‘ಚಾಳ್’ ಬದುಕಿನ ಮನುಷ್ಯ ಸಂಸ್ಕೃತಿ

Update: 2017-02-06 18:36 GMT

ಮುಂಬೈಯ ‘ಚಾಳ್’

 ಮಧ್ಯ ಮುಂಬೈ ಮತ್ತು ದಕ್ಷಿಣ ಮುಂಬೈಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಬೀರಿ, ಮುಂಬೈಯ ಇತಿಹಾಸದಲ್ಲಿ ತಾನೂ ಸ್ಥಾನ ಪಡೆದುಕೊಂಡಿರುವ ಮುಂಬೈಯ ‘ಚಾಳ್’ ಸಂಸ್ಕೃತಿಗೆ ಅಪೂರ್ವ ಪರಂಪರೆ ಇದೆ. ಈ ಚಾಳ್ ಬದುಕಿನ ಕುರಿತಂತೆ ಹಲವಾರು ಕಾದಂಬರಿಗಳು, ಫಿಲ್ಮ್‌ಗಳು ಬಂದಿವೆ. ಅಲ್ಲಿನ ಬದುಕು ಮನುಷ್ಯ ಸಂಸ್ಕೃತಿಯ ಅಪೂರ್ವ ಚಿತ್ರಣ ನೀಡುವಂಥದ್ದು. ಇಪ್ಪತ್ತನೆಯ ಶತಾಬ್ದಿಯಲ್ಲಿ ಮುಂಬೈಯಲ್ಲಿ ಬಟ್ಟೆ ಮಿಲ್‌ಗಳು ವಿಜೃಂಭಿಸುತ್ತಿದ್ದ ಆ ದಿನಗಳಲ್ಲಿ ಮಿಲ್ ಪರಿಸರದ ಕ್ಷೇತ್ರಗಳಲ್ಲಿ ಕಟ್ಟಿದ ಚಾಳ್‌ಗಳಲ್ಲಿ ಜನ ವಾಸ ಮಾಡತೊಡಗಿದರು. ಹತ್ತೊಂಬತ್ತನೆ ಶತಾಬ್ದಿಯ ಕೊನೆಗೆ ಉದ್ಯೋಗ-ಬದುಕು ಅರಸುತ್ತಾ ಬಂದ ಜನ ಮಿಲ್ ಪರಿಸರದ ಸರಕಾರಿ ಅಥವಾ ಖಾಸಗಿ ಜಮೀನು ಮಾಲಕರ ಜಮೀನಿನಲ್ಲಿ ವಾಸ್ತವ್ಯ ಹೂಡಿದಾಗ ಈ ಚಾಳ್‌ಗಳು ನಿರ್ಮಾಣವಾಗತೊಡಗಿತು. ಸ್ಥಳೀಯ ಭಾಷೆ ಮರಾಠಿಯಲ್ಲಿ ಖೋಲಿ ಎನ್ನಲಾಗುವ 10x12 ಅಡಿಗಳ ಒಂದೋ- ಎರಡೋ ಕೋಣೆಗಳುಳ್ಳ ಚಾಳ್‌ನಲ್ಲಿ ವಾಸಮಾಡಲು ಮುಂದಾದರು. ಸಾಮಾನ್ಯವಾಗಿ ಚಾಳ್‌ನ ಒಂದು ಮಾಳಿಗೆಯಲ್ಲಿ ಎಂಟು ಅಥವಾ ಹತ್ತು ಕೋಣೆ (ಖೋಲಿ)ಗಳಿರುವುವು. (ತಳದಲ್ಲೂ ಇಷ್ಟೇ ಕೋಣೆಗಳಿರುವುದು) ದೊಡ್ಡ ಚಾಳ್ ಆಗಿದ್ದರೆ ಒಂದು ಮಾಳಿಗೆಯಲ್ಲಿ ಹದಿನೈದು....ಇಪ್ಪತ್ತು ಖೋಲಿಗಳನ್ನು ಕಾಣಬಹುದು. ಒಂದು ಮಾಳಿಗೆಯ ಚಾಳ್ ಆಗಿದ್ದರೆ ಇದಕ್ಕೆ ‘ಬೈಠೀ ಚಾಳ್’ ಎನ್ನುತ್ತಿದ್ದರು. ಹಳೆಯ ಚಾಳ್‌ಗಳ ಮಾಡು-ಕಂಬಗಳು ಮರದ್ದಾಗಿರುತ್ತದೆ. ಉದ್ದಕ್ಕೆ ಇರುವ ಈ ಕೋಣೆಗಳಲ್ಲಿ ವಿವಿಧ ಪರಿವಾರಗಳು ವಾಸಿಸುತ್ತವೆ. ಅವುಗಳಲ್ಲಿ ಎರಡು ಮಾಳಿಗೆ-ಮೂರು ಮಾಳಿಗೆಗಳ ಚಾಳ್‌ಗಳೂ ಇವೆ. ಹತ್ತು ಕೋಣೆಗಳ ಇಲ್ಲಿನ ನಿವಾಸಿಗಳೆಲ್ಲರಿಗೂ ಕಾಮನ್ ಶೌಚಾಲಯ. ಪ್ರತೀ ಮಾಳಿಗೆಯಲ್ಲೂ ಇದೇ ದೃಶ್ಯ. ಸಾರ್ವಜನಿಕ ನಳ್ಳಿಯಲ್ಲಿ ದಿನವಿಡೀ ನೀರಿಳಿಯುವ ಸದ್ದು. ಕಟ್ಟಡಗಳ ನಡುವೆ ಚಿಕ್ಕ ಪ್ರಾಂಗಣ. ಸಾರ್ವಜನಿಕ ಚಟುವಟಿಕೆ-ಉತ್ಸವ-ಹಬ್ಬಗಳ ಸಮಯ ಪೂಜಾ ಮಂಟಪ ಮತ್ತಿತರ ನಿರ್ಮಾಣಕ್ಕಾಗಿ ಇರುವ ಜಾಗ. ಇಲ್ಲೇ ಮಕ್ಕಳು ಆಡುತ್ತಾರೆ.

ಮಧ್ಯಾಹ್ನ ನಂತರ ತಮ್ಮ ಮನೆ ಕೆಲಸಗಳು ಮುಗಿದ ನಂತರ ಗೃಹಿಣಿಯರು ತಮ್ಮ ಖೋಲಿಗಳಿಂದ ಹೊರಬಂದು ಉದ್ದಕ್ಕೆ ತಮ್ಮ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ದೃಶ್ಯ ಇರುತ್ತದೆ. ಚಿಕ್ಕದಾದ ಈ ಒಂದೋ-ಎರಡೋ ಖೋಲಿ(ಕೋಣೆ)ಗಳಲ್ಲಿ ಒಂದು ಮೂಲೆಯಲ್ಲಿ ಬಾತ್‌ರೂಂ, ಕನ್ನಡಿ, ನೀರಿನ ಡ್ರಮ್, ಆಹಾರ ಧಾನ್ಯ, ಪಾತ್ರೆಗಳನ್ನಿಡುವ ಅಲ್ಮಾರಿ, ದೇವರ ಫೋಟೋ, ಹೊರಗಡೆ ಧೂಳು ತಿಂದ ಚಪ್ಪಲಿಗಳು, ಹಗ್ಗದಲ್ಲಿ ಉದ್ದಕ್ಕೆ ಒಣಗಲು ಹಾಸಿದ ಒದ್ದೆ ಬಟ್ಟೆಗಳು, ಚಿಕ್ಕ ಕುಂಡದಲ್ಲಿ ತುಳಸಿಗಿಡ..... ಇದು ಮುಂಬೈಯ ಚಾಳ್‌ಗಳ ಒಂದು ಸಾಮಾನ್ಯ ದೃಶ್ಯ. ದೀಪಾವಳಿಗೆ ಎಲ್ಲರೂ ಒಂದೇ ಪ್ರಕಾರದ, ಒಂದೇ ಬಣ್ಣದ ಕಂದೀಲು(ಗೂಡುದೀಪ) ತಾಗಿಸುತ್ತಾರೆ.

 ಮಧ್ಯ ಮುಂಬೈಯ ವರ್ಲಿಯ ಬಿ.ಡಿ.ಡಿ. ಚಾಳ್, ಭೈಕಲಾದ ಚಾಳ್, ಕುರ್ಲಾದಲ್ಲಿನ ಚಾಳ್‌ಗಳು..... ಹೀಗೆ ಮಿಲ್ ಪರಿಸರದ ನೂರಾರು ಚಾಳ್‌ಗಳು ಮುಂಬೈಯಲ್ಲಿ ಪ್ರಸಿದ್ಧಿಯಲ್ಲಿವೆ. ಈ ಚಾಳ್‌ಗಳ ಒಳಗೆ ಮಾನವೀಯ ಅನುಕಂಪದ ಕತೆಗಳು ಅಡಗಿಕೊಂಡಿವೆ. ಪ್ರಖ್ಯಾತ ಲೇಖಕ ಕಿರಣ್ ನಗರ್‌ಕರ್ ಇಂಗ್ಲಿಷ್‌ನಲ್ಲಿ ಈ ಚಾಳ್ ಬದುಕಿನ ಕಾದಂಬರಿ ಬರೆದಿದ್ದರು. ಯಾಕೆಂದರೆ ಇವರು ಬದುಕಿನ ಒಂದಿಷ್ಟು ಪಾಲು ಬಿ.ಡಿ.ಡಿ. ಚಾಳ್‌ನಲ್ಲಿ ಕಳೆದಿದ್ದಾರೆ. ಇನ್ನು ಕೆಲವರು ಮರಾಠಿ ಕಾದಂಬರಿಗಳನ್ನೂ ಬರೆದವರಿದ್ದಾರೆ. ಅರುಣ್ ಕೊಲ್ಟಕರ್, ದಿಲೀಪ್ ಚಿತ್ರೆ, ನಾಮ್‌ದೇವ್ ಢಸಾಲ್.... ಮೊದಲಾದವರೆಲ್ಲ ಕವಿತೆ, ಲೇಖನ ಬರೆದಿದ್ದಾರೆ. ನಿನಾದ್ ಶೇಟ್ಯೆ ಅವರು ಬಹುಚರ್ಚಿತ ‘ಚಾಳ್ ನಾವಾಚೀ ಖಟ್ಯಾಳ್ ಬಸ್ತಿ’ ಇಂತಹ ನಾಟಕ ಬರೆದಿದ್ದಾರೆ. ಸಯೀದ್ ಮಿರ್ಜಾ ಅವರ ‘ಮೋಹನ್ ಜೋಶಿ ಹಾಜಿರ್ ಹೋ’, ಸಾಯಿ ಪರಾಂಜಪೆ ಅವರ ‘ಕಥಾ’....ಮುಂತಾದ ಸಿನೆಮಾಗಳಲ್ಲಿ ಮುಂಬೈಯ ಚಾಳ್ ಮತ್ತು ಅದರೊಳಗಿನ ಬದುಕಿನ ಪಾತ್ರಗಳನ್ನು ಕಾಣಬಹುದು. ನಾನಾ ಪಾಟೇಕರ್ ಅವರ ಕೆಲವು ಸಿನೆಮಾಗಳನ್ನು ಮರೆಯಲು ಸಾಧ್ಯವೇ?

ಒಂದೊಮ್ಮೆ ಮೂರು-ಮೂರು ಪೀಳಿಗೆಗಳು ಈ ಕೋಣೆಗಳಲ್ಲಿ ಜೊತೆಯಾಗಿ ಬದುಕು ಸಾಗಿಸಿದ್ದರು ಎಂದರೆ ಈಗಿನವರಿಗೆ ಅಚ್ಚರಿಯಾದೀತು. ಹೆಚ್ಚಿನ ಕೋಣೆಗಳ ಬಾಗಿಲು ದಿನವಿಡೀ ತೆರೆದೇ ಇರುತ್ತಿತ್ತು. ಹಾದು ಹೋಗುವವರು ನೋಡಿದರೂ ಏನೂ ಅನಿಸುತ್ತಿರಲಿಲ್ಲ. ಅಕ್ಕಪಕ್ಕದ ಖೋಲಿಗಳಲ್ಲಿ ವಾಸವಿದ್ದವರಲ್ಲಿ ಒಂದು ಆತ್ಮೀಯ ದೃಶ್ಯವಿರುತ್ತಿತ್ತು. (ಈಗಿನ ಫ್ಲ್ಯಾಟ್‌ಗಳಲ್ಲಿ ಮುಚ್ಚಿದ ಬಾಗಿಲುಗಳೇ ಇರುವವು.)

ಹಿರಿಯ ಹಿಂದಿ ಲೇಖಕ ವಿಜಯ್‌ಕುಮಾರ್ ಹೇಳುವಂತೆ ಈ ‘ಚಾಳ್’ ಸಂಸ್ಕೃತಿ ಔದ್ಯೋಗಿಕರಣ ಮತ್ತು ನಗರೀಕರಣದ ‘ಬೈಪ್ರೊಡಕ್ಟ್’ ಆಗಿತ್ತು. ‘ಒಂದೇ ಛತ್ರದಡಿ ಮನುಷ್ಯನ ಬದುಕಿನ ಅಸ್ತಿತ್ವ’ ಎನ್ನುವುದು ಇದೇ ಏನೋ ಎಂಬಂತೆ ಭಾಸವಾಗುತ್ತಿತ್ತು. ರಾಷ್ಟ್ರೀಯ ಸ್ವಾತಂತ್ರ್ಯ ಆಂದೋಲನದಲ್ಲೂ ಈ ಚಾಳ್ ಸಂಸ್ಕೃತಿಯ ಬದುಕಿನ ಜನರು ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಮುಂಬೈಯ ಚಾಳ್ ಸಂಸ್ಕೃತಿ, ಚಾಳ್ ಬದುಕಿನ ಕುರಿತಂತೆ ಇಲ್ಲಿನ ಇತಿಹಾಸಕಾರರು, ಅರ್ಥಶಾಸ್ತ್ರಜ್ಞರು, ವಾಸ್ತು ಶಾಸ್ತ್ರಜ್ಞರು, ಸಮಾಜವಾದಿಗಳು ಹೇಳುವಂತೆ ಈ ಚಾಳ್‌ಗಳ ಸ್ಥಾಪತ್ಯ, ಇವರ ಆರ್ಥಿಕ ಸ್ಥಿತಿ ನಗರದ ಇತಿಹಾಸವನ್ನು ತಮ್ಮ ತಮ್ಮ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಎಲ್ಲದರ ಅರ್ಥವೆಂದರೆ -ಮೂಲಭೂತ ಸೌಲಭ್ಯಗಳ ಅಭಾವದಲ್ಲೂ ಖುಷಿಯಿಂದ ಸಹಜೀವನದ ಹಿರಿಮೆಯನ್ನು ಇಲ್ಲಿನ ಜನರು ಎತ್ತಿ ಹಿಡಿದಿರುವುದು. ಬರಹಗಾರರು, ಕವಿಗಳು ಈ ಚಾಳ್‌ನ ಬದುಕನ್ನು ಚಿತ್ರಿಸುತ್ತಾ ಅಲ್ಲಿನ ಮನುಷ್ಯ ತತ್ವವನ್ನು ಹುಡುಕಿ ಪರಿಚಯಿಸಿದ್ದಾರೆ.

ಇಪ್ಪತ್ತನೆ ಶತಮಾನದ ಉತ್ತರಾರ್ಧದಲ್ಲಿ ಮುಂಬೈಯ ಉಪನಗರಗಳು ಒಂದೊಂದೇ ನಿರ್ಮಾಣವಾಗತೊಡಗಿದವು. ಹೊಸ ವಸತಿ ಕಾಲನಿಗಳು, ಫ್ಲಾಟ್‌ಗಳೂ ನಿರ್ಮಾಣವಾದವು. ಹೊಸ ಜೀವನ ಶೈಲಿಯು ಹುಟ್ಟಿಕೊಂಡಿತು. ಇವುಗಳ ನಡುವೆ ಚಾಳ್ ಸಂಸ್ಕೃತಿಯು ಒಂದೊಂದೇ ಕಡೆ ಕಾಣೆಯಾಗತೊಡಗಿವೆ. ಮರಾಠಿ ಅಸ್ಮಿತೆ ಎನ್ನುವ ಪರೇಲ್ , ಲಾಲ್‌ಬಾಗ್ ಮೊದಲಾದ ಕಡೆ ಬಹುಮಹಡಿ ಕಟ್ಟಡಗಳು ಏಳುತ್ತಿವೆ. ಈ ಹೊಸ ಜೀವನ ಶೈಲಿಯಲ್ಲಿ ಚಾಳ್ ಸಂಸ್ಕೃತಿಗೆ ಸ್ಥಾನ ಸಿಗುತ್ತಿಲ್ಲ. ಬೆರಳೆಣಿಕೆ ಜಾಗಗಳಲ್ಲಿ ಇನ್ನೂ ಚಾಳ್‌ಗಳು ಉಳಿದುಕೊಂಡಿದ್ದು ಬಿಲ್ಡರ್‌ಗಳನ್ನು ಎದುರು ನೋಡುತ್ತಿದ್ದಾರೆ. ಮುಂಬೈಯ ಜೀವನಾಡಿ ಲೋಕಲ್ ರೈಲುಗಳಲ್ಲಿ ಓಡಾಡುತ್ತಿರುವಾಗ ಮಧ್ಯ-ದಕ್ಷಿಣ ಮುಂಬೈಯ ಹಲವಾರು ಕಡೆ ಚಾಳ್‌ಗಳು ಹಾದು ಹೋಗುತ್ತವೆ. ಶತಮಾನಕ್ಕೆ ಹತ್ತಿರವಿರುವ ಹಲವಾರು ಚಾಳ್‌ಗಳು ಬಿಲ್ಡರ್‌ಗಳ ಕೃಪೆಯಿಂದ ಬಹುಮಹಡಿಯ ಕಟ್ಟಡಗಳಾಗಿ ಖೋಲಿಗಳ ಬದಲು ಫ್ಲ್ಯಾಟ್‌ಗಳಾಗಿ ರೂಪಾಂತರವಾಗುತ್ತಿವೆ.
* * *

ಸ್ಮಶಾನದಲ್ಲೂ ವೈಫೈ ಸೌಲಭ್ಯಕ್ಕೆ ತಯಾರಿ!

ಮುಂಬೈ ಮಹಾನಗರದ ಹಲವು ರೈಲ್ವೆ ಸ್ಟೇಷನ್‌ಗಳಲ್ಲಿ ವೈಫೈ ಸೇವೆ ಈಗಾಗಲೇ ಲಭ್ಯವಿದೆ. ಇದೀಗ ಸ್ಮಶಾನ ಭೂಮಿಗೂ ಆಧುನಿಕ ಸ್ವರೂಪ ನೀಡುವ ಕೆಲಸ ಮುಂಬೈ ಸಮೀಪದ ಮೀರಾ -ಭಾಯಂದರ್ ನಗರದಲ್ಲಿ ನಡೆಯಲಿದೆ.

ಮೀರಾ - ಭಾಯಂದರ್ ನಗರದಲ್ಲಿ ಒಟ್ಟು 14 ಸ್ಮಶಾನ ಭೂಮಿಗಳಿವೆ. ಇವುಗಳಲ್ಲಿ ಅಧಿಕಾಂಶ ಸ್ಮಶಾನ ಭೂಮಿಗಳು ವರ್ಷಾನುಗಟ್ಟಲೆ ಅವ್ಯವಸ್ಥೆಗೆ ಬಲಿಯಾಗುತ್ತಿವೆ. ಅನೇಕ ಕಡೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದ ಜನರಿಗೆ ಕೂರಲು ಸರಿಯಾದ ವ್ಯವಸ್ಥೆ ಇಲ್ಲ. ಕಟ್ಟಿಗೆಗಳನ್ನಿಡಲು ಸರಿಯಾದ ಶೆಡ್ ಇಲ್ಲ. ಮಳೆಗಾಲದಲ್ಲಿ ಅಂತ್ಯ ಸಂಸ್ಕಾರಕ್ಕೆ ಇಲ್ಲಿ ಬಹಳ ಕಷ್ಟ ಎದುರಿಸಬೇಕಾಗುತ್ತದೆ. ಇದನ್ನೆಲ್ಲ ಗಮನದಲ್ಲಿರಿಸಿ ಮೀರಾ - ಭಾಯಂದರ್ ನಗರದ ಎಲ್ಲಾ ಸ್ಮಶಾನ ಭೂಮಿಗಳಿಗೆ ಆಧುನಿಕ ಸ್ವರೂಪ ನೀಡಲು ನಿರ್ಣಯವನ್ನು ಮನಪಾ ಆಡಳಿತವು ಕೈಗೊಂಡಿದೆ.

ಸದ್ಯ ಭಾಯಂದರ್ ಪೂರ್ವದ ಗೋಡ್‌ದೇವ್ ಸ್ಮಶಾನ ಭೂಮಿ ಮತ್ತು ಭಾಯಂದರ್ ಪಶ್ಚಿಮದ ವೈಕುಂಠ ಧಾಮ್‌ಗೆ ಪ್ರಾಥಮಿಕ ಸ್ತರದಲ್ಲಿ ಆಧುನಿಕ ಸ್ವರೂಪ ನೀಡಲಾಗುವುದು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುವ ಸುಮಾರು 200 ಜನರಿಗೆ ಆರಾಮವಾಗಿ ಕುಳಿತುಕೊಳ್ಳುವ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಆನಂತರ ಇಲ್ಲಿನ ಕಾಶೀಮೀರಾ ಮತ್ತು ಪೇಣ್ಕರ್ ಪಾಡಾದ ಸ್ಮಶಾನ ಭೂಮಿಗೆ ಆಧುನಿಕ ಸ್ವರೂಪ ನೀಡಲಾಗುವುದು. ಸ್ಮಶಾನ ಭೂಮಿಯಲ್ಲಿ ವೈಫೈ ಸೇವೆ ಆರಂಭಿಸುವ ಮೂಲಕ ದೂರದ ವಿದೇಶಗಳಲ್ಲಿ ಇರುವ ಬಂಧುಗಳು ಆನ್‌ಲೈನ್‌ನಲ್ಲಿ ಅಂತ್ಯ ಸಂಸ್ಕಾರ ನೋಡಬಹುದಾಗಿದೆ. ಇದನ್ನು ಮುಂದಿಟ್ಟು ಆಡಳಿತವು ಸ್ಮಶಾನ ಭೂಮಿಯಲ್ಲೂ ವೈಫೈ ಸೌಲಭ್ಯ ಒದಗಿಸಲಿದೆ.
* * *

ಮುಂಬೈಯಲ್ಲಿ ಕುಷ್ಠರೋಗದ ಸಂಖ್ಯೆಯಲ್ಲಿ ಇಳಿತ

ಕುಷ್ಠರೋಗದಿಂದ ಮುಂಬೈ ಮಹಾನಗರ ಮುಕ್ತಗೊಳ್ಳುತ್ತಿರುವ ಸಂಕೇತ ದೊರೆತಿದೆ ಎಂದು ಆರೋಗ್ಯ ಇಲಾಖೆ ಜಾರಿಗೊಳಿಸಿದ ರೋಗಿಗಳ ಅಂಕಿ ಅಂಶವು ಹೇಳುತ್ತಿದೆ.

ಕಳೆದ ಐದು ವರ್ಷಗಳ ಅಂಕಿಅಂಶವನ್ನು ಗಮನಿಸಿದರೆ ನಗರದಲ್ಲಿ ಕುಷ್ಠರೋಗಿಗಳ ಸಂಖ್ಯೆಯಲ್ಲಿ 50 ಪ್ರತಿಶತ ಇಳಿಕೆಯಾಗಿದೆ. ಕುಷ್ಠರೋಗ ದೀರ್ಘಕಾಲದ ರೋಗವಾಗಿದ್ದು ಮಾನವನ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಶುಶ್ರೂಷೆ ಮಾಡದಿದ್ದರೆ ಇದು ಉಲ್ಬಣಗೊಳ್ಳುವುದು. ಮುಂಬೈಯಲ್ಲಿ ಕುಷ್ಠರೋಗವನ್ನು ಸಮಾಪ್ತಿಗೊಳಿಸಲು ರಾಜ್ಯ ಸರಕಾರ, ಮನಪಾ ಮತ್ತು 6 ಎನ್‌ಜಿಒಗಳು ಸತತವಾಗಿ ಶ್ರಮಿಸುತ್ತಿವೆ.

ಆರೋಗ್ಯ ಇಲಾಖೆಯು ಜಾರಿಗೊಳಿಸಿದ ಅಂಕಿಅಂಶದಂತೆ 2011-2012ರಲ್ಲಿ ಕುಷ್ಠರೋಗಿಗಳ 709 ಹೊಸ ಪ್ರಕರಣಗಳು ಕಂಡುಬಂದಿತ್ತು. 2016ರಲ್ಲಿ ಕುಷ್ಠರೋಗಿಗಳ 370 ಹೊಸ ಪ್ರಕರಣಗಳು ಮುಂದೆ ಬಂತು. ಇವರಲ್ಲಿ ಶೇ. 35ರಷ್ಟು ಮಕ್ಕಳು ಇದ್ದಾರೆ.

‘ಬಾಂಬೆ ಲೆಪ್ರೆಸಿ ಪ್ರೊಜೆಕ್ಟ್’ನ ಪ್ರಮುಖ ಡಾ. ಪೈ ಹೇಳುವಂತೆ ಈ ಸಂಸ್ಥೆ ಮನೆಮನೆಗೆ ತೆರಳಿ ರೋಗಿಗಳ ಬಗ್ಗೆ ತಪಾಸಣೆ ನಡೆಸುತ್ತಿದೆ. ವಿಶ್ವ ಕುಷ್ಠರೋಗ ದಿವಸದ ಸಂದರ್ಭದಲ್ಲಿ ರ್ಯಾಲಿ ಆಯೋಜಿಸುತ್ತಾರೆ. ಹಾಗೂ ಜನರನ್ನು ಜಾಗೃತಗೊಳಿಸುತ್ತಾರೆ. ಇದಕ್ಕೆ ಜಿಲ್ಲಾ ಮೆಡಿಕಲ್ ಸೂಪರ್‌ವೈಸರ್ ಡಾ. ದತ್ತಾತ್ರೇಯ ಅವರೂ ಸಹಕರಿಸುತ್ತಾರೆ.
* * *

ರೈಲ್ವೆ ಪ್ಲ್ಯಾಟ್‌ಫಾರ್ಮ್‌ಗಳ ನಾಮಫಲಕಗಳ ಹೊಸರೂಪ

ಮುಂಬೈಯ ರೈಲ್ವೆ ಸ್ಟೇಷನ್‌ಗಳ ಪ್ಲಾಟ್‌ಫಾರ್ಮ್‌ಗಳ ಕಂಬದಲ್ಲಿ ತಾಗಿಸಿರುವ ಚತುರ್ಭುಜ ಆಕಾರದ ನಾಮಫಲಕಗಳನ್ನು ಬದಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಚತುರ್ಭುಜ ಆಕೃತಿಯ ನಾಮಫಲಕಗಳ ಮೂಲೆ ತುದಿಗಳ ಚೂಪು ಅನೇಕ ಬಾರಿ ಪ್ರಯಾಣಿಕರಿಗೆ ಗೀರಿ ಗಾಯವಾಗುವ ಘಟನೆಗಳು ನಡೆದಿವೆ. ಬೆಳಗ್ಗಿನ ಮತ್ತು ಸಂಜೆಯ ಸಮಯ ಪ್ಲಾಟ್‌ಫಾರ್ಮ್‌ಗಳು ಕಿಕ್ಕಿರಿದು ತುಂಬಿರುವಾಗ ಈ ಘಟನೆಗಳು ಹೆಚ್ಚು ನಡೆಯುತ್ತವೆ. ದೂರುಗಳ ನಂತರ ಪಶ್ಚಿಮ ರೈಲ್ವೆಯು ತನ್ನ ಉಪನಗರಗಳ ಸ್ಟೇಷನ್‌ಗಳ ಚೌಕಾಕಾರ ಆಕಾರದ ನಾಮಫಲಕಗಳನ್ನು ಬದಲಿಸಿ ಗೋಲಾಕಾರದ ನಾಮಫಲಕಗಳನ್ನು ತಾಗಿಸಲು ಮುಂದಾಗಿದೆ. ಪಶ್ಚಿಮ ರೈಲ್ವೆಯ ಸ್ಟೇಷನ್‌ಗಳಲ್ಲಿ ಇದರ ಶುಭಾರಂಭವಾಗಿದೆ. ಮೊದಲಿಗೆ ನಾಲಾಸೋಪಾರ ರೈಲ್ವೆ ಸ್ಟೇಷನ್ ಪ್ಲಾಟ್‌ಫಾರ್ಮ್‌ಗಳ ನಾಮಫಲಕಗಳನ್ನು ಅಂಡಾಕಾರ ಶೈಲಿಯಲ್ಲಿ ಅಳವಡಿಸಲಾಗಿದೆ.

ಪಶ್ಚಿಮ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ರವೀಂದ್ರ ಭಾಕರ್ ಅವರು ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ ನಾಮಫಲಕಗಳಿಗೆ ಅಂಡಾಕಾರ ಶೈಲಿಯ ರೂಪು ನೀಡಲಾಗುತ್ತಿದೆ ಎಂದಿದ್ದಾರೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ಸಂವಿಧಾನ -75