ಟ್ರಂಪ್ ಆಯ್ಕೆ ವಿರೋಧಿಸಿ ಅಮೆರಿಕದಿಂದ ಪ್ರತ್ಯೇಕಗೊಳ್ಳಲು ಕ್ಯಾಲಿಫೋರ್ನಿಯ ಅಭಿಯಾನ!
ಲಾಸ್ ಏಂಜಲಿಸ್, ಜ. 28: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯ ರಾಜ್ಯವನ್ನು ಅಮೆರಿಕದಿಂದ ಪ್ರತ್ಯೇಕಗೊಳಿಸಿ ಪ್ರತ್ಯೇಕ ದೇಶವನ್ನಾಗಿಸುವ ಅಭಿಯಾನವೊಂದು ವೇಗವನ್ನು ಪಡೆದುಕೊಳ್ಳುತ್ತಿದೆ. ಈ ಪ್ರಸ್ತಾಪವನ್ನು ಮತಕ್ಕೆ ಹಾಕುವುದಕ್ಕಾಗಿ ಸಹಿ ಸಂಗ್ರಹ ಮಾಡಲು ಬೆಂಬಲಿಗರಿಗೆ ಅನುಮತಿ ನೀಡಲಾಗಿದೆ.
‘ಕ್ಯಾಲಿಫೋರ್ನಿಯಕ್ಕೆ ದೇಶದ ಸ್ಥಾನಮಾನ’ ನೀಡುವ ಪ್ರಸ್ತಾಪಕ್ಕೆ ಸಹಿ ಸಂಗ್ರಹಿಸಲು ಅದರ ಬೆಂಬಲಿಗರಿಗೆ ಕ್ಯಾಲಿಫೋರ್ನಿಯದ ಸರಕಾರಿ ಕಾರ್ಯದರ್ಶಿ ಅಲೆಕ್ಸ್ ಪಡಿಲ ಗುರುವಾರ ಅನುಮೋದನೆ ನೀಡಿದ್ದಾರೆ.
‘ಕ್ಯಾಲೆಕ್ಸಿಟ್ (ಕ್ಯಾಲಿಫೋರ್ನಿಯ ಎಕ್ಸಿಟ್‌ನ ಸಂಕ್ಷಿಪ್ತ ರೂಪ)’ ಎಂಬುದಾಗಿಯೂ ಕರೆಯಲ್ಪಡುವ ಈ ಪ್ರಸ್ತಾಪ 2018ರ ನವೆಂಬರ್‌ನಲ್ಲಿ ಮತದಾನಕ್ಕೆ ಅರ್ಹತೆ ಗಳಿಸಬೇಕಾದರೆ 5,85,407 ಲಕ್ಷ ಸಹಿಗಳನ್ನು ಗಳಿಸಬೇಕಾಗಿದೆ.
ಇಷ್ಟು ಸಹಿಗಳನ್ನು ಅದು ಜುಲೈ 25ರ ಒಳಗೆ ಸಂಗ್ರಹಿಸಬೇಕಾಗಿದೆ. ಇದು ಕ್ಯಾಲಿಫೋರ್ನಿಯದ ಒಟ್ಟು ನೋಂದಾಯಿತ ಮತದಾರರ 8 ಶೇಕಡದಷ್ಟಾಗಿದೆ.
ಕ್ಯಾಲಿಫೋರ್ನಿಯ ಅಮೆರಿಕದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಅಲ್ಲಿ ಸುಮಾರು 4 ಕೋಟಿ ನಿವಾಸಿಗಳಿದ್ದಾರೆ. ಅದು ಜಗತ್ತಿನ ಆರನೆ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದೆ.