ಗಡಿ ಪಟ್ಟಣದಲ್ಲಿ ನೇಪಾಳಿ ಕರೆನ್ಸಿಗೆ ಮೊರೆ
ಭಾರತ- ನೇಪಾಳ ಗಡಿ ಭಾಗದಲ್ಲಿ ಬರುವ ಬಿಹಾರ ಚಂಪರಣ ಜಿಲ್ಲೆಯ ರಕ್ಸುವಲ್ ಪಟ್ಟಣದಲ್ಲಿ ನೋಟು ಅಮಾನ್ಯದ ಬಗ್ಗೆ ಜನರಲ್ಲಿ ವಿಭಿನ್ನ ಅಭಿಪ್ರಾಯ ಇದೆ.
ಪಟ್ಟಣದ ಬಜಾರ್‌ನಲ್ಲಿ ಒಂದು ಸುತ್ತುಹೊಡೆದರೆ ಇದು ಬೀರಿದ ಪರಿಣಾಮ ಗೋಚರವಾಗುತ್ತದೆ. ಬಟ್ಟೆ ಮಾರಾಟ, ಗೃಹಬಳಕೆ ವಸ್ತುಗಳು, ಆಭರಣಗಳ ಮಳಿಗೆಗಳಿಂದ ತುಂಬಿರುವ ಈ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಭಣಗುಡುತ್ತಿವೆ. ಅಂಗಡಿಗಳ ಒಳಗೆ ಸಿಬ್ಬಂದಿ ಕೆಲಸವಿಲ್ಲದೇ ಹರಟುತ್ತಾ ಕುಳಿತಿರುವ ದೃಶ್ಯ ಕಂಡುಬಂತು. ‘‘ಮಾರ್ಕೆಟ್ ಮೇ ಜಾನ್ ನಹಿ ಹೈ’’ ಎಂದು ರಸ್ತೆಬದಿ ಬೆಲ್ಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹತಾಶೆಯಿಂದ ನುಡಿದರು. ಮಾರುಕಟ್ಟೆ ಅಕ್ಷರಶಃ ನಿಸ್ತೇಜ.
ರಸ್ತೆಯಲ್ಲಿ ಮತ್ತಷ್ಟು ಕೆಳಗೆ ಹೋಗಿ ತರಕಾರಿ ಮಾರುಕಟ್ಟೆ ತಲುಪಿದಾಗ ಜೀವಂತಿಕೆ ಕಾಣಿಸಿಕೊಂಡಿತು. ಗೃಹಬಳಕೆ ವಸ್ತುಗಳಿಗಿಂತ ಭಿನ್ನವಾಗಿ, ಚಿಲ್ಲರೆ ಮಾರಾಟಗಾರರಿಗೆ ಇಲ್ಲಿ ದರ ಇಳಿಸುವ ಅವಕಾಶ ಕಡಿಮೆ. ಭಾರತದ ಆಹಾರ ಆರ್ಥಿಕತೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೆಲೆ ಕುಸಿದಿದೆ. ಆದ್ದರಿಂದ ಇಲ್ಲಿ ಚಟುವಟಿಕೆ ಹೆಚ್ಚಿದೆ. ಒಬ್ಬ ಮನುಷ್ಯ ಮಿನಿ ಟ್ರಕ್‌ನಿಂದ ಕೋಳಿಗಳನ್ನು ಇಳಿಸುತ್ತಿದ್ದ. ಮತ್ತೊಬ್ಬ ಕೂಲಿ ಬೈಕ್‌ಗೆ ಹೂಕೋಸಿನ ಮೂಟೆ ಹೇರಿಕೊಂಡು ಬಂದ. ಜನ ತರಕಾರಿಗಳ ಬೆಲೆ ಕೇಳುತ್ತಾ ಅಲೆಯುತ್ತಿದ್ದರು.
ಇಷ್ಟಾಗಿಯೂ ವಹಿವಾಟು ಮಾಮೂಲಿಗಿಂತ ಕಡಿಮೆ. ‘‘ಮಾಮೂಲಿಯಾಗಿ ನಡೆಯುವ ವ್ಯಾಪಾರದ ಅರ್ಧದಷ್ಟು ವ್ಯಾಪಾರವಾಗುತ್ತಿದೆ’’ ಎಂದು ರಸ್ತೆ ಬದಿ ಪ್ಲಾಸ್ಟಿಕ್ ಡೇರೆಯಲ್ಲಿ ಮೆಂತೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಉತ್ತರಿಸಿದ. ‘‘ಇಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಜನ 500 ರೂಪಾಯಿಯ ನೋಟಿನೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದಾರೆ. ಅವರನ್ನು ಹೊರ ಕಳುಹಿಸುವುದೇ ನನ್ನ ಕೆಲಸವಾಗಿ ಬಿಟ್ಟಿದೆ’’ ಎಂದು ಹೇಳಿದರು.
ಸಾಮಾನ್ಯವಾಗಿ 500 ರೂಪಾಯಿ ಆದಾಯ ಗಳಿಸುತ್ತಿದ್ದ ಇವರು ಇದೀಗ 200 ರೂಪಾಯಿ ಗಳಿಸುತ್ತಿದ್ದಾರೆ. ಈ ಗಡಿ ಪಟ್ಟಣದಲ್ಲಿ ವಹಿವಾಟು ತೀವ್ರವಾಗಿ ಕುಸಿದಿರುವುದಕ್ಕೆ ಇದು ನಿದರ್ಶನ.
ಇಲ್ಲಿ ದ್ರವ್ಯತೆ ಸ್ವಲ್ಪಮಟ್ಟಿಗೆ ಉಳಿದುಕೊಂಡಿದೆ. ಪಟ್ಟಣದ ಮುಖ್ಯ ಬೀದಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಒಳಗೆ ಕಾಲಿಟ್ಟರೆ, ದೊಡ್ಡ ಸರದಿ ಸಾಲು ಸ್ವಾಗತಿಸಿತು. ಇದು 1980ರ ದಶಕದ ರೈಲ್ವೆ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ಅನ್ನು ನೆನಪಿಸಿತು.
ಸಣ್ಣ ವ್ಯಾಪಾರಿಗಳು ನೇಪಾಳಿ ಕರೆನ್ಸಿ ಮೂಲಕ ವಹಿವಾಟು ಮಾಡುತ್ತಿದ್ದರು. ಆದರೆ ದೊಡ್ಡ ವ್ಯಾಪಾರಸ್ಥರು ಹೊಡೆತ ತಿಂದಿದ್ದಾರೆ. ಮನೋಜ್ ಕುಮಾರ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ‘ಶ್ರೀ ಸಂಗಮ್ ಟ್ರಾನ್ಸ್ ಪೋರ್ಟ್’ ಎಂಬ ಟ್ರಕ್ ಘಟಕವನ್ನು ಇವರು ಹೊಂದಿದ್ದಾರೆ. ಒಂದು ಟ್ರಕ್ ಓಡಿಸಲು ಇವರಿಗೆ ಕನಿಷ್ಠ 25 ಸಾವಿರ ರೂಪಾಯಿ ಬೇಕು. ‘‘ಸರಕಾರ ಚಾಲ್ತಿ ಖಾತೆಯಿಂದ ಗರಿಷ್ಠ ವಾರಕ್ಕೆ 50 ಸಾವಿರ ರೂಪಾಯಿ ಹಣ ಪಡೆಯಲು ಅವಕಾಶ ಕಲ್ಪಿಸಿದೆ. ಆದ್ದರಿಂದ ವಾರಕ್ಕೆ ಎರಡು ಟ್ರಕ್‌ಗಳಿಗಿಂತ ಹೆಚ್ಚು ಟ್ರಕ್‌ಗಳನ್ನು ಅವರು ಹೊರಕ್ಕೆ ಕಳುಹಿಸುವಂತಿಲ್ಲ. ಆದರೆ ಅದು ಕೂಡಾ ಅಸಾಧ್ಯ’’ ಎಂದು ಅವರು ಹೇಳುತ್ತಾರೆ. ‘‘ಏಕೆಂದರೆ ಬ್ಯಾಂಕ್‌ಗಳಲ್ಲಿ ಹಣ ಇಲ್ಲ. ಬ್ಯಾಂಕ್‌ಗಳು ಕೊಟ್ಟದ್ದನ್ನಷ್ಟೇ ನಾವು ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ’’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಪರ- ವಿರೋಧ
ಇಲ್ಲಿ ಪತ್ರಕರ್ತರು ಜನಸಾಮಾನ್ಯರನ್ನು ಕುರಿತು, ಸರಕಾರದ ನೋಟು ಅಮಾನ್ಯ ನಿರ್ಧಾರದ ಬಗ್ಗೆ ಅಭಿಪ್ರಾಯ ಕೇಳಿದರೆ, ಬಹುತೇಕ ಮಂದಿ ಉತ್ತರಿಸದೇ ನುಣುಚಿಕೊಂಡರು. ತಮ್ಮ ಭಾವನೆಗಳನ್ನು ಹಲವರು ನಿಗ್ರಹಿಸಿಕೊಂಡಿದ್ದರು. ಆದರೂ ಒಣಮೆಣಸು ಸಗಟು ವ್ಯಾಪಾರಿ ಸೋನಾಲಾಲ್ ಅವರಂಥ ಕೆಲವರು ಮಾತ್ರ ತಮ್ಮ ಸಿಟ್ಟನ್ನು ಬಹಿರಂಗವಾಗಿ ಹೊರಹಾಕಿದರು. ‘‘ರೈತರು ಹಣವನ್ನು ಬ್ಯಾಂಕಿನಲ್ಲಿ ಇಡಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಬ್ಯಾಂಕುಗಳಲ್ಲಿ ಇದೀಗ ವಹಿವಾಟು ಇವರಿಗೆ ಸರಾಗವಾಗಿ ಇದೆಯೇ?’’ ಎಂದು ಅವರು ಖಾರವಾಗಿ ಪ್ರಶ್ನಿಸುತ್ತಾರೆ. ‘‘ರೈತರು 49 ಸಾವಿರಕ್ಕಿಂತ ಹೆಚ್ಚು ಜಮಾ ಮಾಡಬೇಕಾದರೆ, ಪಾನ್ ಸಂಖ್ಯೆ ನಮೂದಿಸಬೇಕು. ಎಷ್ಟು ಮಂದಿ ರೈತರಲ್ಲಿ ಪಾನ್‌ಕಾರ್ಡ್ ಇದೆ?’’ ಎನ್ನುವುದು ಅವರ ಪ್ರಶ್ನೆ.
ಇದು ಖಂಡಿತವಾಗಿಯೂ ಮೌಲಿಕ ಅಂಶ. ಡಿಸೆಂಬರ್ 30ರ ಬಳಿಕ ಸರಕಾರ 500 ಹಾಗೂ 1000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದಾದರೆ, ರೈತರು, ಅಲೆಮಾರಿ ಕಾರ್ಮಿಕರು ಹಾಗೂ ಇತರರಿಗೆ ಪಾನ್ ಸಂಖ್ಯೆ ಇರುವುದಿಲ್ಲ. ಅದನ್ನು ಪಡೆಯಲು ಸಮಯಾವಕಾಶವೂ ಇವರಿಗೆ ಇಲ್ಲ. ಈ ಅಮಾನ್ಯಗೊಂಡ ನೋಟುಗಳ ವಿನಿಮಯವನ್ನೂ ಸರಕಾರ ಸ್ಥಗಿತಗೊಳಿಸುವ ಹಿನ್ನೆಲೆಯಲ್ಲಿ, ತಮ್ಮ ನಗದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದಷ್ಟೇ ಅವರಿಗೆ ಉಳಿದಿರುವ ಮಾರ್ಗ.
ಲಾಲ್ ಹೇಳುವಂತೆ, ‘‘ಈ ನೋಟು ಅಮಾನ್ಯ ಯೋಚನೆಯೇ ಸಮಂಜಸವಲ್ಲ. 2000 ರೂಪಾಯಿ ನೋಟುಗಳನ್ನು ಜಾರಿಗೆ ತಂದಿರುವುದು ಮೂರ್ಖತನದ ನಿರ್ಧಾರ. ಇದಕ್ಕೆ ಚಿಲ್ಲರೆ ನೀಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಎಲ್ಲರೂ ನಗದು ರಹಿತ ವ್ಯವಸ್ಥೆಯತ್ತ ಹೊರಳುವ ಮಾತುಗಳನ್ನಾಡುತ್ತಿದ್ದಾರೆ’’ ಎಂದು ಅವರು ವ್ಯಂಗ್ಯವಾಡಿದರು. ‘‘ಪ್ರಧಾನಿ ಚಹಾ ಮಾರುತ್ತಿದ್ದೆ ಎಂದು ಹೇಳುತ್ತಿದ್ದಾರೆ. ಆದರೆ ಚಹಾಗೆ ದುಡ್ಡು ಕೊಡಲು ಯಾರಾದರೂ ಕಾರ್ಡ್ ಸ್ವೈಪ್ ಮಾಡುವುದನ್ನು ಅವರು ನೋಡಿದ್ದಾರೆಯೇ’’ ಎನ್ನುವುದು ಅವರ ಪ್ರಶ್ನೆ.
‘‘ನಮ್ಮನ್ನು ಮರೆತು ಬಿಡಿ. ಈ ನಗದು ಸಂಕಷ್ಟದಿಂದ ತೀವ್ರ ಹಾನಿಗೀಡಾಗಿರುವವರು ನಗರ ಪ್ರದೇಶಗಳ ಬಡವರು. ಗ್ರಾಮೀಣ ಪ್ರದೇಶದಲ್ಲಿ ಜನ ಇನ್ನೂ ಆಹಾರ ಹಾಗೂ ನೀರು ಕಾಣುತ್ತಿದ್ದಾರೆ. ಆದರೆ ನಗರಗಳಲ್ಲಿ, ಪ್ರತಿಯೊಂದಕ್ಕೂ ಹಣ ಬೇಕು. ಮನೆಯಿಂದ ಹಿಡಿದು, ಊಟ, ನೀರಿನವರೆಗೆ ಎಲ್ಲಕ್ಕೂ ಹಣ ಬೇಕು ಎನ್ನುವುದು’’ ಅವರ ವಾದ.
ಆದರೆ ಇತರ ಕೆಲವರು ಇನ್ನೂ ತಾಳ್ಮೆಯಿಂದ ಇದ್ದಾರೆ. ‘‘ಪ್ರಧಾನಿ ನರೇಂದ್ರ ಮೋದಿ, ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ನವೆಂಬರ್ 8ರಂದು ಹೇಳಿದಂತೆ ಪರಿಸ್ಥಿತಿ ಸುಧಾರಿಸಲು 50 ದಿನಗಳ ಕಾಲಾವಕಾಶ ಬೇಕು’’ ಎಂಬ ವಾದ ಮುಂದಿಡುತ್ತಾರೆ. ‘‘ಅಲ್ಲಿಯವರೆಗೂ ಕಾದು ನೋಡೋಣ. ಆಗ ನಾವು ನೋವು ಅನುಭವಿಸಿದ್ದು ಸಾರ್ಥಕವೇ ಎನ್ನುವುದು ತಿಳಿಯುತ್ತದೆ’’ ಎಂಬ ವಿಶ್ಲೇಷಣೆ ಅವರದ್ದು.
ಇನ್ನು ಕೆಲವರು ಕೇಂದ್ರ ಸರಕಾರದ ನೀತಿಗೆ ಪರವಾಗಿರುವವರೂ ಇದ್ದಾರೆ. ಉದಾಹರಣೆಗೆ ಅಜಯ್ ತಿವಾರಿ ಎಂಬ ಬಾಳೆಹಣ್ಣು ಸಗಟು ವ್ಯಾಪಾರಿ, ಬಿಜೆಪಿಯ ಕಟ್ಟಾ ಅಭಿಮಾನಿ. ಅವರು ರಾಜ್ಯದ ರಾಜಕಾರಣಿಗಳ ಬಗ್ಗೆ ಕಿಡಿ ಕಾರುತ್ತಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ವಿರುದ್ಧ ಕೆಂಡ ಕಾರುತ್ತಾರೆ. ಆದರೆ ಅವರು ನೋಟ್‌ಬಂದಿಯನ್ನು ಬೆಂಬಲಿಸಲು, ಅವರ ಪಕ್ಷದ ಬಗೆಗಿನ ಒಲವಿಗಿಂತಲೂ ಭಿನ್ನವಾದ ಅಂಶವಿದೆ. ಅವರು ತಮ್ಮ ನೆರೆಯ ಒಬ್ಬ ವೈದ್ಯರ ಹೆಸರನ್ನು ಉಲ್ಲೇಖಿಸುತ್ತಾರೆ. ಅವರ ಬಳಿ 36 ಕೋಟಿ ರೂಪಾಯಿ ಅಕ್ರಮ ಸಂಪತ್ತು ಇತ್ತು. ಕೇಂದ್ರದ ಘೋಷಣೆ ಕೇಳಿದ ತಕ್ಷಣ ಹೃದಯಾಘಾತಕ್ಕೆ ಒಳಗಾದ ಅವರು ಮೃತಪಟ್ಟರು. ಇದು ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಂಡು ಕಪ್ಪುಹಣ ಕೂಡಿಟ್ಟವರ ಸ್ಥಿತಿ. ‘‘ಯಹ್ ಬಹುತ್ ಅಚ್ಚಾ ಹುವಾ’’ ಎಂದು ಅವರು ಹೇಳುತ್ತಾರೆ.
‘‘ತಮಗೆ ಆಗಿರುವ ಅನಾನುಕೂಲಗಳ ಬಗ್ಗೆ ದೂರುವವರು, ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ’’ ಎನ್ನುವುದು ಅವರ ವಾದ. ಹಲವರಿಗೆ ಆಗಿರುವ ಆಘಾತದ ಬಗ್ಗೆ ಪ್ರಶ್ನಿಸಿದಾಗ, ‘‘ಒಂದು ಭೂಕಂಪ ಅಥವಾ ಪ್ರವಾಹ ಸಂಭವಿಸಿದಾಗ ಇಂಥ ಆಘಾತ ಆಗುವುದಿಲ್ಲವೇ?’’ ಎಂದು ಪ್ರಶ್ನಿಸುತ್ತಾರೆ.
ಕೃಪೆ: ಠ್ಚ್ಟಟ್ಝ್ಝ.ಜ್ಞಿ