ಜೇಟ್ಲಿ ಬಜೆಟ್ ಮತ್ತು ದಶಾಶ್ವಮೇಧ

Update: 2017-02-04 18:31 GMT

ಅರುಣ್ ಜೇಟ್ಲಿ ಬಜೆಟ್ ಮಂಡಿಸಿದ ಬಳಿಕ ಅವರ ಸಂಪುಟ ಸಹೋದ್ಯೋಗಿಗಳು ಆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭ ಅದು. ಉತ್ತಮ್ ಬಜೆಟ್ ಎಂಬ ಶಹಬ್ಬಾಸ್‌ಗಿರಿ ಪ್ರಧಾನಿ ನರೇಂದ್ರ ಮೋದಿಯವರಿಂದ ವ್ಯಕ್ತವಾಯಿತು. ಸ್ಮತಿ ಇರಾನಿ, ಪ್ರಕಾಶ್ ಜಾವ್ಡೇಕರ್, ರಾಮ್ ವಿಲಾಸ್ ಪಾಸ್ವಾನ್‌ನಂಥ ಸಚಿವರು ಇದು ಐತಿಹಾಸಿಕ ಎಂದು ಬಣ್ಣಿಸಿದರು, ಇದು ಗ್ರಾಮೀಣರ ಪರ, ಬಡವರ ಪರ ಎಂದು ಹೊಗಳಿದರು. ಆದರೆ ವೆಂಕಯ್ಯ ನಾಯ್ಡು ವಿಚಾರ ಬಂದಾಗ ಇದು ಮತ್ತಷ್ಟು ಅತಿರಂಜಿತವಾಯಿತು.

ನಾಯ್ಡು ಅವರಂತೂ ಇದನ್ನು ‘ದಶಾಶ್ವಮೇಧ ಯಜ್ಞ’ ಎಂದು ಬಣ್ಣಿಸಿ, ‘‘ದೇಶವನ್ನು ಮುನ್ನಡೆಸಲು ಹತ್ತಂಶಗಳ ಸೂತ್ರ ಇದು’’ ಎಂದು ಶ್ಲಾಘಿಸಿದರು. ಟಿವಿ ಪತ್ರಕರ್ತರಿಗಂತೂ ದಿನದ ಉತ್ತಮ ಹೇಳಿಕೆ ಸಿಕ್ಕಿತು. ಅಂತಹ ಉಲ್ಲೇಖಾರ್ಹ ಹೇಳಿಕೆ ನೀಡುವವರು ಯಾರು ಎನ್ನುವುದನ್ನು ಪತ್ರಕರ್ತರು ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ.

ಪ್ರಿಯಾಂಕಾ ಗೇಮ್‌ಪ್ಲಾನ್
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ರಥವನ್ನು ಮುನ್ನಡೆಸುವ ಮುಖ್ಯ ಸಾರಥಿಯಾಗಿ ಪ್ರಿಯಾಂಕಾ ಇದೀಗ ಹೊರಹೊಮ್ಮಿದ್ದಾರೆ. ಆದರೆ ಬಹಿರಂಗವಾಗಿ ತಮ್ಮ ಪಾತ್ರವನ್ನು ನಿರ್ವಹಿಸಲು ಅವರು ಇಚ್ಛಿಸುತ್ತಿಲ್ಲ. ತೆರೆಮರೆಯ ಕೆಲಸಕ್ಕೇ ಅವರ ಆದ್ಯತೆ. ಸಹೋದರನನ್ನು ಸಹೋದರಿ ಹಿಂದಿಕ್ಕಿದ್ದಾರೆ ಎಂಬ ಮಾತು ಬಾರದಂತೆ ನೋಡಿಕೊಳ್ಳುವ ಸಲುವಾಗಿ ಈ ತಂತ್ರ ಎಂಬ ಸಿದ್ಧಾಂತ ಕೇಳಿಬರುತ್ತಿದೆ. ಇಷ್ಟಾಗಿಯೂ ಪ್ರಿಯಾಂಕಾ ಸುದ್ದಿಯಲ್ಲಿದ್ದಾರೆ. ಯಶಸ್ವಿ ಸಂಧಾನಕಾರ ಎನಿಸಿಕೊಂಡ ಗುಲಾಂ ನಬಿ ಆಝಾದ್ ಕೂಡಾ ಅಖಿಲೇಶ್ ಯಾದವ್ ಜತೆಗಿನ ಮೈತ್ರಿ ಕಟ್ಟುವಲ್ಲಿ ವಿಫಲರಾದರೆ, ಪ್ರಿಯಾಂಕಾ ಮಧ್ಯಪ್ರವೇಶ ಇದನ್ನು ಸಾಧ್ಯವಾಗಿಸಿತು. ಇದು ಉಭಯ ಪಕ್ಷಗಳ ನಡುವಿನ ಬಂಧವನ್ನು ಗಟ್ಟಿಗೊಳಿಸಿತು. ಆಕೆ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಸುದ್ದಿಯಲ್ಲಿರುತ್ತಾರೆ ಎನ್ನುವುದು ವಾಸ್ತವ. ಆದರೆ ಪ್ರಿಯಾಂಕಾ ನಿಜವಾಗಿಯೂ ಯಾವಾಗ ಬಹಿರಂಗವಾಗಿ ತೆರೆಯ ಮೇಲೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


ರಾಹುಲ್ ಗಂಭೀರ
ರಾಹುಲ್‌ಗಾಂಧಿ ಮೇಲೆ ದೀರ್ಘಕಾಲದಿಂದಲೂ ಇರುವ ದೊಡ್ಡ ಆರೋಪವೆಂದರೆ ಕೈಹಾಕಿದ ಕೆಲಸವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಕಾರ್ಯವೈಖರಿ ಬದಲಾಗಿದೆ. ಸದ್ಯದಲ್ಲೇ ಪಕ್ಷದ ಜವಾಬ್ದಾರಿಯಲ್ಲಿ ಭಡ್ತಿ ಪಡೆಯಲಿರುವ ಅವರು, ಎಲ್ಲ ಸ್ಥಾಯಿ ಸಮಿತಿಗಳ ಸದಸ್ಯರು ಹೆಚ್ಚು ಜಾಗರೂಕರಾಗಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸೂಕ್ತ ಎನಿಸಿದ ಎಲ್ಲ ಮಾಹಿತಿಗಳನ್ನೂ ಪಕ್ಷದ ವೇದಿಕೆಗೆ ರವಾನಿಸಬೇಕು ಹಾಗೂ ಅದನ್ನು ಪ್ರಧಾನಮಂತ್ರಿ ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಬೇಕು ಎನ್ನುವುದು ಅವರ ಉದ್ದೇಶ. ಹಲವು ಮಂದಿ ಹಿರಿಯ ಕಾಂಗ್ರೆಸ್ ಮುಖಂಡರು ಲೆಕ್ಕಪತ್ರ, ಗೃಹ, ಕಾನೂನು ಮತ್ತು ನ್ಯಾಯ ಹೀಗೆ ಪ್ರಮುಖ ಸಂಸದೀಯ ಸಮಿತಿಗಳ ಮುಖ್ಯಸ್ಥರಾಗಿದ್ದಾರೆ. ಇವರಲ್ಲಿ ಕೆ.ವಿ.ಥಾಮಸ್, ಆನಂದ್ ಶರ್ಮಾ, ಪಿ.ಚಿದಂಬರಂ ಮತ್ತಿತರರು ಸೇರಿದ್ದಾರೆ. ಇತ್ತೀಚೆಗಂತೂ ಛಾಯಾ ಸಂಪುಟ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಪಿ.ಚಿದಂಬರಂ ಅವರು ಬಿಜೆಪಿ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದರು. ಎಷ್ಟು ಕಾಲ ಈ ಸಂಪ್ರದಾಯವನ್ನು ರಾಹುಲ್ ಮುಂದುವರಿಸಿ, ಪಕ್ಷದ ಮುಖಂಡರ ಮೇಲೆ ಒತ್ತಡ ತರುತ್ತಾರೆ ಎನ್ನುವುದು ಪ್ರಶ್ನೆ.


ಪಾರಿಕ್ಕರ್ ಗೋವಾಗೆ ವಾಪಸ್?
ರಾಜಧಾನಿ ವರದಿಗಳ ಪ್ರಕಾರ ಗೋವಾದಲ್ಲಿ ಬಿಜೆಪಿಗೆ ಎಲ್ಲವೂ ನೆಟ್ಟಗಿಲ್ಲ. ಎಷ್ಟರಮಟ್ಟಿಗೆ ಎಂದರೆ, ಬಿಜೆಪಿ ಇಲ್ಲಿ ಚುನಾವಣೆಯಲ್ಲಿ ಗೆದ್ದರೆ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರನ್ನು ಮತ್ತೆ ಗೋವಾ ಸಿಎಂ ಆಗಿ ರಾಜ್ಯ ರಾಜಕೀಯಕ್ಕೆ ಕರೆತರಲಾಗುತ್ತದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ. ಆದರೆ ಗೋವಾದ ಪ್ರಬಲ ಕೆಥೊಲಿಕ್ ಸಮೂಹಕ್ಕೆ ಧನಾತ್ಮಕ ಸಂಕೇತ ರವಾನಿಸುವ ಸಲುವಾಗಿ ನಿತಿನ್ ಗಡ್ಕರಿ ಈ ಹುಳ ಬಿಟ್ಟಿದ್ದಾರೆ ಎಂದು ಹೇಳುವವರೂ ಇದ್ದಾರೆ. ಆದರೆ ವಾಸ್ತವ ಎಂದರೆ ಸ್ವತಃ ಪಾರಿಕ್ಕರ್ ಅವರಿಗೇ ದಿಲ್ಲಿಯ ಮಾಧ್ಯಮ ವಾತಾವರಣ ಹಿಡಿಸುತ್ತಿಲ್ಲ ಎನ್ನಲಾಗಿದೆ. ಗೋವಾ ಜತೆಗೇ ಇನ್ನೂ ಹೆಚ್ಚಿನ ಬಾಂಧವ್ಯ ಇಟ್ಟುಕೊಂಡಿರುವ ಅವರು ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಬಹುಶಃ ಅವರೇ ಗೋವಾ ರಾಜಕೀಯಕ್ಕೆ ಮರಳುವ ಬಯಕೆಯನ್ನು ಪಿಎಂ ಬಳಿ ವ್ಯಕ್ತಪಡಿಸಿದರೆ ಆಶ್ಚರ್ಯ ಇಲ್ಲ.


ಡಿಗ್ಗಿಗೆ ಸ್ವಪಕ್ಷೀಯರಿಂದಲೇ ಸಂಕಷ್ಟ
ಕಾಂಗ್ರೆಸ್ ಪಕ್ಷದ ಜಾತ್ಯತೀತ ಧ್ವಜವನ್ನು ಕನಿಷ್ಠ ಪಕ್ಷ ಸಾಮಾಜಿಕ ಮಾಧ್ಯಮದಲ್ಲಾದರೂ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದಿಗ್ವಿಜಯ ಸಿಂಗ್, ಈ ವಿಚಾರದಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಾರೆ. ಆದರೆ ಸ್ವತಃ ಸಿಂಗ್ ತಮ್ಮ ಪಕ್ಷದೊಳಗೇ ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಬಿಜೆಪಿ ವಿರುದ್ಧ ಭೋಪಾಲ್‌ನಲ್ಲಿ ಇವರು ಆಯೋಜಿಸಿದ್ದ ರ್ಯಾಲಿಯೊಂದರಲ್ಲಿ ಹಲವು ಮಂದಿ ಕಾಂಗ್ರೆಸ್ ಮುಖಂಡರೇ ದಿಗ್ವಿಜಯ ಸಿಂಗ್ ಅವರನ್ನು ಟೀಕಿಸುವ ಮಟ್ಟಕ್ಕೆ ಹೋದರು. ಮಧ್ಯಪ್ರದೇಶದಲ್ಲಿ ಪಕ್ಷಕ್ಕೆ ಹಾನಿಯಾಗಲು ದಿಗ್ವಿಜಯ ಸಿಂಗ್ ಅವರೇ ನೇರ ಹೊಣೆ ಎಂಬ ಆರೋಪ ವ್ಯಕ್ತವಾಯಿತು. ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ, ದಿಗ್ವಿಜಯ ಸಿಂಗ್ ಅವರನ್ನು ಟೀಕಿಸಿದವರಲ್ಲಿ ಮೊದಲಿಗರು. ಎಂಪಿಸಿಸಿ ಅಧ್ಯಕ್ಷ ಅರುಣ್ ಯಾದವ್ ಈ ಬಗ್ಗೆ ಹೇಳಿಕೆ ನೀಡಿ, ಈ ಬಗ್ಗೆ ಚರ್ಚಿಸಲು ಸಿಂಗ್ ಹಾಗೂ ಇತರ ಮುಖಂಡರನ್ನು ಆಹ್ವಾನಿಸಿದ್ದಾಗಿ ಘೋಷಿಸಿದರು. ಆದರೆ ದಿಗ್ವಿಜಯ ಸಿಂಗ್ ಗೋವಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವುದು ಅವರ ಆಪ್ತವಲಯದಿಂದ ಬಂದ ಪ್ರತಿಕ್ರಿಯೆ. ಆದರೆ 10 ವರ್ಷ ದಿಗ್ವಿಜಯ್ ಸಿಂಗ್ ಆಳಿದ ತಮ್ಮ ಸ್ವಂತ ರಾಜ್ಯದಲ್ಲಿ ಬಹುತೇಕ ಮಂದಿ ಅವರನ್ನು ಇಷ್ಟಪಡುತ್ತಿಲ್ಲ ಎನ್ನುವುದು ವಾಸ್ತವ.

Writer - ಪತ್ರಕರ್ತ

contributor

Editor - ಪತ್ರಕರ್ತ

contributor

Similar News

ನಾಸ್ತಿಕ ಮದ