ನೆರವಿಗಾಗುವವರೇ ನಿಜವಾದ ಸ್ನೇಹಿತರು
ಕಾಪಿಕಾಡಿನ ಊರನ್ನು ಬಿಟ್ಟು ಹೋಗುವ ನೋವು ಇದ್ದರೂ, ಹೊಸ ಊರು ಎಂದಾದರೂ ಸಮಾಧಾನದ ವಿಷಯ ಅಂದರೆ ಹೋಗುತ್ತಿರುವುದು ಮತ್ತೆ ಹಳೆಯ ಸ್ನೇಹದ ನಂಟಿಗೆ. ಆದುದರಿಂದ ಒಂದು ರೀತಿಯಲ್ಲಿ ಸಮಾಧಾನವೇ ಎಲ್ಲರಿಗೂ. ಗುರುವಪ್ಪ ಮಾಸ್ತರ ಮನೆಯ ಒಂದು ಭಾಗವನ್ನು ನಮಗಾಗಿ ಬಿಟ್ಟುಕೊಟ್ಟರು. ಈ ಮನೆ ಮಂದಿಯ ಸ್ನೇಹದ ನಂಟು ಒಂದೇ ತಲೆಮಾರಿನದಲ್ಲ. ಮೂರು ತಲೆಮಾರಿನದ್ದು ಎನ್ನುವುದು ಇನ್ನೂ ವಿಶೇಷ.
ಕಾಪಿಕಾಡು ಶಾಲೆಯಲ್ಲಿ ನನ್ನ ಪ್ರೀತಿಯ ಮಾಸ್ತರರಾಗಿದ್ದ ಗುರುವಪ್ಪ ಮಾಸ್ತರರು ಅಪ್ಪನ ಆತ್ಮೀಯ ಸ್ನೇಹಿತರು. ಅಪ್ಪ ಮತ್ತು ಗುರುವಪ್ಪ ಮಾಸ್ತರರು ಕೊಂಚಾಡಿಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1946ರಲ್ಲಿ ಸಹೋದ್ಯೋಗಿಗಳಾಗಿದ್ದವರು. ಮುಂದೆ ಅಪ್ಪ ಉರ್ವಾ ಚರ್ಚ್ ಶಾಲೆಯಾಗಿದ್ದ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದರೆ, ಗುರುವಪ್ಪ ಮಾಸ್ತರರು ಕಾಪಿಕಾಡಿನ ಮುನಿಸಿಪಲ್ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದರು. ಸಾಹಿತ್ಯಾಸಕ್ತರಾಗಿದ್ದ ಇವರಿಬ್ಬರೂ ಕನ್ನಡದ ಸಾಹಿತಿಯೂ, ಪಂಡಿತರೂ ಆಗಿದ್ದ ಅಮ್ಮೆಂಬಳ ಶಂಕರ ನಾರಾಯಣ ನಾವಡರಲ್ಲಿ ವಿದ್ವಾನ್ ಪರೀಕ್ಷೆಯ ಪಾಠಗಳಲ್ಲಿ ಜೊತೆಯಾಗಿ ಹೋಗುತ್ತಿದ್ದರು. ಮದ್ರಾಸ್ ಸರಕಾರದ ವಿದ್ವಾನ್ ಪರೀಕ್ಷೆಗೆ ಬೇಕಾದ ತರಗತಿಗಳನ್ನು ಇಬ್ಬರೂ ಪೂರೈಸಿದರು. ಅಪ್ಪ ಪರೀಕ್ಷೆಗೆ ಬರೆದು ವಿದ್ವಾನ್ ಪದವಿ ಪಡೆದುಕೊಂಡರೆ ಅದ್ಯಾಕೋ ಗುರುವಪ್ಪ ಮಾಸ್ತರರು ಪದವಿ ಪಡೆದಿರಲಿಲ್ಲ. ಪರೀಕ್ಷೆ ಬರೆದಿದ್ದರೋ ಇಲ್ಲವೋ ಎನ್ನುವುದು ತಿಳಿಯದು. ಆದರೆ ಪದವಿ ಇಲ್ಲ ಎನ್ನುವ ಮಾತ್ರಕ್ಕೆ ಅವರಿಗೆ ಪಾಂಡಿತ್ಯ ಇಲ್ಲ ಎನ್ನುವಂತಿರಲಿಲ್ಲ. ಅವರು ಒಬ್ಬ ಉತ್ತಮ ಯಕ್ಷಗಾನ ಅರ್ಥಧಾರಿಗಳಾಗಿದ್ದರು. ಪುರಾಣ, ಕಾವ್ಯಗಳಿಗೆ ಪ್ರವಚನ ನೀಡುತ್ತಿದ್ದರು. ಹಾಗೆಯೇ ಹಾಡು, ನಾಟಕಗಳನ್ನು ಬರೆಯಬಲ್ಲ ಸೃಜನಶೀಲರಾಗಿದ್ದರು.
ಗುರುವಪ್ಪ ಮಾಸ್ತರರ ಮಡದಿ ನನ್ನ ಅಮ್ಮನಿಗೆ ಮದುವೆಗಿಂತ ಮೊದಲೇ ಪರಿಚಿತರು. ಅವರ ಹೆಸರು ಕೃಷ್ಣಾಬಾಯಿ. ನನ್ನ ಅಮ್ಮನ ಅಪ್ಪ ಹಾಗೂ ಕೃಷ್ಣಾಬಾಯಿಯವರ ತಂದೆ ಆತ್ಮೀಯ ಸ್ನೇಹಿತರಾಗಿದ್ದರು. ಈ ಕಾರಣದಿಂದ ನನ್ನ ಅಮ್ಮ ಹಾಗೂ ಅವರ ಅಣ್ಣನಿಗೆ ಮನೆ ಪಾಠ ಹೇಳಿದವರು ಕೃಷ್ಣಾಬಾಯಿ. ಉರ್ವಾ ಮಾರ್ಕೆಟ್ ಬಳಿಯಲ್ಲಿ ವಾಸವಾಗಿದ್ದ ಅವರು ಅಲ್ಲೇ ಗಾಂಧಿನಗರ ಹಿ.ಪ್ರಾ. ಶಾಲೆಯ ಅಧ್ಯಾಪಕಿಯಾಗಿದ್ದು ಬಹಳ ವರ್ಷ ಮುಖ್ಯೋಪಾಧ್ಯಾಯಿನಿಯಾಗಿದ್ದವರು. ಈ ಇಬ್ಬರು ದಂಪತಿಗಳು ಹಾಗೂ ನನ್ನ ಅಪ್ಪ ಅಮ್ಮ ತಮ್ಮ ತಮ್ಮ ದಾಂಪತ್ಯ ಜೀವನದ ಪ್ರಾರಂಭದಲ್ಲಿ ಕಾಪಿಕಾಡಿನಲ್ಲಿದ್ದ ಬಿ.ವಿ.ಕಿರೋಡಿಯನರ ಮನೆ ಪಕ್ಕದ ಓಣಿಯ ತುತ್ತ ತುದಿಯಲ್ಲಿದ್ದ ನನ್ನ ಅಜ್ಜನ ಮನೆಯಲ್ಲಿ ಜೊತೆಯಾಗಿ ವಾಸವಿದ್ದವರು. ಮುಂದೆ ಗುರುವಪ್ಪ ಮಾಸ್ತರರು ಕಾಪಿಕಾಡಿನ ಲೂವಿಸ್ ಪೊರ್ಬುಗಳ ಮನೆಗೆ ಬಿಡಾರ ಬಂದರೆ ಅದೇ ಓಣಿಯ ತುತ್ತತುದಿಯಲ್ಲಿದ್ದ ಜುಜೆಫಿನ್ ಫೆರ್ನಾಂಡಿಸ್‌ರ ಮನೆಗೆ ಬಿಡಾರಕ್ಕೆ ಬಂದವರು ನನ್ನ ಅಪ್ಪ ಅಮ್ಮ. ಇಲ್ಲಿಯೂ ನೆರೆಕರೆಯವರಾಗಿ ಕೆಲವು ವರ್ಷ ಜೊತೆಯಲ್ಲಿದ್ದರು.
ನಾವು ಬಿಜೈಯ ಈ ಮನೆಯಲ್ಲಿ ಸುಮಾರು ಹದಿನೇಳು ವರ್ಷಗಳಿದ್ದರೆ ಗುರುವಪ್ಪ ಮಾಸ್ತರರ ಸಂಸಾರ ಕುಂಟಿಕಾನದಲ್ಲಿದ್ದ ಚಂದಪ್ಪ ಮೇಸ್ತ್ರಿಗಳ ಬಿಡಾರಕ್ಕೆ ಬದಲಾಯಿತು. ಚಂದಪ್ಪ ಮೇಸ್ತ್ರಿಗಳು ಪರಿಚಿತರೇ. ಈಗಾಗಲೇ ಹೇಳಿದ್ದ ಬಾಳೆಬೈಲು ಐತಪ್ಪ ಮೇಸ್ತ್ರಿ, ರಾಮಪ್ಪ ಮೇಸ್ತ್ರಿಗಳ ಕಿರಿಯ ಬಂಧುಗಳಾದ ಚಂದಪ್ಪ ಮೇಸ್ತ್ರಿಗಳು ಅವರ ಹಾಗೆಯೇ ಪ್ರಸಿದ್ಧ ಕಂಟ್ರಾಕ್ಟರ್‌ರಾಗಿದ್ದರು. ಈ ಮನೆಗೆ ನಾವು ಮಕ್ಕಳು ಅಪ್ಪ ಅಮ್ಮನೊಂದಿಗೆ ಬಂದು ಹೋಗುತ್ತಿದ್ದ ನೆನಪು ಇದೆ. ಗುರುವಪ್ಪ ಮಾಸ್ತರರ ಹಿರಿಯ ಮಗಳು ಶಶಿಲೇಖಾ ಕಾಪಿಕಾಡು ಶಾಲೆಯಲ್ಲಿ ನನಗಿಂತ ಹಿರಿಯ ವಿದ್ಯಾರ್ಥಿನಿಯಾಗಿದ್ದರೆ ಅವಳ ತಮ್ಮ ಹರ್ಷಕುಮಾರ್ ನನ್ನ ಸಹಪಾಠಿಯಾಗಿದ್ದ.
ಗುರುವಪ್ಪ ಮಾಸ್ತರರು ಮುಂದೆ ದೇರೆಬೈಲು ಚರ್ಚಿನ ಎದುರು ಓಣಿಯ ತಿರುವಿನಲ್ಲಿ ಎತ್ತರದಲ್ಲಿದ್ದ ಜಾಗ ಖರೀದಿಸಿ ಸ್ವಂತ ಮನೆ ಕಟ್ಟಿಸಿಕೊಂಡು ಅಲ್ಲಿ ವಾಸವಾಗಿದ್ದರು. ಈ ವಿಶಾಲ ಮನೆಯ ಅರ್ಧ ಭಾಗವನ್ನೇ ಸ್ನೇಹಿತನ ಕುಟುಂಬಕ್ಕೆ ವಾಸವಾಗಿರಲು ಬಿಡಾರವಾಗಿ ಕೊಟ್ಟರು. ಎತ್ತರದ ಗುಡ್ಡದಲ್ಲಿ ಇದ್ದಂತೆಯೇ ಇದ್ದ ಮನೆಗೆ ಓಣಿಯಿಂದ ಹತ್ತಲು ಹತ್ತಕ್ಕಿಂತಲೂ ಹೆಚ್ಚು ಮೆಟ್ಟಲುಗಳಿತ್ತು ಎಂಬ ನೆನಪು. ಆಳವಾದ ಬಾವಿ, ರಾಟೆ ಹಗ್ಗದ ಮೂಲಕವೇ ನೀರು ಸೇದಬೇಕಾಗಿತ್ತು. ಅಮ್ಮನಿಗೆ ಕಷ್ಟವಾದರೂ ಅನಿವಾರ್ಯವಾಗಿತ್ತು. ಅಂತೂ ಇಂತೂ ಒಂದೇ ಮನೆಯ ಗೋಡೆಯ ಆಕಡೆ ಈಕಡೆ ಎರಡು ಸಂಸಾರಗಳು ಪುನಃ ಒಂದಾಗಿ ಇರುವ ಭಾಗ್ಯ ದೊರೆತುದು ಸ್ನೇಹದ ಕಾರಣದಿಂದಲೇ ಅಲ್ಲವೇ?
ಗುರುವಪ್ಪ ಮಾಸ್ತರರು ಮತ್ತು ಕೃಷ್ಣಾಬಾಯಿ ಟೀಚರ್ ಅಪ್ಪನನ್ನು ಗೌರವದಿಂದ ಬಹುವಚನದಲ್ಲಿ ಮಾತನಾಡಿಸುತ್ತಿದ್ದರೆ ಅಮ್ಮನನ್ನು ಇಬ್ಬರೂ ‘ಸುಂದರೀ’ ಎಂದು ಆತ್ಮೀಯತೆಯ ಏಕವಚನದಲ್ಲಿ ಕರೆಯುತ್ತಿದ್ದರು. ನಾವೆಲ್ಲರೂ ಸರ್, ಟೀಚರ್ ಎಂದು ಅವರಿಬ್ಬರನ್ನು ಸಂಬೋಧಿಸಿದರೆ ಮಕ್ಕಳು ಪರಸ್ಪರ ಏಕವಚನದಲ್ಲೇ ಮಾತನಾಡುತ್ತಿದ್ದೆವು. ಆದರೆ ನಾನು ಮತ್ತು ನನ್ನ ಸಹಪಾಠಿ ಇಬ್ಬರೂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದುದರಿಂದ ಇಬ್ಬರಿಗೂ ಮೊದಲಿನ ಸಲುಗೆ ಇಲ್ಲವಾಗಿ ಸಂಕೋಚವೇ ಹೆಚ್ಚಾಗಿತ್ತು. ಜೊತೆಗೆ ಒಂದೇ ತರಗತಿಯಲ್ಲಿದ್ದ ನಾವಿಬ್ಬರೂ ಪರಸ್ಪರ ತಿಳಿದೋ ತಿಳಿಯದೆಯೋ ಓದಿನ ವಿಷಯಕ್ಕೆ ಸ್ಪರ್ಧಿಗಳಾಗಿದ್ದೆವು. ಈ ಕಾರಣಕ್ಕೆ ಮಕ್ಕಳಾಟಿಕೆಯ ಕೋಪ ರಾಜಿಗಳೂ ಆಗಿದ್ದುವು. ಜೊತೆಗೆ ನಾನು ಈಗ ಪಿಯುಸಿ ತರಗತಿಯಲ್ಲಿ ಡುಮ್ಕಿ ಹೊಡೆದು ಮತ್ತೆ ಪರೀಕ್ಷೆಗೆ ಕಟ್ಟಿ ಓದುವ ಹಂತದಲ್ಲಿದ್ದೆ. ಆದುದರಿಂದ ಇನ್ನಷ್ಟು ನಾಚಿಕೆಯಾಗಿತ್ತು.
ಗುರುವಪ್ಪ ಮಾಸ್ತರರದ್ದು ಒಂದು ವಿಶೇಷ ಗುಣ. ಅವರಿಗೆ ಹಲವಾರು ಹವ್ಯಾಸಗಳು. ಅದರಲ್ಲಿ ಮನೆ ಕೆಲಸಗಳೂ ಸೇರುತ್ತವೆ. ಜೊತೆಗೆ ಪ್ರಾಣಿಗಳ ಬಗೆಗಿನ ಪ್ರೀತಿಯೂ ಆರೈಕೆಯೂ ಇದೆ. ದನ-ಕರು, ಆಡುಗಳ ಜೊತೆ ನಾಯಿ, ಬೆಕ್ಕುಗಳೂ ಅವರ ಸಂಗಾತಿಗಳು. ಹಟ್ಟಿ ತೊಳೆಯುವಲ್ಲಿಂದ ತೊಡಗಿ ಹಾಲು ಕರೆಯುವುದರ ಜೊತೆಗೆ, ಅವುಗಳಿಗೆ ಹುಲ್ಲು, ಸೊಪ್ಪುಗಳನ್ನು ತರುವಲ್ಲಿ ಅವರು ನಾಚಿಕೆಪಟ್ಟುಕೊಳ್ಳುತ್ತಿರಲಿಲ್ಲ. ಕೃಷ್ಣಾಬಾಯಿ ಟೀಚರ್‌ರವರು ದೈಹಿಕವಾಗಿ ತುಂಬಾ ನಿತ್ರಾಣಿಯಾಗಿದ್ದವರು. ಅನೇಕ ಗರ್ಭಪಾತಗಳಿಂದಾಗಿ ದಣಿದ ಅವರಿಗೆ ಹೆಚ್ಚಿನ ದೈಹಿಕ ಶ್ರಮ ಮಾಡಲು ಅಸಾಧ್ಯವಾಗಿತ್ತು. ಆದ್ದರಿಂದಲೇ ಅವರ ಮನೆಯಲ್ಲಿ ಮನೆ ಕೆಲಸಕ್ಕಾಗಿ ಸಹಾಯಕಿಯಾಗಿ ಯಾರನ್ನಾದರೂ ಮನೆ ಮಂದಿಯ ಹಾಗೆ ಜೊತೆಯಲ್ಲಿಟ್ಟುಕೊಂಡೇ ಸಾಕುತ್ತಿದ್ದರು. ಮನೆಯಲ್ಲಿ ಇದ್ದಷ್ಟು ಹೊತ್ತು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಗುರುವಪ್ಪ ಮಾಸ್ತರರು ನಿಜವಾಗಿಯೂ ಕಾಯಕ ಜೀವಿ. ಹಾಗೆಯೇ ಹೆಂಡತಿ ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಇದ್ದವರಾಗಿದ್ದರು. ಆದರೆ ತನ್ನಂತೆಯೇ ಮನೆಗೆಲಸದಲ್ಲಿ ಪಾಲ್ಗೊಳ್ಳಬೇಕೆಂಬ ನಿರೀಕ್ಷೆಯಲ್ಲಿ ಅವರ ಗದರುವಿಕೆಗೆ ಸಿಗುತ್ತಿದ್ದವನು ಮಗ. ಆದರೆ ಆ ಸಿಟ್ಟನ್ನು ಮರುಗಳಿಗೆಯೇ ಮರೆತು ಮತ್ತೆ ಮನೆಗೆ ಬರುವಾಗ ತಿಂಡಿಯ ಪೊಟ್ಟಣ ತಂದು ನೀಡುವವರೂ ಅವರೇ ಆಗಿದ್ದರು. ಒಟ್ಟಿನಲ್ಲಿ ನನ್ನ ಮಾಸ್ತರರದ್ದು ಹೆಂಗರಳು ಎಂದರು ತಪ್ಪಲ್ಲ.
ಇಂತಹ ಕುಟುಂಬದ ಜೊತೆಯಲ್ಲಿ ನಾವು ಬಿಡಾರವಾಗಿ ಇದ್ದ ದಿನಗಳಲ್ಲಿ ನಾನು ಪಿಯುಸಿಯಲ್ಲಿ ಅನುತ್ತೀರ್ಣಳಾದ ವಿಷಯಕ್ಕೆ ಓದಿಕೊಳ್ಳುತ್ತಿದ್ದಂತೆಯೇ ಪಿಯುಸಿ ಮಾಡುವಷ್ಟಕ್ಕೆ ನಿರ್ಧರಿಸಿ ಮಧ್ಯಾಹ್ನದ ಬಳಿಕ ದಡ್ಡಲಕಾಡಿನಲ್ಲಿದ್ದ ಟೈಲರಿಂಗ್ ತರಗತಿಗೆ ಸೇರಿಕೊಂಡೆ. ಹಾಗೆಯೇ ಸಂಜೆ ಹಿಂದಿ ಪ್ರಚಾರ ಸಭಾದಲ್ಲಿ ಹಿಂದಿ ವಿಷಯದಲ್ಲಿ ಮುಂದಿನ ಓದಿಗಾಗಿಯೂ ಸೇರಿಕೊಂಡೆ. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ನಡೆಯುತ್ತಿದ್ದ ಟೈಲರಿಂಗ್ ತರಗತಿಯು ದಡ್ಡಲಕಾಡಿನ ಕಾಲನಿಯ ಒಳಗೆ ಸರಕಾರದ ಯೋಜನೆಯಡಿಯೊಂದರಲ್ಲಿ ನಡೆಯುತ್ತಿತ್ತು. ಎಲ್ಲಾ ಜಾತಿ, ಧರ್ಮಗಳ ಯುವತಿಯರಿಗೂ ಪ್ರವೇಶವಿತ್ತು. ಟೈಲರಿಂಗ್ ತರಬೇತಿ ಪಡೆದಿದ್ದ ಮೋಹಿನಿ ಟೀಚರ್ ನಮಗೆ ತರಬೇತಿ ನೀಡುತ್ತಿದ್ದರು. ಇವರು ಕಾಪಿಕಾಡಿನವರೇ ಆಗಿದ್ದು ಮೊದಲೇ ಪರಿಚಿತರಾಗಿದ್ದರು. ಅಲ್ಲದೇ ತರಗತಿಗೆ ಕಾಪಿಕಾಡು ಬಿಜೈಯಿಂದ ನನ್ನ ಶಾಲೆಯಲ್ಲಿ ಓದು ಮುಗಿಸಿ ಕುಳಿತಿದ್ದವರು ಈ ಶಾಲೆ ಪ್ರಾರಂಭಗೊಂಡುದರಿಂದ ಬರುತ್ತಿದ್ದರು. ಈ ಹಿಂದೆಯೇ ಹೇಳಿದಂತೆ ಓದು ನಿಲ್ಲಿಸಿದ ಹುಡುಗಿಯರಿಗೆ ಬೀಡಿ ಕಟ್ಟುವ ವೃತ್ತಿ ಈಗಾಗಲೇ ಬಂದಿತ್ತು.
ಅದಕ್ಕಿಂತ ಘನತೆಯದ್ದು ಟೈಲರಿಂಗ್ ಎಂಬ ಭಾವನೆಯೂ ಇತ್ತು. ಅಲ್ಲದೆ ಮದುವೆ ಮಾರುಕಟ್ಟೆಯಲ್ಲಿಯೂ ಅದಕ್ಕೆ ಡಿಮಾಂಡ್ ಹೆಚ್ಚುತ್ತಿತ್ತು. ನನಗೆ ಟೈಲರಿಂಗ್‌ನಲ್ಲಿ ಅಂತಹ ಆಸಕ್ತಿ ಇಲ್ಲದಿದ್ದರೂ ಪಿಯುಸಿಗೆ ಕಾಲೇಜಿಗೆ ಸೇರುವಾಗಿನ ಓದುವ ಹಠದಲ್ಲಿ ಸೋತಾಗ ಏನಾದರೂ ನಾನು ಆರ್ಥಿಕವಾಗಿ ಸ್ವತಂತ್ರಳಾಗಬೇಕೆಂಬ ಹಠ ಹುಟ್ಟಿಕೊಂಡಿತ್ತು. ಜೊತೆಗೆ ಹಿಂದಿ ಭಾಷೆಯನ್ನು ಸಾಹಿತ್ಯವನ್ನು ಓದಿಕೊಂಡು ಪರೀಕ್ಷೆಗಳನ್ನು ಬರೆದರೆ ಹಿಂದಿ ಅಧ್ಯಾಪಕಿಯಾಗಬಹುದೆನ್ನುವುದು ಚಿಕ್ಕಪ್ಪನಿಂದಲೇ ತಿಳಿದಿತ್ತಲ್ಲವೇ? ಈ ಕಾರಣಗಳಿಂದ ನನ್ನ ಬದುಕಿನ ದಾರಿ ಯಾವುದೆಂದು ತಿಳಿಯದೆ ಇದ್ದರೂ ನನ್ನ ಪ್ರಯತ್ನವನ್ನು ಈ ಎರಡೂ ದಿಕ್ಕಿನಲ್ಲಿ ಪ್ರಾರಂಭಿಸಿದೆ. ‘ಮನಸ್ಸಿದ್ದರೆ ಮಾರ್ಗ’ ಎಂದು ಶಾಲೆಯಲ್ಲಿ ಹೇಳಿಕೊಟ್ಟ ಪಾಠ ಸುಳ್ಳಾಗಲು ಸಾಧ್ಯವಿಲ್ಲ ಎಂಬ ಭರವಸೆ ನನ್ನದಾಗಿತ್ತು.
ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪಿಯುಸಿ ಕೋರ್ಸ್ ಪಾಸ್ ಮಾಡಿಕೊಂಡ ದ್ದಾಯ್ತು. ಈಗ ಮನಸ್ಸಿಗೆ ಒಂದಷ್ಟು ನಿರಾಳವಾಗಿ ನನ್ನ ಟೈಲರಿಂಗ್ ಹಾಗೂ ಹಿಂದಿ ತರಗತಿಗಳ ಓಡಾಟ ಹಾಗೂ ಹಿಂದಿ ಪರೀಕ್ಷೆಗಳಲ್ಲಿಯೂ ಪ್ರವೇಶಿಕಾ ಮುಗಿದು ವಿಶಾರದಾ ಪದವಿಗೆ ಓದುತ್ತಿದ್ದೆ.
ಈ ಹಿನ್ನೆಲೆಯಲ್ಲಿ ನನ್ನ ಈಗಿನ ಊರಾದ ದೇರೆಬೈಲನ್ನು ಪರಿಚಯಿಸಿ ಕೊಳ್ಳುತ್ತಿದ್ದೇನೆ. ನಮ್ಮ ಓಣಿಯ ಎದುರು ರಸ್ತೆಯ ಎದುರುಗಡೆ ಭವ್ಯವಾದ ದೇರೆಬೈಲು ಚರ್ಚು. ನಾನು ಈ ಮೊದಲೇ ಚರ್ಚ್ ಆವರಣ, ಅಲ್ಲಿನ ಶಾಲೆಗಳನ್ನು ಉರ್ವಾ ಹಾಗೂ ರೊಸಾರಿಯೋಗಳಲ್ಲಿ ನೋಡಿದ್ದೆ. ಆದರೆ ಈಗ ದಿನಾ ಅದರ ಬಳಿಯಿಂದಲೇ ಸಾಗುವಾಗ ಬಂದ ಮೊದಲ ಯೋಚನೆ ಚರ್ಚ್ ಆವರಣಗಳು ಎಷ್ಟು ವೌನ ಹಾಗೂ ಶುಚಿಯಾಗಿರುತ್ತದೆ ಎನ್ನುವುದು. ಹಾಗೆಯೇ ಹಿಂದೂಗಳ ಸ್ಮಶಾನ ಎನ್ನುವುದು ಊರ ಹೊರಗೆ ಇದ್ದು ಭಯವನ್ನು ಹುಟ್ಟಿಸಿದರೆ ಇಲ್ಲಿ ಚರ್ಚ್ ನ ಬಳಿಯಲ್ಲಿಯೇ ದಫನಸ್ಥಳ ಇದ್ದು ಆ ಗೋರಿಗಳ ಒಳಗೆ ದೇಹಗಳು ಇವೆ ಎನ್ನುವ ಕಲ್ಪನೆ ಭಯ ಹುಟ್ಟಿಸಿದರೂ ನಿಧಾನವಾಗಿ ಆ ಭಯವನ್ನು ನಿವಾರಿಸಿಕೊಂಡೆ. ನಿವಾರಿಸಿಕೊಳ್ಳುವುದಕ್ಕೆ ವೈಚಾರಿಕತೆ ಬೇಕಾಗುತ್ತದೆ. ನಂಬಿಕೆಗಳಲ್ಲ. ಕ್ರಿಶ್ಚಿಯನ್ನರಿಗೆ ಭಯವನ್ನುಂಟು ಮಾಡದ ಈ ಸ್ಥಳ ನಮಗೆ ಯಾಕೆ ಹುಟ್ಟಿಸಬೇಕು ಎನ್ನುವ ಪ್ರಶ್ನೆಯೊಂದಿಗೆ ಅವರೂ ನಮ್ಮಂತೆಯೇ ಮನುಷ್ಯರಲ್ಲವೇ? ಎನ್ನುವ ಪ್ರಶ್ನೆಯೊಂದಿಗೆ ನಾವು ಅವರಂತೆ ಯೋಚಿಸಲು ಸಾಧ್ಯವಾದರೆ ಖಂಡಿತಾ ಭಯವಿಲ್ಲ ಎನ್ನುವುದು ಉತ್ತರವಾಗಿತ್ತು. ಜೊತೆಗೆ ದೇರೆಬೈಲು ಗ್ರಾಮದಲ್ಲಿ ಕ್ರಿಶ್ಚಿಯನ್ನರು ನಿಧನರಾದಾಗ ಚರ್ಚ್‌ಗೆ ಶವಯಾತ್ರೆ, ಚರ್ಚ್‌ನ ಗಂಟೆಯ ನಾದ. ಅವರ ಪ್ರಾರ್ಥನೆ ಇವುಗಳನ್ನೆಲ್ಲಾ ನೋಡಿ ಕೇಳಿ ಅದು ಸಹಜ ಎನ್ನುವಂತೆ ಸ್ವೀಕಾರವಾಯಿತು.
ಜೊತೆಗೆ ಬಿಜೈಯಲ್ಲಿ ರುವಾಗಲೂ ಹಿಂದೂ ಮನೆಗಳಲ್ಲಿ ಮರಣ ಸಂಭವಿಸಿದಾಗ ಹೋಗಿ ನೋಡಲು ಭಯವಾಗುತ್ತಿದ್ದರೆ, ಕ್ರಿಶ್ಚಿಯನ್ ಮನೆಗಳಿಗೆ ಹೋಗಲು ಭಯ ವಾಗುತ್ತಿರಲಿಲ್ಲ. ಕಾಪಿಕಾಡು ಶಾಲೆಯ ಆಸುಪಾಸಿನಲ್ಲಿ ಹೀಗೆ ಮರಣ ಸಂಭವಿಸಿದಾಗ ಸಹಪಾಠಿಗಳ ಜೊತೆಗೆ ಹೋಗುವುದೆಂದರೆ ಏನೋ ಒಂದು ವಿಶಿಷ್ಟ ಅನುಭವ. ಶುಚಿರ್ಭೂತವಾಗಿ, ಒಳ್ಳೆಯ ಉಡುಗೆ ಉಡಿಸಿದ, ವಿಕೃತವಲ್ಲದ ಹೆಣವನ್ನು ಹೆಣವೆಂದು ಭಾವಿಸಲಾಗದ ಭಾವನೆ. ಜೊತೆಗೆ ಅಲ್ಲಿದ್ದವರೆಲ್ಲಾ ವೌನವಾಗಿದ್ದು ಬೈಬಲ್‌ನಿಂದ ಸ್ತೋತ್ರಗಳನ್ನು ಹೇಳುತ್ತಿದ್ದ ರೀತಿ, ಅಲ್ಲೊಂದು ಸೂತಕ ಅಂದರೆ ದುಖಃದ ಛಾಯೆ ಇದ್ದರೂ ಕಾಣದ ಸ್ವರ್ಗಕ್ಕೆ ಅಂತಿಮ ವಿದಾಯ ಹೇಳುವುದಕ್ಕೆ ತಾನು ಹೋಗ ಬೇಕು ಎನ್ನುವ ನಂಬಿಕೆ. ಅದುವರೆಗೆ ಮರಣಿಸಿದ ವ್ಯಕ್ತಿಯಲ್ಲಿ ಸಿಟ್ಟು, ಅಸಮಾಧಾನಗಳಿ ದ್ದರೂ ಅದನ್ನು ಮರೆತು ಬಿಡುವ ಕ್ಷಮಾಗುಣ ಇದೆಲ್ಲಾ ಸಾವಿನ ಬಗೆಗಿನ ಭಯವನ್ನು ನಿವಾರಿಸಿತ್ತು ಎಂದೇ ಹೇಳಬೇಕು.
ನಮ್ಮ ಮನೆ ಎತ್ತರದಲ್ಲಿ ದ್ದುದರಿಂದ ನೇರವಾಗಿ ಚರ್ಚ್‌ನ ದಫನ ಸ್ಥಳ ಕಾಣುತ್ತಿತ್ತು. ಆ ದಾರಿಯ ಬದಿಯಲ್ಲಿ ನಡೆದಾಗ ಗೋರಿಯ ಮೇಲೆ ಇಟ್ಟ ಹೂಗುಚ್ಛಗಳು, ವ್ಯಕ್ತಿಯ ಬಗೆಗಿನ ದಾಖಲೆಗಳ ಫಲಕಗಳು, ಗೋರಿಗಳನ್ನು ತಿಂಗಳ ಬಳಿಕ, ವರ್ಷಗಳ ಬಳಿಕವೂ ಅವರ ಬಂಧುಗಳು ಬಂದು ಹೂಗುಚ್ಛಗಳನ್ನಿಟ್ಟು ನೆನಪಿಸಿಕೊಂಡು ಪ್ರಾರ್ಥಿಸುವ ಈ ಕ್ರಿಯೆ ನಮ್ಮ ಆಚರಣೆಗಳಿಂದ ಭಿನ್ನವಾದುದಕ್ಕೆ ಇರಬಹುದು. ಸಾವು ಕೂಡಾ ಸಹಜವಾದುದೇ. ಅದನ್ನು ಸ್ವೀಕರಿಸುವುದು ಕೂಡಾ ಅಷ್ಟೇ ಸಹಜವಾಗಿರಬೇಕು ಎಂಬುದನ್ನು ತಿಳಿಸಿತ್ತು.