ಒಂದು ತೆಗೆದುಕೊಂಡರೆ ಮೂರು ಫ್ರೀ...!
ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಮುಖಂಡ ಯಡಿಯೂರಪ್ಪ ಅವರ ನಡುವೆ ಬಿರುಸಿನ ವ್ಯಾಪಾರ ನಡೆಯುತ್ತಿತ್ತು. ಸಿದ್ದರಾಮಯ್ಯ ಅವರು ಒಂದು ತೆಗೆದುಕೊಂಡರೆ ಇನ್ನೂ ಮೂರು ಫ್ರೀ ಕೊಡ್ತೇನೆ ಎಂದು ಯಡಿಯೂರಪ್ಪ ಅವರಿಗೆ ಆಮಿಷ ಒಡ್ಡುತ್ತಿದ್ದರೆ, ಯಡಿಯೂರಪ್ಪರಿಗೆ ಆ ಆಫರ್ ಅಷ್ಟು ಇಷ್ಟವಾಗಲಿಲ್ಲ. ''ಫ್ರೀ ಆಫರ್‌ಗಳೆಲ್ಲ ಬೇಡ. ವಸ್ತುಗಳು ಕಳಪೆಯಾದರೆ ಮಾತ್ರ ಫ್ರೀ ಆಫರ್‌ಗಳ ಮೂಲಕ ಮಾರಲಾಗುತ್ತದೆ. ಜನರಿಗೆ ಅನುಮಾನ ಬಂದು ಬಿಡುತ್ತದೆ....''
''ನೋಡ್ರಿ...ಕಳಪೆ ವಸ್ತುವಾಗಿದ್ದರೆ ನಾವು ಅವರನ್ನು ವಿದೇಶಾಂಗ ಮಂತ್ರಿ ಮಾಡುತ್ತಿದ್ದೇವಾ? ರಾಜ್ಯದ ನಂಬರ್ ವನ್ ಮುಖ್ಯಮಂತ್ರಿ ಕಣ್ರೀ ಅವರು...'' ಸಿದ್ದರಾಮಯ್ಯ ವರ್ಣಿಸುತ್ತಾ ಇದ್ದರು.
''ಆದರೂ ತುಂಬಾ ಹಳೆಯದಾಯಿತು...ಇದನ್ನು ಈಗ ನಾವು ಇಟ್ಟುಕೊಳ್ಳುವುದು ಹೇಗೆ...ಬರೇ ಬಿಳಿಯಾನೆಯಾಗಿದ್ದರೆ ಪರವಾಗಿರಲಿಲ್ಲ...ಇದು ಮುದಿಯಾನೆ ಬೇರೆ. ಇದನ್ನು ಸುಮ್ಮನೆ ದೊಡ್ಡಿಯೊಳಗಿಟ್ಟು ಸಾಕಬೇಕು...'' ಯಡಿಯೂರಪ್ಪ ನಿರಾಸಕ್ತಿ ಪ್ರದರ್ಶಿಸಿದರು.
''ನೋಡ್ರಿ...ಹಳೆಯದಾದಷ್ಟು ಅದಕ್ಕೆ ಬೆಲೆ ಜಾಸ್ತಿ. ಆದುದರಿಂದಲೇ ನಮ್ಮ ಪಕ್ಷದಲ್ಲಿ ಹಳೆಯದಾದುದನ್ನು ಇನ್ನೂ ಇಟ್ಟು ಸಾಕುತ್ತಿದ್ದೇವೆ. ವಿದೇಶಗಳಲ್ಲಿ ಹೊಸ ವೈನಿಗಿಂತ ಹಳೆ ವೈನಿಗೇ ಬೆಲೆ ಜಾಸ್ತಿ ನೋಡಿ. ಹಾಗೆಯೇ ಇದು ಕೂಡ. ಸ್ವಲ್ಪ ನಡೆಯುವುದಕ್ಕೆ ಅವರಿಗೆ ಕಷ್ಟವಾಗಬಹುದು. ಬಾಗಿರಬಹುದು. ಆದರೆ ಅದಕ್ಕೆ ಕಾರಣ ಅವರ ವಯಸ್ಸಲ್ಲ, ಅವರ ಜೀವನಾನುಭವ. ಅನುಭವದ ಭಾರದಿಂದ ಅವರು ನಡೆಯುವಾಗ ತಡವರಿಸುತ್ತಾರೆ...'' ಸಿದ್ದರಾಮಯ್ಯ ಅವರು ಯಡಿಯೂರಪ್ಪರ ಮನವೊಲಿಸತೊಡಗಿದರು.
''ಆದರೆ, ವಿದೇಶದಲ್ಲಿ ಯಾವುದೋ ಸಭೆಯಲ್ಲಿ ಇನ್ನಾವುದೋ ಸಭೆಯ ಭಾಷಣ ಓದಿದರಲ್ಲ...ಅವರ ಕೆಲವು ಪಾರ್ಟ್ಸ್‌ಗಳು ದುರ್ಬಲ ಆಗಿದೆ ಎನ್ನುವುದನ್ನು ಕೇಳಿದ್ದೇನೆ...'' ಯಡಿಯೂರಪ್ಪ ಹೇಳಿದರು.
''ಕೆಲವು ಪಾರ್ಟ್ಸ್‌ಗಳಷ್ಟೇ ದುರ್ಬಲ ಆಗಿದೆ. ಆದರೆ ಮೆದುಳು ಮಾತ್ರ ಫ್ರೆಶ್ ಆಗಿದೆ....''
''ಅದು ಹೇಗೆ ...? ದೇಹದ ಎಲ್ಲ ಅವಯವಗಳೂ ದುರ್ಬಲ ಆಗುವಾಗ, ಮೆದುಳೂ ದುರ್ಬಲ ಆಗಬೇಕಲ್ಲ...?'' ಯಡಿಯೂರಪ್ಪ ವಾದ ಮಾಡಿದರು.
''ಆಗಲ್ಲರೀ...ಯಾವುದೆಲ್ಲ ಬಳಕೆಯಾಗಿದೆಯೋ ಅದೆಲ್ಲ ದುರ್ಬಲ ಆಗುವುದು, ಡ್ಯಾಮೇಜ್ ಆಗುವುದು ಸಹಜ. ಆದರೆ ಮೆದುಳು ಬಳಕೆಯೇ ಆಗಿಲ್ಲ. ಅದನ್ನು ನೀವು ಬಳಸಬಹುದು...ಅದಿನ್ನೂ ಫ್ರೆಶ್ ಆಗಿಯೇ ಇದೆ...'' ಸಿದ್ದರಾಮಯ್ಯ ಸಮರ್ಥಿಸಿದರು.
''ಏನೋಪ್ಪಾ...ವಿದೇಶಾಂಗ ವ್ಯವಹಾರ ನಿರ್ವಹಿಸಲಿಕ್ಕೆ ಮೆದುಳಿನ ಅಗತ್ಯ ಇಲ್ಲ ಎಂದು ಇಟ್ಟುಕೊಳ್ಳೋಣ. ಆದರೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಮೆದುಳು ಬಳಕೆಯಾಗಿರಲಿಲ್ಲವೇ? ಅದರ ಬಗ್ಗೆ ಏನು ಹೇಳ್ತೀರಾ....?'' ಯಡಿಯೂರಪ್ಪ ಸವಾಲು ಹಾಕಿದರು.
''ಅಲ್ರೀ...ಇಡೀ ಬೆಂಗಳೂರನ್ನು ಐಟಿ ಬಿಟಿಯವರಿಗೆ ಮುಕ್ಕಾಲು ಬೆಲೆಗೆ ಹಂಚಿದರು. ಬೆಂಗಳೂರನ್ನು ಸಿಂಗಾಪುರ ಮಾಡುವುದಕ್ಕೆ ಮುಂದಾದರು. ಮೆದುಳು ಬಳಕೆ ಮಾಡಿದ್ದಿದ್ದರೆ ಇದನ್ನೆಲ್ಲ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡುತ್ತಿದ್ದರಾ? ಅವರು ಸಮಾಜವಾದಿ ಪಕ್ಷದಲ್ಲಿದ್ದಾಗ ಸ್ವಲ್ಪ ಮೆದುಳು ಯೂಸ್ ಮಾಡಿದ್ರು. ಆ ಬಳಿಕ ಅದನ್ನು ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿ ಭದ್ರವಾಗಿ ಇಟ್ಟುಕೊಳ್ಳಿ ಎಂದು ಕೊಟ್ಟು ಬಿಟ್ಟಿದ್ರು. ಮೊನ್ನೆ ತಾನೆ, ಅದನ್ನು ವಾಪಸ್ ತೆಗೆದುಕೊಂಡಿದ್ದಾರೆ....''
''ಆದರೂ, ಅವರನ್ನು ಸಾಕುವಂತಹ ದೊಡ್ಡ ಕೊಟ್ಟಿಗೆ ನಮ್ಮಲ್ಲಿಲ್ಲ....ವ್ಯರ್ಥ ಹುಲ್ಲು ಹಾಕಬೇಕು. ಹಾಲು ಕೊಡದ ಆನೆ ಬೇರೆ....ನಮಗೇನು ಲಾಭ?'' ಯಡಿಯೂರಪ್ಪ ವ್ಯವಹಾರದ ಮಾತನಾಡಿದರು.
''ಸರಿ. ಎಸ್. ಎಂ. ಕೃಷ್ಣ ಅವರನ್ನು ನೀವು ತೆಗೆದುಕೊಂಡದ್ದೇ ಆದರೆ, ಜಾಫರ್ ಶರೀಫ್‌ನ್ನು ಫ್ರೀಯಾಗಿ ಕೊಡ್ತೇವೆ....'' ಇನ್ನೊಂದು ಆಫರ್ ಇಟ್ಟರು ಸಿದ್ದರಾಮಯ್ಯ.
''ಅಯ್ಯೋ...ಅದನ್ನು ಮಾರುಕಟ್ಟೆಯಲ್ಲಿ ಮಾರಿದ್ರೆ ಏನೂ ಸಿಗಲಿಕ್ಕಿಲ್ಲ...ಮುದಿ ಮೇಕೆ ಅದು. ....ಈ ಹಿಂದೆ ಅವರ ಜೊತೆಗೆ ಒಂದಿಷ್ಟು ಅಲ್ಪಸಂಖ್ಯಾತ ಕುರಿಗಳಾದರೂ ಇದ್ದರು. ಈಗ ಬರಿಗೈಯಲ್ಲಿದ್ದಾರೆ....ಅವರಿಗೆ ಪಕ್ಷದಿಂದ ಪ್ರತಿದಿನ ಬಿರಿಯಾನಿ ಹಾಕುವುದು ಯಾರು?'' ಯಡಿಯೂರಪ್ಪ ಬೆದರಿದರು.
''ಪುಕ್ಕಟೆ ಕೊಡುವುದು ತಾನೆ. ತೆಗೆದುಕೊಳ್ಳಿ....ಒಂದು ಆರಾಮ ಕುರ್ಚಿಯನ್ನು ಪಕ್ಷದ ಜಗಲಿಯಲ್ಲಿ ಹಾಕಿಕೊಡಿ. ಅವರು ತಲೆಯಲ್ಲಿ ಟೊಪ್ಪಿ, ಹೆಗಲಲ್ಲಿ ಹಸಿರು ಶಾಲು ಹಾಕಿ ಕುಳಿದರೆ ಒಂದರೆಡು ಅಲ್ಪಸಂಖ್ಯಾತ ಕುರಿಗಳಾದರೂ ನಿಮ್ಮ ವರಾಂಡಕ್ಕೆ ಬರದೇ ಇರಲಿಕ್ಕಿಲ್ಲ...'' ''ಅವರು ಮಾತ್ರ ಬಂದರೆ ಆಗಬಹುದು. ಅವರ ಇಡೀ ಫ್ಯಾಮಿಲಿಯನ್ನು ಸಾಕುವುದು ಕಷ್ಟ ಕಣ್ರೀ...'' ಯಡಿಯೂರಪ್ಪ ನಿರಾಕರಿಸಿದರು.
''ಸರಿ ಹಾಗಾದರೆ. ಜಾಫರ್ ಶರೀಫ್ ಜೊತೆಗೆ ಸಿ. ಎಂ. ಇಬ್ರಾಹೀಂನ್ನೂ ಫ್ರೀಯಾಗಿ ಕೊಡ್ತೇವೆ. ಈಗ ಕೃಷ್ಣ ಅವರನ್ನು ಬಿಜೆಪಿಗೆ ತಗೋತೀರಾ...'' ವಿನೀತವಾಗಿ ಸಿದ್ದರಾಮಯ್ಯ ಗೋಗರೆದರು.
''ಇಬ್ರಾಹೀಂ ಸ್ವಲ್ಪ ಆಗಬಹುದು...ಆದರೆ ಪಕ್ಷಕ್ಕೆ ವಿಶೇಷ ಪ್ರಯೋಜನವೇನೂ ಇಲ್ಲ. ಅವರ ಜನರೇ ಅವರನ್ನು ನಂಬುವುದಿಲ್ಲ...''
''ನೋಡ್ರೀ...ನಿಮ್ಮ ಬಿಜೆಪಿಗೆ ಸಿಎಂ ಇಬ್ರಾಹೀಂ ಹೇಳಿ ಮಾಡಿಸಿದ ಜನ. ಅವರಿಗೆ ಭಗವದ್ಗೀತೆಯ ಶ್ಲೋಕಗಳು ಬಹಳಷ್ಟು ಗೊತ್ತು. ಮೊನ್ನೆ ಪರ್ಯಾಯದಲ್ಲಿ ಮಾಡಿದ ಭಾಷಣ ಕೇಳಿದ್ದೀರಲ್ಲ...ಪೇಜಾವರರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಆಗಲೇ ಅವರನ್ನು ನಾನು ಬಿಜೆಪಿಗೆ ಫ್ರೀಯಾಗಿ ಕೊಡಬೇಕು ಎಂಬ ಮನಸ್ಸು ಮಾಡಿದ್ದೆ. ಈಗ ಸಮಯ ಒದಗಿತು ನೋಡಿ....ಜೊತೆಗೆ ನಿಮ್ಮ ಪಕ್ಷದಲ್ಲಿ ಜೋಕರ್‌ಗಳೇ ಇಲ್ಲ. ನಗಿಸುವುದಕ್ಕೆ ಒಂದು ಜನ ಬೇಡವೇ?....''
''ಜೋಕರ್‌ಗಳಿಗೆ ನಮ್ಮ ಪಕ್ಷದಲ್ಲಿ ಬೇಕಾದಷ್ಟು ಜನ ಇದ್ದಾರೆ....ಆದರೆ ಅವರು ನಗಿಸಿದರೆ ನನಗೆ ಅಳು ಬರುತ್ತದೆ.... ಏನೋ, ವ್ಯವಹಾರ ಕೂಡಿ ಬರುವ ಹಾಗೆ ಕಾಣುವುದಿಲ್ಲ....'' ಯಡಿಯೂರಪ್ಪ ಅರೆ ಮನಸ್ಸು ಮಾಡಿದರು.
''ಹಾಗಾದರೆ, ಎಸ್. ಎಂ. ಕೃಷ್ಣ ಜೊತೆಗೆ ಜಾಫರ್ ಶರೀಫ್, ಇಬ್ರಾಹಿಂ, ಜನಾರ್ದನ ಪೂಜಾರಿ ಮೂವರನ್ನೂ ಫ್ರೀಯಾಗಿ ಕೊಡ್ತೇವೆ....ಈಗ ಓಕೇನಾ...?'' ಸಿದ್ದರಾಮಯ್ಯ ಕೇಳಿದರು.
''ಪೂಜಾರಿಯನ್ನು ಕಟ್ಟಿಕೊಂಡು ನಾವೇನು ಮಾಡುವುದು?''
''ನೋಡ್ರೀ...ಪೂಜಾರಿ ಅವರು ಪ್ರೆಸ್‌ಮೀಟ್ ಮಾಡುವುದರಲ್ಲಿ ನಿಪುಣರು. ಅವರಿಗೆ ನಿಮ್ಮ ಪಕ್ಷದ ಕಚೇರಿಯಲ್ಲಿ ಜಾಗ ಕೊಡಬೇಕು ಎಂದೇನಿಲ್ಲ. ಒಂದು ಪ್ರೆಸ್ ಕ್ಲಬ್‌ನಲ್ಲಿ ಒಂದು ಚಾಪೆ, ಒಂದಿಷ್ಟು ಜಾಗ ಕೊಟ್ಟು ಬಿಡಿ. ದಿನ ಬೆಳಗ್ಗೆ ರಾತ್ರಿ ಪ್ರೆಸ್ ಮೀಟ್ ಮಾಡುತ್ತಾ ಅವರಷ್ಟಕ್ಕೆ ಅವರು ಇರುತ್ತಾರೆ....''
''ಊಹೂಂ...ಇದೆಲ್ಲ ಆಗಲಿಕ್ಕಿಲ್ಲ...ನಾನೊಂದು ಆಫರ್ ಕೊಡುತ್ತೇನೆ. ಅದು ನಿಮಗೆ ಇಷ್ಟವಾದರೆ ನಾನು ಕೃಷ್ಣ ಅವರನ್ನು ಬಿಜೆಪಿಗೆ ಕರೆಸಿಕೊಳ್ಳುತ್ತೇನೆ...''
''ಏನದು...? ಏನದು...?'' ಸಿದ್ದರಾಮಯ್ಯ ಅವಸರಿಸಿದರು.
''ನಾವು ಅದಲು ಬದಲು ಮಾಡಿಕೊಳ್ಳುವ. ನಮ್ಮದೊಂದು ನೀವು ತೆಗೆದುಕೊಳ್ಳಿ. ನಿಮ್ಮದನ್ನು ನಾವು ತೆಗೆದುಕೊಳ್ಳುತ್ತೇವೆ...''
''ಓಕೆ...ಡನ್. ಹೇಳಿ, ನಿಮ್ಮಿಂದ ಯಾರನ್ನು ಕೊಡ್ತೀರಿ...'' ಸಿದ್ದರಾಮಯ್ಯ ಕೇಳಿದರು.
''ನಮ್ಮ ಪಕ್ಷದಿಂದ ನಿಮಗೆ ಈಶ್ವರಪ್ಪರನ್ನು ಕೊಡ್ತೇವೆ. ಬದಲಿಗೆ ಎಸ್.ಎಂ.ಕೃಷ್ಣರನ್ನು ನಾವು ಇಟ್ಟುಕೊಳ್ಳುತ್ತೇವೆ...'' ಯಡಿಯೂರಪ್ಪ ಪ್ರಸ್ತಾಪವಿಟ್ಟರು.
ಬೆಚ್ಚಿ ಬಿದ್ದ ಸಿದ್ದರಾಮಯ್ಯ....''ಈಗ ಬಂದೆ...ಹೈಕಮಾಂಡ್ ಅರ್ಜೆಂಟಾಗಿ ಕರೆದಿದ್ದಾರೆ...ಮತ್ತೆ ಮಾತನಾಡುವ...'' ಎಂದವರೇ ಜಾಗ ಖಾಲಿ ಮಾಡಿದರು. ಯಡಿಯೂರಪ್ಪ ಒಳಗೊಳಗೆ ನಗುತ್ತಾ ಮೀಸೆ ತಿರುವಿಕೊಂಡರು.
-chelayya@gmail.com