ವಿಜ್ಞಾನವೇ ಉಸಿರಾಗಿದ್ದ ಅಡ್ಯನಡ್ಕರು

Update: 2016-12-31 18:35 GMT

ವರ್ಷ ಕಳೆಯಿತು. ಹೊಸತು ಬಂತು. ಹೊಸ ವರುಷದ ಹೊಸ್ತಿಲಲ್ಲಿ ನಿಂತು ಒಂದು ಕ್ಷಣ ಹಿನ್ನೋಟ ಹರಿಸಿದಾಗ ಕಂಡದ್ದು: ಡಿಜಿಟಲ್ ತಂತ್ರಜ್ಞಾನದ ಅಬ್ಬರ ಅಟ್ಟಹಾಸಗಳ ಮಧ್ಯೆ ತಬ್ಬಲಿಗಳಾಗಿ ನಿಂತ ನಗದುರಹಿತ ಜನಸಾಮಾನ್ಯರು. ಇನ್ನೊಂದು ಹಿಮ್ಮಿಂಚಿನಲ್ಲಿ ಕಂಡದ್ದು: ವಿಜ್ಞಾನವೇ ಜೀವದುಸಿರಾಗಿದ್ದ ಅಡ್ಯನಡ್ಯ ಕೃಷ್ಣಭಟ್ಟರ ನಿಧನದಿಂದ ತಬ್ಬಲಿ ಯಾಗಿ ನಿಂತ ಶುದ್ಧ ವಿಜ್ಞಾನ. ಬೋಧನೆ, ಪ್ರಯೋಗ, ಸಾಹಿತ್ಯ ರಚನೆ ಮೊದಲ್ಗೊಂಡು ಸೃಜನಶೀಲತೆಯ ಎಲ್ಲ ಮಾರ್ಗಗಳಲ್ಲೂ ವಿಜ್ಞಾನಕ್ಕೆ ತಮ್ಮ ಬದುಕನ್ನು ಮುಡಿಪಾಗಿಸಿದ್ದ ಅಡ್ಯನಡ್ಕ ಕೃಷ್ಣ ಭಟ್ಟರು ಡಿಸೆಂಬರ್ 18ರಂದು ಇಹಲೋಕ ತ್ಯಜಿಸಿದಾಗ ಅವರ ಪ್ರಾಯ ಎಪ್ಪತ್ತೆಂಟು. ಎಪ್ಪತ್ತೆಂಟಾದರೂ ಕೊನೆಯುಸಿರವರೆಗೂ ವಿಜ್ಞಾನ ಸಾಹಿತ್ಯದೊಂದಿಗೆ ಅವರ ಸೃಜನಶೀಲ ಒಡನಾಟ ನಿರಂತರವಾಗಿ ಸಾಗಿತ್ತು. ಕೃಷ್ಣ ಭಟ್ಟರು ಜನಿಸಿದ್ದು 1938ರ ಮಾರ್ಚ್ 15ರಂದು, ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಅಡ್ಯನಡ್ಕದಲ್ಲಿ. ಹೀಗೆ ತಂದೆತಾಯಿಯರು ಇಟ್ಟ ಹೆಸರಿನೊಂದಿಗೆ ಪೂರ್ವಪ್ರತ್ಯಯವಾಗಿ ಸೇರಿಕೊಂಡ 'ಅಡ್ಯನಡ್ಕ' ಮುಂದೆ ಕನ್ನಡ ವಿಜ್ಞಾನ ಸಾಹಿತ್ಯದಲ್ಲಿ ಅವರಿಗೊಂದು ಅನ್ವರ್ಥ ನಾಮವಾಗಿದ್ದು ಕೃಷ್ಣ ಭಟ್ಟರ ಪ್ರತಿಭೆ ಸಾಮರ್ಥ್ಯಗಳ ದ್ಯೋತಕ. ಕೃಷ್ಣ ಭಟ್ಟರ ತಂದೆ ತಿಮ್ಮಪ್ಪಭಟ್ಟರು, ತಾಯಿ ಶ್ರೀಮತಿ ಲಕ್ಷ್ಮೀ.

ಪ್ರಾಥಮಿಕ- ಮಾಧ್ಯಮಿಕ ವಿದ್ಯಾಭ್ಯಾಸ ಅಡ್ಯನಡ್ಕದಲ್ಲಿ. ಸ್ನಾತಕ, ಸ್ನಾತಕೋತ್ತರ ಶಿಕ್ಷಣ ಉಡುಪಿಯಲ್ಲಿ. ಬಿ.ಎಸ್ಸಿ.ಆನರ್ಸ್. ನಂತರ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದಿನ ಹಾದಿ ಮಾಸ್ತರಿಕೆಯದು. ಪುತ್ತೂರಿನ ಸೈಂಟ್ ಫಿಲೊಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಬೋಧನೆಯ ವೃತ್ತಿ ಆರಂಭಿಸಿದ ಭಟ್ಟರು ಸ್ವಲ್ಪಕಾಲಾನಂತರ ಭೌತ ಶಾಸ್ತ್ರದ ಪ್ರೊಫೆಸರಾಗಿ ಮುಲ್ಕಿಯ ವಿಜಯ ಕಾಲೇಜು ಸೇರಿದರು. ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆದರು. ಅಡ್ಯನಡ್ಕರು ವಿಜ್ಞಾನ ಸಾಹಿತ್ಯರಚನೆಯಲ್ಲಿ ತೊಡಗುವ ವೇಳೆಗಾಗಲೇ ಕನ್ನಡದಲ್ಲಿ ವಿಜ್ಞಾನ ವಾಙ್ಮಯ ಒಂದು ಸಾಹಿತ್ಯ ಮಾರ್ಗವಾಗಿ ಪ್ರೌಢಾವಸ್ಥೆಯನ್ನು ಮುಟ್ಟಿತ್ತು. ಇಪ್ಪತ್ತನೆಯ ಶತಮಾನದ ಶುರುವಿನಲ್ಲೇ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ದಾಂಗುಡಿ ಇಡಲಾರಂಭಿಸಿದ್ದು, 1917ರಲ್ಲಿ ಈ ಲೋಕದ ಬೆಳಕು ಕಂಡ 'ವಿಜ್ಞಾನ' ನಿಯತಕಾಲಿಕದಲ್ಲಿ. ಬೆಳ್ಳಾವೆ ವೆಂಕಟನಾರಣಪ್ಪಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರ್ಯರು ಇದರ ಸಂಪಾದಕದ್ವಯರು. 'ವಿಜ್ಞಾನ'ದ ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿರುವ ಈ ಕೆಲವು ಮಾತುಗಳು ಇಂದಿಗೂ ಮನನೀಯವಾದವು: ''ಇಹಲೋಕದಲ್ಲಿ ಆತ್ಮನ ಸ್ವರೂಪವನ್ನು ನಮ್ಮರಿವಿಗೆ ತಂದು ನಮ್ಮನ್ನು ಸಂಸಾರದ ತೊಡರಿನಿಂದ ಬಿಡುಗಡೆ ಮಾಡಲು ಪ್ರೇರಿಸುವ ತಿಳಿವಿಗೆ ಜ್ಞಾನವೆಂತಲೂ, ನಮ್ಮ ಸುತ್ತಲೂ ಗೋಚರವಾಗುವ ಪ್ರಪಂಚದಲ್ಲಿ ಇಂದ್ರಿಯ ವಿಷಯಗಳಾದ ನಾನಾ ವಿಧ ಪದಾರ್ಥಗಳಿಗೂ ಶಕ್ತಿಗಳಿಗೂ ಇರುವ ಪ್ರಕೃತಿ ನಿಯಮಿತವಾದ ಪರಸ್ಪರ ಸಂಬಂಧಗಳನ್ನೂ, ನಮಗೂ ಈ ಪದಾರ್ಥಗಳಿಗೂ ಶಕ್ತಿಗಳಿಗೂ ಇರುವ ಸಂಬಂಧವನ್ನು ವಿಜ್ಞಾನವೆಂತಲೂ ಪ್ರಾಜ್ಞರು ಹೇಳುವರು.

ಪ್ರಪಂಚದಲ್ಲಿನ ವಿದ್ಯೆಗಳೆಲ್ಲವೂ ಈ ಜ್ಞಾನ ವಿಜ್ಞಾನಗಳೆರಡರಲ್ಲಿ ಅಡಗಿರುವುವು. ಮನುಷ್ಯನ ದೇಹವು ಕಳಚಿ ಬೀಳಲು, ಆತ್ಮನು ಮುಂದೆ ಸದ್ಗತಿಯನ್ನು ಹೊಂದುವುದಕ್ಕಾಗಿ ಮೊದಲು ಹೇಳಿದ ಜ್ಞಾನವು ಬೇಕು. ದೇಹವು ಜೀವವಿರುವವರೆಗೂ ರೋಗರುಜಿನಗಳಿಲ್ಲದೆ ನೆಮ್ಮದಿಯಾಗಿ ಸಂಸಾರವನ್ನು ನಡೆಸಲು ವಿಜ್ಞಾನವು ಆವಶ್ಯಕ... ಪಾಶ್ಚಾತ್ಯರಲ್ಲಿ ಜ್ಞಾನವು ಕಡಿಮೆಯಾಗಿರುವುದರಿಂದ ಅವರಿಗೆ ಜ್ಞಾನವೂ ನಮ್ಮವರಲ್ಲಿ ವಿಜ್ಞಾನವು, ಈಗಿನ ಕಾಲದ ರೀತಿಯಾಗಿ, ಅತ್ಯಲ್ಪವಾಗಿರುವುದರಿಂದ ನಮಗೆ ವಿಜ್ಞಾನವೂ ಅಧಿಕವಾಗಿ ಬೇಕು...'ಮೊದಲು ಹೊಟ್ಟೆಯ ಪಾಡು ತರುವಾಯ ಆತ್ಮನ ಪಾಡು'ಎಂಬಂತೆ ಜ್ಞಾನ ವಿಜ್ಞಾನಗಳಲ್ಲಿ ಮೊದಲು ಬೇಕಾದ್ದು ವಿಜ್ಞಾನ...ಈಗಿನ ಕಾಲಕ್ಕೆ ಬೇಕಾದ ಸಲಕರಣೆಗಳನ್ನು ಒದಗಿಸಿಕೊಳ್ಳದಿದ್ದಲ್ಲಿ ನಮ್ಮ ಬಾಳು ಬೀಳಾಗಿ ನಿರರ್ಥಕವಾಗುವುದರಲ್ಲಿ ಎಷ್ಟು ಮಾತ್ರವೂ ಸಂಶಯವಿಲ್ಲ...ನಾವು ಇನ್ನು ಮೇಲೆ ತಲೆಯೆತ್ತಿಕೊಂಡು ತಿರುಗಾಡಬೇಕಾದರೆ, ಈ ಪ್ರಪಂಚದಲ್ಲಿ ನಮಗಿಂತಲೂ ಶಕ್ತರಾದವರ ಮಾರ್ಗವನ್ನು ಹಿಡಿದು ನಡೆಯಬೇಕು'' -ಇಂಥ ಸ್ಪಷ್ಟ ಕಲ್ಪನೆಯಿಂದ ಪ್ರಾರಂಭವಾದ ವೈಜ್ಞಾನಿಕ ಸಾಹಿತ್ಯ ಮುಂದಿನ ಪೀಳಿಗೆಗಳಲ್ಲಿ ಒಂದು ಸಣ್ಣ ಪರಂಪರೆಯಾಗಿ ಬೆಳೆದುಬಂದಿರು ವುದನ್ನು ಕನ್ನಡ ವೈಜ್ಞಾನಿಕ ಸಾಹಿತ್ಯದ ಇತಿಹಾಸದಲ್ಲಿ ನಾವು ಕಾಣುತ್ತೇವೆ. ವೈಜ್ಞಾನಿಕ ಸಾಹಿತ್ಯವನ್ನು ಬೆಳೆಸಿದ ನಂತರದ ಪೀಳಿಗೆಯಲ್ಲಿ, ಪ್ರೊ.ಆರ್.ಎಲ್.ನರಸಿಂಹಯ್ಯ, ಪ್ರೊ. ಜೆ.ಅರ್.ಲಕ್ಷ್ಮಣ ರಾವ್ ಮತ್ತು ಪ್ರೊ. ಜಿ.ಟಿ.ನಾರಾಯಣ ರಾವ್ ಪ್ರಮುಖರು. ವೈಜ್ಞಾನಿಕ ಶಾಸ್ತ್ರೀಯ ಸಾಹಿತ್ಯ ಸೃಷ್ಟಿ, ಕನ್ನಡದಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳ ಸೃಷ್ಟಿ ಮತ್ತು ವೈಜ್ಞಾನಿಕ ಸಾಹಿತ್ಯದಲ್ಲಿ ಜನಸಾಮಾನ್ಯರ ಅಸಕ್ತಿ ಕುದುರಿಸುವುದು-ಇವು ಕನ್ನಡದಲ್ಲಿ ಶುರುವಿಗೇ ಆಗಬೇಕಾಗಿದ್ದ ಬಹು ಮುಖ್ಯ ಕೆಲಸಗಳಾಗಿದ್ದವು. ಈ ನಿಟ್ಟಿನ ಕಾರ್ಯದಲ್ಲಿ ಮೇಲೆ ಹೇಳಿದ ಮೂವರು ಮಹನೀಯರ ಕೊಡುಗೆ ಗಣ್ಯವಾದುದು. ನಂತರದ ಪೀಳಿಗೆಯ ವೈಜ್ಞಾನಿಕ ಬರಹಗಾರರಲ್ಲಿ ಅಡ್ಯನಡ್ಕ ಕೃಷ್ಣ ಭಟ್ಟರು ಪ್ರಮುಖರು.

ಅಡ್ಯನಡ್ಕರ ಸಾಹಿತ್ಯ ಕೃಷಿ ಆರಂಭವಾದುದು ನಿಯತಕಾಲಿಕಗಳಿಗೆ ಲೇಖನಗಳನ್ನು ಬರೆಯುವದರೊಂದಿಗೆ. 'ವಿಚಾರ ವಾಹಿನಿ', 'ಪುಸ್ತಕ ಪ್ರಪಂಚ', 'ಸುಧಾ' ಮೊದಲಾದ ನಿಯತಕಾಲಿಕಗಳಿಗೆ ಲೇಖನಗಳನ್ನು ಬರೆಯುತ್ತಾ ವೈಜ್ಞಾನಿಕ ಬರವಣಿಗೆ ರೂಢಿಸಿಕೊಂಡರು. ಜೊತೆಜೊತೆಯಲ್ಲೇ ಜಗತ್ತಿನ ನಾನಾ ಮೂಲೆಗಳಲ್ಲಾಗುತ್ತಿದ್ದ ವೈಜ್ಞಾನಿಕ ಬೆಳವಣಿಗೆಗಳನ್ನು ಅಧ್ಯಯನ ಮಾಡುತ್ತಾ ತಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಂಡರು. ಇದರಿಂದಾಗಿ ಅವರ ಸೃಜನಶೀಲ ಪ್ರತಿಭೆ ಕೇವಲ ಭೌತಶಾಸ್ತ್ರಕ್ಕಷ್ಟೇ ಸೀಮಿತಗೊಳ್ಳದೆ ಇತರ ವೈಜ್ಞಾನಿಕ ವಿಷಯಗಳ ಮೇಲೂ ಬರೆಯುವುದು ಸಾಧ್ಯವಾಯಿತು. ಕನ್ನಡದಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಕೋಶಗಳಿಲ್ಲದ ಆ ದಿನಗಳಲ್ಲಿ, ಸರಳ ಕನ್ನಡದಲ್ಲಿ ಪಂಡಿತಪಾಮರರಿಗೂ ಅರ್ಥವಾಗುವಂತೆ ಬರೆಯುತ್ತಾ, ವಿಜ್ಞಾನ ಸಾಹಿತ್ಯದತ್ತ ಓದುಗರನ್ನು ಆಕರ್ಷಿಸಿದ್ದು ಅಡ್ಯನಡ್ಕರ ಪ್ರಮುಖ ಸಾಧನೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಓದುಗರನ್ನು ಸೃಷ್ಟಿಸಿದ್ದರಲ್ಲಿ ಅಡ್ಯನಡ್ಕರ ಪಾಲು ದೊಡ್ಡದು. ಅವರು ವಿಜ್ಞಾನ ಲೇಖಕರಷ್ಟೇ ಆಗಿರದೆ ವಿಜ್ಞಾನ ಪತ್ರಕರ್ತರೂ ಆಗಿದ್ದರು. ಸುರತ್ಕಲ್‌ನಿಂದ ಪ್ರಕಟವಾಗುತ್ತಿದ್ದ 'ವಿಜ್ಞಾನ ಲೋಕ' ಮಾಸ ಪತ್ರಿಕೆಯ ಸಂಪಾದಕರಾಗಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಲೇಖನಗಳನ್ನು ಬರೆಸುವ ಮೂಲಕ ಉದಯೋನ್ಮುಖ ಲೇಖಕರಿಗೆ ಉತ್ತೇಜಕ ಶಕ್ತಿಯಾಗಿದ್ದರು. ವೈಜ್ಞಾನಿಕ ಜಗತ್ತಿನ ಹೊಸ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ಅವರ ಸಂಪಾದಕೀಯಗಳು ಪತ್ರಿಕೆಯ ಮೊದಲ ಆಕರ್ಷಣೆಯಾಗಿತ್ತು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 'ಬಾಲ ವಿಜ್ಞಾನ' ಪತ್ರಿಕೆಯ ಸಂಪಾದಕರೂ ಆಗಿ ಅದನ್ನು ಬೇರುಮಟ್ಟದಿಂದ ಬೆಳೆಸಿ ಜನಪ್ರಿಯಗೊಳಿಸಿದ ಕೀರ್ತಿ ಅಡ್ಯನಡ್ಕರದು. ಅಡ್ಯನಡ್ಕ ಕೃಷ್ಣ ಭಟ್ಟರ ಸಾಧನೆಯ ಇನ್ನೊಂದು ಮುಖವನ್ನು ನಾವು ಕಾಣುವುದು ಜ್ಞಾನ-ವಿಜ್ಞಾನ ಕೋಶಗಳಲ್ಲಿ ಮತ್ತು ಕನ್ನಡ ವಿಜ್ಞಾನ ಪಾರಿಭಾಷಿಕ ಪದಕೋಶಗಳಲ್ಲಿ.

ಕನ್ನಡದಲ್ಲಿ ವಿಶ್ವಕೋಶಗಳ ಕೊರತೆ ಇದ್ದ ದಿನಗಳಲ್ಲಿ ಖ್ಯಾತ ಕಾದಂಬರಿಕಾರ ನಿರಂಜನರು ಅಂಥ ಸಾಹಸಕ್ಕೆ ಕೈಹಾಕಿ 'ಜ್ಞಾನ ಗಂಗೋತ್ರಿ ಕಿರಿಯರ ವಿಶ್ವಕೋಶ'ವನ್ನು ಏಳು ಸಂಪುಟಗಳಲ್ಲಿ ಪ್ರಕಟಿಸಿದ್ದು ಈಗ ಇತಿಹಾಸ. ಸಹಕಾರ ಪ್ರಕಾಶನ ಈ ವಿಶ್ವ ಕೋಶದ ಪ್ರಧಾನ ಸಂಪಾದಕನ ಹೊಣೆಯನ್ನು ನಿರಂಜನರಿಗೆ ವಹಿಸಿದಾಗ ಅವರು 'ಭೌತ ಜಗತ್ತು' ಮತ್ತು 'ಯಂತ್ರ ಜಗತ್ತು' ಸಂಪುಟಗಳಿಗೆ ಸಂಪಾದಕರನ್ನಾಗಿ ಆಯ್ಕೆ ಮಾಡಿದ್ದು ಅಡ್ಯನಡ್ಕರನ್ನು. ಸಮರ್ಥ ಲೇಖಕರಿಂದ ಈ ಸಂಪುಟಗಳಿಗೆ ಲೇಖನಗಳನ್ನು ಬರೆಸಿದ್ದಲ್ಲದೆ ಸ್ವತ: ಸುದೀರ್ಘವಾದ ಸಮೀಕ್ಷಾ ಲೇಖನಗಳನ್ನು ಬರೆದು ಅಡ್ಯನಡ್ಕರು ವಿಶ್ವ ಕೋಶವನ್ನು ನಿಜವಾದ ಅರ್ಥದಲ್ಲಿ ಜ್ಞಾನಗಂಗೋತ್ರಿಯನ್ನಾಗಿಸಿದರು. ಇದಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ 'ಕನ್ನಡ ವಿಶ್ವಕೋಶ'ಕ್ಕೂ ಭೌತ ವಿಜ್ಞಾನದ ಬಗ್ಗೆ ಬರೆದರು. ಈ ಎರಡು ವಿಶ್ವಕೋಶಗಳಿಗೆ ಅಡ್ಯನಡ್ಕರ ಕೊಡುಗೆ ಮಹತ್ತರವಾದುದು. ಸುಲಭವಾಗಿ ಅರ್ಥವಾಗದ, ಕಬ್ಬಿಣದ ಕಡಲೆಯಂಥ ಪಾರಿಭಾಷಿಕ ಪದಗಳಿಂದ ಇಡುಕ್ಕಿರಿದ ಕನ್ನಡದ ವಿಜ್ಞಾನ-ತಂತ್ರಜ್ಞಾನ ಸಾಹಿತ್ಯವೆಂದರೆ ಇದರ ಬದಲು ಇಂಗ್ಲಿಷ್‌ನಲ್ಲೇ ಓದಿಕೊಳ್ಳುವುದೆ ವಾಸಿ ಎಂದು ಜನ ಮೂಗುಮುರಿಯುತ್ತಿದ್ದ ಕಾಲದಲ್ಲಿ, ಸರಳ ಕನ್ನಡ ಪಾರಿಭಾಷಿಕ ಪದಗಳನ್ನು ಟಂಕಿಸುವುದರಲ್ಲಿ ಅಥವಾ ಅನ್ಯಭಾಷೆಯ ಪದವನ್ನೇ ಕನ್ನಡೀಕರಿಸುವುದರಲ್ಲಿ ಆಡ್ಯನಡ್ಕರು ಪ್ರಯೋಗಶೀಲರಾದರು. ಅವರು ಜೆ. ಅರ್.ಲಕ್ಷ್ಮಣ ರಾವ್ ಜೊತೆಗೂಡಿ ಸಂಪಾದಿಸಿರುವ 'ಇಂಗ್ಲಿಷ್ ಕನ್ನಡ ವಿಜ್ಞಾನ ಶಬ್ದ ಕೋಶ' ಮತ್ತು ಜಿ.ಟಿ.ನಾರಾಯಣ ರಾವ್ ಅವರೊಡಗೂಡಿ ಸಂಪಾದಿಸಿರುವ 'ವಿಜ್ಞಾನ ಪದ ವಿವರಣ ಕೋಶ' ಈ ಮಾತಿಗೆ ಜ್ವಲಂತ ನಿದರ್ಶನಗಳು. ಕನ್ನಡದಲ್ಲಿ ವಿಜ್ಞಾನ ಪಾರಿಭಾಷಿಕ ಪದಕೋಶದ ಆವಶ್ಯಕತೆ ಕುರಿತು ಅವರಲ್ಲಿ ವಿಶಿಷ್ಟವಾದ ಒಂದು ಎಚ್ಚರವಿತ್ತು. ವಿಜ್ಞಾನದ ಪರಿಭಾಷೆಯನ್ನು ಆದಷ್ಟು ಕಡಿಮೆ ಮಾಡಿ ಜನಸಾಮಾನ್ಯರ ಭಾಷೆಯಲ್ಲಿ ಅದನ್ನು ತಿಳಿಸಬೇಕು. ಆಗ ಮಾತ್ರ ವಿಜ್ಞಾನ ಸಾಹಿತ್ಯ ಜನಪ್ರಿಯ ಸಾಹಿತ್ಯವಾಗಿ ಬೆಳೆಯಲು ಸಾಧ್ಯ ಎಂಬುದು ಅವರ ದೃಢ ನಿಲುವಾಗಿತ್ತು.

ಭಾಷೆಯಂತೆಯೇ ವಿಜ್ಞಾನ ತಿಳಿಯುವ ಕ್ರಮದಲ್ಲೂ ಅವರು ವಿಶಿಷ್ಟವಾದ ಆಲೋಚನೆ ಹೊಂದಿದ್ದರು. ಗ್ರಂಥಸ್ತ ತಿಳಿವಳಿಕೆಯ ಜೊತೆ ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳು ಅರಿವಿನ ದಾರಿಯಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಅವರು ನಂಬಿದ್ದರು. ಇದಕ್ಕಾಗಿ ದೂರದ ಊರುಗಳಿಗೆ ವಿದ್ಯಾರ್ಥಿಗಳನ್ನು ಕರದೊಯ್ದ ನಿದರ್ಶನಗಳಿವೆ. 1995ರಲ್ಲಿ ಕರ್ನಾಟಕದಿಂದ ಆಯ್ದ ವಿದ್ಯಾರ್ಥಿಗಳನ್ನು ರಾಜಸ್ತಾನದ ಆಲ್ವಾರರಿಗೂ, 199ರಲ್ಲಿ ಗುಜರಾತಿನ ಭುಜ್‌ಗೂ ಸಂಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ಕರದೊಯ್ದಿದ್ದರು. 1968ರಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರೂಪಿಸಿದ್ದ ಪ್ರತಿಫಲಕ ದೂರರ್ದರ್ಶಕ ಬಳಸಿ ವಿದಾರ್ಥಿಗಳಿಗೆ 'ಹ್ಯಾಲಿ ಧೂಮಕೇತು'ವಿನ ದರ್ಶನ ಮಾಡಿಸಿದ್ದರು.
                                                                                                                                       
ಗಗನ ಯಾತ್ರಿ ಯೂರಿ ಗಗಾರಿನ್ನನ ಸಾಧನೆಯಿಂದ ಪ್ರೇರಿತವಾದ 'ಗಗನ ಯುಗ' ಹಾಗೂ 'ಸಿ.ವಿ.ರಾಮನ್', 'ಪವನ ಶಕ್ತಿ', 'ಕಾಮನ ಬಿಲ್ಲು', 'ಮನುಷ್ಯನ ಕಥೆ', 'ಗ್ರಹಣ', 'ಬೆಳ್ಳಿ ಚುಕ್ಕಿ', 'ನಮ್ಮ ವಾತಾವರಣ', 'ಫಿಸಿಕ್ಸ್ ಮತ್ತು ಐನ್ಸ್ಟೈನ್', 'ನವ ವಿಜ್ಞಾನದ ಉದಯ'-ಅಡ್ಯನಡ್ಕರ ಪ್ರಮುಖ ಕೃತಿಗಳು. ಇದಲ್ಲದೆ ಅವರು ಆರಕ್ಕೂ ಹೆಚ್ಚು ವೈಜ್ಞಾನಿಕ ಕೃತಿಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ.ಐನ್‌ಸ್ಟೈನ್, ಕಂಪ್ಯೂಟರ್ ಮೊದಲಾದ ಪ್ರಸಾರ ನಾಟಕಗಳನ್ನೂ ರಚಿಸಿರುವುದುಂಟು. ಈ ಕನ್ನಡಿಗ, ದಕ್ಷಿಣ ಕನ್ನಡದ ಮೂಲೆಯೊಂದರಲ್ಲಿ ಕುಳಿತು ಮಾಡಿದ ಘನವಾದ ಕೆಲಸ ಕಾರ್ಯಗಳನ್ನು ಗುರುತಿಸಿ 'ಶಹಬ್ಬಾಸ್' ಎಂದವರೂ ಇದ್ದಾರೆ. ಅಡ್ಯನಡ್ಕರ 'ಮನುಷ್ಯರ' ಕಥೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಸಂದಿದೆ. ಜನಪ್ರಿಯ ಸಾಹಿತ್ಯದ ಕೊಡುಗೆಗಾಗಿ 1996ರಲ್ಲಿ ಭಾರತ ಸರಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ಸಂವಹನ ಮಂಡಳಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

ಅಡ್ಯನಡ್ಕ ಕೃಷ್ಣ ಭಟ್ಟರು ಇನ್ನಿಲ್ಲ ಎನ್ನಲಿಕ್ಕುಂಟೆ? ನಮ್ಮನ್ನು ಅಗಲಿ ಹೆಜ್ಜೆ ಮೂಡದ ಹಾದಿಯಲ್ಲಿ ಅಡ್ಯನಡ್ಕರು ನಡೆದರೂ ಕನ್ನಡ ವಿಜ್ಞಾನ ಸಾಹಿತ್ಯದಲ್ಲಿ ಅವರ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣುತ್ತಿರುತ್ತವೆ.

Writer - ಜಿ. ಎನ್. ರಂಗನಾಥ್ ರಾವ್

contributor

Editor - ಜಿ. ಎನ್. ರಂಗನಾಥ್ ರಾವ್

contributor

Similar News

ನಾಸ್ತಿಕ ಮದ