ಈ ಹಿರಿಯರು ಈಗ ‘ಪದ್ಮ’ ಜೀವಿ

Update: 2017-02-04 18:26 GMT

‘ಸಾಹಿತ್ಯ ಜೀವಿ’, ‘ನಿಘಂಟು ಜೀವಿ, ‘ಸ್ನೇಹ ಜೀವಿ’ಯಾದ ಜಿವಿಯವರಿಗೆ ಪ್ರಶಸ್ತಿಪುರಸ್ಕಾರಗಳ ರೂಪದಲ್ಲಿ ಸಾಮಾಜಿಕರು ನೀಡಿರುವ ಮಾನ್ಯತೆಗಳು ಲೆಕ್ಕವಿಲ್ಲದಷ್ಟು. ಜಿವಿಯವರಂತೂ ಇವುಗಳನ್ನೆಲ್ಲ ‘ಲೆಕ್ಕಿಸಿ’ದವರೇ ಅಲ್ಲ. ಎರಡು ವರ್ಷದ ಹಿಂದೆಯಷ್ಟೆ ಪಂಪ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಕನ್ನಡದ ಮನೆಯ ಈ ಹಿರಿಯರಿಗೆ ಈಗ ರಾಷ್ಟ್ರದ ಪರಮೋಚ್ಚ ಗೌರವವಾದ ಪದ್ಮಶ್ರೀ ಪ್ರಶಸ್ತಿ ನೀಡಿ ಸರಕಾರ ತನ್ನನ್ನು ತಾನೇ ಗೌರವಿಸಿಕೊಂಡಂತಾಗಿದೆ.

ವರ್ಷ 1937. ಸ್ಥಳ: ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಕರ ಕೊಠಡಿ. ಆಚಾರ್ಯ ಬಿ.ಎಂ.ಶ್ರೀ ಪರೀಕ್ಷಕರ ಪೀಠದಲ್ಲಿ ವಿರಾಜಮಾನರಾಗಿದ್ದಾರೆ. ಅವರೆದುರು ಇಪ್ಪತ್ತೆರಡರ ತುಂಬು ಪ್ರಾಯದ ಯುವಕ ಪರೀಕ್ಷಾರ್ಥಿ. ಎಂ.ಎ. ವಾಚಾ ಪರೀಕ್ಷೆ ಮುಗಿಸಿದ ಬಿ.ಎಂ.ಶ್ರೀ ಆ ಯುವಕನಿಗೆ ಹೀಗೊಂದು ಹಿತವಚನ ಹೇಳಿದರು: ‘‘ಕನ್ನಡವನ್ನು ನಿಮ್ಮ ಕೈಯಲ್ಲಿಟ್ಟಿದ್ದೇವೆ. ಅದನ್ನು ಕಾಪಾಡಿ’’ ಕನ್ನಡದ ಕಣ್ವ, ಆಚಾರ್ಯ ಬಿ.ಎಂ.ಶ್ರೀ ಅವರಿಂದ ಹೀಗೆ ಕನ್ನಡದ ದೀಕ್ಷೆ ಪಡೆದವರು ನಮ್ಮ ನಡುವಣ ಶತಕದ ಮೇಲೆ ನಾಲ್ಕು ಬಾರಿಸಿರುವ ‘ಚಿರ ಯುವಕ’ ನಾಡೋಜ ಜಿ.ವೆಂಕಟಸುಬ್ಬಯ್ಯನವರು. ಗುರುಗಳ ಮಾತನ್ನು ಶಿರಸಾವಹಿಸಿ ಕನ್ನಡ ನುಡಿಗಾಗಿ ತಮ್ಮ ಬದುಕನ್ನು ಮುಡುಪಾಗಿಸಿದವರು. ದೀಕ್ಷಾಬದ್ಧವಾದ ಕನ್ನಡದ ಕಾಯಕದಿಂದ, ‘ಇಗೋ ಕನ್ನಡ’ದ ಜಿವಿ ಎಂದು ಕರ್ನಾಟಕದಲ್ಲಿ ಮನೆಮಾತಾದವರು.

ಜಿ.ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣ ಸಮೀಪದ ಗಂಜಾಂನವರು. ಕುಟುಂಬದ ಹಿರಿಯ ಮಗನಾಗಿ ‘ಜಿವಿ’ ಜನ್ಮವೆತ್ತಿದ್ದು 23-8-1915ರಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯನವರು. ತಾಯಿ ಸುಬ್ಬಮ್ಮನವರು. ತಿಮ್ಮಣ್ಣಯ್ಯನವರು ಕನ್ನಡ ಸಂಸ್ಕೃತಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದು ವೃತ್ತಿಯಿಂದಲೂ ಕನ್ನಡ ಪಂಡಿತರಾಗಿದ್ದರು. ಹಲವಾರು ಗ್ರಂಥಗಳ ಕರ್ತೃವಾದ ತಿಮಣ್ಣಯ್ಯನವರು ಪುರಾಣ ಕಥಾವಳಿ ಮಾಸ ಪತ್ರಿಕೆಯ ಸಂಪಾದಕ/ಪ್ರಕಾಶಕರಾಗಿಯೂ ನುಡಿ ಸೇವೆ ಸಲ್ಲಿಸಿದವರು. ಇಂತಹ ತಂದೆಯ ಪಾಂಡಿತ್ಯದಿಂದ ಮತ್ತು ಆಶೀರ್ವಾದದಿಂದ ಮಗನಲ್ಲಿ ತಿಳಿವಳಿಕೆ ಇಳಿದು ಬಂದಿದ್ದರೆ ಅದೇನೂ ಸೋಜಿಗವಲ್ಲ ಎಂದು ಜಿವಿಯವರ ಮಿತ್ರ ಪ್ರೊ. ಎಚ್.ಎಂ.ಶಂಕರನಾರಾಯಣ ರಾವ್ ಹೇಳಿರುವಂತೆ ಪಾಂಡಿತ್ಯ, ಪ್ರತಿಭೆ ಮತ್ತು ಕನ್ನಡ ಕೈಂಕರ್ಯದ ಪ್ರವೃತ್ತಿಯನ್ನು ವಂಶವಾಹಿಯಾಗಿ ಧರಿಸಿರುವ ವೆಂಕಟಸುಬ್ಬಯ್ಯನವರು ಮಧುಗಿರಿಯಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ ಮುಂದಿನ ಶಿಕ್ಷಣಕ್ಕಾಗಿ ಮೈಸೂರಿನತ್ತ ಪಾದ ಬೆಳೆಸಿದರು.

ಕನ್ನಡ ಆನರ್ಸ್, ಎಂ.ಎ., ಬಿ.ಟಿ. ಪದವಿಗಳನ್ನು ಪಡೆದು ನುಡಿ ಸೇವೆಯ ಮೊದಲ ಹೆಜ್ಜೆಯಾಗಿ ಕನ್ನಡದ ಮೇಷ್ಟ್ರು ಆದರು. ವಿದ್ಯಾರ್ಥಿ ದಿನಗಳಲ್ಲಿ ಹಾಗೂ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಎ.ಆರ್.ಕೃಷ್ಣ ಶಾಸ್ತ್ರಿ, ವೆಂಕಣ್ಣಯ್ಯ, ಡಿ.ಎಲ್.ಎನ್, ತೀನಂಶ್ರೀ, ವಿ.ಸೀ.ರಂತಹ ಅತಿರಥಮಹಾರಥ ವಿದ್ವಾಂಸರ ಸಾಮೀಪ್ಯಸಾನ್ನಿಧ್ಯಗಳಿಂದ ಸಾಹಿತ್ಯ ಮತ್ತು ಬೋಧನೆಯಲ್ಲಿ ‘ಘನ’ವಾದರು. ಮಂಡ್ಯ, ಮೈಸೂರುಗಳಲ್ಲಿ ಒಂದಷ್ಟು ದಿವಸಗಳ ಕಾಲ ಬೋಧಿಸಿದ ನಂತರ ಬೆಂಗಳೂರನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡರು. 1943ರಲ್ಲಿ ಕನ್ನಡ ವಿಜಯಾ ಕಾಲೇಜು ಸೇರಿದರು. ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಆಡಳಿತಗಾರರಾಗಿ ವೆಂಕಟಸುಬ್ಬಯ್ಯನವರ ಹೆಸರು ವಿಜಯಾ ಕಾಲೇಜಿನೊಂದಿಗೆ ಸಮಾನಾರ್ಥಕವಾಯಿತು.

ವಿದ್ಯೆ, ವಿದ್ವತ್ತು, ಭಾಷಾ ಶಾಸ್ತ್ರದಲ್ಲಿ ನಿಸ್ಸೀಮ ಪಾಂಡಿತ್ಯ ಮತ್ತು ಸೃಜನಶೀಲ ಪ್ರತಿಭೆಗಳಿಂದ ಕೂಡಿದ ಜಿ. ವೆಂಕಟಸುಬ್ಬಯ್ಯ ಕನ್ನಡ ಸಾರಸ್ವತ ಲೋಕದ ಒಂದು ವಿಶಿಷ್ಟ ಮಾದರಿ. ಸ್ನೇಹವಲಯದಲ್ಲಿ, ಶಿಷ್ಯವರ್ಗದಲ್ಲಿ ‘ಸಾಹಿತ್ಯ ಜೀವಿ’ ಎಂದೇ ಸುಪರಿಚಿತರು. ಅವರ ಮೂಲನೆಲೆ ಗಂಜಾಂ ಕರಬೂಜದ ಹಣ್ಣಿಗೆ, ವಜ್ರಪಡಿ ವ್ಯಾಪಾರಕ್ಕೆ ಹೆಸರಾದದ್ದು. ನೆಲದ ಈ ವಿಶಿಷ್ಟ ವರ್ಚಸ್ಸು ಅವರ ವ್ಯಕ್ತಿತ್ವದಲ್ಲಿ, ಸಾಹಿತ್ಯ ರಚನೆಗಳಲ್ಲಿ ಹಾಸುಹೊಕ್ಕಾಗಿದೆ. ಅವರ ಕೃತಿಗಳಲ್ಲಿ ಕರಬೂಜದ ಮಾಧುರ್ಯವೂ ವಜ್ರದ ಘನ ಚೆಲುವೂ ಇದೆ. ಸಂಶೋಧನೆ, ಭಾಷಾಮೂಲಗಳ ಅಧ್ಯಯನ, ನಿಘಂಟು ರಚನೆ-ಸಂಪಾದನೆ, ಪದ ಕೋಶಗಳು, ವಿಮರ್ಶೆ, ಗ್ರಂಥ ಸಂಪಾದನೆ, ಜೀವನ ಚರಿತ್ರೆ-ಹೀಗೆ ವೆಂಕಟಸುಬ್ಬಯ್ಯನವರ ಸೃಜನಶೀಲ ಪ್ರತಿಭೆ ಮತ್ತು ವಿದ್ವತ್ತುಗಳು ಹಲವಾರು ಪ್ರಕಾರ-ಆಯಾಮಗಳಲ್ಲಿ ಕೆಲಸಮಾಡಿದೆ. ಅವರು ಕಾವ್ಯ ಮೀಮಾಂಸೆಯನ್ನು ಚೆನ್ನಾಗಿ ಬಲ್ಲವರು. ಪ್ರಾಚೀನ ಕಾವ್ಯಗಳನ್ನು ಹೃದ್ಗತಮಾಡಿಕೊಂಡವರು. ನಮ್ಮ ಪ್ರಾಚೀನ ಕಾವ್ಯಗಳು ‘ಸೀಗೆ ಬೇಲಿಯಂತೆ’ ಎನ್ನುವುದು ಅವರದೇ ಮಾತು.

‘‘ಈ ಪೊದೆ, ಬೇಲಿ ಮುಳ್ಳುಗಳನ್ನು ಸವರಿ, ಸರಿ ಮಾಡಿ, ಕೊಂಬೆಗಳನ್ನು ಕತ್ತರಿಸಿ, ನಯ ಮಾಡಿ ಕಾವ್ಯವನ್ನು ನಂದನೋದ್ಯಾನವನ್ನಾಗಿಸುವುದು ಸಂಗ್ರಹಕಾರನ ಕರ್ತವ್ಯ’’ ಎಂಬುದು ಜಿವಿಯವರ ಶ್ರದ್ಧಾಪೂರ್ಣ ನಂಬಿಕೆ. ಅವರ ಸಂಪಾದಿತ ಕೃತಿಗಳಲ್ಲಿ ಈ ನಂಬಿಕೆಯ ಛಾಪನ್ನು ನಾವು ಸ್ಪಷ್ಟವಾಗಿ ಕಾಣುತ್ತೇವೆ. ನಯಸೇನ, ನಳಚಂಪೂ, ಅಕ್ರೂರ ಚರಿತೆಯ ಸಂಗ್ರಹ, ಕರ್ಣಕರ್ಣಾಮೃತ, ಕಾವ್ಯ ಲಹರಿ ಮೊದಲಾದವು ವೆಂಕಟಸುಬ್ಬಯ್ಯನವರು ಸಂಪಾದಿಸಿ ಕನ್ನಡಿಗರಿಗೆ ಅರ್ಪಿಸಿರುವ ಕಾವ್ಯ ‘ನಂದನೋದ್ಯಾನ’ಗಳು. ವೆಂಕಟಸುಬ್ಬಯ್ಯನವರ ಕೃತಿಗಳು ಆಳವಾದ ಅಧ್ಯಯನ ಮತ್ತು ವಿದ್ವತ್ಪೂರ್ಣ ವಿಶ್ಲೇಷಣೆ-ಅರ್ಥ ವಿವರಣೆಗಳ ರಸಪಾಕ. ಅವರ ಶೈಲಿ ಹೃದಯಸಂವಾದಿಯಾದದ್ದು. ಪಾಂಡಿತ್ಯದ ಭಾರದಲ್ಲಿ ತಿಣುಕದೆ ನೇರವಾಗಿ ಓದುಗರ ಅಂತಃಕರಣವನ್ನು, ಬುದ್ಧಿಭಾವಗಳನ್ನು ಮೀಟುವಂಥ ಸರಳ ಕನ್ನಡ ಶೈಲಿ.ಇದಕ್ಕೆ ನಿದರ್ಶನವಾಗಿ ಕನ್ನಡ ಸಾಹಿತ್ಯ ನಡೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳೆಸಿದವರು, ಕುಮಾರ ವ್ಯಾಸನ ಅಂತರಂಗ, ಡಿ.ವಿ.ಗುಂಡಪ್ಪ, ಪ್ರೊ.ಟಿ.ಎಸ್.ವೆಂಕಣ್ಣಯ್ಯನವರು, ಕರ್ನಾಟಕ ವೈಭವ ಮತ್ತು ಇತರ ಚಿತ್ರಗಳು, ಸಂಸ್ಕೃತ ರಾಮಾಯಣ ನಾಟಕಗಳಲ್ಲಿ ಪಾತ್ರ ವೈವಿಧ್ಯ, ಇಣುಕು ನೋಟ, ಪರಾಮರ್ಶನ ಇವೇ ಮೊದಲಾದ ಕೃತಿಗಳನ್ನು ಪರಾಮರ್ಶಿಸಬಹುದು.

ಪ್ರೊ. ಜಿವಿಯವರ ಕ್ಲಾಸುಗಳು ನಮಗೆ ತುಂಬ ಅಚ್ಚುಮೆಚ್ಚು ಆಗುತ್ತಿದ್ದುದು ಅವರು ಹಳಗನ್ನಡ ಸಾಹಿತ್ಯಕೃತಿಗಳನ್ನು ತುಂಬ ಆಪ್ತವಾಗಿ ಪರಿಚಯಿಸುತ್ತಿದ್ದ ರೀತಿಯಿಂದಾಗಿ ಎಂದು ಇಂದಿಗೂ ತಮ್ಮ ಪ್ರೀತಿಯ ಗುರುಗಳನ್ನು ಜ್ಞಾಪಿಸಿಕೊಳ್ಳುವ ಶಿಷ್ಯರಿದ್ದಾರೆ. ಹಳಗನ್ನಡದ ಮಹತ್ವದ ಕೃತಿಗಳನ್ನು ಪರಿಚಯಿಸುವ ಜಿವಿಯವರ ಕಾಯಕ ‘ಇಣುಕು ನೋಟ’ದಲ್ಲೂ ಮುಂದುವರಿದಿರುವುದನ್ನು ನಾವು ಕಾಣುತ್ತೇವೆ. ಈ ಪುಸ್ತಕಕ್ಕೆ ಕೊಟ್ಟಿರುವ ‘ಹೊಸಗನ್ನಡದಲ್ಲಿ ಹಳಗನ್ನಡದ ಸಿರಿ’ ಉಪಶೀರ್ಷಿಕೆಯೇ ‘ಇಣುಕು ನೋಟ’ದ ಸೊಗಸು ಶ್ರೀಮಂತಿಕೆಗಳನ್ನು ಸಾರಿ ಹೇಳುತ್ತಿರುವಂತಿದೆ. ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಚಾಮರಸ, ಕುಮಾರವ್ಯಾಸರಿಂದ ಹಿಡಿದು ಬಸವಪ್ಪಶಾಸ್ತ್ರಿಗಳವರೆಗೆ ಹಳೆಗನ್ನಡ-ನಡುಗನ್ನಡ ಕೃತಿಗಳ ಕವಿಕಾವ್ಯ ಹಿನ್ನೆಲೆಯನ್ನೊಳಗೊಂಡ ರಸವಿಮರ್ಶೆ ಇಲ್ಲಿನ ವೈಶಿಷ್ಟ್ಯ. ‘ಪರಾಮರ್ಶನ’ ಇಪ್ಪತ್ತನೆಯ ಶತಮಾನದ ಹೊಸ ಸಾಹಿತ್ಯಕ್ಕೆ ಸ್ಪಂದಿಸುವ ಜಿವಿಯವರ ವಿಮರ್ಶೆಯ ಮತ್ತೊಂದು ಪರಿಯನ್ನು ಅನಾವರಣಗೊಳಿಸುವ ಕೃತಿ.

ವೆಂಕಟಸುಬ್ಬಯ್ಯನವರ ವಿದ್ವತ್ತು ಮತ್ತು ಭಾಷಾ ಶಾಸ್ತ್ರದ ಘನಿಷ್ಠ ತೇಜವನ್ನು ನಾವು ಕಾಣುವುದು ನಿಘಂಟು ಕ್ಷೇತ್ರದಲ್ಲಿ. ಅವರು ನಾಡೋಜರು.ಕನ್ನಡ ನುಡಿಯ ಅರ್ಥ, ವ್ಯಂಜನಾರ್ಥ, ಅದರ ಮೂಲ, ಅದರ ಆಜೂಬಾಜೂ, ವಿಸ್ತಾರಗಳನ್ನು ಕುರಿತು ಅಧಿಕಾರಯುತವಾಗಿ ಜನರಿಗೆ ತಿಳಿವಳಿಕೆ ನೀಡುವುದರಲ್ಲಿ ಅವರು ಅಕ್ಷರಶ: ನಾಡೋಜರು.ಕನ್ನಡಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಅದರ ಆರು ಸಂಪುಟಗಳನ್ನು ಪ್ರಕಟಣೆಗೆ ಸಿದ್ಧಪಡಿಸಿದ್ದು ಜಿವಿಯವರ ಮಹಾಸಾಹಸವೂ ಹೌದು, ಮಹಾನ್ ಸಾಧನೆಯೂ ಹೌದು. ಹೀಗೆ ಶುರುವಾದ ನಿಘಂಟು ಕೆಲಸ, ಮುಂದೆ ನಿಘಂಟು ಶಾಸ್ತ್ರ ರಚನೆಯವರೆಗೆ ಆಳ-ಎತ್ತರ-ವೈವಿಧ್ಯತೆಗಳಲ್ಲಿ ದಷ್ಟಪುಷ್ಟವಾಗಿ ಬೆಳೆಯಿತು. ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು, ಮುದ್ದಣ ಪದ ಪ್ರಯೋಗ ಕೋಶ, ಇಗೋ ಕನ್ನಡ, ಎರವಲು ಪದಕೋಶ, ಪ್ರಿಸಮ್:ಇಂಗ್ಲಿಷ್-ಕನ್ನಡ ನಿಘಂಟು, ಪ್ರಿಸಮ್ ಕನ್ನಡ ಕ್ಲಿಷ್ಟ ಪದಕೋಶ ಹೀಗೆ ಸಾಲುಗಟ್ಟಿ ಬಂದವು. ಇವಕ್ಕೆಲ್ಲ ಶಿಖರಪ್ರಾಯವಾಗಿ ಬಂದಿರುವುದು ‘ಕನ್ನಡ ನಿಘಂಟು ಪರಿವಾರ’. ಈ ನಿಘಂಟುಗಳಲ್ಲಿ ವೆಂಕಟಸುಬ್ಬಯ್ಯನವರ ವಿದ್ವತ್ತು, ಭಾಷಾ ಪಾಂಡಿತ್ಯ, ಶಾಸ್ತ್ರೀಯ ಆಧ್ಯಯನ ಮತ್ತು ಸಂಶೋಧನಾ ಪ್ರತಿಭೆ-ಸೃಜನಶೀಲತೆಗಳು ಸಾಂದ್ರವಾಗಿ ಎದ್ದು ಕಾಣುತ್ತವೆ. ವೆಂಕಟಸುಬ್ಬಯ್ಯನವರು ಪದಗಳ ಹುಟ್ಟು ಅದರ ಮೂಲವನ್ನಷ್ಟೇ ಅಲ್ಲದೆ ಅದರ ಅರ್ಥ-ಧ್ವನಿಗಳನ್ನು ಮನದುಂಬುವಂತೆ ತಿಳಿಸುತ್ತಾರೆ.ಮಾತು ಹೇಗೆ ಮಾಣಿಕ್ಯವಾಗುತ್ತದೆ ಎಂಬುದನ್ನು ತಲಸ್ಪರ್ಶಿಯಾಗಿ ಶೋಧಿಸಿ,ಅದರ ಮತಿತಾರ್ಥವನ್ನು ಬಹಿರಂಗಗೊಳಿಸಿ ನಮ್ಮನ್ನು ವಿಸ್ಮಯಗೊಳಿಸುತ್ತಾರೆ. ಇಗೋ ಕನ್ನಡ ಮತ್ತು ಎರವಲು ಪದಕೋಶಗಳ ಪುಟಪುಟಗಳಲ್ಲೂ ಈ ಮಾತಿಗೆ ಉದಾಹರಣೆಗಳನ್ನು ಕಾಣಬಹುದು. ಎಂದೇ ಜಿವಿಯವರು ಶಬ್ದಕಲ್ಪದ್ರುಮರು.

ಮಾತು, ಸಮಾಜ ಸಂವಹನಕ್ಕೆ ಕಂಡುಕೊಂಡ ಒಂದು ಮಾಧ್ಯಮವಷ್ಟೆ. ಸಮಾಜ ಈ ಮಾಧ್ಯಮವನ್ನು ಎಷ್ಟುಬಗೆಯಲ್ಲಿ, ಯಾವ್ಯಾವ ಪರಿಯಲ್ಲಿ ಬಳಸಿಕೊಂಡಿದೆ ಎಂಬುದನ್ನು ಕಾಣಲು ‘ಇಗೋ ಕನ್ನಡ’ಕ್ಕಿಂತ ಮತ್ತೊಂದು ಆಕರ ಬೇಕಾಗದು. ಪದಗಳ ಹುಟ್ಟು ಮತ್ತು ಅರ್ಥಜಾಯಮಾನಗಳನ್ನು ಕುರಿತು ದಿನ ಪತ್ರಿಕೆಯೊಂದರಲ್ಲಿ ಓದುಗರ ಸಂದೇಹಗಳಿಗೆ ವೆಂಕಟಸುಬ್ಬಯ್ಯನವರು ನೀಡಿದ ಪರಿಹಾರವೇ ‘ಇಗೋ ಕನ್ನಡ’. ಹೀಗೆ ನಾಡಿನ ಬಂಧುಗಳ ಸಂದೇಹ ಪರಿಹರಿಸುವ ವಿದ್ವಾಂಸನು ನಾಡೋಜನಾಗದೆ ಬೇರಾವನು ಆದಾನೂ? ಕನ್ನಡ ಪತ್ರಿಕೋದ್ಯಮದಲ್ಲಿ ನಭೂತೋ ನಭವಿಷ್ಯತಿ ಎನ್ನುವಷ್ಟು ವರ್ಷಗಟ್ಟಳೆ ಸುದೀರ್ಘ ಕಾಲ ನಡೆದು ಸಹಸ್ರಾರು ಜನರ ಭಾಷಾ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿದ ಖ್ಯಾತಿ ‘ಇಗೋ ಕನ್ನಡ’ದ್ದು. ಶಬ್ದಗಳ ಹಿಂದೆ ನಡೆದಿರುವ ಸಾಮಾಜಿಕ ಪಲ್ಲಟಗಳು ಹಾಗೂ ಜನಮನ ಸ್ಪಂದನಗಳ ಇತಿಹಾಸವೆಲ್ಲ ಹರಳುಗಟ್ಟಿ ಅಪರೂಪದ ಶಬ್ದಲೋಕವೊಂದು ಇಲ್ಲಿ ಸೃಷ್ಟಿಯಾಗಿದ್ದು, ಸಮಾಜವೇ ನಮ್ಮೆದುರು ಬಾಯ್ತೆರೆದು ಮಾತಾಡುತ್ತಿರುವಂತೆ ಭಾಸವಾಗುತ್ತದೆ ಇದನ್ನು ಅವಲೋಕಿಸಿದಾಗ. ಎಂದೇ ಸಾಮಾಜಿಕ ನಿಘಂಟು ಎಂಬುದು ಇದಕ್ಕೆ ಅನ್ವರ್ಥನಾಮವೂ ಆಗಿದೆ. ಎಂದೇ, ‘ಇಗೋ ಕನ್ನಡ’, ನಿಘಂಟಿನ ಹೊಸಬಗೆಯೆಂದು ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿರುವುದರಲ್ಲಿ ಅಚ್ಚರಿಯೇನಿಲ್ಲ.

‘ಎರವಲು ಪದಕೋಶ’ ಕನ್ನಡದಲ್ಲಿ ಬಳಕೆಯಲ್ಲಿರುವ ಅನ್ಯಭಾಷೆಗಳಿಂದ ಸ್ವೀಕರಿಸಲಾದ ಶಬ್ದಗಳ ಮೂಲಚೂಲಗಳನ್ನು ವಿವರಿಸುವ ನಿಘಂಟು. ಎರವಲು ಶಬ್ದಗಳು ಕನ್ನಡಕ್ಕೆ ಬಂದಾಗ ಆಗುವ ರೂಪವ್ಯತ್ಯಾಸ ಹಾಗೂ ಆರ್ಥವ್ಯತ್ಯಾಸಗಳ ಸ್ವರೂಪಗಳನ್ನು ವಿವರಿಸಿ, ಇಂಗ್ಲಿಷ್-ಅರಬ್ಬಿ-ಪಾರಸಿ ಹಾಗೂ ಇತರ ಭಾರತೀಯ ಭಾಷೆಗಳಿಂದ ಶಬ್ದಗಳು ಕನ್ನಡಕ್ಕೆ ಆಮದಾಗಿರುವ ಬಗೆಯನ್ನು ಪೀಠಿಕೆಯಲ್ಲಿ ಸವಿಸ್ತಾರವಾಗಿ ತಿಳಿಸಿರುವುದು ಅಭ್ಯಾಸಿಗಳಿಗೆ ಉಪಯುಕ್ತವಾಗಿದೆ. ಇಲ್ಲೂ ಸಹ ಬೇರೆಬೇರೆ ಸಮಾಜಗಳ ಇತಿಹಾಸಗಳು, ನಡಾವಳಿಗಳು ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ‘ಮುದ್ದಣ ಪದಪ್ರಯೋಗ ಕೋಶ’ ಕನ್ನಡಕ್ಕೆ ಅಪರೂಪವಾದದ್ದು. ಕಾವ್ಯದ ರಸಾಸ್ವಾದನೆಗೆ ಸಹಾಯಕವಾಗುವ ಈ ಪದಕೋಶ, ಮುದ್ದಣನ ಶಬ್ದಸಂಪತ್ತನ್ನೂ ಹೊಸ ಶಬ್ದಗಳನ್ನು ಟಂಕಿಸುವುದರಲ್ಲಿ ಅವನಿಗಿದ್ದ ಪ್ರತಿಭಾ ಕೌಶಲವನ್ನೂ ಎತ್ತಿ ತೋರಿಸುತ್ತದೆ. ನಿಘಂಟು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳನ್ನು ವಿಶ್ಲೇಷಿಸುವ, ವ್ಯಾಖ್ಯಾನಿಸುವ ‘ನಿಘಂಟು ಪರಿವಾರ’ ಒಂದು ಶಾಸ್ತ್ರೀಯ ಕೃತಿ. ನಿಘಂಟು ರಚನೆಯ ಹಿನ್ನೆಲೆ, ಅದರ ಚರಿತ್ರೆ, ನಿಘಂಟನ್ನು ಉಪಯೋಗಿಸುವುದು ಹೇಗೆ ಇತ್ಯಾದಿ ಪ್ರಾಥಮಿಕಗಳಿಂದ ಹಿಡಿದು ಶಬ್ದಗಳ ಬೆನ್ನು ಹತ್ತಿ ಹೋಗಿ ನಿಘಂಟು ರಚಿಸಲು ಏನೆಲ್ಲ ಅರ್ಹತೆಗಳಿರಬೇಕು ಎನ್ನುವ ವರೆಗೆ ನಿಘಂಟಿನ ಪರಿವಾರ ಪರಿಕರಗಳನ್ನು ಸ್ವಾರಸ್ಯಕರವಾಗಿ ಕಥಾನಕದಂತೆ ನಿರೂಪಿಸುವ ಈ ಕೃತಿ ಕನ್ನಡದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪದ ಕೃತಿ.

‘ಸಾಹಿತ್ಯ ಜೀವಿ’, ‘ನಿಘಂಟು ಜೀವಿ, ‘ಸ್ನೇಹ ಜೀವಿ’ಯಾದ ಜಿವಿಯವರಿಗೆ ಪ್ರಶಸ್ತಿಪುರಸ್ಕಾರಗಳ ರೂಪದಲ್ಲಿ ಸಾಮಾಜಿಕರು ನೀಡಿರುವ ಮಾನ್ಯತೆಗಳು ಲೆಕ್ಕವಿಲ್ಲದಷ್ಟು. ಜಿವಿಯವರಂತೂ ಇವುಗಳನ್ನೆಲ್ಲ ‘ಲೆಕ್ಕಿಸಿ’ದವರೇ ಅಲ್ಲ. ಎರಡು ವರ್ಷದ ಹಿಂದೆಯಷ್ಟೆ ಪಂಪ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಕನ್ನಡದ ಮನೆಯ ಈ ಹಿರಿಯರಿಗೆ ಈಗ ರಾಷ್ಟ್ರದ ಪರಮೋಚ್ಚ ಗೌರವವಾದ ಪದ್ಮಶ್ರೀ ಪ್ರಶಸ್ತಿ ನೀಡಿ ಸರಕಾರ ತನ್ನನ್ನು ತಾನೇ ಗೌರವಿಸಿಕೊಂಡಂತಾಗಿದೆ. ವೆಂಕಟಸುಬ್ಬಯ್ಯನವರ ತಾಯಿ ಶ್ರೀಮತಿ ಸುಬ್ಬಮ್ಮನವರು ನೂರೇಳು ವರ್ಷ ಸುದೀರ್ಘಾಯುವಾಗಿದ್ದವರು. ತಾಯಿಯಂತೆ ಮಗಳು ಅನ್ನುವ ಗಾದೆಯನ್ನು ಸ್ವಲ್ಪಬದಲಾಯಿಸಿ ತಾಯಿಯಂತೆ ಮಗನೂ ಆ ಪರಿ ಸುದೀರ್ಘಾಯುವಾಗಲಿ ಎಂದು ಹಾರೈಸಿ ಜಿವಿಯವರಿಗೆ ಮೂರು ಸ್ವಸ್ತಿ ಹೇಳೋಣ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News