-- ಮಳೆಯ ಮುಂಚಿನ ಗುಡುಗು--
ಧಾರಾವಾಹಿ-45
‘‘ಮದುವೆ ಏನಾಯಿತು?’’
ಅಜ್ಜಿಯ ಅನಿರೀಕ್ಷಿತ ಪ್ರಶ್ನೆಯಿಂದ ಅವನಿಗೆ ನಾಲಗೆ ಹೊರಳಲಿಲ್ಲ. ಅವನು ಅಮ್ಮನ ಮುಖ ನೋಡಿದ. ಅವಳು ಹೇಳು ಎಂಬಂತೆ ಸನ್ನೆ ಮಾಡಿದಳು.
‘‘ನಾನು ಹೇಳಿದ್ದು ಕೇಳಿಸಿತಾ. ಮದುವೆ ಏನಾಯಿತು?’’
‘‘ಅಜ್ಜಿ... ಅದು... ನಾನು ಅಲ್ಲಿಗೆ ಹೋಗಿದ್ದೆ.’’
‘‘ಎಲ್ಲಿಗೆ?’’
‘‘ತಾಹಿರಾಳ ಮನೆಗೆ.’’
‘‘ಯಾಕೆ?’’
‘‘ಮದುವೆ ವಿಷಯ ಮಾತಾಡಲಿಕ್ಕೆ.’’
‘‘ಯಾರ ಹತ್ತಿರ ಮಾತಾಡ್ಲಿಕ್ಕೆ’’
‘‘ತಾಹಿರಾಳ ತಾಯಿಯ ಹತ್ತಿರ.’’
‘‘ಅವಳು ಇದ್ದಾಳಾ, ಅವಳು ಸತ್ತು ಹೋಗಿದ್ದಾಳಲ್ಲ.’’
ನಾಸರ್ ಮಾತನಾಡಲಿಲ್ಲ.
‘‘ಸತ್ತು ಹೋದವರ ಜೊತೆ ಮಾತನಾಡಲಿಕ್ಕೆ ಆಗ್ತದಾ?’’
‘‘ಯಾಕಜ್ಜಿ ಹಾಗೆಲ್ಲ ಮಾತಾಡ್ತೀರಿ.’’ ಐಸು ಅಜ್ಜಿಯ ೆನ್ನ ಮೇಲೆ ಕೈಯಿಟ್ಟು ಕೇಳಿದಳು.
‘‘ಹೇಗೆ... ಹೇಗೆ ಮಾತನಾಡಿದೆ ನಾನು. ಅವಳು ಜೀವಂತ ಇದ್ದಿದ್ದರೆ ಇಷ್ಟು ವರ್ಷಗಳಲ್ಲಿ ಒಮ್ಮೆಯಾದರೂ ಈ ತಾಯಿಯನ್ನು ನೋಡಲು ಬರುತ್ತಿರಲಿಲ್ಲವಾ? ನಿನ್ನ ಅಜ್ಜ ತೀರಿಕೊಂಡಾಗಲಾದರೂ ಬರುತ್ತಿರಲಿಲ್ಲವಾ? ನಮ್ಮ ಪಾಲಿಗೆ ಅವಳೆಂದೋ ಸತ್ತು ಹೋದಳು.’’
‘‘ಅಜ್ಜಿ, ಬರುವ ತಿಂಗಳಲ್ಲ ಮುಂದಿನ ತಿಂಗಳು ಮದುವೆ ಇಟ್ಟುಕೊಳ್ಳಬೇಕಂತೆ. ತಾಹಿರಾ, ಅವಳ ತಂದೆ- ತಾಯಿ ಮದುವೆಯ ಮೊದಲ ದಿನ ಇಲ್ಲಿಗೆ ಬರ್ತಾರಂತೆ. ಮದುವೆ ಕಳೆದು ಮರುದಿನ ಹೋಗ್ತಾರಂತೆ.’’ ಐಸು ಹೇಳಿದಳು.
ಅವಳೇಕೆ ಬರುವುದು ಇಲ್ಲಿಗೆ. ಅವಳು ಬರುವುದು ೇಡ. ಅವಳಿಲ್ಲದೆ ಮದುವೆಯಾಗುವುದಿಲ್ಲವಾ. ತಂದೆ-ತಾಯಿ ಇಲ್ಲದೆ ಅವಳು ಮದುವೆಯಾಗಲಿಲ್ಲವಾ. ನೀನು ಹೋಗಿ ತಾಹಿರಾಳನ್ನು ಕರೆದುಕೊಂಡು ಬಾ. ನಾನು ನಿನಗೆ ಮದುವೆ ಮಾಡಿಸುತ್ತೇನೆ. ತಂದೆ-ತಾಯಿ ಇಲ್ಲದೆ ನಾನೂ ಮದುವೆ ಮಾಡಿ ತೋರಿಸುತ್ತೇನೆ. ನೀನು ಮೊದಲು ತಾಹಿರಾಳನ್ನು ಬರಲಿಕ್ಕೆ ಹೇಳು.’’ ಅಜ್ಜಿಯ ಾತಿನಲ್ಲಿ ದ್ವೇಷ ಹೆಡೆಯಾಡುತ್ತಿತ್ತು.
‘‘ಅವಳು ಹಾಗೆ ಮಾಡಿದಳೂಂತ ನಾವು ಹಾಗೆ ಮಾಡುವುದು ಬೇಡ ಅಜ್ಜಿ. ಅವಳಾಗಿ ಬರ್ತೇನೇಂತ ಹೇಳಿದ್ದಲ್ಲವಾ, ನಾವು ಕರೆದದ್ದಲ್ಲವಲ್ಲಾ. ಎಲ್ಲ ಒಟ್ಟು ಸೇರಿ ಮದುವೆಯನ್ನು ಚಂದದಲ್ಲಿ ಮಾಡೋಣ ಅಜ್ಜಿ.’’
ಅಜ್ಜಿ ಒಮ್ಮೆಲೆ ತಿರುಗಿ ಐಸುಳ ಮುಖವನ್ನೇ ನೋಡಿ ದರು. ಅವರು ಕೋಪದಿಂದ ಬುಸುಗುಟ್ಟುತ್ತಿದ್ದರು.
‘‘ನೀನೂ ಅವಳೊಟ್ಟಿಗೆ ಸೇರಿದಿಯಾ. ಎಲ್ಲ ಮರೆತು ಹೋಯಿತಾ ನಿನಗೆ. ಯಾರು ಮರೆತರೂ ನಾನು ಮರೆಯೋದಿಲ್ಲ. ಮರೆಯಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ಸಾಯುವವರೆಗೂ ನಾನವಳ ಮುಖ ನೋಡುವುದಿಲ್ಲ’’ ಅಜ್ಜಿಯ ಇಡೀ ದೇಹ ನಡುಗುತ್ತಿತ್ತು.
‘‘ಆಯಿತು ಅಜ್ಜಿ. ನೀವು ಕೋಪ ಮಾಡಿಕೊಳ್ಳಬೇಡಿ. ನಿಮಗೆ ಇಷ್ಟ ಇಲ್ಲದ್ದನ್ನು ನಾವು ಯಾವತ್ತೂ ಮಾಡುವುದಿಲ್ಲ. ಅವರನ್ನು ಬರುವುದು ಬೇಡಾಂತ ಹೇಳಿದರೆ ಆಯಿತು ಅಷ್ಟೇ ಅಲ್ಲವಾ. ನೀವು ಹಳೆಯದ್ದನ್ನೆಲ್ಲ ನೆನಪಿಸಿಕೊಳ್ಳಬೇಡಿ. ಅಜ್ಜಿ ನೀವು ಸ್ವಲ್ಪಹೊತ್ತು ಮಲಗಿ.’’ ನಾಸರ್ ಅಜ್ಜಿಯನ್ನು ಸಮಾಧಾನ ಪಡಿಸುತ್ತಾ ಅವರನ್ನು ಮಲಗಿಸಲು ಯತ್ನಿಸಿದ.
‘‘ನನ್ನನ್ನು ಮುಟ್ಟಬೇಡಿ... ಯಾರು ಮುಟ್ಟಬಾರದು... ನೀವು ಹೊರಗೆ ಹೋಗಿ... ನನಗೆ ಒಂಟಿಯಾಗಿರಬೇಕು. ಮೊದಲು ಇಲ್ಲಿಂದ ಹೋಗಿ...’’ ಅಜ್ಜಿ ಕೂಗಾಡತೊಡಗಿದರು.
ತಾಯಿ - ಮಗ ಎದ್ದು ನಿಂತರು. ಅಜ್ಜಿ ಇಷ್ಟೊಂದು ಕೋಪದಿಂದ ಮಾತನಾಡಿದ್ದನ್ನು ಅವರು ಹಿಂದೆಂದೂ ಕಂಡಿರಲಿಲ್ಲ. ಅಜ್ಜಿ ಎರಡು ಕೈಗಳನ್ನೂ ಹಾಸಿಗೆ ಕೊಟ್ಟು ಗಟ್ಟಿಯಾಗಿ ಹಿಡಿದುಕೊಂಡು ಬಗ್ಗಿ ಕುಳಿತು ಏದುಸಿರು ಬಿಡುತ್ತಿದ್ದರು.
ಐಸು- ನಾಸರ್ ಹಾಗೆಯೇ ಮೌನವಾಗಿ ಸ್ವಲ್ಪಹೊತ್ತು ನಿಂತರು. ಅವರಿಗೆ ಅಜ್ಜಿ ಒಬ್ಬರನ್ನು ಬಿಟ್ಟು ಹೋಗಲು ಧೈರ್ಯ ಸಾಲಲಿಲ್ಲ. ಹೋಗದಿದ್ದರೆ ಅಜ್ಜಿ ಮತ್ತೂ ಕೋಪಗೊಳ್ಳಬಹುದೆಂದು ಭಯವಾಯಿತು. ಅವರು ತಿರುಗಿ ತಿರುಗಿ ನೋಡುತ್ತಾ ಹೆಜೆ್ಜ ಬದಲಿಸುತ್ತಾ ಬಾಗಿಲ ಬಳಿ ಬಂದಿದ್ದರು.
‘‘ಇಲ್ಲಿ ಬಾ...’’ ಅಜ್ಜಿ ಕರೆದರು.
ಯಾರನ್ನು ಕರೆದಿರಬಹುದೂಂತ ಇಬ್ಬರೂ ಅಲ್ಲೇ ನಿಂತು ಮುಖ ಮುಖ ನೋಡಿಕೊಂಡರು.
‘‘ಕರೆದದ್ದು ಕೇಳಿಸಲಿಲ್ಲವಾ... ಇಲ್ಲಿ ಬಾ...’’
ಇಬ್ಬರೂ ಹತ್ತಿರ ಬಂದರು.
‘‘ಕುಳಿತುಕೋ.’’
ನಾಸರ್ ಅವರ ಪಕ್ಕ ಕುಳಿತ. ಇನ್ನೊಂದು ಪಕ್ಕ ಐಸು ಕುಳಿತಳು.
ಅಜ್ಜಿ ಮಾತನಾಡಲಿಲ್ಲ.
ಅವರು ಮಂಚಕ್ಕೆ ಕೈಕೊಟ್ಟು ಹಾಸಿಗೆಯನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಬಗ್ಗಿ ಕುಳಿತಿದ್ದರು.
ಅಜ್ಜಿಯ ಒಳಗೆ ಏನೋ ಆಗುತ್ತಿದೆ. ಅವರಿಗೆ ಏನೋ ಹೇಳಲಿಕ್ಕಿದೆ ಎಂದರಿತ ಇಬ್ಬರೂ ಅವರ ಮಾತಿಗಾಗಿ ಕಾಯುತ್ತಾ ಕುಳಿತರು. ಸ್ವಲ್ಪ ಸಮಯ ಮೌನವಾಗಿಯೇ ಕಳೆಯಿತು. ‘‘ಅವಳು ಹೇಗಿದ್ದಾಳೆ?’’ ಅಜ್ಜಿ ಬಗ್ಗಿ ಕುಳಿತು ತಲೆ ಎತ್ತದೆ ಕೇಳಿದರು.
‘‘ಯಾರು?’’ ನಾಸರ್ ಅರ್ಥವಾಗದೆ ಅಮ್ಮನ ವುುಖ ನೋಡಿದ.
‘‘ಅವಳು...’’
‘‘ಅವಳು ಎಂದರೆ ಯಾರಜ್ಜೀ?’’
‘‘ಅವಳು.. ನನ್ನ ಮಗಳು ರೊಹರ’’
ನಾಸರ್‌ನ ಕರುಳು ಹಿಂಡಿದಂತಾಯಿತು. ಬಾಯಿಯಿಂದ ಮಾತು ಹೊರಡಲಿಲ್ಲ. ಅವನ ಕಣ್ಣುಗಳು ತುಂಬಿ ಬಂತು. ಅವನು ಅಜ್ಜಿಯನ್ನು ಮಗುವಿನಂತೆ ತಬ್ಬಿಕೊಂಡ.
ಅಜ್ಜಿಯ ದೇಹ ಮರದ ಕೊರಡಿನಂತೆ ಗಟ್ಟಿಯಾಗಿದ್ದವು. ಕೈಗಳು ಹಾಸಿಗೆಯನ್ನು ಗಟ್ಟಿಯಾಗಿ ಬಿಗಿದು ಹಿಡಿದುಕೊಂಡಿದ್ದವು. ಐಸು ಸೆರಗಿನಿಂದ ಕಣ್ಣೊರೆಸಿಕೊಂಡಳು. ನಾಸರ್ ಅವರ ಕೆನ್ನೆಗೆ ಕೆನ್ನೆ ತಾಗಿಸಿ ಕುಳಿತ. ಅವನ ಕಣ್ಣೀರು ಅವರ ಮುಖವನ್ನು ತೋಯಿಸಿತ್ತು. ಹಾಗೆಯೇ ಸ್ವಲ್ಪಹೊತ್ತು ಮೌನವಾಗಿಯೇ ಕಳೆಯಿತು.
‘‘ಮದುವೆ ಗಡದ್ದಾಗಿ ಆಗಬೇಕು. ಎಲ್ಲರನ್ನೂ ಕರೆಯಬೇಕು’’ ಅಜ್ಜಿಯ ಬಾಯಿ ಮತ್ತೆ ಮಾತಾಡಿತು.
ನಾಸರ್ ಕಣ್ಣೊರೆಸಿಕೊಂಡ. ತಾಯಿ, ವುಗ ಇಬ್ಬರ ಮುಖಗಳೂ ಅರಳಿದವು.
‘‘ನಾನು ಹೇಳಿದ್ದು ಕೇಳಿ್ತಾ?’’ ಅಜ್ಜಿ ಮತ್ತೆ ಮಾತನಾಡಿದರು.
‘‘ಕೇಳಿಸ್ತು ಅಜ್ಜಿ.’’
‘‘ನನ್ನ ಅಳಿಯಂದಿರನ್ನೆಲ್ಲ ಒಮ್ಮೆ ಇಲ್ಲಿಗೆ ಕರೆಸಿ ವಿಷಯ ತಿಳಿಸಬೇಕು’’
‘‘ಆಯಿತು ಅಜ್ಜಿ.’’
ಮನೆಗೆ ಸುಣ್ಣ ಬಣ್ಣ ಬಳಿಯಬೇಕು. ಅಂಗಳ ತುಂಬಾ ಚಪ್ಪರ ಹಾಕಬೇಕು.
‘‘ಆಯ್ತಜ್ಜಿ’’
ಮತ್ತೆ... ಮದುವೆ ಕಾಗದ ಮಾಡಿಸಬೇಕು. ನನ್ನ ಮಕ್ಕಳು, ಮೊಮ್ಮಕ್ಕಳನ್ನೆಲ್ಲ ಒಂದು ವಾರ ಮೊದಲೇ ಬರಲು ಹೇಳಬೇಕು.’’
‘‘ಆಯ್ತಜ್ಜಿ.’’
ಮೆಹೆಂದಿ ಕಾರ್ಯಕ್ರಮ ಆಗಬೇಕು. ಮೊದಲನೆ ದಿನ ಮೌಲೂದು ಓದಿಸಬೇಕು. ಎರಡು ದಿನವೂ ಒಳ್ಳೆಯ ಊಟ ಹಾಕಿಸಬೇಕು.’’
‘‘ಆಯ್ತಜ್ಜಿ. ಅಜ್ಜಿ ಹೇಳಿದಂತೆ ಎಲ್ಲ ಮಾಡಿಸ್ತೇನೆ. ನನ್ನ ಅಜ್ಜಿಯ ಮನಸ್ಸಿಗೆ ಒಂಚೂರೂ ನೋವಾಗದಂತೆ ಈ ಮನೆಯ ಘನತೆಗೆ ಸ್ವಲ್ಪವೂ ಕುಂದು ಬಾರದಂತೆ ಮಾಡ್ತೇನೆ ಅಜ್ಜಿ. ನೀವು ಸಂತೋಷದಿಂದಿರಬೇಕು. ಮನೆ ತುಂಬಾ ಓಡಾಡ್ತಿರಬೇಕು.’’
ಅವನು ಮತ್ತೆ ಅಜ್ಜಿಯ ಕೆನ್ನೆಯನ್ನು ಚುಂಬಿಸಿದ. ಅವರ ದೇಹ ಈಗ ಸಡಿಲಗೊಂಡಿತ್ತು. ಮುಖ ಶಾಂತವಾಗಿತ್ತು.
ಮದುವೆಗೆ 15 ದಿನ ಮೊದಲೇ ರಜೆ ಹಾಕಿ ನಾಸರ್ ಮನೆಗೆ ಬಂದ. ಎಲ್ಲರಿಗೂ ಬಟ್ಟೆ ಬರೆ ತೆಗೆದ. ಮನೆಗೆ ಸುಣ್ಣ-ಬಣ್ಣ ಬಳಿಸಿದ. ಊರೆಲ್ಲ ಮದುವೆ ಆಮಂತ್ರಣ ಹಂಚಿದ. ಅಜ್ಜಿಯ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು, ನೆಂಟರು, ಬಂುಗಳ ಬಳಿಗೆಲ್ಲ ಹೋಗಿ ಆಮಂತ್ರಿಸಿದ.
ಎಲ್ಲರಿಗೂ ಖುಷಿ. ಎಲ್ಲರಿಗೂ ಸಂಭ್ರಮ. ಎಲ್ಲಕ್ಕಿಂತ ಹೆಚ್ಚಾಗಿ ತಾಹಿರಾಳ ತಾಯಿಯನ್ನು ನೋಡುವ ಕುತೂಹಲ.
ಎರಡು ದಿನ ಮೊದಲೇ ಅಂಗಳ ತುಂಬಾ ಶಾಮಿಯಾನ ಹಾಕಿಸಿದ. ಎಲ್ಲದಕ್ಕೂ ಆಳು- ಕಾಳುಗಳನ್ನು ನೇಮಿಸಿದ.
ಅಜ್ಜಿಯಂತೂ ಈಗ ಸಂಪೂರ್ಣ ಚೇತರಿಸಿದ್ದರು. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಬಂಧುಗಳು ತುಂಬಿ ಬಿಟ್ಟಿದ್ದರು. ಅಜ್ಜಿ ಕೋಲೂರುತ್ತಾ ಮನೆ ತುಂಬಾ ನಡೆದಾಡುತ್ತಾ, ಎಲ್ಲರೊಂದಿೂ ಮಾತನಾಡುತ್ತಾ ಖುಷಿಯಿಂದಿದ್ದರು.
ಅಂದು ರಾತ್ರಿ ಅಜ್ಜಿ ಐಸುಳನ್ನು ತನ್ನ ಕೋಣೆಗೆ ಕರೆದರು. ತನ್ನ ಪಕ್ಕ ಕುಳ್ಳಿರಿಸಿಕೊಂಡರು.
‘‘ನಾಳೆ ರಾತ್ರಿ ಮೆಹೆಂದಿ ಅಲ್ಲವಾ?’’ ಅಜ್ಜಿ ಕೇಳಿದರು.
‘‘ಹೌದಜ್ಜಿ’’
‘‘ಸಂಜೆ ಮೌಲೂದು ಅಲ್ಲವಾ?’’
‘‘ಹೌದಜ್ಜಿ’’
‘‘ಮದುಮಗಳು ಯಾವಾಗ ಬರ್ತಾಳೆ?’’
‘‘ಈಗ ರಾತ್ರಿ ಹೊರಡ್ತಾರಂತೆ. ಬೆಳಗ್ಗೆ ಬಂದು ತಲುಪಬಹುದು.’’
‘‘ನೀನು ಬೆಳಗ್ಗೆದ್ದು ಸ್ನಾನ ಮಾಡಿ ಹೊಸ ಸೀರೆ ಉಟ್ಟುಕೊಳ್ಳಬೇಕು. ನಾಳೆಯಿಂದ ಅಡುಗೆ ಮನೆಗೆ ಹೋಗಬಾರದು.’’
‘‘ಮತ್ತೆ ಅಡುಗೆ ಯಾರು ಮಾಡುವುದು ಅಜ್ಜಿ?’’
ಅದಕ್ಕೆಲ್ಲ ನಾನು ವ್ಯವಸ್ಥೆ ಮಾಡಿದ್ದೇನೆ. ಇಷ್ಟೊಂದು ಜನ ಇದ್ದಾರೆ. ಅವರು ಮಾಡ್ತಾರೆ. ಅವರೇನು ಹೊರಗಿನವರಲ್ಲ. ಮನೆಯವರೇ ಅಲ್ಲವಾ.. ಅವರು ಮಾಡ್ತಾರೆ. ನಾನು ಹೇಳಿದ್ದೇನೆ. ಕೆಲಸದವರೂ ಇದ್ದಾರೆ.
ಐಸು ಮಾತನಾಡಲಿಲ್ಲ. ನೀನು ಮದುಮಗನ ತಾಯಿ. ಈ ಮನೆಯ ಕೆಲಸದವಳಲ್ಲ. ಕೆಲಸದವರ ಹಾಗೆ ನೀನು ಇರಬಾರದು. ಈ ಮನೆಯ ಯಜಮಾನಿ ನೀನು. ನಿನ್ನ ಮಗನಿಗೆ ಮದುವೇಂತ ನೆನಪಿರಬೇಕು. ಬಂದವರನ್ನೆಲ್ಲ ಸ್ವಾಗತಿಸಬೇಕು. ಅವರಲ್ಲಿ ಮಾತನಾಡಬೇಕು. ಕುಡಿಯಲು ಕೊಡಬೇಕು. ಊಟ ಮಾಡಿಸಬೇಕು. ಯಾವುದಕ್ಕೂ ಕೊರತೆ ಆಗದಂತೆ, ಯಾರಿಗೂ ಬೇಜಾರಾಗದಂತೆ ನೋಡಿಕೊಳ್ಳಬೇಕು.
‘‘ಆಯಿತಜ್ಜಿ’’
‘‘ನೋಡು, ಆ ಕಲಂಬಿಯ ಬೀಗ ತೆಗಿ’’ ಅಜ್ಜಿ ಹಾಸಿಗೆಯಡಿಯಿಂದ ಬೀಗದ ಗೊಂಚಲು ತೆಗೆದುಕೊಟ್ಟರು.
ಐಸು ಬೀಗ ತೆಗೆದು, ಅದರ ಬಾಗಿಲು ತೆರೆದಳು.
‘‘ಅದರಲ್ಲಿ ಒಡವೆಗಳ ಒಂದು ಪೆಟ್ಟಿಗೆ ಇದೆ ಇಲ್ಲಿ ತಾ.’’
ಐಸು ಒಡವೆಗಳ ಪೆಟ್ಟಿಗೆ ಎತ್ತಿ ತಂದು ಅಜ್ಜಿಯ ಮುಂದಿಟ್ಟಳು. ಅಜ್ಜಿ ಅದರ ಮುಚ್ಚಳ ತೆರೆದರು. ಕಿವಿಯ ಆಭರಣ, ಸರಗಳು, ಕೈ ಬಳೆಗಳು, ಕಾಲ್ಬಳೆ, ಸೊಂಟದ ಪಟ್ಟಿ, ಉಂಗುರ - ಹೀಗೆ ಒಂದೊಂದೇ ಆಭರಣವನ್ನು ತೆಗೆದು ಐಸು ಕೈಗೆ ಕೊಟ್ಟರು.
ಇದನ್ನೆಲ್ಲ ನೀನು ನಾಳೆ ಬೆಳಗ್ಗೆಯಿಂದ ಧರಿಸಿಕೊಳ್ಳಬೇಕು.
‘‘ಇದೆಲ್ಲ ಯಾಕಜ್ಜಿ ನನಗೇ?’’
‘‘ಯಾಕೆಂದರೆ ನಿನ್ನ ಮಗನಿಗೆ ಮದುವೆ. ನೀನು ಮದುಮಗನ ತಾಯಿ. ಈ ಮನೆಯ ಯಜಮಾನಿ.
ಆಯಿತಜ್ಜಿ... ಈಗ ಇದು ಕಲೆಂಬಿಯಲ್ಲಿರಲಿ. ನಾನು ನಾಳೆ ಬೆಳಗ್ಗೆ ತೆಗೆದುಕೊಳ್ಳುತ್ತೇನೆ.
ನೀನಾಗಿ ಬಂದು ಕೇಳಿ ತೆಗೆದುಕೊಳ್ಳಬೇಕು. ನನಗೆ ಮರೆತು ಹೋಗ್ತದೆ.
‘‘ಆಯ್ತಜ್ಜಿ’’
ನೋಡು ಇದು ಮಿಸ್ರಿ ಮಾಲೆ. ಇದರಲ್ಲಿ 24 ಚಿನ್ನದ ನಾಣ್ಯದ ಮಿಸ್ರಿಗಳಿವೆ. ಇದು ನನಗೆ ನಿನ್ನಜ್ಜ ಮದುವೆಯಾದ ಪ್ರಾರಂಭದಲ್ಲಿ ತಂದು ಕೊಟ್ಟದ್ದು. ಈ ಮಾಲೆಯನ್ನು ನಾನಲ್ಲದೆ ಈ ತನಕ ಬೇರಾರೂ ಧರಿಸಿಲ್ಲ. ಇದನ್ನು ಈ ಮನೆಗೆ ಸೊಸೆಯಾಗಿ ಬರುವ ನನ್ನ ಮೊಮ್ಮಗಳಿಗೆ ನಾನು ಉಡುಗೊರೆಯಾಗಿ ಕೊಡಬೇಕು. ನೀನು ನೆನಪು ಮಾಡಬೇಕು. ನಗೆ ಮತ್ತೆ ಮರೆತು ಹೋಗುತ್ತೆ.
(ಗುರುವಾರದ ಸಂಚಿಕೆಗೆ)