ಡಿಜಿಟಲ್ ಸಂಭ್ರಮದಲ್ಲಿ ನಾವು ಮರೆತ ಮಾತೃಭಾಷೆ...

Update: 2017-02-25 19:02 GMT

ಕನ್ನಡದ ಉಳಿವಿಗೇ ಸಂಚಕಾರ ಬಂದಿರುವಾಗ ಡಿಜಿಟಲ್ ಉತ್ಸಾಹ ಕಂಡು ಅಳಬೇಕೋ ನಗಬೇಕೋ ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಕನ್ನಡ ಸಾಹಿತ್ಯವನ್ನು ಪೂರ್ತಿಯಾಗಿ ಡಿಜಿಟಲ್ ಕಣಜದಲ್ಲಿ ತುಂಬಿಡಬಹುದು. ಮುಂದಿನ ತಲೆಮಾರಿಗೆ ಕಾಪಿಡಬಹುದು. ಆದರೆ ಮುಂದಿನ ತಲೆಮಾರುಗಳಲ್ಲಿ ಅದನ್ನೋದುವ ಕನ್ನಡಿಗರು ಇರುತ್ತಾರೆಯೇ?


‘ಕನ್ನಡವೆನೆ ಕುಣಿದಾಡುವುದೆನ್ನಯ ಮನ’ ಎಂದು ಸಡಗರಸಂಭ್ರಮ ಪಡುವರಿಗಾಗಿ ಕರ್ನಾಟಕದಲ್ಲಿ ನಾವಿಂದು ದೀಪ ತೆಗೆದುಕೊಂಡು ಹುಡುಕಬೇಕಾಗಿದೆ. ಇಂಥ ಸಂಭ್ರಮದ ಉತ್ಸಾಹವಿಲ್ಲದಿದ್ದಾಗ್ಯೂ ಅಗಾಗ್ಗೆ ಪತ್ರಿಕೆಗಳಲ್ಲಿ ಕನ್ನಡ ಚೂರುಪಾರು ಸದ್ದುಗದ್ದಲ ಮಾಡುತ್ತಿರುತ್ತೆ. ಅವುಗಳಲ್ಲಿ ಹೆಚ್ಚು ನೇತ್ಯಾತ್ಮಕವಾದುವೇ. ಆಡಳಿತದಲ್ಲಿ ಕನ್ನಡವನ್ನು ಬಳಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರಕಾರಿ ಅಧಿಕಾರಿಗಳಿಗೆ ತಾಕೀತು ಮಾಡುತ್ತಲೇ ಇರುತ್ತಾರೆ. ಮೊನ್ನೆ ಕನ್ನಡ ಮತ್ತು ಸಂಸ್ಕೃತಿ ಶಾಖೆ ಸಚಿವರೂ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸುವ ಉನ್ನತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕಾಗುತ್ತದೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೊನ್ನೆ ವರ್ಷದ ಮೊದಲ ವಿಧಾನ ಮಂಡಲದ ಜಂಟಿ ಅಧೀವೇಶನವನ್ನುದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲ ಅವರು ಮಾಡಿದ ಭಾಷಣ ಕನ್ನಡದಲ್ಲಿರಲಿಲ್ಲವೆಂದು ಶಾಸಕರೊಬ್ಬರು ಆಕ್ಷೇಪಿಸಿದ್ದಾರೆ. ಆದರೆ ರಾಷ್ಟ್ರಭಕ್ತಿಯ ಗುತ್ತಿಗೆ ಹಿಡಿದಿರುವ ಬಿಜೆಪಿಗೆ ಇದರಲ್ಲಿ ತಪ್ಪೇನೂ ಕಂಡಿಲ್ಲ. ರಾಜ್ಯಪಾಲರು ಹಿಂದಿ ಪ್ರೇಮ ಮೆರೆಸಿರುವುದರಿಂದ ಅವರು ಸಂತೋಷಗೊಂಡಿರುವಂತಿದೆ.

ಹೊರ ರಾಜ್ಯಗಳಿಂದ ಬರುವ ರಾಜ್ಯಪಾಲರು ತಾವು ನೇಮಕಗೊಂಡ ರಾಜ್ಯದ ಭಾಷೆಯನ್ನು ಕಲಿಯುವ ಪ್ರಯತ್ನಮಾಡಬೇಕೆಂದು ನಿರೀಕ್ಷಿಸುವುದು ತಪ್ಪಾಗದು. ಹಿಂದಿನ ಕೆಲವು ರಾಜ್ಯಪಾಲರು ಒಂದೆರಡು ಮಾತುಗಳನ್ನೋ ವಾಕ್ಯಗಳನ್ನೋ ಹೇಳುವಷ್ಟು ಕನ್ನಡ ಪ್ರೀತಿ ತೋರಿದ ಉದಾಹರಣೆಗಳಿವೆ. ಆದರೆ ಈಗಿನ ಘನತೆವೆತ್ತ ರಾಜ್ಯಪಾಲರು ಒಂದೆರಡು ಮಾತುಗಳನ್ನೂ ಕನ್ನಡದಲ್ಲಿ ಆಡಿದ ನಿದರ್ಶನಗಳಿಲ್ಲ. ವಿಧಾನ ಮಂಡಲದ ಜಂಟಿ ಅಧಿವೇಶನ ಅಷ್ಟೆ ಅಲ್ಲ, ಯಾವುದೇ ಸಭೆ ಸಮಾರಂಭಗಳಲ್ಲೂ ಅವರು ಮಾತನಾಡುವುದು ಹಿಂದಿಯಲ್ಲೇ. ಇದು ಅವರ ‘ಕನ್ನಡ ಪ್ರೇಮ’. ಹೋದ ಕಡೆ ಅಲ್ಲಿನ ಜನರ ಭಾಷೆ ಕಲಿತು, ಅಲ್ಲಿನ ಜನಸಮುದಾಯದೊಡನೆ ಬೆರೆಯುವುದು ಮನುಷ್ಯನ ಸಹಜ ಪ್ರವೃತ್ತಿ. ವಜೂಭಾಯಿ ವಾಲಾ ಅವರು ಕರ್ನಾಟಕಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಆದರೂ ಅವರಿಗಿನ್ನೂ ಕನ್ನಡ ಕಲಿಯ ಬೇಕೆನಿಸಿಲ್ಲ. ರಾಜಭವನದ ಆವರಣದಲ್ಲಿದ್ದ ಕನ್ನಡ ಶಾಲೆಯನ್ನೂ ಮುಚ್ಚಿಸಿದರೆಂದ ಮೇಲೆ ಅವರ ‘ಕನ್ನಡ ಪ್ರೀತಿ’ಯ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.ಇಷ್ಟೆಲ್ಲ ಸದ್ದುಗದ್ದಲಗಳ ಮಧ್ಯೆ ಮೊನ್ನೆ (ಫೆ.21) ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಸದ್ದುಮಾಡದೆ-ಸುದ್ದಿ ಮಾಡದೆ ಬಂದು ಹೋಯಿತು.

ರಾಜಧಾನಿಯಲ್ಲಿ ಅಧಿಕೃತವಾಗಿಯಾಗಲೀ ಖಾಸಗಿಯಾಗಿ ಆಗಲೀ ಮಾತೃಭಾಷಾ ದಿನ ಆಚರಿಸಿದ ಸುದ್ದಿ ವರದಿಯಾದಂತಿಲ್ಲ. ಇದು ಮಾತೃಭಾಷೆ ಬಗ್ಗೆ ನಮಗಿರುವ ಕಾಳಜಿ ಮಾತೃಭಾಷಾ ದಿನಾಚರಣೆಯ ಉದ್ದೇಶ ಪ್ರಪಂಚದಲ್ಲಿನ ಸಾಂಸ್ಕೃತಿಕ ಬಹುತ್ವ ಮತ್ತು ಭಾಷಾ ಬಹುತ್ವದ ಬಗ್ಗೆ ಜಾಗೃತಿಯುಂಟುಮಾಡುವುದು, ಮಾತೃಭಾಷೆಯನ್ನು ಪ್ರೋತ್ಸಾಹಿಸುವುದು ಹಾಗೂ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಹಕ್ಕಿಗಾಗಿ ಹೋರಾಟ ನಡೆಸುವುದೇ ಆಗಿದೆ. 1999ರ ನವೆಂಬರ್ 17ರಂದು ಯುನೆಸ್ಕೊ ಇದನ್ನು ಪ್ರಕಟಿಸಿತು ಹಾಗೂ 2008ರಲ್ಲಿ ವಿಶ್ವಸಂಸ್ಥೆಯ ಮಹಾಧೀವೇಶನ ಇದಕ್ಕೆ ಮಾನ್ಯತೆ ನೀಡಿತು. ಮಾತೃಭಾಷೆಯಲ್ಲೇ ಓದಿಬರೆಯುವ ಹಕ್ಕನ್ನು ಸಮರ್ಥಿಸುವ ಉದಾತ್ತ ಧ್ಯೇಯದಿಂದ 2000ನೆ ಇಸವಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತೃಭಾಷಾ ದಿವಸವನ್ನು ಆಚರಿಸಲಾಗುತ್ತಿದೆ. ಈ ಜಗತ್ತಿನಲ್ಲಿನ ಭಾಷಾ ಬಾಹುಳ್ಯ ಮತ್ತು ವೈವಿಧ್ಯತೆ ವಿಸ್ಮಯಕಾರಿಯಾದುದು. ಅದೆಷ್ಟು ಭಾಷೆಗಳು, ಅದೆಷ್ಟು ಸಂಸ್ಕೃತಿಗಳು!

ಭಾರತದಲ್ಲೇ ಅಧಿಕೃತ ಅಂಕಿಅಂಶಗಳ ಪ್ರಕಾರ 122 ಭಾಷೆಗಳಿವೆ. ನಮ್ಮ ಸಂವಿಧಾನ 22 ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಮಾನ್ಯಮಾಡಿದೆ. ಜಾಗತೀಕರಣದ ಪ್ರಭಾವ ಹೆಚ್ಚಿದಂತೆ, ವಿಜ್ಞಾನ, ತಂತ್ರಜ್ಞಾನ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ದಾಪುಗಾಲು ಹಾಕಿ ನಡೆದಿರುವಂತೆ ಬಹು ಭಾಷೆಗಳ ಧ್ವನಿ ಸಪ್ಪಳಗಳೂ ಹೆಚ್ಚಾಗಿ ಕೇಳಿಬರುತ್ತಿವೆ. ಜನ ಮಾತೃಭಾಷೆಯ ಜೊತೆಗೆ ಇನ್ನೂ ಒಂದೆರಡು ಭಾಷೆಗಳನ್ನು ಕಲಿತು ಅವುಗಳಲ್ಲಿ ವ್ಯವಹರಿಸಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಭಾಷೆಗಳ ಸ್ಥಿತಿಗತಿಯತ್ತ ಗಮನ ಹರಿಸುವುದು ಯೋಗ್ಯವಾದೀತು. ಭಾರತೀಯ ಭಾಷಾವಿಜ್ಞಾನ ಸಮೀಕ್ಷೆ ಪ್ರಕಾರ, ಭಾರತದಲ್ಲಿ 780 ಭಾಷೆಗಳಿದ್ದು, ಆ ಪೈಕಿ ಐವತ್ತು ಭಾಷೆಗಳು ಕಳೆದ ಐವತ್ತು ವರ್ಷಗಳಲ್ಲಿ ನಶಿಸಿಹೋಗಿವೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಮೊಟ್ಟಮೊದಲಿಗೆ ಭಾಷೆಗಳ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯ ಪ್ರಕಾರ, 1894ರಿಂದ 1928ರ ನಡುವಣ ಅವಧಿಯಲ್ಲಿ ಭಾರತದಲ್ಲಿ 1,790 ಭಾಷೆಗಳೂ 544 ಉಪ ಭಾಷೆಗಳೂ/ಪ್ರಾಂತ ಭಾಷೆಗಳೂ ಇದ್ದವು. 1991ರಲ್ಲಿ ನಡೆದ ಜನಗಣತಿಯಲ್ಲಿ 1576 ಮಾತೃಭಾಷೆಗಳನ್ನು ಗುರುತಿಸಲಾಗಿದೆ. ಇದಲ್ಲದೆ ಲಿಪಿ ಇಲ್ಲದ, ಮೌಖಿಕ ಪರಂಪರೆಗೆ ಸೇರಿದ 1,796 ಆಡುಭಾಷೆಗಳನ್ನು ಜನಗಣತಿ ಗುರುತಿಸಿದೆ. ಈ ಆಡುಭಾಷೆಗಳೂ ಮಾತೃ ಭಾಷೆಗಳೇ. ಇಷ್ಟೆಲ್ಲ ಭಾಷಾ ಬಹುತ್ವದ ಮಧ್ಯೆ ನಾವೀಗ ಡಿಜಿಟಲ್ ಕ್ರಾಂತಿ ಸಾಧಿಸುವ ಅದಮ್ಯ ಉಮೇದಿನಲ್ಲಿದ್ದೇವೆ. ಡಿಜಿಟಲ್ ಕ್ರಾಂತಿಯಲ್ಲಿ ಈ ಭಾಷಾ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲಾದೀತೆ ಎಂಬುದು ಈಗ ಭಾಷಾತಜ್ಞರನ್ನು ಕಾಡುತ್ತಿರುವ ಸಮಸ್ಯೆ. ಮಾಹಿತಿ ತಂತ್ರಜ್ಞಾನ ರಾಷ್ಟ್ರವ್ಯಾಪಿ ಚಾಚಿಕೊಳ್ಳುತ್ತಿದ್ದು ಅಂತರ್ಜಾಲ ಆಧಾರಿತ ಮೊಬೈಲ್ ಸಾಧನಗಳನ್ನು ಬಳಸುತ್ತಿರುವ ಭಾರತೀಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೀಗಿರುವಾಗ ವಿನಾಶದ ಅಂಚಿನಲ್ಲಿರುವ ಭಾಷೆಗಳ ಜೀರ್ಣೋದ್ಧಾರ ಸಾಧ್ಯವಾದೀತೇ? ಸಣ್ಣಪುಟ್ಟ ಭಾಷೆಗಳಿಗೂ ಸಾಮಾಜಿಕ ಜಾಲತಾಣದಲ್ಲಿ ಮೆರೆಯುವ ಅದೃಷ್ಟ ಖುಲಾಯಿಸಬಹುದೇ? ಅಥವಾ ಬಹುಸಂಖ್ಯಾತ ಜನರು ಆಡುವ ಹಿಂದಿ, ಇಂಗ್ಲಿಷ್‌ನಂಥ ಭಾಷೆಗಳ ಪ್ರಾಬಲ್ಯದೆದುರು ಅವು ನೇಪಥ್ಯಕ್ಕೆ ಸರಿಯಬೇಕಾದೀತೇ? ಈ ಅಪಾಯದ ಮುನ್ಸೂಚನೆಯನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ನಡೆಸಿರುವ ಸಮೀಕ್ಷೆ ನೀಡಿದೆ.

2016ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೊದಲ ಸ್ಥಾನದಲ್ಲಿದ್ದ ಇಂಗ್ಲಿಷ್ ಈಗ ಈ ಸ್ಥಾನವನ್ನು ಹಿಂದಿ ಭಾಷೆಗೆ ಬಿಟ್ಟುಕೊಡಬೇಕಾಗುತ್ತದೆ ಎಂದು ಸಮೀಕ್ಷೆಯ ಅಂಕಿಅಂಶಗಳು ಸಾರಿ ಹೇಳುತ್ತಿವೆ. ‘ಸ್ಟೋರಿನಾಮಿಕ್ಸ್’ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ, 2016ರಲ್ಲಿ ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗಿರುವ ಸುದ್ದಿಗಳ ಸಂಖ್ಯೆ 5,000. ಇದರಲ್ಲಿ ಪ್ರತಿಸುದ್ದಿಯನ್ನೂ ಸರಾಸರಿ 71,494 ಜನರು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಒಂದರಲ್ಲೇ ಶೇ.98ರಷ್ಟು ಸುದ್ದಿಗಳನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಹಿಂದಿಯದು ಸಿಂಹಪಾಲು ಎಂಬುದು ಗಮನಿಸಬೇಕಾದ ಸಂಗತಿ. ಸ್ಮಾರ್ಟ್‌ಫೋನ್ ಸಂಖ್ಯೆಯಲ್ಲಿ ಹೆಚ್ಚಳ, ಅಂತರ್ಜಾಲ ಬಳಕೆಯ ವ್ಯಾಪ್ತಿ ವಿಸ್ತಾರಗೊಂಡಿರುವುದು ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಸ್ಟೋರಿನಾಮಿಕ್ಸ್ ತಜ್ಞರು. ಅಂತರ್ಜಾಲದಲ್ಲಿ ಪ್ರಪ್ರಥಮವಾಗಿ ಬಳಕೆಗೆ ಬಂದ ಭಾಷೆ ಇಂಗ್ಲಿಷ್.

ಶುರುವಿನಲ್ಲಿ ಶೇ.90ರಷ್ಟು ಜಾಗವನ್ನು ಇದೇ ಆಕ್ರಮಿಸಿಕೊಂಡಿತ್ತು. ಕ್ರಮೇಣ ವಿಶ್ವದ ಇತರ ಭಾಷೆಗಳು ಅಂತರ್ಜಾಲಕ್ಕೆ ದಾಳಿ ಇಡಲಾರಂಭಿಸಿದವು. ಜರ್ಮನ್, ಫ್ರೆಂಚ್, ಸ್ಪ್ಯಾನಿಷ್, ಚೈನೀಸ್ ಮೊದಲಾದ ಭಾಷೆಗಳು ಲಗ್ಗೆ ಇಟ್ಟನಂತರ ಕಳೆದ ಎರಡು ದಶಕಗಳಲ್ಲಿ ಅಂತರ್ಜಾಲದಲ್ಲಿ ಇಂಗ್ಲಿಷ್ ಭಾಷೆಯ ಸ್ಥಾನ ಶೇ.30ಕ್ಕೆ ಕುಸಿದಿದೆ. ಇಪ್ಪತ್ತ್ತೊಂದನೆಯ ಶತಮಾನದ ಮೊದಲ ದಶಕ ದೊಳಗೇ ಚೈನೀಸ್ ಭಾಷೆಯ ಬಳಕೆ ಶೇಕಡವಾರು ಪ್ರಮಾಣ 1,277ಕ್ಕೇರಿತು. ಪ್ರಪಂಚದ 6000 ಜೀವಂತ ಭಾಷೆಗಳ ಪೈಕಿ ಶೇ.10ರಷ್ಟು ಭಾಷೆಗಳು ಸೈಬರ್ ವಲಯದ ಶೇ. 80ರಷ್ಟು ಜಾಗವನ್ನು ಆಕ್ರಮಿಸಿವೆಯಂತೆ. ಡಿಜಿಟಲ್ ಕ್ರಾಂತಿಯಿಂದಾಗಿ ಜಗತ್ತಿನ ಪ್ರಬಲ ಭಾಷೆಗಳು ಮತ್ತು ಅಲ್ಪಸಂಖ್ಯಾತರು ಆಡುವ ಚಿಕ್ಕಪುಟ್ಟ ಭಾಷೆಗಳ ನಡುವಣ ಆಂತರ ಹೆಚ್ಚಿರುವುದು ಇದರಿಂದ ಖಾತ್ರಿಯಾಗುತ್ತದೆ. ಭಾಷಾಶಾಸ್ತ್ರ ತಜ್ಞರ ಪ್ರಕಾರ ವಿಶ್ವದ ಜೀವಂತ ಭಾಷೆಗಳಲ್ಲಿ ಶೇ. 5ರಷ್ಟು ಭಾಷೆಗಳು ಮಾತ್ರ ಅಂತರ್ಜಾಲದಲ್ಲಿ ಝಗಮಗ ಮೆರೆಯುತ್ತಾ ಡಿಜಿಟಲ್ ದಿಗ್ವಿಜಯ ಸಾಧಿಸಿವೆ. ತಜ್ಞರ ಪ್ರಕಾರ ಸುಮಾರು 250 ಭಾಷೆಗಳು ಆನ್‌ಲೈನಿನಲ್ಲಿ ಸುಭದ್ರವಾಗಿ ತಳಊರಿದ್ದು ಉಳಿದ ಸುಮಾರು 67000 ಭಾಷೆಗಳು ನೇಪಥ್ಯದಲ್ಲೇ ಇವೆ. ಅಂದರೆ ಪ್ರಪಂಚದ ಸುಪರಿಚಿತ ಭಾಷೆಗಳ ಪೈಕಿ ಶೇ.96ರಷ್ಟು ಭಾಷೆಗಳು ಡಿಜಿಟಲ್‌ನಿಂದ ಹಿಂದೆ ಉಳಿದಿವೆ. ಲಿಪಿ ಇಲ್ಲದೆ ಆಡುಮಾತಿನಲ್ಲೇ ಜೀವಂತವಾಗಿರುವ ಭಾಷೆಗಳಿಗೆ ಡಿಜಿಟಲ್ ಪ್ರಪಂಚದೊಳಕ್ಕೆ ಪ್ರವೇಶ ಅಸಾಧ್ಯವಾಗಿ ಪರಿಣಮಿಸಿದೆ. ಬಹುತೇಕ ದೇಸಿ ಭಾಷೆಗಳು ಮೌಖಿಕ ಪರಂಪರೆಯ ಭಾಷೆಗಳಾಗಿವೆ. ಡಿಜಿಟಲ್ ಮಾಧ್ಯಮ ಲಿಪಿ ಆಧಾರಿತವಾಗಿರುವುದು ಮೌಖಿಕ ಭಾಷೆಗಳಿಗೆ ದೊಡ್ಡ ತೊಡಕಾಗಿದೆ. ಭಾರತದಲ್ಲೇ ಮೌಖಿಕ ಪರಂಪರೆಯ ಆಡುಭಾಷೆಗಳು ಗಣನೀಯ ಸಂಖ್ಯೆಯಲ್ಲಿವೆ. ಲಿಪಿಯಿಲ್ಲದ ಈ ಭಾಷೆಗಳಿಗೆ ಡಿಜಿಟಲ್‌ನಲ್ಲಿ ಕಾಣಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ಈಗಿನದು.

 ಶಿಕ್ಷಣ, ಸಂಸ್ಕೃತಿ, ಆಡಳಿತ ವ್ಯವಸ್ಥೆ ಹಾಗೂ ಸೈಬರ್ ದಿಗಂತದಲ್ಲಿ ಬಹುಭಾಷಾ ಶಿಕ್ಷಣವನ್ನು ರೂಪಿಸುವುದು, ವಿಶ್ವಸಂಸ್ಥೆಯ 2017ರ ಮಾತೃಭಾಷಾ ದಿನದ ಆಚರಣೆಯ ಮುಖ್ಯ ಪ್ರಮೇಯ. ಭಾರತದಲ್ಲಿ ಈಗಾಗಲೇ ಬಹುಭಾಷಾ ಶಿಕ್ಷಣಕ್ಕೆ ಅವಕಾಶಗಳಿವೆ. ಅಲ್ಪಸಂಖ್ಯಾತರ ಭಾಷೆಗಳ ಹಕ್ಕುಗಳಿಗೆ ಸಂವಿಧಾನಾತ್ಮಕ ರಕ್ಷಣೆ ಇದೆ. ಆದರೆ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು, ಪೋಷಕರ ಇಂಗ್ಲಿಷ್ ಲಾಲಸೆ-ಇವುಗಳಿಂದಾಗಿ ದೇಸಿ ಭಾಷೆಗಳು ಮೂಲೆಗುಂಪಾಗಿವೆ. ವಿವಿಧ ಭಾರತೀಯ ಭಾಷೆಗಳೊಂದಿಗೆ ಹಾಸುಹೊಕ್ಕಾದ ಸಂಬಂಧ-ಸಂಪರ್ಕ ಸಾಧ್ಯವೆನ್ನುವಂಥ ಭಾಷೆಗಳಿಗೆ ಮಾತ್ರ ಮೊಬೈಲ್ ಅರ್ಜಿಗಳನ್ನು ವಿತರಿಸಬೇಕೆಂದು ಕೇಂದ್ರ ವಾರ್ತೆ ಮತ್ತು ಪ್ರಸಾರ ಇಲಾಖೆ ಆದೇಶ ನೀಡಿದೆಯಾದರೂ ಇದರಿಂದ ಎಷ್ಟರಮಟ್ಟಿಗೆ ದೇಸಿ ಭಾಷೆಗಳಿಗೆ ಅನುಕೂಲವಾಗಲಿದೆ ಎಂಬುದು ಸಂದೇಹಾತೀತವಲ್ಲ. ಶೇ.70ರಷ್ಟು ಭಾರತೀಯರಿಗೆ ಅಂತರ್ಜಾಲ ಸಂಪರ್ಕವಿಲ್ಲ ಮತ್ತು ಅವರಿಗೆ ಡಿಜಿಟಲ್ ಕ್ಷೇತ್ರದೊಳಗೆ ಪ್ರವೇಶಾವಕಾಶವಿಲ್ಲ ಎಂಬುದನ್ನು ನಾವು ಮರೆಯಲಾಗದು. ಆದರೆ ಮುಂದೆ ಒಂದು ದಿನ ಈ ಶೇ. 70ರಷ್ಟು ಭಾರತೀಯರೂ ಈ ಸೌಲಭ್ಯಗಳನ್ನು ಪಡೆಯುತ್ತಾರೆ ಎಂದು ನಾವು ಆಶಾವಾದಿಗಳಾಗಿರಬಹುದು.

ಡಿಜಿಟಲ್‌ನಲ್ಲಿ ಕನ್ನಡ ಕಂಗೊಳಿಸಲಿ. ಜುಟ್ಟಿಗೆ ಮಲ್ಲಿಗೆ ಹೂವು ಯಾರಿಗೆ ಬೇಡ? ಆದರೆ ಮುಖ್ಯ ಸಮಸ್ಯೆ ಇದಲ್ಲ. ಡಿಜಿಟಲ್‌ಗಿಂತ ಮುಖ್ಯವಾಗಿ ಮೊದಲು ಮಾತೃಭಾಷೆ ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಬೇಕು. ಇದಾಗದೆ ಪ್ರದೇಶ ಭಾಷೆಗಳಿಗೆ ಉಳಿಗಾಲವಿಲ್ಲ ಎಂಬುದು ಶಿಕ್ಷಣ ತಜ್ಞರೆಲ್ಲರ ಸರ್ವಾನುಮತದ ಅಭಿಮತವಾಗಿದೆ. ಆದರೆ ನಮ್ಮ ಸುಪ್ರೀಂ ಕೋರ್ಟಿನ ತೀರ್ಮಾನ ಬೇರೆಯದೇ ಆಗಿದೆ. ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಬಿಡಿ ಎಂಬುದು ಸುಪ್ರೀಂ ಕೋರ್ಟ್ ತೀರ್ಪು. ಇದರಿಂದಾಗಿ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಕಡ್ಡಾಯಗೊಳಿಸಿದ ಕರ್ನಾಟಕ ಸರಕಾರದ ಕಾನೂನು ಅಸಿಂಧುವಾಯಿತು. ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ, ಮಾತೃಭಾಷಾ ಮಾಧ್ಯಮದ ಶಿಕ್ಷಣದಿಂದ ನಮ್ಮ ಮಕ್ಕಳು ವಂಚಿತರಾಗುವುದರ ಜೊತೆಗೆ ಭವಿಷ್ಯದಲ್ಲಿ ಒಂದು ದಿನ ಕನ್ನಡ ಭಾಷೆಯೂ ಮೃತಭಾಷೆಗಳ ಪಟ್ಟಿಗೆ ಸೇರಬಹುದೆಂಬ ಆತಂಕ ತಲೆದೋರಿದೆ. ಈ ಆತಂಕ ನಿವಾರಣೆಗೆ ಒಂದು ಪರಿಹಾರವೆಂದರೆ, ರಾಷ್ಟ್ರವ್ಯಾಪಿ, ಮಾತೃಭಾಷೆಯೇ ಶಿಕ್ಷಣ ಮಾಧ್ಯಮವೆಂದು ಶಾಸನ ಮಾಡಲು ಸಾಧ್ಯವಾಗುವಂತೆ ಸಂವಿಧಾನಕ್ಕೆ ಕೇಂದ್ರ ಸರಕಾರ ತಿದ್ದುಪಡಿ ಮಾಡಬೇಕು. ಇದನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಎಲ್ಲ ರಾಜ್ಯಗಳೂ ಸಂಘಟಿತರಾಗಿ ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದರು. ಆದರೆ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಂತೆ ತೋರುತ್ತಿಲ್ಲ. ದೇಶದಾದ್ಯಂತ ಮಾತೃಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಶಾಸನಬದ್ಧಗೊಳಿಸುವಂತೆ ಆಗ್ರಹಪಡಿಸಿ ಡಾ.ಚಂದ್ರಶೇಖರ ಕಂಬಾರರು ಪ್ರಧಾನ ಮಂತ್ರಿ ಮೋದಿಯವರಿಗೆ ಪತ್ರ ಬರೆದಿದ್ದರು. ಪತ್ರ ಬರೆದು ಸುಮಾರ ಎರಡು ವರ್ಷಗಳೇ ಕಳೆದಿವೆ. ಇದಕ್ಕೆ ಪ್ರಧಾನ ಮಂತ್ರಿಯವರ ಪ್ರತಿಕ್ರಿಯೆ ಏನು ಎಂಬುದೂ ತಿಳಿದಿಲ್ಲ. ಏತನ್ಮಧ್ಯೆ, ಮಾತೃಭಾಷೆ ಕನ್ನಡವನ್ನು ಕಾಪಾಡುವ ತಮ್ಮ ಜವಾಬ್ದಾರಿಯನ್ನು ಮರೆತು ತಂದೆತಾಯಿಗಳು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಹೀಗೆ, ಕನ್ನಡದ ಉಳಿವಿಗೇ ಸಂಚಕಾರ ಬಂದಿರುವಾಗ ಡಿಜಿಟಲ್ ಉತ್ಸಾಹ ಕಂಡು ಅಳಬೇಕೋ ನಗಬೇಕೋ ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಕನ್ನಡ ಸಾಹಿತ್ಯವನ್ನು ಪೂರ್ತಿಯಾಗಿ ಡಿಜಿಟಲ್ ಕಣಜದಲ್ಲಿ ತುಂಬಿಡಬಹುದು. ಮುಂದಿನ ತಲೆಮಾರಿಗೆ ಕಾಪಿಡಬಹುದು. ಆದರೆ ಮುಂದಿನ ತಲೆಮಾರುಗಳಲ್ಲಿ ಅದನ್ನೋದುವ ಕನ್ನಡಿಗರು ಇರುತ್ತಾರೆಯೇ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ