ಮಿಥುನ್ ಚಕ್ರವರ್ತಿ ರಾಜೀನಾಮೆಗೆ ಕಾರಣವೇನಿರಬಹುದು?

Update: 2017-01-05 18:20 GMT

ರಾಜ್ಯಸಭಾ ಸದಸ್ಯ ಮತ್ತು ಹಿಂದಿ ಚಲನಚಿತ್ರ ರಂಗದ ಒಂದು ಕಾಲದ ಜನಪ್ರಿಯ ನಟ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ತಮ್ಮ ರಾಜೀನಾಮೆಗೆ ಅವರು ತಮ್ಮ ಕ್ಷೀಣಿಸುತ್ತಿರುವ ಆರೋಗ್ಯದ ಕಾರಣವನ್ನು ನೀಡಿದ್ದಾರೆ. ರಾಜ್ಯ ಸಭೆಯ ದಾಖಲೆಗಳಲ್ಲಿ ಇದೇ ಕಾರಣ ನಮೂದಾಗುತ್ತದೆ ಕೂಡಾ. ರಾಜ್ಯಸಭಾ ಸದಸ್ಯತ್ವದ ಜವಾಬ್ದಾರಿಯನ್ನು ನಿಭಾಯಿಸದಷ್ಟು ಅವರ ಆರೋಗ್ಯ ಕ್ಷೀಣಿಸಿದ ಬಗ್ಗೆ ತಿಳಿಯದ ಕೆಲವು ಮಾಧ್ಯಮದವರು ಮತ್ತು ರಾಜಕೀಯ ಟೀಕಾಕಾರರು, ಅವರು ತಮ್ಮ ರಾಜೀನಾಮೆಗೆ ನೀಡಿದ ಕಾರಣವನ್ನು ಪ್ರಶ್ನಾರ್ಥಕವಾಗಿ ನೋಡುತ್ತಿದ್ದಾರೆ. ಹಾಗೆಯೇ ಸಿನಿಪ್ರಿಯರ ನೆನಪಿನಂಗಳದಲ್ಲಿ ಕೂಡಾ ರಾಜ್ಯಸಭೆಗೆ ಹಾಜರಾಗದಷ್ಟು ಅವರ ಆರೋಗ್ಯ ಕ್ಷೀಣಿಸಿದ ಬಗ್ಗೆ ಓದಿದ ನೆನಪು ಯಾರಿಗೂ ಇರುವುದಿಲ್ಲ.

ಮೇಲುನೋಟಕ್ಕೆ ಅವರ ರಾಜೀನಾಮೆಯ ಹಿಂದಿನ ಕಾರಣ ಅನಾರೋಗ್ಯ. ಅದರೆ, ಕೆಲವು ವಿಶ್ಲೇಷಕರ ಪ್ರಕಾರ ಅವರ ರಾಜೀನಾಮೆಯ ಹಿಂದೆ ‘ಶಾರದಾ ಚಿಟ್ ಫಂಡ್ ಹಗರಣ’ದ ನೆರಳು ಇದೆ. ಅವರು ಆ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಹಗರಣ ಹೊರ ಬಂದಾಗ, ಬ್ರಾಂಡ್ ಅಂಬಾಸಿಡರ್ ಹುದ್ದೆಯನ್ನು ತ್ಯಜಿಸಿದ್ದರಂತೆ ಹಾಗೂ ತಾವು ಆ ಸೇವೆಗೆ ಪಡೆದ ಹಣವನ್ನೂ ಹಿಂತಿರುಗಿಸಿದ್ದರಂತೆ. ಈ ಹಗರಣದ ವಿಚಾರಣೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಕೆಲವು ಉನ್ನತ ಧುರೀಣರು ಆರೋಪ ಎದುರಿಸುತ್ತಿದ್ದಾರೆ. ಸದ್ಯ ಅವರ ಪಕ್ಷ ಕೇಂದ್ರದಲ್ಲಿ ಆಡಳಿತರೂಢ ಪಕ್ಷದ ಸಂಗಡ ಇರದಿರುವುದು, ಅವರ ರಾಜೀನಾಮೆಗೆ ಪ್ರೇರಕವಾಗಿರಬಹುದು ಎನ್ನುವ ಉಹಾ ಪೋಹಗಳು ಕೇಳಿಬರುತ್ತಿದೆ. ಈ ಹಗರಣದಲ್ಲಿ ಅವರ ಪಾತ್ರ ಕೇವಲ ಜಾಹೀರಾತಿಗೆ ಸೀಮಿತವಾಗಿದ್ದರೂ, ಅವರು ರಾಜಕೀಯ ಲೆಕ್ಕಾಚಾರದ ಅಡಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

   2014ರಲ್ಲಿ ಪಶ್ಚಿಮ ಬಂಗಾಲದಿಂದ ತೃಣಮೂಲ ಕಾಂಗ್ರೆಸ್ ಸದಸ್ಯರಾಗಿ ಅವರನ್ನು ರಾಜ್ಯಸಭೆಗೆ ಆರಿಸಿ ಕಳಿಸಲಾಗಿತ್ತು. ಅವರು ತಮ್ಮ ಸುಮಾರು ಎರಡು ವರ್ಷದ ಅವಧಿಗಳಲ್ಲಿ ಮೂರು ದಿನ ಮಾತ್ರ ರಾಜ್ಯಸಭೆಯ ಕಲಾಪಗಳಿಗೆ ಹಾಜರಾಗಿದ್ದರಂತೆ ಮತ್ತು ಅವರು ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸಿದ ಬಗೆಗೆ ವರದಿಗಳಿಲ್ಲ. ರಾಜ್ಯಸಭೆಯಲ್ಲಿ ಅವರ ಹಾಜರಿಯನ್ನು ನೋಡಿದ ಮೇಲೆ, ರಾಜ್ಯ ಸಭೆಯ ಸದಸ್ಯರಾಗಿ ಅವರ ಸಾಧನೆ ಜನತೆಯ ಊಹೆಗೆ ಬಿಟ್ಟದ್ದು. ಅವರ ರಾಜೀನಾಮೆಯ ಹಿಂದಿನ ಕಾರಣಗಳೇನೇ ಇರಲಿ, ಜನತೆಗೆ ಅವರನ್ನು ‘‘ಸಾಧ್ಯವಾಗದಿದ್ದರೆ...ಯಾಕೆ ರಾಜೀನಾಮೆ ಇಲ್ಲ’’ ಎಂದು ಕೇಳುವ ಮೊದಲೇ ರಾಜೀನಾಮೆ ನೀಡಿ ಆದರ್ಶವನ್ನು ಮೆರೆದಿದ್ದಾರೆ. ಅವರ ಈ ಕ್ರಮ ಅವರ ತಪ್ಪುಗಳನ್ನು ಮುಚ್ಚಿ ಹಾಕುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕನಿಷ್ಠ ಅವರನ್ನು ಈ ನಿಟ್ಟಿನಲ್ಲಾದರೂ ಅವರ ಬಧ್ಧತೆಗೆ ಶ್ಲಾಘಿಸಬಹುದು. ಅವರ ಸ್ಥಳದಲ್ಲಿ ಈಗ ಇನ್ನೊಬ್ಬರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ಕಳಿಸಬಹುದು.

ವಿಷಾದವೆಂದರೆ, ಲೋಕಸಭೆಯಷ್ಟೇ ಮಹತ್ವ ಇರುವ ರಾಜ್ಯಸಭೆ ತನ್ನ ಹಿಂದಿನ ಘನತೆ, ಗೌರವ, ಅಂತಸ್ತು ಮತ್ತು ಮೆರಗನ್ನು ಕ್ರಮೇಣ ಕಳಕೊಳ್ಳುತ್ತಿದೆ. ಇದು ಶ್ರೀಮಂತರ, ಉದ್ಯಮಿ ಮತ್ತು ಸೆಲೆಬ್ರಿಟಿಗಳ ಎಲೈಟ್ ಕ್ಲಬ್ ಅಥವಾ ಒಡ್ಡೋಲಗವಾಗುತ್ತಿದೆ. ಅದು ತನ್ನ ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆ. ನಿಜವಾದ ಸಂಸದೀಯ ಪಟುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸಂಸದೀಯ ಕಾರ್ಯಕಲಾಪದ ಮಟ್ಟವೂ ಇಳಿಯುತ್ತಿದೆ ಎನ್ನುವ ಅಭಿಪ್ರಾಯ ಕೇಳುತ್ತಿದೆ. ಕೆಲವು ಕ್ಷೇತ್ರದಲ್ಲಿ ಅದ್ಭ್ಬುತ ಸಾಧನೆಗೈದ ಐವರನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಪದ್ಧತಿ ನಮ್ಮ ದೇಶದಲ್ಲಿ ಇದೆ. ಅದರ ಪ್ರಕಾರ ಕ್ರೀಡಾ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ತೋರಿದ ಸಚಿನ್ ತೆಂಡೂಲ್ಕರ್ ಮತ್ತು ನಟಿ ರೇಖಾರನ್ನು ಸರಕಾರದ ಶಿಫಾರಸಿನ ಅನ್ವಯ ರಾಜ್ಯ ಸಭೆಗೆ ನಾಮಕರಣ ಮಾಡಲಾಗಿತ್ತು. ಅದರೆ, ಅವರು ಮಾಡಿದ್ದೇನು? ಅವರು ಸಮಸ್ಯೆಗಳನ್ನು ಸದನದಲ್ಲಿ ಎತ್ತುವ, ಸದನದ ಕಲಾಪದಲ್ಲಿ ಭಾಗವಹಿಸುವ ಮಾತಿರಲಿ, ಅವರು ಸದನಕ್ಕೆ ಹಾಜರಿಯನ್ನೇ ಕೊಡಲಿಲ್ಲ. ಅವರಿಗೆ ಎಚ್ಚರಿಕೆ ನೀಡಿ ಸದನಕ್ಕೆ ಕರೆಸಬೇಕಾದ ಅನಿವಾರ್ಯತೆ ಉಂಟಾಯಿತು. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಿಲ್ಲದಿದ್ದರೆ, ಮನಸ್ಸಿಲ್ಲದಿದ್ದರೆ, ಅವರು ಆ ಜವಾಬ್ದಾರಿ ಮತ್ತು ಗೌರವವನ್ನು ಒಪ್ಪಿಕೊಳ್ಳಬಾರದಿತ್ತು. ಅಥವಾ ಈ ಪರಿಸರ ಅವರಿಗೆ ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡಬಹುದಿತ್ತು. ಈ ದೇಶದಲ್ಲಿ ಇಂತಹ ಜವಾಬ್ದಾರಿಯನ್ನು ಹೊರಲು ಮತ್ತು ಅ ಸ್ಥಾನ ಮತ್ತು ಗೌರವಕ್ಕೆ ನ್ಯಾಯ ಒದಗಿಸಲು ತುದಿಗಾಲಿನಲ್ಲಿ ಇರುವವರ ಸಂಖ್ಯೆ ಊಹಿಸಲಾರದಷ್ಟು ದೊಡ್ಡದಿದೆ. ರಾಜ್ಯಸಭೆಯ ಸದಸ್ಯತ್ವ ಒಂದು ರೀತಿಯಲ್ಲಿ ಅಲಂಕಾರಿಕ ಹುದ್ದೆಯಾಗುತ್ತಿರುವುದು ವಿಷಾದನೀಯ ಬೆಳವಣಿಗೆ ಎನ್ನಬಹುದು.

   ಸದನದ ಕಾರ್ಯಕಲಾಪದಲ್ಲಿ ಭಾಗವಹಿಸಲಿ ಅಥವಾ ಬಿಡಲಿ, ಕೆಲವು ಸದಸ್ಯರು ಸದನದ ಹಾಜರಿ ಪುಸ್ತಕದಲ್ಲಾದೂ ಕಾಣುತ್ತಾರೆ. ಅದರೆ, ಇವರು ಕನಿಷ್ಠ ಈ ನಿಟ್ಟಿನಲ್ಲಾದರೂ ಕಾಣದಿರುವುದು ಆಶ್ಚರ್ಯಕರ. ಗಾನಕೋಗಿಲೆ ಲತಾ ಮಂಗೇಷ್ಕರ್ ಕೂಡಾ ಇದೇ ಸಮೂಹದಲ್ಲಿ ಇದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಂಥಹ ಎಲ್ಲಾ ನಾಮಕರಣಗೊಂಡ ಸದಸ್ಯರನ್ನು ಒಂದೇ ತಕ್ಕಡಿಯಲ್ಲಿ ತೂಗುವುದೂ ಸರಿಯಲ್ಲ. ನಾಮಕರಣಗೊಂಡ ಸದಸ್ಯರಾದ, ಶಬಾನಾ ಅಜ್ಮಿ ಮತ್ತು ಝಾವೇದ್ ಅಖ್ತರ್ ಇದಕ್ಕೆ ವ್ಯತಿರಿಕ್ತವಾಗಿ ಸದನಕ್ಕೆ ನಿಯಮಿತವಾಗಿ ಹಾಜರಾಗುತ್ತಿದ್ದರು ಮತ್ತು ಸದನದ ಕಾರ್ಯಕಲಾಪ ಮತ್ತು ಚರ್ಚೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ರಾಜ್ಯಸಭಾ ಸದಸ್ಯರಾಗಿ ಅವರ ಕೊನೆಯ ಭಾಷಣ ಪ್ರಚಂಡ ಪ್ರಶಂಸೆ ಪಡೆದಿತ್ತು.

ಸರಕಾರ ಯಾವ ಪಕ್ಷದ್ದೇ ಇರಲಿ, ಇಂಥಹ ನಾಮಕರಣ ಮಾಡುವಾಗ, ಸರಕಾರ ಕಾಟಾಚಾರಕ್ಕೆ ಅಥವಾ ಒತ್ತಡಕ್ಕೆ ಮಣಿಯದೇ, ಇಂತಹ ಸದಸ್ಯರು ತಮ್ಮ ನಿರೀಕ್ಷೆಗೆ ಸರಿಯಾಗಿ ಕಾರ್ಯ ನಿರ್ವಹಿಸುವರೇ ಎನ್ನುವುದನ್ನು ಸುದೀರ್ಘವಾಗಿ ಮಂಥನ ಮಾಡಬೇಕು. ಇದೊಂದು ಕೇವಲ ಸಂಬಳ ಸೌಲಭ್ಯಗಳಿಲ್ಲದ ಗೌರವಾನ್ವಿತ ಹುದ್ದೆಯಾಗಿರದೆ, ಸರಕಾರ ಇವರ ಮೇಲೆ ಐದು ವರ್ಷಗಳ ಅವಧಿಯಲ್ಲಿ ಬಡ ತೆರಿಗೆದಾರನ ಕೋಟ್ಯಾಂತರ ಹಣವನ್ನು ವ್ಯಯ ಮಾಡುತ್ತದೆ. ಇಂಥಹ ಮಂಥನ ಕೇವಲ ನಾಮಕರಣಗೊಂಡ ಸದಸ್ಯರಿಗೆ ಸೀಮಿತವಾಗದೆ, ಪ್ರತಿಯೊಬ್ಬರಿಗೂ ಅನ್ವಯವಾಗಬೇಕು. ರಾಜ್ಯಸದಸ್ಯತ್ವ ಲೆಟರ್‌ಹೆಡ್‌ನಲ್ಲಿ ಮತ್ತು ಹೆಸರಿನ ಮುಂದೆ ಬರೆಯುವ ಪದವಿಗಳ ಸಂಗಡ ಇನ್ನೊಂದು ಪದವಿಯಾಗಿ ಸೀಮಿತವಾಗಬಾರದು. ಇವರಿಗೆ ಬದ್ಧತೆ ಇರಬೇಕು ಮತ್ತು ತಮ್ಮನ್ನು ನಾಮಕರಣಗೊಳಿಸಿದ ಅಥವಾ ಆರಿಸಿ ಕಳಿಸಿದವರಿಗೆ ಮುಜುಗರ ಉಂಟುಮಾಡಬಾರದು. ಇವರು ದೇಶದ ಅಗುಹೋಗುಗಳನ್ನು ಮತ್ತು ಜನತೆ ತಮ್ಮಿಂದ ಏನನ್ನು ಬಯಸುತ್ತಾರೆ ಎನ್ನುವುದನ್ನು ತಿಳಿಯದ ಅಜ್ಞಾನಿಗಳಲ್ಲ.

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News