ತಮಿಳುನಾಡಿನ ಕಾವೇರಿ... ಜಯಲಲಿತಾ

Update: 2016-12-06 18:31 GMT

ವತ್ತು ಇಡೀ ತಮಿಳುನಾಡು ‘ಅಮ್ಮ’ನಿಗಾಗಿ ಕಣ್ಣೀರಿಡುತ್ತಿದೆ. ಹಲವರು ‘ಅಮ್ಮ’ನಿಗಾಗಿ ಪ್ರಾಣವನ್ನೇ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಎದುರಾಗುವ ಪ್ರಶ್ನೆ- ತಮಿಳರ ಆ ಹುಚ್ಚು ಅಭಿಮಾನ, ಅತಿಪ್ರೀತಿಗೆ ಕುಮಾರಿ ಜಯಲಲಿತಾ ಕೊಟ್ಟಿದ್ದೇನು? ತಮಿಳು ಚಿತ್ರರಂಗದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿನೇತ್ರಿಯಾಗಿ ಮೆರೆದು, ತಮಿಳುನಾಡಿನ ಜನರ ಹೃದಯಗೆದ್ದ ಜಯಲಲಿತಾ, ಮನ ತಣಿಯುವಷ್ಟು ನಟಿಸಿ, ತಮ್ಮ ನಟನಾ ದಾಹವನ್ನು ಇಂಗಿಸಿಕೊಂಡಿದ್ದಾರೆ.

ಕಾವೇರಿ ನೀರನ್ನು ತಮಿಳುನಾಡಿಗೆ ಪಡೆಯುವಲ್ಲಿ ತಮ್ಮ ಬುದ್ಧಿಶಕ್ತಿಯನ್ನೆಲ್ಲ ಬಳಸಿ, ರಾಜಕೀಯ ಬದುಕನ್ನೇ ಪಣಕ್ಕಿಟ್ಟು ಹೋರಾಡಿ, ತಮಿಳುನಾಡಿನ ಜನರ ನೀರಿನ ದಾಹವನ್ನು ತಣಿಸಿದ್ದಾರೆ. ಒಂದು, ತಮ್ಮ ನಟನಾ ದಾಹವನ್ನು ತೀರಿಸಿಕೊಂಡಿರುವುದು; ಮತ್ತೊಂದು, ತಮಿಳುನಾಡಿನ ಜನರ ನೀರಿನ ದಾಹವನ್ನು ತಣಿಸಿರುವುದು- ಜಯಲಲಿತಾ ಇಲ್ಲವಾಗಿರುವ ಈ ಗಳಿಗೆಯಲ್ಲಿ ರೂಪಕದಂತೆ ಕಾಣತೊಡಗಿದೆ. ಜಯಲಲಿತಾ ತಮಿಳು ಭಾಷಿಕರಲ್ಲ, ತಮಿಳುನಾಡಿನಲ್ಲಿ ಹುಟ್ಟಿ ಬೆಳೆದವರೂ ಅಲ್ಲ. ಜಯಲಲಿತಾ ಹುಟ್ಟಿದ್ದು ಮೈಸೂರಿನಲ್ಲಿ. ಕುಡಿದು ಬೆಳೆದದ್ದು ಕಾವೇರಿ ನೀರಿನ್ನು. ಇವರ ತಂದೆ-ತಾಯಿಯರು ನೆಲೆಸಿದ್ದು ಮಂಡ್ಯದ ಮೇಲುಕೋಟೆಯಲ್ಲಿ. ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದ್ದು ಕೂಡ ಕನ್ನಡ ಚಿತ್ರರಂಗದ ಮೂಲಕವೇ. ಆಶ್ಚರ್ಯವೆಂದರೆ, ಕರ್ನಾಟಕದಲ್ಲಿ ನೆಲೆಸಲಿಲ್ಲ, ಕನ್ನಡ ಚಿತ್ರರಂಗದಲ್ಲಿ ನಟಿಸಿದರೂ ನೆಲೆಯೂರಲಿಲ್ಲ, ಕಾವೇರಿ ನೀರು ಕುಡಿದು ಬೆಳೆದರೂ, ಕಾವೇರಿ ಕನ್ನಡಿಗರದು ಎನ್ನಲಿಲ್ಲ.

ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಕರ್ನಾಟಕದಲ್ಲಿ ಹರಿದರೂ ಕನ್ನಡಿಗರ ಪಾಲಿಗೆ ಸಿಕ್ಕಿದ್ದು ಸ್ವಲ್ಪ. ಆದರೆ ಪಕ್ಕದ ರಾಜ್ಯವಾದ ತಮಿಳುನಾಡಿಗೆ ಹರಿದದ್ದು, ಅನುಕೂಲ ಮಾಡಿಕೊಟ್ಟದ್ದು ಅಪಾರ. ಕಾವೇರಿಯಂತೆಯೇ, ಜಯಲಲಿತಾ ಕೂಡ. ಕರ್ನಾಟಕದಲ್ಲಿ ಹುಟ್ಟಿದರು ತಮಿಳುನಾಡಿಗೇ ತಮ್ಮ ಸರ್ವಸ್ವವನ್ನೂ ಧಾರೆ ಎರೆದರು. ಕಾವೇರಿ ವಿಷಯದಲ್ಲಿ ಎರಡೂ ರಾಜ್ಯಗಳ ಜನ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಗೊತ್ತಿದ್ದರೂ, ಅದೇ ಕಾವೇರಿಗಾಗಿ ಕನ್ನಡಿಗರ ಆಕ್ರೋಶಕ್ಕೂ ಗುರಿಯಾದರು. ರಾಜ್ಯಗಳ ನಡುವಿನ ರಾಜಕೀಯ ಬಿಕ್ಕಟ್ಟಿಗೆ, ಸಂಘರ್ಷಕ್ಕೂ ಕಾರಣರಾದರು. ಇಂತಹ ಜಯಲಲಿತಾ ಬೆಳೆದ ಬಗೆಯತ್ತ ನೋಡಿದರೆ... ಕನ್ನಡದ ಮೇಸ್ಟ್ರು ಬಿ.ಆರ್.ಪಂತಲು, ಜಯಲಲಿತಾ 15 ವರ್ಷದವರಿದ್ದಾಗ ಒಂದು ನೃತ್ಯ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಅದಕ್ಕೆ ಶಿವಾಜಿಗಣೇಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಆಕೆಯ ನೃತ್ಯ ಮತ್ತು ಸೌಂದರ್ಯವನ್ನು ಮೆಚ್ಚಿ, ‘ಭವಿಷ್ಯದಲ್ಲಿ ತಾರೆಯಾಗಿ ಮೆರೆಯುವೆ’ ಎಂದು ಹರಸುತ್ತಾರೆ. ಬಿ.ಆರ್. ಪಂತಲು ಅವರೇ ಮುಂದಾಗಿ, ಕನ್ನಡದ ಹುಡುಗಿ, ನೃತ್ಯಗಾತಿ, ಸೌಂದರ್ಯವತಿ, ಕಲಾವಿದರ ಕುಟುಂಬದಿಂದ ಬಂದವಳು, ಕನ್ನಡ ಚಿತ್ರದಲ್ಲಿಯೇ ಉಳಿದು ಬೆಳೆಯಲಿ ಎಂದು 1964ರಲ್ಲಿ ‘ಚಿನ್ನದ ಗೊಂಬೆ’ ಚಿತ್ರದಲ್ಲಿ ಪಾತ್ರ ನೀಡಿ ಚಿತ್ರರಂಗಕ್ಕೆ ಕರೆದು ತರುತ್ತಾರೆ. ಆಗಿನ ಚಾಲ್ತಿ ನಾಯಕನಟ ಕಲ್ಯಾಣಕುಮಾರ್ ಎದುರಿಗೆ ನಟಿಸಿದ ಜಯಲಲಿತಾ, ನಟನೆಯಲ್ಲಿ ಸೈ ಎನಿಸಿಕೊಳ್ಳುತ್ತಾರೆ.

ಮುಂದೆ ನಾಲ್ಕೈದು ಕನ್ನಡ ಚಿತ್ರಗಳಲ್ಲಿ ನಟಿಸಿ, ನೆಲೆಯೂರುವ ಲಕ್ಷಣಗಳನ್ನೂ ತೋರುತ್ತಾರೆ. ಆದರೆ, ಕಾವೇರಿಯಂತೆಯೇ ಜಯಲಲಿತಾ ಕೂಡ ಕನ್ನಡ ಚಿತ್ರರಂಗ ಬಿಟ್ಟು ನೆರೆಯ ರಾಜ್ಯ ತಮಿಳುನಾಡಿನ ಚಿತ್ರರಂಗದಲ್ಲಿ ತಮ್ಮ ನೆಲೆ ಕಂಡುಕೊಳ್ಳುತ್ತಾರೆ. ಲೆಕ್ಕವಿಲ್ಲದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ತಮಿಳರ ಮನಗೆದ್ದು ಅಭಿನೇತ್ರಿಯಾಗಿ ಮೆರೆಯುತ್ತಾರೆ.

ತಮಿಳರ ಆರಾಧ್ಯದೈವ ಎಂ.ಜಿ.ರಾಮಚಂದ್ರನ್‌ರೊಂದಿಗೆ ನಟಿಸುತ್ತಲೇ, ಅವರಿಗೆ ಆಪ್ತರಾಗಿ ಹತ್ತಿರವಾಗುತ್ತಾರೆ. ಎಂಜಿಆರ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಗಳಿಸಿದ ಜನಪ್ರಿಯತೆ ಯನ್ನು, ಬಹಳ ಹತ್ತಿರದಿಂದ ಕಂಡು, ಎಐಎಡಿಎಂಕೆ ಪಕ್ಷಕ್ಕೆ ಸೇರುವ ಮೂಲಕ ಎಂಜಿಆರ್ ಹಾದಿಯಲ್ಲಿಯೇ ಸಾಗುತ್ತಾರೆ. 1991ರಲ್ಲಿ ಮೊತ್ತ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿ ಮುಖ್ಯ ಮಂತ್ರಿಯಾಗುತ್ತಾರೆ. ಅಷ್ಟೇ ಅಲ್ಲ, ಏಳು ಸಲ ಶಾಸಕಿಯಾಗಿ ಆಯ್ಕೆಯಾಗಿ, ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ, ಕಾವೇರಿ ನೀರಿನ ವಿಷಯವೊಂದೇ ಅಲ್ಲ, ಪ್ರತಿಯೊಂದರಲ್ಲೂ ತಮಿಳರ ಮನ ಗೆಲ್ಲುವಲ್ಲಿ ಸಫಲರಾಗುತ್ತಾರೆ. ತಮಿಳರ ಅಮ್ಮನಾಗಿ ಶಾಶ್ವತವಾಗಿ ನೆಲೆಯೂರುತ್ತಾರೆ. ಇದು ಕನ್ನಡದ ಕುವರಿ ತಮಿಳಿನ ಅಮ್ಮನಾದ ಕತೆ.
 

Writer - ಬಸು ಮೇಗಲ್ಕೇರಿ

contributor

Editor - ಬಸು ಮೇಗಲ್ಕೇರಿ

contributor

Similar News