ತಕ್ಕಡಿ ಒಂದೇ ಬದಿ ತೂಗುತ್ತಿದೆ!

Update: 2017-01-13 19:00 GMT

ಇತ್ತೀಚೆಗೆ ಯೂರೋಪ್ ಒಕ್ಕೂಟದ ಬ್ರಿಟನ್ ರಾಯಭಾರಿ ಸರ್ ಐವನ್ ರೋಜರ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು, ಯಾಕೆಂದರೆ ಲಂಡನ್ ಯೂರೋಪ್ ಒಕ್ಕೂಟದಿಂದ ವಿಚ್ಛೇದನಕ್ಕಾಗಿ ನಡೆಸುತ್ತಿರುವ ಗೊಂದಲಮಯ ಮಾತುಕತೆಯಿಂದಾಗಿ ಬ್ರಿಟಿಷ್ ಸರಕಾರದಲ್ಲಿ ಬೇರೂರಿರುವ ಅದಕ್ಷತೆಯ ಭಾಗವಾಗಿರುವ ಬದಲು ತೆರೆಸಾ ಮೇ ಸರಕಾರದಿಂದ ದೂರ ಉಳಿಯುವುದೇ ಉತ್ತಮ ಎಂದು ಅವರು ಯೋಚಿಸಿದ್ದರು. ತಮ್ಮ ಸಹಪಾಠಿಗಳಿಗೆ ಬರೆದ ಪತ್ರದಲ್ಲಿ ಅವರು ‘‘ನೀವು ಕೆಟ್ಟ ವಾದಗಳು ಮತ್ತು ಗೊಂದಲ ಹುಟ್ಟಿಸುವ ಯೋಚನೆಗಳ ವಿರುದ್ಧ ಸವಾಲೆಸೆಯುತ್ತೀರಿ ಮತ್ತು ಅಧಿಕಾರದಲ್ಲಿರುವವರ ಬಗ್ಗೆ ಸತ್ಯವನ್ನು ಮಾತನಾಡಲು ನೀವೆಂದೂ ಹೆದರುವುದಿಲ್ಲ ಎಂದು ನಾನು ನಂಬುತ್ತೇನೆ’’ ಎಂದು ಬರೆದಿದ್ದರು. ತಮ್ಮ ಮೂಲ ಧರ್ಮವನ್ನು ನಿರ್ವಹಿಸುವಂತೆ ಅವರು ತಮ್ಮ ಕಾಮ್ರೇಡ್‌ಗಳಿಗೆ ಕರೆ ನೀಡಿದರು.

‘‘ಕೇಳಬೇಕಾಗಿರುವವರು ಒಪ್ಪದಿರುವಂತಹ ಸಂದೇಶಗಳನ್ನು ಹಂಚಲು’’ ಎಂದವರು ಹೇಳಿದ್ದರು. ಈ ನೇರಾನೇರ ದಿಟ್ಟ ನಡೆಯನ್ನು ಭಾರತದಲ್ಲಿ ಸಂಕಷ್ಟ ತೊಂದೊಡ್ಡಿದ ನೋಟ್‌ಬಂದಿಯ ಹಿನ್ನ್ನೆಲೆಯಲ್ಲಿ ಸೃಷ್ಟಿಯಾದ ಭಯದ ನಡೆಯನ್ನು ಹೋಲಿಸಿ ನೋಡಿ. ಹಿರಿಯ ಅಧಿಕಾರಿಗಳು, ನೀತಿ ಆಯೋಗದ ಸದಸ್ಯರು ಮತ್ತು ಸಂಪುಟ ಸಚಿವರುಗಳು ಕೂಡಾ ನೋಟು ಅಮಾನ್ಯವೆಂಬ ಬೃಹತ್ ಸುಲಿಗೆ ಬಗ್ಗೆ ತಮ್ಮೆಳಗೆ ಅಸಮಾಧಾನವನ್ನು ಹೊಂದಿದ್ದಾರೆ ಆದರೆ ಆಡಳಿತಪಕ್ಷದ ಸದಸ್ಯರಿಂದ ಸಾರ್ವಜನಿಕವಾಗಿ ಈ ಬಗ್ಗೆ ಅಸಮ್ಮತಿಯ ಒಂದೇ ಒಂದು ಹೇಳಿಕೆ ಹೊರಬಿದ್ದಿಲ್ಲ. ಕೇವಲ ಕೆಲಸದಲ್ಲಿ ಅನುಕೂಲಸಿಂಧುತ್ವದ ಬಗ್ಗೆ ಖೇದ ವ್ಯಕ್ತಪಡಿಸುವುದಕ್ಕಿಂತ ಅನುಭವವು ತ್ರಾಸದಾಯಕವಾಗಿದೆ ಎಂದು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಅದು ನಾಗರಿಕರ ಉಳಿತಾಯ ಮತ್ತು ಭಾವನೆಗಳನ್ನು ಯಾವುದೇ ಪ್ರತಿಭಟನೆಯಿಲ್ಲದೆ ಅನಾಯಾಸವಾಗಿ ಒಟ್ಟುಗೂಡಿಸಬಹುದು ಎಂಬ ಅಪಾಯಕಾರಿ ಪಾಠವನ್ನು ಆಹ್ವಾನಿಸುತ್ತದೆ. ನಿಜವಾಗಿ, ಓರ್ವ ನೀತಿಕಥೆಗಾರನ ಎಲ್ಲಾ ಗುಣಗಳನ್ನು ಹೊಂದಿರುವ ಪ್ರಧಾನ ಮಂತ್ರಿಯವರು, ತಮ್ಮ ಸರಕಾರ ಪ್ರತಿಯೊಬ್ಬನ ಖಾಸಗಿ ಉಳಿತಾಯವನ್ನು ಹಿಡಿದಿಟ್ಟಿದ್ದರೂ, ತಮಗೆ 125 ಕೋಟಿ ಸಹನಾಗರಿಕರ ಬೆಂಬಲವಿದೆಯೆಂದು ಹೇಳಿಕೊಳ್ಳುತ್ತಾರೆ.

ಕಳೆದ ನವೆಂಬರ್ 8ರಿಂದ ಜನರನ್ನು ಅಪರಿಮಿತ ಸಂಕಷ್ಟಕ್ಕೆ ತಳ್ಳಿರುವ ಕೊನೆಗಾಣದ ಬವಣೆಯನ್ನು ರಾಷ್ಟ್ರ ನಿರ್ಮಾಣದತ್ತ ಇಟ್ಟ ದಿಟ್ಟ ಹೆಜ್ಜೆ ಮತ್ತು ದೇಶಭಕ್ತಿಯ ಅಪೂರ್ವ ಪ್ರದರ್ಶನ ಎಂದೆಲ್ಲಾ ಹೇಳುತ್ತಾ ಚಪ್ಪಾಳೆ ಗಿಟ್ಟಿಸಿಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿಯ ಬೆಂಬಲಿಗರು ಮತ್ತು ಸಲಹೆ ಗಾರರು ನೋಟು ಅಮಾನ್ಯತೆಯ ಟೀಕಾಕಾರರನ್ನು ಹಿಂಸಾಚಾರ ಮತ್ತು ಸಾರ್ವಜನಿಕ ಪ್ರತಿಭಟನೆ ಇಲ್ಲದಿರುವುದನ್ನೇ ವಿವರಿಸುವಂತೆ ಹೇಳುತ್ತಾರೆ.
ಅದು ಕಷ್ಟವೇನೂ ಅಲ್ಲ. 20ನೆ ಶತಮಾನದ ವಿಷಮತೆಯನ್ನು ಚುಟುಕಾಗಿ ಪಟ್ಟಿ ಮಾಡಿರುವ ಟೋನಿ ಜಡ್, ‘‘ಮಿಲಿಯಾನುಗಟ್ಟಲೆ ಜನರು ತಮ್ಮ ಮೇಲೆ ಆಡಳಿತಗಾರರು ನಡೆಸುವ ಅನ್ಯಾಯವನ್ನು ಯಾಕೆ ಮೌನವಾಗಿ ಸಹಿಸುತ್ತಾರೆ’’ ಎಂದು ಲಿಯೋ ಟಾಲ್‌ಸ್ಟಾಯ್‌ರನ್ನು ಕೇಳಿದಾಗ ಆತ: ‘‘ಮನುಷ್ಯನು ಒಗ್ಗಿಕೊಳ್ಳದ ಯಾವುದೇ ಜೀವನಸ್ಥಿತಿಯಿಲ್ಲ, ಮುಖ್ಯವಾಗಿ ತನ್ನ ಸುತ್ತಮುತ್ತಲಿನ ಜನರು ಅದನ್ನು ಸ್ವೀಕರಿಸಿದ್ದಾರೆ ಎಂದು ಅರಿತಾಗ ಆತನೂ ಅದಕ್ಕೆ ಹೊಂದಿಕೊಳ್ಳುತ್ತಾನೆ.’’ ಅನ್ನುತ್ತಾರೆ.

ಇದರಲ್ಲಿರುವ ಅಪಾಯವೆಂದರೆ ಈ ರೀತಿಯ ಸಾಮೂಹಿಕ ಪ್ರಯೋಗದ ಪ್ರತಿಭಟನಾರಹಿತ ಮೌನಸಮ್ಮತಿಯನ್ನು ಇನ್ನಷ್ಟು ಕ್ರೂರ ನಾಯಕತ್ವಕ್ಕೆ ಪರವಾನಿಗೆ ನೀಡಿದಂತೆ ಎಂದು ಭಾವಿಸಲಾಗುತ್ತದೆ. ಅದು ನಮ್ಮೆಲ್ಲರನ್ನೂ ಒಮ್ಮೆ ಕುಳಿತುಕೊಳ್ಳುವಂತೆ ಒತ್ತಾಯಿಸುತ್ತದೆ. ಮುಂದೆ ಎಲ್ಲಾ ಐದು ರಾಜ್ಯಗಳಲ್ಲಿ ಬಿಜೆಪಿಯು ಪ್ರತಿಯೊಂದು ಸ್ಥಾನವನ್ನು ಗೆದ್ದುಕೊಂಡರೂ ಅದು ಆರೋಗ್ಯಪೂರ್ಣ ಪ್ರಜಾಸತ್ತಾತ್ಮಕ ಸಮತೋಲಿತ ಸ್ಥಿತಿಯ ಬದಲಾಗಿ ಅನಿಯಮಿತ ಮತ್ತು ಅನಿರ್ಬಂಧಿತ ಅಧಿಕಾರ ಶೇಖರಣೆಗೆ ಸಿಕ್ಕ ಜನಾದೇಶವಾಗುವುದೇ? ಆದರೆ ಈ ಸಮತೋಲನ ಯಾರಿಗೆ ಬೇಕು? ಹೀಗೆಂದೂ ವಾದಿಸಬಹುದು.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಪ್ರಧಾನ ಮಂತ್ರಿ ಕಚೇರಿಯ ಆದ್ಯತೆಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಒಮ್ಮೆ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಆ ಆದ್ಯತೆಯನ್ನು ಮರುಸ್ಥಾಪಿಸಲಾಯಿತು. ಮತ್ತು ನರೇಂದ್ರ ಮೋದಿಯನ್ನು ವಿಫುಲವಾದ ಮತ್ತು ಸ್ಪರ್ಧಾತ್ಮಕ ಸಾರ್ವಜನಿಕ ಸಂಪರ್ಕ ವಿಭಾಗವು ಚರಿಶ್ಮಾವುಳ್ಳ ವ್ಯಕ್ತಿಯೆಂದು ಪ್ರಚಾರ ಮಾಡಿತ್ತು. ಒರ್ವ ಸಮೂಹ ನಾಯಕನು ತನ್ನ ಜನಪ್ರಿಯ ರುಜುವಾತುಗಳನ್ನು ಪ್ರದರ್ಶಿಸಬೇಕು ಮತ್ತು ಉನ್ನತ ವೈಭವಕ್ಕಾಗಿ ರಾಷ್ಟ್ರವನ್ನು ಹುರಿದುಂಬಿಸಲು ಸಮೂಹದ ಜೊತೆ ವಿಶೇಷ ಬಾಂಧವ್ಯವನ್ನು ಬಳಸಬೇಕು. ಅಂಥಾ ನಾಯಕನು ಸಾಂಸ್ಥಿಕ ತೊಂದರೆಗಳಿಂದ ದುರ್ಬಲನಾಗಬಾರದು. ಒಂದು ಪ್ರಾಚೀನ ಸಂದಿಗ್ಧತೆ ಇಲ್ಲಿದೆ: ರಾಜನು ಎಷ್ಟು ಶಕ್ತಿಶಾಲಿಯಾಗಿರಬೇಕು? ಈ ಆಧುನಿಕ, ಪ್ರಜಾಸತ್ತಾತ್ಮಕ ಯುಗದಲ್ಲಿ ಉತ್ತರಿಸಲಾಗದ ಪ್ರಶ್ನೆಯೆಂದರೆ, ರಾಜಕುಮಾರನಿಗೆ ಎಷ್ಟು ಅಧಿಕಾರವನ್ನು ನೀಡಬೇಕು? ಅಲೆಕ್ಸಾಂಡರ್ ಹ್ಯಾಮಿಲ್ಟನ್ ಅಮೆರಿಕದ ಅಧ್ಯಕ್ಷತೆಯಲ್ಲಿ ‘ಕಾರ್ಯಾಂಗದಲ್ಲಿ ಶಕ್ತಿ’ಯ ಖಾತರಿಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ್ದರು. ಅತ್ಯಂತ ದುರ್ಬಲ ಕಾರ್ಯಾಂಗವು ಊನತೆಗೆ ದಾರಿ ಮಾಡುತ್ತದೆ; ಅತ್ಯಂತ ಶಕ್ತಿಶಾಲಿ ನಾಯಕ ಮತ್ತು ಗಣರಾಜ್ಯವನ್ನು ಕೂಡಾ ತೊಂದರೆಗೆ ಸಿಲುಕಿಸುತ್ತದೆ. ಇವುಗಳ ಮಧ್ಯೆ ಸರಿಯಾದ ಸಮತೋಲನವನ್ನು ಸಾಧಿಸುವುದು ಸಾಂವಿಧಾನಿಕ ಪ್ರಕ್ರಿಯೆಗಳು ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಬಿಟ್ಟ ವಿಚಾರ. ಒಂದು ಆರೋಗ್ಯಪೂರ್ಣ ಪ್ರಜಾಪ್ರಭುತ್ವವನ್ನು, ನ್ಯಾಯಿಕ ಸಮತೋಲನವನ್ನು ಕಾಣುವಲ್ಲಿನ ಅದರ ಸಾಮರ್ಥ್ಯದ ಆಧಾರದ ಮೇಲೆ ತಿಳಿಯಲಾಗುತ್ತದೆ. ಭಾರತದಲ್ಲಿ ನಾವು ಈ ವಿಷಯದಲ್ಲಿ ಕೆಟ್ಟದಾಗಿ ಜಾರಿಬಿದ್ದಿದ್ದೇವೆ. ಬಹುತೇಕ ಎಲ್ಲಾ ರಾಜಕೀಯ ಭಾರಗಳು ಮುದುಡಿವೆ ಮತ್ತು ತಕ್ಕಡಿ ಪ್ರಧಾನ ಮಂತ್ರಿಯತ್ತ ವಾಲಿದೆ. ಅವರು ಎಷ್ಟು ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂದರೆ ನಿರ್ಬಂಧ ಮತ್ತು ಹೊಣೆಗಾರಿಕೆಯ ಎಲ್ಲಾ ಸಂಭಾವ್ಯ ಮತ್ತು ನೈಜ ಮೂಲಗಳ ಮೇಲೆ ಸವಾರಿ ಮಾಡುವಷ್ಟು.

ಕೇಂದ್ರ ಸಂಪುಟವು ಈಗ ಸಮಾನರ ಸಂಪುಟವಾಗುಳಿದಿಲ್ಲ ಮತ್ತು ಪ್ರಧಾನಿ ಆ ಸಂಪುಟದ ಹಿರಿಯ ಸಹೋದ್ಯೋಗಿಯಾಗಿಯೂ ಉಳಿದಿಲ್ಲ. ಅವರು ಖಂಡಿತವಾಗಿಯೂ ಅದಕ್ಕಿಂತ ಹೆಚ್ಚಾಗಿದ್ದಾರೆ. ಹಿಂದಿನ ಬಿಜೆಪಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಂತೆ ತನ್ನ ಉಪಪ್ರಧಾನಿ ಮತ್ತು ಜಸ್ವಂತ್ ಸಿಂಗ್, ಜಾರ್ಜ್ ಫೆರ್ನಾಂಡಿಸ್ ಮತ್ತು ಯಶವಂತ್ ಸಿನ್ಹಾರಂಥಾ ಗಣ್ಯ ಸಚಿವರಿಗೆ ಉತ್ತರಿಸಬೇಕಾದ ಅನಿವಾರ್ಯತೆ ಈಗಿನ ಮೋದಿಗಿಲ್ಲ, ಯಾಕೆಂದರೆ ಅವರ ಸುತ್ತ ಇರುವುದು ಅಸಮರ್ಥ ಸಚಿವರುಗಳ ಗುಂಪು. ಉತ್ತರ ಕ್ಷೇತ್ರಗಳ ಅಧ್ಯಕ್ಷರನ್ನೂ ಸೇರಿಸಿ, ಈ ಎಲ್ಲಾ ಮಂತ್ರಿಗಳು ತಮಗೇನು ಮಾಡಲು ತಿಳಿಸಲಾಗಿದೆಯೋ ಅದನ್ನು ಮಾಡುವುದರಲ್ಲೇ, ಅದರಲ್ಲೂ ಏನನ್ನು ಹೇಳಲು ಹೇಳಲಾಗಿದೆಯೋ ಅದನ್ನು ಹೇಳುವುದರಲ್ಲೇ ತೃಪ್ತಿಪಟ್ಟುಕೊಂಡಿದ್ದಾರೆ. ಸಂಪುಟ ಸರಕಾರ ವ್ಯವಸ್ಥೆಯಲ್ಲಿ ಒಂದೊಮ್ಮೆ ಪ್ರಧಾನ ಮಂತ್ರಿಯ ಅಧಿಪತ್ಯಕ್ಕೆ ಆರೋಗ್ಯಪೂರ್ಣ ಪ್ರತಿರೋಧ ಎಂದು ನಂಬಲಾಗಿದ್ದ ಸಂಸದೀಯ ಪಕ್ಷವು ಈಗ ಬಂಧಿತ ಪ್ರೇಕ್ಷಕನ ಮಟ್ಟಕ್ಕೆ ಕುಸಿದಿದೆ. ಇದೇನು ಅಸ್ವಾಭಾವಿಕವಲ್ಲ, ಯಾಕೆಂದರೆ ಬಹುತೇಕ ಬಿಜೆಪಿ ಸಂಸದರು ತಮ್ಮ ಗೆಲುವಿಗಾಗಿ ಪ್ರಧಾನ ಮಂತ್ರಿಯ ಚರಿಷ್ಮಾವನ್ನೇ ನೆಚ್ಚಿಕೊಂಡವರಾಗಿದ್ದಾರೆ.

ಇನ್ನು ಸಾಂಘಿಕ ವಿಷಯದಲ್ಲಿ ಆಯ್ದ ಅನುಯಾಯಿಗಳು ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಪ್ರಧಾನ ಮಂತ್ರಿ ಕೂಡಾ ಸಂಘಟನೆಯು ಅಧಿಕಾರಕ್ಕೆ ವಿರುದ್ಧ ಮೂಲವಾಗಿ ಬೆಳೆಯದಂತೆ ನೋಡಿಕೊಳ್ಳುತ್ತಾನೆ. ಮೋದಿ ಕೂಡಾ ಹಾಗೆಯೇ ನೋಡಿಕೊಂಡಿದ್ದಾರೆ. ಬಿಜೆಪಿ ಆಂತರಿಕ ವ್ಯವಹಾರದಲ್ಲಿ ನೈತಿಕ ತೀರ್ಪುಗಾರರಾಗುವ ಹಕ್ಕು ತಮಗಿದೆ ಎಂದು ಪ್ರತಿಪಾದಿಸುವ ನಾಗ್ಪುರದ ಸ್ವಯಂಘೋಷಿತ ದೇಶಭಕ್ತರು ಮತ್ತು ಸಾಂಘಿಕ ಪುರುಷರು ಕೂಡಾ ರಾಜಶಕ್ತಿಯ ಓಲೈಕೆಯ ಮುಂದೆ ಶರಣಾಗುತ್ತಾರೆ. ಖಾಕಿ ಚಡ್ಡಿಯೂ ಸೇರಿದಂತೆ ವ್ಯಕ್ತಿತ್ವ ಆರಾಧನೆಯ ವಿರುದ್ಧವಿದ್ದ ಹಿಂದಿನ ಎಲ್ಲಾ ವಾದಗಳನ್ನು ಮೂಟೆಕಟ್ಟಲಾಗಿದೆ. ಉನ್ನತ ನ್ಯಾಯಾಂಗವನ್ನು ಹೊರತುಪಡಿಸಿ ಉಳಿದೆಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಪರಿಣಾಮಕಾರಿಯಾಗಿ ಉಸಿರುಗಟ್ಟಿಸಲಾಗಿದೆ. ಮತ್ತು ಹಾಗಾಗಿಯೇ ನ್ಯಾಯಾಂಗದ ಸ್ವಾಯತ್ತತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ ಮತ್ತು ಅದನ್ನು ಕೂಡಾ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುವ ಎಲ್ಲಾ ಪ್ರಯತ್ನಗಳೂ ನಡೆಯುತ್ತಿದೆ. ಅಣ್ಣಾ ಹಝಾರೆಯವರ ಕ್ಷೇತ್ರವಾಗಿರುವ ನಾಗರಿಕ ಸಮಾಜವನ್ನು ಗಂಟುಮೂಟೆ ಕಟ್ಟಿ ಮನೆಗೆ ಹೋಗುವಂತೆ ಸೂಚಿಸಲಾಗಿದೆ. ಎನ್‌ಜಿಒಗಳ ಮೇಲೆ ಎಫ್‌ಸಿಆರ್‌ಎಯ ಛಾಟಿಯೇಟು ಬೀಸಲಾಗಿದೆ. ರಾಜ್ಯ ಸರಕಾರಗಳು ಮನಸ್ಸಿಲ್ಲದ ಮನಸ್ಸಿನಿಂದಲಾದರೂ ಕೇಂದ್ರದ ಅಧಿಪತ್ಯವನ್ನು ಗೌರವಿಸುವಂತೆ ಒತ್ತಾಯಿಸಲಾಗಿದೆ. ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಕಚೇರಿ ಮೇಲೆ ದಾಳಿ ನಡೆಸಬೇಕಾದರೆ ಮತ್ತು ಟಿಎಂಸಿಯ ಸಂಸತ್ ನಾಯಕನನ್ನು ಬಂಧಿಸಬೇಕಾದರೆ ಯಾವಾಗ ಬೇಕಾದರೂ ಕೇಂದ್ರಪಡೆಯನ್ನು ನಿಯೋಜಿಸಬಹುದಾಗಿದೆ. ರಾಷ್ಟ್ರಪತಿಯು ಬಹುತೇಕ ಸಮಯದಲ್ಲಿ ಕೇವಲ ಉತ್ಸವಮೂರ್ತಿ ಎಂದೆನೆಸಿಕೊಂಡರೂ ತಮ್ಮ ಅಧಿಕಾರದ ನೈತಿಕ ಸಾಮರ್ಥ್ಯವನ್ನು ಕಂಡುಕೊಳ್ಳಲು ತಿರಸ್ಕರಿಸುತ್ತಲೇ ಬಂದಿದ್ದಾರೆ. ಒಟ್ಟಾರೆಯಾಗಿ ಸಾಂಸ್ಥಿಕ ದೌರ್ಬಲ್ಯ ಮತ್ತು ರಾಜಕೀಯ ದೋಷಗಳು ಪ್ರಧಾನಿ ಮೇಲುಗೈ ಸಾಧಿಸುವಂತೆ ಮಾಡಿದೆ. ಇದು ಕೇವಲ ನಮ್ಮ ಇತ್ತೀಚಿನ ದುರಂತಮಯ ರಾಜಕೀಯ ಇತಿಹಾಸವನ್ನು ನಿರ್ಲಕ್ಷಿಸುವವರಿಗಷ್ಟೇ ತೃಪ್ತಿ ನೀಡುವಂತಹ ವಿಷಯವಾಗಿದೆ.

ಇತಿಹಾಸಕಾರರು ನೋಟು ಅಮಾನ್ಯತೆಯನ್ನು ಪ್ರಧಾನ ಮಂತ್ರಿಯ ಹಠಮಾರಿತನದ ನಡೆ ಎಂದೇ ವಿವರಿಸುತ್ತಾರೆ. ಆದರೆ ಆ ಕಾರ್ಯ ನಡೆದು ಹೋಗಿದೆ. ಆದರೆ ನೋಟು ಅಮಾನ್ಯ ದುರಂತವು ಹಳೆಯ ಸ್ಥಿರತೆಯತ್ತ ಮರಳುವ ಯಾವುದೇ ಸೂಚನೆಯನ್ನು ಕಾಣುತ್ತಿಲ್ಲ. ಒಂದು ವಿಚಿತ್ರವಾದ ಅಸಹಾಯಕತೆ ಮತ್ತು ಆಕರ್ಷಣೆ ಗಣತಂತ್ರವನ್ನು ಆವರಿಸಿದೆ. ಆದರೂ ಎತ್ತರದಲ್ಲಿರುವ ದುರಹಂಕಾರವನ್ನು ತಡೆಯುವ ಕಾರ್ಯಕ್ಕೆ ಪ್ರಜಾಪ್ರಭುತ್ವವು ಬದ್ಧವಾಗಿದೆ. ಭಾರತಕ್ಕೂ ಸದೃಢ, ಸಮರ್ಥ ಪ್ರತಿಭಾರದ ಅಗತ್ಯವಿದೆ.
thewire.in

Writer - ಹರೀಶ್ ಖರೆ

contributor

Editor - ಹರೀಶ್ ಖರೆ

contributor

Similar News