ಬೊಳುವಾರರಿಗೆ ಅಭಿನಂದನೆಗಳು

Update: 2016-12-24 18:39 GMT

ಮಾಗಿ ಚಳಿಯ ಮುಂಜಾನೆ. ಮೋಡಹೊದ್ದು ಮಲಗಿದ್ದ ಸೂರ್ಯನಿಗಿನ್ನೂ ಬೆಳಗಾಗಿರಲಿಲ್ಲ. ಮೈತುಂಬ ಶಾಲುಹೊದ್ದು, ಕಣ್ಣುಗಳೆರಡನ್ನೇ ಹೊರತೂರಿ ದಿನದ ಪತ್ರಿಕೆಗಾಗಿ ಚಡಪಡಿಸುತ್ತಿದ್ದೆ. ಮಾಗಿಯ ದಿನಗಳಲ್ಲಿ ಪತ್ರಿಕೆಯ ಸುದ್ದಿಗಳಿಂದಲೇ ಮೈಮನಗಳು ಬೆಚ್ಚಗಾಗಬೇಕಷ್ಟೆ. ಹುಡುಗ ಪತ್ರಿಕೆ ಎಸೆದ ಸದ್ದು. ಕೈಗೆತ್ತುಕೊಂಡೆ. ಮುಖ ಪುಟದಲ್ಲೇ ಸೂರ್ಯ ಉದಯಿಸಿದ್ದ. ಸೂರ್ಯರಶ್ಮಿಯಷ್ಟೇ ಚೇತೋಹಾರಿಯಾದ ಸುದ್ದಿ, ಕನ್ನಡಿಗರು ಸಂಭ್ರಮಿಸುವ ಸುದ್ದಿ:
ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
ಪ್ರಶಸ್ತಿಗೆ ಭಾಜನವಾಗಿರುವುದು ಬೊಳುವಾರರ ಸೃಜನಶೀಲ ಪ್ರತಿಭೆಯ ಮೇರು ಕೃತಿ: ‘ಸ್ವಾತಂತ್ರ್ಯದ ಓಟ’. ಕನ್ನಡದ ಮಹತ್ವದ ಕಾದಂಬರಿಗಳಲ್ಲೊಂದೆಂದು ವಿಮರ್ಶಾ ಲೋಕ ಆಗಲೇ ಗುರುತಿಸಿರುವ ಕೃತಿಗೆ ಈಗ ಪ್ರಶಸ್ತಿಯ ಕೀರ್ತಿ ಕಳಶ.
  
ಸುದ್ದಿಯ ಮಗ್ಗುಲಲ್ಲೇ, ಆಸೆಯಿತ್ತು, ನಿರೀಕ್ಷೆ ಇರಲಿಲ್ಲ ಎನ್ನುವ ಬೊಳುವಾರರ ಅಂಬೋಣ. ‘ಸ್ವಾತಂತ್ರ್ಯ ಓಟ’ದ ಗುರಿ ಸ್ವಾತಂತ್ರ್ಯವಲ್ಲದೆ ಮತ್ತೇನಾಗಲಿಕ್ಕೆ ಸಾಧ್ಯ? ಅಮಾನುಷ ಕಟ್ಟುಗಳಿಂದ ಬಿಡುಗಡೆಯ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಮಾನವ ಸಮಾಜದ ನಿರೀಕ್ಷೆಯ ಪಲಕುಗಳನ್ನು ತನ್ನ ಒಡಲಾಳದಿಂದ ಹೊಮ್ಮಿಸುವ, ಹತ್ತಿಕ್ಕುವ ಮೌಲ್ಯಗಳ ವಿರುದ್ಧ ದನಿ ಎತ್ತುವ ಬೊಳುವಾರರ ಈ ಬೃಹತ್ ಕಾದಂಬರಿ ನಾಲ್ಕು ವರ್ಷಗಳ ಹಿಂದೆ ಪ್ರಕಟವಾದಾಗಲೇ ಸಾಹಿತ್ಯಾಭಿಮಾನಿಗಳ ಹೃದಯ ಸೂರೆಗೊಂಡು ಇಂಥದೊಂದು ನಿರೀಕ್ಷೆಯನ್ನು ಹುಟ್ಟಿಸಿತ್ತು. ಖುಷಿಗೊಂಡ ಮನಸ್ಸಿನಲ್ಲಿ ಹಿಮ್ಮಿಂಚುಗಳು ಸುಳಿಯ ತೊಡಗಿದವು. ಬೊಳುವಾರರು ಸರಿಸುಮಾರು ನಾಲ್ಕು ದಶಕಗಳಿಂದ ಬರೆಯುತ್ತಿದ್ದಾರೆ. ಬಹಳ ವರ್ಷಗಳವರೆಗೆ ನನ್ನ ಅವರ ಭೇಟಿಯಾಗುತ್ತಿದ್ದುದು ಹಸ್ತಪ್ರತಿಗಳಲ್ಲೇ. ಎಷ್ಟೋ ವರ್ಷಗಳ ನಂತರ ಮುಖತಃ ಭೇಟಿಯಾಗುವ ಮುಹೂರ್ತ ಕೂಡಿ ಬಂದಾಗಲೂ ಸಾಹಿತಿಯೊಬ್ಬನ ಹಮ್ಮು-ಬಿಮ್ಮುಗಳ ಪ್ರಭಾವಳಿ ಅವರನ್ನು ಆವರಿಸಿರಲಿಲ್ಲ. ಬೊಳುವಾರರದು, ‘‘ಆಸೆ ಇತ್ತು ನಿರೀಕ್ಷೆ ಇರಲಿಲ್ಲ’’ ಎಂಬ ಸಾಚಾ ಪ್ರತಿಕ್ರಿಯಯಷ್ಟೇ ಸಾಚಾ ವ್ಯಕ್ತಿತ್ವ. ವಿನಯ, ಗಟ್ಟಿ ನಿಲುವಿನ ಪ್ರಾಮಾಣಿಕತೆ, ಮನುಷ್ಯನ ಘನತೆ, ಮಾನವ ಸಂಬಂಧಗಳ ಬಗ್ಗೆ ಗೌರವಪೂರ್ವಕ ಕಾಳಜಿ ಬೊಳುವಾರರ ವ್ಯಕ್ತಿತ್ವದ ಛಾಪು.

 ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಬೊಳುವಾರುವಿನಲ್ಲಿ ಹುಟ್ಟಿದ(1951) ಬೊಳುವಾರು ಮಹಮದ್ ಕುಂಞಿ ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೂಡಲೇ ಬ್ಯಾಂಕೊಂದರಲ್ಲಿ ಉದ್ಯೋಗ, ಮಡದಿ-ಮಕ್ಕಳು. ಬ್ಯಾಂಕ್ ಉದ್ಯೋಗಿಯಾಗಿ ಊರೂರು ಸುತ್ತಿರಲಿಕ್ಕೂ ಸಾಕು. ಬಾಳ ಬಟ್ಟೆಯ ಪಯಣ ಸಾಗಿದಂತೆ ನೋಟು ಎಣಿಸುವ ಕೈಗಳಲ್ಲಿ ಬರೆಯುವ ಪ್ರತಿಭೆ ಪಲ್ಲವಿಸತೊಡಗಿತು-ಹೃದಯ ಸಂಸ್ಕಾರವೋ, ಕನ್ನಡ ಸಾಹಿತ್ಯ ಓದಿನ ಸಂಸ್ಕಾರವೋ, ಸಾಮಾಜಿಕ ಒತ್ತಡಗಳೋ-ಕಾಣೆ. ಮೂರೂ ಕೂಡಿಯೂ ಇದ್ದೀತು..ಬೊಳುವಾರರು ತಮ್ಮ ಅಭಿವ್ಯಕ್ತಿಗೆ ಆರಿಸಿಕೊಂಡದ್ದು ಕಥಾ ಮಾರ್ಗವನ್ನು. ಜಗತ್ತಿನ ಸಕಲ ಗುಣಾವಗುಣಗಳ ಸಂಕಥನಕ್ಕಾಗಿ ಸೀಮಾತೀತವಾದ ‘ಮುತ್ತುಪ್ಪಾಡಿ’ಯನ್ನು ಸೃಷ್ಟಿಸಿಕೊಂಡರು. ಮುತ್ತುಪ್ಪಾಡಿ ಅವರ ಸುತ್ತಲ ಹಲವು ಲೋಕಗಳನ್ನೊಳಗೊಂಡ ‘ಮನುಷ್ಯರೂ ದೇವರುಗಳೂ’ ಇರುವ ಅವರದೇ ಆದ ಜಗತ್ತು. ಪ್ರೀತಿಸಲೂ ವಿಮರ್ಶಿಸಲೂ ಸಾಧ್ಯವಾಗುವಂತೆ, ಕಟುವಾಸ್ತವದಿಂದ ಒಂದು ಅಂತರ ಕಾಪಾಡಿಕೊಳ್ಳಲು ಮಾಡಿಕೊಂಡ ಉಪಾಯದ ಸೃಷ್ಟಿಯೂ ಹೌದು ಈ ಮುತ್ತುಪ್ಪಾಡಿ.

‘ಮುತ್ತುಪ್ಪಾಡಿಯ’ ಮನುಷ್ಯರ ‘ಸ್ವಾತಂತ್ರ್ಯ ಓಟ’ದ ಕೊನೆಯ ಸುತ್ತಿಗೆ (ಕೊನೆಯ ಸುತ್ತು ಏಕೋ, ಕಾಣೆ!) ಬಂದು ನಿಂತಿರುವ ಬೊಳುವಾರರು ಪುಂಖಾನುಪುಂಖವಾಗಿ ಬರೆದವರಲ್ಲ. ಅವರ ಮೊದಲ ಸಂಕಲನ ‘ದೇವರುಗಳ ರಾಜ್ಯದಲ್ಲಿ’ ಪ್ರಕಟವಾದದ್ದು 1985ರಲ್ಲಿ. ಸಣ್ಣ ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ-ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಯೋಗಶೀಲರಾಗಿದ್ದೂ ಇಲ್ಲಿಯವರೆಗೆ ಅವರು ಪ್ರಕಟಿಸಿರುವ ಕೃತಿಗಳ ಸಂಖ್ಯೆ ಎರಡಂಕಿ ದಾಟಲಾರದು. ಅಂಕಿಸಂಖ್ಯೆಯ ಮಾತು ಏನೇ ಇದ್ರೂ ಕನ್ನಡಕ್ಕೆ ಅವರು ಕೊಟ್ಟಿರುವುದೆಲ್ಲ ಗಟ್ಟಿ. ದೇವರುಗಳ ರಾಜ್ಯದಲ್ಲಿ (1985), ಅಂಕ (1986), ಆಕಾಶಕ್ಕೆ ನೀಲಿ ಪರದೆ (1994), ಒಂದು ತುಂಡು ಗೋಡೆ (2000), ಮುಖ್ಯ ಕಥಾ ಸಂಕಲನಗಳು. ಮೇಲೆ ಆಯ್ದ ಕಥೆಗಳ ಸಂಕಲನವೂ (2005)ಇದೆ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಕಾದಂಬರಿಗಳು. ಮೊದಲ ಕಾದಂಬರಿ ‘ಜಿಹಾದ್’ ಚರ್ಚೆಗೆ ಸಾಕಷ್ಟು ಗ್ರಾಸ ಒದಗಿಸಿದ ಕೃತಿ. ‘ಓದಿರಿ’ ಪ್ರವಾದಿ ಮುಹಮ್ಮದರ ಬದುಕನ್ನು ಆಧರಿಸಿದ ಕಾದಂಬರಿ.

ತೀಕ್ಷ್ಣ ಸಂವೇದನೆ, ಬೌದ್ಧಿಕ ಭೋರ್ಗರೆತವಾಗದ ವಿಚಾರ-ವಿವೇಚನೆ, ರಕ್ತಮಾಂಸ ದುಮುಗುಟ್ಟುವ ಪಾತ್ರಗಳ ಅಸಲಿ ಚಿತ್ರಣ, ಸಂಯಮದ ನಿರೂಪಣೆ- ಬೊಳುವಾರರ ಬರವಣಿಗೆಯ ಮುಖ್ಯ ಗುಣಗಳು. ಭಾಷೆ ಪಾರದರ್ಶಕವೂ ಹೌದು ಹಗುರವಾದರೂ ಮರ್ಮಘಾತುಕವಾಗಬಹುದಾದ ವ್ಯಂಗ್ಯವಿಡಂಬನೆಯೂ ಹೌದು. ಇದಕ್ಕೆ ಒಂದು ತುಂಡಿನ ಗೋಡೆ ಉತ್ತಮ ನಿದರ್ಶನ. ಆದರೆ ಬೊಳುವಾರು ಎಂದೂ ಭಾಷಾ‘ವಾರ್’ ಮಾಡುವವರಲ್ಲ.

‘‘ಸಾಹಿತ್ಯದಲ್ಲಿ ಬೊಳುವಾರರ ಮುಖ್ಯ ಆಸ್ಥೆ ಇರುವುದು ಮಾನವೀಯ ಸಂಬಂಧಗಳಲ್ಲಿ’’ ಎನ್ನುವ ಖ್ಯಾತ ವಿಮರ್ಶಕ ಜಿ.ಎಸ್.ಆಮೂರರ ಮಾತು ಸತ್ಯ. ಮಾನವೀಯ ಸಂಬಂಧಗಳಿಗೆ ಅಡ್ಡಿಯಾಗುವ, ಮನುಷ್ಯ-ಮನುಷ್ಯರ ನಡುವೆ ಅಂತರ-ಕಂದಕಗಳನ್ನು ಸೃಷ್ಟಿಸುವ ‘ಧರ್ಮ’ ಬೊಳುವಾರರ ಸಾಹಿತ್ಯದ ಪ್ರಬಂಧ ದನಿಯಾಗಿದೆ. ಅಂತೆಯೇ, ಧರ್ಮಗಳು ಸೃಷ್ಟಿಸುವ ಇಕ್ಕಟ್ಟು-ಚೌಕಟ್ಟುಗಳ ನಡುವೆಯೂ ನಿರ್ಮಲವಾದ ಮಾನವ ಪ್ರೀತಿ, ಅಂತ:ಕರಣಗಳು ಏಕೆ ಸಾಧ್ಯವಾಗಬಾರದು ಎನ್ನುವುದು ಅವರ ಒಟ್ಟು ಬರವಣಿಗೆಯ ಅನ್ವೇಷಣೆಯಾಗಿದೆ.
 
ಬೊಳುವಾರರು ಕನ್ನಡ ಕಥಾ ಲೋಕಕ್ಕೆ ಮುಸ್ಲಿಂ ಸಮಾಜದ ಅಂತರಂಗದ ಬದುಕನ್ನು, ವರ್ಗ ತಾರತಮ್ಯಗಳ ಒಳನೋಟಗಳನ್ನೂ ಮೊತ್ತಮೊದಲಿಗೆ ಪರಿಚಯಿಸಿದವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ಹೊಸ ಚರ್ಚೆಗೆ ನಾಂದಿ ಹಾಡಿದವರು ಎನ್ನುವ ಅಭಿಪ್ರಾಯವೊಂದು ವಿಮರ್ಶೆಯ ವಲಯದಲ್ಲಿದೆ. ಮುಸ್ಲಿಂ ಸಂಸ್ಕೃತಿ ಮತ್ತು ಸಮಾಜ ಅವರ ಕಥೆಗಳ ನಾಭಿಬಿಂದು ಎನ್ನುವುದು ನಿಜವಾದರೂ ಅದೇ ಅಲಾಯಿದ ಅವರ ಕಥೆಗಳ ಜಗತ್ತು ಎಂದು ಹೇಳಲಾಗದು. ಅವರ ಮುತ್ತುಪ್ಪಾಡಿ ಮುಸ್ಲಿಂ ಕಾಲನಿಯಲ್ಲ ಎಂಬುದಕ್ಕಿಂತ ಬೇರೊಂದು ನಿದರ್ಶನ ಇದಕ್ಕೆ ಬೇಕಾಗಿಲ್ಲ. ಅಲ್ಲಿ ನಾರಾಯಣ ಭಟ್ಟ, ಗಿರಿಜಾ, ಸಂಜೀವ, ಕೇಶವಾಚಾರ್ಯ, ಮೊಹಿಂದರ್ ಕೌರ್ ಮೊದಲಾದವರೂ ಇದ್ದಾರೆ. ಎಂದೇ ಅವರ ಕಥಾ ಲೋಕ ಬಹು ಸಂಸ್ಕೃತಿಯನ್ನೊಳಗೊಂಡ ಜಗತ್ತು. ಈ ಮಾತಿಗೆ ಜ್ವಲಂತ ನಿದರ್ಶನವಾಗಿ ‘ಸ್ವಾತಂತ್ರ್ಯದ ಓಟ’ ನಮ್ಮ ಕಣ್ಣ ಮುಂದಿದೆ.

ವಾಘಾ ಗಡಿಯಲ್ಲಿ ಆರಂಭವಾಗಿ ಕರಾಚಿ, ದಿಲ್ಲಿ, ಲಾಹೋರ್, ಮುತ್ತುಪ್ಪಾಡಿ- ಹೀಗೆ ಇಡೀ ಭಾರತ ಉಪಖಂಡವನ್ನೂ ಕ್ಯಾಲಿಫೋರ್ನಿಯಾ, ಬರ್ಲಿನ್‌ಗಳನ್ನೂ ಒಳಗೊಂಡಿರುವ ಅತಿ ವಿಸ್ತಾರದ ಭೂಮಿಕೆಯ ‘ಸ್ವಾತಂತ್ರ್ಯದ ಓಟ’ ಒಂದು ಮಹಾಯಾನ. ವಿಭಜನೆ ಕಾಲದಲ್ಲಿ ಸಿಖ್ ಹೆಣ್ಣು ಮಕ್ಕಳಿಬ್ಬರಿಗೆ ನೆರವಾಗಲೆಂದು ಪಾಕಿಸ್ತಾನದ ಗಡಿ ದಾಟಿ ಬಂದ ಮುಸ್ಲಿಂ ವ್ಯಕ್ತಿ ಕೇಂದ್ರಿತ ಕಥೆಯಾದರೂ ವಿಭಜನೆಯ ಚರಿತ್ರೆಯೇ, ಆ ಚರಿತ್ರೆಗೆ ಶೃತಿಯಂತೆ ಲಯಗೂಡಿಸಿರುವ ನೋವುಗಳೇ ಇಲ್ಲಿ ಮುಖ್ಯ ಪಾತ್ರ. ‘‘ವಿಭಜನೆಯಿಂದ ಬಾಬರಿ ಮಸೀದಿ ನೆಲಸಮದವರೆಗೆ, ಧಾರ್ಮಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಬಹುರೂಪಿ ಸಂಸ್ಕೃತಿಯಾಗಿ ಚಲನಶೀಲವೂ ಘಟನಾತ್ಮಕವೂ ಆದ ಭೂಭಾಗವೊಂದರ ಬದುಕಿನ ಓಟ-ನೋಟ-ದುರಂತಗಳನ್ನು ಸಾದೃಶ್ಯವಾಗಿ ದಾಖಲಿಸುವ ‘ಸ್ವಾತಂತ್ರ್ಯದ ಓಟ’ ಬದುಕಿನ ಮುಖ್ಯ ಸೆಲೆಯಾದ ಮಾನವೀಯತೆಯ ಶೋಧವಾಗಿದೆ’’ ಎನ್ನುವ ಎಸ್.ಜಿ.ಸಿದ್ದರಾಮಯ್ಯನವರ ಮಾತು ಕಾದಂಬರಿಯ ಕಾಣ್ಕೆಯೇ ಆಗಿದೆ.

ಸಾವಿರ ಪುಟಗಳಿಗೂ ಮಿಕ್ಕಿರುವ ಕಾದಂಬರಿಯ ಸ್ಥೂಲ ಪರಿಚಯಕ್ಕೂ ಈ ಅಂಕಣ ಸಾಲದು. ಬೊಳುವಾರರ ಸಣ್ಣ ಕಥೆಗಳನ್ನು ಕನ್ನಡ ವಿಮರ್ಶೆ ನ್ಯಾಯೋಚಿತವಾಗಿಯೇ ಗಮನಿಸಿದೆ. ಇದೇ ಮಾತನ್ನು ಅವರ ಕಾದಂಬರಿಗಳ ಬಗ್ಗೆ ಹೇಳಲಾಗದು. ‘ಸ್ವಾತಂತ್ರ್ಯದ ಓಟ’ದ ಮುನ್ನೆಲೆಯಲ್ಲಿ ಅವರ ಕಾದಂಬರಿಗಳ ಬಗ್ಗೆ ಇನ್ನಷ್ಟು ಅರ್ಥಪೂರ್ಣ ಚರ್ಚೆ- ಸಂವಾದಗಳು ಅಪೇಕ್ಷಣೀಯ. ಅದಕ್ಕೆ ಈಗಿನ ಪ್ರಶಸ್ತಿ ಅವಕಾಶ ಕಲ್ಪಿಸಿದೆ.

ಬೊಳುವಾರರ ಸಾಹಿತ್ಯ ಕೃಷಿಯ ಇನ್ನೊಂದು ಮುಖ್ಯ ಫಸಲೆಂದರೆ ಮಕ್ಕಳ ಸಾಹಿತ್ಯ. ‘ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ಮತ್ತು ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಕನ್ನಡ ಶಿಶು ಸಾಹಿತ್ಯಕ್ಕೆ ಅವರ ಗಣನೀಯವಾದ ಕೊಡುಗೆಗಳು. ಕನ್ನಡ ಕವಿವರೇಣ್ಯರ ಅತ್ಯುತ್ತಮ ಶಿಶು ಪ್ರಾಸಗಳನ್ನೊಳಗೊಂಡ ಸಂಪಾದಿತ ಕೃತಿ ‘ತಟ್ಟು ಚಪ್ಪಾಳೆ ಪುಟ್ಟ ಮಗು’ಎಲ್ಲ ಕಾಲಕ್ಕೂ ಸಂಗ್ರಹಯೋಗ್ಯವಾದುದು. ಪ್ರಶಸ್ತಿ ಪುರಸ್ಕಾರಗಳು ಬೊಳುವಾರರಿಗೆ ಹೊಸತೇನಲ್ಲ. ಭಾರತೀಯ ಸಾಹಿತ್ಯ ಸಂಸ್ಥಾನ ಪ್ರಶಸ್ತಿ(1981), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ(1997), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(2012) ಇತ್ಯಾದಿ ಪ್ರಶಸ್ತಿಗಳ ಯಾದಿ ದೊಡ್ಡದೇ ಇದೆ. ಸಾಹಿತ್ಯ, ಸಿನೆಮಾ ರಂಗಗಳ ಕೃತಿ ರಚನೆಗಳಿಗಾಗಿ ಬೊಳುವಾರರು ಪಡೆದಿರುವ ಹಲವು ಪ್ರಶಸ್ತಿಗಳ ಪೈಕಿ ಅವರು ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಪಡೆಯುತ್ತಿರುವ ಎರಡನೆಯ ಪ್ರಶಸ್ತಿ ಇದು. ‘ಪಾಪು ಗಾಂಧಿ...’ಗೆ ಮೊದಲ ಪ್ರಶಸ್ತಿ ಸಂದಿದೆ.

‘ಸ್ವಾತಂತ್ರ್ಯದ ಓಟ’ಕ್ಕೆ ಬೊಳುವಾರು ಗಳಿಸಿರುವ ಪ್ರಶಸ್ತಿ ಎರಡು ಕಾರಣಗಳಿಂದಾಗಿ ಮಹತ್ವಪೂರ್ಣವಾದುದು. ಮೊದಲಿಗೆ ಒಂದು ಸಾಹಿತ್ಯ ಕೃತಿಯಾಗಿ ನಮ್ಮನ್ನು ಥಟ್ಟನೆ ತನ್ನೆದೆಗೆ ಸೆಳೆದುಕೊಳ್ಳುವ ಹಾಗೂ, ಎರಡನೆಯದಾಗಿ ಒಂದು ಕಾಲಘಟ್ಟದ ಮಾನವನ ಇತಿಹಾಸವಾಗಿ ನಮ್ಮ ಪ್ರಜ್ಞೆಯನ್ನು ಘಾತಿಸುವ ಬೊಳುವಾರರ ಸಾಧನೆ ಕಮ್ಮಿಯೇನಲ್ಲ. ‘ಸ್ವಾತಂತ್ರ್ಯದ ಓಟ’ದಲ್ಲಿ ‘‘ಧರ್ಮವೆಂಬುದು ಹುಟ್ಟಿನ ಮೂಲದಲ್ಲಿ ಕಟ್ಟಿಹಾಕಿಕೊಂಡ ಧರ್ಮವಾಗದೆ ಜಾತ್ಯತೀತ ಭಾವದಲ್ಲಿ ಬದುಕನ್ನು ಮುನ್ನಡೆಸುವ ಮಾನವೀಯ ನಡೆಯೇ ಆಗಿದೆ’’ ಎನ್ನುವ ಮಾತು ಬೊಳುವಾರರ ಒಟ್ಟು ಸಾಹಿತ್ಯದ ಬೀಜರೂಪಿ ಮಾತಾಗಿದೆ. ಎಂದೇ ಕೇಂದ್ರ ಸಾಹಿತ್ಯ ಅಕಾಡಮಿಯ ಈ ಪ್ರಶಸ್ತಿ ಅವರ ಸಾಹಿತ್ಯದ ಮೂಲ ಆಶಯವಾದ ಮಾನವೀಯತೆ-ಜಾತ್ಯತೀತತೆಗಳಿಗೆ ಸಂದ ವಿಜಯವಾಗಿದೆ.
   ಬೊಳುವಾರರಿಗೆ ಅಭಿನಂದನೆಗಳು.

Writer - ಜಿ. ಎನ್. ರಂಗನಾಥ್ ರಾವ್

contributor

Editor - ಜಿ. ಎನ್. ರಂಗನಾಥ್ ರಾವ್

contributor

Similar News

ನಾಸ್ತಿಕ ಮದ