ತ್ಯಾಂಪಣ್ಣನ ರಕ್ಷಣೆಯಲ್ಲಿ ಕಾಲೇಜಿಗೆ
ಧಾರಾವಾಹಿ-39
ಅವಳಿಗೆ ಬುದ್ಧಿ ಇಲ್ಲ. ಅವಳಿಗೇಂತ ಅಲ್ಲ, ಆ ಪ್ರಾಯದಲ್ಲಿ ಯಾರಿಗಾದರೂ ಹಾಗೆಲ್ಲ ಆಗುತ್ತದೆ. ಆಕಾಶಕ್ಕೆ ಏಣಿ ಇಡಲು ನೋಡುತ್ತಾರೆ. ನಿಮ್ಮ ಮಗಳು ನೀವು ಹೇಳಿದ ಹಾಗೆ ಕೇಳುವುದಿಲ್ಲ ಎಂದರೆ ಏನಿದರ ಅರ್ಥ. ಹೋಗಿ, ಇಂದೇ ಒಂದು ಒಳ್ಳೆಯ ತೀರ್ಮಾನ ತೆಗೆದುಕೊಳ್ಳಿ. ಆ ತೀರ್ಮಾನ ನಿಮಗೆ, ನಿಮ್ಮ ಮಗಳಿಗೆ, ನಿಮ್ಮ ಮನೆಗೆ, ಈ ಇಡೀ ಊರಿಗೆ ಒಳಿತಾಗುವಂತಾಗಲಿ. ಇದಕ್ಕಿಂತ ಹೆಚ್ಚು ನನಗೇನೂ ಹೇಳಲಿಕ್ಕಿಲ್ಲ. ಇನ್ನು ಈ ವಿಷಯದಲ್ಲಿ ನಾನು ತಲೆ ಹಾಕುವುದಿಲ್ಲ’’ ಎಂದು ಉಪದೇಶ ಮಾಡಿ ಅಜ್ಜನನ್ನು ಬೀಳ್ಕೊಟ್ಟಿದ್ದರಂತೆ. ಅಜ್ಜ ಕಾಲೆಳೆಯುತ್ತಾ ಮನೆಗೆ ಬಂದವರು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಕುಳಿತುಬಿಟ್ಟಿದ್ದರು.
ಅಜ್ಜ ಯಾವತ್ತೂ ಮಗಳನ್ನು ನೋಯಿಸಿದವರಲ್ಲ. ಗದರಿಸಿದವರಲ್ಲ. ಹಾಗಲ್ಲ ಹೀಗೇಂತ ಹೇಳಿದವರಲ್ಲ. ಬೆಳೆದು ನಿಂತ ಮಗಳಾದರೂ ಅವರಿಗೆ ಅವಳು ಪುಟ್ಟ ಮಗು. ಅವರು ಈಗಲೂ ಅವಳನ್ನು ರಾತ್ರಿ ತನ್ನ ಪಕ್ಕವೇ ಮಲಗಿಸಿಕೊಳ್ಳುತ್ತಿದ್ದರು. ಬೆಳಗ್ಗೆದ್ದು ಅವರಿಗೆ ಮೊದಲು ಮಗಳ ಮುಖವೇ ನೋಡಬೇಕು. ಇಲ್ಲದಿದ್ದರೆ ಅಂದು ಸೋಲು ಕಟ್ಟಿಟ್ಟ ಬುತ್ತಿ. ಎಲ್ಲ ಕೆಲಸಗಳೂ ವಿಫಲ. ಮಗಳು ಎಂದರೆ ಅವರಿಗೆ ತನ್ನ ಪ್ರಾಣಕ್ಕಿಂತ ಮಿಗಿಲು. ಅಜ್ಜಿ, ತಂದೆ - ಮಗಳ ಯಾವ ವಿಷಯದಲ್ಲಿಯೂ ಮಧ್ಯೆ ಹೋದವರಲ್ಲ. ‘‘ಅದೆಲ್ಲ ನನಗೆ ಗೊತ್ತಾಗುವುದಿಲ್ಲ. ನಾನು ಶಾಲೆ ಓದಿದವಳಲ್ಲ - ಅಜ್ಜನಿಗೆ ಎಲ್ಲ ಗೊತ್ತಿದೆ’’ ಎಂಬ ನಂಬಿಕೆ ಅವರಿಗೆ ತನ್ನ ಗಂಡನ ಮೇಲೆ.
ಕಾಲೇಜು ಆರಂಭವಾಗುವ ದಿನ ಹತ್ತಿರವಾಗು ತ್ತಿದ್ದಂತೆಯೇ ಮತ್ತೆ ಅಜ್ಜನ ಅಳಿಯಂದಿರು, ಬಂಧುಗಳು ಮನೆಯಲ್ಲಿ ಸೇರಿದರು. ‘‘ವಯಸ್ಸಿಗೆ ಬಂದ ಮಗಳನ್ನು ಬೀದಿಗೆ ಕಳುಹಿಸಿ ನಮ್ಮ ಮಾನ ಹರಾಜು ಮಾಡಬೇಡಿ. ನಾವು ಸಮಾಜದಲ್ಲಿ ತಲೆ ಎತ್ತಿ ನಡೆಯದಂತೆ ಮಾಡಬೇಡಿ. ನಿಮಗೆ ಆಗದಿದ್ದರೆ ಹೇಳಿ ನಾವು ಬುದ್ಧಿ ಕಲಿಸುತ್ತೇವೆ ಅವಳಿಗೆ’’ ಎಂದು ರಂಪಾಟ ಮಾಡಿದರು. ‘‘ನಾವು ಗಂಡು ಹುಡುಕುತ್ತೇವೆ. ಮದುವೆ ಮಾಡಿಬಿಡಿ. ಎಲ್ಲ ಸರಿಯಾಗ್ತಾಳೆ’’ ಎಂದು ಸಲಹೆ ನೀಡಿದರು.
‘‘ಅವಳಿಗೆ ನೀವೇನು ಹೇಳಬೇಡಿ. ನಾನು ಬುದ್ಧಿ ಹೇಳಿದ್ದೇನೆ. ಅವಳು ನಿರ್ಧಾರ ಬದಲಿಸಬಹುದು. ನೋಡೋಣ?’’ ಅಜ್ಜ ಮೃದುವಾಗಿ ಬಿಟ್ಟಿದ್ದರು. ಆದರೆ ಅವರಿಗೆ ಮಗಳನ್ನು ಗದರಿಸುವ, ಅವಳನ್ನು ಎದುರಿಸುವ, ಅವಳ ಜೊತೆ ಮಾತನಾಡಿ, ವಾದ ಮಾಡಿ ಅವಳ ಬಾಯಿ ಮುಚ್ಚಿಸುವ ಸಾಮರ್ಥ್ಯವಿರಲಿಲ್ಲ. ಅವರಲ್ಲಿದ್ದುದು ಒಂದೇ ಪ್ರೀತಿ. ಮಗಳ ಮೇಲಿರುವ ಅಪರಿಮಿತ ಪ್ರೀತಿ. ಆ ಪ್ರೀತಿಯ ಮುಂದೆ, ಅವಳ ಪ್ರತಿಭೆಯ ಮುಂದೆ ಅವರು ಕೊಚ್ಚಿಹೋಗುತ್ತಿದ್ದರು. ಅವಳಲ್ಲದೆ ಅವರಿಗೆ ಈ ಲೋಕದಲ್ಲಿ ಬೇರೇನೂ ಇರಲಿಲ್ಲ. ಅವಳೇ ಸರ್ವಸ್ವ. ಅವಳ ಬೇಡಿಕೆಗಳನ್ನು ಈಡೇರಿಸುವುದೆಂದರೆ ಎಲ್ಲಿಲ್ಲದ ಖುಷಿ. ಒಮ್ಮಿಮ್ಮೆ ಅವಳು ಓದುತ್ತಿದ್ದಾಗ ಅವಳ ಮುಂದೆ ಕುಳಿತು ಅವಳನ್ನೇ ನೋಡುತ್ತಾ ಸುಮ್ಮನೆ ಗಂಟೆಗಟ್ಟಲೆ ಕುಳಿತು ಬಿಡುತ್ತಿದ್ದರು. ತಾನು ಕಾಲೇಜು ಸೇರುತ್ತಿರುವುದರ ವಿರುದ್ಧ ಊರಿನಲ್ಲಿ ನಡೆಯುತ್ತಿರುವ ಗುಸು ಗುಸು, ಮನೆಯಲ್ಲಿ ನಡೆಯುತ್ತಿರುವ ಮಾತುಕತೆಗಳು ಎಲ್ಲ ನಿನ್ನ ಅಮ್ಮನಿಗೆ ಗೊತ್ತಿತ್ತು. ಆದರೆ ಅವಳು ಅದರ ಬಗ್ಗೆ ತಲೆ ಕೆಡಿಸಿಕೊಂಡವಳೇ ಅಲ್ಲ. ನಿನ್ನಮ್ಮ ಒಂದು ದಿನ ಅಜ್ಜ ನನ್ನು ಕರೆದುಕೊಂಡು ಹೋಗಿ ಕಾಲೇಜು ಸೇರಿಯೇ ಬಿಟ್ಟಳು. ನಿಜವಾದ ಯುದ್ಧ ಶುರುವಾಗಿದ್ದೇ ಆಗ.
ಕಾಲೇಜು ಇಲ್ಲಿಂದ ಸುಮಾರು 3-4 ಮೈಲು ದೂರವಿದೆ. ಆಗ ನಡೆದುಕೊಂಡೇ ಹೋಗಬೇಕಾಗಿತ್ತು. ರಸ್ತೆಯಲ್ಲಿ ಕೆಲವರು ಬೇಕೆಂದೇ ನಿನ್ನಮ್ಮನಿಗೆ ತೊಂದರೆ ಕೊಡಲು, ಕೀಟಲೆ ಮಾಡಲು ತೊಡಗಿದರು. ಅವಳು ಹೋಗುವಾಗ ದಾರಿಯಲ್ಲಿ ಗುಂಪು ಕಟ್ಟಿಕೊಂಡು ತಮಾಷೆ ಮಾಡುವುದು, ಪೋಲಿ ಹಾಡುಗಳನ್ನು ಹಾಡುತ್ತಾ ಕೇಕೇ ಹಾಕತೊಡಗಿದರು. ನಿನ್ನಮ್ಮ ಅಂತಹವರಿಗೆಲ್ಲ ಹೆದರುವವಳಲ್ಲ. ಚಪ್ಪಲಿ ತೋರಿಸಿದಳು. ಗುರುತು ಪರಿಚಯ ನೋಡದೆ ರಸ್ತೆಯಲ್ಲೇ ಜಗಳಕ್ಕೆ ನಿಂತಳು. ಅವಳಿಂದ ಬೈಸಿಕೊಂಡವರೆಲ್ಲ ಅಜ್ಜನ ಬಳಿ ದೂರು ಕೊಡಲು ಮನೆಗೆ ಬರಲಾರಂಭಿಸಿದರು. ಸುದ್ದಿ ಹರಡತೊಡಗಿತು. ಊರಿಡೀ ಒಂದಾಯಿತು. ಇಡೀ ಊರೇ ಅಜ್ಜನ ವಿರುದ್ಧ ನಿಂತಿತು. ಅಜ್ಜ ಒಂಟಿಯಾದರು. ಮಗಳು ಬೆಳಗ್ಗೆ ಕಾಲೇಜಿಗೆ ಹೋದರೆ ಹಿಂದಿರುಗಿ ಬರುವವರೆಗೂ ಭಯ, ಆತಂಕದಿಂದ ಕಂಗಾಲಾಗಿ ಬಿಡುತ್ತಿದ್ದರು. ಆದರೆ ನಿನ್ನ ಅಮ್ಮ ಇದು ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಅವಳಿಗೆ ಕಾಲೇಜು-ಓದು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಗಮನವಿರಲಿಲ್ಲ.
ಒಂದು ದಿನ ಒಂದು ಘಟನೆ ನಡೆಯಿತು. ನಿನ್ನಮ್ಮ ಕಾಲೇಜಿನಿಂದ ಬರಬೇಕಾದರೆ ಅದೆಲ್ಲಿಂದಲೋ ತೂರಿ ಬಂದ ಒಂದು ಕಲ್ಲು ಅವಳ ತಲೆಗೆ ಬಡಿಯಿತು. ರಕ್ತ ಸುರಿಯಿತು. ಅಂಗೈಯಲ್ಲಿ ಗಾಯವನ್ನು ಒತ್ತಿ ಹಿಡಿದುಕೊಂಡು ರಕ್ತದಲ್ಲಿ ಮಿಂದವಳಂತೆ ಮನೆಗೆ ಬಂದ ಮಗಳನ್ನು ನೋಡಿ ಅಜ್ಜ-ಅಜ್ಜಿ ನಡುಗಿ ಹೋದರು. ಡಾಕ್ಟರು ಬಂದರು. ಬ್ಯಾಂಡೇಜು ಕಟ್ಟಿ ಎರಡು ದಿನ ಆರಾಮ ಮಾಡಿಕೊಳ್ಳುವಂತೆ ಹೇಳಿ, ಮಾತ್ರೆ ಕೊಟ್ಟು ಹೋದರು. ಅಜ್ಜನಿಗೆ ಈಗ ದಾರಿಯೇ ಕಾಣಲಿಲ್ಲ. ಹೀಗೆಯೇ ಹೋದರೆ ಕೆಲಸ ಕೆಡಬಹುದು. ಮಗಳ ಪ್ರಾಣಕ್ಕೆ ಆಪತ್ತು ಬರಬಹುದು ಎಂಬುದು ಅವರಿಗೆ ಮನದಟ್ಟಾಯಿತು. ಆಗ ಅವರ ಸಹಾಯಕ್ಕೆ ಬಂದವರು ತ್ಯಾಂಪಣ್ಣ ಶೆಟ್ಟಿ.
ಅಂದು ಸಂಜೆಯೇ ತ್ಯಾಂಪಣ್ಣ ಶೆಟ್ಟರ ಗುತ್ತಿನ ಮನೆಗೆ ಹೋದ ನಿನ್ನ ಅಜ್ಜ ವಿಷಯವೆಲ್ಲ ತಿಳಿಸಿದರು. ‘‘ಮಗಳು ಕಾಲೇಜಿಗೆ ಹೋಗಬೇಡ ಎಂದರೆ ಕೇಳುವುದಿಲ್ಲ - ಊರವರು ಹೋಗಲು ಬಿಡುವುದಿಲ್ಲ - ಏನು ಮಾಡಬೇಕೂಂತ ನನಗೊಂದೂ ತೋಚುವುದಿಲ್ಲ - ನೀವೇ ಪರಿಹಾರ ಹೇಳಬೇಕು’’ ನಿನ್ನಜ್ಜ ಯಾಚಿಸಿದರು.
‘‘ದುಡ್ಡು ಖರ್ಚು ಮಾಡಿ ನಮ್ಮ ಮಕ್ಕಳಿಗೆ ಓದಿಸುವುದು ನಾವು - ಯಾರಿಗೇಕೆ ಹೆದರಬೇಕು. ನೀವು ಹೋಗಿ ಅಬ್ಬು ಬ್ಯಾರಿಗಳೇ, ಇದನ್ನು ನಾನು ನೋಡಿಕೊಳ್ಳುತ್ತೇನೆ’’ ಎಂದು ಧೈರ್ಯ ಹೇಳಿದ ತ್ಯಾಂಪಣ್ಣ, ಮರುದಿನ ಬೆಳಗ್ಗೆ ಬಂದು ಈ ಮನೆಯ ಅಂಗಳದಲ್ಲಿ ನಿಂತಿದ್ದರು.
‘‘ಮಗಳೇ, ನಿನ್ನನ್ನು ನಾನೇ ಕಾಲೇಜಿಗೆ ಬಿಟ್ಟು ಬರು ತ್ತೇನೆ. ಯಾರು ಏನು ಮಾಡುತ್ತಾರೇಂತ ಒಂದು ಕೈ ನೋಡಿಯೇ ಬಿಡೋಣ ನಡಿ’’ ಎಂದಾಗ ನಿನ್ನ ಅಮ್ಮ, ತಲೆಯಲ್ಲಿ ಬ್ಯಾಂಡೇಜು ಇದೆ ಎಂಬುದನ್ನೂ ಮರೆತು ತ್ಯಾಂಪಣ್ಣ ಶೆಟ್ಟಿಯ ಜೊತೆ ಹೊರಟು ನಿಂತಿ ದ್ದಳು. ನಿನ್ನಜ್ಜ ‘ನಾನೂ ಬರ್ತೇನೆ’ ಎಂದಾಗ ಒಪ್ಪದ ತ್ಯಾಂಪಣ್ಣ, ‘‘ನೀವು ಬರುವುದು ಬೇಡ ಅಬ್ಬು ಬ್ಯಾರಿ. ನಾನಿರುವಾಗ ನಿಮಗೇಕೆ ಭಯ. ಇದನ್ನು ನಾನು ನೋಡಿಕೊಳ್ಳುತ್ತೇನೆ ಎಂದೆನಲ್ಲ. ನನಗೆ ಬಿಟ್ಟು ಬಿಡಿ. ನೀವು ಆರಾಮವಾಗಿರಿ’’ ಎಂದು ಹೇಳಿ ಹೊರಟಾಗ ನಿನ್ನಮ್ಮ ಅವರ ಹಿಂದೆ ಸೆಟೆದು ನಡೆದಿದ್ದಳು. ಎಂತಹ ಧೈರ್ಯ ಅವಳದ್ದು. ಎಂತಹ ಛಲ.
ನಿನ್ನಮ್ಮನನ್ನು ಕಾಲೇಜಿಗೆ ಬಿಟ್ಟು ಬಂದ ತ್ಯಾಂಪಣ್ಣ ಸೀದಾ ಹೋದದ್ದು ಮಸೀದಿ ಗುರುಗಳ ಕೋಣೆಗೆ. ಅಲ್ಲಿಗೆ ಹೋಗಿ ಮಸೀದಿಯ ಅಧ್ಯಕ್ಷರನ್ನು ಕೋಣೆಗೆ ಕರೆಸಿದರಂತೆ.
‘‘ನೋಡಿ ಗುರುಗಳೇ, ನೀವು ಈ ಬ್ಯಾರಿಗಳಿಗೆ ಮಾತ್ರ ಗುರುಗಳಲ್ಲ. ಇಡೀ ಊರಿಗೇ ಗುರುಗಳು. ಅಧ್ಯಕ್ಷರೇ, ನೀವೂ ಹಾಗೆಯೇ - ಈ ಮಸೀದಿಗೆ ಮಾತ್ರ ಅಧ್ಯಕ್ಷರಲ್ಲ. ಇಲ್ಲಿಯ ಎಲ್ಲ ಬ್ಯಾರಿಗಳ ಅಧ್ಯಕ್ಷರು. ನನಗೆ ನನ್ನ ಮಗಳು ಬೇರೆ ಅಲ್ಲ, ಅಬ್ಬು ಬ್ಯಾರಿಯ ಮಗಳು ಬೇರೆ ಅಲ್ಲ. ನಿನ್ನೆ ಅವಳು ಕಾಲೇಜಿಂದ ಬರುವಾಗ ಯಾರೋ ಪೋಕರಿಗಳು ಕಲ್ಲು ಹೊಡೆದಿದ್ದಾರಂತೆ. ಅವಳ ತಲೆ ಒಡೆದು ರಕ್ತ ಬಂದಿದೆ. ಇವತ್ತು ನಾನೇ ಅವಳನ್ನು ಕಾಲೇಜಿಗೆ ಬಿಟ್ಟು ಬಂದೆ. ದಾರಿಯಲ್ಲಿ ಹೋಗುವಾಗ ಕಲ್ಲು ಹೊಡೆಯುವಂತಹ ತಪ್ಪುಅವಳೇನು ಮಾಡಿದ್ದಾಳೆ. ಕಾಲೇಜಿಗೆ ಹೋಗುವುದು ವಿದ್ಯೆ ಸಂಪಾದಿಸುವುದು ತಪ್ಪಾ. ಅವಳಂತಹ ಹೆಣ್ಣು ಮಗಳು ಈ ಊರಿನಲ್ಲಿದ್ದಾಳೆ ಎಂಬುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು. ‘‘ತ್ಯಾಂಪಣ್ಣ ಶೆಟ್ಟಿಯ ಗಂಭೀರತೆ ಕಂಡು ಗುರುಗಳು, ಅಧ್ಯಕ್ಷರು ಮಾತು ಬಾರದವರಂತೆ ಸುಮ್ಮನೆ ಕುಳಿತ್ತಿದ್ದರಂತೆ.
‘‘ಅಧ್ಯಕ್ಷರೇ, ಇನ್ನೊಮ್ಮೆ ಇದು ಪುನರಾವರ್ತನೆ ಯಾಗಬಾರದು. ಹಾಗೇನಾದರೂ ಆದರೆ ಒಬ್ಬೊಬ್ಬ ರನ್ನೂ ಹಿಡಿದು ಪೊಲೀಸರಿಗೆ ಕೊಡುತ್ತೇನೆ. ಮತ್ತೆ ನೀವು ಬಂದು ದಮ್ಮಯ್ಯ ಹಾಕಿದರೂ ನಾನು ನಿಮ್ಮ ಸಹಾಯಕ್ಕೆ ಬರಲಿಕ್ಕಿಲ್ಲ’’ ಎಚ್ಚರಿಕೆಯ ನುಡಿಯಂತಿದ್ದ ತ್ಯಾಂಪಣ್ಣನ ಮಾತು ಕೇಳಿ ಆಗಲೂ ಇಬ್ಬರೂ ಬಾಯಿ ತೆರೆಯಲಿಲ್ಲವಂತೆ.
‘‘ಹೌದಾ ಗುರುಗಳೇ, ನಿಮ್ಮ ಧರ್ಮಗ್ರಂಥದಲ್ಲಿ ಉಂಟಂತಲ್ಲ - ಹೆಣ್ಣು ಮಕ್ಕಳು ಜ್ಞಾನ ಸಂಪಾದಿಸಲು ಚೀನಾದಂತಹ ದೂರದ ದೇಶಕ್ಕೆ ಬೇಕಾದರೂ ಹೋಗಿ ಕಲಿಯಬಹುದೂಂತ. ಆ ಮಾತು ನಮ್ಮ ಈ ಊರಿಗೆ ಅನ್ವಯಿಸುವುದಿಲ್ಲವಾ ಗುರುಗಳೇ.’’
ತ್ಯಾಂಪಣ್ಣನ ಮಾತು ಗುರುಗಳ ಎದೆಗೆ ಚುಚ್ಚಿತ್ತು. ಅವರಿಗೆ ಈಗ ಮಾತನಾಡದೆ ಬೇರೆ ದಾರಿಯೇ ಇರಲಿಲ್ಲ.
‘‘ಹೌದು ತ್ಯಾಂಪಣ್ಣ . ಗ್ರಂಥದಲ್ಲಿ ಉಂಟು. ಆದರೆ ಇಲ್ಲಿಯ ಜನರು ಸುಧಾರಣೆಯಾಗಬೇಕಲ್ಲ. ತಿಳುವಳಿಕೆ ಇಲ್ಲದವರು. ಸ್ವಲ್ಪಸಮಯಬೇಕು ತ್ಯಾಂಪಣ್ಣ ಎಲ್ಲ ಸರಿಯಾಗ್ತದೆ. ಓದಿ ತಿಳಿದುಕೊಳ್ಳುವಷ್ಟು ಶಕ್ತಿ ಇಲ್ಲದ ಅವರು ನೋಡಿ ಕಲಿತುಕೊಳ್ಳುತ್ತಾರೆ. ಯಾವುದನ್ನೂ ಒಮ್ಮೆಲೆ ಹೇರಲಿಕ್ಕೆ ಆಗುವುದಿಲ್ಲವಲ್ಲ ತ್ಯಾಂಪಣ್ಣ. ಮತ್ತೆ ಆ ಭಾರಕ್ಕೆ ಅವರು ಕುಸಿದುಬಿಟ್ಟರೆ.’’
‘‘ನಿಮ್ಮ ಹೆಣ್ಣು ಮಕ್ಕಳು ಓದಬೇಕು ಗುರುಗಳೇ. ಹೆಣ್ಣು ಮಕ್ಕಳು ಓದಿದರೆ ಇಡೀ ಮನೆ ಉದ್ಧಾರ ಆಗುತ್ತದೆ. ಮನೆ ಉದ್ಧಾರ ಆದರೆ ಊರು ಉದ್ಧಾರ ಆಗುತ್ತದೆ. ಊರು ಉದ್ಧಾರ ಆದರೆ ದೇಶ ಉದ್ಧಾರ ಆಗುತ್ತದೆ. ನೀವೆಲ್ಲ ಇದಕ್ಕೆ ಮನಸ್ಸು ಮಾಡಬೇಕು.’’
‘‘ಹೌದು ತ್ಯಾಂಪಣ್ಣ. ನಾನು ಸುಮ್ಮನೆ ಕುಳಿತಿಲ್ಲ. ಅದಕ್ಕಾಗಿ ಪ್ರಯತ್ನಿಸುತ್ತಾ ಇದ್ದೇನೆ. ಯಾವುದೂ ಒಮ್ಮೆಲೇ ಬದಲಾಗುವುದಿಲ್ಲ. ಒಂದು ಬೀಜ ಬಿತ್ತಿ, ಅದು ಸಸಿಯಾಗಿ ಬೆಳೆದು ಮರವಾಗಿ ಹೂಬಿಟ್ಟು ಕಾಯಿ ಆಗಲಿಕ್ಕೆ ಸಮಯ ಬೇಕು. ಹಾಗೆಯೇ ನಮ್ಮ ಜನ. ಬದಲಾವಣೆಗೆ ತೆರೆದುಕೊಳ್ಳುವವರೆಗೂ ನಾವು ಶ್ರಮಿಸಬೇಕು. ನಾನೂ ಪ್ರಯತ್ನಿಸುತ್ತಾ ಇದ್ದೇನೆ. ಒಂದಲ್ಲ ಒಂದು ದಿನ ನಮ್ಮ ಹೆಣ್ಣು ಮಕ್ಕಳು ಗುಂಪು ಗುಂಪಾಗಿ ಬುರ್ಖಾ ಹಾಕಿಕೊಂಡು ಕಾಲೇಜಿಗೆ ಹೋಗುವ ದಿನ ಬರಬಹುದು. ಖಂಡಿತ ಬರುತ್ತದೆ. ಆದಷ್ಟು ಬೇಗ ಬರಲೀಂತ ನಾನು ಪ್ರಾರ್ಥಿಸುತ್ತಿದ್ದೇನೆ’’ ಮೌಲವಿಯ ಕಣ್ಣುಗಳ ತುಂಬಾ ಕನಸುಗಳಿದ್ದವು.
ನೀವೆಲ್ಲ ನಮ್ಮ ಪುಟ್ಟ ಹಳ್ಳಿಯನ್ನೇ ಜಗತ್ತೂಂತ ತಿಳಿದುಕೊಳ್ಳಬಾರದು. ಪೇಟೆಯ ಕಡೆಗೆ ಹೋಗಬೇಕು. ಅಲ್ಲಿ ನಿಮ್ಮ ಹೆಣ್ಣು ಮಕ್ಕಳು ಕಾಲೇಜಿಗೆ ಹೋಗುವುದನ್ನು ಎಲ್ಲರ ಜೊತೆ ಬೆರೆಯುವುದನ್ನೂ ನೋಡಬೇಕು. ಅವನ್ನೆಲ್ಲ ಇಲ್ಲಿಯ ಜನರಿಗೆ ಹೇಳಿಕೊಡಬೇಕು ಗುರುಗಳೇ. ವಿದ್ಯೆಯಿಂದಾಗುವ ಪ್ರಯೋಜನವನ್ನು ಅವರಿಗೆ ಮನದಟ್ಟು ಮಾಡಬೇಕು. ಕನಸು ಕಾಣುತ್ತಾ ಕುಳಿತರೆ ಯಾವುದೂ ಬದಲಾಗುವುದಿಲ್ಲ. ರಂಗಕ್ಕೆ ಇಳಿಯಬೇಕು. ಯುದ್ಧ ಮಾಡಿದಂತೆ ಕೆಲಸ ಮಾಡಬೇಕು. ಬ್ಯಾರಿಗಳು ತುಂಬಾ ಒಳ್ಳೆಯವರು. ನಂಬಿಗಸ್ಥರು. ಶ್ರಮಜೀವಿಗಳು. ಮುಗ್ಧರು. ಕಪಟ ಅರಿಯದವರು. ವಿಶ್ವಾಸ ಇಟ್ಟರು ಅಂದರೆ ಪ್ರಾಣ ಕೊಡಲಿಕ್ಕೂ ಹಿಂಜರಿಯದವರು. ಅವರಿಗೆ ಒಳ್ಳೆಯ ಮಾರ್ಗದರ್ಶನ ಬೇಕು. ಒಳ್ಳೆಯ ನಾಯಕತ್ವ ಬೇಕು. ಕೈಹಿಡಿದು ನಡೆಸುವವರು ಬೇಕು. ಅವರನ್ನು ಕೈಹಿಡಿದು ಒಂದು ನಾಲ್ಕು ಹೆಜ್ಜೆ ನಡೆಸಿ ಅಷ್ಟು ಸಾಕು. ಆಮೇಲೆ ಅವರು ಜಗತ್ತನ್ನೇ ಸುತ್ತಿ ಗೆದ್ದು ಬರ್ತಾರೆ. ಅಷ್ಟೊಂದು ಪ್ರತಿಭಾವಂತರು ಬ್ಯಾರಿಗಳು.’’
ತ್ಯಾಂಪಣ್ಣನ ಮಾತು ಕೇಳಿ ಗುರುಗಳ ಕಣ್ಣು ತುಂಬಿತ್ತಂತೆ.
ನಿಮಗೆ ಬ್ಯಾರಿಗಳ ಮೇಲಿರುವ ಪ್ರೀತಿ, ಅಭಿಮಾನ ಕಂಡು ನನ್ನ ಹೊಟ್ಟೆ ತಂಪಾಗಿದೆ ತ್ಯಾಂಪಣ್ಣ. ನಿಮ್ಮ ಈ ಪ್ರೀತಿ, ವಿಶ್ವಾಸ, ಕಾಳಜಿ ಎಂದೂ ಹೀಗೆಯೇ ಇರಲಿ. ನೆರಳು ನೀಡುವ ಮರಕ್ಕೆ ಬ್ಯಾರಿಗಳು ಎಂದೂ ಕೊಡಲಿ ಹಾಕಲಾರರು. ಒಂದು ಲೋಟ ಹಾಲು ಕೊಟ್ಟರೆ, ಹಾಲಿಗೆ ಜೇನು ಸೇರಿಸಿ ಹಿಂದೆ ಕೊಡುವವರು ಅವರು. ನಿಮ್ಮ ಈ ಅಭಿಮಾನ, ಹಾರೈಕೆಯಿಂದಾಗಿ ಖಂಡಿತ ಈ ಊರಿನ ಬ್ಯಾರಿಗಳು ವಿದ್ಯಾವಂತರಾಗುತ್ತಾರೆ. ಅಭಿವೃದ್ಧಿ ಹೊಂದುತ್ತಾರೆ. ಮಾದರಿಯಾಗುತ್ತಾರೆ ಎಂಬ ನಂಬಿಕೆ ನನಗಿದೆ ತ್ಯಾಂಪಣ್ಣ ...’’ ಮೌಲವಿ ಎದ್ದು ನಿಂತು ತ್ಯಾಂಪಣ್ಣರನ್ನು ಆಲಂಗಿಸಿಕೊಂಡಿದ್ದರಂತೆ. ‘‘ಗುರುಗಳೇ, ಈ ವಿಷಯದಲ್ಲಿ ನಿಮಗೆ ನನ್ನ ಎಂತಹ ಸಹಾಯ ಬೇಕು ಹೇಳಿ, ನಿಮ್ಮ ಜೊತೆ ನಾನಿದ್ದೇನೆ, ಬರ್ತೇನೆ’’ ಎಂದು ಹೇಳಿ ತ್ಯಾಂಪಣ್ಣ ಹೊರಟು ಬಂದಿದ್ದರಂತೆ.
ಆನಂತರ ಸುಮಾರು ಒಂದು ವಾರ ಕಾಲ ತ್ಯಾಂಪಣ್ಣನೇ ನಿನ್ನ ಅಮ್ಮನನ್ನು ದಿನಾ ಕಾಲೇಜಿಗೆ ಬಿಟ್ಟು ಬರುತ್ತಿದ್ದರಂತೆ.
(ಗುರುವಾರದ ಸಂಚಿಕೆಗೆ)