ಗುರಿತಪ್ಪಿರುವ ತಥಾಕಥಿತ ‘ಮಹಾಯಜ್ಞ’

Update: 2016-11-18 18:33 GMT

ಭಾಗ-2

ಸೀಮಿತ, ತಾತ್ಕಾಲಿಕ ಯಶಸ್ಸು

ಈ ಹೊತ್ತಿನ ನೋಟು ರದ್ದತಿಯಿಂದಲೂ ಒಂದು ಸೀಮಿತ, ತಾತ್ಕಾಲಿಕ ಯಶಸ್ಸು ದೊರೆಯಬಹುದು. ಆದರೆ ಕಾಳಧನಿಕರಿಗೆ ಅನ್ಯಮಾರ್ಗಗಳು ಇದ್ದೇ ಇವೆ. ಹೊಸ ರೂ. 500, 1000, 2000ದ ನೋಟುಗಳು ಚಲಾವಣೆಗೆ ಬಂದ ನಂತರ ಕಪ್ಪುಹಣ ಮತ್ತು ಖೋಟಾ ನೋಟು ಮರುಕಳಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಹಾಗೆ ನೋಡಿದರೆ ಹೊಸ ರೂ 2000ದ ನೋಟುಗಳು ಕಪ್ಪುಹಣ ಶೇಖರಣೆಗೆ ಇನ್ನಷ್ಟು ಅನುಕೂಲಕರವಾಗಲಿವೆ. ನವಂಬರ್ 8ರ ಮೋದಿ ಭಾಷಣಕ್ಕೂ ಮುನ್ನ ಈ ನೋಟಿನ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದರೊಂದಿಗೆ ಈಗಾಗಲೆ ನಕಲಿ ನೋಟುಗಳೂ ಕಾಣಿಸಿಕೊಳ್ಳತೊಡಗಿರುವುದು ಬಿಗು ಭದ್ರತೆಯ ಮಾತುಗಳೆಲ್ಲ ಬರಿದೆ ಜೊಳ್ಳು ಎಂಬುದನ್ನು ತೋರಿಸುತ್ತಿದೆ. ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿರುವಂತೆ ಹೊಸ ನೋಟು ಮುದ್ರಿಸುವ ನಿರ್ಧಾರ 6 ತಿಂಗಳ ಹಿಂದಿನದು. ನೋಟಿನ ಭದ್ರತಾ ಅಂಶಗಳನ್ನು ಬದಲಾಯಿಸುವುದಕ್ಕೆ 5ರಿಂದ 6 ವರ್ಷಗಳು ತಗಲುತ್ತವೆ ಎಂದಿರುವ ಇವರು ಭಾರತದಲ್ಲಿ 2005ರ ನಂತರ ನೋಟುಗಳ ಭದ್ರತಾ ಅಂಶಗಳನ್ನು ಮೇಲ್ದರ್ಜೆಗೆ ಏರಿಸಲಾಗಿಲ್ಲ. ಆದುದರಿಂದ ಮೈಸೂರಿನ ಮುದ್ರಣಾಲಯದಲ್ಲಿ ತಯಾರಾದ ಹೊಸ ನೋಟುಗಳಲ್ಲಿ ಬಣ್ಣ, ವಿನ್ಯಾಸಗಳನ್ನಷ್ಟೆ ಬದಲಾಯಿಸಲಾಗಿದೆ ಹೊರತು ಬೇರೇನೂ ಬದಲಾವಣೆಗಳಿಲ್ಲ. ಹೊಸ ನೋಟುಗಳ ಭದ್ರತಾ ಅಂಶಗಳು ಹಳೆಯವೇ ಆಗಿರುವುದರಿಂದ ಅವುಗಳನ್ನು ನಕಲು ಮಾಡುವುದು ಅಸಾಧ್ಯವೇನಲ್ಲ. ಪಾಕಿಸ್ತಾನದ ಸರಕಾರಿ ಮುದ್ರಣಾಲಯದಲ್ಲಿ ಖೋಟಾ ನೋಟುಗಳನ್ನು ಅಚ್ಚುಹಾಕಲಾಗುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದ್ದಾರೆ!

ಪ್ರತಿಪಕ್ಷಗಳೇ ಪ್ರಮುಖ ಗುರಿ?
ಇತ್ತೀಚಿನ ಕೆಲವೊಂದು ಬೆಳವಣಿಗೆಗಳನ್ನು ನೋಡಿದರೆ ಮೋದಿ ಸರಕಾರದ ದಿಢೀರ್ ನಿರ್ಧಾರದ ಬಗ್ಗೆ ಬಿಜೆಪಿ ಮತ್ತದರ ಮಿತ್ರರಿಗೆ ಪೂರ್ವಮಾಹಿತಿ ಇದ್ದಿರಲೆಬೇಕೆಂದು ತೋರುತ್ತದೆ. ಉದಾಹರಣೆಗೆ ಪ್ರಸಕ್ತ ವರ್ಷದ ಜುಲೈನಿಂದ ಸೆಪ್ಟಂಬರ್‌ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಬ್ಯಾಂಕು ಖಾತೆಗಳಿಗೆ ಜಮಾ ಆಗಿದೆ. ಇನ್ನೊಂದು ವರದಿಯ ಪ್ರಕಾರ ಜನಧನ ಖಾತೆಗಳು ಇದ್ದಕ್ಕಿದ್ದಂತೆ ತುಂಬಿ ತುಳುಕಲಾರಂಭಿಸಿವೆ. ನವಂಬರ್ 8ರಂದು ಸುಮಾರು ಒಂದು ಕೋಟಿ ರೂಪಾಯಿಗಳನ್ನು ಕೋಲ್ಕತ್ತಾದ ಬ್ಯಾಂಕೊಂದರ ಖಾತೆಯಲ್ಲಿ ಜಮೆಮಾಡುವ ಸಂದರ್ಭದಲ್ಲಿ ಬಿಜೆಪಿ ಪ್ಯಾನ್ ಸಂಖ್ಯೆಯನ್ನು ಉಲ್ಲೇಖಿಸಿರುವ ವಿಚಾರ ಬಯಲಾಗಿದೆ. ಈ ವಿದ್ಯಮಾನಗಳನ್ನು ಅಲಕ್ಷಿಸಲು ಸಾಧ್ಯವಿಲ್ಲ. ಸದ್ಯದಲ್ಲೆ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಮೋದಿ ಸರಕಾರದ ಆಪ್ತವಲಯದಲ್ಲಿರುವ ಉದ್ಯಮಪತಿಗಳೆಲ್ಲರಿಗೂ ಅನಧಿಕೃತ ನಗದಿನ ವಿಲೇವಾರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕಿರಬೇಕೆಂದು ಊಹಿಸುವುದು ತಪ್ಪಾಗಲಾರದು. ಆದರೆ ಅಮಿತ್ ಶಾ ತನ್ನ ಪಕ್ಷ ಮಹಾ ಸಾಚಾ, ತಾವೆಲ್ಲ ಸತ್ಯಸಂಧರು, ಉಳಿದ ಪಕ್ಷಗಳೆಲ್ಲವೂ ಕಪ್ಪುಹಣದಲ್ಲಿ ಮುಳುಗೇಳುತ್ತಿವೆ ಎಂದು ಬಿಂಬಿಸಲು ಹೊರಟಿದ್ದಾನೆ! ಜನರಿಗೆ ಮಂಕುಬೂದಿ ಎರಚಲೆತ್ನಿಸುತ್ತಿರುವ ಇವರೆಲ್ಲ ಮತದಾರರನ್ನು ಹುಂಬರೆಂದು ಭಾವಿಸಿರುವಂತಿದೆ. ನೋಟು ಅಮಾನ್ಯ ಮಾಡುವ ಕ್ರಮದಿಂದ ಅನ್ಯ ಪಕ್ಷಗಳಿಗೇಕೆ ನೋವಾಗುತ್ತಿದೆ; ಅವು ಭ್ರಷ್ಟ ಮಾರ್ಗಗಳಲ್ಲಿ ಹಣ ಸಂಗ್ರಹಿಸಿರದಿದ್ದರೆ ಇದನ್ನು ಮೆಚ್ಚುತ್ತಿದ್ದವು ಎನ್ನುವ ಶಾ ಮಾತುಗಳಲ್ಲಿ ಒಂದು ನಿಗೂಢ ಅರ್ಥ ಹುದುಗಿರುವಂತಿದೆ. ಈ ಸಂದರ್ಭದಲ್ಲಿ ಮೋದಿ ಸರಕಾರದ ಆರಂಭದ ದಿನಗಳಲ್ಲಿ ಸಂಘ ಪರಿವಾರದ ಹಲವು ನಾಯಕರು ಕಾಂಗ್ರೆಸ್ ಪಕ್ಷದ ನಿರ್ನಾಮಕ್ಕೆ ಕರೆಕೊಡುತ್ತಿದ್ದುದನ್ನು ಜ್ಞಾಪಿಸಿಕೊಳ್ಳಬೇಕಾಗಿದೆ. ಕೇವಲ ಕಾಂಗ್ರೆಸ್ ಪಕ್ಷದ ನಿರ್ನಾಮಕ್ಕೆ ಕರೆ ಏಕೆಂದರೆ ಕಾಂಗ್ರೆಸ್ ಪಕ್ಷಕ್ಕಿರುವ ರಾಷ್ಟ್ರೀಯ ಮಟ್ಟದ ಬೆಂಬಲ, ಪ್ರಭಾವ ಮಿಕ್ಕುಳಿದ ಪಕ್ಷಗಳಿಗೆ ಇಲ್ಲ. ಅಂದರೆ ಸಂಘಪರಿವಾರಿಗರ ಅಂತಿಮ ಉದ್ದೇಶ ಪ್ರಜಾಸತ್ತೆಯ ಪ್ರಮುಖ ಆಧಾರಗಳಲ್ಲೊಂದಾದ ಪ್ರತಿಪಕ್ಷಗಳನ್ನು ಇಲ್ಲವಾಗಿಸಿ ಏಕಪಕ್ಷೀಯ, ಫ್ಯಾಸಿಸ್ಟ್ ಆಡಳಿತವನ್ನು ಹೇರುವುದಾಗಿದೆ. ‘‘1978ರಲ್ಲಿ ಮೊರಾರ್ಜಿ ದೇಸಾಯಿ ಸರಕಾರ ನೋಟು ಅಮಾನ್ಯ ಮಾಡಿದಾಗ ಉಳಿದ ಪಕ್ಷಗಳೇ ಪ್ರಮುಖ ಗುರಿ ಆಗಿದ್ದವು’’ ಎಂದಿದ್ದ ಮಾಜಿ ವಿತ್ತ ಸಚಿವ ಸಿ.ಸುಬ್ರಮಣಿಯನ್‌ರ ಅರ್ಥಗರ್ಭಿತ ಮಾತು ಇಂದಿಗೂ ಅನ್ವಯಿಸುತ್ತದೆ. ಶುದ್ಧ ಬೂಟಾಟಿಕೆ ನೋಟು ರದ್ದತಿ ವಿಷಯದಲ್ಲಿ ಸಂಘಪರಿವಾರಿಗರ ಮಹಾ ಬೂಟಾಟಿಕೆಯನ್ನು ಬಯಲಿಗೆಳೆಯಲು ಈ ಕೆಳಗಿನ ಎರಡು ನಿದರ್ಶನಗಳು ಸಾಕು: ಜನವರಿ 2014ರಲ್ಲಿ ಯುಪಿಎ ಸರಕಾರ 2005ಕ್ಕೂ ಹಿಂದಿನ 500, 1000 ನೋಟುಗಳನ್ನು ಚಲಾವಣೆಯಿಂದ ಹಿಂದೆಗೆಯುವ ಪ್ರಸ್ತಾಪವನ್ನು ಮುಂದಿಟ್ಟಾಗ ಬಿಜೆಪಿ ಅದನ್ನೊಂದು ಗಿಮಿಕ್ಕು ಎಂದು ಬಣ್ಣಿಸಿತ್ತು! ಮನಮೋಹನ್ ಸಿಂಗ್ ಸರಕಾರದ ಪ್ರಸ್ತಾಪವನ್ನು ವಿರೋಧಿಸುತ್ತ ಸರಕಾರ ಈ ಮೂಲಕ ವಿದೇಶಗಳಲ್ಲಿರುವ ಕಾಳಧನದ ವಿಷಯವನ್ನು ಮರೆಮಾಚಲೆತ್ನಿಸುತ್ತಿದೆ ಎಂದು ಆರೋಪಿಸಿತ್ತು! ಅಷ್ಟೇ ಅಲ್ಲ, ಅದೊಂದು ಬಡವರ ವಿರೋಧಿ ಕ್ರಮ, ಅದರಿಂದಾಗಿ ಜನಸಾಮಾನ್ಯರು, ಬ್ಯಾಂಕ್ ಅಕೌಂಟ್ ಇಲ್ಲದವರು ಸಂಕಷ್ಟಕ್ಕೀಡಾಗಲಿದ್ದಾರೆ; ಅದರಿಂದ ಚಲಾವಣೆಯಲ್ಲಿರುವ ಕಪ್ಪುಹಣವನ್ನು ತೆಗೆದುಹಾಕಲು ಸಾಧ್ಯವಿಲ್ಲ; ಕಾಳಧನ ಹೊಂದಿರುವವರು ಅದನ್ನೆಲ್ಲಾ ಹೊಸ ನೋಟುಗಳಿಗೆ ಬದಲಾಯಿಸುತ್ತಾರೆ ಎಂದೂ ಹೇಳಿತ್ತು!

ಇದೇ ಬಿಜೆಪಿ 2011ರಲ್ಲಿ ಕಪ್ಪುಹಣದ ಸಮಸ್ಯೆಗೆ ಪರಿಹಾರ ಕಂಡುಹುಡುಕಲೆಂದು ಒಂದು ವಿಶೇಷ ಕಾರ್ಯಪಡೆಯನ್ನು ರಚಿಸಿತ್ತು. ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡಾ ಅದರ ಸದಸ್ಯನಾಗಿದ್ದರು. ಆ ಕಾರ್ಯಪಡೆ ನೀಡಿದ 23 ಸಲಹೆಗಳಲ್ಲಿ ರೂ 500, 1000 ನೋಟುಗಳ ರದ್ದತಿಯ ವಿಷಯವೆ ಇರಲಿಲ್ಲ! ಅಷ್ಟೇ ಅಲ್ಲ, ಸ್ವದೇಶಿ ಕಪ್ಪುಹಣಕ್ಕಿಂತ ವಿದೇಶಿ ಕಪ್ಪುಹಣವೇ ಹೆಚ್ಚು ಅಪಾಯಕಾರಿ ಆಗಿರುವುದರಿಂದ ವಿದೇಶಗಳಲ್ಲಿರುವ ಕಪ್ಪುಹಣದ ಮೇಲೆ ಕೇಂದ್ರೀಕರಿಸಬೇಕು ಎಂದು ಸಲಹೆ ಮಾಡಿತ್ತು! ಅದೇ ರೀತಿ 2014ರಲ್ಲಿ ಮೋದಿ ಸರಕಾರ ರಚಿಸಿದ ವಿಶೇಷ ತನಿಖಾ ತಂಡ ಕೂಡ ರೂ 500, 1000 ನೋಟುಗಳ ರದ್ದತಿಯ ವಿಷಯವನ್ನು ಎತ್ತಿಯೇ ಇಲ್ಲ!
ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಚುನಾವಣಾ ಕಾಲದ ಭರವಸೆಗಳನ್ನು ಈಡೇರಿಸಲು ವಿಫಲವಾದ ಮೋದಿ ಸರಕಾರದ ಮೇಲೆ ಒತ್ತಡಗಳು ಹೆಚ್ಚತೊಡಗಿವೆ. ಕಪ್ಪುಹಣವನ್ನು ಹೊರಹಾಕಲೆಂದು ಜಾರಿಗೊಳಿಸಿದ್ದ ಸ್ವಯಂ ಘೋಷಣೆ ಯೋಜನೆ ನಿರೀಕ್ಷಿತ ಫಲಿತಾಂಶ ಕೊಟ್ಟಿಲ್ಲ. ಖೋಟಾ ನೋಟುಗಳ ಚಲಾವಣೆ ಹೆಚ್ಚಿದ್ದು ಅದರಿಂದಾಗಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿವೆ ಎಂದು ತಿಳಿಯಲಾಗಿದೆ. (ಆದರೆ ಖೋಟಾ ನೋಟುಗಳ ಪ್ರಧಾನ ಉದ್ದೇಶ ದೇಶದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುವುದಾಗಿದೆ. ವ್ಯವಸ್ಥೆ ದಕ್ಷವಾಗಿ ಕಾರ್ಯಾಚರಿಸಿ ಅಂತಹ ನೋಟುಗಳನ್ನು ಪತ್ತೆಹಚ್ಚಿ ಕಾಲಕಾಲಕ್ಕೆ ಬದಲಾಯಿಸುತ್ತಿದ್ದಲ್ಲಿ ಖೋಟಾ ನೋಟುಗಳ ಸಮಸ್ಯೆಯನ್ನು ನಿಯಂತ್ರಿಸುವುದು ಕಷ್ಟವಿಲ್ಲವೆಂದು ತಜ್ಞರು ಹೇಳುತ್ತಾರೆ. ಆದರೆ ಮಾಹಿತಿ ಇದ್ದರೂ ಸಕಾಲದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ಮೋದಿ ಸರಕಾರ ವಿಫಲವಾಗಿದೆ). ದೇಶಾದ್ಯಂತ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರು ವುದರ ವಿರುದ್ಧ, ಮಾಧ್ಯಮಗಳನ್ನು ಹತ್ತಿಕ್ಕುವ ಯತ್ನದ ವಿರುದ್ಧ, ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿರುವುದರ ವಿರುದ್ಧ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆೆ. ಇಂತಹ ಪರಿಸ್ಥಿತಿಯಲ್ಲಿ ಬಂದಿರುವ ನೋಟು ಅಮಾನ್ಯ ಕಾರ್ಯಕ್ರಮದ ಹಿಂದೆ ಒಂದೇ ಏಟಿಗೆ ಮೂರು ಹಕ್ಕಿಗಳನ್ನು ಹೊಡೆದುರುಳಿಸುವ ಉದ್ದೇಶ ಇರುವಂತಿದೆ. ಒಂದು ಕಪ್ಪುಹಣ ನಿಯಂತ್ರಣ, ಎರಡನೆಯದು ಖೋಟಾ ನೋಟುಗಳ ಚಲಾವಣೆ ನಿಲ್ಲಿಸುವುದು, ಮೂರನೆಯದು ಪ್ರತಿಪಕ್ಷಗಳ ನಿರ್ನಾಮ. ಆದರೆ ಇದರ ದುಷ್ಪರಿಣಾಮಗಳನ್ನು ಜನಸಾಮಾನ್ಯರು ಅನುಭವಿಸು ವಂತಾಗಿದೆ. ಅತ್ತ ಕಾರ್ಪೊರೇಟು ಕುಳಗಳು, ಕಾಳದಂಧೆಕೋರರು, ಕಾಳಧನಿಕರೆಲ್ಲ ನಿರಾತಂಕವಾಗಿದ್ದಾರೆ. ನಮ್ಮ ಚುನಾವಣೆಗಳಿಗೆ ಖರ್ಚಾಗುತ್ತಿರುವ ಕೋಟಿಗಟ್ಟಲೆ ದುಡ್ಡಿನ ಹೆಚ್ಚಿನಂಶ ಬರುತ್ತಿರುವುದೇ ಇಂತಹ ಮೂಲಗಳಿಂದ ಎಂಬುದು ಇದುವರೆಗೆ ತೆರೆದ ರಹಸ್ಯವಾಗಿತ್ತು. ಆದರೆ ಇತ್ತೀಚಿನ ‘ಸಹಾರಾ ಪೇಪರ್ಸ್’ ಪ್ರಕರಣ ಆ ರಹಸ್ಯದ ಕವಚವನ್ನು ಪೂರ್ತಿ ಕಳಚಿಹಾಕಿದೆ. ಎರಡು ದೊಡ್ಡ ಕಾರ್ಪೊರೇಟು ಸಂಸ್ಥೆಗಳು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಹಲವಾರು ಪ್ರಮುಖ ರಾಜಕಾರಣಿಗಳಿಗೆ ಕೋಟಿಗಟ್ಟಲೆ ಸಂದಾಯ ಮಾಡಿರುವ ಕುರಿತು ದಾಖಲೆಗಳು ಲಭ್ಯವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತರೂ ವಕೀಲರೂ ಆಗಿರುವ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. ಇದು ಹಿಮಗಡ್ಡೆಯ ಬರೀ ತುದಿ ಅಷ್ಟೆ! ಆದುದರಿಂದ ಮಹಾಯಜ್ಞ, ಸರ್ಜಿಕಲ್ ದಾಳಿ ಇತ್ಯಾದಿಗಳು ನಡೆಯಬೇಕಿರುವುದು ಕೇವಲ ನಗದುರೂಪದ ಕಪ್ಪುಹಣದ ಮೇಲಲ್ಲ. ಅವು ಕಪ್ಪು ವಹಿವಾಟುಗಳನ್ನೂ ರಾಜಕಾರಣಿ ಮತ್ತು ಬಂಡವಾಳಶಾಹಿ ನಡುವಿನ ನಂಟುಗಳನ್ನೂ ಗುರಿಯಾಗಿಸಬೇಕಿದೆ. ಆಗಷ್ಟೆ ಕಪ್ಪುಹಣದ ನಿಯಂತ್ರಣದ ಜತೆಗೆ ಹಳಿ ತಪ್ಪಿರುವ ಪ್ರಜಾಸತ್ತೆಯನ್ನು ಪೂರ್ವಸ್ಥಿತಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿದಂತಾಗಬಹುದು. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?

(ಆಧಾರ: ವಿವಿಧ ಮೂಲಗಳಿಂದ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News