ಪೊಲೀಸ್-ಮನಪಾ ಶೀತಲ ಸಮರ, ಸಿನೆಮಾಕ್ಕೂ ನೋಟ್ ನಿಷೇಧದ ಪರಿಣಾಮ
ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಕಾಫಿ ವಿದ್ ವೀಸಿ
ಮುಂಬೈ ವಿಶ್ವವಿದ್ಯಾನಿಲಯವು(ಎಂ.ಯು.)ತನ್ನ ವಿದ್ಯಾರ್ಥಿಗಳ ಪ್ರಶ್ನೆಗಳು ಮತ್ತು ಅವರ ಸಮಸ್ಯೆಗಳನ್ನು ವೈಸ್ ಚಾನ್ಸಲರ್ ತನಕ ತಲುಪಿಸುವುದಕ್ಕೆ ‘ಕಾಫಿ ವಿದ್ ವೀಸಿ’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ. ಇದರಂತೆ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಲರ್ ಡಾ. ಸಂಜಯ್ ದೇಶ್‌ಮುಖ್ ಪ್ರತೀ ತಿಂಗಳು ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುತ್ತಾರೆ ಮತ್ತು ಅವರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಿದ್ದಾರೆ.
ಕಳೆದ ವಾರ ವಿಶ್ವವಿದ್ಯಾನಿಲಯದ ಫೋರ್ಟ್ ಕ್ಯಾಂಪಸ್‌ನಲ್ಲಿ ವೈಸ್ ಚಾನ್ಸಲರ್ ಡಾ. ಸಂಜಯ್ ದೇಶಮುಖ್ ಅವರು ದಕ್ಷಿಣ ಮುಂಬೈ ಮತ್ತು ಮುಂಬೈ ಸೆಂಟ್ರಲ್‌ನ 20 ಕಾಲೇಜುಗಳ 450 ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಈ ಕಾರ್ಯಕ್ರಮ ವಿದ್ಯಾಥಿಗಳಿಗೆ ಎದುರಾಗುವ ಸಮಸ್ಯೆಗಳನ್ನು ದೂರಗೊಳಿಸಲು ಹೆಚ್ಚಿನ ನೆರವು ನೀಡಲಿದೆ. ಇದು ‘ಮೀಲ್ ಕಾ ಪತ್ಥರ್’ ಎಂದು ಸಾಬೀತಾಗಲಿದೆ. ವಿಶ್ವವಿದ್ಯಾನಿಲಯ ಮತ್ತು ಅದಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಓದುವ ವಿದ್ಯಾಥಿಗಳ ಸಂಖ್ಯೆ ಏಳು ಲಕ್ಷಕ್ಕೂ ಅಧಿಕವಿದೆ ಎಂದಿದ್ದಾರೆ ವೈಸ್ ಚಾನ್ಸಲರ್ ದೇಶ್‌ಮುಖ್.
ಈ ಬಾರಿ ಗ್ರಾಜ್ಯುಯೇಶನ್ ಮತ್ತು ಪೋಸ್ಟ್ ಗ್ರಾಜ್ಯುಯೇಶನ್‌ನ 384 ಪಠ್ಯಕ್ರಮಗಳನ್ನು ಬದಲಿಸಲಾಗಿದೆ. ದೇಶದಲ್ಲಿ ಇಂತಹ ಪ್ರಯೋಗವನ್ನು ನಡೆಸಿರುವ ಕೀರ್ತಿಗೆ ಮುಂಬೈ ವಿ.ವಿ. ಪಾತ್ರವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅನೇಕ ಕಾಲೇಜುಗಳಲ್ಲಿ ವೈ-ಫೈ ಸೇವೆ ಲಭ್ಯಗೊಳಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಎಲ್ಲಾ ದಾಖಲೆ ಪತ್ರಗಳು ಡಿಜಿಟಲ್ ಲಾಕರ್‌ನ ಮೂಲಕ ಉಪಲಬ್ಧ್ದಗೊಳಿಸಲಾಗುವುದು. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಮತ್ತು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನೂ ಲಭ್ಯಗೊಳಿಸಲಾಗುವುದು ಎಂದಿದ್ದಾರೆ ವೀಸಿ ದೇಶ್‌ಮುಖ್.
* * *
ರಾಜಕಾರಣಿಗಳಿಗೆ ದೊರೆಯಲಿ ಆರ್‌ಟಿಐ ತರಬೇತಿ
ನಗರ ಸೇವಕರು, ಶಾಸಕರು, ಜನ ಪ್ರತಿನಿಧಿಗಳು ಮತ್ತು ರಾಜಕೀಯ ರಂಗದ ಗಣ್ಯರಿಗೆ ಆರ್.ಟಿ.ಐ. ಕಾನೂನಿನ ಕುರಿತಂತೆ ಮಾಹಿತಿಗಳು, ಹೆಚ್ಚಿನ ವಿವರಗಳು ತಿಳಿದಿರುವುದಿಲ್ಲ. ಆರ್.ಟಿ.ಐ. ವಿಶೇಷಜ್ಞ ಅನಿಲ್ ಗಲಗಲಿ ಅವರು ಇದಕ್ಕಾಗಿ ಮಹಾರಾಷ್ಟ್ರ ಸರಕಾರಕ್ಕೆ ತರಬೇತಿ ನೀಡುವಂತಹ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದಾರೆ.
ಅವರು ಮನಿಲೈಫ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಈ ಸಲಹೆ ನೀಡಿದರು. ‘‘ಅನೇಕ ಬಾರಿ ರಾಜಕೀಯ ರಂಗದವರಿಗೆ ಆರ್.ಟಿ.ಐ. ಕುರಿತಂತೆ ಯಾವ ತಿಳುವಳಿಕೆಯೂ ಇರುವುದಿಲ್ಲ’’ ಎಂದ ಅವರು ‘‘ಈ ವರ್ಷ 12 ಆರ್.ಟಿ.ಐ. ಕಾರ್ಯ ಕರ್ತರು ಸಾವನ್ನಪ್ಪಿದ್ದಾರೆ’’ ಎಂದೂ ಆತಂಕ ವ್ಯಕ್ತಪಡಿಸಿದರು.
* * *
ರೈಲು ತಪ್ಪಿದ ರಾತ್ರಿ ಪ್ರಯಾಣಿಕರಿಗೆ ದ್ವಿತೀಯ ‘ಲೈಫ್ ಲೈನ್’ ನೆರವು
ಮುಂಬೈಕರ್‌ಗೆ ಈಗ ಖುಷಿಯ ಸುದ್ದಿಯೊಂದು ಕೇಳಿ ಬಂದಿದೆ. ಇನು ್ನಮುಂದೆ ರಾತ್ರಿಗೆ ಕೊನೆಯ ಲೋಕಲ್ ರೈಲು ಹೊರಟು ಹೋಗಿಯಾಯಿತು ಎಂದರೆ ಚಿಂತೆ ಮಾಡುವ ಅಗತ್ಯವಿಲ್ಲ. ಬೆಸ್ಟ್ ಸಾರಿಗೆ ಸಂಸ್ಥೆಯ ಬಸ್ಸುಗಳು ಅಂತಹ ಪ್ರಯಾಣಿಕರನ್ನು ಮನೆಗೆ ತಲುಪಿಸಲು ನೆರವಾಗುವುದು.
ಬೆಸ್ಟ್ ಬಸ್ಸು ಇದೀಗ ರಾತ್ರಿಗಾಗಿ ನಾಲ್ಕು ಬಸ್ಸುಗಳನ್ನು ರಸ್ತೆಗಿಳಿಸಿವೆ. ದಾದರ್ ಪೂರ್ವದಲ್ಲಿ ಈ ಬಸ್ಸುಗಳಿಗೆ ಮೊನ್ನೆ ಹಸಿರು ನಿಶಾನೆ ತೋರಿಸಲಾಯಿತು. ಬೆಸ್ಟ್ ಸಾರಿಗೆ ವಿಭಾಗದ ಮತ್ತು ಬೆಸ್ಟ್ ಸಮಿತಿ ಅಧ್ಯಕ್ಷ ಮೋಹನ್ ಮಿಠ್‌ಬಾವ್ಕರ್ ಮೊನ್ನೆ ತಡರಾತ್ರಿಗೆ ದಾದರ್ ಪೂರ್ವದ ಬಸ್ ಡಿಪೋದಿಂದ ಈ ಸೇವೆಯ ಶುಭಾರಂಭ ಮಾಡಿದರು. ಇಂತಹ ಬಸ್ಸುಗಳು ನಗರದಲ್ಲಿ ರಾತ್ರಿಗೆ ಕೊನೆಯ ಲೋಕಲ್ ರೈಲು ತಪ್ಪಿ ಹೋದವರಿಗೆ ವರದಾನವಾಗಲಿದೆ.
ಅನೇಕ ಬಾರಿ ಕೊನೆಯ ಲೋಕಲ್ ರೈಲು ತಪ್ಪಿಹೋದರೆ ಬೆಳಗ್ಗಿನ ತನಕ ಅದೇ ಸ್ಟೇಷನ್‌ನಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೀಗ ದಾದರ್ ಟಿ.ಟಿ.ಯಿಂದ ರಾತ್ರಿಗೆ ನಾಲ್ಕು ಬಸ್ಸುಗಳನ್ನು ಬೆಸ್ಟ್ ಪ್ರಯಾಣಿಕರಿಗಾಗಿ ಚಲಾಯಿಸುತ್ತಿದ್ದು ನವಿಮುಂಬೈ, ಮುಲುಂದ್, ಓಶಿವಾರ ಮತ್ತು ಗೊರಾಯಿ ಈ ತಾಣಗಳಿಗೆ ಬಸ್ಸುಗಳು ತೆರಳುವುದು. ಸದ್ಯಕ್ಕೆ ನಾಲ್ಕು ಬಸ್ಸುಗಳನ್ನು ರಸ್ತೆಗಿಳಿಸಿದ್ದು ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ ಇನ್ನಷ್ಟು ಬಸ್ಸುಗಳನ್ನು ಓಡಿಸಲಿದೆ. ಇವೆಲ್ಲ ರಾತ್ರಿ 1.30 ರ ನಂತರವೇ ಓಡಲಿದೆ.
ಮುಂಬೈಕರ್ ಮೊದಲ ‘ಲೈಫ್‌ಲೈನ್’ ಎಂದು ಲೋಕಲ್ ರೈಲುಗಳಿಗೆ ಮಾನ್ಯತೆ ನೀಡಿದರೆ ಇದೀಗ ದ್ವಿತೀಯ ‘ಲೈಫ್‌ಲೈನ್’ ಎಂದು ಬೆಸ್ಟ್ ಬಸ್ಸುಗಳನ್ನು ಕರೆಯಲಾಗುತ್ತದೆ. ದಾದರ್ (ಮಧ್ಯ ಮುಂಬೈ) ರೈಲ್ವೆ ಸ್ಟೇಷನ್‌ಗೆ ರಾತ್ರಿ 1.21ಕ್ಕೆ ಕೊನೆಯ ಲೋಕಲ್ ರೈಲು ಹಾದು ಹೋಗುತ್ತದೆ. ಇದು ತಪ್ಪಿದರೆ ಮತ್ತೆ ದೂರದ ಉಪನಗರಗಳಿಗೆ ಹೋಗುವ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಸಧ್ಯಕ್ಕೆ ಇರಲಿಲ್ಲ.
* * *
ಮನಪಾ ಮತ್ತು ಪೊಲೀಸರ ನಡುವೆ ಶೀತಲ ಸಮರ
ಥಾಣೆ ಮಹಾನಗರ ಪಾಲಿಕೆ ಈ ದಿನಗಳಲ್ಲಿ ಅನಧಿಕೃತ ಕಟ್ಟಡ - ಶೋರೂಮ್, ಗ್ಯಾರೇಜ್, ಹೊಟೇಲ್, ಬಾರ್, ಲಾಡ್ಜ್.... ಇತ್ಯಾದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಕೆಡವಿ ಹಾಕುವ ಕಾರ್ಯ ಭರದಿಂದ ಕೈಗೊಂಡಿದೆ. ನೂರಾರು ಅನಧಿಕೃತ ನಿರ್ಮಾಣಗಳನ್ನು ಬುಲ್ಡೋಜರ್ ಮೂಲಕ ಕೆಡವಿ ಹಾಕಿದೆ. ಈ ಕಾರ್ಯಕ್ರಮದಲ್ಲಿ ಥಾಣೆ ಮನಪಾ ಕಮಿಶನರ್ ಸಂಜೀವ ಜೈಸ್‌ವಾಲ ಮತ್ತು ಇನ್ನಿತರ ಮನಪಾ ಅಧಿಕಾರಿಗಳು ಕಠಿಣ ನಿಲುವು ತಳೆದಿದ್ದಾರೆ. ಇಲ್ಲಿ ಬಿಜೆಪಿ ಶಾಸಕ ಸಂಜಯ್ ಕೇಲ್ಕರ್ ಅವರ ಕಾರ್ಯಾಲಯ ಕೂಡಾ ಸಿಕ್ಕಿಕೊಂಡಿದ್ದು ಮನಪಾದ ಅಕ್ರಮ ಕಟ್ಟಡ ನಾಶ ಪಡೆಯು ಅದನ್ನೂ ಕೆಡವಿ ಹಾಕಿತು. ಮನಪಾ ಕಮಿಶನರ್ ನಗರದ ಅನೇಕ ಅಕ್ರಮ ಲೇಡಿಸ್ ಬಾರ್‌ಗಳನ್ನು ಕೆಡವಿ ಹಾಕಲು ಆದೇಶಿಸಿದ್ದಾರೆ. ಈ ಬಾರ್-ಲಾಡ್ಜ್‌ಗಳಲ್ಲಿ ಸತ್ಯಮ್ ಲಾಡ್ಜ್ ಕೆಡವಿದಾಗ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂತು. ಎದುರಿಗೆ ಚಿಕ್ಕದಾಗಿ ಕಾಣುವಂತಹ ಈ ಲಾಡ್ಜ್ ಕೆಡವಿದಾಗ ಮನಪಾ ಅಧಿಕಾರಿಗಳಿಗೆ ಆಶ್ಚರ್ಯ. ಇದರೊಳಗೆ ಬಾರ್‌ನ ಕೆಳ ಅಂತಸ್ತಿನಲ್ಲಿ ಅನಧಿಕೃತ ರೂಪದಿಂದ 290 ಕೋಣೆಗಳು ನಿರ್ಮಿಸಲಾಗಿತ್ತು. ಇದು ಪ್ರಥಮ ಘಟನೆ ಇಲ್ಲಿ. ಶರಾಬು, ಸಿಗರೇಟು.... ಇತ್ಯಾದಿ ಅನೈತಿಕ ಚಟುವಟಿಕೆಗಳಿಗೆ ಆ ಕೋಣೆಗಳನ್ನು ಬಳಸುತ್ತಿದ್ದ ಅಂಶ ಬೆಳಕಿಗೆ ಬಂತು.
ಮಹಾನಗರ ಪಾಲಿಕೆಯ ಹತ್ತು ಟೀಮ್ ಸಹಿತ 20 ಜೆಸಿಬಿಗಳನ್ನು ಅನಧಿಕೃತ ಕಟ್ಟಡ ಕೆಡವಿ ಹಾಕಲು ಬಳಸಲಾಗಿದೆ. ಸತ್ಯಮ್ ಲಾಡ್ಜ್‌ನಲ್ಲಿ ಅಷ್ಟೊಂದು ಕೋಣೆಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಲಾಡ್ಜ್ ಮಾಲಕರು ಕೆಲವು ಕೋಣೆಗಳನ್ನು ಮಾತ್ರ ಉಲ್ಲೇಖಿಸಿ ತೆರಿಗೆ ವಂಚನೆ ಮಾಡುತ್ತಿದ್ದರಲ್ಲದೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆ-ಸಂಶಯಗಳು ಎದ್ದಿವೆ. ಭಾರೀ ಚರ್ಚೆಯ ನಂತರ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಪರಸ್ಪರ ಮತ್ತೊಬ್ಬರನ್ನು ಇದಕ್ಕೆ ಬೊಟ್ಟು ಮಾಡುತ್ತಿದೆ. ಅತ್ತ ವರಿಷ್ಠ ಪೊಲೀಸ್ ನಿರೀಕ್ಷಕ (ವರ್ತಕ್ ನಗರ ಠಾಣೆ) ಕಿಸನ್ ಗಾವಿತ್‌ರನ್ನು ಥಾಣೆ ಪೊಲೀಸ್ ಮುಖ್ಯಾಲಯದ ನಿರ್ಯಂತ್ರಣ ಕಕ್ಷೆಗೆ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಎನ್.ಎಂ. ಸಾತ್‌ದಿವೆ ಅವರು ಬಂದಿದ್ದಾರೆ. ಸತ್ಯಮ್ ಲಾಡ್ಜ್‌ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅನೈತಿಕ ಚಟುವಟಿಕೆಗೆ ಮೊನ್ನೆ ಮೊನ್ನೆ ತನಕವೂ ಸಂರಕ್ಷಣೆ ನೀಡಿದವರಲ್ಲಿ ಕೆಲವು ಮನಪಾ ಮತ್ತು ಪೊಲೀಸ್ ಅಧಿಕಾರಿಗಳ ಸಹಾಯವೇ ಕಾರಣವೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಆಶ್ಚರ್ಯದ ಸಂಗತಿ ಎಂದರೆ ಥಾಣೆ ಮನಪಾ ಆಯುಕ್ತ ಸಂಜೀವ ಜೈಸ್‌ವಾಲ ಅವರು ಈ ಲಾಡ್ಜ್‌ನಲ್ಲಿ 290 ಕೋಣೆಗಳನ್ನು ಕೆಡವಿಹಾಕಲಾಗಿದೆ ಎಂದರೆ, ಪೊಲೀಸ್ ಇಲಾಖೆಯ ವಲಯ-ಇದರ ಉಪಾಯುಕ್ತ ಸುನೀಲ್ ಲೋಖಂಡೆ ಹೇಳುತ್ತಾರೆ -ಈ ಲಾಡ್ಜ್‌ನಲ್ಲಿ ಕೇವಲ 51 ಕೋಣೆಗಳು ಮಾತ್ರ ಇದ್ದವು ಎಂದು. ಇದೀಗ ಥಾಣೆ ಪೊಲೀಸ್ ಕಮಿಶನರ್ ಪರಮ್ ಬೀರ್‌ಸಿಂಗ್ ಪೊಲೀಸ್ ನಿರೀಕ್ಷಕ ಗಾವಿತ್‌ರನ್ನು ವರ್ಗಾವಣೆ ಮಾಡಿದ್ದಾರೆ. ಮಹಾನಗರ ಪಾಲಿಕೆ ಮತ್ತು ಪೊಲೀಸರು ಇದೀಗ ಇಂತಹ ಅನಧಿಕೃತ ಲಾಡ್ಜ್ - ಬಾರ್‌ಗಳಿಗೆ ಕಾರಣ ಪರಸ್ಪರರು ಎನ್ನುತ್ತಾ ಇನ್ನೊಬ್ಬರತ್ತ ಬೆರಳು ತೋರಿಸಿ ನಗೆ ಪಾಟಲಿಗೀಡಾಗುತ್ತಿದ್ದಾರೆ.
* * *
ನೋಟ್ ನಿಷೇಧ: ಸಿನೆಮಾ ವ್ಯವಸಾಯದ ಪರದಾಟ
ಪ್ರಧಾನಿಯವರ ದೊಡ್ಡನೋಟ್‌ಗಳ ರದ್ದತಿಯ ನಿರ್ಧಾರದ ನಂತರ ಮುಂಬೈಯ ಸಿನೆಮಾ ವ್ಯವಸಾಯ ಕೂಡಾ ಮಂದಗತಿಯಲ್ಲಿ ಸಾಗುತ್ತಿದೆ. ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳ ವ್ಯವಸಾಯದಲ್ಲಿ 40 ರಿಂದ 60 ಶೇಕಡಾ ಮತ್ತು ಏಕಪರದೆಯ ಥಿಯೇಟರ್‌ಗಳಲ್ಲಿ ಸುಮಾರು 70 ರಿಂದ 80 ಪ್ರತಿಶತ ದಂಧೆ ಇಳಿಕೆಯಾಗಿರುವುದು ದಾಖಲಾಗಿದೆ. ಕಳೆದ ವಾರದ ತನಕ ಈ ದಂಧೆಯಲ್ಲಿ 300 ಕೋಟಿ ರೂಪಾಯಿಯ ಹೊಡೆತ ಬಿದ್ದಿದೆ ಎನ್ನುತ್ತಾರೆ ವಿತರಕರು. ದೇಶದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳ ಸಂಖ್ಯೆ ಸುಮಾರು 3,500 ಮತ್ತು ಏಕಪರದೆಯ ಥಿಯೇಟರ್‌ಗಳ ಸಂಖ್ಯೆ ಏಳು ಸಾವಿರಕ್ಕೂ ಹೆಚ್ಚಿದೆ. ಹಾಗಿದ್ದೂ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಕೂಡಾ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಆದರೆ ಏಕ ಪರದೆಯ ಥಿಯೇಟರ್‌ಗಳಲ್ಲಿ ಟಿಕೆಟ್ ಮೂಲಕ ನಗದು ಸ್ವೀಕರಿಸುತ್ತಾರೆ. ಇಂತಹ ಥಿಯೇಟರ್‌ಗಳಿಗೆ ಕೆಳಮಧ್ಯಮ ವರ್ಗದವರು (ಅರ್ಥಾತ್ ಇತ್ತೀಚಿನ ದಿನಗಳಲ್ಲಿ ನಗದು ಹಣಕ್ಕಾಗಿ ಬ್ಯಾಂಕ್‌ಗಳಲ್ಲಿ ಸಾಲಲ್ಲಿ ನಿಂತು ಸಿಗದೆ ನಿರಾಶರಾಗುತ್ತಿರುವವರು) ಹೋಗುವುದು ಜಾಸ್ತಿ. ಇವರೆಲ್ಲ ಸಿನೆಮಾ ಟಿಕೇಟ್‌ಗಳಿಗೆ ವಿಂಡೋಗಳ ಎದುರು ನಿಲ್ಲುವ ಬದಲು ಎಟಿಎಂ ಮೆಷಿನ್ ಎದುರೋ ಅಥವಾ ಬ್ಯಾಂಕ್‌ಗಳ ಎದುರೋ ಸಾಲಲ್ಲಿ ನಿಂತಿದ್ದಾರೆ. ಹೀಗಾಗಿಯೇ ಶಾರುಕ್ ಖಾನ್‌ರಂತಹ ಸೂಪರ್ ಸ್ಟಾರ್ ಕೂಡಾ ಮೊನ್ನೆ ತಮ್ಮ ಸಿನೆಮಾ ‘ಡಿಯರ್ ಜಿಂದಗಿ’ಯ ಕೇವಲ ಒಂದು ಸಾವಿರ ಪ್ರಿಂಟ್ ಮಾತ್ರ ರವಾನಿಸಿದ್ದರು. ಅವುಗಳಲ್ಲೂ 800 ಮಲ್ಟಿಪ್ಲೆಕ್ಸ್‌ಗೆ ನೀಡಿದ್ದರೆ 200 ಏಕ ಪರದೆಯ ಥಿಯೇಟರ್‌ಗಳಿಗೆ ಕಳುಹಿಸಿದ್ದರು. ಅದೇ ರೀತಿ ವಿದ್ಯಾಬಾಲನ್‌ರ ‘ಫಿಲ್ಮ್ ಕಹಾನಿ - 2’ ಕೂಡಾ ಮೊದಲಿಗೆ 1,200 ಪ್ರಿಂಟ್ ಮಾತ್ರ ಪದರ್ಶಿಸಲ್ಪಟ್ಟಿತ್ತು. ಇನ್ನು 25 ಡಿಸೆಂಬರ್‌ಗೆ ಬರುತ್ತಿರುವ ಆಮಿರ್‌ಖಾನ್‌ರ ಫಿಲ್ಮ್ ‘ದಂಗಲ್’ ಏನಾಗುವುದೋ ನೋಡಬೇಕು.
* * *
ಬ್ಯಾಂಕ್‌ಗಳಲ್ಲಿ ಇಸ್ಲಾಮಿಕ್ ವಿಂಡೋ
ಬಡ್ಡಿಯನ್ನು ಕೆಟ್ಟದು ಎಂದು ತಿಳಿದಿರುವ ಮುಸ್ಲಿಂ ಸಮುದಾಯದಲ್ಲಿ ಬ್ಯಾಂಕ್‌ಗಳಲ್ಲಿ ಖಾತೆಯನ್ನೇ ತೆರೆಯದ ಅನೇಕ ಜನರು ಇಂದಿಗೂ ಇದ್ದಾರೆ. ಇಂತಹವರಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಒಂದು ಪ್ರಸ್ತಾವದಲ್ಲಿ ವ್ಯವಸಾಯಿಕ ಬ್ಯಾಂಕ್‌ಗಳಲ್ಲಿ ಬಡ್ಡಿರಹಿತ ಒಂದು ಇಸ್ಲಾಮಿಕ್ ವಿಂಡೋ ತೆರೆಯುವ ಮಾತು ಹೇಳಲಾಗಿದೆ. ದೇಶದ ಕೆಲವು ಬ್ಯಾಂಕ್‌ಗಳ ಜೊತೆ ಮಹಾರಾಷ್ಟ್ರದ ಬ್ಯಾಂಕ್ ಕೂಡಾ ಇದರಲ್ಲಿ ಒಳಗೊಂಡಿದೆ.
ಮಹಾರಾಷ್ಟ್ರದಲ್ಲಿ ಇಸ್ಲಾಮಿಕ್ ವಿಂಡೋದ ಆರಂಭದ ಪರಿಣಾಮ ಉತ್ಸಾಹದಾಯಕವಾಗಿದೆ. ರಾಜ್ಯದ ಸಹಕಾರಿ ಮಂತ್ರಿ ಸುಭಾಷ್ ದೇಶ್‌ಮುಖ್ ಶರೀಅತ್‌ನ ಪಾಲನೆ ಮಾಡುವ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಣಾಳಿಕೆಯ ಪ್ರಯೋಗವನ್ನು ತನ್ನ ಅಧ್ಯಕ್ಷತೆಯ ಲೋಕ ಮಂಗಲ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಮಾಡಿದ್ದಾರೆ. ಲೋಕ ಮಂಗಲ್ ಕೋ-ಆಪರೇಟಿವ್ ಬ್ಯಾಂಕ್ ಮುಸ್ಲಿಂ ಮತ್ತು ಇತರ ಗ್ರಾಹಕರಿಂದ ಬಡ್ಡಿ ರಹಿತ ಹಣ ಜಮೆ ಮಾಡುತ್ತದೆ. ಹಾಗೆಯೇ ಮುಸ್ಲಿಮರಿಗೆ ಬಡ್ಡಿ ಇಲ್ಲದೆ ಸಾಲ ನೀಡಲಾಗುತ್ತದೆ. ಸೋಲಾಪುರ ಮತ್ತು ಪುಣೆಯಲ್ಲಿನ 9 ಶಾಖೆಗಳಲ್ಲಿ ಇಂತಹ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಸರ್ವ್ ಬ್ಯಾಂಕ್‌ನ ಈ ಪ್ರಸ್ತಾವಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದೆ.