ಕತ್ತಲ ಗರ್ಭದಿಂದ ಹೊಸ ವರ್ಷದತ್ತ
ಇಡೀ ಜಗತ್ತು ಬಂಡವಾಳಶಾಹಿ ಲಾಭಕೋರತನದ ಹೊಡೆತಕ್ಕೆ ಸಿಕ್ಕು ತತ್ತರಿಸುವಾಗಲೇ ಮತ್ತೆ ಹೊಸ ವರ್ಷ ಬಂದಿದೆ. ಅಮೆರಿಕದ ಸಾಮ್ರಾಜ್ಯವಾದಕ್ಕೆ ಪರ್ಯಾಯವೇ ಇಲ್ಲ ಎಂಬ ಕೃತಕ ವಾತಾವರಣವನ್ನು ಹುಟ್ಟು ಹಾಕಿದ ಈ ದಿನಗಳಲ್ಲಿ ಭಸ್ಮ್ಮಾಸುರನೊಬ್ಬ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ಅಫ್ಘನಿಸ್ತಾನ್, ಇರಾಕ್, ಲಿಬಿಯಾ ಮುಂತಾದ ದೇಶಗಳ ಅಧ್ಯಕ್ಷರನ್ನು ಮುಗಿಸಿ, ಆ ದೇಶಗಳಲ್ಲಿ ಅರಾಜಕತೆ ಸೃಷ್ಟಿಸಿ ತನ್ನ ಲೂಟಿಗೆ ಸುಗಮ ದಾರಿ ಮಾಡಿಕೊಂಡ ಅಮೆರಿಕ ವಿಶ್ವದ ಸಂಪತ್ತನ್ನು ಕೊಳ್ಳೆ ಹೊಡೆಯುವ ಸಂಧಾನ ನಡೆಸಿದೆ.
ಹಿಂದೆಲ್ಲ ಸಾಮ್ರಾಜ್ಯಶಾಹಿಯ ಹುನ್ನಾರಗಳಿಗೆ ಕಡಿವಾಣ ಹಾಕಲು ಸಮಾಜವಾದಿ ಸೋವಿಯತ್ ರಶ್ಯ ಇತ್ತು. ಪೂರ್ವ ಯುರೋಪಿನ ಸಮಾಜವಾದಿ ದೇಶಗಳಿದ್ದವು. ಆದರೆ ಈಗ ಜಗತ್ತನ್ನು ನಾಶ ಮಾಡಲು ಹೊರಟ ಈ ಕರಾಳ ಶಕ್ತಿಗೆ ಪರಿಣಾಮಕಾರಿ ಪ್ರತಿರೋಧ ಕಂಡು ಬರದಂತಹ ಸನ್ನಿವೇಶ ಉಂಟು ಮಾಡಿದೆ. ಮಾರುಕಟ್ಟೆ ಆರ್ಥಿಕತೆಯನ್ನು ಚೀನಾ ಒಪ್ಪಿದೆ. ಕ್ಯಾಸ್ಟ್ರೊ ಸಾವಿನ ನಂತರ ಕ್ಯೂಬಾ ಭವಿಷ್ಯವೇನು ಎಂಬುದು ಸ್ಪಷ್ಟವಾಗಿಲ್ಲ. ಚವೇಜ್ ನಂತರ ನಿಕರಾಗುವಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಬಂಡವಾಳಶಾಹಿಯ ಲಾಭಕೋರತನ ಪರಿಸರದ ಮೇಲೆ ದುಷ್ಪರಿಣಾಮ ಬೀರಿ ಮನುಕುಲದ ಉಳಿವಿಗೆ ಸವಾಲು ಆಗಿದೆ.
ಇತ್ತ ಭಾರತದಲ್ಲಿ ಕತ್ತಲು, ಕಗ್ಗತ್ತಲಿನ ಛಾಯೆ ನೆರಳಲ್ಲಿ ನರಳಿದ ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಪೂರ್ವ ಸಿದ್ಧತೆಯಿಲ್ಲದೇ ನೋಟು ಅಮಾನ್ಯಗೊಳಿಸಿದ ಪರಿಣಾಮವಾಗಿ ಬ್ಯಾಂಕು ಮತ್ತು ಎಟಿಎಂಗಳ ಎದುರು ದುಡ್ಡಿಗಾಗಿ ಪಾಳಿಯಲ್ಲಿ ನಿಂತು ದುರಂತ ಸಾವಿಗೀಡಾದವರ ಸಂಖ್ಯೆ ನೂರು ದಾಟಿದೆ. ಮೃತಪಟ್ಟವರ ಈ ಬಂಧುಗಳ ಕಹಿ ನೆನಪಿನೊಂದಿಗೆ ಕಾಲಿಡುತ್ತಿದ್ದೇವೆ. ಬರಲಿರುವ ವರ್ಷ ಇನ್ನೆಂತಹ ಸಂಕಟಗಳು ತರುತ್ತವೆ ಎಂಬ ನಿಟ್ಟುಸಿರಿನಲ್ಲಿ ಮನುಷ್ಯ ಸಹಜ ಆಸೆ ಭರವಸೆಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ.
ಪಂಡಿತ ಜವಾಹರಲಾಲ್ ನೆಹರೂ ಅವರಂತಹ ಮೇಧಾವಿ ಅಲಂಕರಿಸಿದ್ದ ಆಸನದ ಮೇಲೆ ಅಮಾವಾಸ್ಯೆ ಅಂಧಕಾರ ಮೈಚಾಚಿ ಕುಳಿತಾಗ ಸಹಜವಾಗಿ ಆತಂಕ ಉಂಟು ಮಾಡುತ್ತದೆ. ಉತ್ತಮ ಸಂಸ್ಕಾರವಿಲ್ಲದ, ಮನುಷ್ಯ ಪ್ರೀತಿಯಿಲ್ಲದ, ಅಧ್ಯಯನವಿಲ್ಲದ ಪರಂಪರೆಯಲ್ಲಿ ಬೆಳೆದ ವ್ಯಕ್ತಿ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಚರ್ಚೆಯಲ್ಲಿ ಅನೇಕ ಉದಾಹರಣೆ ಸಿಗುತ್ತವೆ. ಭಿನ್ನಾಭಿಪ್ರಾಯಕ್ಕೆ ಮನ್ನಣೆ, ಸಂವಾದ ಸಮಾಲೋಚನೆ, ಪ್ರಜಾಪ್ರಭುತ್ವದ ಜೀವಾಳ. ಆದರೆ ಚರ್ಚೆಯಲ್ಲೇ ನಂಬಿಕೆ ಇಲ್ಲದ ಮತ್ತು ತನಗೆ ತೋಚಿದ್ದನ್ನೇ ಮಾಡುವ ವ್ಯಕ್ತಿಗೆ ಪ್ರಜಾಪ್ರಭುತ್ವದಲ್ಲಿ ಜಾಗ ಇರುವುದಿಲ್ಲ. ಆದರೆ ಒಮ್ಮಿಮ್ಮೆ ಚುನಾವಣೆ ಪದ್ಧತಿ ಲೋಪ ಬಳಸಿಕೊಂಡು ಭಸ್ಮ್ಮಾಸುರರು ಅಧಿಕಾರಕ್ಕೆ ಬರುತ್ತಾರೆ.
ಕಳೆದ ಶತಮಾನದ ಮೂರನೆ ದಶಕದಲ್ಲಿ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ಇಟಲಿಯಲ್ಲಿ ಮುಸಲೋನಿ ಇದೇ ತರಹ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದರು. ಕುರ್ಚಿ ಹಿಡಿದ ನಂತರ ಹತ್ತಿ ಬಂದ ಏಣಿಯನ್ನೇ ಅವರು ಒದ್ದರು. ಜನಾಂಗ ದ್ವೇಷ ದಳ್ಳುರಿಯಲ್ಲಿ ಈ ದೇಶಗಳು ಬೆಂದು ಹೋದವು. ಜರ್ಮನ್ ಪಾರ್ಲಿಮೆಂಟ್‌ಗೆ ತಾನೇ ಬೆಂಕಿ ಹಚ್ಚಿ ಅದನ್ನು ಕಮ್ಯುನಿಸ್ಟರ ತಲೆಗೆ ಕಟ್ಟಲು ಹಿಟ್ಲರ್ ಯತ್ನಿಸಿದ. ಆದರೆ ಆಗ ಸೋವಿಯತ್ ರಶ್ಯ ಇತ್ತು. ಅಲ್ಲಿ ಸ್ಟಾಲಿನ್ ಇದ್ದರು. ರಶ್ಯದ ಕೆಂಪು ಸೇನೆ ಈ ಫ್ಯಾಶಿಸ್ಟ್ ಸರ್ವಾಧಿಕಾರಿಗಳನ್ನು ಬಗ್ಗು ಬಡಿಯಿತು. ಆದರೆ ಈಗ ಸೋವಿಯತ್ ರಶ್ಯ ಇಲ್ಲ. ಸ್ಟಾಲಿನ್ ಇಲ್ಲ. ಪರ್ಯಾಯವಾದ ಸಮಾಜವಾದಿ ಆರ್ಥಿಕ ವ್ಯವಸ್ಥೆಯಿಲ್ಲ. ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಗುಜರಾತ್ ಹತ್ಯಾಕಾಂಡದ ರಕ್ತದ ಕಲೆಗಳನ್ನು ಅಂಟಿಸಿಕೊಂಡೇ ಸಂಸತ್ತು ಪ್ರವೇಶಿಸಿದ ವ್ಯಕ್ತಿ 70 ವರ್ಷ ಕಾಲ ಈ ದೇಶವನ್ನಾಳಿದವರು ಹಾಳು ಮಾಡಿದ್ದನ್ನು ಸರಿಪಡಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.
ಕಳೆದ 70 ವರ್ಷಗಳಲ್ಲಿ ಭಾರತ ಈ ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣ ಈ ದೇಶವನ್ನು ಹಿಂದೆ ಆಳಿದವರು ಜೋಪಾನವಾಗಿ ಕಾಪಾಡಿಕೊಂಡು ಬಂದ ಪ್ರಜಾಪ್ರಭುತ್ವ ವ್ಯವಸ್ಥೆ. ಹೊಸದಾಗಿ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಧೂಳಿಪಟವಾಗಿದೆ. ಆದರೆ ಭಾರತದಲ್ಲಿ ಅದು ಜೀವಂತ ಆಗಿರುವುದರಿಂದಲೇ ಚಹಾ ಮಾರುತ್ತಿದ್ದ ವ್ಯಕ್ತಿಯೊಬ್ಬ ಪ್ರಧಾನಿಯಾಗಲು ಸಾಧ್ಯವಾಯಿತು. ಇದರ ಶ್ರೇಯಸ್ಸು ಈ ದೇಶಕ್ಕೆ ಸಂವಿಧಾನ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಆಧುನಿಕ ಭಾರತ ನಿರ್ಮಿಸಿದ ಶ್ರೇಯಸ್ಸು ಗಾಂಧಿ, ನೆಹರೂ, ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ದೇವೇಗೌಡ ಮತ್ತು ಮೋದಿ ಪಕ್ಷದ ವಾಜಪೇಯಿ ಅವರಿಗೆ ಸಲ್ಲಬೇಕು. ಹಿಂದಿನ 70 ವರ್ಷದ ಇತಿಹಾಸದಲ್ಲಿ ಇವರೆಲ್ಲರೂ ಇದ್ದಾರೆ. ಇವರೆಲ್ಲ ಹಾಳು ಮಾಡಿದ್ದಾರೆ. ನಾನು ಉದ್ದಾರ ಮಾಡುತ್ತೇನೆ ಎನ್ನುವುದು ದುರಹಂಕಾರ ಆಗುತ್ತದೆ.
500 ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ಕ್ರಮ ಈಗಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದೆ. ಸಾಮಾನ್ಯವಾಗಿ ಚಲಾವಣೆಯಲ್ಲಿರುವ ನೋಟುಗಳನ್ನು ರಿಸರ್ವ್ ಬ್ಯಾಂಕ್ ರದ್ದುಗೊಳಿಸುತ್ತದೆ. ಆದರೆ ಈ ಬಾರಿ ಆ ಬ್ಯಾಂಕ್‌ಗೂ ಗೊತ್ತಿಲ್ಲದೇ, ಹಣಕಾಸು ಸಚಿವರಿಗೂ ಗೊತ್ತಿಲ್ಲದೇ ನವೆಂಬರ್ 8ರಂದು ಟಿವಿಯಲ್ಲಿ ಪ್ರತ್ಯಕ್ಷವಾಗಿ ಒಮ್ಮಿಂದೊಮ್ಮೆಲೇ ನೋಟು ರದ್ದತಿ ವಿಚಾರ ಪ್ರಕಟಿಸಿದರು. ಪೂರ್ವ ಸಿದ್ಧತೆಯಿಲ್ಲದೆ ಮಾಡಿದ ಘೋಷಣೆ ಪರಿಣಾಮವಾಗಿ ಶೇ.85ರಷ್ಟು ನೋಟು ಅಮಾನ್ಯಗೊಂಡು ಜನರು ಪರದಾಡುವಂತಾಯಿತು. ರಿಸರ್ವ್ ಬ್ಯಾಂಕ್‌ಗೆ ತಿಳಿಸದೇ ನೋಟು ರದ್ದುಗೊಳಿಸಿದ ಈ ವ್ಯಕ್ತಿ ನಂತರ ಪರಿಸ್ಥಿತಿ ನಿಭಾಯಿಸಲು ಆ ಬ್ಯಾಂಕ್‌ಗೆ ತಿಳಿಸಿದರು.
ಭಯೋತ್ಪಾದಕರು ಮತ್ತು ನಕ್ಸಲರ ನಿಗ್ರಹಕ್ಕಾಗಿ ನೋಟು ರದ್ದುಗೊಳಿಸಿದ್ದಾಗಿ ಮೊದಲು ಹೇಳಲಾಯಿತು. ನಂತರ ಕಪ್ಪು ಹಣ ಬಯಲುಗೊಳಿಸಲು ರದ್ದು ಮಾಡಿರುವುದಾಗಿ ಹೇಳಲಾಯಿತು. ಈಗ ನಗದು ರಹಿತ ಆರ್ಥಿಕತೆ ಬಗ್ಗೆ ಧಾರಾಳ ಉಪದೇಶ ನೀಡಲಾಗುತ್ತಿದೆ. ಕಪ್ಪು ಹಣ ಹೊರಗೆಳೆಯುವ ನೆಪದಲ್ಲಿ ದಕ್ಷಿಣ ಭಾರತದ ಬಿಜೆಪಿಯೇತರ ಸರಕಾರಗಳು ಅಧಿಕಾರ ಇರುವ ರಾಜ್ಯಗಳಲ್ಲಿ ಐಟಿ ದಾಳಿ ನಡೆಯುತ್ತಿವೆ. ಬ್ಯಾಂಕುಗಳಿಗೆ 70 ಲಕ್ಷ ಕೋಟಿ ರೂಪಾಯಿ ಟೋಪಿ ಹಾಕಿದ ಕಾರ್ಪೊರೇಟ್ ಬಂಡವಾಳಶಾಹಿಗಳನ್ನು ರಕ್ಷಿಸಲು ನೋಟು ಅಮಾನ್ಯಗೊಳಿಸುವ ಮತ್ತು ಜನಸಾಮಾನ್ಯರ ದುಡ್ಡು ಬ್ಯಾಂಕ್‌ನಲ್ಲೇ ಉಳಿಯುವಂತೆ ಮಾಡಿ ಬ್ಯಾಂಕು ದಿವಾಳಿಯಾಗಿಲ್ಲ ಎಂದು ತೋರಿಸುವ ಹುನ್ನಾರ ನಡೆದಿದೆ. ಮಾಡಬಾರದ್ದನ್ನೆಲ್ಲ ಮಾಡಿ, ಸಂಸತ್ತಿನಲ್ಲಿ ಮಾತನಾಡದೇ ಬಹಿರಂಗ ಸಭೆಗಳಲ್ಲಿ ಬಂದು, ಸದನದಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ. ನನ್ನ ಜೀವಕ್ಕೆ ಅಪಾಯವಿದೆ ಎಂದು ಕಿರುಚಾಡುವ ಈ ವ್ಯಕ್ತಿಯ ಭಾಷಣಗಳು ಹಿಟ್ಲರ್‌ನ ಭಾಷಣಗಳನ್ನು ನೆನಪಿಗೆ ತರುತ್ತವೆ.
ನೋಟು ಅಮಾನ್ಯಗೊಳಿಸಿದ ಒಂದೇ ಏಟಿಗೆ ಗುಜರಾತ್ ಹತ್ಯಾಕಾಂಡ, ಗೋರಕ್ಷಣೆ ಹೆಸರಿನಲ್ಲಿ ನಡೆದ ಅಲ್ಪಸಂಖ್ಯಾತರು ಮತ್ತು ದಲಿತರ ಕಗ್ಗೊಲೆಗಳು ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣ ಇವನ್ನೆಲ್ಲ ಮುಚ್ಚಿ ಹಾಕಲಾಗಿದೆ. ಆರ್ಥಿಕ ಹೊಡೆತದಿಂದ ಇಡೀ ರಾಷ್ಟ್ರ ತಲ್ಲಣಗೊಂಡಿರುವ ಈ ದಿನಗಳಲ್ಲಿ ಕೂಡ ಸಂಘ ಪರಿವಾರದ ಹಿಂದೂ ರಾಷ್ಟ್ರ ಅಜೆಂಡಾ ನಿರಾತಂಕವಾಗಿ ಜಾರಿಗೆ ಬರುತ್ತಿದೆ. ಜಾತ್ಯತೀತ ಜನತಾಂತ್ರಿಕ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಮಸಲತ್ತು ಭರದಿಂದ ನಡೆದಿದೆ. ಈ ಅಪಾಯಗಳನ್ನು ಆರು ದಶಕಗಳ ಹಿಂದೆಯೇ ಅರಿತಿದ್ದ ಡಾ. ಅಂಬೇಡ್ಕರ್ ಅವರು, ಭಾರತ ಒಂದು ವೇಳೆ ಹಿಂದೂರಾಷ್ಟ್ರವಾದರೆ, ನಾಶವಾಗುತ್ತದೆ ಎಂದು ಹೇಳಿದ್ದರು. ಪಂಡಿತ್ ಜವಾಹರಲಾಲ್ ನೆಹರೂ ಅವರು ಕೂಡ ಭಾರತದಲ್ಲಿ ಫ್ಯಾಶಿಸಂ ಬಂದರೆ ಹಿಂದೂ ಕೋಮುವಾದದ ಮೂಲಕ ಬರುತ್ತದೆ ಎಂದು ಹೇಳಿದ್ದರು. ಈಗ ಅಂತಹ ಅಪಾಯದ ದಿನಗಳು ಎದುರಿವೆ. ಜನವರಿ 1 ಕೋರೆಗಾಂವ್ ಸಮರದ ನೆನಪಿನ ದಿನ. ಪುಣೆಯ ಪೇಶ್ವೆ ರಾಜರು ತಮ್ಮ ಮೇಲೆ ಹೇರಿದ್ದ ಜಾತಿ ವ್ಯವಸ್ಥೆಯ ಸಂಕೋಲೆಗಳನ್ನು ಕಿತ್ತು ಬಿಸಾಡಿದ ದಲಿತರು 1818ರಲ್ಲಿ ಪೇಶ್ವೆಗಳ ವಿರುದ್ಧ ಸಮರ ಸಾರಿ ಜಯಶಾಲಿಯಾದ ದಿನವಿದು. ಅಂತಲೇ ಈ ದಿನದಂದು ಅಂಬೇಡ್ಕರ್ ಎಲ್ಲೇ ಇದ್ದರೂ ಕೋರೆಗಾಂವ್‌ಗೆ ಬಂದು ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದ್ದರು. ಈ ದಿನದಂದು ಪೇಶ್ವೆಗಳು ಅಂದು ನಿರ್ಮಿಸಿದ್ದ ಮನುವಾದಿ ವ್ಯವಸ್ಥೆಯನ್ನು ಮತ್ತೆ ಹಿಂದುತ್ವದ ಹೆಸರಿನಲ್ಲಿ ದೇಶದ ಮೇಲೆ ಹೇರಲು ಸಂಘ ಪರಿವಾರ ಹುನ್ನಾರ ನಡೆಸಿದೆ. ಅಂತಲೇ ಹೊಸ ವರ್ಷದ ಈ ಸವಾಲನ್ನು ಎದುರಿಸಲು ದಲಿತ ಮತ್ತು ಶೋಷಿತ ಸಮುದಾಯ ಸಜ್ಜಾಗಬೇಕಿದೆ.
ಇತ್ತ ಕರ್ನಾಟಕಕ್ಕೆ ಬಂದರೆ, ವಿಧಾನಸಭೆ ಚುನಾವಣೆಗೆ ಎರಡು ವರ್ಷ ಬಾಕಿಯುಳಿದಿದೆ. ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಯಡಿಯೂರಪ್ಪ 75ರ ಇಳಿವಯಸ್ಸಿನಲ್ಲೂ ಅಧಿಕಾರ ಮತ್ತು ಅದರಿಂದ ದೊರೆಯುವ ಸುಖ ಪಡೆಯಲು ವೃದ್ಧಾಪ್ಯ ಅಡ್ಡಿಯಾಗಬಾರದೆಂದು ಆಸ್ಟ್ರೇಲಿಯಾದ ವೈದ್ಯರಿಂದ ಚಿಕಿತ್ಸೆ ಪಡೆದು ಸಜ್ಜಾಗಿದ್ದಾರೆ. ಇವರೇ ಏಕೆ? ಕೆ.ಎಸ್.ಈಶ್ವರಪ್ಪ ಸಹ ಮುಖ್ಯಮಂತ್ರಿಯಾಗಬೇಕೆಂದು ಪಕ್ಷದ ಆದೇಶವನ್ನು ಉಲ್ಲಂಘಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇವರಿಬ್ಬರ ನಡುವೆ ಸಂಘ ಪರಿವಾರದ ಒಂದು ಗುಂಪು ಚಕ್ರವರ್ತಿ ಸೂಲಿಬೆಲೆ ಮುಂದಿನ ಮುಖ್ಯಮಂತ್ರಿಯೆಂದು ಬಿಂಬಿಸಿ ಪ್ರಚಾರ ಮಾಡುತ್ತಿದೆ. ಯಾರಾದರೂ ಮುಖ್ಯಮಂತ್ರಿಯಾಗಲಿ, ಆದರೆ ಬಿಜೆಪಿ ಅಧಿಕಾರಕ್ಕೆ ಬಂದು ಬ್ರಾಹ್ಮಣ್ಯದ ರಕ್ಷಣೆ ಮಾಡಲಿದೆ ಎಂದಿರುವ ಪೇಜಾವರ ಶ್ರೀಗಳು, ರಾಜ್ಯದಲ್ಲಿ ಗೋರಕ್ಷಣೆಗಾಗಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ಬಿಜೆಪಿ ಪರವಾಗಿ ವೋಟು ಬ್ಯಾಂಕು ನಿರ್ಮಿಸಲು ರಾಜ್ಯದೆಲ್ಲೆಡೆ ಕೋಮು ಉನ್ಮಾದ ಕೆರಳಿಸುತ್ತಿದೆ. ಇನ್ನೊಂದೆಡೆ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜಾತ್ಯತೀತ ಜನತಾದಳ ಉತ್ತರ ಕರ್ನಾಟಕದತ್ತ ಕಣ್ಣು ಹಾಕಿದೆ. ಹುಬ್ಬಳ್ಳಿಯಲ್ಲಿ ಮನೆ ಮಾಡಿದ ಕುಮಾರಸ್ವಾಮಿ ಅಳಿವು ಉಳಿವಿನ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಆದರೆ ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ಸಂಘ ಪರಿವಾರದ ಕೋಮುವಾದಿ ಹುನ್ನಾರಗಳನ್ನು ಅವರು ಬಯಲಿಗೆಳೆಯುತ್ತಿದ್ದಾರೆ. ಉಳಿದ ಕಾಂಗ್ರೆಸ್ ನಾಯಕರು ಸುಮ್ಮನಿರುವಾಗ, ಸಿದ್ದರಾಮಯ್ಯ ತಮ್ಮ ಮೇಳೆ ದಾಳಿ ಮಾಡುತ್ತಿರುವುದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕೋಪ ಬಂದಿದೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ರಾಜ್ಯ ಸರಕಾರದ ಕೆಲ ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾಟೆ ತೆಗೆದುಕೊಂಡು ಕೊಲೆ ಆರೋಪದ ಮೇಲೆ ಆವ್ಯಕ್ತಿ ಜೈಲಿನಲ್ಲಿ ಇರಬೇಕಿತ್ತು ಎಂದು ಟೀಕಿಸಿದ್ದರು. ಅಂತಲೇ ಸಿದ್ದರಾಮಯ್ಯ ಅವರನ್ನು ಮುಗಿಸಿದರೆ, ಕಾಂಗ್ರೆಸ್ ಮುಗಿಸಲು ಸಾಧ್ಯವೆಂದು ಬಿಜೆಪಿಯು ದಾಳಿಯನ್ನು ಅವರ ಮೇಲೆ ಕೇಂದ್ರೀಕರಿಸಿದೆ. ಇದು ಕರ್ನಾಟಕದ ಇಂದಿನ ಸ್ಥಿತಿ. ದೇಶದ ಎಲ್ಲೆಡೆ ನಡೆದಂತೆ ಪರ್ಯಾಯ ರಾಜಕಾರಣಕ್ಕಾಗಿ ಇಲ್ಲಿಯೂ ಯತ್ನ ನಡೆದಿದೆ. ಹೊಸ ವರ್ಷದಲ್ಲಿ ಹೊಸ ಸವಾಲುಗಳು ನಮ್ಮ ಮುಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ವರಿಗೂ ಸಮಾನ ಅವಕಾಶ ಇರುವ ಜಾತ್ಯತೀತ ಜನತಂತ್ರ ಭಾರತ ಉಳಿಸಿಕೊಳ್ಳುವುದೇ ನಮ್ಮೆಲ್ಲರ ಮೊದಲ ಕರ್ತವ್ಯವಾಗಿದೆ.