ಲಂಕೇಶ್ ಪೀಳಿಗೆ ಇನ್ನಷ್ಟು ಹೆಚ್ಚಲಿ

Update: 2017-03-08 03:52 GMT

ಮಹಿಳಾ ದಿನಾಚರಣೆಯ ಜೊತೆಗೆ ಇವತ್ತು ಪಿ. ಲಂಕೇಶ್ ಹುಟ್ಟಿದ ದಿನ ಕೂಡಾ. ಲಂಕೇಶ್ ಬದುಕಿದ್ದು ಕೇವಲ ಅರವತ್ತೈದು ವರ್ಷಗಳು ಆದರೆ ಸಾಧನೆ ಅಗಾಧ. ಅವರು ನಡೆದ ದಾರಿ ಇಂದಿನ ಬರಹಗಾರರಿಗೆ ಆದರ್ಶಪ್ರಾಯ. ಅಧ್ಯಾಪಕರಾಗಿ ಜೀವನ ಆರಂಭಿಸಿದ ಲಂಕೇಶ್ ಕವಿ, ಪತ್ರಕರ್ತ, ಕಾದಂಬರಿಕಾರ, ಕಥೆಗಾರ, ನಾಟಕಕಾರ, ನಟ, ನಿರ್ದೇಶಕ, ನಿರ್ಮಾಪಕ, ವಿಮರ್ಶಕರಾಗಿ ಬಹುಮುಖ ವ್ಯಕ್ತಿತ್ವ, ಸೃಜನಶೀಲ ವ್ಯಕ್ತಿಯಾಗಿ ಆರೋಗ್ಯಕರ ಸಮಾಜಕ್ಕೆ ತಮ್ಮದೇ ರೀತಿಯ ಕೊಡುಗೆ ನೀಡಿದವರು.

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಪಾಳ್ಯದ ಲಂಕೇಶ್ 1980 ಜುಲೈ 6ರಂದು ‘ಲಂಕೇಶ್’ ಎಂಬ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕೆ ಸಂಪಾದಕ, ಮಾಲಕ, ಪ್ರಕಾಶಕ ಅವರೇ ಆಗಿದ್ದರು. ಕರ್ನಾಟಕ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದವರಲ್ಲಿ ಲಂಕೇಶ್ ಒಬ್ಬರೆಂಬುದು ಹೆಮ್ಮೆಯ ವಿಷಯ. ಅವರು ಪತ್ರಿಕೆಯನ್ನು ಪ್ರಾರಂಭಿಸುವ ಮೊದಲು ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. ರಾಜಕೀಯ ನಾಯಕರ ಬಗ್ಗೆ, ಭ್ರಷ್ಟಾಚಾರ, ಕೋಮುವಾದಿ ಶಕ್ತಿಗಳ ನೀತಿಯನ್ನು ಖಂಡಿಸಿ, ದಲಿತ, ಹಿಂದುಳಿದ, ಮಹಿಳಾ ಪರವಾದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದರು. ತಮ್ಮ ಪತ್ರಿಕೆಯ ಸಂಪಾದಕೀಯಕ್ಕೆ ‘ಟೀಕೆ ಟಿಪ್ಪಣಿ’ಎಂದು ಹೆಸರಿಟ್ಟು ಅನ್ಯಾಯ, ಅಕ್ರಮ, ಮಹಿಳಾ ಶೋಷಣೆ, ಜಾತಿ, ಧರ್ಮ, ರಾಜಕೀಯ, ಸ್ಥಳೀಯ ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಬರೆಯುತ್ತಿದ್ದರು.

 ಪತ್ರಿಕೆ ಜನಪ್ರಿಯವಾಗುತ್ತಿದ್ದಂತೆ ಅವರ ಬರವಣಿಗೆಯ ಹರಿತವನ್ನು ತಾಳಲಾಗದ ರಾಜಕೀಯ ಶಕ್ತಿಗಳು ಪ್ರೆಸ್ಸಿಗೆ ಬೆಂಕಿ ಹಾಕುವ ಬೆದರಿಕೆ ಹಾಕಿದ್ದರು. ಆದರೆ ಲಂಕೇಶ್‌ಇದ್ಯಾವುದಕ್ಕೂ ಜಗ್ಗದೆ ತಮ್ಮ ಬರಹವನ್ನು ಮತ್ತಷ್ಟು ಮೊನಚುಗೊಳಿಸಿದ್ದರು.

ಈ ಕಾಲಘಟ್ಟದಲ್ಲಿ ಜಾಹೀರಾತಿಲ್ಲದೆ ಪತ್ರಿಕೆ ನಡೆಸುವುದೇ ಕಷ್ಟವಾಗಿರುವಾಗ ಜಾಹೀರಾತಿಲ್ಲದೆ ಪತ್ರಿಕೆ ನಡೆಸಿದ್ದು ಅವರ ಹಿರಿಮೆಗೆ ಸಾಕ್ಷಿಯಾಗಿದೆ. ‘‘ಲಂಕೇಶ್ ಪತ್ರಿಕೆ ಓದುಗರನ್ನು ಯಾರೂ ಕೆಣಕಬೇಡಿ’’ ಎನ್ನುವ ಮಾತ್ತಿತ್ತು. ಏಕೆಂದರೆ ತನ್ನ ಓದುಗರಲ್ಲಿ ವೈಚಾರಿಕತೆ ಮೂಡಿಸಿ ಬೌದ್ಧ್ದಿಕ ಪ್ರಬುದ್ಧರನ್ನಾಗಿ ಮಾಡಿದವರು ಲಂಕೇಶ್.

 ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯದ ಗೀಳು ಬೆಳೆಸಿಕೊಂಡಿದ್ದ ಲಂಕೇಶ್ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿದ್ದರು. ರಾಮಮನೋಹರ ಲೋಹಿಯಾ ವಿಚಾರಗಳಿಂದ ಪ್ರಭಾವಿತರಾಗಿದ್ದ ಇವರು ಪ್ರಗತಿಪರ ವಿಚಾರಗಳನ್ನು ಮೈಗೂಡಿಸಿ ಕೊಳ್ಳುತ್ತಾ ಮುನ್ನಡೆದರು. ಸಾಹಿತಿ ಡಾ. ಯು. ಆರ್. ಅನಂತಮೂರ್ತಿ ಕಾದಂಬರಿ ಆಧಾರಿತ ‘ಸಂಸ್ಕಾರ’ ಸಿನೆಮಾದಲ್ಲಿ ನಾರಾಯಣಪ್ಪನ ಪಾತ್ರ ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿ ನಂತರ ತಾವೇ ‘ಪಲ್ಲವಿ’, ‘ಅನುರೂಪ’, ‘ಖಂಡವಿದೆಕೊ ಮಾಂಸವಿದೆಕೊ’, ‘ಎಲ್ಲಿಂದಲೋ ಬಂದವರು’ ಎಂಬ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದರು.

‘ತೆರೆಗಳು’, ‘ಬಿರುಕು’, ‘ಸಂಕ್ರಾಂತಿ’, ‘ಈಡಿಪಸ್ ಮತ್ತು ಅಂತಿಗೊನೆ’, ‘ಗುಣಮುಖ’, ‘ಟಿ. ಪ್ರಸನ್ನನ ಗೃಹಸ್ಥಾಶ್ರಮ’, ‘ನನ್ನ ತಂಗಿಗೊಂದು ಗಂಡು ಕೊಡಿ’, ‘ಕ್ರಾಂತಿ ಬಂತು ಕ್ರಾಂತಿ’ ಮುಂತಾದ ನಾಟಕಗಳನ್ನು ಬರೆದಿದ್ದಾರೆ. ‘ಕಲ್ಲುಕರಗುವ ಸಮಯ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’, ‘ಉಲ್ಲಂಘನೆ’, ‘ಮಂಜು ಕವಿದ ಸಂಜೆ’, ‘ವಾಮನ’ ಎಂಬ ಕಥಾಸಂಕಲನಗಳನ್ನು, ‘ಬಿರುಕು’, ‘ಮುಸ್ಸಂಜೆಯ ಕಥಾ ಪ್ರಸಂಗ’, ‘ಅಕ್ಕ’ ಕಾದಂಬರಿಗಳನ್ನು ರಚಿಸಿದ್ದಾರೆ. ಟೀಕೆಟಿಪ್ಪಣಿ ಸಂಗ್ರಹ 1,2,3, ಮರೆಯುವ ಮುನ್ನ ಸಂಗ್ರಹ-1,2,3, ‘ಮನಕೆ ಕಾರಂಜಿಯ ಸ್ಪರ್ಶ’, ‘ಈ ನರಕ ಈ ಪುಲಕ’, ‘ಆಟ-ಜೂಜು_ಮೋಜು!’, ‘ರೂಪಕ ಲೇಖಕರು’, ‘ಕಂಡದ್ದು ಕಂಡ ಹಾಗೆ’, ‘ಪ್ರಸ್ತುತ’, ‘ಪಾಂಚಾಲಿ’ ಅಂಕಣ ಲೇಖನ ಬರಹಗಳ ಸಂಗ್ರಹವನ್ನ್ನೂ ಬರೆದಿದ್ದಾರೆ.

  ‘ಬಿಚ್ಚು’, ‘ನೀಲು’ ಕಾವ್ಯ ಸಂಗ್ರಹ-1,2,3, ‘ಚಿತ್ರ ಸಮೂಹ’, ‘ಅಕ್ಷರ ಹೊಸ ಕಾವ್ಯ’, ‘ಪಾಪದ ಹೂಗಳು’ ಕವನ ಸಂಕಲನಗಳನ್ನು ರಚಿಸಿದ್ದಾರೆ. ‘ಹುಳಿಮಾವಿನ ಮರ’ ಅವರ ಆತ್ಮಕಥೆ. 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಲ್ಲವಿ ಚಿತ್ರಕ್ಕೆ 1977ರಲ್ಲಿ ರಾಷ್ಟ್ರ ಪ್ರಶಸ್ತಿ, ಇನ್ನೂ ಅನೇಕ ಪ್ರಶಸ್ತಿ, ಸನ್ಮಾನಗಳು ಇವರನ್ನು ಅರಸಿ ಬಂದಿವೆ.
ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಸಕ್ರಿಯರಾಗಿರುವ ನಟರಾಜ್ ಹುಳಿಯಾರ್, ಸಿ. ಎಸ್.ದ್ವಾರಕಾನಾಥ್, ಅಬ್ದುಲ್ ರಶೀದ್, ರವಿ ಬೆಳಗೆರೆ, ಎಚ್.ಎಲ್. ಕೇಶವಮೂರ್ತಿ, ಬಿ. ಚಂದ್ರೇಗೌಡ, ಗಂಗಾಧರ ಕುಷ್ಟಗಿ, ಬಾನು ಮುಷ್ತಾಕ್, ವೈದೇಹಿ, ಸಾರಾ ಅಬೂಬಕರ್, ಗೀತಾ ನಾಗಭೂಷಣ್, ಜಾಹ್ನವಿ ಸೇರಿದಂತೆ ಹಲವು ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟ ಕೀರ್ತಿ ಲಂಕೇಶ್‌ಗೆ ಸಲ್ಲುತ್ತದೆ.

ಆದರೆ ಇಂದಿನ ಯುವ ಪೀಳಿಗೆಗೆ ಲಂಕೇಶ್ ಅಪರಿಚಿತರಾಗು ತ್ತಿದ್ದಾರೆ. ಲಂಕೇಶ್ ವಿಚಾರಧಾರೆಯನ್ನು ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ನಾಡಿನ ಪ್ರಜ್ಞಾವಂತರು ಇನ್ನಾದರೂ ಮುಂದಡಿ ಯಿಡಬೇಕಾಗಿದೆ.

Writer - ಬಾಲಕೃಷ್ಣ ಜಾಡಬಂಡಿ

contributor

Editor - ಬಾಲಕೃಷ್ಣ ಜಾಡಬಂಡಿ

contributor

Similar News