ಕುಂಟುತ್ತಾ ಸಾಗಿದೆ ಭಾರತದ ಪ್ರಥಮ 3ಡಿ ತಾರಾಲಯ ಕಾಮಗಾರಿ!
ಮಂಗಳೂರು, ಫೆ.24: ಏಷ್ಯಾದ ಅತ್ಯಾಧುನಿಕ ಹಾಗೂ ಭಾರತದ ಪ್ರಥಮ ತಾರಾಲಯ (ತ್ರಿಡಿ ಪ್ಲಾನಿಟೋರಿಯಂ)ವಾಗಿ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಕಾಮಗಾರಿ ಆರಂಭಗೊಂಡು ಮೂರು ವರ್ಷಗಳಾದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಮೀಪದ ವಿಶಾಲವಾದ ಜಾಗದಲ್ಲಿ 2014ರ ಫೆಬ್ರವರಿ 13ರಂದು ಬಹು ನಿರೀಕ್ಷೆಯ ಸುಮಾರು 24.5 ಕೋಟಿ ರೂ. ವೆಚ್ಚದ ಭಾರತದ ಪ್ರಥಮ 3ಡಿ 'ಸ್ವಾಮಿ ವಿವೇಕಾನಂದ ತಾರಾಲಯ'ದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಗಿತ್ತು.
ಅಂದು ಭೂಮಿ ಪೂಜೆ ನೆರವೇರಿಸಿದ್ದ ಶಾಸಕ ಜೆ.ಆರ್. ಲೋಬೋ ಅವರು ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 18 ತಿಂಗಳ ಕಾಲಾವಕಾಶವಿದ್ದರೂ, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟಿಸಲು ಸಹಕರಿಸಬೇಕೆಂದು ಕೋರಿಕೊಂಡಿದ್ದರು. ಆದರೆ ಭೂಮಿ ಪೂಜೆ ನಡೆದು ಇದೀಗ ಮೂರು ವರ್ಷಗಳೇ ಸಂದರೂ ತಾರಾಲಯ ತಲೆ ಎತ್ತಿದ್ದರೂ ಇನ್ನೂ ಅತ್ಯಾಧುನಿಕ ಉಪಕರಣಗಳ ಜೋಡಣೆ ಸೇರಿದಂತೆ ತಾಂತ್ರಿಕ ಕೆಲಸಗಳಿನ್ನೂ ಪೂರ್ಣಗೊಂಡಿಲ್ಲ.
ಸುಮಾರು ಆರು ವರ್ಷಗಳ ಹಿಂದೆ ತಾರಾಲಯ ಕಾಮಗಾರಿ ಆರಂಭಕ್ಕೆ ಒಪ್ಪಿಗೆ ಪಡೆಯುವ ಪ್ರಯತ್ನ ಆರಂಭಗೊಂಡು ಕೊನೆಗೂ 2014ರಲ್ಲಿ ಭೂಮಿ ಪೂಜೆ ನಡೆದಿತ್ತು. ಅಂತಾರಾಷ್ಟ್ರೀಯ ಬಿಡ್ಡಿಂಗ್ ಮೂಲಕ ತಾರಾಲಯದ ಉಪಕರಣಗಳ ಜೋಡಣೆಯಾಗಬೇಕಿದ್ದು, ಅದಕ್ಕಾಗಿ ಅಮೆರಿಕದ ಕಂಪನಿಯು ಈಗಾಗಲೇ ಮುಂದೆ ಬಂದಿದೆ. ಟೆಂಡರ್ ಅಂತಿಮಗೊಂಡಿದ್ದು, ಹಣವೂ ಮಂಜೂರಾಗಿದೆ. ಇದೀಗ ತಾರಾಲಯದ ಅಂದಾಜು ವೆಚ್ಚ 35 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ತಿಳಿಸಿದ್ದಾರೆ.
ಱಱವರ್ಷದಿಂದ ವರ್ಷಕ್ಕೆ ತಂತ್ರಜ್ಞಾನದಲ್ಲಿ ಬದಲಾಣೆಯಾಗುತ್ತಿರುವುದರಿಂದ ತಾರಾಲಯದಲ್ಲಿ ಆಧುನಿಕ ಉಪಕರಣಗಳ ಜೋಡಣೆಯಲ್ಲೂ ಬದಲಾವಣೆ ಮಾಡಬೇಕಾಗಿದೆ. ಹಾಗಾಗಿ ವಿಳಂಬವಾಗಿದೆ. ಈಗಾಗಲೇ ಅಮೆರಿಕದ ಕಂಪನಿ ಟೆಂಡರ್ ಅಂತಿಮಗೊಳಿಸಿದ್ದು, ಹಣ ಮಂಜೂರಾಗಿರುವುದರಿಂದ ಮುಂದಿನ ಆರು ತಿಂಗಳೊಳಗೆ ತಾರಾಲಯ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗುವ ಸಾಧ್ಯತೆ ಇದೆೞೞಎಂದು ಡಾ. ಕೆ.ವಿ. ರಾವ್ ಅಭಿಪ್ರಾಯಿಸಿದ್ದಾರೆ.
ತಾರಾಲಯದ ಭಾರತ ಪ್ರಥಮ 3ಡಿ ತಾರಾಲಯ ಎಂಬ ಹೆಗ್ಗಳಿಕೆಯ ಜತೆಗೆ ಏಷ್ಯಾದ ಅತ್ಯಾಧುನಿಕ ತಾರಾಯವೂ ಆಗಲಿದೆ.
ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದ್ದು, 18 ಮೀಟರ್ ವ್ಯಾಸದ ಗುಮ್ಮಟ ತಾರಾಲಯದ ಪ್ರಮುಖ ಆಕರ್ಷಣೆಯಾಗಿದೆ. ಸ್ಕೈ ಥಿಯೇಟರ್, ವಸ್ತು ಪ್ರದರ್ಶನ ಗ್ಯಾಲರಿ, ಖಗೋಳ ಪಾರ್ಕ್ ಈ ತಾರಾಲಯದ ವಿಶೇಷ ಆಕರ್ಷಣೆಗಳಾಗಲಿವೆ.