ಅಂಗವೈಕಲ್ಯ: ಪ್ರಬಲ ಕಾನೂನಿಗೆ ಸುದೀರ್ಘ ನಿರೀಕ್ಷೆ-ಜಾವೇದ್ ಅಬಿದಿ
ಸ್ವಾತಂತ್ರ್ಯದ ಬಳಿಕ 60- 70 ವರ್ಷಗಳ ಕಾಲ ಅಂಗವಿಕಲರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಹಿಂದೆ ಅಂಗವಿಕಲರಿಗಾಗಿ ಒಂದು ಕಾಯ್ದೆಯೂ ಇರಲಿಲ್ಲ. 1995ರಲ್ಲಿ ಅದನ್ನು ಪಡೆದೆವು. ಆದರೆ ಅದು ಆಟಿಸಂ, ಹಿಮೋಫಿಲಿಯಾ, ಕಲಿಕೆಯ ವೈಕಲ್ಯ ಹೊಂದಿರುವವರಿಗೆ ಯಾವ ರೀತಿಯಲ್ಲೂ ನೆರವಾಗುತ್ತಿರಲಿಲ್ಲ. ಎರಡು ದಶಕಗಳನ್ನು ಕಳೆದರೂ ಅಂಧರು, ಕಿವುಡರು ಹಾಗೂ ಮೂಳೆಗಳ ವೈಕಲ್ಯ ಹೊಂದಿರುವವರು ಪ್ರಯೋಜನ ಪಡೆಯುತ್ತಿರುವುದನ್ನಷ್ಟೇ ನಾವು ನೋಡಿಕೊಂಡು ಬೆಳೆಯಬೇಕಾಯಿತು.
ಸಂಸತ್ ಕಲಾಪಕ್ಕೆ ಸತತ ಅಡ್ಡಿ ಹಾಗೂ ಹಲವು ದಿನಗಳ ಮುಂದೂಡಿಕೆ ಬಳಿಕ ರಾಜ್ಯಸಭೆ ಕಳೆದ ಬುಧವಾರ ಅಂಗವಿಕಲರ ಹಕ್ಕುಗಳಿಗೆ ಸಂಬಂಧಿಸಿದ ಮಸೂದೆಯನ್ನು ಅವಿರೋಧವಾಗಿ ಆಂಗೀಕರಿಸಿದೆ. ಈ ಹೊಸ ಮಸೂದೆಯು ಹಾಲಿ ಜಾರಿಯಲ್ಲಿರುವ ಅಂಗವಿಕಲರ (ಸಮಾನ ಅವಕಾಶ, ಹಕ್ಕುಗಳು ಹಾಗೂ ಪೂರ್ಣ ಪಾಲ್ಗೊಳ್ಳುವಿಕೆಯ ಸಂರಕ್ಷಣೆ) ಕಾಯ್ದೆ- 1995ರ ಬದಲಾಗಿ ಜಾರಿಗೆ ಬರಲಿದೆ. ಹಾಲಿ ಜಾರಿಯಲ್ಲಿರುವ ಕಾಯ್ದೆ, ಹಲ್ಲಿಲ್ಲದ ಹಾವು ಎಂಬ ಟೀಕೆಗಳು ಅಂಗವಿಕಲರ ಹಕ್ಕುಗಳ ಹೋರಾಟಗಾರರಿಂದ ಬಂದಿದ್ದವು.
ಹೊಸ ಮಸೂದೆಯಲ್ಲಿನ ಮಹತ್ವದ ಬದಲಾವಣೆ ಎಂದರೆ, ಅಂಗವೈಕಲ್ಯದ ವ್ಯಾಖ್ಯೆಯನ್ನು 1995 ಕಾಯ್ದೆಯಲ್ಲಿ ನಮೂದಿಸಿರುವ ಏಳು ಅಂಶಗಳ ಬದಲಾಗಿ 21 ಅಂಶಗಳಿಗೆ ವಿಸ್ತರಿಸಿರುವುದು. ಸಾರ್ವಜನಿಕ ಕಟ್ಟಡಗಳು, ಆಸ್ಪತ್ರೆಗಳು, ಸಾರಿಗೆ ಹಾಗೂ ಮತಗಟ್ಟೆಗೆ ಸುಲಭವಾಗಿ ಹೋಗಲು ಅಂಗವಿಕಲಸ್ನೇಹಿ ವ್ಯವಸ್ಥೆಯ ಹಕ್ಕಿನಂಥ ಹಲವು ಹಕ್ಕುಗಳನ್ನು ಈ ಕಾಯ್ದೆ ನೀಡಿದೆ. ಕನಿಷ್ಠ ಶೇ. 40ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದೂ ಸೇರಿದಂತೆ ಹಲವು ಸೌಲಭ್ಯಗಳನ್ನೂ ಒದಗಿಸಿಕೊಟ್ಟಿದೆ.
ಅಂಗವಿಕಲ ಸಮುದಾಯ ಬಹುನಿರೀಕ್ಷಿತ ಮಸೂದೆಗೆ ಲೋಕಸಭೆಯ ಒಪ್ಪಿಗೆಯನ್ನು ಎದುರು ನೋಡುತ್ತಿದ್ದರೆ, ಅಂಗವಿಕಲರ ಹಕ್ಕುಗಳ ಗುಂಪಿನ ಸಂಚಾಲಕ ಜಾವೇದ್ ಅಬಿದಿ, ಸ್ಕ್ರೋಲ್ ಜತೆ ಈ ಮಸೂದೆ ಸಂಸತ್ತಿಗೆ ಬರಬೇಕಾದರೆ ಸವೆಸಿದ ಸುದೀರ್ಘ ಹಾದಿಯನ್ನು ನೆನಪು ಮಾಡಿಕೊಂಡಿದ್ದಾರೆ. ಇದು ಭಾರತದಲ್ಲಿ ಅಂಗವಿಕಲರಿಗೆ ಹೇಗೆ ದೊಡ್ಡ ಹೆಜ್ಜೆಯಾಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.
‘‘ಡಿಆರ್‌ಜಿ ಸಂಚಾಲಕನಾಗಿ ನನ್ನ ನೇತೃತ್ವದಲ್ಲಿ 2010ರಲ್ಲಿ ನಾವು ಅಂಗವಿಕಲರ ಕಲ್ಯಾಣ ಖಾತೆ ಸಚಿವ ಮುಕುಲ್ ವಾಸ್ನಿಕ್ ಅವರನ್ನು ಭೇಟಿ ಮಾಡಿ ಹೊಸ ಕಾನೂನಿನ ಅಗತ್ಯದ ಬಗ್ಗೆ ವಿವರಿಸಿದೆವು. 1995ರ ಕಾಯ್ದೆಗೆ ಅವರು ತಿದ್ದುಪಡಿ ತರುವ ತರಾತುರಿಯಲ್ಲಿದ್ದರು. ಆಗ ನಾವು, ‘ಕ್ಷಮಿಸಿ, ನೀವು 1995ರ ಕಾಯ್ದೆಗೆ ಎಷ್ಟು ತಿದ್ದುಪಡಿ ತಂದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ತೀರಾ ಹಳೆಯ ಹಾಗೂ ಪ್ರಾಚೀನ. ಇದು 21ನೆ ಶತಮಾನದ ಅಂಗವಿಲಕರ ನಿರೀಕ್ಷೆಗಳ ಆಕಾಂಕ್ಷೆಗಳಿಗೆ ಸ್ಪಂದಿಸುವುದಿಲ್ಲ’ ಎಂದು ಹೇಳಿದೆವು. ಸಚಿವರಿಗೆ ಈ ವಿಷಯ ಮನವರಿಕೆ ಮಾಡಿಕೊಡಲು ಏಳು ತಿಂಗಳು ಹಿಡಿಯಿತು. ಏಳು ತಿಂಗಳ ಕಾಲ ನಿರಂತರ ಪ್ರತಿಪಾದನೆ, ರ್ಯಾಲಿ, ಧರಣಿ ನಡೆಯಿತು. ಅಂತಿಮವಾಗಿ ನಮ್ಮ ಬೇಡಿಕೆಗಳಿಗೆ ಒಪ್ಪಿ, ಸುಧಾ ಕೌಲ್ ಸಮಿತಿ ನೇಮಕ ಮಾಡಿದರು. ಇದೀಗ ಹೊಸ ಮಸೂದೆಯ ಕರಡನ್ನು ಸುಧಾ ಕೌಲ್ ಸಮಿತಿ ಸಿದ್ಧಪಡಿಸಿದೆ.’’
‘‘ಸಚಿವಾಲಯದ ಪ್ರತಿಯೊಂದು ನಡೆ ಹಾಗೂ ಸಮಿತಿಯ ಕೆಲಸಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಾ ಬಂದೆವು. ಉದಾಹರಣೆಗೆ ಮೊದಲು ಸಮಿತಿ ರಚನೆಯಾದಾಗ, ಸಮಿತಿಯಲ್ಲಿ ಯಾರೂ ಅಂಗವಿಕಲರು ಇರಲೇ ಇಲ್ಲ. ಇದರಿಂದ ನಾವು ಸಚಿವರನ್ನು ಮತ್ತೆ ತರಾಟೆಗೆ ತೆಗೆದುಕೊಂಡೆವು. ಆರೋಗ್ಯ ವೃತ್ತಿನಿರತರು ಹಾಗೂ ಪಾಲಕರಿರುವ ಈ ಸಮಿತಿ ನಮಗೆ ಬೇಡ ಎಂದು ಧರಣಿ, ರ್ಯಾಲಿಗಳನ್ನು ನಡೆಸಿದೆವು. ಬಳಿಕ ಸಮಿತಿಗೆ ಅಂಗವಿಕಲರನ್ನೂ ಸೇರಿಸಲಾಯಿತು. ಆ ಬಳಿಕ ಸಮಿತಿಯ ಕಾರ್ಯಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದು, ಅಗತ್ಯ ಮಾಹಿತಿಗಳನ್ನು ಸಮಿತಿಗೆ ನೀಡುತ್ತಿದ್ದೇವೆ.’’
ಇಡೀ ಪ್ರಕ್ರಿಯೆ 2010ರಿಂದ 2014ರವರೆಗೂ ನಡೆಯಿತು. 2014ರ ಚಳಿಗಾಲದ ಅಧಿವೇಶನದ ವೇಳೆಗೆ ಮಸೂದೆಗೆ ಒಂದು ನಿರ್ದಿಷ್ಟ ರೂಪ ಬಂತು. ಬಳಿಕ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
►1995ರ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಏಳು ಅಂಶಗಳ ಬದಲಾಗಿ ಅಂಗವಿಕಲರ ವ್ಯಾಖ್ಯೆಯನ್ನು 19 ಅಂಶಗಳಿಗೆ ವಿಸ್ತರಿಸಲು ಉದ್ದೇಶಿಸಿದ್ದರೂ, ಅಂತಿಮ ಕರಡಿನಲ್ಲಿ ಹಿಮೋಫಿಲಿಯಾ ಹಾಗೂ ತಲೆಸ್ಸೇಮಿಯಾದಂಥ ರೋಗವನ್ನು ಅಂಗವೈಕಲ್ಯದ ವ್ಯಾಪ್ತಿಗೆ ಸೇರಿಸಿಲ್ಲ ಎಂಬ ಬಗ್ಗೆ ಕಳೆದ ಸೆಪ್ಟಂಬರ್‌ನಲ್ಲಿ ಕಳಕಳಿ ವ್ಯಕ್ತಪಡಿಸಿದ್ದೀರಿ. ಇದೀಗ ಆಸಿಡ್ ದಾಳಿ ಹಾಗೂ ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ 19ಕ್ಕೆ ವಿಸ್ತರಿಸಲಾಗಿದೆ
ಉ: ‘‘ಅದ್ಭುತ. ಕಾವಲುನಾಯಿಯಾಗಿ ಹಾಗೂ ಪ್ರತಿಪಾದಕರಾಗಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲ ಇದು. ಯಾವುದೇ ಹಾನಿ ಆಗಿಲ್ಲ. ಅಂಗವೈಕಲ್ಯದ ಸಂಖ್ಯೆಯನ್ನು ಪರಿಗಣಿಸುವ ವಿಚಾರದಲ್ಲಿ ದೊಡ್ಡ ಹೆದರಿಕೆ ಇತ್ತು. ಇದು ಕೆಲವು ರೋಗಗಳು; ಅಂಗವೈಕಲ್ಯವಲ್ಲ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಗೊಂದಲ ಇತ್ತು. ಇದು ಈಗ ಪ್ರಮುಖ ಅಂಶ’’ ‘‘ಪ್ರಧಾನಿಯವರೇ ಮಧ್ಯಪ್ರವೇಶ ಮಾಡಿದ್ದರಿಂದ ಹೊಸ ಮಸೂದೆ ಮೂಲಕ ಯಾವ ಹಾನಿಯೂ ಆಗಿಲ್ಲ. ಇದೀಗ ಅಂಗವೈಕಲ್ಯದ ಸಂಖ್ಯೆ ಏಳರಿಂದ 21ಕ್ಕೆ ಹಚ್ಚಿದೆ. ಅಂದರೆ ಮೂರು ಪಟ್ಟು ಅಧಿಕವಾಗಿದೆ’’.
‘‘ಇದು ಮೂಲೆಗುಂಪಾದ ಅಸಂಖ್ಯಾತ ಅಂಗವಿಕಲರಿಗೆ ಸಿಕ್ಕಿದ ದೊಡ್ಡ ಜಯ. ಸ್ವಾತಂತ್ರ್ಯದ ಬಳಿಕ 60- 70 ವರ್ಷಗಳ ಕಾಲ ಇವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿತ್ತು. ಹಿಂದೆ ಅಂಗವಿಕಲರಿಗಾಗಿ ಒಂದು ಕಾಯ್ದೆಯೂ ಇರಲಿಲ್ಲ. 1995ರಲ್ಲಿ ಅದನ್ನು ಪಡೆದೆವು. ಆದರೆ ಅದು ಆಟಿಸಂ, ಹಿಮೋಫಿಲಿಯಾ, ಕಲಿಕೆಯ ವೈಕಲ್ಯ ಹೊಂದಿರುವವರಿಗೆ ಯಾವ ರೀತಿಯಲ್ಲೂ ನೆರವಾಗುತ್ತಿರಲಿಲ್ಲ. ಎರಡು ದಶಕಗಳನ್ನು ಕಳೆದರೂ ಅಂಧರು, ಕಿವುಡರು ಹಾಗೂ ಮೂಳೆಗಳ ವೈಕಲ್ಯ ಹೊಂದಿರುವವರು ಪ್ರಯೋಜನ ಪಡೆಯುತ್ತಿರುವುದನ್ನಷ್ಟೇ ನಾವು ನೋಡಿಕೊಂಡು ಬೆಳೆಯಬೇಕಾಯಿತು.’’
‘‘ನಾನು ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದ ಅಂಶವೆಂದರೆ, ನಾವು ಮೂಲೆಗುಂಪಾದ ಹಾಗೂ ಬಹುಶಃ ಅತಿದೊಡ್ಡ ಅಲ್ಪಸಂಖ್ಯಾತರು. ಇಡೀ ಅಂಗವಿಕಲರ ವಲಯದಲ್ಲೇ ಉಳ್ಳವರು ಹಾಗೂ ಇಲ್ಲದವರ ವರ್ಗ ಇದೆ. ಈ ಮಸೂದೆಯು ಉಳ್ಳವರ ಬಗ್ಗೆ ಹೆಚ್ಚಿನ ಗಮನ ಹರಿಸದೇ, ಇಲ್ಲದವರ ಬಗ್ಗೆ ಗಮನ ಹರಿಸಿದೆ.’’
► ಯಾವ ವರ್ಗವನ್ನು ನೀವು ಅಂಗವಿಕಲರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದೀರೋ, ಇನ್ನೂ ಅಂತಹ ವರ್ಗದ ಸೇರ್ಪಡೆಯಾಗಿಲ್ಲ ಎನಿಸುತ್ತದೆಯೇ?
ಉ: ‘‘ಇದು ಚರ್ಚಾರ್ಹ ವಿಷಯ. ಜನರು ಒಂದೆರಡು ಅಂಗವೈಕಲ್ಯ ಸ್ಥಿತಿ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅದೆಂದರೆ ಬೆನ್ನುಮೂಳೆಗೆ ಗಾಯವಾದವರು. ಅವರನ್ನು ಸೇರಿಸಲು ಒತ್ತಾಯ ಇತ್ತು. ಸಮಿತಿ ಕೂಡಾ ಇದಕ್ಕೆ ಸಹಮತ ವ್ಯಕ್ತಪಡಿಸಿ, ಬೆನ್ನುಹುರಿ ಇಲ್ಲದವರು ಎಂದರೆ ದೈಹಿಕ ಅಂಗವಿಕಲರು ಎಂದೇ ಅರ್ಥ ಎಂದು ಅಭಿಪ್ರಾಯಪಟ್ಟಿತ್ತು. ಪೋಲಿಯೊ ಅಥವಾ ಕಾಲು ಕತ್ತರಿಸಿದ ಪ್ರಕರಣಗಳಂತೆ ಎಲ್ಲ ವೈದ್ಯಕೀಯ ಸ್ಥಿತಿಯನ್ನೂ ಪಟ್ಟಿ ಮಾಡುವುದು ಕಷ್ಟ. ಯಾವುದೇ ಕಾರಣದಿಂದ ದೈಹಿಕ ಅಂಗವೈಕಲ್ಯ ಬಂದರೂ ನೀವು ಕಾನೂನಿನ ವ್ಯಾಪ್ತಿಗೆ ಸೇರುತ್ತೀರಿ. ಅವರ ಹೆಸರನ್ನೂ ಸೇರಿಸಬೇಕಿತ್ತು ಎನ್ನುವುದು ಭಾವನಾತ್ಮಕ ಅಂಶ.’’
ಅಂಗವೈಕಲ್ಯದ ವ್ಯಾಖ್ಯೆ ಹೆಚ್ಚು ಅಂಶಗಳನ್ನು ಒಳಗೊಳ್ಳುವುದರಿಂದ ಇನ್ನೂ ಕೆಲ ಧನಾತ್ಮಕ ಪರಿಣಾಮ ಗಳಿವೆ. ಕಾನೂನು ಸಚಿವಾಲಯ ಸ್ಥಿತಿಸ್ಥಾಪಕತ್ವವನ್ನು ನೀಡಿದೆ. ಇದರ ಜತೆಗೆ ಕೇಂದ್ರ ಸರಕಾರ ಕಾಲದಿಂದ ಕಾಲಕ್ಕೆ ಹೊಸದನ್ನು ಸೇರಿಸಲು ಹಾಗೂ ಅಗತ್ಯ ಬದಲಾವಣೆ ಮಾಡುವ ಹಕ್ಕು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಇದು ಅತ್ಯಂತ ಕ್ರಿಯಾಶೀಲ ಮಸೂದೆ. ವೈಯಕ್ತಿಕವಾಗಿ ನಾನು ಇದನ್ನು ಬಹಳಷ್ಟು ಇಷ್ಟಪಡುತ್ತೇನೆ.’’
►1995ರ ಕಾಯ್ದೆಯಡಿ ಅಂಗವಿಕಲರಿಗೆ ಉನ್ನತ ಶಿಕ್ಷಣ ಹಾಗೂ ಸರಕಾರಿ ಉದ್ಯೋಗದಲ್ಲಿ ಶೇ. 3ರ ಮೀಸಲಾತಿ ಇದೆ. 2014ರ ಮಸೂದೆ ಇದನ್ನು ಶೇ. 5ಕ್ಕೆ ಹೆಚ್ಚಿಸಿದೆ. ರಾಜ್ಯಸಭೆಯಲ್ಲಿ ಅಂಗೀಕಾರವಾದ ಅಂತಿಮ ಅವತರಣಿಕೆಯ ಪ್ರಕಾರ, ಉದ್ಯೋಗ ಮೀಸಲಾತಿಯನ್ನು ಶೇ. 4ಕ್ಕೆ ಇಳಿಸಲಾಗಿದೆ?
ಉ: ‘‘ಈ ಪ್ರಮಾಣ ಶೇ. 5ರಲ್ಲೇ ಉಳಿಯಬೇಕು ಎನ್ನುವುದು ನನ್ನ ಇಚ್ಛೆ. ಇದಕ್ಕಾಗಿ ನಾವು ಸಾಕಷ್ಟು ಹೋರಾಡಿದ್ದೇವೆ. ಸಮಿತಿ ಮುಂದೆ ವಾದ ಮಂಡಿಸಿ, ಶೇ. 3 ರಿಂದ 5ಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಸಣ್ಣ ಸಾಧನೆಯೇನಲ್ಲ. ಆದರೆ ಶೇ. 5ರಿಂದ ನಾಲ್ಕಕ್ಕೆ ಇಳಿಸಿರುವುದು ನಿರಾಶಾದಾಯಕ.’’
‘‘ಆದರೆ ಇದಕ್ಕಾಗಿ ನಾನು ಸಿಟ್ಟು ಮಾಡಿಕೊಳ್ಳುವ ಅಥವಾ ಧೃತಿಗೆಡುವ ಅಗತ್ಯ ಇಲ್ಲ. ಇದಕ್ಕಾಗಿ ಮಸೂದೆಯನ್ನು ತಡೆಹಿಡಿಯುವುದೂ ಬೇಕಿಲ್ಲ. ಒಟ್ಟಾರೆಯಾಗಿ ಮಸೂದೆ ಆಶಾದಾಯಕ. 1995ರ ಕಾಯ್ದೆಗೆ ಹೋಲಿಸಿದರೆ ಇದು ದೊಡ್ಡ ಸುಧಾರಣೆ. ನಾವು ಕೇಳಿದ್ದು ಸಾಕಷ್ಟು ಸಿಕ್ಕಿದೆ. ಇದು ಅಂಗವಿಕಲ ಸಮುದಾಯವನ್ನು ಮುನ್ನಡೆಸುವಲ್ಲಿ ನೆರವಾಗುತ್ತದೆ ಎಂಬ ವಿಶ್ವಾಸ ನಮ್ಮದು. ಒಂದು, ಎರಡು ಅಥವಾ ಮೂರು ವರ್ಷದ ಬಳಿಕ, ಹೆಚ್ಚಿನ ಸುಧಾರಣೆಗಳನ್ನು ಆಗ್ರಹಿಸಬಹುದು.
ಈ ಕಾಯ್ದೆಯಲ್ಲಿ ಕೆಲ ದೌರ್ಬಲ್ಯಗಳೂ ಇವೆ. ಉದಾಹರಣೆಗೆ ಅಂಗವಿಕಲ ಆಯೋಗವನ್ನು ನಾವು ಕಳೆದುಕೊಂಡಿದ್ದೇವೆ. ಅಂಗವಿಕಲರನ್ನು ತಾರತಮ್ಯದಿಂದ ಕಾಣುವವರಿಗೆ ಇರುವ ಶಿಕ್ಷೆ ಕೂಡಾ ಕಡಿಮೆಯಾಗಿದೆ. ಶಿಕ್ಷೆಯಲ್ಲಿ ಜೈಲು ಅವಧಿಯನ್ನು ನಮೂದಿಸಲಾಗಿದೆ. ಆದರೆ ಒಟ್ಟಾರೆಯಾಗಿ ನನಗೆ ಸಂತಸ ಇದೆ.’’
►ಇದು ದೇಶದ ಕಾನೂನು ಆಗಿ ಪರಿವರ್ತನೆಯಾದಾಗ, ಇದರ ಅನುಷ್ಠಾನದಲ್ಲಿ ಯಾವುದೇ ಸವಾಲುಗಳು ಎದುರಾಗಬಹುದೇ?
ಉ: ‘‘ಅಂಗವಿಕಲರ ವಲಯದ ಪ್ರಮುಖ ಅಂಶವೆಂದರೆ ಈ ಗುಂಪು ಹಿಂದೆಂದಿಗಿಂತಲೂ ಪ್ರಬಲವಾಗಿದೆ, ಪ್ರೌಢವಾಗಿದೆ ಹಾಗೂ ಬೇಡಿಕೆಯ ಹಂತದಿಂದ ಬಹಳಷ್ಟು ಮುಂದೆ ಹೋಗಿದೆ. ಮಾಧ್ಯಮ ಕೂಡಾ ಹೆಚ್ಚು ಜಾಗರೂಕವಾಗಿದೆ. ಸರಕಾರ ಕೂಡಾ ಹೆಚ್ಚು ರಕ್ಷಣಾತ್ಮಕವಾಗಿದೆ. ಪ್ರಸ್ತುತ ಸರಕಾರವಂತೂ ಅಂಗವಿಕಲರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದೆ.
ಅಷ್ಟಾಗಿಯೂ ಅನುಷ್ಠಾನದ ವಿಚಾರಕ್ಕೆ ಬಂದಾಗ ಸವಾಲುಗಳು ಎದುರಾಗಬಹುದು. ಇದು ದೈತ್ಯ ಮಸೂದೆ. ಕಿವುಡರಿಗೆ, ಅಂಧರಿಗೆ ಹಾಗೂ ಸಂಕೇತಗಳ ಭಾಷೆ ಹಾಗೂ ಕ್ಯಾಪ್ಷನಿಂಗ್‌ಗೆ ಇದರಲ್ಲಿ ಸಾಕಷ್ಟು ಅವಕಾಶಗಳಿವೆ. ಇದರಲ್ಲಿ ಇಲಾಖೆಯ ಸಹಕಾರ ಕೂಡಾ ಅಗತ್ಯ. ಆದರೆ ಕಾನೂನು ನಾಗರಿಕರನ್ನು ಸಬಲಗೊಳಿಸುತ್ತದೆ ಹಾಗೂ ಕೆಲ ಅಂಶಗಳನ್ನು ಸರಕಾರದ ಇಲಾಖೆ ಕಡೆಗಣಿಸಿದರೂ, ಜನ ನ್ಯಾಯ ಕೋರಿ ನ್ಯಾಯಾಲಯದ ಕಟ್ಟೆ ಏರಬಹುದು. ಆದ್ದರಿಂದ ನಾವು ಮಾಡಬೇಕಾದ ಕೆಲಸ, ಧನಾತ್ಮಕ ಕೆಲಸ ಬಹಳಷ್ಟಿದೆ.’’
ಕೃಪೆ: scroll.in
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.