‘ಜೈ ಭೀಮ್ ಲಾಲ್ ಸಲಾಂ’ ಇತಿಹಾಸವೇನು ಹೇಳುತ್ತದೆ?

Update: 2016-11-10 18:44 GMT

  
ಏನಿದರ ಮೂಲ? 
ಇತ್ತೀಚಿನ ದಿನಗಳಲ್ಲಿ ಫುಲೆ,ಅಂಬೇಡ್ಕರವಾದಿ ಬಹುಜನ ಚಳವಳಿ ಮತ್ತು ಮಾರ್ಕ್ಸ್‌ವಾದಿ ಚಳವಳಿಗೂ ಸಾಕಷ್ಟು ವಾದವಿವಾದಗಳು ನಡೆಯುತ್ತಿವೆ. ಇದು ಮೊದಲು ವಿಶ್ವವಿದ್ಯಾಲಯಗಳಲ್ಲಿ ಪ್ರಾರಂಭವಾಗಿ ನಂತರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಿಸಿ ಈಗೀಗ ವೈಯಕ್ತಿಕ ನೆಲೆಗಳಿಗೂ ವ್ಯಾಪಿಸಿಬಿಟ್ಟಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದಾಗಲೂ ಸಹಿತ ಅನೇಕ ವರ್ಷಗಳಿಂದ ವೈಯಕ್ತಿಕ ನೆಲೆಗಳಲ್ಲಿ ಒಂದು ಸೌಹಾರ್ದ ಸಂಬಂಧವನ್ನು ಹೊಂದಿದ್ದ ಅನೇಕರೀಗ ಪರಸ್ಪರರನ್ನು ಅನುಮಾನದಿಂದ ನೋಡುವ ಮಟ್ಟಕ್ಕೆ ಹೋಗಿದ್ದೇವೆ. ಇನ್ನು ಮುಂದೆ ಯಾವುದೇ ಚುನಾವಣಾ ಹೊಂದಾಣಿಕೆಗಳು, ಜಂಟಿ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸಂವಾದಗಳೂ ನಡೆಯದಿರುವ ಪರಿಸ್ಥಿತಿ ಎದುರಾಗಿದೆ.
ಅನೇಕರು ಇದನ್ನು ವೈಯಕ್ತಿಕ ಅಹಂ ಸಮಸ್ಯೆ ಎಂದು ವಿಶ್ಲೇಷಿಸಿ ನಿರ್ಲಕ್ಷಿಸುತ್ತಿದ್ದಾರೆ. ಇದು ಕೇವಲ ‘ನೀಲಿ’ ಮತ್ತು ‘ಕೆಂಪು’ ಎಂಬ ‘ವರ್ಣ’ ಭೇದದ ಸಮಸ್ಯೆಯಲ್ಲ. ಇಲ್ಲಿ ಅಹಂ ಸಮಸ್ಯೆಗಳನ್ನೂ ತಳ್ಳಿಹಾಕುವಂತಿಲ್ಲ ಎಂಬುದು ನಿಜವಾದರೂ ಕೇವಲ ವೈಯಕ್ತಿಕ ಕಾರಣಗಳಿಗಾಗಿ ಹುಟ್ಟಿಕೊಂಡ ಭಿನ್ನಾಭಿಪ್ರಾಯವಲ್ಲ. ಇದು ಆಯಾ ಚಳವಳಿಗಳ ನಾಯಕತ್ವ ವಹಿಸಿದವರ ಜಾತಿ ಹಿನ್ನೆಲೆಗಳಲ್ಲಿರುವ ಭಿನ್ನತೆಯೂ ಅಲ್ಲ. ಉದಾಹರಣೆಗೆ, ‘‘ಯೆಚೂರಿಯವರು ಮತ್ತು ಪಾಲಿಟ್ ಬ್ಯುರೋನಲ್ಲಿರುವವರು ಹೆಚ್ಚಿನವರು ಬ್ರಾಹ್ಮಣರು, ಮಾಯಾವತಿಯವರು ದಲಿತರು ಆದ್ದರಿಂದ ನಾವು ಬೇರೆ ಬೇರೆ’’ ಎಂಬ ಒಂದೇ ಅಂಶದ ಭಿನ್ನತೆಯೂ ಅಲ್ಲ. ‘‘ಕ್ರಾಂತಿಯ ಹೆಸರಿನಲ್ಲಿ ದಲಿತ ವಿದ್ಯಾರ್ಥಿ ಯುವಜನರನ್ನು ಸೆಳೆದು ನಂತರದಲ್ಲಿ ಹಿಂಸೆಯ ಮಾರ್ಗಕ್ಕೆ ಪ್ರೇರೇಪಿಸುತ್ತಾರೆ’’ ಆದ್ದರಿಂದ ನಾವು ಅವರೊಂದಿಗೆ ಸೇರಬಾರದು ಎಂಬುದೊಂದೇ ಕಾರಣಕ್ಕೆ ಈ ಚಳವಳಿಗಳು ಬೇರೆ ಬೇರೆಯಾದದ್ದಲ್ಲ. ಈ ವಿವಾದಕ್ಕೆ ತನ್ನದೇ ಆದ ಒಂದು ಇತಿಹಾಸವಿದೆ
ಮಾರ್ಕ್ಸ್‌ವಾದಿಗಳಿಗೆ, ಫುಲೆ, ಅಂಬೇಡ್ಕರವಾದಿಗಳಿಗೆ ಮತ್ತಿತರ ಚಿಂತಕರಿಗೆ ಈ ಇತಿಹಾಸ ಮತ್ತು ಸೈದ್ಧಾಂತಿಕ ಸಂಘರ್ಷದ ಸ್ಪಷ್ಟ ಪರಿಕಲ್ಪನೆ ಇರುವುದು ಅತ್ಯಗತ್ಯ.
ರಷ್ಯನ್ ಕ್ರಾಂತಿಯಿಂದ ಪ್ರೇರಿತರಾದ ಅನೇಕ ಯುವಕರು ಮತ್ತು ವಿದ್ಯಾರ್ಥಿಗಳು 20ನೆ ಶತಮಾನದ ಎರಡನೆ ದಶಕದಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ತಮ್ಮದೇ ಕ್ರಾಂತಿಕಾರಿ ಸಂಘಟನೆಗಳನ್ನು ಕಟ್ಟಿಕೊಂಡಿದ್ದರು. ಬಂಗಾಳದಲ್ಲಿ ‘ಅನುಶೀಲನ ಸಮಿತಿ’ ಮತ್ತು ‘ಜುಗಾಂತರ’, ಉತ್ತರ ಪ್ರದೇಶದಲ್ಲಿ ಶೌಕತ್ ಉಸ್ಮಾನಿ, ಮದ್ರಾಸ್ ಪ್ರಾಂತದಲ್ಲಿ ಸಿಗರವೇಲು ಚೆಟ್ಟಿಯಾರ್ ಹೀಗೆ. ಇವರೆಲ್ಲರೂ ಕಮ್ಯುನಿಸ್ಟ್ ರಾಗಿದ್ದರೂ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರಾಗಿರಲಿಲ್ಲ. ಡಿಸೆಂಬರ್ 25, 1925ರಲ್ಲಿ ಮಾನವೇಂದ್ರನಾಥ ರಾಯ್ (ಎಂ. ಎನ್. ರಾಯ್), ಅವರ ಪತ್ನಿ ಎಲ್ವಿನ್ ರಾಯ್, ಅಬನಿ ಮುಖರ್ಜಿ ಮತ್ತವರ ಪತ್ನಿ ರೋಸಾ ಫೈಟಿಂಗೋಫ್, ಎಂ.ಟಿ.ಬಿ.ಪಿ. ಆಚಾರ್ಯ ಮತ್ತಿತರ ನಾಲ್ಕಾರು ಪ್ರಾಂತೀಯ ಮುಖಂಡರೊಡನೆ ಸೇರಿಕೊಂಡು ಭಾರತ ಕಮ್ಯುನಿಸ್ಟ್ ಪಕ್ಷ ಸ್ಥಾಪಿಸಿದರು. ಶೌಕತ್ ಉಸ್ಮಾನಿಯವರನ್ನು ಬಿಟ್ಟರೆ ಬೇರೆ ಕಮ್ಯುನಿಸ್ಟ್ ಪಂಗಡಗಳವರು ಕಮ್ಯುನಿಸ್ಟ್ ಪಕ್ಷಕ್ಕೆ ಸೇರಲಿಲ್ಲ. ‘ಅನುಶೀಲನ ಸಮಿತಿಯ ಕ್ರಾಂತಿಕಾರಿ ಸಮಾಜವಾದಿ ಪಾರ್ಟಿ’ (RSP) ಯನ್ನು ಹುಟ್ಟುಹಾಕಿ ನಂತರದಲ್ಲಿ ಬೇರೆ ಬೇರೆ ಗುಂಪುಗಳಾಗಿ ಪರಿವರ್ತನೆಯಾಯಿತು. ಇದರ ಇನ್ನೊಂದು ಕಾವಲು ಜೆಪಿ, ಲೋಹಿಯಾವಾದಿ ಸಮಾಜವಾದಿ ಚಳವಳಿಗೆ ಸೇರಿತು.

‘ಬ್ರಾಹ್ಮಣರ ಕಾಲದಲ್ಲಿ ಕಮ್ಯುನಿಸಂ’

ನಾಶಿಕ್ ಜಿಲ್ಲೆಯ ಶ್ರೀಮಂತ ಭೂಮಾಲಿಕ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಶ್ರೀಪಾದ ಅಮೃತ ಡಾಂಗೆಯವರು ಮೊದಲು ಸ್ವರಾಜ್ಯ ಚಳವಳಿಯಲ್ಲಿದ್ದವರು. ವಿದ್ಯಾರ್ಥಿ ದೆಸೆಯಲ್ಲಿ ತಿಲಕರಿಂದ ಪ್ರಭಾವಿತರಾಗಿ ಡಾಂಗೆ ಬೈಬಲ್ ಸುಟ್ಟುಹಾಕಿದರು. ಅದಾದ ನಂತರದಲ್ಲಿ ತಿಲಕರ ಕಟ್ಟಾ ಅನುಯಾಯಿಯಾಗಿದ್ದ ಡಾಂಗೆ 1920ರಲ್ಲಿ ಅಸಹಕಾರ ಚಳವಳಿಗೆ ಸೇರಿಕೊಂಡರು. 1921ರಲ್ಲಿ ಡಾಂಗೆಯವರಿಗೆ ಗಾಂಧಿಯವರ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳು ಪ್ರಾರಂಭವಾದವು. 1921ರಲ್ಲಿ ಗಾಂಧಿ ವಿರುದ್ಧ ಲೆನಿನ್ ಎಂಬ ಪುಸ್ತಕ ಬರೆದು ಗಾಂಧಿಗಿಂತ ಲೆನಿನ್ ಮಾರ್ಗವೇ ಭಾರತಕ್ಕೆ ಸೂಕ್ತ ಎಂದು ವಾದಿಸಿದರು. ಈ ಪುಸ್ತಕವನ್ನು ಓದಿದ ಮಾನವೇಂದ್ರನಾಥ ರಾಯ್ ಡಾಂಗೆಯವರನ್ನು ಕಮ್ಯುನಿಸ್ಟ್ ಚಳವಳಿಗೆ ಸೇರಿಸಿಕೊಂಡರಲ್ಲದೇ, ಪಕ್ಷದ ಸಂಪೂರ್ಣ ಸಂಘಟನೆಯ ಜವಾಬ್ದಾರಿಯನ್ನೂ ವಹಿಸಿಬಿಟ್ಟರು. ತಿಲಕರಿಂದ ಪ್ರಭಾವಿತರಾಗಿದ್ದ ಡಾಂಗೆ ಕಮ್ಯುನಿಸ್ಟ್ ಚಳವಳಿಯನ್ನು ಸ್ವರಾಜ್ಯ ಚಳವಳಿಯ ಮಾದರಿಯಲ್ಲಿಯೇ ಕಟ್ಟಿದರು.

 ಕಮ್ಯುನಿಸ್ಟ್ ಚಳವಳಿಯನ್ನು ತೀವ್ರವಾಗಿ ಪ್ರಭಾವಿಸಿದ ಡಾಂಗೆಯವರ 1949ರ 'From Primitive Communism to Slavery' ಎಂಬ ‘ಮೇರು ಕೃತಿ’ ಹೇಗೆ ವೇದ ಕಾಲದ ಬ್ರಾಹ್ಮಣರ ಆಳ್ವಿಕೆಯಲ್ಲಿ ಭಾರತದಲ್ಲಿ ಕಮ್ಯುನಿಸಂ ಸ್ಥಾಪನೆಯಾಗಿತ್ತು ಎಂಬುದನ್ನು ಪ್ರತಿಪಾದಿಸುತ್ತದೆ. ಬ್ರಾಹ್ಮಣರ ಕಾಲದಲ್ಲಿ ಸಮಾನತೆ ನೆಲೆಸಿತ್ತು, ನಂತರದಲ್ಲಿ ಇದು ಹೋಯಿತು ಎಂಬ ವಾದವನ್ನು ಈ ದೇಶದಲ್ಲಿ ಹುಟ್ಟು ಹಾಕಿದ್ದು ತಿಲಕರು. ‘‘ರಶ್ಯನ್ ಕ್ರಾಂತಿಗೆ ಭಾರತ ಸ್ಪಂದಿಸುವ ಅಗತ್ಯವಿಲ್ಲ ಏಕೆಂದರೆ ಹಿಂದೂಧರ್ಮವೇ ನಿಜವಾದ ಕಮ್ಯುನಿಸಂ’’ ಎಂದು ತಿಲಕರು ಘೋಷಿಸಿದ್ದರು. ಇದನ್ನೇ ಆಧರಿಸಿ ಅವರ ಪರಮ ಶಿಷ್ಯ ಡಾಂಗೆ ತಮ್ಮ ಮೇರುಕೃತಿ ರಚಿಸಿದ್ದರು. ಈ ಪುಸ್ತಕವನ್ನು ಇತ್ತೀಚೆಗೆ ‘ವೈದಿಕ ಭಾರತ’ ಎಂಬ ಹೆಸರಿನಲ್ಲಿ 2002ರಲ್ಲಿ ಮರುಬಿಡುಗಡೆಮಾಡಲಾಯಿತು. ವೇದ ಕಾಲದ ಭಾರತದ ‘ಗರಿಮೆ’ಯನ್ನು ಸಾರುವ ಈ ಕೃತಿಯನ್ನು ಕಮ್ಯುನಿಸ್ಟ್ ಚಳವಳಿ ತನ್ನ ಆರಂಭಿಕ ಭಗವದ್ಗೀತೆಯನ್ನಾಗಿಸಿಕೊಂಡಿತು. ಈ ಕಾರಣಗಳಿಂದಲೇ ಬಾಬಾ ಸಾಹೇಬರನ್ನು ಮಾನವೇಂದ್ರನಾಥ ರಾಯ್ ಮತ್ತು ಶ್ರೀಪಾದ ಅಮೃತ ಡಾಂಗೆ ಯದ್ವಾತದ್ವಾ ವಿರೋಧಿಸಿದರು.

ಹರಿಜನರ ಸುಧಾರಣೆಯಂಥ ಜುಜುಬಿ ವಿಷಯ
ಇನ್ನು ಸ್ವಲ್ಪದಕ್ಷಿಣಕ್ಕೆ ಬರೋಣ. 1932ರಲ್ಲಿ ಪೂನಾ ಒಪ್ಪಂದ ಜರಗಿದ್ದು ನಮಗೆಲ್ಲ ಗೊತ್ತಿದೆ. ಗಾಂಧಿಯವರ ಉಪವಾಸ ತಂತ್ರ ಫಲಿಸಿ ಈ ದೇಶದ ಅಸ್ಪೃಶ್ಯರಿಗೆ ಹೇಗೆ ರಾಜ್ಯಾಧಿಕಾರ ತಪ್ಪಿಸಲಾಯಿತು ಎಂಬುದು ನಮಗೆಲ್ಲ ತಿಳಿದಿದೆ. ಗಾಂಧಿಯವರ ಒತ್ತಡದ ತಂತ್ರಕ್ಕೆ ಮಣಿದು ಪೂನಾ ಒಪ್ಪಂದಕ್ಕೆ ಸಹಿ ಹಾಕಿದ ನಂತರದಲ್ಲಿ ಕಮ್ಯುನಿಸ್ಟ್ ಚಳವಳಿಯ ಮಹಾನ್ ನಾಯಕ ಇ.ಎಂ.ಎಸ್. ನಂಬೂದರಿಪಾಡ್ ತಮ್ಮ ಪಕ್ಷದ ಮಲಯಾಳಂ ಮುಖವಾಣಿಗೆ ಒಂದು ಲೇಖನ ಬರೆದರು. ಇದರ ಒಂದು ವಾಕ್ಯದ ಆಂಗ್ಲ ಅನುವಾದ ಇಂತಿದೆ:
"This was a great blow to the freedom movement. For this led to the diversion of people’s attention from the objective of full independence to the mundane cause of the upliftment of the Harijans"

ನಂಬೂದರಿಪಾಡರ ಪ್ರಕಾರ ಬಾಬಾ ಸಾಹೇಬರು ದಲಿತರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ಕೇಳಿ ಹೋರಾಟ ಮಾಡಿ ಸ್ವರಾಜ್ಯ ಚಳವಳಿಗೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದರು. ಇದು ಸಂಪೂರ್ಣ ಸ್ವರಾಜ್ಯದಂಥ ಮಹಾನ್ ಗುರಿಯಿಂದ ಹರಿಜನರ ಸುಧಾರಣೆಯಂಥ ಜುಜುಬಿ ವಿಷಯದೆಡೆ ಜನರ ಗಮನವನ್ನು ಸೆಳೆಯಿತು.
‘ಹರಿಜನ’ರ ಸುಧಾರಣೆ ಎಂಬುದು ಕ್ಷುಲ್ಲಕ ವಿಷಯವಷ್ಟೇಯಲ್ಲ ದೇಶದ ಮೂಲ ಸಮಸ್ಯೆಯ ಪರಿಹಾರಕ್ಕೆ ಉಂಟಾಗಿರುವ ದೊಡ್ಡ ತೊಡಕು ಎಂಬುದನ್ನು ಪ್ರತಿಪಾದಿಸಿದ ನಂಬೂದರಿಪಾಡರು ಒಂದು ಕಡೆ, ತಿಲಕರಿಂದ ಪ್ರೇರೇಪಣೆ ಪಡೆದ ರಾಯ್ ಮತ್ತು ಡಾಂಗೆ ಇನ್ನೊಂದೆಡೆ, ಕಮ್ಯುನಿಸ್ಟ್ ಚಳವಳಿಯ ದಿಕ್ಕನ್ನು ನಿರ್ಧರಿಸಿದರು. ನಂತರದಲ್ಲಿ ಡಾಂಗೆ ಮತ್ತು ನಂಬೂದರಿಪಾಡ್ ಬೇರೆ ಬೇರೆ ಕವಲುಗಳ ಕಮ್ಯುನಿಸ್ಟ್ ಪಕ್ಷಗಳಿಗೆ ನೇತೃತ್ವ ಕೊಟ್ಟರೂ ಅವರು ಪ್ರತಿಪಾದಿಸಿದ ಸಿದ್ಧಾಂತ ಮೂಲಭೂತವಾಗಿ ಹಾಗೆಯೇ ಉಳಿಯಿತು.
ಈ ದೇಶದ ಮೂಲನಿವಾಸಿ ಬಹುಜನರಿಗೆ ಗಾಂಧಿಯವರು ‘ಹರಿಜನ’ವೆಂಬ ಅಪಮಾನಜನಕ ಹೆಸರನ್ನು ಕೊಟ್ಟಿದ್ದು ಕಮ್ಯುನಿಸ್ಟರಿಗೆ ಕುಟುಕಲೇಯಿಲ್ಲ.
 ಬಾಬಾ ಸಾಹೇಬರು ಈ ದೇಶದ ನೈಜ ಇತಿಹಾಸವನ್ನು ಅಧ್ಯಯನ ಮಾಡಿ ‘‘ನೀವು ಈ ದೇಶವನ್ನಾಳಿದ ನಾಗಾ ಜನಾಂಗ’’ ಎಂದು ಹೇಳಿದರೆ ಡಾಂಗೆಯವರು ‘‘ವೇದಕಾಲದಲ್ಲಿ ಕಮ್ಯುನಿಸಂ ಸ್ಥಾಪನೆಯಾಗಿತ್ತು’’ ಎಂದು ಸಾರಿದರು. ಆದ್ದರಿಂದಲೇ, ಗಾಂಧಿ ಮತ್ತು ಕಮ್ಯುನಿಸ್ಟರನ್ನು ಸಮಾನವಾಗಿ ಪ್ರಭಾವಿಸಿದ ತಿಲಕರು ಇಂದಿಗೂ ಇಬ್ಬರಿಗೂ ಪ್ರಾತಃವಂದ್ಯರು.
 ಕಾಂಗ್ರೆಸನ್ನು ಸೈದ್ಧಾಂತಿಕವಾಗಿ ಒಪ್ಪಿಕೊಂಡ ಎರಡೂ ಕಮ್ಯುನಿಸ್ಟ್ ಬಣಗಳು ಆಯಾ ಕಾಲಕ್ಕೆ ಕಾಂಗ್ರೆಸನ್ನು ತಮ್ಮ ಸಮರ್ಥಾನುಸಾರ ಬೆಂಬಲಿಸಿದರು. ಕಾಂಗ್ರೆಸ್ ಒಂದು ಸಾಮ್ರಾಜ್ಯಶಾಹಿ ವಿರೋಧಿ ಚಳವಳಿ ಎಂಬುದು ಎಡ ಪಕ್ಷಗಳಿಗೆ ಮುಖ್ಯವಾಯಿತೇ ಹೊರತು ಕಾಂಗ್ರೆಸ್‌ನ ಮೂಲಭೂತ ಸಿದ್ಧಾಂತ ಮನುವಾದವೆಂಬುದು ಮನವರಿಕೆಯಾಗಲೇಯಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಕಮ್ಯುನಿಸ್ಟರು ಕಾಂಗ್ರೆಸನ್ನು ಬೆಂಬಲಿಸಿದ್ದು ಇದೇ ಕಾರಣಕ್ಕಾಗಿ. ಏಕೆಂದರೆ, ಕಾಂಗ್ರೆಸನ್ನು ಪ್ರಭಾವಿಸಿದ ತಿಲಕರ ವಿಚಾರಧಾರೆ ಕಮ್ಯುನಿಸ್ಟರ ಆಂತರ್ಯಕ್ಕೂ ಸೇರಿಹೋಗಿತ್ತು.

Writer - ಶ್ರೀಧರ ಪ್ರಭು

contributor

Editor - ಶ್ರೀಧರ ಪ್ರಭು

contributor

Similar News

ಸಂವಿಧಾನ -75