ನೋಟು ಅಮಾನ್ಯ ಮೂಲಕ ಕಪ್ಪು ಹಣ ನಿಗ್ರಹ ಮೋದಿಯವರ ಬೂಟಾಟಿಕೆ ಮತ್ತು ಪ್ರಚಾರ ಕಾರ್ಯ?
ಗರಿಷ್ಠ ಮುಖ ಬೆಲೆಯ ನೋಟುಗಳ ನೋಟು ಅಮಾನ್ಯ ಮೂಲಕ ಕಪ್ಪು ಹಣ ನಿಗ್ರಹಿಸಿ ದೇಶದ ಆರ್ಥಿಕ ರಂಗದಲ್ಲಿ ಒಂದು ಹೊಸ ಮನ್ವಂತರವನ್ನು ಆರಂಭಿಸುತ್ತೇನೆ. ಎಂದು ಸಾರಿದರು ದೇಶದ ಪ್ರಧಾನಿ ನರೇಂದ್ರ ಮೋದಿಯವರು. ಈ ನಿರ್ಣಯ ದೇಶದ ಸಿರಿವಂತರ, ಕಪ್ಪುಕುಳ ಪಾಲಿಗೆ ನಿದ್ದೆಗೆಡಿಸಿದರೆ, ಜನ ಸಾಮಾನ್ಯರ ಪಾಲಿಗೆ ನೆಮ್ಮದಿಯ ಬಾಳು ನೀಡುವುದೆಂದರು. ಆದರೆ ಮೋದಿ ಹೇಳಿರುವಂತೆ ಯಾವನೇ ಶ್ರೀಮಂತ ಸಮಸ್ಯೆಗೆ ಒಳಗಾಗಿಲ್ಲ. ನಿತ್ಯ ಸಮಸ್ಯೆ, ಗೋಳು ಅನುಭವಿಸುತ್ತಿರುವವರು ಬಡವರು, ಜನಸಾಮಾನ್ಯರು.
ದೇಶದ ಒಟ್ಟಾರೆ ಹಣಕಾಸು ವ್ಯವಸ್ಥೆಯ ನಿರ್ವಹಣೆ ಅದರಲ್ಲೂ ನೋಟು ಮುದ್ರಣ, ಚಲಾವಣೆ ಮತ್ತು ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆಯ ಹೊಣೆ ಹೊತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೀತಿ ಆಯೋಗ, ಹಣಕಾಸು ಸಚಿವರು ಮತ್ತು ಅವರ ಸಚಿವಾಲಯ ಮತ್ತು ಕೇಂದ್ರ ಸಚಿವ ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮೋದಿಯವರು ಏಕಾಂಗಿಯಾಗಿ ಕೈಗೊಂಡ ತೀರ್ಮಾನದ ಪರಿಣಾಮವನ್ನು ದೇಶವ್ಯಾಪಿಯಾಗಿ ಇದೀಗ ಎಲ್ಲರೂ ಅನುಭವಿಸುವಂತಾಗಿದೆ. ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಯ ಒಟ್ಟು ವ್ಯವಹಾರದ ಸುಮಾರು ಶೇ. 40ರಷ್ಟು ವ್ಯವಹಾರ ಕಪ್ಪುಹಣದ ಮೂಲಕವೇ ನಡೆಯುತ್ತಿದೆ ಎಂದು ಆರ್ಥಿಕ ತಜ್ಞರ ಅಂದಾಜು. ಈ ಅಂಶ ಅಧಿಕಾರದಲ್ಲಿರುವ ಯಾವನೇ ಪ್ರಧಾನಿ, ಅರ್ಥ ಸಚಿವ ಇಲ್ಲವೆ ಯಾವನೇ ಪ್ರಜ್ಞಾವಂತ ನಾಗರಿಕನನ್ನು ಆತಂಕಕ್ಕೆ ಈಡು ಮಾಡದಿರಲು ಸಾಧ್ಯವಿಲ್ಲ. ಆದರೆ ಮೇಲೆ ಹೇಳಿರುವಂತೆ ದೇಶದ ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸಕ್ಷಮ ಪ್ರಾಧಿಕಾರ /ಸಂಸ್ಥೆಗಳು/ವ್ಯಕ್ತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಓರ್ವ ಪ್ರಧಾನಿ ನೇರ ತಾನೇ ಕೈಗೊಂಡ ತೀರ್ಮಾನದ ಪರಿಣಾಮ ದೇಶವ್ಯಾಪಿ ಒಂದು ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯಂತಹ ಸನ್ನಿವೇಶವನ್ನು ಕಾಣುವಂತಾಗಿದೆ. ಇದೀಗ ದೇಶದ ಅರ್ಥ ವ್ಯವಸ್ಥೆಯ ಭಾಗವಾಗಿರುವ ಕಪ್ಪುಹಣದ ಒಳ ಹೊರವುಗಳನ್ನು ವಿಶ್ಲೇಷಿಸುವ ಮೊದಲು ಸದರಿ ನೋಟು ಅಮಾನ್ಯ ಘೋಷಣೆಯಿಂದ ಉದ್ಭವಿಸಿದ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸೋಣ. ಕೃಷಿ ಪ್ರಧಾನ ರಾಷ್ಟ್ರವಾದ ಈ ದೇಶದ ಒಟ್ಟಾರೆ ದೈನಂದಿನ ವ್ಯವಹಾರದ ಶೇ. 60ಕ್ಕೂ ಹೆಚ್ಚಿನ ಭಾಗ, ಅದರಲ್ಲೂ ಗ್ರಾಮೀಣ ಭಾರತ ಶೇ. 90 ಭಾಗ ಇನ್ನೂ ನಗದು ರೂಪದಲ್ಲೇ ನಡೆಯುತ್ತಿರುವಾಗ ಅದರಲ್ಲೂ ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಪೈಕಿ 500 ಮತ್ತು 1000 ರೂ.ಗಳ ಮುಖ ಬೆಲೆಯ ನೋಟುಗಳೇ ಶೇ. 86 ಇರುವಾಗ, ಬದಲಿ ಪೂರಕ ವ್ಯವಸ್ಥೆ ಇಲ್ಲದೆ ಒಂದೇ ಏಟಿಗೆ ಅವುಗಳ ನೋಟು ಅಮಾನ್ಯಗೊಳಿಸಿರುವುದರ ಪರಿಣಾಮ ಇಡೀ ದೇಶ ಈಗ ಅನುಭವಿಸುತ್ತಿದೆ. 500 ಮತ್ತು 1000 ರೂ.ಗಳ ಒಟ್ಟು 2,356 ಕೋಟಿ ನೋಟುಗಳ ಚಲಾವಣೆಯಲ್ಲಿದ್ದವು ಎಂದು ರಿಸರ್ವ್ ಬ್ಯಾಂಕ್ ಮೂಲಗಳಿಂದ ತಿಳಿದುಬರುತ್ತದೆ.
ರಿಸರ್ವ್ ಬ್ಯಾಂಕ್ ಅಧೀನ ಕಾರ್ಯವೆಸಗುವ ನೋಟು ಮುದ್ರಣದ ಎಲ್ಲಾ ಠಂಕಸಾಲೆಗಳಲ್ಲಿ ದಿನವಹಿ 24x7 ಕಾರ್ಯ ನಿರ್ವಹಿಸಿದರೂ ಅಷ್ಟೇ ಸಂಖ್ಯೆ (3256 ಕೋಟಿ)ಯ ನೋಟುಗಳ ಮರು ಮುದ್ರಣ ಮಾಡಲು ಕನಿಷ್ಠ 6/7 ತಿಂಗಳ ಅವಧಿ ಬೇಕಾಗಿರುವುದೆಂದು ಆರ್‌ಬಿಐ ಮೂಲಗಳಿಂದ ತಿಳಿದು ಬರುತ್ತದೆ. ಮಾನ್ಯ ಮೋದಿ ಸಾಹೇಬರು ನವೆಂಬರ್ 8ರ ರಾತ್ರಿ ಜನರು 2/3 ದಿನ ಸ್ವಲ್ಪ ಮಟ್ಟಿನ ಸಮಸ್ಯೆ ಅನುಭವಿಸಿದರೆ ತಾಳಿಕೊಳ್ಳಬೇಕು, ಮುಂದೆ ಎಲ್ಲವೂ ಸರಿ ಹೋಗುವುದೆಂದು ಹೇಳಿದ್ದರು. ನಾಲ್ಕೈದು ದಿನಗಳ ನಂತರ ಉ.ಪ್ರದೇಶದಲ್ಲಿ ಭಾಷಣ ಮಾಡುತ್ತಾ, ‘‘ಜನರು ಒಂದು 50 ದಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ತಾಳಿಕೊಳ್ಳಬೇಕು ಮುಂದೆ ಎಲ್ಲವೂ ಸರಿ ಹೋಗುತ್ತದೆ’’ ಎಂದು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿರುತ್ತಾರೆ. ಮೋದಿ ಮತ್ತವರ ತಂಡ ಸದರಿ ಕಾರ್ಯಕ್ಕೆ 10 ತಿಂಗಳುಗಳ ಪೂರ್ವ ಸಿದ್ಧತೆ ಮಾಡುತ್ತಾ ಬಂದಿದ್ದಾರೆ ತಿಳಿದು ಬಂದಿದೆ. ಹಾಗಿದ್ದರೆ ನೋಟುಗಳ ವಿನ್ಯಾಸ ಮತ್ತು ಗಾತ್ರದಲ್ಲಿ ವ್ಯತ್ಯಾಸ ಇರುವುದನ್ನು ಲಕ್ಷಾಂತರ ಸಂಖ್ಯೆಯಲ್ಲಿರುವ ಎಟಿಎಂಗಳ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬದಲಾವಣೆಯ ಅಗತ್ಯತೆ ಬಗ್ಗೆ ಅವರಿಗೇಕೆ ಹೊಳೆಯಲಿಲ್ಲ? ಚಲಾವಣೆಯಲ್ಲಿ ಉಳಿದಿರುವ ರೂ. 100 ಮತ್ತು ಕಡಿಮೆ ಮುಖ ಬೆಲೆಯ ನೋಟು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವಂತೆ ಏಕೆ ವ್ಯವಸ್ಥೆ ಮಾಡಿಲ್ಲ? ಇನ್ನೂ ರೂ. 500ರ ಬದಲು ರೂ. 2000ದ ನೋಟನ್ನು ಮೊದಲು ಬಿಡುಗಡೆ ಮಾಡಿ, ಅವುಗಳು ಕೈಗೆ ಸಿಕ್ಕಾಗ ಜನ ಚಿಲ್ಲರೆಗಾಗಿ ಎಲ್ಲೆಡೆ ಪರಿತಪಿಸುವಂತಾಯಿತು. ರೂ. 500ರ ನೋಟನ್ನು ಮೊದಲು ಮುದ್ರಣ ಮಾಡುವಂತೆ ಏಕೆ ವ್ಯವಸ್ಥೆ ಮಾಡಿಲ್ಲ? ಈ ಎಲ್ಲಾ ವೈಫಲ್ಯಗಳು ಏನನ್ನು ಸೂಚಿಸುತ್ತದೆ. ಇವು ಸಕ್ಷಮ ಪ್ರಾಧಿಕಾರಗಳಾದ ರಿಸರ್ವ್ ಬ್ಯಾಂಕ್‌ನಂತಹ ಸಂಸ್ಥೆಗಳನ್ನು ಉಪೇಕ್ಷೆಗೈದು ಎಲ್ಲವೂ ನಾನೇ ಎಂದು ಹೊರಟ ಮೋದಿಯವರ ಉದ್ಧಟತನವಲ್ಲವೇ? ತನ್ನ ಮಹತ್ವಾಕಾಂಕ್ಷೆ ಮತ್ತು ಪ್ರಚಾರದ ಗೀಳಿಗಾಗಿ ಮೋದಿಯವರು ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದಂತಾಗಲಿಲ್ಲವೇ? • ಮೋದಿ ಮತ್ತವರ ಸಚಿವರು ಹೇಳುವಂತೆ ಎಟಿಎಂಗಳನ್ನು ಮೇಲಿನಂತೆ ಬದಲಾವಣೆ ಮಾಡಿ 8/10 ದಿನಗಳಲ್ಲಿ ಸಜ್ಜುಗೊಳಿಸಲು ಸಾಧ್ಯವಿಲ್ಲ ಅದಕ್ಕೆ ಕನಿಷ್ಠ 50/60 ದಿನ ಬೇಕಾದೀತು! ನಂತರವೂ ನೋಟುಗಳ ಮುದ್ರಣ ಮತ್ತು ಪೂರೈಕೆಗಾಗಿ ಕಾಲ ಬೇಕಾದೀತು.
• ಗ್ರಾಮಾಂತರ ಭಾರತದ ಶೇ. 70ರಷ್ಟು ಜನ ಇನ್ನೂ ಬ್ಯಾಂಕ್ ಖಾತೆ ಹೊಂದಿಲ್ಲ. ಖಾತೆ ಇರುವವರಲ್ಲಿ ಶೇ. 10 ಜನರ ಕೈಯಲ್ಲಿ ಇನ್ನೂ ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಇಲ್ಲ. ಈ ಎಲ್ಲಾ ಸಮಸ್ಯೆ ಗಳ ಬಗ್ಗೆ ತಿಳಿದಿದ್ದೂ ಮೋದಿ ಮತ್ತವರ ತಂಡ ಏಕೆ ಪೂರಕ ಕಾರ್ಯ ಯೋಜನೆ ರೂಪಿಸಲು ವಿಫಲವಾಯಿತು?
• ಮೋದಿಯವರು ಅಷ್ಟೊಂದು ಸಿದ್ಧತೆ ಮಾಡಿದ್ದರೆ ಶ್ರೀಮಂತರು ಬಡವರ ಜನ ಧನ ಇಲ್ಲವೇ ಉಳಿತಾಯ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದನ್ನು ತಡೆಯಲು ಮೊದಲೇ ಏಕೆ ಯೋಜನೆ ರೂಪಿಸಿಲ್ಲ? ಜಾಗತಿಕ ಖ್ಯಾತ ಅರ್ಥಶಾಸ್ತ್ರಜ್ಞರೆನಿಸಿರುವ ಮಾಜಿ ಪ್ರಧಾನಿ ಡಾ ಮನಮೋಹನ್‌ಸಿಂಗ್ ಸದರಿ ಕಾರ್ಯವನ್ನು ‘‘ಸಂಘಟಿತ ಲೂಟಿ, ಕಾನೂನಾತ್ಮಕ ಸುಲಿಗೆ’’ ಎಂದು ಬಣ್ಣಿಸಿ, ಇದು ದೇಶದ ಜಿಡಿಪಿಯನ್ನು ಶೇ.2ರಷ್ಟು ಹಿಂದಕ್ಕೆ ತಳ್ಳುವುದೆಂದು ಹೇಳಿರುವುದನ್ನು ಮಾನ್ಯ ಮೋದಿಯವರು, ಇದು ಕೇವಲ ವಿರೋಧಿಗಳ ಕುಟಿಲ ಟೀಕೆ ಎಂದು ತಳ್ಳಿಹಾಕಲು ಸಾಧ್ಯವೇ? ಡಾ. ಸಿಂಗ್‌ರವರ ಹೇಳಿಕೆ ಸಮರ್ಥಿಸಿ ಜಾಗತಿಕ ಹೂಡಿಕೆದಾರರ ಸೇವಾ ಸಂಸ್ಥೆ ‘ಮೂಡೀಸ್’ ಕೂಡಾ ಪ್ರಗತಿಯು ಕುಂಠಿತಗೊಳ್ಳಲಿದೆ ಎಂಬ ಎಚ್ಚರಿಕೆ ನೀಡಿದೆ.
ಈ ಮೇಲಿನ ಎಲ್ಲಾ ಅಂಶಗಳು ಬಿಡಿಸಿ ಹೇಳುವಂತೆ ನುರಿತ, ತಜ್ಞ ಸಿಬ್ಬಂದಿಯಿರುವ ಸಕ್ಷಮ ಸಂಸ್ಥೆಗಳನ್ನು ಉಪೇಕ್ಷಿಸಿ, ಅಪಕ್ವ ತಂಡದ ಸಹಾಯ ದಿಂದ ಮೋದಿಯವರು ಇಂತಹ ಬೃಹತ್ ಯೋಜನೆ ರೂಪಿಸಿದರು ಎಂದು ಹೇಳಬಹುದು. ಹಾಗಿದ್ದರೆ ಅವರ ಇಂತಹ ಅಪಕ್ವ ಕಾರ್ಯವನ್ನು ತುಘಲಕ್ ದರ್ಬಾರ್ ಅನ್ನದೆ, ಇನ್ನೇನೆಂದು ಹೇಳಲು ಸಾಧ್ಯ?
ಕಪ್ಪುಹಣ ಉತ್ಪಾದನೆಯ ಮೂಲಗಳು ಮತ್ತು ಅದರ ನಿಗ್ರಹದ ನೈಜದಾರಿಗಳಾವುವು?
ನಮ್ಮ ರಾಜಕೀಯ ಮತ್ತು ಚುನಾವಣೆ ವ್ಯವಸ್ಥೆ, ಏರುಗತಿಯಲ್ಲಿರುವ ನೇರ ಮತ್ತು ಪರೋಕ್ಷ ತೆರಿಗೆಗಳು, ಕಪ್ಪುಹಣದ ಬಂಡವಾಳಕ್ಕೆ ಕೇಂದ್ರವಾಗಿರುವ ರಿಯಲ್ ಎಸ್ಟೇಟ್, ಸರಕಾರ ಮತ್ತು ಇತರೆಡೆ ಸರ್ವ ವ್ಯಾಪಿಯಾಗಿರುವ ಭ್ರಷ್ಟಾಚಾರ ಕಪ್ಪುಹಣದ ಉತ್ಪಾದನಾ ಕೇಂದ್ರಗಳಾಗಿವೆ.
ಏರುಗತಿಯಲ್ಲಿರುವ ತೆರಿಗೆದರಗಳು:
ಒಂದೆಡೆ ತಿಂಗಳ ಸಂಬಳಕ್ಕಾಗಿ ದುಡಿಯುವ ನೌಕರರ ವರ್ಗ ಪ್ರತಿ ತಿಂಗಳು ತಮ್ಮ ಸಂಬಳದಿಂದ ಆದಾಯ ತೆರಿಗೆ ಮುರಿದು ಪಾವತಿಸುತ್ತಿದ್ದರೆ, ಇನ್ನೊಂದೆಡೆ ವ್ಯವಹಾರ ನಡೆಸುವ ಉದ್ಯೋಗಪತಿಗಳು ತಾವು ದುಡಿದುಗಳಿಸುವ ಆದಾಯದ ಶೇ. 30ರಿಂದ 35ರಷ್ಟು ತೆರಿಗೆ ಪಾವತಿಸಲು ಹಿಂದೇಟು ಹಾಕಿ, ತಮ್ಮ ಆದಾಯದ ಬಗ್ಗೆ ಖೊಟ್ಟಿ ಲೆಕ್ಕ ಕೊಟ್ಟು, ಆದಾಯದ ದೊಡ್ಡ ಪಾಲನ್ನು ಕಪ್ಪುಹಣವನ್ನಾಗಿ ಪರಿವರ್ತಿಸುತ್ತಾರೆ.
ಸದಾ ಏರಿಕೆಯಾಗುತ್ತಿರುವ ಪರೋಕ್ಷ ತೆರಿಗೆಗಳು:ವಿವಿಧ ಕೈಗಾರಿಕೋತ್ಪನ್ನಗಳಿಗೆ ಪ್ರಸ್ತುತ ಕೇಂದ್ರ ಸರಕಾರ ಶೇ. 15ರಿಂದ 35ರಷ್ಟು ಅಬಕಾರಿ ಸುಂಕ ವಿಧಿಸಿದರೆ ಅದರ ಮೇಲೆ ರಾಜ್ಯ ಸರಕಾರ ಗಳು ಸುಮಾರು ಶೇ. 5ರಿಂದ 28ರಷ್ಟು ಮಾರಾಟ ತೆರಿಗೆ (ವ್ಯಾಟ್) ವಿಧಿಸಿ 100 ರೂ.ಗಳ ಒಂದು ವಸ್ತು ರೂ. 120ರಿಂದ 160ರ ಬೆಲೆಗೆ ಮಾರಾಟವಾಗುವಂತಾಗಿದೆ. ತೀವ್ರ ಪೈಪೋಟಿಯಲ್ಲಿರುವ ಇಂದಿನ ಮಾರು ಕಟ್ಟೆಯಲ್ಲಿ ತನ್ನ ಉತ್ಪನ್ನ ಶೀಘ್ರವಾಗಿ ಮಾರಾಟ ಮಾಡುವ ಹವಣಿಕೆಯಲ್ಲಿ ಉದ್ಯಮಿ ಅದನ್ನು ಸುಂಕ ಮತ್ತು ಮಾರಾಟ ತೆರಿಗೆ ಇಲ್ಲದೆ ಬಿಲ್ ಕೊಡದೆ ಮಾರುವುದರಿಂದ ಗ್ರಾಹನಿಗೆ ರೂ. 150 ಅಥವಾ ಹೆಚ್ಚಿನ ಮಾರುಕಟ್ಟೆದರ ಇರುವ ವಸ್ತು ರೂ. 100 ಇಲ್ಲವೆ 110ಕ್ಕೆ ಕೊಡು ವಾಗ ಗ್ರಾಹಕನೂ ಬಿಲ್ ಇಲ್ಲದೆ ತೆರಿಗೆ ಪಾವತಿ ಮಾಡದೆ ಅದನ್ನು ಖರೀದಿ ಮಾಡಿದಾಗ, ಸದರಿ ಹಣ ಪೂರ್ತಿಯಾಗಿ ಲೆಕ್ಕಕ್ಕೆ ಹೊರತಾದ ಕಪ್ಪುಹಣ ವಾಗಿ ಆ ಜಾಲಕ್ಕೆ ಸೇರ್ಪಡೆಯಾಗುತ್ತದೆ. ಇನ್ನೂ ಇದರ ಜೊತೆಗೆ ಇದೀಗ ಸುಮಾರು ಶೇ. 15ದಷ್ಟು ಸೇವಾ ತೆರಿಗೆ ಜಾರಿಗೆ ಬಂದಿದ್ದು ಎಲ್ಲಾ ಸೇವಾ ಕ್ಷೇತ್ರಗಳಲ್ಲೂ ಅನೇಕ ಸಂದರ್ಭಗಳಲ್ಲಿ ಲೆಕ್ಕಕ್ಕೆ ಹೊರತಾದ ಸೇವೆ ಒದಗಣೆ ಯಾಗಿ ಆ ಹಣವೂ ಕಪ್ಪುಹಣದ ಜಾಲಕ್ಕೆ ಸೇರ್ಪಡೆಯಾಗುತ್ತಿದೆ.
ಸ್ಥಿರಾಸ್ತಿ ನೋಂದಣೆ ಮತ್ತು ಮಾರುಕಟ್ಟೆ ದರಗಳಲ್ಲಿನ ವ್ಯತ್ಯಾಸ ಕಪ್ಪುಹಣಕ್ಕೆ ರಹದಾರಿ:
ಬೆಂಗಳೂರು ನಗರ ಪ್ರದೇಶದ ಒಂದು ಎಕರೆ ಜಮೀನಿನ ನೋಂದಣಿ ದರ ರೂ. 10 ಕೋಟಿ ನಿಗದಿಯಾಗಿದ್ದಾಗ ಅದರ ಮಾರುಕಟ್ಟೆ ದರ ರೂ. 15 ಕೋಟಿ ಇದ್ದರೆ, ಮಾರಾಟಗಾರ ಮತ್ತು ವಿಕ್ರಯದಾರ ಇಬ್ಬರು ಸೇರಿ ಸದರಿ ವ್ಯವಹಾರವನ್ನು ಅಧಿಕೃತವಾಗಿ ರೂ. 10 ಕೋಟಿಗೆ ಕುದುರಿಸಿದರೆ ಹೆಚ್ಚುವರಿ ರೂ. 5 ಕೋಟಿ ಹಣ ಕಪ್ಪುಹಣದ ರೂಪದಲ್ಲಿ ನಗದಾಗಿ ಪಾವತಿಯಾದರೆ ಸರಕಾರಕ್ಕೆ ನೊಂದಣೆ ದರ ರೂ. 90 ಲಕ್ಷ (ರೂ.15 ಕೋಟಿಯ 6ಶೇ.=90 ಲಕ್ಷ)ದ ಬದಲಾಗಿ ಕೇವಲ ರೂ 60 ಲಕ್ಷ (ರೂ. 10 ಕೋಟಿಯ ಶೇ. 6) ಮಾತ್ರ ವಸೂಲಾಗಿ ರೂ. 30 ಲಕ್ಷ ತೆರಿಗೆ ಖೋತಾ ಆಗುತ್ತದೆ. ಅಲ್ಲದೆ ರೂ. 5 ಕೋಟಿ ಕಪ್ಪುಹಣದ ಜಾಲಕ್ಕೆ ಸೇರುತ್ತದೆ.
ರಾಜಕೀಯ, ಚುನಾವಣೆ ಮತ್ತು ಭ್ರಷ್ಟಾಚಾರ:
ಭ್ರಷ್ಟಾಚಾರ ಇಂದು ಸರಕಾರಿ ಆಡಳಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದೆ. ಸರಕಾರೇತರ, ಅಂದರೆ ಖಾಸಗಿ ರಂಗದಲ್ಲೂ ಇಂದು (ಕಾಂಟ್ರಾಕ್ಟ್ ಒಪ್ಪಂದ ಇತ್ಯಾದಿ ಸಂಧರ್ಭಗಳಲ್ಲಿ) ಈ ಭ್ರಷ್ಟ ವ್ಯವಸ್ಥೆ ವ್ಯಾಪಿಸಿದೆ. ಇನ್ನೂ ರಾಜಕೀಯದ ಚುನಾವಣಾ ಕ್ಷೇತ್ರ ಇಂದು ಪೂರ್ತಿ ಈ ಭ್ರಷ್ಟ ವ್ಯವಸ್ಥೆಯ ಕಪ್ಪುಹಣವನ್ನೇ ಅವಲಂಬಿಸಿದೆ. ಈ ದಿನಗಳಲ್ಲಿ ಒಂದು ವಿಧಾನ ಸಭಾ ಚುನಾವಣೆಗೆ ಕನಿಷ್ಠ ರೂ. 5 ಕೋಟಿ, ಲೋಕಸಭಾ ಚುನಾವಣೆಗೆ ಕನಿಷ್ಠ ರೂ. 10 ರಿಂದ 25 ಕೋಟಿ ಖರ್ಚಾಗುತ್ತಿದೆ. ಈ ಹಣ ಪೂರ್ತಿಯಾಗಿ ಕಪ್ಪುಹಣದ ಜಾಲದಿಂದ ಬಂದು ಖರ್ಚಾಗಿ ಮತ್ತೆ ಕಪ್ಪುಹಣವಾಗಿಯೇ ಉಳಿಯುತ್ತದೆ. ಈ ಭ್ರಷ್ಟ ವ್ಯವಸ್ಥೆಯ ಪಾಲುದಾರರಾದ ಬಹುತೇಕ ಎಲ್ಲಾ ಪಕ್ಷಗಳ ರಾಜಕಾರಣೆಗಳು ಮತ್ತು ಅಧಿಕಾರ ವರ್ಗ ತಾವು ಗಳಿಸಿದ ಹಣದ ಬಹುತೇಕ ಪಾಲನ್ನು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಸುತ್ತಾರೆ. ಹೀಗೆ ಇಲ್ಲಿ ಈ ಕಪ್ಪುಹಣ ನಗದು ಬದಲು ಸ್ಥಿರಾಸ್ತಿಯಾಗಿ ಮಾರ್ಪಡುತ್ತದೆ. ಒಂದು ಅಂದಾಜಿನಂತೆ ದೇಶ ಒಟ್ಟು ಕಪ್ಪುಹಣ ಶೇ. 10ರಿಂದ 20 ಮಾತ್ರ ನಗದು ರೂಪದಲ್ಲಿದ್ದರೆ, ಬಹುಪಾಲು ಮೇಲಿನಂತೆ ಸ್ಥಿರಾಸ್ತಿಯಾಗಿ ಮಾರ್ಪಾಟು ಹೊಂದುತ್ತದೆ. ಇನ್ನೂ ಸ್ವಲ್ಪವಿದೇಶಿ ಬ್ಯಾಂಕ್‌ಗಳಲ್ಲಿ ಠೇವಣಿ ರೂಪದಲ್ಲಿ ದೇಶದಿಂದ ಹೊರಹೋಗುತ್ತದೆ.
ಆಡಳಿತ (ಭ್ರಷ್ಟ ವ್ಯವಸ್ಥೆ) ಮತ್ತು ಆರ್ಥಿಕ (ತೆರಿಗೆ ಸುಧಾರಣೆ) ಇತ್ಯಾದಿ ಸುಧಾರಣೆಗಳಿಂದ ಮಾತ್ರ ಕಪ್ಪುಹಣ ನಿಗ್ರಹ ಸಾಧ್ಯ:
ಚುನಾವಣಾ ಕ್ಷೇತ್ರದಲ್ಲಿ ಪೂರ್ಣ ಖರ್ಚು ವೆಚ್ಚ ಸರಕಾರ ಭರಿಸಿ ರಾಜಕೀಯದ ಭ್ರಷ್ಟ ವ್ಯವಸ್ಥೆ ಶುದ್ಧೀಕರಿಸಬೇಕಾಗಿದೆ. ಅಂತೆಯೇ ಸದಾ ಏರುಗತಿಯಲ್ಲಿರುವ ತೆರಿಗೆ ದರಗಳನ್ನು ಹಂತಹಂತದಲ್ಲಿ ಕಡಿಮೆ ಮಾಡುತ್ತ ಆದಾಯ ತೆರಿಗೆಯ ಗರಿಷ್ಠ ಮಿತಿಯನ್ನು ಶೇ. 20ಕ್ಕೆ ಸೀಮಿತಿಗೊಳಿಸಿ, ಕನಿಷ್ಠ ತೆರಿಗೆ ಮಿತಿಯನ್ನು ರೂ.5 ಲಕ್ಷಕ್ಕೆ ಏರಿಸುವುದೇ ಮೊದಲಾದ ಸುಧಾರಣೆಗಳನ್ನು ಸರಕಾರ ಮಾಡಬಹುದಾಗಿದೆ. ಇದೇ ಪರೋಕ್ಷ ತೆರಿಗೆಗಳನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಾ ಹೋದರೆ, ತೆರಿಗೆ ಇಲ್ಲದೆ ಮಾರಾಟವಾಗುವ ಸಂದರ್ಭಗಳನ್ನು ಹೋಗಲಾಡಿಸಿ ಕಪ್ಪುಹಣಕ್ಕೆ ಬ್ರೇಕ್‌ಹಾಕಲು ಸಾಧ್ಯ. ಅದೇ ರೀತಿ ಮೇಲೆ ವಿವರಿಸಲಾದ ಸ್ಥಿರಾಸ್ತಿ ನೋಂದಣಿ ದರ ಮತ್ತು ಮಾರಾಟದರಗಳ ವ್ಯತ್ಯಾಸಗಳನ್ನು ಹೋಗಲಾಡಿಸಿ ಏಕದರ ವ್ಯವಸ್ಥೆ ಜಾರಿಗೊಳಿಸಿದರೆ ರಿಯಲ್ ಎಸ್ಟೇಟ್ ರಂಗದಲ್ಲಿ ಕಪ್ಪುಹಣದ ಬಳಕೆಯನ್ನು ತಪ್ಪಿಸಲು ಸಾಧ್ಯ. ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಬಗ್ಗೆ ಮೋದಿಯವರು ಆಗಾಗ್ಗೆ ಮಾತನಾಡುತ್ತಿದ್ದಾರೆ. ಅವರ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ದೊಡ್ಡ ಮಟ್ಟದ ಭ್ರಷ್ಟಾಚಾರದ ಹಗರಣದ ಬಗ್ಗೆ ಈ ತನಕ ಸುದ್ದಿ ಆಗದಿರಬಹುದು. ಆದರೆ ಮಾನ್ಯ ಮೋದಿಯವರು ಸದಾ ವಿದೇಶ ಪ್ರವಾಸಕ್ಕಾಗಿ ಹೋದಾಗ ಅಮೆರಿಕದ ಮ್ಯಾನ್‌ಹಟನ್ ಸ್ಕ್ವೇರ್‌ನಿಂದ ಅಸ್ಟ್ರೇಲಿಯಾದವರೆಗೆ, ಲಂಡನ್‌ನಿಂದ ಮಧ್ಯ ಪ್ರಾಚ್ಯದ ಅಬುಧಾಬಿಯವರೆಗೆ ಅವರು ನಡೆಸಿದ ಬೃಹತ್ ಸಭೆಗಳಿಗೆ ಮಿಲಿಯ ಗಟ್ಟಲೆ ಡಾಲರ್‌ಗಳ ವಿನಿಯೋಗವಾಗಿದೆ. ಈ ಎಲ್ಲಾ ಖರ್ಚು ವೆಚ್ಚಗಳನ್ನು ಯಾರು ನಿಭಾಯಿಸಿದ್ದಾರೆ? ಬಹುತೇಕ ಎಲ್ಲ ವಿದೇಶ ಪ್ರವಾಸಗಳಲ್ಲಿ ಮೋದಿಯವರ ಜತೆ ಕಾಣುವ ಅದಾನಿಯಂತಹ ಉದ್ಯೋಗಪತಿಗಳು ಈ ಮೇಲಿನ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದಾರೆಯೆ? ಅವರು ಮಾಡುತ್ತಿದ್ದರೆ ಅವರ ವ್ಯವಹಾರಿಕ ಲಾಭಗಳಿಗಾಗಿ ಮಾಡುತ್ತಿಲ್ಲವೇ? ಹಾಗಿದ್ದರೆ ಅದು ಭ್ರಷ್ಟ ವ್ಯವಸ್ಥೆಯ ಭಾಗವಾಗುವುದಿಲ್ಲವೇ? ಇದೀಗ ದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳು 2014-15ರ ಸಾಲಿನಲ್ಲಿ ಒಟ್ಟು 1.14 ಲಕ್ಷ ಕೋಟಿ ರೂ. ಗಳನ್ನು ವಸೂಲಾಗದ ಸಾಲವೆಂದು ಪರಿಗಣಿಸಿ ಈ ಅಗಾಧ ಮೊತ್ತದ ಹಣವನ್ನು ರೈಟ್‌ಆಫ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಮೇಲಿನ ಬೃಹತ್ ಸಾಲ ಪಡೆದುಕೊಂಡವರಲ್ಲಿ ದೇಶದ ದೊಡ್ಡ ಉದ್ಯೋಗಪತಿಗಳ ಹೆಸರು ಇದೆ ಎಂದು ತಿಳಿದು ಬಂದಿರುತ್ತದೆ. ಈ ಹಗರಣ ಕೂಡಾ ಭ್ರಷ್ಟ ವ್ಯವಸ್ಥೆಯ ಭಾಗವಲ್ಲವೇ? ಈ ಎಲ್ಲಾ ಹಿನ್ನೆಲೆಯಲ್ಲಿ ಮೋದಿಯವರು ಮೇಲೆ ಹೇಳಿರುವಂತೆ ರಾಜಕೀಯ, ಆರ್ಥಿಕ ರಂಗದ ಸುಧಾರಣೆ ಮತ್ತು ಶುದ್ಧೀಕರಣ ಮಾಡುವ ಬಗ್ಗೆ ದಿಟ್ಟ ನಿರ್ಧಾರ ಮಾಡುವ ಇಚ್ಛಾ ಶಕ್ತಿ ಪ್ರದರ್ಶಿಸುವರೆ? ಮೇಲಿನ ಕಟ್ಟು ನಿಟ್ಟಿನ ಸುಧಾರಣ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ಮಾನ್ಯ ಮೋದಿಯವರು ಪ್ರದರ್ಶಿಸದೆ ಹೋದರೆ ಅವರು ಕೇವಲ ತನ್ನ ಸ್ವಪ್ರತಿಷ್ಠೆ ಢಂಬಾಚಾರಕ್ಕಾಗಿ, ಓಟಿನ ಪ್ರಚಾರ ಕ್ಕಾಗಿ ಇಂತಹ ತೀರ್ಮಾನಗಳನ್ನು ಮಾಡುತ್ತಿದ್ದಾರೆ ಎನ್ನದೆ ಬೇರೆ ವಿಧಿ ಇಲ್ಲ. ಮೋದಿಯವರು ಮೇಲಿನ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಿ ನಂತರ ನೋಟು ಅಮಾನ್ಯ ಜಾರಿಗೆ ತಂದರೆ ಮಾತ್ರ ದೇಶದಲ್ಲಿನ ಕಪ್ಪುಹಣದ ಜಾಲವನ್ನು ಮಟ್ಟ ಹಾಕಲು ಸಾಧ್ಯ.