ಹೀಗೊಂದು ಹೈದರ್‌ನಾಮೆಯೂ ‘ಸಾರಸ್ವತ ಸಿರಿಯೂ’...

Update: 2017-01-07 18:44 GMT

1950ರ ದಶಕದ ಕೊನೆಯ ದಿನಗಳು. ಸ್ಥಳ: ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ. ಮಟಮಟ ಮಧ್ಯಾಹ್ನ, ಊಟದ ಸಮಯ. ಹಾಲಿನ ಮಧ್ಯಭಾಗದಲ್ಲಿ ಹಸಿರು ಟೇಬಲ್ ಕ್ಲಾತ್‌ನಿಂದ ಸಿಂಗರಿಸಿಕೊಂಡ ದೊಡ್ಡ ಸಾಗುವಾನಿ ಮೇಜು. ಎಡಬಲ ಫೈಲುಗಳಿಂದ ಗರ್ಭೀಕೃತವಾದ ಎರಡು ಟ್ರೇಗಳು. ಮೇಜನ್ನು ಮುಂದಾಗಿಸಿಕೊಂಡು ದೊಡ್ಡ ಸಾಗುವಾನಿ ಕುರ್ಚಿಯಲ್ಲಿ, ಸ್ವಲ್ಪ ಧಡೂತಿ ಎನ್ನಬಹುದಾದ ಆಫೀಸ್ ಸೂಪರಿಂಟೆಂಡೆಂಟ್ ಸಾಹೇಬರು ಆಸೀನರಾಗಿದ್ದಾರೆ, ಕೋಟು, ಚೌಕಟ್ಟಾದ ಮುಖ, ಅಲ್ಪಸ್ವಲ್ಪತುಂಬಿಕೊಂಡ, ನುಣ್ಣಗೆ ಶೇವಿಸಿದ ಕೆನ್ನೆಗಳು. ಅವರಿಗೆ ನೇರ, ಹಾಲಿನ ಇನ್ನೊಂದು ತುದಿಯ ಮೂಲೆ. ಟಪಾಲು ರವಾನೆಯ ವಿಭಾಗ. ಆಗಷ್ಟೆ ಮೀಸೆ ಮೂಡುತ್ತಿದ್ದ ತರುಣನೊಬ್ಬ ಅರೆಜೀರ್ಣಾವಸ್ಥೆಯಲ್ಲಿದ್ದ ಮೇಜೊಂದರ ಮುಂದೆ ಕುಳಿತಿದ್ದಾನೆ. ಮೇಜಿನ ಮೇಲೊಂದು ಪಿಜನ್ ಬಾಕ್ಸ್. ರವಾನಿಸ ಬೇಕಾದ ಪತ್ರಗಳನ್ನೆಲ್ಲ ಪಕ್ಕಕ್ಕೆ ತಳ್ಳಿ ತರುಣ ಬಣ್ಣ ಕಳೆದುಕೊಂಡ ಮಾಳಿಗೆಯತ್ತ ಮುಖ ಮಾಡಿದ್ದ.ಮಾಳಿಗೆಗೆ ತೂಗಿ ಬಿದ್ದಿದ್ದ ಓಬಿರಾಯನ ಕಾಲದ ಫ್ಯಾನು ಕರ್ಕಶವಾಗಿ ಗರಗರಿಸುತ್ತಿತ್ತು. ಕೆಲಸಕ್ಕೆ ಸೇರಿ ಹದಿನೈದು ದಿನಗಳಾಗಿದ್ದವು. ಮೊದಲ ತೇದಿ ಸಂಬಳ ಬರುವವರೆಗೆ ಜೇಬು ಖಾಲಿ. ಸಾಯಂಕಾಲದವರೆಗೆ ನೀರೇ ಗತಿ. ಸಂಬಳವಾದರೆ ಪರಿಸ್ಥಿತಿ ಸುಧಾರಿಸೀತು ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವಾಗಲೇ ಹೊಟ್ಟೆಯಲ್ಲಿ ಹಾಹಾಕಾರ..., ಫ್ಯಾನಿನ ರೆಕ್ಕೆಗಳು ಖಾಲಿ ಹೊಟ್ಟೆಯೊಳಗೆ ಗರಗರ ಮಥಿಸಿದಂತಾಗಿ ಕ್ಷುದ್ಬಾಧೆ ತಾಳಲಾಗದೇ-

‘‘ಥತ್ತೇರಿ...’’
‘‘ಯಾಕ್ರೀ...’’
ಹಿಂದಿನಿಂದ ಬಂದದ್ದು ಸೂಪರಿಂಟೆಂಡೆಂಟರ ದನಿ. ತರುಣನಿಗೆ ಜಂಘಾಬಲ ಉಡುಗಿ ಹೋಯಿತು. ದಡಬಡಿಸಿ ಎದ್ದು ನಿಂತ.
‘‘ಯಾಕ್ರೀ ಊಟಕ್ಕೆ ಹೋಗಲಿಲ್ಲವೇ?’’-ಸೂಪರಿಂಟೆಂಡೆಂಟರು ಕಕ್ಕುಲಾತಿಯಂದ ಕೇಳಿದರು.

ತರುಣ ಗಲಿಬಿಲಿಗೊಂಡಿದ್ದ. ಪಕ್ಕದ ಕುರ್ಚಿಯತ್ತ ನೋಡಿದ. ಸಹೋದ್ಯೋಗಿ ಉಪೇಂದ್ರ ಆಗಲೇ ಊಟಕ್ಕೆಹೋಗಿಯಾಗಿತ್ತು. (ಈ ಉಪೇಂದ್ರ ಮುಂದೆ ದೇಶಕುಲಕರ್ಣಿ ಕಾವ್ಯನಾಮದಿಂದ ಕನ್ನಡ ಸಾಹಿತ್ಯದಲ್ಲಿ ಕವಿಯಾಗಿ ತಕ್ಕಮಟ್ಟಿಗೆ ಹೆಸರು ಮಾಡಿದವನು. ಈಗ ದಿವಂಗತ).

‘‘ಆಯಿತು ಬನ್ನಿ’’
ಸೂಪರಿಂಟೆಂಡೆಂಟರು ಸಮಜಾಯಿಷಿಗೆ ಕಾಯದೆ ಅಪ್ಪಣೆ ಮಾಡಿದರು.
‘‘ಹಾಗಲ್ಲ ಸಾರ್..ಅದೂ...’’

‘‘ಇರಲಿ ನನ್ನ ಜೊತೆ ಬನ್ನಿ’’ ಎಂದು ನಡೆದರು.ತರುಣ ವಧಾಸ್ಥಾನಕ್ಕೆ ತಳ್ಳಲ್ಪಡುವ ಕುರಿಯಂತೆ ಹಿಂಬಾಲಿಸಿದ. ಸೂಪರಿಂಟೆಂಡೆಂಟ್ ಸಾಹೇಬರು ಡಿಸಿ ಆಫೀಸ್ ಕ್ಯಾಂಟೀನಿನತ್ತ ಪಾದ ಬೆಳೆಸಿದ್ದರು. ಒಂದೆರಡು ಹೆಜ್ಜೆ ಹಾಕಿ ನಿಂತವರೇ ಹಿಂದಿರುಗಿ ನೋಡಿದರು. ತರುಣ ಹಿಂದೆಯೇ ಉಳಿದಿದ್ದ. ‘‘ಯಾಕ್ರೀ ನಿಂತ್ರೀ.. ಸುಮ್ನೆ ಬನ್ನೀ’’

ಸೂಪರಿಂಟೆಂಡೆಂಟರು ಕ್ಯಾಂಟೀನಿನ ಸ್ಪೆಶಲ್ ರೂಮಿಗೆ ಹೋಗಿ ಸೋಫಾದಲ್ಲಿ ಕುಳಿತರು. ತರುಣ ಅವನತಮುಖನಾಗಿ ನಿಂತೇ ಇದ್ದ.
‘‘ಕೂತ್ಕೊಳ್ರೀೀವ’’
ಜೀವ ಕೈಯಲಿ ಹಿಡಿದು ಕೂತ. ಮಾಣಿ ಬಂದದ್ದೇ-
‘‘ಏನು ತಗೋತೀರ?’’
‘‘......’’
‘ಹೇಳ್ರೀ...ಸಂಕೋಚ ಪಟ್ಕೋಬೇಡಿ

 ‘‘ಖಾಲಿ ದೋಸೆ’’ ಕ್ಯಾಂಟೀನಿನಿಂದ ಹೊರಬಂದು ಅಷ್ಟು ದೂರ ಬಂದ ನಂತರ ಕೆಂಪು ಹೂವು ಸಾಲ್ಮರಗಳ ಕೆಳಗೆ ಕ್ಷಣ ನಿಂತ ಹೈದರ್ ಸಾಹೇಬರು ಗಂಭೀರ ದನಿಯಲ್ಲಿ ಹೇಳಿದರು: ‘‘ಸಂಸಾರದ ಗುಟ್ಟು ಸರಕಾರದ ಗುಟ್ಟು ರಟ್ಟಾಗಬಾರದು. ಜೋಕೆ, ಕಾಗದಪತ್ರಗಳನ್ನೆಲ್ಲ ಒಳಗೆ ಜೋಪಾನವಾಗಿರಿಸಿ ಪಿಜನ್ ಬಾಕ್ಸಿಗೆ ಬೀಗ ಹಾಕದೇ ಸೀಟು ಬಿಟ್ಟು ಹೋಗಬಾರದು’’ ಹೀಗೆ, ಕ್ರಮೇಣ ರೆವಿನ್ಯೂ ಇಲಾಖೆಯ ಒಂದೊಂದು ಮರ್ಮಗಳನ್ನು ಬಿಟ್ಟುಕೊಟ್ಟು ಮಾರ್ಗದರ್ಶನ ಮಾಡಿದರು. ಬಹುತೇಕ ಮೊದಲತೇದಿಯವರೆಗೆ ಅನ್ನದಾತರಾದರು. ನಂತರ ತರುಣ ಮಧ್ಯಾಹ್ನ ಊಟದ ಸಮಯ ಸೂಪರಿಂಟೆಂಡೆಂಟರ ಕಣ್‌ತಪ್ಪಿಸಲಾರಂಭಿಸಿದ. ‘‘ಸಂಜೆ 5-30ಕ್ಕೆ ಬರ್ತೀನಿ ಸಾರ್’’ ಎಂದು ಹೇಳುವ ಪರಿಪಾಠವಿಟ್ಟುಕೊಂಡಿದ್ದ. ಫೈಲುಗಳಲ್ಲಿ ಮುಳುಗಿರುತ್ತಿದ್ದ ಸೂಪರಿಂಟೆಂಡೆಂಟರು ‘‘ಆಯಿತು’’ ಎನ್ನುತ್ತಿದ್ದರು. ಬಿಡುವಿದ್ದಲ್ಲಿ ‘‘ನಡಿ ಹೋಗೋಣ ...’’ ಸಂಜೆಯ ಕಾಫಿ ಸಮಾರಾಧನೆ. ಒಂದು ಸಂಜೆ....

ಕಾಫಿಯ ನಂತರ, ‘‘ಮನೆಗೆ ಹೋಗೋ ಅರ್ಜೆಂಟೋ’’ ‘‘ಇಲ್ಲ’’
‘‘ಒಂದಿಷ್ಟು ಟೈಪು ಮಾಡೋದಿತ್ತು’’
‘‘ಮಾಡೋಣ ಸಾರ್’’
ವಿದೇಶಿ ವಿಶ್ವವಿದ್ಯಾನಿಲಯದ ಫೆಲೋಶಿಪ್‌ಗೆ ಸಂಬಂಧಿಸಿದ ಪತ್ರವ್ಯವಹಾರ. ‘ಇಂದ’ ವಿಳಾಸದಲ್ಲಿ ಮೊದಲು ಕಣ್ಣಿಗೆ ಬಿದ್ದದ್ದು: ಕೆ.ಎಸ್.ನಿಸಾರ್ ಅಹಮದ್...

-ಇವರು ಕೆ.ಎಸ್. ಹೈದರ್ ಸಾಹೇಬರು, ನಮ್ಮ ಕವಿ ನಿಸಾರ್ ಅಹಮದ್ ಅವರ ತಂದೆ. ಹೈದರ್ ಸಾಹೇಬರದು ಬಹುಜನಹಿತಾಯದ ನಿರ್ಮಲ ಅಂತಃಕರಣ. ಇಲಾಖೆಗೆ ಅಪರೂಪವೆನಿಸಿದ ನಿಸ್ಪಹರು, ಭೂತದಯೆಯುಳ್ಳ ಪರೋಪಕಾರಿ ಎಂದೆಲ್ಲ ಕಚೇರಿಯ ಮೊಗಸಾಲೆಗಳು ಪಿಸುಗುಟ್ಟುತ್ತಿದ್ದುದು ತರುಣನ ಕಿವಿಗೆ ಬಿದ್ದಿತ್ತು. ಹೈದರ್ ಸಾಹೇಬರ ಶ್ರೀರಕ್ಷೆಯಲಿ ತಾನು ಸುರಕ್ಷಿತ ಎಂದುಕೊಳ್ಳುತ್ತಿದ್ದಂತೆ ಸಾಹೇಬರಿಗೆ ಭಡ್ತಿಯಾಯಿತು. ಉಪೇಂದ್ರ ಏಜೀಸ್ ಆಫೀಸ್ ಸೇರಿದ. ತರುಣ ಮಹಾತ್ಮಾ ಗಾಂಧಿ ರಸ್ತೆ ಹಿಡಿದ ಪತ್ರಕರ್ತನಾಗಲು.
ಗಾಂಧಿ ಬಜಾರಿನ ಕಲಾ ಮಂದಿರದಲ್ಲಿ ದೂರದಿಂದ ಕಾಣಿಸುತ್ತಿದ್ದ ಕವಿ ನಿಸಾರ್ ಅಹಮದ್ ಹೀಗೆ ಮತ್ತಷ್ಟು ಹತ್ತಿರವಾದರು. ಹೈದರ್ ಸಾಹೇಬರ ಕಕ್ಕುಲತೆ, ವಾತ್ಸಲ್ಯಮಯಿ ಹಮೀದಾ ತಾಯಿಯ ಅಮೃತಸಮಾನ ಟೀ, ಮೇಲೆ ಮಗನ ಕಾವ್ಯವಾಚನ....ನಿಜಕ್ಕೂ ಒಳ್ಳೆಯ ದಿನಗಳು, ಇಂದಿನಂಥ ಬೂಟಾಟಿಕೆಯ ಅಚ್ಛೇ ದಿನಗಳಲ್ಲ್ಲ...

ಕವಿ ನಿಸಾರ್ ಅಹಮದ್ ಎಂಬತ್ತು ವಸಂತಗಳನ್ನು ದಾಟಿದ ಈ ಶುಭ ಮುಹೂರ್ತದಲ್ಲಿ ಎಲ್ಲ ನೆನಪಾಗುತಿದೆ. ನೆನಪಿನ ಹಿನ್ನೋಟದಲ್ಲಿ ಹೈದರ್ ಸಾಹೇಬರು-ಹಮೀದ ಬೇಗಮ್ಮರು ಬಹುಸಂಸ್ಕೃತಿಯ ಸಮಾಜವೊಂದರ ಸಾಮರಸ್ಯದ ಸಂಕೇತವಾಗಿ ಇಂದು ನಮಗೆ ಮುಖ್ಯವಾಗುತ್ತಾರೆ.
  ***
1959ರಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರರಾದ ನಿಸಾರ್ ಅಹಮದ್‌ರನ್ನು ಪಾಶ್ಚಾತ್ಯ ಮೋಹಿನಿ ಕೈಬೀಸಿ ಕರೆದರೂ ಅವರು ಜನ್ಮಭೂಮಿಗೇ ಅಂಟಿಕೊಂಡರು. ದೇಶ-ಭಾಷೆಗಳಿಗಾಯಿತು ಲಾಭ. ಜಿಯಾಲಜಿ ಮೇಷ್ಟ್ರು ಪಾಠ ಹೇಳ್ತಾ ಹೇಳ್ತಾ ಕನ್ನಡ ಕಾವ್ಯಕ್ಕೆ ಹೊನ್ನು-ಹೊಳಪು ಕೊಟ್ಟರು, ಸೋಸಿ ಸೋಸಿ ತೆಗೆದರು ಕಾವ್ಯ ಬಂಗಾರವ. ಕನ್ನಡದಲ್ಲಿ ಮನೆಮಾತಾಗಿರುವ ಕೆಲವೇ ಕನ್ನಡದ ಕವಿಗಳಲ್ಲಿ ಅಗ್ರಪಂಕ್ತಿಯಲ್ಲಿ ಸಲ್ಲುವ ಕೆ.ಎಸ್.ನಿಸಾರ್ ಅಹಮದ್ ಅವರ ಸಂವೇದಶೀಲತೆಯ ಅವಿಭಾಜ್ಯ ಅಂಗ ತಂದೆ ಕೆ.ಎಸ್.ಹೈದರ್ ಮತ್ತು ತಾಯಿ ಹಮೀದಾ ಬೇಗಂ-‘ಪದ್ಮವರಳಿಸಿದಭಯಿ ಸೌಖ್ಯದಾಯಿ’. ಬಾಲ್ಯದಲ್ಲಿ ಕುವೆಂಪು ಅವರ ಕಿಂದರ ಜೋಗಿ, ಗೋವಿನ ಹಾಡು ಮೊದಲಾದ ಕನ್ನಡ ಕೃತಿಗಳ ಮೂಲಕ ಕಾವ್ಯಕ್ಕೆ ಎಳೆಯನೆದೆಯ ಕದ ತೆಗೆದ ಮೊದಲ ಗುರು ತಂದೆ ಹೈದರ್. ಕವಿ ನಿಸಾರ್‌ರ ಒಂದು ಶ್ವಾಸಕೋಶ ಬೆಂಗಳೂರು ಮಹಾನಗರದ ಲಾಲ್‌ಬಾಗ್ ಮತ್ತೊಂದು ಗಾಂಧಿ ಬಜಾರು. ಲಾಲ್‌ಬಾಗ್ ನಿಸಾರ್‌ರ ಅಂತರ್ಮುಖಿ ವ್ಯಕ್ತಿತ್ವಕ್ಕೆ ಪ್ರಶಸ್ತ ಸ್ಥಳವಾಯಿತು.

ಪಂಪ, ಕುಮಾರ ವ್ಯಾಸ, ಕುವೆಂಪು, ಬೇಂದ್ರೆ, ಡಿವಿಜಿ...ಕನ್ನಡ ಕಾವ್ಯಪರಂಪರೆ ಉದಯೋನ್ಮುಖ ಕವಿಗೆ ಸಾಕ್ಷಾತ್ಕಾರವಾದದ್ದು ಇಲ್ಲೇ. ಲಾಲ್‌ಬಾಗ್ ಮತ್ತು ತಂದೆ ಹೈದರ್ ಇಂದಿಗೂ ತಮ್ಮ ಸಂವೇದಶೀಲತೆಯ ಅವಿಭಾಜ್ಯ ಅಂಗ ಎನ್ನುತ್ತಾರೆ ನಿಸಾರ್. ನಿಸಾರ್ ಅಹಮದ್ ಅವರ ಸೃಜನಶೀಲ ಪ್ರತಿಭೆ ಹೊಸಕೋಟೆಯ ಹೈಸ್ಕೂಲ್ ದಿನಗಳಲ್ಲೇ ಪಲ್ಲವಿಸಿ ದಾಂಗುಡಿ ಇಡಲಾರಂಭಿಸಿತು. ಮೊದಲ ಕವನ ‘ಜಲಪಾತ’ (1949). ಸೆಂಟ್ರಲ್ ಕಾಲೇಜಿನಲ್ಲಿ ಈ ಯುವಪ್ರತಿಭೆಯನ್ನು ಪೋಷಿಸಿದ ಗುರುಗಳು ಜಿ.ಪಿ.ರಾಜರತ್ನಂ. ವಿದ್ಯಾರ್ಥಿ ಪ್ರತಿಭೆಗಳನ್ನು ಪ್ರೋತ್ಸಾಹಿಸಲೆಂದೇ ರಾಜರತ್ನಂ 1956ರರಲ್ಲಿ ‘ಪದ್ಯಾಂಜಲಿ’ ಪ್ರಕಟಿಸಿದರು. ಇದರಲ್ಲಿ ಐದು ಕವಿತೆಗಳನ್ನು ಒಟ್ಟಿಗೆ ಪ್ರಕಟಿಸಿ, ರಾಜರತ್ನಂ ಕವಿ ನಿಸಾರ್‌ರ ಆಗಮನವನ್ನು ಲೋಕಕ್ಕೆ ಸಾರಿದರು.ಮೊದಲ ಕವನ ಸಂಕಲನ ‘ಮನಸು ಗಾಂಧಿ ಬಜಾರು’ ಪ್ರಕಟವಾದದ್ದು 1960ರಲ್ಲಿ. ಮೊದಲ ಸಂಕಲನದಲ್ಲೇ ‘ಅನ್ಯರೊರೆದುದರಿಂದ’ ಬಿಡುಗಡೆ ಪಡೆದು ಸ್ವಂತ ಮಾರ್ಗ ಕಂಡುಕೊಳ್ಳುವ ಸ್ವೋಪಜ್ಞತೆಯ ಹಂಬಲ. ನಂತರ ಪ್ರಕಟವಾದ ಹದಿನೈದಕ್ಕೂ ಹೆಚ್ಚು ಸಂಕಲನಗಳಲ್ಲಿ ಕವಿಯ ಈ ಬೆಳವಣಿಗೆ ಸ್ಪಷ್ಟ. ಅವರ ಕಾವ್ಯದ ಅಸ್ಮಿತೆಯ ಪೂರ್ಣ ದರ್ಶನಕ್ಕೆ ‘ಸಮಗ್ರ ಕಾವ್ಯ’ ಸಂಗ್ರಹವೇ ಆಕರ.

ನಿಸಾರ್ ಅಹಮದ್ ಅವರ ಕಾವ್ಯದ ಯಶಸ್ಸಿನ ಕೀಲಿಕೈ ಇರುವುದು, ಅವರು ನವೋದಯ ಮತ್ತು ನವ್ಯದ ಪ್ರಭಾವಗಳನ್ನು ಅರಗಿಸಿಕೊಂಡ ಪರಿಯಲ್ಲಿ. ಪರಂಪರೆಯ ತ್ಯಾಜ್ಯಾಂಶಗಳನ್ನು ಬಿಟ್ಟು ಪೋಷಕಾಂಶಗಳನ್ನು ಜೀರ್ಣಿಸಿಕೊಂಡು ತಮ್ಮದೇ ಕಾವ್ಯ ಮಾರ್ಗವನ್ನು ರೂಪಿಸಿಕೊಂಡರು. ನಿಸಾರ್‌ರ ಕಾವ್ಯ ಜನಸಂಮಿತವಾದುದು. ಕಾವ್ಯ ಮುಖೇನ ಜನಮನವನ್ನು ಸಂಸ್ಕರಿಸುವ ನಿಟ್ಟನಲ್ಲಿ ಸಂವಹನದ ಪಾತ್ರವನ್ನು ಬಲ್ಲ ನಿಸಾರ್ ರಸಿಕರೊಂದಿಗೆ ಸಂವಹಿಸುವ ಮೂಲಕವೇ ತಮ್ಮ ಕಾವ್ಯಾಭಿವ್ಯಕ್ತಿ ಕಂಡುಕೊಂಡರು. ಭಾಷಾ ಪ್ರಯೋಗದಲ್ಲಿ ಧ್ವನಿಪೂರ್ಣತೆ ಉಳಿಸಿಕೊಂಡೂ ಅರ್ಥವಾಗುವ ಕವಿಯಾಗಿ ಜನಮಾನಸಕ್ಕೆ ಹತ್ತಿರವಾದರು. ಅವರ ಕವನ ಸಂಕಲನಗಳು ಐದಾರು ಮರುಮುದ್ರಣಗಳನ್ನು ಕಂಡಿರುವುದೇ ನಿಸಾರ್‌ರ ಜನಪ್ರಿಯತೆಯ ಹೆಗ್ಗುರುತು. ಇಪ್ಪತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿರುವ ‘ನಿತ್ಯೋತ್ಸವ’ ಕನ್ನಡದಲ್ಲಿ ಕೆ.ಎಸ್.ನ. ಅವರ ‘ಮೈಸೂರು ಮಲ್ಲಿಗೆ’ಯ ನಂತರ ಅತಿ ಹೆಚ್ಚು ಮರುಮುದ್ರಣಗಳನ್ನು ಕಂಡಿರುವ ಸಂಕಲನ. ನಿಸಾರ್‌ರ ವಿಶಿಷ್ಟ ಸ್ವಂತಿಕೆಯ ಇನ್ನೊಂದು ಛಾಪನ್ನು ನಾವು ಅವರ ವ್ಯಕ್ತಿಚಿತ್ರ ಕಾವ್ಯದಲ್ಲಿ ಕಾಣುತ್ತೇವೆ. ‘ಮಾಸ್ತಿ’, ‘ನೆಹರೂ’, ‘ರಾಮನ್ ಸತ್ತಸುದ್ದಿ’, ‘ಎಚ್ಚೆನ್’ ಮೊದಲಾದ ವ್ಯಕ್ತಿಚಿತ್ರ ಕವನಗಳು, ಭಾಷೆಯ ಅಮೃತಶಿಲೆಯಲ್ಲಿ ಕವಿ ಕಡೆದಿರಿಸಿರುವ ಅನರ್ಘ್ಯ ಕಾವ್ಯಶಿಲ್ಪಗಳು.

ಕವಿ ನಿಸಾರ್‌ರ ಗದ್ಯ ಬರವಣಿಗೆಯೂ ಮೌಲಿಕವಾದುದು. ಅವರ ಮೊದಲ ಗದ್ಯ ಬರಹ ಪ್ರಕಟವಾದದ್ದು 1950ರಲ್ಲಿ- ತತ್ತ್ವಜ್ಞಾನಿ ವಾಲ್ಟೇರನನ್ನು ಕುರಿತ ಲೇಖನ. ಲಲಿತ ಪ್ರಬಂಧ, ವಿಮರ್ಶೆಯಲ್ಲಿ ನಿಸಾರರು ಗಣನೀಯ ಸಾಧನೆ ಮಾಡಿದ್ದಾರೆ. ಧರ್ಮ-ಸಂಸ್ಕೃತಿಗಳ ಪಥಗಳನ್ನು ವಿಮರ್ಶೆಯ ಬೆಳಕಲ್ಲಿ ಅನಾವರಣಗೊಳಿಸುವ ಹಿರಿಯರು ಹರಸಿದ ಹೆದ್ದಾರಿ ಮತ್ತು ಬುದ್ಧಿ ಹೃದಯಗಳೆರಡಕ್ಕೂ ಆಪ್ಯಾಯಮಾನವಾಗುವ ಅಚ್ಚುಮೆಚ್ಚು, ವಿಚಾರ ವಿಹಾರ ಮುಖ್ಯ ಗದ್ಯ ಕೃತಿಗಳು. ನಿಸಾರ್ ಅಹಮದ್ ಅವರ ಅಪ್ರತಿಮ ಪ್ರತಿಭೆ ಮತ್ತು ಸಾಧನೆಗಳನ್ನು ನಾಡು ಅಭಿಮಾನದಿಂದ ಗುರುತಿಸಿ ಮಾನ್ಯಮಾಡಿದೆ. ಸಾಂಸ್ಕೃತಿಕ ಲೋಕದ ಹೆಗ್ಗುರುತುಗಳಾದ ಅನೇಕ ಗೌರವಮರ್ಯಾದೆಗಳು, ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿವೆ. ಪದ್ಮಶ್ರೀ, ರಾಜ್ಯೋತ್ಸವ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನಾಡೋಜ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- ಹೀಗೆ ಹಲವಾರು ಪ್ರಶಸ್ತಿಗಳ ಪ್ರಭಾವಳಿ.

ತಂದೆಯ ಅಂತಃಕರಣ ಮಗನಲ್ಲಿ ರಕ್ತಗತ. ನಿಸಾರ್‌ರ ಅಭಿಮಾನಿಗಳ ಬಳಗ ದೊಡ್ಡದು. ಹತ್ತು ವರ್ಷಗಳ ಹಿಂದೆ ಎಪ್ಪತ್ತು ತುಂಬಿದಾಗ ಅಭಿಮಾನಿಗಳು 1800 ಪುಟಗಳ ಬೃಹದ್ಗಾತ್ರದ ‘‘ನಿಸಾರ್ ನಿಮಗಿದೋ ನಮನ’’ ಅಭಿನಂದನಾ ಗ್ರಂಥ ಅರ್ಪಿಸಿದ್ದು ಇನ್ನೂ ರಸಿಕರ ಮನದಲ್ಲಿ ಹಸಿರಾಗಿದೆ. ಈಗ ‘‘ಹಮೀದಾ ಹೈದರ್’’ನ ಹೈದನಿಗೆ ಎಂಭತ್ತು ತುಂಬಿದ ಪ್ರಾಯ. ಪ್ರೀತಿ ಅಭಿಮಾನಗಳಿಗಿಲ್ಲ ಮುಪ್ಪು. ಇದೇ ಹದಿನಾಲ್ಕರಂದು, ಸಂಕ್ರಮಣದ ದಿನ, ತಮ್ಮ ಮೆಚ್ಚಿನ ಕವಿಗೆ ಸಪ್ನ ಬುಕ್ ಹೌಸ್ ಅಭಿಮಾನಿಗಳಿಂದ 80ರ ಅಭಿನಂದನೆ, ಸಾರಸ್ವತ ಸಿರಿ ಸಮರ್ಪಣೆ. ಕವಿಯ ಸಾಧನೆಗೆ ಅನ್ವರ್ಥಕವಾದ ಗ್ರಂಥ.
ನಿಸಾರ್ ನಿಮಗಿದೋ-
     ಸ್ವಸ್ತಿ ಸ್ವಸ್ತಿ ಸ್ವಸ್ತಿ.

Writer - ಜಿ.ಎನ್. ರಂಗನಾಥ್ ರಾವ್

contributor

Editor - ಜಿ.ಎನ್. ರಂಗನಾಥ್ ರಾವ್

contributor

Similar News

ಸಂವಿಧಾನ -75