ಇವರು ವೆಂಕಟಾಚಲ ಶಾಸ್ತ್ರಿಗಳು

Update: 2017-03-04 19:04 GMT

ಹಳಗನ್ನಡ ಸಾಹಿತ್ಯದ ತಲಸ್ಪರ್ಶಿ ಅಧ್ಯಯನಮಾಡಿರುವ, ಮೌಲಿಕ ಗ್ರಂಥಗಳನ್ನು ರಚಿಸಿರುವ ಹಿರಿಯ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರಿಗೆ ಈವರಗಿನ ಎಲ್ಲ ಪುರಸ್ಕಾರಗಳಿಗೆ ಶೃಂಗಪ್ರಾಯವಾಗಿ ಈಗ ನೃಪತುಂಗ ಪ್ರಶಸ್ತಿ. ಅದನ್ನು ಹಿಂಬಾಲಿಸಿಕೊಂಡೇ ಬಂದಿದೆ ಸಂಸ್ಕೃತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್.


ಕನ್ನಡದಲ್ಲಿ ಸೃಜನಶೀಲ ಸಾಹಿತ್ಯ, ಸಂಶೋಧನೆ ಮತ್ತು ವಿದ್ವದಧ್ಯಯನ ಕಾರ್ಯಗಳನ್ನು ಪ್ರೋತ್ಸಾಹಿಸುವ ಘನೋದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ದತ್ತಿನಿಧಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಸ್ತುತ್ಯಾರ್ಹವಾದುದು. ಈ ಹಲವಾರು ದತ್ತಿನಿಧಿ ಪ್ರಶಸ್ತಿಗಳಲ್ಲಿ ಅತಿವಿಶಿಷ್ಟವಾದದ್ದು, ಕ್ರಿ.ಶ. 814-877ರ ಅವಧಿಯಲ್ಲಿ ಮಳಖೇಡದ ರಾಜಧಾನಿಯಿಂದ ಕಾವೇರಿ-ಗೋದಾವರಿಗಳ ನಡುವಣ ವಿಶಾಲವಾದ ಕನ್ನಡ ರಾಜ್ಯವನ್ನು ಆಳುತ್ತಿದ್ದ ರಾಷ್ಟ್ರಕೂಟರ ಪ್ರಮುಖ ದೊರೆ ಅಮೋಘವರ್ಷ ನೃಪತುಂಗ ನಾಮಾಂಕಿತ ಪ್ರಶಸ್ತಿ. ‘ನೃಪತುಂಗ’ ಪ್ರಶಸ್ತಿ- ಶ್ರಮಜೀವಿಗಳ ದುಡಿಮೆಯ ಸ್ಪರ್ಶವಿರುವ ಪ್ರಶಸ್ತಿ! ಹೆಚ್ಚು ಪ್ರಜಾಸತ್ತಾತ್ಮಕ ಸ್ವರೂಪದ್ದು.

ಜನಸಾಮಾನ್ಯರ ತೆರಿಗೆ ಹಣದಿಂದ ನಡೆಯುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಈ ಪ್ರಶಸ್ತಿಯ ಪ್ರಾಯೋಜಕ ಸಂಸ್ಥೆ. ಬಿ.ಎಂ.ಟಿ.ಸಿ. ‘ನೃಪತುಂಗ ಪ್ರಶಸ್ತಿ’ಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತ ನಿಧಿಯೊಂದನ್ನು ಸ್ಥಾಪಿಸಿದ್ದು ಪ್ರತಿ ವರ್ಷ ಈ ನಿಧಿಯಿಂದ ಪ್ರಶಸ್ತಿ ನೀಡಲಾಗುತಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ವೌಲಿಕವೂ ವೈವಿಧ್ಯಮಯವೂ ಆದ ಕೊಡುಗೆ ನೀಡಿದವರಿಗೆ ಕೊಡಲಾಗುವ ಈ ಪ್ರಶಸ್ತಿಗೆ ಜ್ಞಾನಪೀಠ ಪ್ರಶಸ್ತಿಗೂ ಮಿಗಿಲಾದುದು ಎಂಬ ಹೆಗ್ಗಳಿಕೆ ಇದೆ. ‘ನೃಪತುಂಗ’ ಪ್ರಶಸ್ತಿ, ಐದು ಲಕ್ಷದ ಒಂದು ರೂಪಾಯಿ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನ ಪತ್ರವನ್ನೊಳಗೊಂಡಿರುತ್ತದೆ. (ಜ್ಞಾನ ಪೀಠದ ಪ್ರಶಸ್ತಿ ಮೊತ್ತ ಐದು ಲಕ್ಷ). ಈ ವಿಶಿಷ್ಟ ಪ್ರಶಸ್ತಿಗೆ ಈ ವರ್ಷ ಭಾಜನರಾಗಿರುವರು ಅಷ್ಟೇ ವೈಶಿಷ್ಟ್ಯವುಳ್ಳ ವಿದ್ವಾಂಸರಾದ ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು.

 ಎಂಬತ್ನಾಲ್ಕರ(ಜನನ:1933 ಆಗಸ್ಟ್ 26)ಪ್ರಾಯದ ವೆಂಕಟಾಚಲ ಶಾಸ್ತ್ರಿಗಳು, ಆರ್. ನರಸಿಂಹಾಚಾರ್, ಡಾ.ಡಿ.ಎಲ್.ಎನ್, ಪ್ರೊ.ತೀನಂಶ್ರೀ ಮೊದಲಾದ ವಿದ್ವತ್ ಪರಂಪರೆಯ ಪ್ರಮುಖರು. ಅಷ್ಟೇಕೆ, ಇಂದಿನ ವಿದ್ವದ್ವಿಲಾಸವನ್ನು ಗಮನಿಸಿದಾಗ ಆ ಪರಂಪರೆಯ ಕೊನೆಯ ಪಳೆಯುಳಿಕೆ ಎಂದು ಹೇಳಿದರೆ ಆಶ್ಚರ್ಯವೇನಾಗದು.ವೆಂಕಟಾಚಲ ಶಾಸ್ತ್ರಿಯವರ ಮೊದಲ ಪ್ರೀತಿ-ಎರಡನೆಯ ಪ್ರೀತಿ ಹೀಗೆ ಎಲ್ಲ ಒಲವೂ ಸಂಶೋಧನೆ ಮತ್ತು ಅಭಿಜಾತ ಸಾಹಿತ್ಯದ ಶಾಸ್ತ್ರೀಯ ಅಧ್ಯಯನದಲ್ಲಿ.

ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರ ಪೂರ್ಣ ಹೆಸರು ತೋಗೆರೆ ವೆಂಕಟಸುಬ್ಬಾ ಶಾಸ್ತ್ರಿ ವೆಂಕಟಾಚಲ ಶಾಸ್ತ್ರಿ. ತಾಯಿ ಸುಬ್ಬಮ್ಮ.ಹುಟ್ಟೂರು ಬೆಂಗಳೂರು ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ. ಕನಕಪುರದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ವ್ಯಾಸಂಗ ಮುಗಿಸಿ 1948ರಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಮೈಸೂರಿಗೆ ಪಯಣ. ಯುವರಾಜಾ ಕಾಲೇಜು ಮತ್ತು ಮಹಾರಾಜಾ ಕಾಲೇಜುಗಳಲ್ಲಿ ಕನ್ನಡವನ್ನು ಐಚ್ಛಿಕ ವಿಷಯವಾಗಿ ಓದಿ ಎಂ.ಎ. (1953-54) ಸ್ನಾತಕೋತ್ತರ ಪದವಿ ಪಡೆದರು. ಹುಟ್ಟೂರು ಕನಕಪುರದ ರೂರಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅಧ್ಯಾಪನವೃತ್ತಿ ಆರಂಭಿಸಿದರು. ಕನ್ನಡ ಅಧ್ಯಾಪಕರಾಗಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜು, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯಗಳಲ್ಲಿ ಸ್ವಲ್ಪಕಾಲ ಸೇವೆ ಸಲ್ಲಿಸಿ ಅನುಭವ ಪಡೆದು ದಡ ಮುಟ್ಟಿದ್ದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ (1968). ಏತನ್ಮಧ್ಯೆ ಪ್ರೊ. ಡಿ.ಎಲ್.ಎನ್./ಹಾಮಾನಾ ಅವರ ಮಾರ್ಗದರ್ಶನದಲ್ಲಿ ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪಡೆದರು.

ಕುವೆಂಪು, ಡಿ.ಎಲ್.ಎನ್., ಕ.ವೆಂ.ರಾಘವಾಚಾರ್, ಎಸ್. ಶ್ರೀಕಂಠ ಶಾಸ್ತ್ರಿ ಅವರಂಥ ಮಹಾಮಹೋಪಾಧ್ಯಾಯರುಗಳಿಂದ ಪಡೆದ ಸ್ಫೂರ್ತಿ ಪ್ರಭಾವಗಳಿಂದಲೋ ಎಂಬಂತೆ ಒಲಿದು ಬಂದ ಅಧ್ಯಾಪನೆ ಮತ್ತು ಸಂಶೋಧನಾ ಪ್ರೀತಿ ಶಾಸ್ತ್ರಿಗಳ ಜೀವನ ಸಂಗಾತಿಯಾದವು. ಛಂದಸ್ಸು, ವ್ಯಾಕರಣ ಮತ್ತು ನಿಘಂಟು, ಗ್ರಂಥ ಸಂಪಾದನೆ ಅವರ ಸಂಶೋಧನಾ ಪ್ರವೃತ್ತಿ ಮತ್ತು ವಿದ್ವತ್ತುಗಳನ್ನು ಒರೆಗೆ ಹಿಡಿದ ಕ್ಷೇತ್ರಗಳು.

ಛಂದಶ್ಯಾಸ್ತ್ರದಲ್ಲಿ ಅಂದಿಗೂ ಇಂದಿಗೂ ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವರು ವಿರಳ ಎನ್ನುವುದು ವಿದ್ವತ್ವಲಯದ ಅಂಬೋಣ. ಮೊದಲಿನಿಂದಲೂ ವಿದ್ವಾಂಸರ ಅವಜ್ಞೆಗೆ ಒಳಗಾದ ಈ ಕ್ಷೇತ್ರದಲ್ಲಿ ತನ್ಮಯತೆಯಿಂದ ತಮ್ಮನ್ನು ತೊಡಗಿಸಿಕೊಂಡು ಅದ್ಭುತ ಯಶಸ್ಸನ್ನೂ ವಿದ್ವಾಂಸರುಗಳ ಮೆಚ್ಚುಗೆಯನ್ನು ಪಡೆದ ಕೀರ್ತಿ ಶಾಸ್ತ್ರಿಯವರದು. ತೀನಂಶ್ರೀ, ಬಿಎಂಶ್ರೀ, ಸೆಡಿಯಾಪು ಕೃಷ್ಣ ಭಟ್ಟರು ಅವರುಗಳ ಛಂದಶ್ಯಾಸ್ತ್ರ ಕುರಿತ ಬಿಡಿ ಲೇಖನಗಳಷ್ಟೇ ಓದು ಅಧ್ಯಯನಗಳಿಗೆ ಆಕರ ಸಾಮಗ್ರಿಯಾಗಿದ್ದ ದಿನಗಳು.

ಹೀಗೆ ಛಂದಸ್ಸು ಸಂಶೋಧನೆಗೆ ಇನ್ನೂ ಕನ್ನೆ ನೆಲವಾಗಿದ್ದ ದಿನಗಳಲ್ಲಿ ವೆಂಕಟಾಚಲ ಶಾಸ್ತ್ರಿಗಳು ಅದಕ್ಕೆ ತಮ್ಮನ್ನು ಇಡಿಯಾಗಿ ಅರ್ಪಿಸಿಕೊಂಡರು. ಕನ್ನಡ ಛಂದಸ್ಸಿನ ಸ್ವರೂಪ ಕುರಿತು ಅಧ್ಯಯನಶೀಲರಾದರು, ಸಂಶೋಧನೆ ನಡೆಸಿದರು. ನಾಗವರ್ಮನ ಛಂದೋಂಬುಧಿ ಮತ್ತು ಜಯಕೀರ್ತಿಯ ಛಂದೋನುಶಾಸನಗಳ ತೌಲನಿಕ ಅಧ್ಯಯನ ನಡೆಸಿದರು. ಕುವೆಂಪು ಅವರ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಮತ್ತು ಚಿತ್ರಾಂಗದ ಕಾವ್ಯಗಳ ಛಂದೋವಿಲಾಸವನ್ನು ವಿಶ್ಲೇಷಿಸಿದರು. ಡಾ.ಡಿ.ಎಸ್.ಕರ್ಕಿಯವರ ‘ಛಂದೋವಿಕಾಸ’ ಬಿಟ್ಟರೆ ಬೇರೊಂದು ಅಧ್ಯಯನ ಗ್ರಂಥವಿಲ್ಲದಿದ್ದಂಥ ಪರಿಸ್ಥಿತಿಯಲ್ಲಿ ‘ಕನ್ನಢ ಛಂದಸ್ಸು’ (1970), ‘ಕನ್ನಡ ಛಂದ:ಸ್ವರೂಪ’(1978), ‘ಕನ್ನಡ ಛಂದೋವಿಹಾರ’ ಗ್ರಂಥಗಳನ್ನು ರಚಿಸಿ ಕನ್ನಡವನ್ನು ಶ್ರೀಮಂತಗೊಳಿಸಿದರು.

ಕನ್ನಡ ಛಂದಸ್ಸಿನ ಚರಿತ್ರೆಯಲ್ಲೊಂದು ಮೈಲಿಗಲ್ಲು ಎಂಬ ಪ್ರಶಂಸೆಗೆ ಪಾತ್ರವಾಗಿರುವ ‘ಕನ್ನಡ ಛಂದ:ಸ್ವರೂಪ’, ಸಂಸ್ಕೃತ, ಪ್ರಾಕೃತ, ತೆಲುಗು, ಕನ್ನಡ ಮುಂತಾದ ಭಾಷೆಗಳಲ್ಲಿ ಛಂದಸ್ಸನ್ನು ಕುರಿತು ನಡೆದಿರುವ ಕೆಲಸಗಳ ತೌಲನಿಕ ಅಧ್ಯಯನ ಮತ್ತು ಮೌಲ್ಯಮಾಪನವುಳ್ಳ ಘನವಾದ ಕೃತಿ.‘ಛಂದಸ್ಸಿನ ಸಂಜ್ಞೆಗಳು, ಮೂಲತತ್ವಗಳು ಮತ್ತು ಆಕರಗಳು’, ‘ವೈದಿಕ ಛಂದಸ್ಸು’, ‘ಲೌಕಿಕ ಛಂದಸ್ಸು’, ‘ಮಾತ್ರಾ ಛಂದಸ್ಸು’, ‘ಅಂಶ ಛಂದಸ್ಸು’ ಮತ್ತು ‘ಹೊಸಗನ್ನಡ ಛಂದಸ್ಸು ಎಂದು ವರ್ಗೀಕರಿಸಿ ಆರು ಅಧ್ಯಾಯಗಳಲ್ಲಿ ತಲಸ್ಪರ್ಶಿ ಅಧ್ಯಯನ ಮಾಡಿರುವುದು ಇದರ ವಿಶೇಷ. ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ‘ಕನ್ನಡ ಛಂದಸ್ಸಿನ ಚರಿತ್ರೆ’, ಕನ್ನಡ ಛಂದಸ್ಸಿನ ಸ್ವರೂಪದ ವಿಸ್ತೃತ ವಿವೇಚನೆಯೇ ಆಗಿದೆ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಕೇಶೀರಾಜನ ‘ಶಬ್ದಮಣಿ ದರ್ಪಣ’ ಕುರಿತ ಮೂರು ಗ್ರಂಥಗಳು ಶಾಸ್ತ್ರಿಯವರಿಗೆ ಛಂದಸ್ಸಿನಲ್ಲಿ ಮಾತ್ರವಲ್ಲ ವ್ಯಾಕರಣದ ಬಗ್ಗೆಯೂ ಇರುವ ಗಾಢವಾದ ಒಲವನ್ನು ಸಾರಿಹೇಳುವ ಕೃತಿಗಳು. ಕೇಶೀರಾಜ ವಿರಚಿತ ‘ಶಬ್ದಮಣಿದರ್ಪಣಂ’(1994), ‘ದರ್ಪಣ ವಿವರಣ’(1997) ಬಹುಪ್ರಶಂಸೆಗೆ ಪಾತ್ರವಾಗಿರುವ ಕೃತಿಗಳು. ‘ಕೇಶೀರಾಜ ವಿರಚಿತ ಶಬ್ದಮಣಿ ದರ್ಪಣಂ’ ಕೃತಿಯಲ್ಲಿ ಶಾಸ್ತ್ರಿಗಳು ಹಿಂದಿನ ಆವೃತ್ತಿಗಳೆಲ್ಲವನ್ನೂ ಆಮೂಲಾಗ್ರವಾಗಿ ಪರಾಮರ್ಶಿಸಿ, ಪರಿಶೋಧಿಸಿ ಅವುಗಳಲ್ಲಿ ಉಳಿದಿದ್ದ ಅರೆಕೊರೆಗಳನ್ನು ಪರಿಷ್ಕರಿಸುವ ಪ್ರಾಮಾಣಿಕ ಪ್ರಯತ್ನವನ್ನು ಶಾಸ್ತ್ರಿಗಳು ಮಾಡಿದ್ದಾರೆ ಎಂದು ವಿದ್ವಾಂಸರು ಮೆಚ್ಚಿಕೊಂಡಿರುವುದು ಅವರ ಪಾಂಡಿತ್ಯ, ಪ್ರತಿಭೆ ಮತ್ತು ಪರಿಶ್ರಮಗಳಿಗೆ ದೊರೆತಿರುವ ಶಹಬಾಸ್‌ಗಿರಿಯಾಗಿದೆ.

ಗ್ರಂಥ ಸಂಪಾದನೆಯ ಕಾರ್ಯದಲ್ಲೂ ಶಾಸ್ತ್ರಿಯವರ ಕೊಡುಗೆ ಅದ್ವಿತೀಯವಾದುದು. ‘ಶ್ರೀವತ್ಸ ನಿಘಂಟು’, ‘ಕನ್ನಡ ರತ್ನ ಕೋಶ’, ‘ಗಜಶಬ್ದ ಕೋಶ’, ‘ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು’ ಮತ್ತು ‘ಕನ್ನಡ ಚೆನ್ನುಡಿ’ ಸರ್ವಕಾಲಕ್ಕೂ ಸಲ್ಲಬಹುದಾದಂಥ ಕೃತಿಗಳು. ಗುಣಮಟ್ಟದಲ್ಲಿ, ವಸ್ತುವಿನ ವಿವೇಚನೆ-ವಿಶ್ಲೇಷಣೆಗಳಲ್ಲಿ ಮಹತ್ವಪೂರ್ಣವೆನಿಸುವ ಕನ್ನಡ ಸಾಹಿತ್ಯ ಚರಿತ್ರೆಯ ಎಲ್ಲಾ ಸಂಪುಟಗಳಲ್ಲೂ ಏಕಸೂತ್ರತೆಯನ್ನು ಕಾಪಾಡಿಕೊಂಡಿರುವುದು ಹಾಗೂ ಸಾಮಾನ್ಯ ನಿರೂಪಣೆ ಮತ್ತು ನಿರ್ದಿಷ್ಟ ಚೌಕಟ್ಟಿಗೆ ಹೊಂದಿಸಿರುವುದು ಸಂಪಾದಕರಾಗಿ ವೆಂಕಟಾಚಲ ಶಾಸ್ತ್ರಿಯವರ ಪರಿಣತಿಗೆ ತೋರುಬೆರಳಾಗಿದೆ.

ಶಿಕ್ಷಣ, ರಾಜನೀತಿ, ಧರ್ಮ-ಅಧರ್ಮ, ಸಾಮಾನ್ಯ ನೀತಿ-ಹೀಗೆ ವಿಷಯಾನುಸಾರವಾಗಿ ಹದಿನಾಲ್ಕು ವಿಭಾಗಗಳಲ್ಲಿ ವರ್ಗೀಕರಣಗೊಂಡಿರುವ ಕನ್ನಡ ಸುಭಾಷಿತಗಳ ಬೃಹತ್ ಸಂಪುಟ ಶಾಸ್ತ್ರಿಗಳ ಅಗಾಧವಾದ ಓದು, ಅಧ್ಯಯನ, ವಿವೇಚನಾ ವಿವೇಕ ಮತ್ತು ಅರ್ಥ ವ್ಯಾಖ್ಯಾನ ಸಾಮರ್ಥ್ಯಗಳಿಗೆ ಉತ್ತಮ ನಿದರ್ಶನವಾಗಿದೆ. ಆಡಳಿತ, ರಾಜಕಾರಣಗಳ ವೃತ್ತಿನಿರತರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ತಮ್ಮತಮ್ಮ ಕ್ಷೇತ್ರಗಳಲ್ಲಿನ ಕರ್ತವ್ಯ ಮತ್ತು ನೈತಿಕತೆಯನ್ನು ಅರಿತುಕೊಳ್ಳಲು ಅತ್ಯಂತ ಉಪಯುಕ್ತವಾದ ಮಾರ್ಗದರ್ಶಿ ಗ್ರಂಥವಿದು. ಮೂಲ ಪದ್ಯಗಳೊಂದಿಗೆ ಸುಲಭವಾಗಿ ಅರ್ಥವಾಗುವಂಥ ಸರಳವಾದ ತಾತ್ಪರ್ಯವು ಗ್ರಂಥದ ಆಕರ್ಷಣೆಯನ್ನು ಹೆಚ್ಚಿಸಿದೆ.

‘ಕನ್ನಡ ಚಿತ್ರಕಾವ್ಯ’ ಮತ್ತು ‘ಮುದ್ರಾ ಮಂಜೂಷವು’ ವೆಂಕಟಾಚಲ ಶಾಸ್ತ್ರಿಯವರ ಇನ್ನೆರಡು ಮಹತ್ವದ ಕೊಡುಗೆಗಳು. ಚಿತ್ರಕಾವ್ಯ ಸಂಸ್ಕೃತದಲ್ಲಿ ಸಮೃದ್ಧವಾದ ಪ್ರಯೋಗಗಳನ್ನು ಕಂಡಿರುವ ಒಂದು ಕಾವ್ಯ ಪ್ರಕಾರ. ಇದೊಂದು ಚಮತ್ಕಾರದ ಸೃಷ್ಟಿ, ಭಾಷೆ ಮತ್ತು ಅಕ್ಷರಗಳೊಂದಿಗೆ ಆಡುವ ಆಟ ಎಂದು ಪರಿಗಣಿಸಲಾಗಿರುವ ‘‘ಇದು ಚಿತ್ರವೂ ಹೌದು, ಚಕ್ರಬಂಧವೂ ಹೌದು’’ ಎನ್ನುತ್ತಾರೆ ವಿದ್ವಾಂಸರು.ಚಿತ್ರಕಾವ್ಯ ಪಾಂಡಿತ್ಯದ ಒಗಟು. ಒಗಟು ಬಿಡಿಸುವುದೇ ಒಂದು ರೋಮಾಂಚಕಾರಿ ಸಂತಸ. ಇಂಥ ಸಂತಸದಾಯಕ ಕಾರ್ಯವನ್ನು ಶಾಸ್ತ್ರಿಗಳು ‘ಕನ್ನಡ ಚಿತ್ರಕಾವ್ಯ’ದಲ್ಲಿ ಮಾಡಿದ್ದಾರೆ.ಚಿತ್ರಕಾವ್ಯದ ಸ್ವರೂಪ, ಬೆಳವಣಿಗೆಯನ್ನು ಸೋದಾಹರಣವಾಗಿ ನಿರೂಪಿಸಿದ್ದಾರೆ. ‘‘ಶಾಸ್ತ್ರಿಗಳ ಶೋಧನ ಪ್ರತಿಭೆ, ಯೋಜನಾ ಪ್ರತಿಭೆ ಮತ್ತು ವಿಶ್ಲೇಷಣ ಪ್ರತಿಭೆಗಳು ಇಲ್ಲಿ ಮುಪ್ಪುರಿಗೊಂಡು ಕೃತಿಯನ್ನು ಮಹತ್ವಪೂರ್ಣವಾಗಿಸಿದೆ’’ ಎನ್ನುವುದು ‘ಗ್ರಂಥಲೋಕದ’ ವಿದ್ವಾಂಸರ ಪ್ರಶಸ್ತಿಯ ಮಾತು.

ಕಾದಂಬರಿ ಬರವಣಿಗೆಗೆ ಕನ್ನಡ ಗದ್ಯವನ್ನು ಹದಗೊಳಿಸಿದ ಕೃತಿ ಎಂದು ಕೀರ್ತಿನಾಥ ಕುರ್ತಕೋಟಿಯವರು ಗುರುತಿಸಿರುವ ಕೆಂಪುನಾರಾಯಣನ ‘ಮುದ್ರಾ ಮಂಜೂಷ’ ಹೊಸಗನ್ನಡದ ಪ್ರಥಮ ಸ್ವತಂತ್ರ ಐತಿಹಾಸಿಕ ಕಾದಂಬರಿ. ನವನಂದರ ಮೇಲೆ ಚಾಣಕ್ಯ-ಚಂದ್ರಗುಪ್ತ ಮೌರ್ಯರು ಸಾಧಿಸುವ ವಿಜಯಗಾಥೆಯನ್ನು ನಿರೂಪಿಸುವ ಈ ಕಥಾನಕವನ್ನು ಶಾಸ್ತ್ರಿಯವರು ಲಭ್ಯವಿದ್ದ ಎಲ್ಲ ಹಸ್ತಪ್ರತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಪರಾಮರ್ಶಿಸಿ ಈ ಕೃತಿಯ ಹೊಸ ಆವೃತ್ತಿಯನ್ನು ಸಂಪಾದಿಸಿಕೊಟ್ಟಿದ್ದಾರೆ. ಹೊಸಗನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ರಚನೆಗೆ ಹೆದ್ದಾರಿಯೊಂದನ್ನು ತೆರೆದಂತೆಯೇ ಹೊಸಗನ್ನಡ ಭಾಷಾಶೈಲಿಗಳಿಗೆ ಸಹ ಹೆದ್ದಾರಿಯನ್ನು ತೆರೆದಿರುವ ಈ ಕೃತಿ ಕನ್ನಡ ಕಾದಂಬರಿಯ ಚರಿತ್ರೆಯ ಅಧ್ಯಯನಕ್ಕೆ ಮೊದಲ ಹೆಜ್ಜೆಗಳ ಮುಖ್ಯ ಆಕಾರ ಎಂದರೆ ಉತ್ಪ್ರೇಕ್ಷೆಯಾಗದು. ಇದಕ್ಕೆ ಶಾಸ್ತ್ರಿಗಳು ಬರೆದಿರುವ ಸುಮಾರು ನೂರು ಪುಟಗಳಷ್ಟು ಸುದೀರ್ಘವಾದ ಪೀಠಿಕೆ ಒಂದು ಕಾಲಘಟ್ಟದ ಕನ್ನಡ ನಾಡಿನ ಚರಿತ್ರೆಯೂ ಹೌದು ಹಾಗೂ ಆಗಿನ ವ್ಯವಸ್ಥೆಯ ವಿಮರ್ಶೆಯೂ ಹೌದು. ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಕೃತಿಗಳ ಸಂಖ್ಯೆಯನ್ನು ಎಣಿಸಿ ದಾಖಲಿಸುವಷ್ಟು ಸಮಯಾವಕಾಶವಿಲ್ಲ. ಅದು ‘ವೆಂಕಟಗಿರಿ’ಯೇ ಇದ್ದೀತು. ಕನ್ನಡ ಸಾಹಿತ್ಯದ ಅಧ್ಯಯನಾರ್ಥಿಗಳ ಕಪಾಟುಗಳಲ್ಲಿ ಅವರ ಕೃತಿಗಳು ಎಣಿಕೆಗೆ ಮೀರಿ ನಮಗೆ ಕಾಣಸಿಗುತ್ತವೆ.

ಕುತೂಹಲದ ಸಂಗತಿಯೆಂದರೆ, ಈ ಘನ ವಿದ್ವಾಂಸರು ಬರವಣಿಗೆ ಶುರುಮಾಡಿದ್ದು ಪತ್ತೇದಾರಿ ಕಾದಂಬರಿಗಳಿಂದ! ಶಾಸ್ತ್ರಿಯವರು ತಮ್ಮ ಈ ‘ತಬ್ಬು’ಗಾರಿಕೆಯ ಕೃತಿಗಳನ್ನು ಪ್ರಕಟಿಸಲೂ ಇಲ್ಲ, ಪತ್ತೇದಾರಿ ಕಾದಂಬರಿ ಬರವಣಿಗೆಯನ್ನು ಮುಂದುವರಿಸಲೂ ಇಲ್ಲ. ಅವರಲ್ಲಿದ್ದ ಈ ತಬ್ಬುಗಾರಿಕೆ ಪ್ರವೃತ್ತಿ ಮುಂದೆ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು ನಾಡಿನ ಪುಣ್ಯವೇ ಇದ್ದೀತು. ಸಂಶೋಧನೆಗೆ ಬಿಡುವು ಕೊಟ್ಟು ‘ಸದ್ದೆತೆಂಬರ ಗಂಡ’ನಾಗಿ ಶಾಸ್ತ್ರಿಗಳು ಸ್ವಾರಸ್ಯಕರವಾಗಿ ಹರಟೆ ಹೊಡೆದಿರುವುದೂ ಇದೆ. ಹಳಗನ್ನಡ ಸಾಹಿತ್ಯದ ತಲಸ್ಪರ್ಶಿ ಅಧ್ಯಯನಮಾಡಿರುವ, ಮೌಲಿಕ ಗ್ರಂಥಗಳನ್ನು ರಚಿಸಿರುವ ಹಿರಿಯ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿಯವರಿಗೆ ಈವರೆಗಿನ ಎಲ್ಲ ಪುರಸ್ಕಾರಗಳಿಗೆ ಶೃಂಗಪ್ರಾಯವಾಗಿ ಈಗ ನೃಪತುಂಗ ಪ್ರಶಸ್ತಿ. ಅದನ್ನು ಹಿಂಬಾಲಿಸಿಕೊಂಡೇ ಬಂದಿದೆ ಸಂಸ್ಕೃತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್.

ಕಳೆದ ಒಂದೆರಡು ವರ್ಷಗಳಿಂದ, ಯೋಗ್ಯರಿಲ್ಲ ಎಂಬ ಕಾರಣಕ್ಕೋ ಅಥವಾ ವಶೀಲಿಬಾಜಿ ಸಹಿಸಿಕೊಳ್ಳಲಾಗದ ಕಾರಣಕ್ಕೋ ಕರ್ನಾಟಕದ ಕೆಲವು ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪದವಿ ಪ್ರದಾನವನ್ನೇ ನಿಲ್ಲಿಸುತ್ತಿರುವಾಗ ಸಂಸ್ಕೃತ ವಿಶ್ವವಿದ್ಯಾನಿಲಯ ಶಾಸ್ತ್ರಿಯವರನ್ನು ದೀಪ ಹಿಡಿದು ಹುಡುಕಿರಬೇಕು! ಅಧ್ಯಯನ, ಸಂಶೋಧನೆ, ಗ್ರಂಥ ಸಂಪಾದನೆಗಳ ಮುಂದೆ ಶಾಸ್ತ್ರಿಯವರಿಗೆ ಉಳಿದೆಲ್ಲ ಸಂಪಾದನೆಗಳೂ ಗೌಣ. ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಗೆ ಪೂರ್ವಭಾವಿಯಾಗಿ ಪ್ರಾರಂಭವಾದ ಅಲ್ಲಿನ ಮೈಸೂರು ವಿ.ವಿ.ಸ್ನಾತಕೋತ್ತರ ಕೇಂದ್ರಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ‘ರೀಡರ್’ ಶಾಸ್ತ್ರಿಗಳು ಅಧ್ಯಯನಕ್ಕೆ ಅನುಕೂಲಗಳಿಲ್ಲ ಎಂಬ ಏಕೈಕ ಕಾರಣದಿಂದಾಗಿ ಭಡ್ತಿ, ಅಧಿಕಾರ ಒಲ್ಲೆ ಎಂದವರು, ಇವರು ವೆಂಕಟಾಚಲ ಶಾಸ್ತ್ರಿಗಳು!

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News

ನಾಸ್ತಿಕ ಮದ