ದೇಶಪ್ರೇಮದ ಬೆಲೆ ಇನ್ನಷ್ಟು ಹೆಚ್ಚಲಿದೆ... !

Update: 2017-03-04 19:01 GMT

ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿದ್ದ. ಮೋದಿಯವರ ದೇಶಪ್ರೇಮದ ಭಾಷಣ ಕೇಳಿ ಅದೊಂದು ಆವೇಶದಲ್ಲಿ ಮೊಬೈಲ್‌ನ ಮೂಲಕ ಸಿಲಿಂಡರ್ ಸಬ್ಸಿಡಿಯನ್ನು ತ್ಯಜಿಸಿ ದೇಶಪ್ರೇಮಿ ಸರ್ಟಿಫಿಕೆಟ್‌ನ್ನು ಪಡೆದುಕೊಂಡಿದ್ದ. ಈಗ ನೋಡಿದರೆ, ಆ ಸರ್ಟಿಫಿಕೆಟ್‌ನ ಬೆಲೆ ಇನ್ನಷ್ಟು ದುಬಾರಿಯಾಗಿದೆ. ಸಿಲಿಂಡರ್ ವಿತರಕರಲ್ಲಿ, ಎಟಿಎಂನಲ್ಲಿ, ಬ್ಯಾಂಕ್‌ನಲ್ಲಿ ತನ್ನ ದೇಶಪ್ರೇಮಕ್ಕಾಗಿ ಶುಲ್ಕ ತೆತ್ತು ತೆತ್ತೂ ಅವನು ಸುಸ್ತಾಗಿದ್ದ. ಇದು ಹೀಗೆ ಮುಂದುವರಿದರೆ, ಶೌಚಾಲಯದಲ್ಲಿ ವಿಸರ್ಜನೆಗೆ ದೇಶಪ್ರೇಮದ ಶುಲ್ಕ ತೆರಬೇಕಾದೀತು ಎಂದು ಹೆದರಿದ. ಹೀಗೆಂದು ಯೋಚಿಸಿದವನೇ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಅವನು ಪತ್ರ ಬರೆದ.

‘‘ಪ್ರೀತಿಯ ಮೋದೀಜಿ. ನಾನು ನಿಮ್ಮ ಭಕ್ತ. ದಿನ ನಿಮ್ಮ ಫೋಟೋಗೆ ಆರತಿಯೆತ್ತಿಯೇ ನನ್ನ ಪೆನ್ನನ್ನು ಬಳಸಲು ಶುರು ಮಾಡುತ್ತೇನೆ. ಇತ್ತೀಚೆಗೆ ನನ್ನ ಸಿಲಿಂಡರ್‌ನ ಸಬ್ಸಿಡಿಯನ್ನು ತ್ಯಜಿಸಿ ನಿಮ್ಮಿಂದ ದೇಶಪ್ರೇಮಿಯೆಂಬ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇನೆ. ಇದೀಗ ನೋಡಿದರೆ ಆ ಪ್ರಮಾಣ ಪತ್ರಕ್ಕೆ ಪ್ರತೀ ತಿಂಗಳು ಹೆಚ್ಚುವರಿ 86 ರೂಪಾಯಿ ಕಟ್ಟುವುದಕ್ಕೆ ಆದೇಶ ಬಂದಿದೆ. ಈಗಾಗಲೇ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಮಾತ್ರ ಇದೆ. ಬೇಯಿಸುವುದಕ್ಕೆ ಯಾವ ಪದಾರ್ಥವೂ ಇಲ್ಲ. ಯಾಕೆಂದರೆ ಮಾರುಕಟ್ಟೆಯಲ್ಲಿ ಬೆಲೆಯೇರಿಕೆಯಾಗಿದೆ. ಇದೀಗ ಮತ್ತೆ ಸಿಲಿಂಡರ್‌ನ ಬೆಲೆ ಜಾಸ್ತಿಯಾಗಿರುವುದರಿಂದ ನಾನು ನನ್ನ ದೇಶಪ್ರೇಮಿ ಸರ್ಟಿಫಿಕೆಟ್‌ನ್ನು ನಿಮಗೆ ಮರಳಿಸಿ, ನನ್ನ ಸಬ್ಸಿಡಿಯನ್ನು ವಾಪಸ್ ಪಡೆಯಬೇಕು ಎಂದು ನಿರ್ಧರಿಸಿದ್ದೇನೆ. ದಯವಿಟ್ಟು ನನ್ನ ಸಬ್ಸಿಡಿಯನ್ನು ನನಗೆ ಕೊಟ್ಟು ಬಿಡಿ. ನಿಮ್ಮ ದೇಶಪ್ರೇಮ ಸರ್ಟಿಫಿಕೆಟ್‌ನ್ನು ನೀವೇ ಇಟ್ಟುಕೊಳ್ಳಿ. ಇತೀ ನಿಮ್ಮ ಭಕ್ತ-ಪತ್ರಕರ್ತ ಎಂಜಲು ಕಾಸಿ’’

ಕೆಲವೇ ವಾರಗಳಲ್ಲಿ ವಾಟ್ಸ್ ಆ್ಯಪ್ ಮೂಲಕ ಪ್ರಧಾನಿಯವರು ಎಂಜಲು ಕಾಸಿಗೆ ಉತ್ತರಿಸಿದರು ‘‘ಭಾಯಿಂಯೋ ಔರ್ ಬೆಹೆನೋ....ಪ್ರೀತಿಯ ಎಂಜಲು ಕಾಸಿಯವರೇ...ನಿಮ್ಮ ಮನಸ್ಸನ್ನು ಕೆಡಿಸಿರುವವರು ಯಾರು ಎನ್ನುವುದರ ಬಗ್ಗೆ ಒಂದು ತನಿಖೆ ನಡೆಸಲು ನಾನು ಆದೇಶಿಸಿದ್ದೇನೆ. ಎನ್‌ಐಎ ತಂಡದವರು ಯಾವತ್ತು ಬೇಕಾದರೂ ನಿಮ್ಮನ್ನು ಭೇಟಿ ಮಾಡಿ ವಿಚಾರಿಸಲಿದ್ದಾರೆ. ಇಂದು ದೇಶಪ್ರೇಮಿಗಳ ತಲೆಕೆಡಿಸುವುದಕ್ಕೆ ವಿದೇಶಿಯರು ಸಂಚು ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನೀವು ಅವರ ಬಲಿಪಶುವಾಗಿದ್ದೀರೋ ಎಂಬ ಅನುಮಾನ ನನಗಿದೆ. ಅದೇನೇ ಇರಲಿ, ಮನೆಯಲ್ಲಿ ಯಾವುದೇ ಅಡುಗೆ ಪದಾರ್ಥಗಳು ಇಲ್ಲ ಎಂದ ಮೇಲೆ ನಿಮಗೆ ಗ್ಯಾಸ್ ಸಿಲಿಂಡರ್ ಯಾಕೆ ಬೇಕು? ನೀವು ಅಕ್ರಮವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಇಟ್ಟುಕೊಂಡು ಅದನ್ನು ದೇಶವಿರೋಧಿ ಕೆಲಸಗಳಿಗೆ ಬಳಸುವುದಿಲ್ಲ ಎಂದು ನಂಬುವುದು ಹೇಗೆ? ಆದುದರಿಂದ ನಿಮ್ಮಲ್ಲಿರುವ ಖಾಲಿ ಸಿಲಿಂಡರ್‌ಗಳನ್ನು ತಕ್ಷಣ ಹತ್ತಿರದ ಪೊಲೀಸ್ ಠಾಣೆಗಳಿಗೆ ಒಪ್ಪಿಸಿ ಶರಣಾಗತರಾಗತಕ್ಕದ್ದು. ಮುಂದಿನ ದಿನಗಳಲ್ಲಿ ನೀವು ಗ್ಯಾಸ್ ಸಿಲಿಂಡರ್‌ಗಳೇ ಇಲ್ಲದೆ ಅಡುಗೆ ಮಾಡುವುದರಿಂದ ಸಿಲಿಂಡರ್‌ಗಳಿಗೆ ತೆರುವ ಹಣ ಉಳಿತಾಯವಾದಂತಾಯಿತು. ಈ ಮೂಲಕ ನಾವು ನೂರು ಶೇಕಡ ಸಬ್ಸಿಡಿಯನ್ನು ನಿಮಗೆ ನೀಡಿದಂತಾಯಿತಲ್ಲವೇ? ಹಾಗೆಯೇ ನಿಮ್ಮ ದೇಶಪ್ರೇಮಿ ಸರ್ಟಿಫಿಕೆಟ್‌ನ್ನು ನೀವು ಮನೆಯಲ್ಲಿ ಭದ್ರವಾಗಿ ಇಟ್ಟುಕೊಳ್ಳತಕ್ಕದ್ದು. ಮುಂದಿನ ದಿನಗಳಲ್ಲಿ ಆಧಾರ್‌ನ ಜೊತೆಗೆ ಈ ಸರ್ಟಿಫಿಕೆಟನ್ನು ಕೂಡ ಬ್ಯಾಂಕ್ ವ್ಯವಹಾರಗಳಲ್ಲಿ ನಾವು ಕಡ್ಡಾಯ ಮಾಡಲಿದ್ದೇವೆ. ನೂರು ಶೇಕಡಾ ಸಿಲಿಂಡರ್ ಸಬ್ಸಿಡಿಯನ್ನು ಪಡೆದುಕೊಂಡಿರುವುದಕ್ಕೆ ನಿಮಗೆ ಸರಕಾರದಿಂದ ಅಭಿನಂದನೆಗಳು. ಸದಾ ನನ್ನ ಭಕ್ತರಾಗಿಯೇ ಇರಿ. ನಿಮ್ಮ ಸಂಕಷ್ಟಗಳೂ ನಿಮಗೆ ಸುಖದಾಯಕವಾಗಿ ಕಾಣುತ್ತದೆ. ಅಚ್ಛೇದಿನ್ ಆನೇವಾಲಾ ಹೈ....’’

ಮೋದಿಯ ಪ್ರತಿಕ್ರಿಯೆ ಓದಿದವನೇ ಪತ್ರಕರ್ತ ಎಂಜಲು ಕಾಸಿ ಕಂಗಾಲಾದ. ತಕ್ಷಣ ಅವರಿಗೆ ಮತ್ತೊಂದು ಮರುತ್ತರ ಬರೆದ ‘‘ಮೋದೀಜಿಯವರೇ ನಿಮ್ಮ ಪತ್ರ ನನ್ನನ್ನು ಕಂಗೆಡಿಸಿದೆ. ಅದರಲ್ಲೂ ಕೊನೆಯ ಸಾಲು ಆತಂಕಕ್ಕೆ ತಳ್ಳಿದೆ. ಈಗಾಗಲೇ ನೀವು ನೀಡಿರುವ ಅಚ್ಛೇದಿನಗಳಿಂದ ನಾನು ಕಂಗಾಲಾಗಿದ್ದೇನೆ. ನೀವು ಅಚ್ಛೇದಿನ್ ಆನೇ ವಾಲಾ ಹೇ ಎಂದು ಇನ್ನಷ್ಟು ಹೆದರಿಸುತ್ತಿದ್ದೀರಿ. ದಿನವೂ ನಿಮ್ಮ ಭಾವಚಿತ್ರಗಳಿಗೆ ಹಾರ ಹಾಕಿ, ಪತ್ರಿಕೆಗಳಲ್ಲಿ ಭಜನೆ ಮಾಡಿರುವುದಕ್ಕಾಗಿ ನೀವು ನನ್ನ ಮೇಲೆ ಕೃಪೆ ತೋರಬೇಕು. ಮುಖ್ಯವಾಗಿ ನನಗೆ ನೂರು ಶೇಕಡ ಸಬ್ಸಿಡಿ ಬೇಡ. ಇರುವ ಸಿಲಿಂಡರನ್ನು ಸಬ್ಸಿಡಿ ರಹಿತ ದರದಲ್ಲೇ ಕೊಂಡುಕೊಳ್ಳುತ್ತೇನೆ. ಹಾಗೆಯೇ ನನ್ನ ಮೇಲೆ ನೀವು ತನಿಖೆಯ ಆದೇಶ ಹೊರಡಿಸಿದ್ದೀರಿ ಎಂದು ತಿಳಿಯಿತು. ದಯವಿಟ್ಟು ಇದನ್ನು ಹಿಂದೆಗೆಯಿರಿ. ಇನ್ನೊಮ್ಮೆ ನಿಮಗೆ ಇಂತಹ ಪತ್ರ ಬರೆಯುವುದಿಲ್ಲ. ನಾನು ಸಿಲಿಂಡರ್ ದರ ಹೆಚ್ಚಾದ ಬಳಿಕ ತುಂಬಾ ಸಂತೋಷವಾಗಿದ್ದೇನೆ. ಯಾಕೆಂದರೆ ನನ್ನ ದೇಶಪ್ರೇಮದ ತೂಕವೂ ಅದರ ಮೂಲಕ ಹೆಚ್ಚಾಗಿದೆ. ಹೀಗೆ ಸಿಲಿಂಡರ್‌ನ ದರವನ್ನು ಆಗಾಗ ಹೆಚ್ಚಿಸುತ್ತಾ ನನ್ನ ದೇಶಪ್ರೇಮದ ಹಿರಿಮೆಯನ್ನು ಹೆಚ್ಚಿಸಬೇಕೆಂದು ವಿನೀತನಾಗಿ ಪ್ರಾರ್ಥಿಸುತ್ತೇನೆ. ಈಗ ಇರುವ ಅಚ್ಛೇ ದಿನಗಳಿಂದ ನಾನು ತಡೆದುಕೊಳ್ಳಲಾರದಷ್ಟು ಸಂತೋಷವಾಗಿದ್ದೇನೆ. ಮನೆಯಲ್ಲಿ ಸುಖ ತುಂಬಿ ತುಳುಕುತ್ತಿದೆ. ಇನ್ನಷ್ಟು ಹೆಚ್ಚಾದರೆ ಅದು ಹೊರಗಡೆ ಹರಿದು ಹೋಗಿ ಚರಂಡಿ ಸೇರೀತು. ಆದುದರಿಂದ ನನಗೆ ಇನ್ನಷ್ಟು ಅಚ್ಛೇ ದಿನಗಳು ಬೇಡ. ಅದನ್ನು ನೀವು ವಿದೇಶಗಳಿಗೆ ಮಾರಿ ದೇಶದ ವಿದೇಶ ವಿನಿಮಯವನ್ನು ಹೆಚ್ಚಿಸಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಹಾಗೆಯೇ ಇತ್ತೀಚೆಗೆ ಎಟಿಎಂನಲ್ಲಿ ನನ್ನ ಹಣ ಪಡೆಯಬೇಕಾದರೆ ಶುಲ್ಕ ಕಟ್ಟಬೇಕು ಎಂದು ತಿಳಿಯಿತು. ಇದರಿಂದಲೂ ನನಗೆ ತುಂಬಾ ಸಂತೋಷವಾಗಿದೆ. ಎಷ್ಟು ಸಂತೋಷವಾಗಿದೆಯೆಂದರೆ, ಶುಲ್ಕ ಕಟ್ಟುವುದಕ್ಕಾಗಿಯೇ ನಾವೀಗ ಎಟಿಎಂನಿಂದ ಹಣವನ್ನು ತೆಗೆದುಕೊಂಡು ಅಚ್ಛೇ ದಿನವನ್ನು ಅನುಭವಿಸುತ್ತಿದ್ದೇವೆ. ಕೈಯಲ್ಲಿ ಹಣವೇ ಇಲ್ಲದೆ ಇರುವುದರಿಂದ ಕಳ್ಳಕಾಕರ ಚಿಂತೆ ತಪ್ಪಿದೆ. ಆದುದರಿಂದ ಮಾನಸಿಕವಾಗಿ ಸಂತೃಪ್ತಿ ಸಿಕ್ಕಿದೆ. ಎಟಿಎಂನ್ನು ಕಂಡಾಗಲೆಲ್ಲ ನಾವು ದೂರದಿಂದಲೇ ಈಗ ಭಯ ಭಕ್ತಿಯಿಂದ ಕೈ ಮುಗಿಯುತ್ತಿದ್ದೇವೆ. ಹಾಗೆಯೇ ಕಳ್ಳಕಾಕರೆಲ್ಲ ಬ್ಯಾಂಕಿನೊಳಗೆ ಲೆಕ್ಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸಿದೆ. ಆಗಾಗ ಯಾರಿಂದಲಾದರೂ ದರೋಡೆಗೆ ಒಳಗಾಗಬೇಕು ಎಂದು ಅನ್ನಿಸಿದರೆ ಒಮ್ಮೆ ಬ್ಯಾಂಕಿಗೆ ಹೋಗಿ ಬರುತ್ತೇವೆ. ಅಲ್ಲಿ ಅವರು ನಮ್ಮನ್ನು ದರೋಡೆ ಮಾಡುವಾಗ ನಮಗೆ ದೇಶಕ್ಕಾಗಿ ತ್ಯಾಗ ಮಾಡಿದ ಸಂತೃಪ್ತಿ, ಹುತಾತ್ಮ ಯೋಧ ಸ್ವರ್ಗದಲ್ಲಿ ಅನುಭವಿಸುವ ಸುಖಗಳು ಸಿಕ್ಕಿದಂತಾಗುತ್ತದೆ. ಹರ ಹರ ಮೋದಿ...ಜೈ ಜೈ ಮೋದಿ ಎನ್ನುವ ಭಜನೆಯನ್ನು ಈಗ ಬೆಳಗ್ಗೆ ಮಾತ್ರವಲ್ಲ, ರಾತ್ರಿ ಮಲಗುವಾಗಲೂ ಮಾಡುತ್ತೇವೆ. ಈ ಭಜನೆಯನ್ನು ಮಾಡಲು ಶುರು ಮಾಡಿದ ದಿನದಿಂದ ದುಃಸ್ವಪ್ನಗಳು ಬೀಳುವುದು ನಿಂತಿದೆ...ವಂದನೆಗಳು...’’

 ಪತ್ರ ಬರೆದ ಕೆಲವೇ ಕ್ಷಣದಲ್ಲಿ ಮೋದಿಯಿಂದ ಡಿಜಿಟಲ್ ಸಂದೇಶ ಮರಳಿ ಬಂತು ‘‘ಪತ್ರಕರ್ತ ಎಂಜಲು ಕಾಸಿಯವರಿಗೆ ಅಭಿನಂದನೆಗಳು. ದೇಶದ್ರೋಹಿಗಳಿಂದ ಕದಡಿ ಹೋಗಿರುವ ನಿಮ್ಮ ಮನಸ್ಸು ಮತ್ತೆ ಶುಭ್ರವಾಗಿದೆ. ನಿಮ್ಮ ದೇಶಪ್ರೇಮದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ನನಗೂ ಇದೆ. ಸಿಲಿಂಡರ್‌ಗಳೂ ಸೇರಿದಂತೆ ಪೆಟ್ರೋಲ್, ಡೀಸೆಲ್‌ಗಳ ಬೆಲೆಗಳನ್ನೂ ಹೆಚ್ಚಿಸಿ ನಿಮ್ಮನ್ನು ಹುತಾತ್ಮ ಯೋಧರನ್ನಾಗಿ ಮಾಡುವ ನನ್ನ ಕನಸಿಗೆ ವಿರೋಧ ಪಕ್ಷಗಳು ಸಹಕರಿಸುತ್ತಿಲ್ಲ. ನೀವು ನನ್ನ ಕ್ರಮಗಳನ್ನು ಆಸ್ವಾದಿಸುತ್ತಾ ಇದ್ದೀರಿ ಎನ್ನುವುದು ನನಗೆ ಹೆಮ್ಮೆ ತಂದಿದೆ. ಆಸ್ವಾದಿಸುವುದಕ್ಕಾಗಿ ಇನ್ನಷ್ಟು ಯೋಜನೆಗಳು ನನ್ನಲ್ಲಿವೆ. ಕಾಯುತ್ತಿರಿ. ಇನ್ನಷ್ಟು ಅಚ್ಛೇದಿನಗಳು ಬೇಡ ಎಂದು ಹೇಳಿರುವುದು ನಿಮ್ಮ ದೊಡ್ಡತನ. ಆದರೆ ನಮ್ಮ ಸರಕಾರ ಅದನ್ನು ನಿಮಗೆ ನೀಡಲೇ ಬೇಕು ಎಂದು ನಿರ್ಧರಿಸಿಯಾಗಿದೆ. ಆದುದರಿಂದ ಅದನ್ನು ಬೇಡ ಎನ್ನುವಂತಿಲ್ಲ. ಬೇಡವೆಂದವರೆಲ್ಲರೂ ದೇಶದ್ರೋಹದ ಆಪಾದನೆಯನ್ನು ಎದುರಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಇನ್ನೊಂದು ಯೋಜನೆಯೂ ನಮ್ಮ ಮುಂದಿದೆ. ಹರಹರ ಮೋದಿ, ಜೈಜೈ ಮೋದಿ ಭಜನೆಯನ್ನು ಹಾಡುತ್ತಾ ಕೆಲವರು ತುಂಬಾ ಸಂತೋಷದಿಂದಿರುವುದು ನಮಗೆ ಗೊತ್ತಾಗಿದೆ. ಈ ಭಜನೆಗೆ ವಾರ್ಷಿಕವಾಗಿ ತೆರಿಗೆ ಹಾಕುವ ಕುರಿತಂತೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಇದಕ್ಕೂ ನೀವು ಸಹಕರಿಸಬೇಕಾಗಿ ನಾನು ಕೇಳಿ ಕೊಳ್ಳುತ್ತೇನೆ. ಒಟ್ಟಿನಲ್ಲಿ ದೇಶದ ಜನರ ಸಂತೋಷವೇ ನಮ್ಮ ಸಂತೋಷ....’’

ಪತ್ರವನ್ನು ಓದಿದ್ದೇ ಕಾಸಿ ಸಂತೋಷಗೊಂಡ. ಇನ್ನಷ್ಟು ತೆರಿಗೆ ತನ್ನ ಮೇಲೆ ಬೀಳಲಿದೆ....ತನ್ನ ದೇಶಪ್ರೇಮದ ಬೆಲೆ ಹೆಚ್ಚುತ್ತಿದೆ...ನನಗೆ ಸಂತೋಷವಾಗುತ್ತಿದೆ...ನಾನು ಸಂಭ್ರಮದಲ್ಲಿದ್ದೇನೆ...ಆಹಾ...ಓಹೋ...ಎಂದೆಲ್ಲ ಕಾಸಿ ಚೀರ ತೊಡಗಿದ. ಆದರೆ ಆತನ ಕಣ್ಣಿಂದ ಮಾತ್ರ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಅದು ಆನಂದಭಾಷ್ಪವೋ ಅಥವಾ ನೋವಿನ ಕಂಬನಿಯೋ ಮುಂದಿನ ಮಹಾಚುನಾವಣೆಯೇ ಹೇಳಬೇಕು.

Writer - ಚೇಳಯ್ಯ, chelayya@gmail.com

contributor

Editor - ಚೇಳಯ್ಯ, chelayya@gmail.com

contributor

Similar News