ಸಚಿವರನ್ನು ಹಿಂದಿಕ್ಕಿದ ಜಾಲತಾಣಿಗರು
ಉದ್ದೇಶಿತ ವೇತನ ಪಾವತಿ ತಿದ್ದುಪಡಿ ಕಾಯ್ದೆ ಬಗ್ಗೆ ವಿವರ ನೀಡಲು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಬಂಡಾರು ದತ್ತಾತ್ರೇಯ ಬುಧವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಪ್ರಮುಖ ಘೋಷಣೆಯ ನಿರೀಕ್ಷೆಯಲ್ಲಿ ಬಂದಿದ್ದ ಪತ್ರಕರ್ತರಿಂದ ತುಂಬಿದ್ದ ಹಾಲ್‌ನಲ್ಲಿ ಸಚಿವರು ತಬ್ಬಿಬ್ಬು. ಸಚಿವರು ಗೊಂದಲದಲ್ಲಿ ಬಿದ್ದಿದ್ದರು. ವಾಸ್ತವವಾಗಿ ಹಾಲಿ ಕಾಯ್ದೆಗೆ ತರುವ ಸಣ್ಣ ತಿದ್ದುಪಡಿ ಅದು. ಇಷ್ಟಾಗಿಯೂ ಅದನ್ನು ಗೊಂದಲಮಯವಾಗಿಸಲಾಗಿತ್ತು. ಆಗ ಕೆಲವರು, ಸಚಿವರ ಟ್ವೀಟ್ ಖಾತೆಯನ್ನು ನೋಡುವಂತೆ ಸಲಹೆ ಮಾಡಿದರು. ಅಚ್ಚರಿ ಎಂದರೆ ಸಚಿವರು ಗೊಂದಲದಲ್ಲಿ ಮಾತನಾಡುತ್ತಿದ್ದರೆ, ಅವರ ಟ್ವಿಟ್ಟರ್ ಖಾತೆಯಲ್ಲಿ ವಿವರ ಅಪ್‌ಡೇಟ್ ಆಗುತ್ತಿತ್ತು. ಅವರ ಪತ್ರಿಕಾಗೋಷ್ಠಿಗಿಂತ ಹೆಚ್ಚಾಗಿ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಪಷ್ಟತೆ ಕಂಡುಬಂತು. ಸಚಿವರು ನೇಮಕ ಮಾಡಿಕೊಂಡ ಸಾಮಾಜಿಕ ಜಾಲತಾಣದ ತಂಡ ಪ್ರತಿ ವಿವರವನ್ನೂ ಅಪ್ ಡೇಟ್ ಮಾಡಿತ್ತು. ಸಚಿವರು ಪತ್ರಿಕಾಗೋಷ್ಠಿ ನಡೆಸುವ ಮುನ್ನ ತಮ್ಮ ಟ್ವಿಟ್ಟರ್ ತಂಡದಿಂದ ಸ್ಪಷ್ಟತೆ ಪಡೆದುಕೊಳ್ಳಬಹುದಿತ್ತು ಎಂದು ಕೆಲ ಪತ್ರಕರ್ತರು ಅಭಿಪ್ರಾಯಪಟ್ಟರು.
ಬಿಜೆಪಿ ಹಿರಿಯಜ್ಜನ ಸಿಟ್ಟು
ಸಿಟ್ಟುಗೊಂಡ ಹಿರಿಯಜ್ಜನ ಮನಃಸ್ಥಿತಿ ಜನಪ್ರಿಯ ಬಾಲಿವುಡ್ ನಟನಿಂದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿಯವರಿಗೆ ವರ್ಗಾಂತರವಾಗಿದೆ., ಆದರೆ ಆಡ್ವಾಣಿ ಕೊ ಗುಸ್ಸಾ ಕ್ಯೋಂ ಆತಾ ಹೇ? ಈ ಪ್ರಶ್ನೆ ಬಿಜೆಪಿ ಮುಖಂಡರು ಹಾಗೂ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ ಸದನ ವ್ಯವಸ್ಥಾಪಕರ ಕಳವಳಕ್ಕೆ ಕಾರಣವಾಗಿದೆ. ಒಂದು ಸಿದ್ಧಾಂತದ ಪ್ರಕಾರ, ಸದನ ಕಲಾಪಕ್ಕೆ ಪದೇ ಪದೇ ಅಡ್ಡಿಯಾಗುತ್ತಿರುವುದರಿಂದ ಆಡ್ವಾಣಿ ಮುನಿಸಿಕೊಂಡಿದ್ದಾರೆ. ಆದರೆ ಆಡ್ವಾಣಿ ಸಿಟ್ಟಿಗೆ ಇನ್ನೊಂದು ವಿವರಣೆಯೂ ಇದೆ. ಬಿಜೆಪಿ ಆಂತರಿಕ ವಲಯದ ಕೆಲವರ ಶಂಕೆಯಂತೆ, ಆಡ್ವಾಣಿಯವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಪಕ್ಷ ಬಿಂಬಿಸದಿರುವುದು ಅವರ ಸಿಟ್ಟಿಗೆ ಕಾರಣ. ಆದರೆ ಈ ಆಪಾದನೆಯನ್ನು ಆಡ್ವಾಣಿ ಬೆಂಬಲಿಗರು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಇದು ಬಿಜೆಪಿ ಮಾರ್ಗದರ್ಶಕ ಮಂಡಲದ ಹಿರಿಯ ಸದಸ್ಯರ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ ಸತ್ಯ ಬಹುಶಃ ಇವೆರಡರ ಮಧ್ಯೆ ಇರಬಹುದು.
ಜೇಟ್ಲಿ ಜನಪ್ರಿಯತೆ
ನೋಟು ರದ್ದತಿ ತೊಂದರೆಗಳಿಂದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಹಲವು ಪ್ರಶ್ನೆಗಳು ಎದುರಾಗಿರಬಹುದು. ಆದರೆ ನಿಸ್ಸಂದೇಹವಾಗಿ ಅವರು ಇನ್ನೂ ಜನಪ್ರಿಯ ವ್ಯಕ್ತಿ; ಕನಿಷ್ಠ ಸಂಸದರ ವಲಯದಲ್ಲಾದರೂ. ಸಂಸತ್ ಕಲಾಪ ನಡೆಯುತ್ತಿದ್ದಾಗ, ರಾಜಕೀಯವಾಗಿ ಅವರನ್ನು ವಿರೋಧಿಸುವವರಿಗೂ ಸೇರಿದಂತೆ ಜೇಟ್ಲಿಯ ದ್ವಾರ ಎಲ್ಲರಿಗೂ ಮುಕ್ತವಾಗಿತ್ತು. ಎಲ್ಲ ಪಕ್ಷಗಳಲ್ಲಿ ಅವರ ಜನಪ್ರಿಯತೆಗೆ ಇನ್ನೊಂದು ಕಾರಣವೆಂದರೆ, ಒಳ್ಳೆಯ ಸಲಹೆ ನೀಡುವ ಅವರ ಗುಣ. ಇದರ ಜತೆಗೆ ಅವರ ಚೇಂಬರ್‌ನಲ್ಲಿ ಸಿಗುವ ತಿನಸು ಕೂಡಾ ಆಕರ್ಷಣೆಯ ಇನ್ನೊಂದು ಪ್ರಮುಖ ಅಂಶ ಎನ್ನುವುದನ್ನು ಹೇಳಬೇಕಿಲ್ಲ. ಈ ಎಲ್ಲ ಕಾರಣಗಳಿಂದ ಜೇಟ್ಲಿ ಕೊಠಡಿಗೆ ಜನ ಜೇನ್ನೊಣದಂತೆ ಮುತ್ತುತ್ತಾರೆ. ಎಸ್ಪಿಮುಖಂಡ ರಾಮಗೋಪಾಲ್ ಯಾದವ್ ಅವರು ಒಳ್ಳೆಯ ಶಾಲು ಹಾಗೂ ಶೂ ಧರಿಸಿ ಆಗಮಿಸಿದಾಗ, ಅವರ ಖರೀದಿ ಬಗ್ಗೆ ಒಂದಷ್ಟು ಮಂದಿ ಕುತೂಹಲದಿಂದ ಕೇಳಿದರು. ಈ ವಿಶಿಷ್ಟ ಅಭಿರುಚಿಗೆ ಜೇಟ್ಲಿ ಮಾರ್ಗದರ್ಶಕರು ಎಂದು ವರ್ಮ ಹೇಳುವುದು ಕೇಳಿಸಿತು.
ಜೋತಿರಾದಿತ್ಯ ಸಿಂಧಿಯಾ ಬಿದ್ದ ನಾಯಕ?
ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಾಜಕೀಯ ಜೀವನ ಇನ್ನೂ ಉದಯವಾಗುತ್ತಿದ್ದು, ಕಾಂಗ್ರೆಸ್ ನಿಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಸಭೆ ವಿಚಾರದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಆದರೆ ಸಿಂಧಿಯಾ ಅವರ ಪರವಾಗಿ ಇದು ತಿರುಗಿದ್ದು ಎಲ್ಲರಿಗೂ ಸಂತಸ ತಂದಿಲ್ಲ. ಹಿರಿಯ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿ ಬಳಿಗೆ ಹೋಗಿ, ಸಿಂಧಿಯಾ ಆಯೋಜಿಸಿದ ಈ ಸಭೆಯಿಂದಾಗಿ, ನೋಟು ರದ್ದತಿ ಹಾಗೂ ಉನ್ನತ ಹಂತದಲ್ಲಿನ ಭ್ರಷ್ಟಾಚಾರ ವಿರುದ್ಧದ ರಾಹುಲ್‌ಗಾಂಧಿ ಪ್ರತಿಭಟನೆ ಮೊನಚು ಕಳೆದುಕೊಂಡಂತಾಗಿದೆ ಎಂದರು. ಎನ್‌ಡಿಎ ಕೂಟದ ಹೊರಗಿನ ಪಕ್ಷಗಳ ಹಲವು ಮಂದಿ ಕೂಡಾ ಇತರ ಪಕ್ಷಗಳನ್ನು ಕೈಬಿಟ್ಟು ಏಕಾಂಗಿಯಾಗಿ ಹೋರಾಟಕ್ಕೆ ಮುಂದಾಗಿರುವ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಯಾವುದಾದರೂ ವಿಫಲವಾದರೆ, ಕಾಂಗ್ರೆಸ್ ಬಲಿಪಶುವಿಗಾಗಿ ಹುಡುಕುತ್ತದೆ. ಬಹುಶಃ ಸಿಂಧಿಯಾ ಇದಕ್ಕೆ ಇತ್ತೀಚಿನ ಉದಾಹರಣೆ!
ನೋಟು ರದ್ದತಿ: ವೆಂಕಯ್ಯ ನಾಯ್ಡು ವಿವರಣೆ
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರ ಹಾಸ್ಯಪ್ರಜ್ಞೆ ಎಲ್ಲರಿಗೂ ಚಿರಪರಿಚಿತ. ಅಂತೆಯೇ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಳ್ಳುವಲ್ಲೂ ಎಷ್ಟು ಆಳಕ್ಕೂ ಹೋಗಬಲ್ಲರು. ಮೋದಿ ಭಾರತಕ್ಕೆ ದೇವರು ಕೊಟ್ಟ ಉಡುಗೊರೆ ಎಂದು ನಾಯ್ಡು ಹೇಳಿದ್ದನ್ನು ಜನ ಮರೆತಿಲ್ಲ. ದೇಶದಲ್ಲಿ ನೋಟು ರದ್ದತಿ ಹಾಗೂ ಅದರಿಂದಾಗಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರಕರ್ತರೊಬ್ಬರು ನಾಯ್ಡು ಅವರನ್ನು ಪ್ರಶ್ನಿಸಿದಾಗ, ಸಚಿವರು ಅದನ್ನು ವಿವರಿಸಲು ಹೊಸ ದಾರಿ ಕಂಡುಕೊಂಡರು.
ನೋಟು ರದ್ದತಿ ಎನ್ನುವುದು ಕಾಳಧನ ಎಂಬ ಕ್ಯಾನ್ಸರ್ ನಾಶಪಡಿಸಲು ಇರುವ ಕಿಮೊಥೆರಪಿ. ಕಿಮೊಥೆರಪಿ ವೇಳೆ ನಿಮಗೆ ಸ್ವಲ್ಪನೋವಾಗಬಹುದು. ನಿಮ್ಮ ಕೂದಲು ಕೂಡಾ ನಷ್ಟವಾಗಬಹುದು. ಆದರೆ ಅದು ಕ್ಯಾನ್ಸರ್ ಗುಣಪಡಿಸುತ್ತದೆ ಕೂಡಾ ಎಂದು ವಿಶ್ಲೇಷಿಸಿದರು. ಆದರೆ ಈ ಕಿಮೊಥೆರಪಿಯ ನೋವು ವಾಸ್ತವವಾಗಿ ಕಾಳಧನಿಕರಿಗೆ ತಟ್ಟುವ ಬದಲಾಗಿ, ಜನಸಾಮಾನ್ಯರಿಗೆ ತಟ್ಟಿದೆ ಎಂದು ಒಬ್ಬರು ಹೇಳುವುದು ಕೇಳಿಬಂತು.