--ಭ್ರಮೆಗಳೆಲ್ಲ ಕಳಚಿದ ಹೊತ್ತು--

Update: 2016-11-30 18:45 GMT

ಧಾರಾವಾಹಿ-46

ಅಜ್ಜಿಯ ಸಂಭ್ರಮ ನೋಡಿ ಐಸುಳ ಬಾಯಿ ಕಟ್ಟಿತ್ತು. ಅವಳು ತಲೆಯಾಡಿಸಿದಳು.
ನೋಡು. ಇದು ನವರತ್ನಗಳ ಉಂಗುರ. ಇಂತಹ ಉಂಗುರ ಈಗ ಎಲ್ಲಿ ಹುಡುಕಿದರೂ, ಎಷ್ಟು ದುಡ್ಡು ಕೊಟ್ಟರೂ ಸಿಗಲಿಕ್ಕಿಲ್ಲ. ಇದು ನನ್ನ ಮದುವೆ ಸಂದರ್ಭದಲ್ಲಿ ತ್ಯಾಂಪಣ್ಣ ಉಡುಗೊರೆಯಾಗಿ ಕೊಟ್ಟದ್ದು. ಇದನ್ನು ನಾನು ನಿನ್ನ ಮಗನಿಗೆ ಉಡುಗೊರೆಯಾಗಿ ಕೊಡಬೇಕು.
ಐಸು ಅಜ್ಜಿಯನ್ನೇ ನೋಡುತ್ತಾ ಸುಮ್ಮನೆ ಕುಳಿತು ಬಿಟ್ಟಿದ್ದಳು.
ಇನ್ನೇನಾದರೂ ಉಳಿದಿದೆಯೇ? ನನಗೆ ಮರೆತು ಹೋಗುತ್ತೆ. ನೀನು ನೆನಪು ಮಾಡಬೇಕು. ಮದುವೆ ಸಂದರ್ಭದಲ್ಲಿ ಅಗತ್ಯದ್ದೇ ಮರೆತು ಹೋಗಿ ಬಿಡುತ್ತೆ’’
‘‘................’’
ನೀನೇನು ಕೊಡುತ್ತಿ ನಿನ್ನ ಸೊಸೆಗೆ ಉಡುಗೊರೆ?’’
ಮೊನ್ನೆ ನಿಮಗೆ ತೋರಿಸಿದ್ದಲ್ಲವಾ ಅಜ್ಜಿ. ನಾನು ಕೊಡಲಿಕ್ಕೇಂತ ನಾಸರ್ ಒಂದು ಚಿನ್ನದ ಸೊಂಟದ ಪಟ್ಟಿ ತಂದಿದ್ದಾನೆ. ವಧು ದಕ್ಷಿಣೆ ಕೊಡ್ಲಿಕ್ಕೆ ಹತ್ತು ಪವನಿನ ಒಂದು ಸರ ತಂದಿದ್ದಾನೆ. ಮೊನ್ನೆ ನೀವು ಅದನ್ನೆಲ್ಲ ನೋಡಿದ್ದಲ್ಲವಾ.
‘‘ನಾನು ನೋಡಿದ್ದೇನಾ?’’
ಹೌದು ನಿಮಗೆ ಪ್ರತಿಯೊಂದನ್ನೂ ತೋರಿಸಿದ್ದಾನೆ. ಅವನ ಅಂಗಿ, ಪ್ಯಾಂಟು, ಸೂಟು, ಬೂಟು, ಕೋಟು, ನನ್ನ ಸೀರೆ, ನಿಮ್ಮ ಸೀರೆ, ನಿಮ್ಮ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಎಲ್ಲರಿಗೂ ತೆಗೆದ ಬಟ್ಟೆಗಳನ್ನು ನಿಮಗೆ ತೋರಿಸಿದ್ದಾನೆ.
‘‘ಯಾವಾಗ! ನಾನೂ ನೋಡ್ಲೇ ಇಲ್ಲ!’’
ಅವನು ತಂದ ದಿನವೇ ನಿಮಗೆ ತೋರಿಸಿದ್ದಾನೆ. ನೀವು ನೋಡಿದ್ದೀರಿ. ನಿಮಗೆ ನೆನಪಿಲ್ಲ.’’
‘‘ಹೌದಾ...? ಅಜ್ಜಿ ತಲೆ ತುರಿಸಿದರು.
ಐಸು ಆಭರಣಗಳನ್ನೆಲ್ಲ ಪೆಟ್ಟಿಗೆಗೆ ತುಂಬಿಸಿ ಮುಚ್ಚಳ ಹಾಕಿ ಕಲಂಬಿಯಲ್ಲಿಟ್ಟಳು. ಬೀಗ ಹಾಕಿ ಬೀಗದ ಗೊಂಚಲನ್ನು ಅಜ್ಜಿಯ ಕೈಗೆ ಕೊಟ್ಟಳು.
‘‘ಅಜ್ಜಿ, ನೀವು ಊಟ ಮಾಡಿ. ಮದ್ದು ಕುಡಿಯಲಿ ಕ್ಕುಂಟು. ನಾನು ಬಡಿಸ್ತೇನೆ ಬನ್ನಿ’’ ಎಂದು ಐಸು ಅಡಿಗೆ ಕೋಣೆಗೆ ನಡೆದಳು. ಅಷ್ಟರಲ್ಲಿ ಅಜ್ಜಿಯ ಮಕ್ಕಳು, ಮೊಮ್ಮಕ್ಕಳೆಲ್ಲ ಅಜ್ಜಿಯ ಸುತ್ತ ನೆರೆದು ಬಿಟ್ಟಿದ್ದರು.
***
ತಾಹಿರಾ ಹಿಂದಿನ ಸೀಟಿನಲ್ಲಿ ತಾಯಿಯ ಭುಜಕ್ಕೆ ಒರಗಿ ಕುಳಿತಿದ್ದಳು. ಅವಳ ಕೈಬೆರಳುಗಳು ತಾಯಿಯ ಬೆರಳುಗಳನ್ನು ಹೊಸೆದು ಕೊಂಡಿದ್ದವು. ತಾಯಿ ಕಣ್ಣು ಮುಚ್ಚಿ ಕುಳಿತಿದ್ದರು. ಮಾತನಾಡುತ್ತಿರಲಿಲ್ಲ. ಬಹುಶಃ ನಿದ್ದೆ ಬಂದಿರಬೇಕು. ತಂದೆ ಮುಂದಿನ ಸೀಟಿನಲ್ಲಿ ಕುಳಿತು ತೂಕಡಿಸುತ್ತಿದ್ದರು. ಕಾರು ಓಡುತ್ತಿತ್ತು. ತಾಹಿರಾಳಿಗೆ ನಿದ್ದೆ ಬರಲಿಲ್ಲ. ಅವಳಿಗೆ ಇಂದು ಅತ್ಯಂತ ಸಂತೋಷದ ವಿಷಯ ಎಂದರೆ ಅವಳ ತಾಯಿ ಎಷ್ಟೋ ವರ್ಷಗಳ ನಂತರ ಮರಳಿ ಮನೆಗೆ ಹೋಗುತ್ತಿರುವುದು.
ಅಜ್ಜಿಯನ್ನು ಕಂಡಾಗ ತಾಯಿಯ ಪ್ರತಿಕ್ರಿಯೆ ಹೇಗಿರಬಹುದು. ಇಬ್ಬರೂ ಬಾಚಿ ತಬ್ಬಿಕೊಂಡು ಅಳಬಹುದೇ? ಅಜ್ಜಿಯ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಅಮ್ಮನನ್ನು ಹೇಗೆ ಸ್ವಾಗತಿಸಬಹುದು. ಅಮ್ಮ ಅವರ ಜೊತೆ ಹೇಗೆ ನಡೆದುಕೊಳ್ಳಬಹುದು. ಅಪ್ಪಅವರೆಲ್ಲರ ಜೊತೆ ಹೊಂದಿಕೊಳ್ಳಬಹುದೇ... ಎಂದೆಲ್ಲ ಯೋಚಿಸುತ್ತಿದ್ದವಳು ನಿದ್ದೆಗೆ ಜಾರಿ ಬಿಟ್ಟಿದ್ದಳು.
ಅವಳ ತಾಯಿ ಕಣ್ಣು ಮುಚ್ಚಿ ಕುಳಿತಿದ್ದರೂ ನಿದ್ದೆ ಬಂದಿರಲಿಲ್ಲ. ಅವರಿಗೆ ತನ್ನ ಬಾಲ್ಯ, ತಾನು ಬೆಳೆದ ಮನೆ, ತನ್ನನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ತಂದೆ, ಎದೆ ಹಾಲೂಡಿಸಿ ಸಾಕಿ, ಸಲಹಿದ ತಾಯಿ, ತನ್ನ ಅಕ್ಕಂದಿರು, ಭಾವಂದಿರು, ತಾನು ಶಾಲೆಗೆ ಹೋದದ್ದು, ಕಾಲೇಜು ಓದಿದ್ದು, ತ್ಯಾಂಪಣ್ಣ ಶೆಟ್ಟಿ - ಎಲ್ಲಕ್ಕಿಂತಲೂ ಮುಖ್ಯವಾಗಿ ತಾನು ಎಲ್ಲ ಸಂಬಂಧಗಳನ್ನೂ ಕಳಚಿಕೊಂಡು ಪ್ರೀತಿಸಿದವನ ಜೊತೆ ಓಡಿ ಬಂದದ್ದು... - ಹೀಗೆ ಒಂದೊಂದೇ ಮುಖಗಳು, ಒಂದೊಂದೇ ಚಿತ್ರಗಳು, ಒಂದೊಂದೇ ಘಟನೆಗಳು ಅವರ ಕಣ್ಣ ಮುಂದೆ ಹಾದುಹೋಗತೊಡಗಿತ್ತು.
ಏನೆಲ್ಲ ಆಗಿ ಹೋಯಿತು ನನ್ನ ಬದುಕಿನಲ್ಲಿ. ಕಾಲ ಹೇಗೆ ಸರಿದು ಹೋಯಿತು. ಏನೆಲ್ಲ ಕನಸುಗಳನ್ನು ಹೊತ್ತು ಕೊಂಡು ಬಂದ ನಾನು ಏನನ್ನು ಸಾಧಿಸಿದೆ, ಏನನ್ನು ಗಳಿಸಿದೆ. ಒಂದು ತಿಂಗಳು - ಒಂದೇ ಒಂದು ತಿಂಗಳು - ನನ್ನ ಭ್ರಮೆಗಳೆಲ್ಲ ಕರಗಿ ನಾನು ಮತ್ತೆ ಭೂಮಿ ಮೇಲೆ ಹೆಜ್ಜೆ ಊರಿದ್ದೆ. ಆನಂತರ ನಾನು ನನ್ನ ಪ್ರೀತಿಯ ತಂದೆಯನ್ನು, ತಾಯಿಯನ್ನು, ಒಡ ಹುಟ್ಟಿದವರನ್ನು ನೆನೆಯದ ದಿನಗಳಿಲ್ಲ. ಕಣ್ಣೀರಿಡದ ಕ್ಷಣಗಳಿಲ್ಲ. ಆದರೆ ಏನು ಮಾಡುವುದು, ಕನಸುಗಳನ್ನು ಹೊತ್ತು ಬಂದಾಗಿತ್ತು. ತುಂಬಾ ಓದಬೇಕು, ದೊಡ್ಡ ಕೆಲಸಗಿಟ್ಟಿಸಿಕೊಳ್ಳಬೇಕು, ಕೈತುಂಬಾ ಸಂಪಾದಿಸಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು, ಸಾಧಿಸಬೇಕು, ಯಾರೂ ಸಾಧಿಸದ್ದನ್ನು ಸಾಧಿಸಬೇಕು - ಕನಸುಗಳು - ಏನೆಲ್ಲ ಕನಸುಗಳು -ಸಾಧಿಸಿದೆ, ಎಲ್ಲವನ್ನೂ ಸಾಧಿಸಿದೆ. ಆದರೆ ಕಾಲದ ಜೊತೆ ಎಲ್ಲವೂ ಕರಗಿ ಹೋಯಿತು. ತಾನು ಏನನ್ನು ಪಡೆದಿದ್ದೆನೋ, ಏನನ್ನು ಗಳಿಸಿದ್ದೆನೋ, ಅದನ್ನು ಪಡೆದಿದ್ದವರಿಂದ ಅವರಿಗೆ ಹಿಂದಿರುಗಿಸಲು ನನ್ನಿಂದ ಸಾಧ್ಯವಾಗಲಿಲ್ಲ.
ಜೀವನ ಪೂರ್ತಿ ಬರೀ ನೋವು, ದುಃಖ ಗಳು. ಯಾಕೆ ಹೀಗಾಯಿತು. ನಾನೆಲ್ಲಿ ಎಡವಿದೆ. ಯಾಕೆ ಹೀಗಾದೆ. ಗಟ್ಟಿಯಾಗಿ ಅಳಬೇಕೆಂದರೂ ಸಾಧ್ಯವಾಗದಂತಹ, ದುಃಖ ನೋವುಗಳನ್ನು ಯಾರಲ್ಲೂ ತೋಡಿಕೊಳ್ಳಲೂ ಸಾಧ್ಯವಾಗದಂತಹ ಸುಳಿಗೆ ಹೇಗೆ ನಾನು ಸಿಲುಕಿಕೊಂಡೆ. ಹೇಗೆ ಸಿಲುಕಿಕೊಂಡೆ - ಏನಾಗಿತ್ತು ನನಗೆ - ಎಲ್ಲಿ ಜಾರಿದೆ ನಾನು - ಬಿದ್ದ ನನಗೆ ಮತ್ತೆ ಯಾಕೆ ಎದ್ದು ನಿಲ್ಲಲಾಗಲಿಲ್ಲ.
ಎಷ್ಟೊಂದು ಅವಮಾನ ಪಟ್ಟಿರಬಹುದು ನನ್ನ ತಂದೆ. ಎಷ್ಟೊಂದು ದುಃಖ, ನೋವು ಅನುಭವಿಸಿರಬಹುದು ನನ್ನ ತಾಯಿ. ನನ್ನನ್ನು ನೆನೆದು, ನಾನು ಮಾಡಿದ ದ್ರೋಹವನ್ನು ನೆನೆದು ಎಷ್ಟೊಂದು ಕಣ್ಣೀರು ಹಾಕಿರಬಹುದು. ತಾಯಿ ಹೃದಯ ನಾನು ಅರ್ಥ ಮಾಡಿಕೊಳ್ಳದೆ ಹೋದೆ. ಆ ಹೃದಯ ಅರ್ಥವಾಗಬೇಕಾದರೆ ನಾನೊಬ್ಬಳು ತಾಯಿಯಾಗಬೇಕಾಯಿತು.
ನಾನು ನನ್ನ ಗಂಡನನ್ನು ಕರೆದುಕೊಂಡು ಮನೆಗೆ ಹಿಂದಿರುಗಿದ್ದರೆ ನಮ್ಮನ್ನು ತಂದೆ ಸ್ವೀಕರಿಸಬಹುದಿತ್ತು. ಕ್ಷಮಿಸಬಹುದಿತ್ತು. ಆದರೆ ನಾನು ಹೋಗಲಿಲ್ಲ. ನನ್ನ ತಂದೆ ತೀರಿಕೊಂಡಾಗಲೂ ನಾನು ಹೋಗಲಿಲ್ಲ. ಹೇಗೆ ಹೋಗುವುದು. ಹೇಗೆ ಈ ಮುಖವನ್ನು ತೋರಿಸುವುದು, ಏನೆಂದು ಹೇಳುವುದು - ಹೋಗಲಿಲ್ಲ - ಹೋಗಲು ಧೈರ್ಯ ಸಾಕಾಗಲಿಲ್ಲ ನನಗೆ - ಹೋಗಲೇಬಾರದು, ಈ ಮುಖವನ್ನು ಇನ್ನು ಅವರಿಗೆ ತೋರಿಸಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ. ನೀರಿಗೆ ಧುಮುಕಿಯಾಗಿತ್ತು. ಬದುಕಬೇಕಾದರೆ ಈಜಲೇಬೇಕಾಗಿತ್ತು. ಈಜಿದೆ. ಬದುಕಿದೆ. ಈಗ ಪ್ರಾಯವಾಗುತ್ತಿದೆ. ನಿವೃತ್ತಿಯ ವಯಸ್ಸು ಹತ್ತಿರವಾಗುತ್ತಿದೆ. ಬದುಕಿನ ಸಂಜೆಯತ್ತ ಹೊರಳುತ್ತಿದ್ದೇನೆ. ಈಗ ಎಲ್ಲ ಅರ್ಥವಾಗುತ್ತಿದೆ. ಮನಸ್ಸಿಗೆ ಸ್ವಸ್ಥತೆಯೇ ಇಲ್ಲ- ಇನ್ನೆಷ್ಟು ದಿನ - ಒಮ್ಮೆ ನೋಡಬೇಕು ಹೆತ್ತ ಕರುಳನ್ನು - ಸಾಯುವುದಕ್ಕೆ ಮೊದಲು ಒಮ್ಮೆ ನೋಡಬೇಕು. ‘ಅಮ್ಮಾ’ ಎಂದು ಕರೆಯಬೇಕು. ಆಸೆಯಾಗುತ್ತಿತ್ತು. ಪ್ರತಿಕ್ಷಣ ಹೃದಯ ತುಡಿಯುತ್ತಿತ್ತು. ಈಗ ಹೊರಟಿದ್ದೇನೆ...’’
ಈಗ ನನ್ನನ್ನು ನೋಡಿದರೆ ಅಮ್ಮನ ಪ್ರತಿಕ್ರಿಯೆ ಹೇಗಿರಬಹುದು. ‘ಝೊಹರಾ’ ಎಂದು ಬಾಚಿ ತಬ್ಬಿಕೊಳ್ಳಬಹುದೇ. ಯಾಕೆ ಹೀಗೆ ಮಾಡಿದೆ ಮಗಳೇ ಎಂದು ಕಣ್ಣೀರು ಹರಿಸಬಹುದೇ. ಕೋಪದಿಂದ ಸಿಡಿಮಿಡಿಗೊಳ್ಳಬಹುದೇ. ಯಾವ ರೀತಿ ವರ್ತಿಸಬಹುದು. ನನ್ನ ಅಕ್ಕಂದಿರು, ಭಾವಂದಿರನ್ನೆಲ್ಲ ಹೇಗೆ ಎದುರಿಸುವುದು. ಅವರು ಪ್ರಶ್ನೆ ಮಾಡಿದರೆ ಏನೆಂದು ಉತ್ತರಿಸುವುದು... ಏನಾದರಾಗಲಿ... ಬೈದರೆ ಬಯ್ಯಲಿ, ಹಂಗಿಸಲಿ, ಅವಮಾನಿಸಲಿ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಎಲ್ಲರನ್ನೂ ಒಮ್ಮೆ ಕಣ್ಣು ತುಂಬ ನೋಡಬೇಕು. ಯಾರಿಗೂ ನೋವಾಗದಂತೆ ನಡೆದುಕೊಳ್ಳಬೇಕು...
ತಾಹಿರಾ ಕಣ್ಣು ತೆರೆದಾಗ ಬೆಳಕು ಹರಿದಿತ್ತು. ಕಾಡಂಕಲ್‌ಲ್ ಮನೆ ಸಮೀಪಿಸುತ್ತಿತ್ತು. ಅಪ್ಪ - ಅಮ್ಮ ಎಚ್ಚರದಿಂದಿದ್ದರು. ಅವಳು ಸರಿಯಾಗಿ ಕುಳಿತು ತಲೆ ಕೂದಲನ್ನು ಜೋಡಿಸಿ ಕಟ್ಟಿಕೊಂಡಳು. ಮುಖ ಒರೆಸಿಕೊಂಡಳು. ಕಿಟಿಕಿಯಿಂದ ಹೊರಗೆ ನೋಡುತ್ತಾ ಕುಳಿತಳು. ಕಿಟಕಿಯಿಂದ ಜೋರಾಗಿ ಬೀಸಿ ಹೊಡೆಯುತ್ತಿದ್ದ ಹಿಮಗಾಳಿ ಅವಳ ದೇಹಕ್ಕೆ ಕಚಗುಳಿ ಇಡುತ್ತಿದ್ದವು. ಇಂದು ಮೆಹೆಂದಿ. ನಾಳೆ ಮದುವೆ. ನನಗೆ ಮದುವೆ. ನೆನೆಯುತ್ತಿದ್ದಂತೆಯೇ ಅವಳ ಮನಸ್ಸು ಸಂತೋಷ-ಸಂಭ್ರಮದಿಂದ ಪುಳಕಗೊಂಡು ಹಾಡತೊಡಗಿತ್ತು.
ಕಾರು ಬಂದು ಕಾಡಂಕಲ್‌ಲ್ ಮನೆಯ ಮುಂದೆ ನಿಂತಿತು. ತಾಹಿರಾ ಕಾರಿನ ಬಾಗಿಲು ತೆರೆದು ಜಿಂಕೆಯಂತೆ ಒಮ್ಮೆಲೆ ಹೊರಗೆ ಜಿಗಿದು ನೋಡಿದಳು. ಅಂಗಳ ತುಂಬಾ ಶಾಮಿಯಾನ ಹಾಕಲಾಗಿತ್ತು. ಶಾಮಿಯಾನದೊಳಗೆ ಜೋಡಿಸಿಟ್ಟ ಕುರ್ಚಿಗಳಲ್ಲಿ ಕೆಲವು ಜನ ಕುಳಿತಿದ್ದರು. ಅವಳ ಅಪ್ಪ-ಅಮ್ಮ ಕಾರಿನಿಂದಿಳಿದರು.
‘‘ಬನ್ನಿ ಅಮ್ಮ... ಬನ್ನಿ ಅಪ್ಪ...’’ ಎಂದು ಅವಳು ಮುಂದೆ ನಡೆದಳು. ಅಮ್ಮ-ಅಪ್ಪ ಅವಳನ್ನು ಹಿಂಬಾಲಿಸಿದರು. ಅವಳು ಅಂಗಳ ದಾಟಿ ಮೆಟ್ಟಿಲು ಹತ್ತಿ ಒಳಗಡಿ ಇಡುತ್ತಿದ್ದಂತೆಯೇ ಲೋಬಾನಾ-ಕರ್ಪೂರ-ಊದಿನ ಕಡ್ಡಿಯ ಹೊಗೆ, ಪರಿಮಳ ಒಮ್ಮೆಲೆ ಬಂದು ಅವಳ ಮುಖಕ್ಕೆ ರಾಚಿತು. ಅವಳು ವರಾಂಡಕ್ಕೆ ಬಂದಳು. ಒಂದು ಕಡೆ ಕೆಲವು ಮೌಲವಿಗಳು ಸಾಲಾಗಿ ಕುಳಿತಿದ್ದರು. ಮತ್ತೆ ಕೆಲವರು ಅಲ್ಲಲ್ಲಿ ಮೌನವಾಗಿ ಕುಳಿತಿದ್ದುದು ಕಾಣಿಸಿತು.
ಅವಳು ವರಾಂಡ ದಾಟಿ ಚಾವಡಿಗೆ ಬಂದಳು. ಅಲ್ಲಿ ಬೆಂಚಿಯ ಮೇಲೆ ಒಬ್ಬರು ಮುಖದ ತುಂಬಾ ಬಿಳಿ ಬಟ್ಟೆ ಹೊದ್ದು ಮಲಗಿದ್ದರು. ತಲೆ ಪಕ್ಕ ನಾಸರ್ ಕುಳಿತಿದ್ದ. ಅವಳ ಎದೆ ಬಡಿದುಕೊಳ್ಳತೊಡಗಿತು. ಕೈ ಕಾಲು ನಡುಗತೊಡಗಿತು. ಅವಳು ಹೆಜ್ಜೆ ಬದಲಿಸುತ್ತಾ ಬಂದು ನಾಸರ್‌ನ ಪಕ್ಕ ನಿಂತಳು. ಅವಳ ಹಿಂದೆಯೇ ಅವಳ ತಂದೆ-ತಾಯಿ ಬಂದು ನಿಂತರು. ನಾಸರ್ ಮಲಗಿದ್ದ ವ್ಯಕ್ತಿಯ ಮುಖದ ಬಟ್ಟೆ ಸರಿಸಿದ. ಅಜ್ಜಿ! ಅಜ್ಜಿ ಮೂಗಿಗೆ ಹತ್ತಿ ಇಟ್ಟು ಅಂಗಾತ ಮಲಗಿದ್ದರು.
ತಾಹಿರಾ ‘‘ಅಜ್ಜೀ...’’ ಎಂದು ಚೀರುತ್ತಾ ಅಜ್ಜಿಯ ದೇಹದ ಮೇಲೆ ಬಿದ್ದು ಹೊರಳಾಡತೊಡಗಿದಳು. ಇಬ್ಬರು ಹೆಂಗಸರು ಅವಳನ್ನು ಹಿಡಿದು ಎತ್ತಿ ಒಳಗೆ ಕರೆದೊಯ್ದರು. ಅವಳ ಕಿರುಚಾಟ ಜಾಸ್ತಿಯಾಗುತ್ತಿದ್ದಂತೆಯೇ ಅಡುಗೆ ಮನೆಗೆ ಎಳೆದುಕೊಂಡು ಹೋಗಿ ಬಾಗಿಲು ಮುಚ್ಚಿದರು.
ಅಲ್ಲಿ ಐಸು ತಲೆ ತುಂಬಾ ಸೆರಗು ಹೊದ್ದುಕೊಂಡು ನೆಲದಲ್ಲಿ ಗೋಡೆಗೊರಗಿ ಕುಳಿತಿದ್ದಳು. ಅವಳ ಕಣ್ಣಿಂದ ಚಿಮ್ಮುತ್ತಿದ್ದ ನೀರು ಕೆನ್ನೆಯ ಮೇಲೆ ಹರಿಯುತ್ತಿತ್ತು. ಅವಳನ್ನು ಕಂಡವಳೇ ತಾಹಿರಾ ಅವಳ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದಳು...
ತಾಹಿರಾಳ ತಾಯಿ ಕಂಬದಂತೆ ನಿಂತು ತಾಯಿಯ ಮುಖವನ್ನೇ ದಿಟ್ಟಿಸುತ್ತಿದ್ದರು. ‘‘ಅಮ್ಮ... ನನ್ನಮ್ಮ... ಹೊರಟು ಹೋದರು... ನನ್ನ ಮುಖವನ್ನೂ ನೋಡದೆ ಹೊರಟು ಹೋದರು. ಅಮ್ಮಾ... ಅಮ್ಮಾ...’’ ಅವರ ಹೃದಯ, ದೇಹದ ನರನಾಡಿಗಳು ಚೀರತೊಡಗಿದವು. ಅವರಿಗೆ ದುಃಖ ಉಕ್ಕಿ ಬಂತು. ಕಣ್ಣು ಮಂಜಾಗತೊಡಗಿತು... ‘ಅಳಬಾರದು... ನಾನು ಅಳಬಾರದು’ ಎಂದು ಎಷ್ಟೇ ತಡೆದುಕೊಂಡರೂ ಅದು ಅವರಿಂದ ಸಾಧ್ಯವಾಗಲಿಲ್ಲ. ಅವರ ದುಃಖದ ಕಟ್ಟೆ ಒಡೆದೇ ಬಿಟ್ಟಿತ್ತು. ಕುಸಿದು ಕುಳಿತ ಅವರು ತಾಯಿಯ ಪಾದಗಳ ಮಧ್ಯೆ ಮುಖ ಹುದುಗಿಸಿ ಅಳತೊಡಗಿದರು. ಅಜ್ಜಿಯ ಪಾದ ಅವರ ಕಣ್ಣೀರಿನಿಂದ ಒದ್ದೆಯಾಗತೊಡಗಿತ್ತು... ಅದಾಗಲೇ ಮೌಲವಿಗಳ ಸಾಮೂಹಿಕ ಕುರ್‌ಆನ್ ಪಾರಾಯಣ ಅವರ ಕಿವಿಗೆ ಬಂದು ಅಪ್ಪಳಿಸತೊಡಗಿತು...
................
................
ಯಾಸೀನ್
ವಲ್ ಕುರ್‌ಆನಿಲ್ ಹಕೀಮ್
ಇನ್ನಕಲಮಿನಲ್ ಮುರುಸಲೀನ್
ಅಲಾ ಸಿರಾತಿಮ್ಮುಸ್ತ ಕೀಮ್
ತಂಝೀಲಲ್ ಅಝೀಝುರ್ರಹೀಮ್
................
................
(ಮುಗಿಯಿತು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News