ಪಠ್ಯ ಪುಸ್ತಕಗಳು ಮತ್ತು ರಾಜಕೀಯ

Update: 2016-12-17 18:45 GMT

ನಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ-ಇದು ಸಾಮಾನ್ಯವಾಗಿ ಎಲ್ಲ ಕಾಲಕ್ಕೂ ಎಲ್ಲ ತಂದೆತಾಯಿಯರಿಂದ ಕೇಳಿ ಬರುವ ಕೂಗು. ಶಿಕ್ಷಣದ ಉದ್ದೇಶ ಏನು? ನಮ್ಮ ಮಕ್ಕಳಿಗೆ ಎಂಥ ಶಿಕ್ಷಣ ಬೇಕು? ಎಂಬ ಸ್ಪಷ್ಟ ಕಲ್ಪನೆ ಶೇ.90ರಷ್ಟು ತಂದೆತಾಯಿಯರಿಗೆ ಇರುವುದಿಲ್ಲ. ತಮ್ಮ ಮಕ್ಕಳಿಗೆ ಅನ್ನಬಟ್ಟೆ ಸಂಪಾದನೆಗೆ ದಾರಿಮಾಡಿಕೊಡುವ ಶಿಕ್ಷಣ ಬೇಕೆಂಬುದರಲ್ಲಿ ಮಾತಾಪಿತೃಗಳಲ್ಲಿ ಭಿನ್ನಾಭಿಪ್ರಾಯವಿರಲಾರದು. ಆದರೆ ಶ್ರೇಣೀಕೃತ ಸಮಾಜದಲ್ಲಿ ಅನ್ನಬಟ್ಟೆಯ ಕಲ್ಪನೆ ಆಯಾ ವರ್ಗಕ್ಕನುಗುಣವಾಗಿಯೇ ಇರುತ್ತದೆ. ಬಹಳ ಹಿಂದೆ ತಮ್ಮ ಮಕ್ಕಳು ಓದಿ ಡೆಪ್ಯುಟಿ ಕಮಿಷನರ್ ಆಗಬೇಕೆಂಬುದು ಪರಮಾವಧಿ ಆಸೆಯಾಗಿತ್ತು. ನಂತರ ಆ ಜಾಗವನ್ನು ಇಂಜಿನಿಯರ್-ವೈದ್ಯಕೀಯ ಓದುಗಳ ಆಕರ್ಷಣೆ ಆಕ್ರಮಿಸಿತು. ಈಗ ಸಾಫ್ಟ್‌ವೇರ್ ಇಂಜಿನಿಯರುಗಳಾಗಿ ಅಮೆರಿಕಕ್ಕೆ ತೆರಳಬೇಕು ಎಂಬ ಹಿಮಾಲಯ ಸದೃಶ ಆಸೆ. ಇದು ಅನ್ನಬಟ್ಟೆ ಸಂಪಾದನೆಯ ಪರಮ ಗುರಿ. ಹಿಮಾಲಯದೆತ್ತರದ ಈ ಎಲ್ಲ ಆಸೆಗಳ ಮುಂದೆ ಶಿಕ್ಷಣದ ಮೂಲ ಉದ್ದೇಶವಾದ ಬೆಳೆಯುವ ಮಕ್ಕಳಲ್ಲಿ ಒಬ್ಬ ಒಳ್ಳೆಯ ಮನುಷ್ಯನನ್ನು ರೂಪಿಸಬೇಕೆಂಬ ಆಶಯ ಅನಾಥವಾಗಿ ಹೋಗಿದೆ.

ಶಿಕ್ಷಣದ ಗುರಿ ಅಂತರಂಗದ ಸಂಸ್ಕಾರ. ಅಂತರಂಗದ ಸಂಸ್ಕಾರವೆಂದರೆ ಮನಸ್ಸಿನ ಸಂಸ್ಕಾರ. ವಿದ್ಯಾರ್ಥಿಗಳ ಮನಸ್ಸು ಕೆಲಸಮಾಡುವ ಹಾಗೆ ಮಾಡುವುದು.ಒಳಿತು ಕೆಡುಕು ಮೊದಲ್ಗೊಂಡಂತೆ ಜೀವನದ ಅನೇಕ ವೌಲ್ಯಗಳನ್ನು ಪರಿಚಯಿಸುವುದು, ಸ್ವಂತ ಪರಿಶೋಧನೆಯಿಂದ ಅವುಗಳನ್ನು ಕಂಡುಕೊಳ್ಳಲು ಅರ್ಹರಾಗುವಂತೆ ವಿದ್ಯಾರ್ಥಿಗಳನ್ನು ರೂಪಿಸುವುದೇ ಶಿಕ್ಷಣದ ಗುರಿಯಾಗಬೇಕು. ಇಂಥ ಶಿಕ್ಷಣ ಪಡೆದವರು ಬದುಕಲು ಸಮರ್ಥರಾದ ಸುಸಂಸ್ಕೃತ ಮನುಷ್ಯರಾಗುತ್ತಾರೆ ಎಂದು ಶಿಕ್ಷಣ ತಜ್ಞರ ಅಂಬೋಣ. ಇಂಥ ಶಿಕ್ಷಣಕ್ಕೆ ಬೇಕಾದ ಪರಿಸರ ಮತ್ತು ತಕ್ಕ ಸಾಮಗ್ರಿಗಳನ್ನು ಒದಗಿಸುವುದು ಸರಕಾರ ಸಮಾಜಗಳ ಹೊಣೆ.

ಇಂಥ ಆದರ್ಶಪ್ರಾಯವಾದ ಶಿಕ್ಷಣ ಮೂಲ ಸಾಮಗ್ರಿಗಳಲ್ಲಿ ಮುಖ್ಯವಾದದ್ದು ಪಠ್ಯಪುಸ್ತಕಗಳು. ನಮ್ಮ ವಿದ್ಯಾರ್ಥಿಗಳಿಗೆ ಓದಲು ಯೋಗ್ಯವಾದ ಪಠ್ಯಕ್ರಮವನ್ನು ನಾವು ರೂಪಿಸುತ್ತಿದ್ದೇವೆಯೇ? ಓದಲು ಯೋಗ್ಯವಾದಂಥ ಪುಸ್ತಕಗಳನ್ನು ನಾವು ವಿದ್ಯಾರ್ಥಿಗಳ ಕೈಯಲ್ಲಿಡುತ್ತಿದೇವೆಯೇ? ಇಲ್ಲ ಎಂಬುದು ದುಃಖಕರ ಸಂಗತಿ. ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ರೂಪಿಸುವ ವ್ಯವಸ್ಥೆಯ ಹಿಂದೆ ಕೆಲಸಮಾಡುವ ಹಣ, ಜಾತಿ, ಧರ್ಮ ಮೊದಲಾದ ಪೂರ್ವಗ್ರಹಗಳು, ಸಂಕುಚಿತ ಬುದ್ಧಿಗಳು ಮತ್ತು ಕೊಳಕು ಮನಸ್ಸುಗಳಿಂದಾಗಿ ಈ ಒಂದು ಶೋಚನೀಯ ಸ್ಥಿತಿಯನ್ನು ನಾವು ತಲುಪಿದ್ದೇವೆ. ಹೊಸ ಸರಕಾರಗಳು ಬಂದಂತೆ ಹತ್ತನೆಯ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದು ಇತ್ತೀಚಿನ ಒಂದು ಶೈಕ್ಷಣಿಕ ವಿದ್ಯಮಾನ. ಇಂಥ ಪರಿಷ್ಕರಣಗಳು ಶೈಕ್ಷಣಿಕ ಗುಣೋನ್ನತಿಗಿಂತ ರಾಜಕೀಯಕಾರಣಗಳಿಂದ ಪ್ರೇರಿತವಾದದು ಎಂಬುದು ಹಗಲು ಬೆಳಕಿನಷ್ಟು ಸ್ಪಷ್ಟ. ಇತ್ತೀಚೆಗೆ ಬಿಜೆಪಿ ಸರಕಾರಗಳು ಬಂದ ನಂತರ ಈ ಕಸರತ್ತುಗಳು ಪ್ರಾರಂಭವಾದವು. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಬಂದ ನಂತರ ರಾಷ್ಟ್ರವ್ಯಾಪಿ ಏಕರೀತಿಯ ಶಿಕ್ಷಣ ನೀತಿ ಜಾರಿಗೆ ತರುವ ಪ್ರಯತ್ನ ನಡೆದಿದ್ದು, ಇದಕ್ಕಾಗಿ ನೇಮಿಸಲಾಗಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿಯೂ ಆಗಿದೆ. ಆ ವರದಿ ಸಾರ್ವಜನಿಕ ಅಭಿಪ್ರಾಯ ಪಡೆವ/ರೂಪಿಸುವ ಹಂತದಲ್ಲಿರುವಂತಿದೆ. ಏತನ್ಮಧ್ಯೆ ಕರ್ನಾಟಕದಲ್ಲಿ ಹತ್ತನೆಯ ತರಗತಿವರೆಗಿನ ಪಠ್ಯಪುಸ್ತಗಳು ಈಗ ಸುದ್ದಿ-ಸದ್ದುಗದ್ದಲಗಳನ್ನು ಮಾಡುತ್ತಿವೆ.

ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಪ್ರಥಮ ಬಿಜೆಪಿ ಸರಕಾರಕ್ಕೆ ಸಹಜವಾಗಿಯೇ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಆತುರ ಉಂಟಾದುದರಲ್ಲಿ ಸೋಜಿಗವೇನಿಲ್ಲ.ನಮ್ಮ ಮಕ್ಕಳಿಗೆ ಎಳವೆಯಿಂದಲೇ ಹಿಂದೂ ಧರ್ಮ,ಭಾರತದ ಇತಿಹಾಸ, ಸಾಂಸ್ಕೃತಿಕ ಪರಂಪರೆಗಳನ್ನು ಸರಿಯಾದ ರೀತಿಯಲ್ಲಿ ಬೋಧಿಸಬೇಕೆನ್ನುವ ಮಾತೃ ಸಂಸ್ಥೆ ಆರೆಸ್ಸೆಸ್ ಚಿಂತನೆಗನುಗುಣವಾಗಿಯೇ ಬಿಜೆಪಿ ಸರಕಾರಗಳು ಪಠ್ಯಪುಸ್ತಕಗಳನ್ನು ಪರಿಷ್ಕರಿಸುತ್ತಾ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ಅಂತೆಯೇ ಆಗಿನ ಬಿಜೆಪಿ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಖುದ್ದು ಉಸ್ತುವಾರಿಯಲ್ಲಿ ಹತ್ತನೆ ತರಗತಿವರೆಗಿನ ಪಠ್ಯ ಪುಸ್ತಕಗಳ ಪರಿಷ್ಕರಣೆಯಾಯಿತು. ಪರಿಷ್ಕೃತ ಪಠ್ಯಗಳು ಬಂದದ್ದೇ ತಡ ಪಠ್ಯ ಪುಸ್ತಕಗಳ ಕೇಸರೀಕರಣವಾಗಿದೆ ಎಂಬ ಕೂಗು, ರಾಜಕೀಯ ವಲಯಗಳಿಂದಲೂ ರಾಜಕೀಯೇತರ ಜಾತ್ಯತೀತ ವಲಯಗಳಿಂದಲೂ ಕೇಳಿ ಬಂತು. ಆಗಿನ ಬಿಜೆಪಿ ಸರಕಾರ ಪಠ್ಯಕ್ರಮದಲ್ಲಿ ಕೇಸರಿ ಕಾರ್ಯಸೂಚಿಯನ್ನು ತುರುಕಲಾಗಿದೆ ಎನ್ನುವ ಆಪಾದನೆಯನ್ನು ಎದುರಿಸಬೇಕಾಯಿತು. ವಿಶೇಷವಾಗಿ ಸಮಾಜ ಶಾಸ್ತ್ರದ ಪಠ್ಯಕ್ರಮದಲ್ಲಿ ಆರೆಸ್ಸೆಸ್ ನೀತಿ ಮತ್ತು ವಿಚಾರಧಾರೆಯನ್ನು ಅಳವಡಿಸಲಾಗಿದೆ ಎಂದು ಪೋಷಕರಿಂದ, ಶೈಕ್ಷಣಿಕ ವಲಯಗಳಿಂದ ಗುರುತರವಾದ ಆಪಾದನೆಗಳು ಕೇಳಿಬಂದಿದ್ದವು.

ಸಿದ್ದರಾಮಯ್ಯ ಅವರ ನಾಯಕತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ದೂರುಗಳಿಗೆ ಜೀವ ಬಂತು. 1ರಿಂದ 10ನೆ ತರಗತಿ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಲೋಪಗಳಿವೆ ಎಂದು ದೂರುಗಳು ಬಂದಿದ್ದವು.ಅದನ್ನು ಪರಿಶೀಲಿಸಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ನೀಡುವಂತೆ ಸರಕಾರ ಡಾ.ಬರಗೂರು ರಾಮಚಂದ್ರಪ್ಪಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಸಮಿತಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಕಾರ್ಯ ಮುಗಿಸಿದ್ದು ಮುದ್ರಣಕ್ಕೆ ಹೋಗುವ ಕೊನೆಯ ಹಂತದಲ್ಲಿರುವಾಗ ಸಿಬ್ಬಂದಿ ಕೊರತೆ ಇತ್ಯಾದಿ ಸಮಸ್ಯೆಗಳನ್ನು ಸೃಷ್ಟಿಸುವ ಮೂಲಕ ಪರಿಷ್ಕೃತ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಲಾಗದಂಥ ಅನಿವಾರ್ಯತೆ, ಅಡಚಣೆಗಳನ್ನುಂಟುಮಾಡಲಾಗುತ್ತಿದೆ ಎಂಬ ದೂರು ಸಮಿತಿ ವಲಯಗಳಿಂದ ಕೇಳಿಬಂದಿತ್ತು.

2017-18ರ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯವನ್ನೇ ಉಳಿಸಿಕೊಂಡು ಅದರ ಮುಂದಿನ ವರ್ಷದಿಂದ ಪರಿಷ್ಕೃತ ಪಠ್ಯಗಳನ್ನು ಜಾರಿಗೆ ತರುವ ನಿರ್ಧಾರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಬಂದಿದ್ದರಾದರೂ ಮುಖ್ಯ ಮಂತ್ರಿಗಳ ಮಧ್ಯಪ್ರವೇಶದಿಂದಾಗಿ ಅದು 2017-18ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವ ಸೂಚನೆಗಳು ಗೋಚರಿಸಿವೆ. ನೂತನ ಪಠ್ಯ ಪುಸ್ತಕಗಳು 2017-18ರ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವಂತೆ ಸಮಿತಿ ಕೆಲಸ ಮಾಡಿದ್ದಾಗ್ಯೂ ಅದನ್ನು ಸಾಧ್ಯವಾಗದಂತೆ ಮಾಡಿಸುವ ಉದ್ದೇಶದಿಂದಲೋ ಎಂಬಂತೆ ಸಮಿತಿಗೆ ನೀಡಿದ್ದ ಸಿಬ್ಬಂದಿಯನ್ನು ಬೇರೆಕೆಲಸಕ್ಕೆ ವರ್ಗಾಯಿಸಿದ್ದರ ಹಿಂದಿನ ಕಾರಣ ನಿಗೂಢವಾಗಿಯೇ ಇದೆ. ಇದಕ್ಕೆ ಯಾರು ಹೊಣೆ?ಇದರ ಹಿಂದೆ ಯಾವ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿರಬಹುದು? ಈ ಬಗ್ಗೆ ಸರಕಾರ ತನಿಖೆ ನಡೆಸಿ ಶಿಕ್ಷಣ ಇಲಾಖೆಯಲ್ಲೇ ಇರಬಹುದಾದ ಇಂಥ ಪಟ್ಟಭದ್ರ ಹಿತಾಸಕ್ತಿಗಳನ್ನು ಅಥವಾ ಅವರ ಕೈಗೊಂಬೆಗಳನ್ನು ಸದೆಬಡಿಯದಿದ್ದಲ್ಲಿ ಇಂಥ ಸಮಿತಿಗಳ ನೇಮಕಕ್ಕೆಅರ್ಥವಿರುವುದಿಲ್ಲ.ಅವುಗಳ ವರದಿಗಳಿಗೆ ಪಾವಿತ್ರ್ಯವಿರುವುದಿಲ್ಲ.

ಮುಖ್ಯ ಮಂತ್ರಿಗಳ ಮಧ್ಯೆಪ್ರವೇಶದಿಂದಾಗಿ 2017ರಿಂದ ಹೊಸ ಪಠ್ಯ ಜಾರಿಗೆ ತರಲಾಗದೆಂಬ ಪ್ರಾಥಮಿಕ ಮತ್ತ ಪ್ರೌಢ ಶಿಕ್ಷಣ ಸಚಿವರ ಆತಂಕ ದೂರವಾಗಿದೆ. ಅಧ್ಯಕ್ಷ ಬರಗೂರು ರಾಮಚಂದ್ರಪ್ಪಅವರ ಪರಿಷ್ಕರಣ ಕಾರ್ಯ ಮುಗಿದಿದ್ದು, ಜನವರಿ 15ರೊಳಗೆ ಪರಿಷ್ಕೃತ ಪಠ್ಯಗಳನ್ನು ಸರಕಾರಕ್ಕೆ ನೀಡುವುದಾಗಿ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಪೋಷಕರೂ ನಿರಾಳವಾಗಿರಬುದಾಗಿದೆ. ಪೂರ್ವಗ್ರಹಗಳಿಂದ ಮುಕ್ತವಾದ, ಸತ್ಯಕ್ಕೆ ಅಪಚಾರವಾಗದಂಥ ವಸ್ತುನಿಷ್ಠತೆ ಮತ್ತು ವೈಜ್ಞಾನಿಕ ಮನೋಭಾವದಿಂದ ಕೂಡಿದ ಮಾಹಿತಿ, ಇತಿಹಾಸ, ಸಮಾಜ ಶಾಸ್ತ್ರ,ವಿಜ್ಞಾನ-ತಂತ್ರಜ್ಞಾನ, ಸಾಹಿತ್ಯ-ಸಾಂಸ್ಕೃತಿಕ ವಿಷಯಗಳಿಂದ ಕೂಡಿದ ಹೊಸ ಪಠ್ಯ ಪುಸ್ತಕಗಳು ಮುಂದಿನ ಶೈಕ್ಷಣಿಕ ವರ್ಷದಿಂದ ತಮ್ಮ ಮಕ್ಕಳಿಗೆ ಲಭ್ಯವಾಗಲಿವೆ ಎಂಬುದು ಪೋಷಕರ ನಿರೀಕ್ಷೆ. ಇಂಥ ನಿರೀಕ್ಷೆಗಳ ಮಧ್ಯೆ ಅಪಸ್ವರಗಳೂ ಕೇಳಿಬರುತ್ತಿವೆ. ಸಹಜವಾಗಿಯೇ ಎಂಬಂತೆ ಈ ಅಪಸ್ವರ ಕೇಳಿ ಬಂದಿರುವುದು ಬಿಜೆಪಿ ಕಡೆಯಿಂದ. ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಮೂಲಕ ಕಾಂಗ್ರೆಸ್ ಸರಕಾರ ಅಹಿಂದ ಮತ್ತು ವಾಮಪಂಥೀಯ ಕಾರ್ಯ ಸೂಚಿಯನ್ನು ಮಕ್ಕಳ, ಮೇಲೆ ಹೇರುತ್ತಿದೆ ಎಂದು ಹಿಂದಿನ ಕೇಸರೀಕೃತ ಪಠ್ಯದ ಸೂತ್ರಧಾರರಾಗಿದ್ದ ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಪಾದಿಸಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕಗಳಿಂದ ವಿವಿಧ ಸಮುದಾಯಗಳ ನಡುವೆ ಘರ್ಷಣೆಯುಂಟಾಗಲಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಪರಿಷ್ಕರಣ ಸಮಿತಿಯ ಶಿಫಾರಸುಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಪಡೆಯದೆ ಅದನ್ನು ಜಾರಿಗೆ ತರಕೂಡದೆಂದೂ ಅವರು ಸರಕಾರಕ್ಕೆ ಆಗ್ರಹ ಪಡಿಸಿದ್ದಾರೆ. ಸಮಿತಿ ಇನ್ನೂ ಪರಿಷ್ಕೃತ ಪಠ್ಯಗಳನ್ನು ಸರಕಾರಕ್ಕೆ ಸಲ್ಲಿಸಿಲ್ಲ. ಅದು ಸಾರ್ವಜನಿಕರ ಅವಗಾಹನೆಗೆ ಬಂದಿಲ್ಲ. ಆದಾಗ್ಯೂ ಪರಿಷ್ಕೃತ ಪಠ್ಯ ಅಹಿಂದ ಮತ್ತು ವಾಮಪಂಥೀಯ ಕಾರ್ಯಸೂಚಿಗಳನ್ನೊಳಗೊಂಡಿದೆ ಎಂಬ ನಿರ್ಧಾರಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಗೆ ಬಂದರೋ ತಿಳಿಯದು. ಇದು ಸ್ವಕಪೋಲಕಲ್ಪಿತವಿದ್ದೀತು. ಬರಗೂರು ರಾಮಚಂದ್ರಪ್ಪ ಪ್ರಗತಿಶೀಲರು, ಬಂಡಾಯ ಸಾಹಿತ್ಯ ಸಂಘಟನೆಯ ನೇತಾರರು ಎಂಬುದು ಇಂಥ ಊಹೆಗೆ ಕಾರಣವಾಗಿರಬಹುದು. ಪ್ರಗತಿಶೀಲ ಮನೋಭಾವ ಮತ್ತು ಬಂಡಾಯಗಳಂತೆಯೇ ಇತಿಹಾಸ-ಸಂಸ್ಕೃತಿ-ಪರಂಪರೆಗಳ ಬಗ್ಗೆ ಬರಗೂರರು ಗೌರವ ಮತ್ತು ವಸ್ತುನಿಷ್ಠ ದೃಷ್ಟಿಯುಳ್ಳವರು ಎಂದೂ ಅವರ ಸಮಿತಿಯಿಂದ ಸತ್ಯಕ್ಕೆ ಅಪಚಾರವಾಗುವುದಿಲ್ಲ ಎಂಬ ನಿರೀಕ್ಷೆ ಉಳ್ಳವರೂ ಇದ್ದಾರೆ. ಹೀಗಾಗಿ ಸಮಿತಿಯ ಪರಿಷ್ಕೃತ ಪಠ್ಯಗಳು ಪ್ರಕಟವಾಗುವುದಕ್ಕೆ ಮುಂಚೆಯೇ ಅಪಸ್ವರವೆತ್ತುವುದು ನೈಜವಾದ ಶೈಕ್ಷಣಿಕ ಕಾಳಜಿಗಿಂತ ರಾಜಕೀಯ ನಡೆಯಷ್ಟೇ ಆದೀತು.

ಅಹಿಂದ ಮತ್ತು ವಾಮಪಂಥೀಯ ವಿಚಾರಧಾರೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿರುವ ಬರಗೂರು ರಾಮಚಂದ್ರಪ್ಪನವರು ಸಂವಿಧಾನಾತ್ಮಕ ತತ್ವಗಳನ್ನು ಹಾಗೂ 2005ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆಯೇ ವಿನಃ ಯಾವುದೇ ರಾಜಕೀಯ ಪಕ್ಷವನ್ನು ತೃಪ್ತಿಪಡಿಸಲಲ್ಲ ಎಂದು ಹೇಳಿರುವುದು ಗಮನಾರ್ಹ. ಇಲ್ಲಿ ರಾಜಕೀಯ ಹಿತಾಸಕ್ತಿಗಳು ಗಣನೆಗೆ ತೆಗೆದುಕೊಳ್ಳಬೇಕಾದ ಮತ್ತೊಂದು ಅಂಶವೆದರೆ, ಹಿಂದಿನ ಪಠ್ಯಪುಸ್ತಕಗಳ ಬಗ್ಗೆ ಪೋಷಕರು,ಶಿಕ್ಷಕರು, ಸಾಮಾಜಿಕ ಸಂಘಟನೆಗಳು ಹೀಗೆ ವಿವಿಧ ವಲಯಗಳಿಂದ ಬಂದಿದ್ದ ಸಾವಿರ ಪುಟಗಳಷ್ಟು ದೂರುಗಳು ಕೇಸರೀಕರಣಕ್ಕಷ್ಟೇ ಸಂಬಂಧಪಟ್ಟಿರಲಿಲ್ಲ ಎಂಬುದು. ಪಠ್ಯಗಳಲ್ಲಿನ ತಪ್ಪು ಮಾಹಿತಿಗಳು, ಮಹಿಳೆಯರ ಬಗ್ಗೆ ತಾರತಮ್ಯ, ಪ್ರಾದೇಶಿಕ ಪ್ರಾತಿನಿಧ್ಯತೆಯ ಕೊರತೆ, ವಾಸ್ತವಿಕ ದೋಷಗಳು, ಚಿತ್ರಗಳ ವಿವೇಚನಾರಹಿತ ಬಳಕೆ ಹೀಗೆ ಹಲವಾರು ಬಗೆಯ ದೂರುಗಳಿದ್ದವು ಎಂದು ಬರಗೂರರು ಹೇಳಿರುವ ಮಾತು ಗಂಭೀರವಾದದ್ದು.

ತಜ್ಞರ ಸಮಿತಿ ಸಿದ್ಧಪಡಿಸಿದ ಪಠ್ಯಪುಸ್ತಗಳಲ್ಲಿ ಇಂಥ ತಪ್ಪುಗಳು ಹೇಗೆ ನುಸುಳಲು ಸಾಧ್ಯ? ಇದು ಪಠ್ಯಪುಸ್ತಕ ಆಯ್ಕೆ ಸಮಿತಿಗೆ ನೇಮಿಸುವುದಕ್ಕೆ ಸಂಬಂಧಿಸಿದ ಮಾನದಂಡಗಳನ್ನೂ ಪ್ರಶ್ನಿಸುವಂತೆ ಮಾಡುತ್ತದೆ. ಸಮಿತಿಗೆ ತಜ್ಞರ ನೇಮಕದಲ್ಲಿ ಅರ್ಹತೆಯನ್ನು ಕಡೆಗಣಿಸಿ ರಾಜಕೀಯ ಪ್ರಭಾವ, ಸ್ವಜನಪಕ್ಷಪಾತಗಳಿಗೆ ಮಣೆಹಾಕುವಂಥ ಕೆಟ್ಟಚಾಳಿಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಇಂಥ ಪ್ರಮಾದಗಳು ಸಂಭವಿಸುತ್ತವೆ. ಪಠ್ಯಪುಸ್ತಕಗಳನ್ನು ಗೊತ್ತುಪಡಿಸುವುದರಲ್ಲಿ ರಾಷ್ಟ್ರದ ಸಾರ್ವಭೌಮತ್ವದ ಹಿತ, ಮಕ್ಕಳ ಭವಿಷ್ಯದ ಹಿತಕ್ಕಿಂತ ಮಿಗಿಲಾಗಿ ರಾಜಕೀಯ ಮತ್ತು ಸ್ವಜನಪಕ್ಷಪಾತಗಳಂಥ ಶಕ್ತಿಗಳು ಕೆಲಸಮಾಡುತ್ತಿರುವುದು ಹೊಸ ವಿದ್ಯಮಾನವೇನಲ್ಲ. ಬಿಜೆಪಿ ಸರಕಾರಗಳು ಈಗ ಮಾಡುತ್ತಿರುವಂತೆಯೇ ಪಶ್ಚಿಮ ಬಂಗಾಳ ಮೊದಲಾದೆಡೆಗಳಲ್ಲಿ ಕಮ್ಯುನಿಸ್ಟ್ ಸರಕಾರಗಳು ತಮ್ಮ ಪಕ್ಷದ ತತ್ವ ಸಿದ್ಧಾಂತಗಳಿಗನುಗುಣವಾಗಿ ಶಿಕ್ಷಣ ನೀತಿ ಮತ್ತು ಪಠ್ಯಪುಸ್ತಗಳನ್ನು ರೂಪಿಸಿದ ನಿದರ್ಶನಗಳು ನಮ್ಮ ಕಣ್ಮುಂದಿವೆ.

ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸ, ರಾಜಕೀಯ ಸಿದ್ಧಾಂತಗಳನ್ನು ನಮ್ಮ ಮಕ್ಕಳು ಅರಿತಿರಬೇಕು ಎಂಬುದರಲ್ಲಿ ಎರಡು ಅಭಿಪ್ರಾಯವಿರಲಾರದು. ಅಂತೆಯೇ ಅವರು ಅನ್ಯ ಧರ್ಮ, ಅನ್ಯ ಸಂಸ್ಕೃತಿ, ವಿಶ್ವದ ಇತಿಹಾಸ-ಪರಂಪರೆಗಳನ್ನೂ ಅರಿತುಕೊಳ್ಳಬೇಕಾದ್ದು ಇಂದು ಹಿಂದಿಗಿಂತ ಹೆಚ್ಚಿನ ಅಗತ್ಯವಾಗಿದೆ ಎಂಬುದನ್ನ್ನು ಮರೆಯಲಾಗದು. ಮಿಗಿಲಾಗಿ ನಮ್ಮ ರಾಷ್ಟ್ರೀಯ ಧರ್ಮವೊಂದಿದೆ.ಅದು ನಮ್ಮ ಸಂವಿಧಾನ. ನಮ್ಮ ಸಂವಿಧಾನದ ಮುಖ್ಯ ಲಕ್ಷಣಗಳಾದ ಜಾತ್ಯತೀತತೆ, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವ ರೂಪಣೆಗಳನ್ನು ನಾವು ಅಲಕ್ಷಿಸುವಂತಿಲ್ಲ. ನಮ್ಮ ಶಿಕ್ಷಣದ ಅಡಿಪಾಯ ಸಂವಿಧಾನದ ಈ ಸೂತ್ರಗಳೇ ಆಗಿರಬೇಕು.

 ಲಿಖಿತ ಸಂವಿಧಾನಕ್ಕಿಂತ ಗಟ್ಟಿಯಾಗಿರುವುದು ಅಲಿಖಿತ ಪರಂಪರೆ .ಆದ್ದರಿಂದ ಅದಕ್ಕೆ ಆದ್ಯತೆ ನೀಡಬೇಕು. ಅದರಂತೆ ಕಲಿಯಬೇಕು ಎನ್ನುವವಾದವೊಂದಿದೆ. ಆದರೆ ಅಲಿಖಿತ ಪರಂಪರೆ ಮತ್ತು ವೌಖಿಕ ಪರಂಪರೆಗಳಿಂದ ನಾವೀಗ ಬಹುದೂರ ಸಾಗಿ ಬಂದಿದ್ದೇವೆ. ಆ ನಂತರದ ನಾಗರಿಕತೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗಳು, ವೈಜ್ಞಾನಿಕ-ತಾಂತ್ರಿಕ ಸಾಧನೆಗಳು ನಮ್ಮ ಬದುಕನ್ನು ಆವರಿಸಿ ನಮ್ಮನ್ನು ಬೆಳೆಸುತ್ತಿವೆ ಎಂಬುದನ್ನು ಮರೆಯಲಾಗದು. ಬಲಿಕೊಡುವ, ಬಲಿಯಾಗುವ, ಬಲಿತೆಗೆದುಕೊಳ್ಳುವ ಪ್ರವೃತ್ತಿಯಿಂದ ಮುಕ್ತರಾಗಿ ಅಹಿಂಸೆಯಮಾರ್ಗದಲ್ಲಿ ಸ್ವಾತಂತ್ರ್ಯಗಳಿಸಿ ವಿಶ್ವದಲ್ಲೇ ಅನುಕರಣೀಯ ಮಾದರಿ ಎನ್ನಿಸಿಕೊಂಡಿದ್ದೇವೆ. ಈ ಘಟ್ಟದಲ್ಲಿ ನಿಂತು ಅಂಧಾನುಕರಣೆಯ ಮಾತನಾಡುವುದು ಪ್ರಬುದ್ಧತೆಯ ಲಕ್ಷಣವಲ್ಲ. ಸಮಾನತೆ ಮತ್ತು ಜಾತ್ಯತೀತತೆ ಪಾಲಿಸುವ ಸಂವಿಧಾನವನ್ನು ಅಂಗೀಕರಿಸುವ ಮೂಲಕ ನಾವು ಹೊಸ ಪರಂಪರೆಯೊಂದಕ್ಕೆ ನಾಂದಿ ಹಾಡಿದ್ದೇವೆ ಎಂಬುದನ್ನು ಶಿಕ್ಷಣ ನೀತಿ ರೂಪಿಸುವಾಗ ನಾವು ಮರೆಯುವಂತಿಲ್ಲ.

ಪರಿಷ್ಕೃತ ಪಠ್ಯಪುಸ್ತಕಗಳ ರಚನೆಯಲ್ಲಿ ಯಾವುದೇ ಪಕ್ಷದಕಾರ್ಯಸೂಚಿಗಳಿಗೆ ಮಣೆಹಾಕಿಲ್ಲ, ಸಂವಿಧಾನದ ತತ್ವಗಳನ್ನುಮನಸ್ಸಿನಲ್ಲಿಟ್ಟುಕೊಂಡು ರಚಿಸಲಾಗಿದೆ ಎನ್ನುವ ರಾಮಚಂದ್ರಪ್ಪಅವರ ಮಾತುಗಳಲ್ಲಿ ಭರವಸೆಯಿಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News