ಪಂಪ ಪ್ರಶಸ್ತಿಯ ಹಂಪನಾ

Update: 2017-01-14 18:09 GMT

ಕಲ್ಪನಾ ಲೋಕದಲ್ಲಿ ವಿಹರಿಸುತ್ತ ಕಾವ್ಯ ಕನ್ನಿಕೆಯೊಂದಿಗೆ ಕೋರ್ಟಶಿಪ್ ಮಾಡುವ ಸೃಜನಶೀಲ ಸಾಹಿತ್ಯೋತ್ಸಾಹಕ್ಕೆ ಕನ್ನಡದಲ್ಲಿ ಬರವಿಲ್ಲ. ಆದರೆ ಇದೇ ಮಾತನ್ನು ಸಂಶೋಧನೆ, ಇತಿಹಾಸ, ಗ್ರಂಥ ಸಂಪಾದನೆಗಳಂಥ, ವಿದ್ವತ್ತು-ಪಾಂಡಿತ್ಯಗಳನ್ನೂ ಶ್ರದ್ಧೆ-ಸಹನೆ ಮತ್ತು ತ್ಯಾಗ ಮನೋಭಾವಗಳನ್ನು ಬೇಡುವ ಶಾಸ್ತ್ರ ಸಾಹಿತ್ಯ ಕಾಯಕದ ಬಗ್ಗೆ ಹೇಳಲಾಗದು. ಸೃಜನಶೀಲತೆ, ವಿದ್ವತ್ತು ಹಾಗೂ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಗಳಲ್ಲಿ ಆಸಕ್ತಿ, ಶ್ರದ್ಧೆ- ಇವೆಲ್ಲದರ ಜೊತೆಗೆ ಎಂಟೆದೆಯ ಧೈರ್ಯವೂ ಇರಬೇಕು ಸಂಶೋಧನೆ, ಗ್ರಂಥ ಸಂಪಾದನೆಯಂಥ ಶುದ್ಧ ಸಾಹಿತ್ಯ ಕಾರ್ಯದಲ್ಲಿ ತೊಡಗಿಕೊಳ್ಳುವವರಿಗೆ. ಈ ಸಾಲಿನ ಕರ್ನಾಟಕ ಸರಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಭಾಜನರಾಗಿರುವ, ‘ಹಂಪನಾ’ ಎಂದೇ ಸುವಿಖ್ಯಾತರಾದ ಹಂ. ಪ. ನಾಗರಾಜಯ್ಯನವರು ಇಂಥ ಒಂದು ಪರಂಪರೆಗೆ ಸೇರಿದ ವಿದ್ವಾಂಸರು.

ಎಂಬತ್ತು ದಾಟಿದ ಇಂದಿನ ಇಳಿಪ್ರಾಯದಲ್ಲೂ ಕನ್ನಡ ಸಾಹಿತ್ಯ, ಸಂಶೋಧನೆ, ಭಾಷೆ ಎಂದಾಗ ಏರುಜವ್ವನಿಗರ ಉತ್ಸಾಹ ತೋರುವ ಹಂಪನಾ ಚಿನ್ನದ ಬೀಡಾದ ಕೋಲಾರ ಜಿಲ್ಲೆಯವರು. ಹುಟ್ಟಿದ್ದು (7-10-1936) ಗೌರಿಬಿದನೂರು ತಾಲೂಕಿನ ಹಂಪಸಂದ್ರದಲ್ಲಿ. ತಂದೆ ಪದ್ಮನಾಭಯ್ಯ, ತಾಯಿ ಪದ್ಮಾವತಮ್ಮ. ಕೃಷಿ-ಶ್ಯಾನುಭೋಗಿಕೆ ಕುಟುಂಬದ ಸಾತ್ವಿಕ ಜೈನ ದಂಪತಿ. ಹುಟ್ಟಿದೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಧುಗಿರಿ-ಗೌರಿಬಿದನೂರು ಗಳಲ್ಲಿ ಮಾಧ್ಯಮಿಕ ಮುಗಿಸಿ ಕಾಲೇಜು ಶಿಕ್ಷಣಕ್ಕಾಗಿ ತುಮಕೂರಿಗೆ ವಲಸೆ. ಮುಂದೆ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ.(ಆನರ್ಸ್)(1958), ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ(1959). ಕನ್ನಡ ಉಪನ್ಯಾಸಕರಾಗಿ ಅಧ್ಯಾಪನ ವೃತ್ತಿ ಆರಂಭ(1959). ಹಲವಾರು ಸರಕಾರಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ದುಡಿದು, ನಾಲ್ಕಾರು ಊರುಗಳ ನೀರು ಕುಡಿದು 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಯಂ ನೆಲೆ ಕಂಡುಕೊಂಡರು.

ವಿದ್ಯಾರ್ಥಿ ದಿನಗಳಿಂದಲೇ ಹಂಪನಾಗೆ ಕನ್ನಡ ಸಾಹಿತ್ಯದಲ್ಲಿ ಒಲವು, ಅಭಿರುಚಿಗಳನ್ನು ಮೂಡಿಸಿದ್ದು ಕುವೆಂಪು ಕೃತಿಗಳು. ಮುಂದೆ ಸಂಶೋಧನೆ, ಇತಿಹಾಸ, ಗ್ರಂಥ ಸಂಪಾದನೆ ಮೊದಲಾಗಿ ಶಾಸ್ತ್ರ ಸಾಹಿತ್ಯದಲ್ಲಿ ಆಸಕ್ತಿ ಮೂಡಿದ್ದು ತೀನಂಶ್ರೀ, ಡಿ.ಎಲ್.ಎನ್.ರಂಥ ಮಹಾಮಹೋಪಾಧ್ಯಾಯರ ಪ್ರಭಾವದಲ್ಲಿ. ಹಂಪನಾ ಕನ್ನಡ ಶಾಸ್ತ್ರ ಸಾಹಿತ್ಯದಲ್ಲಿ ಅಗ್ರಮಾನ್ಯರಾದ ಡಿ.ಎಲ್.ಎನ್. ಮತ್ತು ತೀನಂಶ್ರೀಯವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು.

ಸಾಹಿತ್ಯಾಸಕ್ತಿ, ಹುಮ್ಮಸ್ಸುಗಳು ತೀವ್ರವಾಗಿದ್ದ ‘ಪ್ರಾಯದ’ದಿನಗಳಲ್ಲಿ ಹಂಪನಾ ಸಹಜವಾಗಿಯೇ ಕಾದಂಬರಿ, ಲಲಿತ ಪ್ರಬಂಧ, ಜೀವನ ಚರಿತ್ರೆ, ಶಿಶು ಸಾಹಿತ್ಯ ಮೊದಲಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಯೋಗಮಾಡಿದವರು. ಅವರ ನೂರಕ್ಕೂ ಹೆಚ್ಚು ಕೃತಿಗಳ ಪೈಕಿ ಕೈಗಳ ಬೆರಳೆಣಿಕೆಯಷ್ಟು ಕೃತಿಗಳು, ಕಾದಂಬರಿ, ಲಲಿತ ಪ್ರಬಂಧ, ಶಿಶು ಸಾಹಿತ್ಯಗಳಂಥ ಸೃಜನಶೀಲ ಪ್ರಕಾರಕ್ಕೆ ಸೇರಿದವು. ಆಖೈರಾಗಿ ಒಲಿದು ಅವರಿಗೆ ಗಂಟುಬಿದ್ದಿರುವುದು ಭಾಷಾ ಶಾಸ್ತ್ರ, ಸಂಶೋಧನೆ, ಇತಿಹಾಸ ಮತ್ತು ಗ್ರಂಥ ಸಂಪಾದನೆ. ಸಂಶೋಧಕರಾಗಿ ಹಂಪನಾ ಅವರ ವಿದ್ವತ್ತು ಮತ್ತು ಪ್ರತಿಭಾ ವಿಸ್ತಾರಗಳು ಮೂರು ದಿಗಂತಗಳನ್ನು ವ್ಯಾಪಿಸಿವೆ. ಅವು:1.ಸಾಹಿತ್ಯ ಮತ್ತು ಭಾಷೆಗೆ ಸಂಬಂಧಿಸಿದ ಸಂಶೋಧನೆಗಳು. 2. ಗ್ರಂಥ ಸಂಪಾದನೆ 3. ಇತಿಹಾಸ ಸಂಬಂಧಿ ಸಂಶೋಧನೆಗಳು.

ಭಾಷೆಗೆ ಸಂಬಂಧಿಸಿದಂತೆ ಹಂಪನಾ ಅವರ ಮುಖ್ಯ ಸಂಶೋಧನಾ ಕೃತಿ, ‘ದ್ರಾವಿಡ ಭಾಷಾ ವಿಜ್ಞಾನ’. ಮೂವತ್ತರ ಹರೆಯದಲ್ಲೇ ಈ ಕೃತಿಯನ್ನು ಪ್ರಕಟಿಸಿ ವಿದ್ವತ್ವಲಯಗಳಲ್ಲಿ ಕೌತುಕ ಉಂಟುಮಾಡಿದ ಹಂಪನಾ ಈ ಕೃತಿಯಲ್ಲಿ ದ್ರಾವಿಡ ಭಾಷೆ ಕುರಿತ ಸಂಕೀರ್ಣ ಸಂಗತಿಗಳನ್ನೆಲ್ಲ ಸೂಕ್ಷಾತಿಸೂಕ್ಮವಾಗಿ ವಿಶ್ಲೇಷಿಸಿದ್ದಾರೆ. ಪ್ರೊ. ದೇಜಗೌ ಹೇಳಿರುವಂತೆ, ಈ ಕೃತಿಯಲ್ಲಿ ಅತ್ಯಾಧುನಿಕ ವಿಚಾರಗಳನ್ನೊಳಗೊಂಡು ಸಕಲ ದ್ರಾವಿಡ ಭಾಷೆಗಳ ಸಮಗ್ರ ಚಿತ್ರವನ್ನು ಪರಿಚಯಿಸಿರುವ ಹೆಗ್ಗಳಿಕೆ ಲೇಖಕರದು. ‘ಭಾಷಾ ವಿಜ್ಞಾನ’, ‘ಭಾರತದ ಭಾಷಾ ಸಮಸ್ಯೆ’, ‘ದ್ರಾವಿಡ ಭಾಷಾ ಸಂಬಂಧ ವಾಚಕಗಳು’, ‘ಭಾಷೆ’, ‘ಭಾಷಾ ವಿಜ್ಞಾನಿಗಳು’, ‘ಕಮ್ಮಟದ ಕಿಡಿಗಳು’, ‘ದ್ರಾವಿಡ ಸಂಖ್ಯಾ ವಾಚಕಗಳು’-ಭಾಷಾ ಶಾಸ್ತ್ರಕ್ಕೆ ಸಂಬಂಧಿಸಿದ ಹಂಪನಾ ಅವರ ಇತರ ಮುಖ್ಯ ಕೃತಿಗಳು.

ಶಬ್ದನಿಷ್ಪತ್ತಿ ಹಾಗೂ ಅವುಗಳ ಅರ್ಥನಿಷ್ಕರ್ಷೆಗೆ ಸಂಬಂಧಿಸಿದಂತೆ ಮಾಡಿರುವ ಸಂಶೋಧನೆಗಳು ಭಾಷಾ ವಿಜ್ಞಾನಕ್ಕೆ ಹಂಪನಾ ನೀಡಿರುವ ವಿಶೇಷ ಕೊಡುಗೆಯಾಗಿದೆ ಎಂದು ವಿದ್ವಾಂಸರು ಹಂಪನಾ ಅವರ ಸಾಧನೆಯನ್ನು ಪ್ರಶಂಶಿಸಿರುವುದು ಗಮನಾರ್ಹ. ಗ್ರಂಥ ಸಂಪಾದನೆ ಕ್ಷೇತ್ರದಲ್ಲೂ ಹಂಪನಾ ಅವರ ಸಾಧನೆ ಗಣನೀಯವಾದುದು. ಪಂಪ ಭಾರತ ಸಂಗ್ರಹ, ಭರತೇಶ ವೈಭವ, ಚಂದ್ರಸಾಗರವರ್ಣಿಯ ಕೃತಿಗಳು, ಅಪ್ರತಿಮ ವೀರ ಚರಿತ, ಸಾಳ್ವ ಭಾರತ, ನೇಮಿನಾಥ ಪುರಾಣಂ, ಶಾಂತಿ ಪುರಾಣಂ, ಕೆಲವು ನೋಂಪಿಯ ಕಥೆಗಳು, ವಡ್ಡಾರಾಧನೆ-ಹಂಪನಾ ಅವರ ಪ್ರಮುಖ ಸಂಪಾದಿತ ಗ್ರಂಥಗಳು. ಶಿವಕೋಟ್ಯಾಚಾರ್ಯನ ಮೂಲ ‘ವಡ್ಡಾರಾಧನೆ’ಗಿಂತ ಭಿನ್ನವಾದ ಪ್ರತಿಯೊಂದನ್ನು ಶೋಧಿಸಿ ಈ ಕೃತಿ ಮತ್ತು ಕರ್ತೃಗಳ ಬಗ್ಗೆ ಹೊಸ ಬೆಳಕು ಚೆಲ್ಲಿದ ಕೀರ್ತಿ ಹಂಪನಾ ಅವರದು. ಇಲ್ಲಿಯವರೆಗಿನ ತಿಳುವಳಿಕೆಯಂತೆ ನಂಬಲಾಗಿರುವ ಶಿವಕೋಟ್ಯಾಚಾರ್ಯನು ವಡ್ಡಾರಾಧನೆ ಪ್ರಾಕೃತ ಗ್ರಂಥದ ಕರ್ತೃವೇ ವಿನ: ಕನ್ನಡ ವಡ್ಡಾರಾಧನೆಯ ನಿಜವಾದ ಕರ್ತೃ ಭ್ರಾಜಿಷ್ಣು, ‘ಆರಾಧನಾ ಕರ್ನಾಟ ಟೀಕಾ’ ಎಂಬುದು ಅದರ ನಿಜವಾದ ಹೆಸರು ಎಂಬ ಹೊಸ ಬೋಧೆ ಹಂಪನಾ ಅವರ ಸಂಶೋಧನೆಯ ಫಲವಾಗಿದೆ. ಇದೇ ರೀತಿ ದಿವಾಕರ ನಂದಿಯ ‘ತತ್ವಾರ್ಥಸೂತ್ರ’, ‘ನಾಗಕುಮಾರ ಷಟ್ಪದಿ’, ‘ಧನ್ಯಕುಮಾರ ಚರಿತೆ’ ಹಂಪನಾ ಅವರು ಮೊಟ್ಟಮೊದಲಬಾರಿಗೆ ಸಂಪಾದಿಸಿಕೊಟ್ಟಿರುವ ಮುಖ್ಯ ಕೃತಿಗಳಾಗಿವೆ.

ಇತಿಹಾಸ ಸಂಶೋಧನೆಯಲ್ಲೂ ಹಂಪನಾ ಅವರ ಕೊಡುಗೆ ವಿಶಿಷ್ಟವಾದುದು. ನಾಡಿನ ಇತಿಹಾಸವೆಂದರೆ ರಾಜಮಹಾರಾಜರು ಮತ್ತು ಮಂತ್ರಿಮಹೋದಯರ ಇತಿಹಾಸವಲ್ಲ. ನಾಡಿನ ಚರಿತ್ರೆ ಪೂರ್ಣವಾಗುವುದು ಕೆಳಮಟ್ಟದ ಜನಜೀವನನದ ಅಧ್ಯಯನವನ್ನು ಒಳಗೊಂಡಾಗಲೇ ಎನ್ನುವುದು ಇತಿಹಾಸಕಾರ ಹಂಪನಾ ಅವರ ದೃಢ ನಂಬಿಕೆಯೂ ಹೌದು, ಬದ್ಧತೆಯೂ ಹೌದು. ಈ ನಿಟ್ಟಿನಲ್ಲೇ ಸಾಗಿರುವ ಅವರ ಇತಿಹಾಸ ಸಂಶೋಧನೆ, ಸಾಹಿತ್ಯಾಧ್ಯಯನದಲ್ಲಿ ಅಲಕ್ಷಿತ ಕವಿಗಳು ಮತ್ತು ಕೃತಿಗಳತ್ತ ಗಮನವಿತ್ತಿರುವ ಹಾಗೆಯೇ ಇತಿಹಾಸದ ಅಧ್ಯಯನದಲ್ಲೂ ಉಪೇಕ್ಷಿತ ಸಮುದಾಯಗಳ ದೃಷ್ಟಿಕೋನದಿಂದ ಚರಿತ್ರೆಯನ್ನು ಓದುವ ಕಾಳಜಿಯದಾಗಿದೆ. ಪರಿಣಾಮವಾಗಿ ಕರ್ನಾಟಕದ ಇತಿಹಾಸದಲ್ಲಿ ಕಳಚಿಹೋಗಿದ್ದ ಅನೇಕ ಮಹತ್ವಪೂರ್ಣ ಕೊಂಡಿಗಳನ್ನು ಹುಡುಕಿ ಬೆಸೆದರು ಹಂಪನಾ. ಇತಿಹಾಸದ ನಿಜ ದರ್ಶನ ಮಾಡಿಸಿದರು. ಈ ಮಾತಿಗೆ, ‘ಯಕ್ಷಯಕ್ಷಿಯರು’, ‘ನಾಗಚಂದ್ರನ ಇತಿವೃತ್ತ’, ‘ಸಾಂತರರು’, ‘ಕವಿವರ ಕಾಮಧೇನು ಅತ್ತಿಮಬ್ಬೆ’, ‘ಚಂದ್ರಕೊಡೆ’ಯಂಥ ಕೃತಿಗಳಿಗಿಂತ ಮತ್ತಾವ ನಿದರ್ಶನವೂ ಬೇಕಿಲ್ಲ.

ಜಾನಪದ ಸಂಶೋಧನೆಯಲ್ಲೂ ತೀವ್ರ ಆಸಕ್ತಿಯುಳ್ಳ ಹಂಪನಾ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಲ್ಲಿ ತಮ್ಮನ್ನು ಆಪ್ತವಾಗಿ ತೊಡಗಿಸಿಕೊಂಡವರು. ‘ಕರ್ನಾಟಕದ ಜಾತ್ರೆಗಳು’ ಮತ್ತು ‘ಆಕಾಶ ಜಾನಪದ’ ಅವರ ಮುಖ್ಯ ಜಾನಪದ ಸಂಶೋಧನಾ ಕೃತಿಗಳು. ಜಾತ್ರೆಗಳು ಕೃತಿಯಲ್ಲಿ, ಕೇವಲ ಆಚರಣೆಗೆ ಸಂಬಂಧಿಸಿದ ಅಧ್ಯಯನವಷ್ಟೇ ಅಲ್ಲದೆ ಅವುಗಳ ಹಿಂದಿನ ಕಲಾಕೌಶಲ, ಕಸುಬುದಾರಿಕೆ ಮತ್ತು ಗ್ರಾಮೀಣ ಅರ್ಥವ್ಯವಸ್ಥೆಗಳ ಒಳಗೊಳ್ಳುವಿಕೆಯನ್ನೂ ವಿಶ್ಲೇಷಿಸಿರುವುದು ಕೃತಿಗೆ ಸಮಾಜೋಆರ್ಥಿಕ ಆಯಾಮವನ್ನೂ ತಂದುಕೊಟ್ಟಿದೆ. ಅಂತೆಯೇ ‘ಆಕಾಶ ಜಾನಪದ’ದಲ್ಲಿ ಸೂರ್ಯ, ಚಂದ್ರ, ಮಳೆ ಮೋಡಗಳನ್ನು ಕುರಿತ ಭಾರತೀಯ ಹಾಗೂ ವಿದೇಶಿ ಪರಿಕಲ್ಪನೆಗಳ ಚರ್ಚೆಯಿಂದಾಗಿ ಕೃತಿಗೆ ವೈಜ್ಞಾನಿಕ ಸ್ವರೂಪವೂ ಪ್ರಾಪ್ತವಾಗುತ್ತದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಕಟಿಸಿರುವ ‘ಕನ್ನಡ ಶಿಷ್ಟ ಸಾಹಿತ್ಯ ಮತ್ತು ಜಾನಪದ ಸಂವೇದನೆ’ ಮಾಲಿಕೆಯ ಪುಸ್ತಕಗಳ ಸಂಪಾದಕರಾಗಿ ಹಂಪನಾ ಸಂಪಾದಿಸಿರುವ ಜಾನಪದ ಅಧ್ಯಯನ ಕೃತಿಗಳು ಹಾಗೂ ಸ್ವತ: ತಾವೇ ರಚಿಸಿರುವ ‘ವಡ್ಡಾರಾಧನೆ ಮತ್ತು ಜಾನಪದ’ ಗ್ರಂಥ ಕನ್ನಡ ಜಾನಪದ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ.

ಶಾಸನಗಳ ಓದು, ಅಧ್ಯಯನಗಳಲ್ಲಿ ಹಂಪನಾ ಸಾಕಷ್ಟು ಶ್ರಮಿಸಿದವರು. ‘ಶಾಸನಗಳಲ್ಲಿ ಎರಡು ವಂಶಗಳು’ ಮತ್ತು ‘ಕವಿವರ ಕಾಮಧೇನು’ ಅವರ ಶಾಸನಗಳ ಅಧ್ಯಯನದ ಮೊದಲ ಹೆಜ್ಜೆಗಳು. ಶಾಸನಗಳ ಅಧ್ಯಯನದಲ್ಲಿ ಹಂಪನಾ ಅವರ ಸತ್ಯಾನ್ವೇಷಣೆಯ ಕಾಳಜಿ, ಮುಕ್ತ ಮನಸ್ಸು ಮತ್ತು ಶ್ರದ್ಧೆಗಳು ಪೂರ್ಣವಾಗಿ ನಮಗೆ ಗೋಚರಿಸುವುದು ಅವರ ಲಕ್ಕುಂಡಿಯ ಶಾಸನಗಳ ಅಧ್ಯಯನದಲ್ಲಿ. ಲಕ್ಕುಂಡಿಯ ಶಾಸನದಲ್ಲಿ ಉಳಿದ ವಿದ್ವಾಂಸರು ಲಕ್ಷಿಸದಿದ್ದ ಎರಡು ಪದ್ಯಗಳನ್ನು ವ್ಯಾಖ್ಯಾನಿಸಿ ಕೆಲವು ಹೊಸ ಅಂಶಗಳನ್ನು ಬೆಳಕಿಗೆ ತಂದಿರುವುದು ಹಂಪನಾ ಅವರ ವಿಶಿಷ್ಟ ಕಾಣ್ಕೆ.

ಸಂಶೋಧನಾ ಬರಹಗಳೆಂದರೆ ಮಾಹಿತಿ ಮತ್ತು ಆಕರಗಳಿಂದ ಕಿಕ್ಕಿರಿದ ಶುಷ್ಕ ಗದ್ಯ ಎಂದು ಮೂದಲಿಸುವವರೂ ಉಂಟು. ಆದರೆ ಹಂಪನಾ ಅವರ ಸಂಶೋಧನಾ ಬರವಣಿಗೆ ಈ ಮಾತಿಗೆ ಅಪವಾದವಾದುದು. ಹಂಪನಾ ಅವರ ಸಂಶೋಧನಾ ಬರವಣಿಗೆಯಲ್ಲೂ ರೋಚಕವಾದ ಸಾಹಿತ್ಯ ಶೈಲಿಯನ್ನು ನಾವು ಕಾಣುತ್ತೇವೆ. ಹಂಪನಾ ಅವರ ಸಂಶೋಧನಾ ಬರಹಗಳ ಮತ್ತೊಂದು ವೈಶಿಷ್ಟ್ಯವೆಂದರೆ, ಅರ್ಥ ನಿಷ್ಕರ್ಷಿಸುವಾಗ ಅವರು ಅಷ್ಟಕ್ಕೇ ತೃಪ್ತರಾಗದೆ ಪದಗಳ ನಿಷ್ಪತ್ತಿಯಲ್ಲೂ ತೊಡಗುತ್ತಾರೆ-ಅವರೊಳಗಣ ಭಾಷಾಶಾಸ್ತ್ರಜ್ಞನ ತಬ್ಬುಗಾರಿಕೆ ಇದ್ದಿರಬೇಕು. ಉದಾಹರಣೆಗೆ ಹೇಳುವುದಾದರೆ.....‘ಚಂದ್ರಕೊಡೆ’ ಗ್ರಂಥದಲ್ಲಿ, ಕತ್ತಲೆ ಕುಲ, ಚತುರ್ಥ ಕುಲ, ಚಂದ್ರ ಕೊಡೆ, ಸಿಗುರಿಕೊಡೆ, ಖಂಡಕ-ಖಂಡಿಲ-ಕುಂಡುಗ ಇತ್ಯಾದಿ ಹಲವಾರು ಪದಗಳ ಮೂಲಗಳನ್ನು ಅನ್ವೇಷಿಸಿ ನಿಘಂಟು ಶಾಸ್ತ್ರಕ್ಕೂ ಕೊಡುಗೆ ನೀಡಿದ್ದಾರೆ.

ನಾಗರಾಜಯ್ಯನವರಿಗಿರುವ ಪ್ರಾಕೃತದ ಹಿನ್ನೆಲೆ, ಸಂಸ್ಕೃತ ಭಾಷೆಯ ಚೆನ್ನಾದ ಜ್ಞಾನ, ಹಳೆಗನ್ನಡದ ಭದ್ರ ನೆಲೆಗಟ್ಟು, ಇತಿಹಾಸದ ಜ್ಞಾನ, ಭಾಷಾ ವಿಜ್ಞಾನ ಪಾಂಡಿತ್ಯ, ಅ.ನೇ.ಉಪಾಧ್ಯೆಯಂಥವರ ಆದರ್ಶ, ಅವಿರತ ಓದುಗಾರಿಕೆ ಅನ್ಯ ಸಂಶೋಧಕರಿಗೆ ಕಾಣದ ಹೊಳಹುಗಳನ್ನು ಕಾಣಿಸುತ್ತವೆ. ಆದ್ದರಿಂದಲೇ ಅವರ ಶೋಧನ ಲೇಖನಗಳು ಕನ್ನಡ ಅಧ್ಯಯನ ಕ್ಷೇತ್ರಕ್ಕೆ ಮೌಲಿಕ ಕೊಡುಗೆಗಳಾಗಿ ಸದಾ ಕಾಲಕ್ಕೂ ಉಳಿಯುತ್ತವೆ ಎನ್ನುತ್ತಾರೆ ವಿಮರ್ಶಕರು.

‘ನಾಗಶ್ರೀ’ ಮತ್ತು ‘ಸವ್ಯಸಾಚಿ ಪಂಪ’ ಹಂಪನಾ ಅವರ ಎರಡು ಕಾದಂಬರಿಗಳಾದರೆ ‘ಹೆಸರಿನ ಸೊಗಸು’ ಲಲಿತ ಪ್ರಬಂಧಗಳ ಸಂಕಲನ. ಹತ್ತಕ್ಕೂ ಹೆಚ್ಚು ಶಿಶು ಸಾಹಿತ್ಯ ಕೃತಿಗಳನ್ನು ರಚಿಸಿರುವ ಹಂಪನಾ ಜೀವನಚರಿತ್ರೆ ಪ್ರಕಾರದಲ್ಲೂ ಗಣನೀಯ ಕೊಡುಗೆ ನೀಡಿದ್ದಾರೆ. ಇದಕ್ಕೆ ನಿದರ್ಶನವಾಗಿ, ಅತ್ತಿಮಬ್ಬೆ, ಸಿ.ವಿ.ರಾಮನ್, ಕುವೆಂಪು-ಜೋಶಿ, ಗಡಿನಾಡ ಗಾಂಧಿ, ಗೋವಿಂದ ಪೈ, ಅ.ನೇ.ಉಪಾಧ್ಯೆ ಕೃತಿಗಳನ್ನು ಗಮನಿಸಬಹುದು. ಸಾಹಿತ್ಯ ರಚನೆಯಂತೆ ಸಾಂಸ್ಥಿಕ ನುಡಿ ಸೇವೆಯಲ್ಲೂ ಹಂಪನಾ ಕನ್ನಡದ ಕಟ್ಟಾಳು. ಅವರಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಸುದೀರ್ಘವಾದ ನಂಟು. 1966ರಿಂದ ಎಂಟು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದ ನಾಗರಾಜಯ್ಯ 1978ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಸ್ವಲ್ಪಕಾಲ ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಹುದ್ದೆಯನ್ನೂ ಅಲಂಕರಿಸಿದ್ದರು. ಕೆಲವು ವರ್ಷಗಳ ಕಾಲ ಮಾಸ್ತಿಯವರ ‘ಜೀವನ’ ಮತ್ತು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಗಳ ಸಂಪಾದಕರೂ ಆಗಿದ್ದರು.

ನಾಗರಾಜಯ್ಯನವರ ಸಾಹಿತ್ಯ ಸೃಷ್ಟಿ ವಿಪುಲವಾದುದು. ಅವರ ಸಂಶೋಧನಾ ಕಾರ್ಯಗಳನ್ನು ಗಮನಿಸಿದರೆ ಅದೊಂದು ಸಾಹಸ ಯಾತ್ರೆಯಂತೆಯೇ ತೋರುತ್ತದೆ. ಹಂಪನಾ ವೈಯಕ್ತಿಕ ಜೀವನವೂ ಒಂದು ಸಾಹಸ ಗಾಥೆಯೇ.ಇಂಟರ್‌ಮೀಡಿಯಟ್‌ನಿಂದ ಎಂ.ಎ.ವರೆಗೆ ಸಹಾಧ್ಯಾಯಿನಿಯಾಗಿದ್ದ ಕಮಲಾ ಅವರ ಬಾಳ ಸಂಗಾತಿ. ತಂದೆ-ತಾಯಿ, ಬಂಧುಬಳಗದ ವಿರೋಧವನ್ನು ಧೈರ್ಯವಾಗಿ ಎದುರಿಸಿ, ಆತಂಕಗಳನ್ನೆಲ್ಲ ನಿವಾರಿಸಿಕೊಂಡು ‘ಗಿರಿ ಕನ್ಯೆ’ ಕಮಲಾ ಅವರನ್ನು ವಿವಾಹವಾದರು. ಕಮಲಾ-ಹಂಪನಾ ಅಧ್ಯಯನ, ಅಧ್ಯಾಪನ ಮತ್ತು ಸಾಹಿತ್ಯ-ಕಲೆಗಳಲ್ಲಿ ಸಮಾನ ಆಸಕ್ತರು. ಈ ಜೀವನ ಸಂಗಾತಿಗಳು ಬಾಳುವೆಯಂತೆ ಸಾಹಿತ್ಯದಲ್ಲೂ ಅನುರೂಪದ ಜೋಡಿ. ನಿಡು ಮಾಮಿಡಿ ಮಠದ ಸ್ವಾಮೀಜಿಯವರಿಂದ ‘ಭಾಷಾ ಭೂಷಣ’ ಬಿರುದಿಗೆ ಪಾತ್ರರಾಗಿರುವ ನಾಗರಾಜಯ್ಯ, ಚಾವುಂಡರಾಯ ಪ್ರಶಸ್ತಿ, ಸಾಹಿತ್ಯ ಅಕಾಡಮಿ, ಜಾನಪದ ಅಕಾಡಮಿ ಪ್ರಶಸ್ತಿಗಳು ಮೊದಲ್ಗೊಂಡು ಹಲವಾರು ಗೌರವಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಈಗ ಪಂಪ ಪ್ರಶಸ್ತಿ. ಹೇಳೋಣ ಹಂಪನಾಗೆ ಅಭಿನಂದನೆ.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News

ನಾಸ್ತಿಕ ಮದ