ಜ್ಞಾನ ಆಯೋಗದ ವರದಿ ಮೂಲೆಗುಂಪಾಗದಿರಲಿ

Update: 2016-11-12 18:40 GMT

ಕನ್ನಡ ಎನ್ನುವುದು ಕೇವಲ ಭಾವನಾತ್ಮಕ ವಿಷಯವಲ್ಲ; ಅದೊಂದು ವಾಸ್ತವಿಕ ಸಂಗತಿ.ಯಾರಿಗೆ ತಮ್ಮ ದೇಶ,ಸಂಸ್ಕೃತಿಗಳು ಬೇಕೋ ಅವರಿಗೆ ತಮ್ಮ ಭಾಷೆಯೂ ಬೇಕಾಗುತ್ತದೆ. ನಮ್ಮ ಇಂಗ್ಲಿಷ್ ವ್ಯಾಮೋಹಿ ತಂದೆತಾಯಿಯರು ಇನ್ನಾದರೂ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು. ಈ ಸಂದೇಶವನ್ನು ಸ್ಪಷ್ಟವಾಗಿ ಸಾರುವಂಥ ವರದಿಯನ್ನು ಕರ್ನಾಟಕ ಜ್ಞಾನ ಆಯೋಗ ರಾಜ್ಯ ಸರಕಾರಕ್ಕೆ ನೀಡಿರುವುದರಿಂದ, ಕನ್ನಡ ನಶಿಸುತ್ತಿದೆ ಎಂದು ಕೊರಗುತ್ತಿರುವವರ ಹೊಟ್ಟೆಗೆ ಹಂಡೆ ಹಾಲು ಹುಯ್ದಂತಾಗಿದೆ. ಶಿಕ್ಷಣಕ್ಕಾಗಿ ಕೋಟಿಕೋಟಿ ರೂಪಾಯಿ ಖರ್ಚುಮಾಡುವ ಕರ್ನಾಟಕ ಸರಕಾರ ಸ್ಪಷ್ಟವಾದ ಶಿಕ್ಷಣ ನೀತಿಯೊಂದನ್ನು ಹೊಂದಿರಬೇಕು ಎನ್ನುವುದು ಇಂದು ನಿನ್ನೆಯ ಮಾತಲ್ಲ. ‘‘ತಮ್ಮ ಮಕ್ಕಳ ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಬೇಕು, ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು’’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಇಂತಹ ಬೇಡಿಕೆ ಹೆಚ್ಚಾಗಿತ್ತು. ಅಂತೆಯೇ ಶಿಕ್ಷಣ ನೀತಿ ರೂಪಿಸುವಂತೆ ರಾಜ್ಯ ಸರಕಾರ ಸುಪ್ರಸಿದ್ಧ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯ ಜ್ಞಾನ ಆಯೋಗವನ್ನು ಕೋರಿತ್ತು. ಅದರಂತೆ ಕರ್ನಾಟಕದ ಮಕ್ಕಳ ಶಿಕ್ಷಣ ಕುರಿತು ಕೂಲಂಕಶವಾಗಿ ಅಧ್ಯಯನ ಮಾಡಿದ ನಂತರ ಜ್ಞಾನ ಆಯೋಗ ಇದೀಗ ಸರಕಾರಕ್ಕೆ ವರದಿ ಸಲ್ಲಿಸಿದೆ.

 ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಕುರಿತು ಜ್ಞಾನ ಆಯೋಗ ಹತ್ತಾರು ಮಹತ್ವಪೂರ್ಣ ಶಿಫಾರಸುಗಳನ್ನು ಮಾಡಿದೆ. ಅದರಲ್ಲಿ ಅತ್ಯಂತ ಮಹತ್ವವಾದದ್ದು ಪ್ರಾಥಮಿಕ ಹಂತದಲ್ಲಿನ ಶಿಕ್ಷಣ ಮಾಧ್ಯಮ ಕುರಿತದ್ದು. ಮಕ್ಕಳಿಗೆ ಒಂದರಿಂದ ನಾಲ್ಕನೆ ತರಗತಿವರೆಗೆ ಮಾತೃ ಭಾಷೆ ಇಲ್ಲವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಈ ಹಂತದಲ್ಲಿ ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಆಯೋಗ ಆಯ್ಕೆ ಸ್ವಾತಂತ್ರ್ಯದ ಸಂಗತಿಯನ್ನೂ ಮರೆತಿಲ್ಲ. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಇರಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿರುವ ಆಯೋಗ, ಐದನೆಯ ತರಗತಿಯಿಂದ ಶಿಕ್ಷಣ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಶಿಫಾರಸು ಮಾಡಿದೆ. ಮಕ್ಕಳ ಆಯ್ಕೆಗನುಗುಣವಾಗಿ ಇನ್ನೆರಡು ಭಾಷೆಗಳನ್ನು ಹೆಚ್ಚುವರಿಯಾಗಿ ಕಲಿಯಲು ಮಕ್ಕಳಿಗೆ ಅವಕಾಶಮಾಡಿಕೊಡಬೇಕು ಎಂದೂ ಆಯೋಗ ಖಚಿತ ಮಾತುಗಳಲ್ಲಿ ತಿಳಿಸಿದೆ. ಇದರಿಂದಾಗಿ, ಮಕ್ಕಳ ಆಸಕ್ತಿ ಮತ್ತು ಕಲಿಯುವ ಸಾಮರ್ಥ್ಯಗಳನ್ನು ಗಮನದಲ್ಲ್ಲಿಟ್ಟುಕೊಂಡು ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲು ಅವಕಾಶ ದೊರತಂತಾಗಿದೆ.

ಸರಕಾರಕ್ಕೆ ವರದಿ ಸಲ್ಲಿಸದ ನಂತರ ಮಾಧ್ಯಮಗಳ ವರದಿಗಾರರೋದಿಗೆ ಮಾತನಾಡುತ್ತ ಕಸ್ತೂರಿ ರಂಗನ್ ಅವರು ‘‘ಮಕ್ಕಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ಗುಣಮಟ್ಟದ ಶಿಕ್ಷಣ ಮಾತೃಭಾಷೆಯಲ್ಲೇ ಸಿಗಬೇಕು’’ ಎಂದು ಹೇಳಿರುವ ಮಾತು ತಂದೆತಾಯಿಯರಷ್ಟೇ ಅಲ್ಲದೆ ನಮ್ಮ ನ್ಯಾಯಾಂಗ ಮತ್ತು ಕೇಂದ್ರ ಸರಕಾರದ ಕಣ್ಣುತೆರೆಸಬೇಕು. ಜ್ಞಾನ ಆಯೋಗದ ಈ ಶಿಫಾರಸನ್ನು ರಾಜ್ಯ ಸರಕಾರ ಹೇಗೆ ಜಾರಿಗೆ ಕೊಡಲಿದೆ ಎಂಬುದು ಕುತೂಹಲಕಾರಿಯಾದ ವಿಷಯ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ರಾಜ್ಯ ಸರಕಾರದ ಕೈಕಟ್ಟಿ ಹಾಕಿದೆ. ಹಾಗೆಂದು ಕನ್ನಡವನ್ನು ಐದನೆಯ ತರಗತಿಯವರೆಗೆ ಶಿಕ್ಷಣ ಮಾಧ್ಯಮವಾಗಿ ಮಾಡುವುದರಲ್ಲಿ ಅದರ ಇಚ್ಛಾಶಕ್ತಿ ಮತ್ತು ಆಸಕ್ತಿಗಳು ಕುಂದಿಲ್ಲ.
         
ಮೊನ್ನೆ ರಾಜ್ಯೋತ್ಸವ ಸಮಾರಂಭದ ಭಾಷಣದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕೆಂಬುದು ಸರಕಾರದ ನಿಲುವೆಂದು ಮತ್ತೊಮ್ಮೆ ಖಚಿತವಾಗಿ ಹೇಳಿದ್ದಾರೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉದ್ಭವಿಸಿರುವ ಬಿಕ್ಕಟ್ಟಿನ ನಿವಾರಣೆಗೆ ಪ್ರಧಾನ ಮಂತ್ರಿಯವರು ಮಧ್ಯಪ್ರವೇಶ ಮಾಡಬೇಕೆಂದೂ ಮನವಿ ಮಾಡಿದ್ದಾರೆ. ಐದನೆಯ ತರಗತಿವರೆಗೆ ಮಕ್ಕಳ ಶಿಕ್ಷಣ ಮಾತೃ ಭಾಷೆಯಲ್ಲೆ ಆಗ ಬೇಕೆಂಬುದು ರಾಷ್ಟ್ರೀಯ ನೀತಿಯಾಗಬೇಕು. ಇದಕ್ಕೆ ಅಗತ್ಯವಾಗಿರುವ ಸಂವಿಧಾನ ತಿದ್ದುಪಡಿಗೆ ಪ್ರಧಾನ ಮಂತ್ರಿಯವರು ಮನಸ್ಸುಮಾಡಬೇಕು. ಹಾಗಾದಲ್ಲಿ ಕನ್ನಡವಷ್ಟೇ ಅಲ್ಲದೆ ಭಾರತದ ಎಲ್ಲ ಪ್ರದೇಶ ಭಾಷೆಗಳೂ ಚಿರಂಜೀವಿಯಾತ್ತವೆ. ಜ್ಞಾನ ಆಯೋಗದ ವರದಿ, ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಆಡಳಿತ ಕುರಿತಂತೆ, ಜರೂರಾಗಿ ಜಾರಿ ಮಾಡ ಬೇಕಾದಂಥ ಕೆಲವು ಕ್ರಮಗಳನ್ನು ಸೂಚಿಸಿರುವುದು ಗಮನಾರ್ಹವಾದುದು. ಆಯೋಗದ ವರದಿ, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ 70, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಹಾಗೆ 79 ಮತ್ತು ಶೈಕ್ಷಣಿಕ ಆಡಳಿತ ಕುರಿತು 16 ಶಿಫಾರಸುಗಳನ್ನೊಳಗೊಂಡಿದೆ.
ಪ್ರತಿಯೊಂದು ಮಗುವಿಗೂ ಅತ್ಯುನ್ನತ ಗುಣಮಟ್ಟದ ಶಿಕ್ಷಣ ದೊರೆಯ ಬೇಕು. ಈ ನಿಟ್ಟಿನಲ್ಲಿ ಸರಕಾರ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದಿರುವ ಆಯೋಗದ ನೀತಿಪ್ರಾಯವಾದ ಮಾತುಗಳನ್ನು ಸರಕಾರ ಗಂಭೀರವಾಗಿ ಮನನಮಾಡಬೇಕು. ಉನ್ನತ ಗುಣಮಟ್ಟದ ಶಿಕ್ಷಣ ಎಂದರೆ, ಆದರ್ಶ ಶಿಕ್ಷಕರಿರಬೇಕು; ಜೊತಗೆ ಗಾಳಿಬೆಳಕುಳ್ಳ ಕೊಠಡಿಗಳು, ಆಟದ ಮೈದಾನ, ಗ್ರಂಥಭಂಡಾರ, ಪ್ರಯೋಗಾಲಯ ಮತ್ತು ಶೌಚಾಲಯ, ಹಸಿರಿನ ಪರಿಸರ ಇತ್ಯಾದಿ ಮೂಲಭೂತ ಸೌಕರ್ಯಗಳಿರಬೇಕು. ಇವು ಇಲ್ಲದೆ ಉತ್ತಮ ಗುಣಮಟ್ಟದ ಶಿಕ್ಷಣ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರಕಾರ ಆದ್ಯತೆಯಿಂದ ಮಾಡಬೇಕಾಗಿರುವ ಕೆಲಸವೆಂದರೆ, ಹಳ್ಳಿಗಳು ಮತ್ತು ಪಟ್ಟಣಗಳಲ್ಲಿರುವ ಸರಕಾರಿ ಕನ್ನಡ ಶಾಲೆಗಳನ್ನು ಈ ಎಲ್ಲ ಮೂಲಭೂತ ಸೌಕರ್ಯಗಳಿಂದ ಸುಸಜ್ಜಿತವಾಗಿಸುವುದು. ಇನ್ನು ಖಾಸಗಿ ಶಾಲೆಗಳಿಗೆ ಬಂದರೆ, ನಗರಗಳಲ್ಲಿರುವ ಖಾಸಗಿ ಶಾಲೆಗಳಲ್ಲಿ ತಕ್ಕಮಟ್ಟಿಗೆ ಈ ಸೌಕರ್ಯಗಳಿರುಬಹುದಾದರೂ ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲಿನ ಖಾಸಗಿ ಶಾಲೆಗಳಲ್ಲಿ ಇದೆ ಎಂದು ಖಾತ್ರಿಯಾಗಿ ಹೇಳಲಾರದು. ನಗರ ಪ್ರದೇಶಗಳಲ್ಲೂ ತರಗತಿಯ ಕೊಠಡಿಗಳು ಕಿಷ್ಕಿಂಧೆಗಳಾಗಿವೆ. ಮೂಲಭೂತ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳಿಗೆ ಸರಕಾರ ವಿನಾಯಿತಿ ತೋರಬಾರದು. ಕಟ್ಟಡ, ಆಟದ ಮೈದಾನ, ಶೌಚಾಲಯಗಳಂಥ ಮೂಲಭೂತ ಸೌಕರ್ಯಗಳಿದ್ದಲ್ಲಿ ಮಾತ್ರ ಹೊಸ ಶಾಲೆಗಳಿಗೆ ಪರವಾನಿಗೆ ನೀಡಬೇಕು.ಇಲ್ಲದ ಕಡೆ ನಿರ್ದಾಕ್ಷಿಣ್ಯವಾಗಿ ಪರವಾನಿಗೆಗಳನ್ನು ರದ್ದುಗೊಳಿಸಬೇಕು.


ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳ ಗುಣಮಟ್ಟ ದಿನೇದಿನೇ ಕ್ಷೀಣಿಸುತ್ತಿರುವ ಬಗ್ಗೆ ದೂರು ವರ್ಷಗಳಿಂದ ಪ್ರತಿ ಶೈಕ್ಷಣಿಕ ವರ್ಷದಲ್ಲೂ ಕೇಳಿಬರುತ್ತಿದೆ. ಮಕ್ಕಳು ಓದಬೇಕಾದ ಪಠ್ಯದ ಆಯ್ಕೆಯಿಂದ ಹಿಡಿದು ಪಠ್ಯಪುಸ್ತಕಗಳ ಮುದ್ರಣದ ಗುಣಮಟ್ಟದವರೆಗೆ ದಿವ್ಯ ನಿರ್ಲಕ್ಯ ತೋರಲಾಗುತ್ತಿದೆ. ‘‘ಪಠ್ಯಪುಸ್ತಕಗಳ ರಾಷ್ಟ್ರೀಕರಣಕ್ಕಿಂತ ಮೊದಲು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ಚಾಲ್ತಿಯಲ್ಲಿದ್ದ ಪುಸ್ತಕಗಳು ನೂರು ಪಟ್ಟು ಉತ್ತಮವಾಗಿದ್ದವು. ಸರಕಾರ ಅದನ್ನು ಸಿದ್ಧಪಡಿಸಲು ತೊಡಗಿದ ಮೇಲೆ ಕ್ರಮಗತವಾಗಿ ಈ ಪಠ್ಯಪುಸ್ತಕಗಳು ಕೆಡುತ್ತಲೇ ಬಂದಿವೆ’’ ಎಂದು ಶಿವರಾಮ ಕಾರಂತರು 1985ರಷ್ಟು ಹಿಂದೆಯೇ ದೂರಿದ್ದರು. ನಂತರದ ಈ ಮುವ್ವತ್ತು ವರ್ಷಗಳ ಅವಧಿಯಲ್ಲಿ ಅದರ ಸ್ಥಿತಿಯಲ್ಲಿ ಸುಧಾರಣೆಯೇನೂ ಆಗಿಲ್ಲ. ಈಗ ಜ್ಞಾನ ಆಯೋಗ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಒಸಿಕೊಳ್ಳಲು ಶಿಫಾರಸು ಮಾಡಿದೆ. ಜೊತೆಗೆ ರಾಜ್ಯದ ಇತಿಹಾಸ, ಭೂಗೋಳ, ಸಂಸ್ಕೃತಿಗಳ ಪರಿಚಯ ಕಡ್ಡಾಯವಾಗಿರಬೇಕು ಎಂದು ಒತ್ತಿಹೇಳಿರುವುದನ್ನು ಕಡೆಗಣಿಸುವಂತಿಲ್ಲ. ಇಂದು ಲಿಂಗ ಅಸಮಾನತೆ ಮತ್ತು ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ದಾಮಾಷ ಪ್ರಮಾಣ ಕುಗ್ಗುತ್ತಿರುವುದು ಎಲ್ಲ ರಂಗಗಳಲ್ಲೂ ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸುವ ಕೆಲಸ ಶೈಕ್ಷಣಿಕ ರಂಗದಿಂದಲೇ ಆರಂಭವಾಗಬೇಕಿದೆ. ಎಂದೇ ಲಿಂಗ ತಾರತಮ್ಯ ಹೋಗಲಾಡಿಸಲು ಹೆಣ್ಣು ಮಕ್ಕಳಿಗೆ ಪದವಿವರೆಗೆ ಖಾತ್ರಿಯಾಗಿ ಶಿಕ್ಷಣ ಸಿಗುವಂತೆ ಸರಕಾರ ಸೂಕ್ತ ವ್ಯವಸ್ಥೆಮಾಡ ಬೇಕು ಎನ್ನುವ ಶಿಫಾರಸು ಗಮನಾರ್ಹವಾದುದು. ಸಿದ್ದರಾಮಯ್ಯನವರ ಸರಕಾರ ಹೆಣ್ಣುಮಕ್ಕಳಿಗೆ ‘ಶಾದಿ ಭಾಗ್ಯ’- ‘ತಾಳಿ ಭಾಗ್ಯ’ಗಳನ್ನು ನೀಡುವುದಕ್ಕೂ ಮೊದಲು ಶಿಕ್ಷಣ ಭಾಗ್ಯ ನೀಡುವ ನಿಟ್ಟಿನಲ್ಲಿ ಜರೂರಾಗಿ ಕಾರ್ಯೋನ್ಮುಖವಾಗಬೇಕಿದೆ. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಆಯೋಗ ಮಾಡಿರುವ ಕೆಲವು ಶಿಫಾರಸುಗಳು ಅಧಿಕಾರಶಾಹಿಯ ಅಸಡ್ಡೆ, ಸ್ವಜನಪಕ್ಷಪಾತ ಮತ್ತು ದುರಾಡಳಿತಗಳಿಂ ಹದಗೆಟ್ಟಿರುವ ಶಿಕ್ಷಣ ಕ್ಷೇತ್ರದ ಆರೋಗ್ಯ ಸುಧಾರಣೆಗೆ ಅತ್ಯಗತ್ಯವಾಗಿ ಆಗಬೇಕಿರುವ ಚಿಕಿತ್ಸಾ ಕ್ರಮಗಳಾಗಿವೆ. ಹಣಕಾಸಿನ ಕೊರತೆ ಮತ್ತು ದುರುಪಯೋಗದಿಂದಾಗಿ ಶಾಲಾಕಾಲೇಜುಗಳು ದುರವಸ್ಥೆಗೀಡಾಗಿವೆ. ಪ್ರಾಥಮಿಕ, ಪ್ರೌಢ, ಕೌಶಲ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ಹಣಕಾಸು ಸಚಿವರನ್ನೊಳಗೊಂಡಂತೆ ಮುಖ್ಯಮಂತ್ರಿಯವರ ಅಧ್ಕಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನ ರಚಿಸಿ ಯೋಜನೆಗಳು ಸುಗಮವಾಗಿ ಕಾರ್ಯಗತಗೊಳ್ಳುವಂತೆ ವ್ಯವಸ್ಥೆಮಾಡಬೇಕೆನ್ನುವ ಶಿಫಾರಸು ಸಕಾಲಿಕವೂ ಔಚಿತ್ಯಪೂರ್ಣವೂ ಆದುದಾಗಿದೆ. ಆಯವ್ಯಯ ಮುಂಗಡ ಪತ್ರದಲ್ಲಿ ಹಣ ಒದಗಿಸಿದ ಸಂದರ್ಭಗಳಲ್ಲೂ ಅಧಿಕಾರಶಾಹಿಯ ನಿರ್ಲಕ್ಷ್ಯ ಅಥವಾ ಕೆಂಪುಪಟ್ಟಿಯಂಥ ಆಡಳಿತಾತ್ಮಕ ತೊಡಕುಗಳಿಂದಾಗಿ ಮಂಜೂರಾದ ಯೋಜನೆಗಳು ವರ್ಷಗಳಾದರೂ ಕಾರ್ಯಗತವಾಗದಂಥ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಇಂಥದೊಂದು ಸಮಿತಿಯ ನಿಯಂತ್ರಣ ಮತ್ತು ಮೇಲುಸ್ತುವಾರಿ ತ್ವರಿತ ಪ್ರಗತಿಗೆ ಸಹಕಾರಿಯಾದೀತು.
ಪರೀಕ್ಷೆ ಮತ್ತ ಮೌಲ್ಯಮಾಪನ ಸಮಯದಲ್ಲಿ ಶಿಕ್ಷಕರ ಮುಷ್ಕರ ಇತ್ತೀಚಿನ ದಿನಗಳಲ್ಲಿ ಒಂದು ವಾರ್ಷಿಕ ಆಚರಣೆಯಂತಾಗಿಬಿಟ್ಟಿದೆ. ಇದರಿಂದ ಮೌಲ್ಯ ಮಾಪನದ ಪಾವಿತ್ರ್ಯ, ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತುಂಟಾಗಿದೆ. ಶಿಕ್ಷಕರ ವೃತ್ತಿಋಜುತ್ವ ಮತ್ತು ಸರಕಾರದ ಕಾಳಜಿ-ಹೊಣೆಗಾರಿಕೆಗಳನ್ನು ಪ್ರಶ್ನಿಸುವಂತಾಗಿದೆ. ಈ ಸಮಸ್ಯೆಗೆ ಕಾಯಂ ಪರಿಹಾರ ಕಾಣುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚನೆಯ ಶಿಫಾರಸು ರಚನಾತ್ಮಕವಾದುದು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ