ಖಾದಿ ಉದ್ಯಮ ಉಳಿಸುವುದಕ್ಕಾಗಿ ಗಾಂಧಿಯನ್ನು ಕೊಲ್ಲಲಾಯಿತು...!

Update: 2017-01-15 06:03 GMT

ಗಾಂಧಿ ಗ್ರಾಮೋದ್ಯೋಗ ಆಯೋಗವು ತನ್ನ ಹೊಸ ಕ್ಯಾಲೆಂಡರ್‌ಗಳ ಜೊತೆಗೆ ಕಳೆಗಟ್ಟುತ್ತಿದ್ದವು. ಈ ಹಿಂದೆ ಮಲ್ಯ ಕ್ಯಾಲೆಂಡರ್‌ಗಳು ಪಡೆದಷ್ಟೇ ಪ್ರಚಾರವನ್ನು ಈಗ ತನ್ನ ಖಾದಿ ಕ್ಯಾಲೆಂಡರ್ ಪಡೆದಿರುವುದರಿಂದ ಆಯೋಗದ ಅಧ್ಯಕ್ಷರು ರೋಮಾಂಚನಗೊಂಡರು.

 ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ನೂಲುವ ಫೋಟೋವನ್ನು ತೆಗೆದು ಹಾಕಿ, ನರೇಂದ್ರ ಮೋದಿಯವರು ನೂಲುವ ಫೋಟೋ ಹಾಕಿರುವುದರಿಂದ ಖಾದಿ ಬಟ್ಟೆಗಳಿಗೆ ಭಾರೀ ಬೇಡಿಕೆ ಬಂದಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿದ್ದರು. ‘‘ಸಾರ್...ಅದು ಹೇಗೆ ಮೋದಿಯವರ ಫೋಟೋ ಹಾಕಿರುವುದರಿಂದ ಬಟ್ಟೆಗಳು ಜಾಸ್ತಿ ಸೇಲ್ ಆಗಿರುವುದು...’’ ಒಬ್ಬ ಪತ್ರಕರ್ತ ಕೇಳಿದ.

ಆಯೋಗದ ಅಧ್ಯಕ್ಷರು ಯಾರದು ಎಂದು ತಲೆಯೆತ್ತಿ ನೋಡಿದರೆ ಪತ್ರಕರ್ತ ಎಂಜಲು ಕಾಸಿ. ತನ್ನ ಜೀವನ ಪೂರ್ತಿ ಖಾದಿ ಜುಬ್ಬಾ ಹಾಕಿಕೊಂಡು ಓಡಾಡುವ ಕಾಸಿಯನ್ನು ಅವರು ಚೆನ್ನಾಗಿ ಬಲ್ಲರು. ‘‘ನೋಡ್ರೀ ನೀವು ಒಂದು ಜುಬ್ಬಾವನ್ನು ಕಳೆದ ಐದು ವರ್ಷಗಳಿಂದ ಹಾಕುತ್ತಿದ್ದೀರಿ. ಒಗೆದು ಒಗೆದು ಅದು ಸವೆದು ಹೋಗಿದ್ದರೂ ಒಂದು ಹೊಸ ಜುಬ್ಬಾ ಈವರೆಗೆ ಕೊಂಡುಕೊಂಡಿಲ್ಲ. ನಿಮ್ಮನ್ನೆಲ್ಲ ನಂಬಿಕೊಂಡು ನಾವು ಬಟ್ಟೆ ಮಾರುವುದಕ್ಕೆ ಆಗುತ್ತದೆಯೇ? ಖಾದಿ ಉದ್ಯಮ ಲಾಭ ಮಾಡಿಕೊಳ್ಳುವುದಕ್ಕೆ ಆಗುತ್ತದೆಯೇ? ’’

ಕಾಸಿಗೆ ತುಂಬಾ ಅವಮಾನವಾಯಿತು. ಎರಡು ಜೊತೆಗೆ ಖಾದಿ ಜುಬ್ಬಾ ಶೀಘ್ರವೇ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ. ‘‘ಅಲ್ಲಾ ಸಾರ್...ಖಾದಿ ಖದ್ದರನ್ನು ಆರಂಭ ಮಾಡಿರುವುದೇ ಗಾಂಧೀಜಿ. ಖಾದಿ ಎಂದರೆ ವೌಲ್ಯ...ಗಾಂಧೀ ವೌಲ್ಯವನ್ನು ಸಾರುತ್ತದೆ....ಇದೀಗ ಖಾದಿಯದ್ದು ಮೋದಿ ವೌಲ್ಯವಾಗಿ ಪರಿವರ್ತನೆಯಾಯಿತಲ್ಲ ಸಾರ್...’’ ‘‘ಅಲ್ರೀ...ಐನೂರರ ನೋಟಿನಲ್ಲಿ ಗಾಂಧೀಜಿಯ ಫೋಟೋ ಇತ್ತಲ್ಲ? ಆದರೆ ಅದರ ವೌಲ್ಯ ಏನಾಯಿತು? ಗಾಂಧಿ ಫೋಟೋ ಇರುವ ಐನೂರರ ನೋಟನ್ನು ಅಂಗಡಿಗೆ ಕೊಟ್ಟು ನೋಡಿ...ಹಾಗೆಯೇ ಇದು....ಗಾಂಧೀಜಿ ಬಟ್ಟೆಯನ್ನೇ ಹಾಕಿಕೊಳ್ಳುತ್ತಿರಲಿಲ್ಲ... ಅವರ ಹೆಸರಿನಲ್ಲಿ ನಾವು ಖಾದಿ ಬಟ್ಟೆಯನ್ನು ಮಾರುವುದಾದರೂ ಹೇಗೆ...ಷರ್ಟು, ಪ್ಯಾಂಟು ಯಾವುದನ್ನು ಹಾಕಿಕೊಳ್ಳದೆ ಬರೇ ದೋತಿ ಸುತ್ತಿಕೊಳ್ಳುತ್ತಿದ್ದರು ಗಾಂಧೀಜಿ. ಅವರಿಂದಾಗಿಯೇ ಬಟ್ಟೆ ಕಡಿಮೆ ಮಾರಾಟವಾಗುತ್ತಿತ್ತು. ಆದುದರಿಂದ ನಾವು ನಮ್ಮ ಕಂಪೆನಿಯ ಮಾಡೆಲ್‌ನ್ನು ಬದಲಿಸಬೇಕು ಎಂದು ಯೋಚಿಸಿದೆವು...’’ ಎಂದು ಆಯೋಗದ ಅಧ್ಯಕ್ಷರು ಉತ್ತರಿಸಿದರು.
‘‘ಮೋದಿಯನ್ನೇ ಯಾಕೆ ಆರಿಸಿಕೊಂಡಿರಿ?’’ ಕಾಸಿ ಮತ್ತೆ ಪ್ರಶ್ನೆ ಹಾಕಿದ.

‘‘ನೋಡಿ... ಈಗಾಗಲೇ ಅವರನ್ನು ತಮ್ಮ ಕಂಪೆನಿಯ ಜಾಹೀರಾತಿಗೆ ಮಾಡೆಲ್ ಆಗಿ ಬಳಸಿಕೊಂಡು ರಿಲಯನ್ಸ್‌ನ ಜಿಯೋ ಬಹಳ ದುಡ್ಡು ಮಾಡಿಕೊಂಡಿದೆ. ಮೋದಿ ಈಗಾಗಲೇ ತುಂಬಾ ದುಬಾರಿ ಬಟ್ಟೆಗಳನ್ನು ಹಾಕುವ ಮೂಲಕ ಲೋಕ ವಿಖ್ಯಾತಿ ಪಡೆದಿದ್ದಾರೆ. ಅವರು ಮೈತುಂಬಾ ಬಟ್ಟೆಗಳ ಮೇಲೆ ಬಟ್ಟೆ ಹಾಕುತ್ತಾರೆ. ಇದನ್ನು ಜನರು ಮಾದರಿಯಾಗಿಟ್ಟುಕೊಂಡರೆ ಬಟ್ಟೆಗಳ ಖರೀದಿ ಅಧಿಕವಾಗುತ್ತದೆ. ಈವರೆಗೆ ಗಾಂಧಿಯ ಲಂಗೋಟಿಯನ್ನಷ್ಟೇ ಜನರು ಖರೀದಿ ಮಾಡುತ್ತಿದ್ದರು. ಈಗ ಮೋದಿ ಹಾಕುವ ಜುಬ್ಬಾ, ಪ್ಯಾಂಟು ಮೊದಲಾದವುಗಳೆಲ್ಲ ಭರ್ಜರಿ ಮಾರಾಟವಾಗುತ್ತವೆ...ಅದೂ ಅಲ್ಲದೆ ಖಾದಿ ನಿಗಮವನ್ನು ಮೇಕ್ ಇನ್ ಇಂಡಿಯಾದೊಳಗೆ ಅಳವಡಿಸಬೇಕು ಎಂದಿದ್ದೇವೆ. ವಿದೇಶಿಯರು ತಮ್ಮ ತಮ್ಮ ಬಟ್ಟೆಗಳನ್ನು ತಂದು ಖಾದಿ ಮಳಿಗೆಗಳಲ್ಲಿ ಮಾರುವ ಯೋಜನೆಯೊಂದನ್ನು ಹಾಕಿ ಖಾದಿ ನಿಗಮವನ್ನು ಅಭಿವೃದ್ಧಿಗೊಳಿಸಬೇಕು ಎಂದಿದ್ದೇವೆ...’’

‘‘ಅದು ಹೇಗೆ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
 ‘‘ನೋಡ್ರೀ...ಖಾದಿಯನ್ನು ಈವರೆಗೆ ಗಾಂಧಿಯ ಕಚೇರಿಯೊಳಗೆ ಇಟ್ಟುದ್ದುದರಿಂದ ಅದು ಸಾಕಷ್ಟು ಪ್ರಚಾರಕ್ಕೆ ಬರಲಿಲ್ಲ. ಮೇಕ್ ಇನ್ ಇಂಡಿಯಾ ಮೂಲಕ ಬೇರೆ ಬೇರೆ ಕಂಪೆನಿಗಳು ತಮ್ಮ ತಮ್ಮ ಬಟ್ಟೆ, ನೂಲುಗಳನ್ನು ಖಾದಿ ಕಚೇರಿಯಲ್ಲಿಟ್ಟು ಮಾರುವಂತೆ ಮಾಡಲಾಗುವುದು. ಬೇರೆ ಕಂಪೆನಿಗಳ ಬಟ್ಟೆಗಳಿಗೆ ನಾವು ಖಾದಿಯ ಲಾಂಛನಗಳನ್ನು ಹಾಕಿ ನಮ್ಮ ಬಟ್ಟೆಗಳ ಮಾರಾಟದ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲಿದ್ದೇವೆ...’’ ಆಯೋಗದ ಅಧ್ಯಕ್ಷರು ಹೇಳಿದರು.

‘‘ಖಾದಿ ನೂಲುಗಳು ಸ್ವದೇಶಿ ಅಲ್ಲವೇ?’’ ಕಾಸಿ ಕೇಳಿದ.
‘‘ನೋಡ್ರೀ...ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ವಿದೇಶಿಯರು ಬಂದು ಎಲ್ಲ ಸ್ವದೇಶಿ ಉತ್ಪನ್ನಗಳನ್ನು ತಯಾರಿಸಲಿದ್ದಾರೆ. ವಿದೇಶಿಯರು ತಯಾರಿಸಿದ ವಿದೇಶಿ ಬಟ್ಟೆಯನ್ನು ಸ್ವದೇಶಿಯನ್ನಾಗಿ ಶುದ್ಧೀಕರಿಸಿ ಅದನ್ನು ನಾವು ಸ್ವದೇಶಿಯರಿಗೆ ಮಾರಲಿದ್ದೇವೆ...’’

ಕಾಸಿಗೆ ತಲೆಗಿರ್ರೆಂದಿತು.
ಖಾದಿ ಮುಖ್ಯಸ್ಥರು ಮುಂದುವರಿಸಿದರು ‘‘ಹಾಗೆಯೇ ಎಲ್ಲೆಲ್ಲ ಖಾದಿ ಮಳಿಗೆಗಳು ನಷ್ಟದಲ್ಲಿದೆಯೋ ಅವುಗಳನ್ನೆಲ್ಲ ವಿದೇಶಿ ಬಟ್ಟೆ ಕಂಪೆನಿಗಳಿಗೆ ಬಾಡಿಗೆಗೆ ಕೊಡಲಾಗುತ್ತದೆ...’’

‘‘ವಿದೇಶಿ ಬಟ್ಟೆಗಳನ್ನು ಖಾದಿ ಮಳಿಗೆಗಳಲ್ಲಿ ಮಾರುವುದೇ?’’ ಕಾಸಿ ಕೇಳಿದ.
‘‘ಹೌದ್ರೀ...ಯಾಕೆ ಮಾರಬಾರದು? ನಮಗೆ ಬಂಡವಾಳ ಹೂಡಿಕೆ ಮುಖ್ಯ. ಖಾದಿ ಮಳಿಗೆಗಳಿಗೆ ಅವರು ತಿಂಗಳು ತಿಂಗಳು ಬಾಡಿಗೆ ಕೊಟ್ಟರೆ, ಅದನ್ನು ಖಾದಿ ಗ್ರಾಮೀಣೋದ್ಯಮ ವಿಭಾಗದ ಸಿಬ್ಬಂದಿಗೆ ವೇತನಕೊಡಿಸಲು ಬಳಸಬಹುದು. ಹಾಗೆಯೇ ಮೋದಿಯವರು ಚರಕದಿಂದ ನೂಲುವ ಕ್ಯಾಲೆಂಡರ್‌ಗಳು ಮತ್ತು ಡೈರಿಗಳನ್ನು ಮುದ್ರಿಸಲು ಪ್ರತೀ ವರ್ಷ ಸಾಕಷ್ಟು ಹಣ ಬೇಕಾಗುತ್ತದೆ. ಅದಕ್ಕಾಗಿ ನಷ್ಟದಲ್ಲಿರುವ ಖಾದಿ ಮಳಿಗೆಗಳನ್ನು ವಿದೇಶಿ ಬಟ್ಟೆ ಕಂಪೆನಿಗಳಿಗೆ ಬಾಡಿಗೆ ಕೊಡುವುದು ಅನಿವಾರ್ಯ. ಒಟ್ಟಿನಲ್ಲಿ ಖಾದಿಯನ್ನು ಉಳಿಸಿ ಬೆಳೆಸುವುದು ನಮ್ಮ ಗುರಿ...’’

‘‘ಖಾದಿ ಬಟ್ಟೆಗಳನ್ನು ಅಭಿವೃದ್ಧಿಗೊಳಿಸಲು ನಿಮ್ಮ ಮುಂದಿನ ಯೋಜನೆಗಳೇನು?’’ ಕಾಸಿ ಮತ್ತೆ ಕೇಳಿದ.
‘‘ಖಾದಿಯನ್ನು ನೂಲಲು ವಿದೇಶಿ ನಿರ್ಮಿತ ಯಂತ್ರಗಳನ್ನು ಆಮದು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಹಾಗೆಯೇ ಮೋದಿಯವರು ಹಾಕುವ ಬಟ್ಟೆಗಳು ದುಬಾರಿಯಾಗಿರುವುದರಿಂದ ಎಲ್ಲ ಬಟ್ಟೆಗಳ ಬೆಲೆಯನ್ನು ತಕ್ಷಣದಿಂದ ದುಬಾರಿಗೊಳಿಸಲಿದ್ದೇವೆ....ಚಿನ್ನ, ಬೆಳ್ಳಿ ದಾರಗಳಿಂದ ಖಾದಿ ಬಟ್ಟೆಗಳನ್ನು ಅಲಂಕರಿಸುವ ಯೋಜನೆಯೂ ಇದೆ....’’

‘‘ಸಾಬರಮತಿ ಆಶ್ರಮದಲ್ಲಿ....’’ ಕಾಸಿ ಹೇಳುತ್ತಿರುವಾಗಲೇ ಅದನ್ನು ನಿಯೋಗದ ಅಧ್ಯಕ್ಷರು ಕತ್ತರಿಸಿದರು ‘‘ನೋಡ್ರೀ...ಅದು ಸಾಬರಮತಿ ಆಶ್ರಮ ಅಲ್ಲ. ಯಾರೋ ಸಾಬರು ಸೇರಿಕೊಂಡು ಅದರ ಹೆಸರು ಬದಲಿಸಿದ್ದಾರೆ. ಆದುದರಿಂದ ಮೋದಿ ನೇತೃತ್ವದಲ್ಲಿ ಆ ಆಶ್ರಮದ ಹೆಸರನ್ನು ನರೇಂದ್ರ ಮತಿ ಎಂದು ಬದಲಿಸುವುದಕ್ಕೆ ಯೋಜನೆ ಹಾಕಿದ್ದೇವೆ...ಅಲ್ಲಿ ಮುಂದಿನ ದಿನಗಳಲ್ಲಿ ಗೋಡ್ಸೆಯ ಪ್ರತಿಮೆಯೊಂದನ್ನು ನಿಲ್ಲಿಸಿ, ಅವನ ಕೈಗೂ ಚಕ್ರ ಕೊಡುವ ಯೋಚನೆ ಇದೆ...’’

‘‘ಚಕ್ರ ಅಲ್ಲ ಸಾರ್...ಚರಕ...’’ ಕಾಸಿ ತಿದ್ದಿದ.
‘‘ನೋಡ್ರೀ...ಚಕ್ರವನ್ನು ಕಾಂಗ್ರೆಸ್ಸಿಗರು ಚರಕವೆಂದು ತಿರುಚಿದ್ದಾರೆ. ಅದನ್ನೀಗ ನಾವು ಸುದರ್ಶನ ಚಕ್ರವಾಗಿ ಸರಿಪಡಿಸಬೇಕು ಎಂದು ಯೋಜನೆ ಹಾಕಿದ್ದೇವೆ. ಈ ಸುದರ್ಶನ ಚಕ್ರದ ಮೂಲಕವೇ ಗೋಡ್ಸೆಯವರು ಸಾಬರಮತಿ ಅಲ್ಲಲ್ಲ ನರೇಂದ್ರ ಮತಿ ಆಶ್ರಮದಲ್ಲಿ ಖಾದಿ ನೂಲು ತೆಗೆಯುತ್ತಿದ್ದದ್ದು. ಗಾಂಧೀಜಿಯಿಂದಾಗಿ ಖಾದಿ ಉದ್ಯಮಕ್ಕೆ ಭಾರೀ ಧಕ್ಕೆ ಉಂಟಾಗುತ್ತದೆ ಎನ್ನುವುದನ್ನು ಅರಿತು, ಖಾದಿ ಉದ್ಯಮವನ್ನು ಉಳಿಸುವುದಕ್ಕಾಗಿ ನಾಥೂರಾಂ ಗೋಡ್ಸೆಯವರು ಗಾಂಧೀಜಿಯನ್ನು ಕೊಂದು ಹಾಕಿದರು. ಆದುದರಿಂದಾಗಿ ಇಂದಿಗೂ ಖಾದಿ ಉದ್ಯಮ ಉಳಿದಿದೆ. ಮುಂದಿನ ದಿನಗಳಲ್ಲಿ ಗೋಡ್ಸೆಯ ಕೈಯಲ್ಲೂ ಚರಕವನ್ನು ಕೊಟ್ಟು ಅದರ ಫೋಟೋವನ್ನು ಎಲ್ಲ ಸರಕಾರಿ ಶಾಲೆಗಳಿಗೆ ಹಂಚುವ ಯೋಜನೆಯಿದೆ....’’

‘‘ಸಾರ್...ಗೋಡ್ಸೆಯನ್ನು ಗಲ್ಲಿಗೇರಿಸಿದ ಹಗ್ಗವನ್ನು ಖಾದಿಯಿಂದಲೇ ತಯಾರಿಸಲಾಗಿತ್ತಂತೆ ಹೌದಾ?’’ ಕಾಸಿ ಮತ್ತೊಂದು ಪ್ರಶ್ನೆಯನ್ನು ಒಗೆದ.
ಈಗ ಖಾದಿ ಆಯೋಗದ ಅಧ್ಯಕ್ಷರಿಗೆ ಸಿಟ್ಟು ನೆತ್ತಿಗೇರಿತು.

‘‘ಏನ್ರೀ...ಆಗದಿಂದ ನೀವೊಬ್ಬರೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ? ನಿಮ್ಮ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟದ್ದು ಸಾಕಾಗಲಿಲ್ಲ ಎಂದರೆ ಹೇಳಿ. ಮೋದಿ ಚರಕದಿಂದ ನೂಲುತ್ತಿರುವ ಒಂದು ಪೋಟೋ ಬಾಕಿ ಉಳಿದಿದೆ... ಅಥವಾ ನೇರವಾಗಿ ನಿಮ್ಮ ಪತ್ರಿಕಾ ಕಚೇರಿಯನ್ನೇ ಕೊಂಡು ಕೊಂಡು ಅದನ್ನು ಮೋದಿ ಭಂಡಾರವಾಗಿ ಪರಿವರ್ತಿಸಬೇಕಾಗುತ್ತದೆ ಹುಷಾರ್...’’ ಎಂದದ್ದೇ ಕಾಸಿ ಬದುಕಿದೆಯಾ ಬಡ ಜೀವ ಎನ್ನುತ್ತಾ ಅಲ್ಲಿಂದ ನೇರ ತನ್ನ ಪತ್ರಿಕಾಕಚೇರಿಯತ್ತ ಧಾವಿಸಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News