತಯಾರುಗೊಳ್ಳಲಿದೆಯಂತೆ.
 ಈ ನಡುವೆ ಪಶ್ವಿಮ ಉಪನಗರಗಳಲ್ಲಿ ಮೆಟ್ರೋ ಅಂತಹ ಆಧುನಿಕ ಸೌಲ್ಯಗಳು ಶುರುಮಾಡಲಾಗುವ ಸುದ್ದಿಯಿಂದ ಒಂದೆಡೆ ಅಲ್ಲಿನ ಜನರು ಸಂಕಷ್ಟ ಸ್ಥಿತಿಗೆ ತಲುಪಬಹುದಾದ ಚರ್ಚೆ ನಡೆದಿದೆ. ಮತ್ತೊಂದೆಡೆ ೂಮಾಫಿಯಾ ಅದರ ಲಾಭ ಎತ್ತಿಕೊಳ್ಳಲು ಮುಂದಾಗಿದೆ.
ಈ ಕ್ಷೇತ್ರದಲ್ಲಿ ಸರಕಾರಿ ಜಮೀನಿನಲ್ಲಿ ಅತಿಕ್ರಮಣ ದೃಶ್ಯ ಜೋರಾಗಿ ನಡೆಯುತ್ತಿದೆ. ಪ್ಲ್ಯಾಟ್‌ನ ಬೆಲೆ ಚದರ ಅಡಿಗೆ 10 ಸಾವಿರ ರೂ. ಇದ್ದರೆ ಈಗ ಮೆಟ್ರೋ ಪೊಜೆಕ್ಟ್ ಶುರುವಾಗುವ ಸುದ್ದಿಯಿಂದ ಚದರ ಅಡಿಗೆ 15 ರಿಂದ 16 ಸಾವಿರ ರೂಪಾಯಿ ತನಕ ತಲುಪಿದೆ.

ಯಾರೆಲ್ಲ ಚಾಳ್‌ಗಳನ್ನು ಬಾಡಿಗೆಗೆ ನೀಡಿದ್ದರೋ ಅವರನ್ನು ಎಬ್ಬಿಸಿ ಆ ಚಾಳ್‌ನಲ್ಲಿ ಪಾರ್ಟಿಶನ್ ಮಾಡಲು ಮುಂದಾಗಿದ್ದಾರೆ. ಅಂದರೆ ಎರಡು ಮನೆಗಳ ದಾಖಲೆ ತೋರಿಸಿದರೆ ಪರಿಹಾರ ಹೆಚ್ಚು ಸಿಗಬಹುದು ಎಂಬ ನಂಬಿಕೆ ಇರಿಸಲಾಗಿದೆ. ಮೆಟ್ರ್ರೋ ಪ್ರಬಾವಿತ ಕ್ಷೇತ್ರಗಳಲ್ಲಿ ಕೆಲವೆಡೆ ಮ್ಯಾಂಗ್ರೋವ್ ಗಿಡಗಳ ಸಂಹಾರ ರ್ಜರಿ ನಡೆಯುತ್ತಿದೆ. ಗಣಪತ್ ಪಾಟೀಲ್ ನಗರ್, ಗೊರಾಯಿ, ಕಾಂದರ್ ಪಾಡಾ....ಇಲ್ಲೆಲ್ಲ ೂವಾಫಿಯಾ ಸಕ್ರಿಯರಾಗಿದ್ದಾರೆ.
  ಒಟ್ಟಾರೆ ಅಂಧೇರಿಯಿಂದ ದಹಿಸರ್ ತನಕ.... ಯಾವ ಯಾವ ಕ್ಷೇತ್ರಗಳಲ್ಲಿ ಮೆಟ್ರೋ ಹೋಗುವುದೋ ಅಲ್ಲಿನ ಜನರು ಹೇಗೆ ಲಾಭ ಪಡೆಯಬಹುದೆಂದು ಸಕ್ರಿಯರಾಗಿದ್ದಾರೆ. ಬಾಡಿಗೆ ದರಗಳನ್ನು ಈಗಲೇ ಹೆಚ್ಚಿಸಲಾಗಿದೆ.
ಗೋರೆಗಾಂವ್, ಬಾಂಗುರ್ ನಗರ, ವಾಲಾಡ್, ಕಾಂದಿವಲಿ, ಬೋರಿವಲಿ, ದಹಿಸರ್ ಕ್ಷೇತ್ರಗಳ ಜೋಪಡ ಪಟ್ಟಿ ಮತ್ತು ಸೊಸೈಟಿಗಳ ಬೆಲೆಗಳು ಬಾರೀ ವೃದ್ಧಿಯಾಗಿದ್ದು ಜೋಪಡಿಗಳ ಬೆಲೆ ಎರಡುಪಟ್ಟು ಹೆಚ್ಚಳವಾಗಿದೆ.
* * * * * * * * * * * * * * * *
ಥಾಣೆ ಮನಪಾ ಚುನಾವಣೆ :
ಕಾಂಗ್ರೆಸ್‌ಗೆ ಅ್ಯರ್ಥಿಗಳು ಬೇಕಾಗಿದ್ದಾರಂತೆ!
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮುಂಬೈ ಪಕ್ಕದ ಥಾಣೆಯ ಮಹಾನಗರ ಪಾಲಿಕೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ಮುಂದಿಟ್ಟು ಈ ಸಮಯ ಬಿಜೆಪಿ ಮತ್ತು ಶಿವಸೇನೆಯ ಕಡೆ ಓಡುತ್ತಿರುವ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದೆ. ಯಾವ ಪಾರ್ಟಿಯ ಕಾರ್ಪೋರೇಟರ್ - ಪದಾಧಿಕಾರಿಗಳು ಈ ಸಲ ಯಾವ ಪಕ್ಷಕ್ಕೆ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ನಡುವೆ ವಿವಿಧ ಬಣಗಳಲ್ಲಿ ಸಿಕ್ಕಿ ಒದ್ದಾಡುತ್ತಿರುವ 131 ವರ್ಷ ಹಳೆಯದಾದ ಬಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಿತಿ ಇನ್ನೂ ಕ್ಷೀಣವಾಗುತ್ತಿದೆ. ಪಕ್ಷಾಂತರಿಗಳ ಸಂಖ್ಯೆ ಏರುತ್ತಿದೆ. ಸ್ಥಿತಿ ಎಲ್ಲಿಂು ತನಕ ತಲುಪಿದೆ ಅಂದರೆ ಮಹಾನಗರ ಪಾಲಿಕೆಯ ಮುಂದಿನ ಚುನಾವಣೆಗಾಗಿ ಕಾಂಗ್ರೆಸ್ ಪಾರ್ಟಿಯಲ್ಲಿ ಅ್ಯರ್ಥಿಗಳ ಕೊರತೆ ಕಂಡುಬಂದಿದೆ. ಹೀಗಾಗಿ ಥಾಣೆ ಶಹರ ಕಾಂಗ್ರೆಸ್‌ನ ವತಿಯಿಂದ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಅದರಲ್ಲಿ ಮುಂದಿನ ಮನಪಾ ಚುನಾವಣೆಗಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ನಾಸ್ತಿಕ ಮದ