ರಾಹುಲ್ ರೈಸಿಂಗ್?
ರಾಹುಲ್ ರೈಸಿಂಗ್?
ನೋಟುಬಂಧಿ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಪ್ರತಿಪಾದನೆ. ಶಕ್ತಿಕೇಂದ್ರಗಳಲ್ಲಿ ರಾಹುಲ್ ಗಾಂಧಿಯವರ ಪ್ರಭಾವಕ್ಕೂ ಇದು ಅನ್ವಯವಾಗುತ್ತದೆ. ನಿರಂತರವಾಗಿ ನೋಟುಬಂಧಿ ವಿರುದ್ಧ ಮಾಡುತ್ತಿರುವ ಟೀಕೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ನೋಟುಬಂಧಿ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ಕೈಗೊಂಡಿರುವ ನಿರ್ಧಾರ ಇದೀಗ ಕಾಂಗ್ರೆಸ್‌ಗೆ ಫಲ ನೀಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 24, ಅಕ್ತಬ್ ರಸ್ತೆಯಲ್ಲಿ ಸಂಚಲನ ಮೂಡಿಸಿರುವ ವಿಚಾರವೆಂದರೆ, ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ರಾಹುಲ್‌ಗಾಂಧಿ ವಿರುದ್ಧ ಮಾಡುತ್ತಿರುವ ವಾಗ್ದಾಳಿಗಳು ಕಾಂಗ್ರೆಸ್ ಯುವರಾಜನಿಗೆ ದೊಡ್ಡ ಸಂಖ್ಯೆಯ ಶ್ರೋತೃಗಳನ್ನು ತಲುಪಲು ಸಹಾಯ ಮಾಡಿಕೊಡುತ್ತಿದೆ ಎಂಬ ಅಂಶ. ಅಂತಿಮವಾಗಿ 2017 ರಾಹುಲ್‌ಗಾಂಧಿಯವರ ವರ್ಷವಾಗುತ್ತದೆಯೇ? ಬಹಳಷ್ಟು ಮಂದಿ ಆ ರೀತಿಯಲ್ಲಿ ಯೋಚಿಸಿಲ್ಲ. ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಶೀಲಾ ಹರಕೆಯ ಕುರಿಮರಿ?
ಭ್ರಷ್ಟಾಚಾರ ಆರೋಪದಲ್ಲಿ ಶೀಲಾ ದೀಕ್ಷಿತ್ ಅವರನ್ನು ಹರಕೆಯ ಕುರಿ ಮಾಡಲು ಕಾಂಗ್ರೆಸ್ ಪಕ್ಷ ಬಯಸಿದೆ ಎಂಬ ಪಿಸುಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ನರೇಂದ್ರ ಮೋದಿಯವರು ಕಾರ್ಪೊರೇಟ್ ಕಂಪೆನಿಗಳಿಂದ ದೊಡ್ಡ ಮೊತ್ತದ ದೇಣಿಗೆ ಸ್ವೀಕರಿಸಿದ್ದಾರೆ ಎಂಬ ತಮ್ಮ ಆರೋಪವನ್ನು ಸಮರ್ಥಿಸಲು ರಾಹುಲ್‌ಗಾಂಧಿ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಇದು ಪ್ರಧಾನಿಯ ಇಮೇಜ್‌ಗೆ ಕಪ್ಪುಚುಕ್ಕೆಯಾಗಲಿದೆ. ಆದರೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಭಿನ್ನರೀತಿಯ ಚಿಂತನೆ ನಡೆದಿದೆ. ರಾಹುಲ್ ತಂತ್ರಗಾರಿಕೆ, ರುಷುವತ್ತು ಪಡೆದಿದ್ದಾರೆ ಎನ್ನಲಾದ ಗಣ್ಯರ ಪಟ್ಟಿಯಲ್ಲಿರುವ ಶೀಲಾ ದೀಕ್ಷಿತ್ ಅವರ ಹೆಸರನ್ನು ಮುನ್ನಲೆಗೆ ತರುವ ಮೂಲಕ, ಉತ್ತರ ಪ್ರದೇಶದಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬದಲಿಸಬೇಕು ಎನ್ನುವುದು ಅವರ ಚಿಂತನೆ. ಅಖಿಲೇಶ್ ಯಾದವ್ ಜತೆ ಕೈಜೋಡಿಸುವ ಮನಸ್ಥಿತಿ ಹೊಂದಿರುವ ನಾಯಕರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದು ತಂತ್ರಗಾರಿಕೆ. ಇದುವರೆಗೂ ದೀಕ್ಷಿತ್ ಅವರನ್ನು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖವಾಗಿ ಬಿಂಬಿಸಲಾಗಿತ್ತು. ಮೋದಿ ವಿರುದ್ಧದ ರಾಹುಲ್ ಆಂದೋಲನ ತಿರುಗುಬಾಣವಾಗುವ ಅಪಾಯವೂ ಇದೆ. ಕಾಂಗ್ರೆಸ್ ಪಕ್ಷದ ನಿರೀಕ್ಷಿತ ಅವಕಾಶಗಳ ಹಿನ್ನೆಲೆಯಲ್ಲಿ, ರೇಸ್‌ನಿಂದ ಹಿಂದೆ ಸರಿಯಲು ಬಹುಶಃ ದೀಕ್ಷಿತ್ ಸಂತೋಷದಿಂದಲೇ ಒಪ್ಪಿಕೊಳ್ಳಬಹುದು. ಆದರೆ ಇದು ಕಾರ್ಯಗತಗೊಳ್ಳಬೇಕಾಗಿದೆ. ರಾಹುಲ್ ಹೊಸವರ್ಷದ ರಜೆಯಿಂದ ವಾಪಸು ಬರುವುದನ್ನೇ ಪ್ರತಿಯೊಬ್ಬರೂ ಕಾಯುತ್ತಿದ್ದಾರೆ.
ಅನಂತ ಸವಾಲಿನ ಸರಮಾಲೆ
ಭಾರತದ ಮುಖ್ಯ ಅಂಕಿ ಅಂಶಗಳ ತಜ್ಞ ಟಿಸಿಎ ಅನಂತ್ ಅವರ ಸಮಸ್ಯೆಗಳೂ ಅನಂತ. ಎರಡು ವರ್ಷದ ಹಿಂದೆ ಅವರು ಅಧಿಕಾರ ವಹಿಸಿಕೊಂಡಾಗಿನಿಂದ, ಜಿಡಿಪಿ ಅಂಕಿ ಅಂಶಗಳನ್ನು ಲೆಕ್ಕಾಚಾರ ಮಾಡುವ ಅವರ ಕಾರ್ಯವಿಧಾನ ವಿರುದ್ಧ ಟೀಕೆಗಳಿಗೆ ಗುರಿಯಾಗಿದೆ. ಇದೀಗ ನೋಟು ರದ್ದತಿ ಬಳಿಕ ಅವರ ಹೊಸ ಅಂದಾಜಿನಂತೆ ದೇಶದ ಆರ್ಥಿಕತೆಯ ಪ್ರಗತಿ ಶೇಕಡ 7.1ಕ್ಕೆ ಕುಸಿಯುವ ಸಾಧ್ಯತೆ ಇದೆ. ಹಿಂದೆ 7.6ರಷ್ಟು ಆರ್ಥಿಕ ಪ್ರಗತಿಯನ್ನು ಅಂದಾಜಿಸಿದ್ದ ಅವರ ಪರಿಷ್ಕೃತ ಅಂದಾಜು ಇದೀಗ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಟ್ಟದಷ್ಟು ತೊಂದರೆಗಳೂ ಅವರಿಗೆ ಎದುರಾಗಿವೆ. ಈ ಅಂಕಿ ಅಂಶ ತಜ್ಞ ಶುಕ್ರವಾರ ಘೋಷಿಸಿದ ಅಂಕಿ ಅಂಶಗಳಲ್ಲಿ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಮಾಹಿತಿಯನ್ನು ಅಂದಾಜಿನಿಂದ ಸಂಪೂರ್ಣ ಕೈಬಿಟ್ಟಿದ್ದಾರೆ. ಅಂದರೆ ಜಿಡಿಪಿ ಅಂಕಿ ಅಂಶದಲ್ಲಿ ನೋಟು ರದ್ದತಿ ತಿಂಗಳಿನ ಅಂಕಿ ಅಂಶಗಳನ್ನು ಸೇರಿಸಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಅವರು, ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ನೀಡಿದರು. ಅದು ಕೊನೆಗೊಂಡ ಬಳಿಕ ನಿರಾಳವಾದರು. ನೇರ ಮುಖಾಮುಖಿ ಸಂದರ್ಶನಕ್ಕೂ ನಿರಾಕರಿಸಿದರು. ಭವಿಷ್ಯದಲ್ಲಿ ಅವರನ್ನು ಕಾಡುವ ಏನನ್ನೂ ಹೇಳಲು ಅವರು ಇಷ್ಟಪಡುತ್ತಿಲ್ಲ ಎನ್ನುವುದು ಸ್ಪಷ್ಟ.
ಕಥೆಗಾರ ಒಬ್ರಿಯನ್
ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್ ಕ್ವಿಝ್ ಮಾಸ್ಟರ್ ಆಗಿ ಖ್ಯಾತಿ ಗಳಿಸಿದವರು. ಆದರೆ ಯಾರಿಗೂ ತಿಳಿಯದ ವಿಚಾರವೆಂದರೆ, ಅವರ ಗಾಸಿಪ್ ಹಬ್ಬಿಸುವ ಕೌಶಲ. ಸದಾ ರಸವತ್ತಾದ ಗಾಸಿಪ್ ಹಾಗೂ ಮಾಹಿತಿಗಾಗಿ ಎದುರು ನೋಡುತ್ತಿರುವ ಮಾಧ್ಯಮ ಮಂದಿಗೆ ಈ ಕಾರಣದಿಂದಾಗಿಯೇ ಅವರು ಅಚ್ಚುಮೆಚ್ಚು. ಆದರೆ ಇದೇ ವೇಳೆ ಒಬ್ರಿಯಾನ್ ಒಳಗಿನ ಕಥೆಗಾರ, ಸುದ್ದಿಬೇಟೆಯ ಮಂದಿಗೆ ವಿಷಯಗಳನ್ನು ನೀಡುವ ಮೂಲಕ ತನ್ನ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಾರೆ. ಕೆಲವರು ಅವರನ್ನು ಹಿಂದೆ ಇಂಥ ರೋಚಕ ಕಥೆಗಳ ಸರದಾರರು ಎನಿಸಿಕೊಂಡಿದ್ದ ಅರುಣ್ ಜೇಟ್ಲಿ, ರಾಜೀವ್ ಶುಕ್ಲಾ ಹಾಗೂ ಪ್ರಿಯರಂಜನ್ ದಾಸ್ ಮುನ್ಷಿಯವರಿಗೆ ಹೋಲಿಸಲು ಆರಂಭಿಸಿದ್ದಾರೆ. ಸಚಿವಾಲಯದ ಹೊರೆ ಸಹಜವಾಗಿಯೇ ಜೇಟ್ಲಿಯವರ ಮಾಧ್ಯಮ ಜತೆಗಿನ ಸಂವಾದವನ್ನು ಕಡಿತಗೊಳಿಸುವಂತೆ ಮಾಡಿದೆ. ಯುಪಿಎ ಮೈತ್ರಿಕೂಟ ಅಧಿಕಾರದಿಂದ ಹೊರಗೆ ಇರುವ ಕಾರಣದಿಂದ ಶುಕ್ಲಾ ಕೂಡಾ ಸುದ್ದಿಜಗತ್ತಿನಿಂದ ತೆರೆಗೆ ಸರಿದಿದ್ದಾರೆ. ಅನಾರೋಗ್ಯ ಕಾರಣದಿಂದ ದಾಸ್ ಮುನ್ಷಿ ಕೂಡಾ ಮಾಧ್ಯಮ ವಲಯದಿಂದ ದೂರವಾಗಿದ್ದಾರೆ. ಇದರಿಂದಾಗಿ ಪ್ರೇಕ್ಷಕರಿಗೆ ಮಸಾಲೆ ಸುದ್ದಿ ನೀಡುವ ವಿಚಾರದಲ್ಲಿ ಒಬ್ರಿಯಾನ್‌ಗೆ ಅಕ್ಷರಶಃ ಸ್ಪರ್ಧಿಗಳೇ ಇಲ್ಲದಂತಾಗಿದೆ.