ಅಸ್ಪಶ್ಯರ ಧರ್ಮಾಂತರ ಮತ್ತು ಅವರ ರಾಜಕೀಯ ಹಕ್ಕು

Update: 2017-03-09 19:04 GMT
Editor : ಭಾಗ- 3

ಈ ಎಲ್ಲ ವಿವೇಚನೆಯ ಮಥಿತಾರ್ಥವನ್ನು ಹೀಗೆ ಕ್ರೋಡೀಕರಿಸಬಹುದು:
1. ಹಿಂದೂ ಧರ್ಮವನ್ನು ತ್ಯಜಿಸಿ, ಬೇರೆ ಧರ್ಮವನ್ನವಲಂಬಿಸದೆ, ನಿಧರ್ಮಿಯಾದರೆ, ಅಸ್ಪಶ್ಯರ ರಾಜಕೀಯ ಹಕ್ಕು ನಷ್ಟವಾಗುವುದಿಲ್ಲ. ಎಲ್ಲ ಪ್ರಾಂತಗಳಿಗೆ ಈ ನಿಯಮ ಅನ್ವಯವಾಗುತ್ತದೆ.
2. ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೆ, ಅಸ್ಪಶ್ಯರ ರಾಜಕೀಯ ಹಕ್ಕು ನಷ್ಟವಾಗುತ್ತದೆ. ಈ ನಿಯಮ ಎಲ್ಲ ಪ್ರಾಂತಗಳಿಗೂ ಅನ್ವಯವಾಗುತ್ತದೆ.
3. ಬಂಗಾಲ ಹೊರತುಪಡಿಸಿ ಬೇರೆ ಯಾವುದೇ ಪ್ರಾಂತದಲ್ಲಿ ಅಸ್ಪಶ್ಯರು ಬೌದ್ಧ ಧರ್ಮವನ್ನು ಸ್ವೀಕರಿಸಿದರೆ ಅವರ ರಾಜಕೀಯ ಹಕ್ಕು ನಷ್ಟವಾಗುವುದಿಲ್ಲ.
4. ಯಾವುದೇ ಪ್ರಾಂತದಲ್ಲಿ ಅಸ್ಪಶ್ಯರು ಜೈನ, ಯಹೂದಿ, ಇಸ್ರೇಲಿ, ರೊರಾಷ್ಟ್ರೀಯನ್ ಮತ್ತು ಪಾರ್ಸಿ ಧರ್ಮ ಸ್ವೀಕರಿಸಿದರೆ ಅವರ ರಾಜಕೀಯ ಹಕ್ಕು ನಷ್ಟವಾಗುವುದಿಲ್ಲ. ಈ ನಿಯಮ ಎಲ್ಲ ಪ್ರಾಂತಗಳಿಗೂ ಅನ್ವಯಿಸುತ್ತದೆ.
ಅಸ್ಪಶ್ಯರನ್ನು ಎಷ್ಟು ಸಾಧ್ಯವೋ ಅಷ್ಟು ಕಂಗೆಡಿಸಲು, ಹಿಂದೂಗಳ ಮೊದಲ ಉಪದ್ವಾಪವೇನಲ್ಲ ಇದು. ಪುಣೆ ಒಪ್ಪಂದದ ನಂತರ ಅದನ್ನು ನಿಷ್ಫಲಗೊಳಿಸುವ ಮತ್ತು ಒಪ್ಪಂದದ ಹೆಚ್ಚಿನ ಲಾಭ ಅವರಿಗೆ ಸಿಗದಂತೆ ಮಾಡುವ ಶಕ್ಯವಿದ್ದಷ್ಟೂ ಹಿಂದೂಗಳು ಮಾಡಿದರು.

ಅಸ್ಪಶ್ಯರ ಪ್ರಾಥಮಿಕ ಚುನಾವಣೆಯಲ್ಲಿ ಕಡಿಮೆಯೆಂದರೆ ನಾಲ್ವರು ಉಮೇದುವಾರರಾದರೂ ಇರಬೇಕಿತ್ತು. ನಾಲ್ಕಕ್ಕಿಂತ ಕಡಿಮೆ ಇದ್ದರೆ ಪುಣೆ ಒಪ್ಪಂದಕ್ಕೆ ಬಾಧೆ ಬರುವುದೆಂದು ಹಿಂದೂಗಳು ಹ್ಯಾಮಂಡ್ ಕಮಿಷನ್‌ನೆದುರು ಆಗ್ರಹಿಸಿದ್ದರು. ನಾಲ್ವರು ಉಮೇದುವಾರರಾದರೆ, ಅಸ್ಪಶ್ಯರ ಮತಗಳು ಹರಿದು ಹಂಚಿ ಹೋಗುವುದೆಂಬುದು ಅವರ ಹುನ್ನಾರವಾಗಿತ್ತು. ಆದರೆ ಅವರ ದುರ್ದೈವದಿಂದ ಹ್ಯಾಮಂಡ್ ಕಮಿಟಿಯ ಸದಸ್ಯರು ಅಂತಹ ಮೂರ್ಖರೇನಿರಲಿಲ್ಲ. ಅವರು ಹಿಂದೂಗಳ ಈ ವಿಚಾರ ಸರಣಿ ಅಯೋಗ್ಯವೆಂಬ ತೀರ್ಪನ್ನಿತ್ತರು. ಆ ಸೋಲಿನ ಬಳಿಕ ಇದೀಗ ಈ ಮರಳಿಯತ್ನ.

ಹಿಂದೂಗಳು ಅಸ್ಪಶ್ಯರ ಧರ್ಮಾಂತರದ ವಿಷಯದಲ್ಲಿ ನಡೆಸಿರುವ ಕರಾಮತ್ತು, ಮಾಲಕರು ಗುಲಾಮರ ಬಗ್ಗೆ ಹೊಂದಿರುವ ಮನೋವೃತ್ತಿ ಯಂತೇ ಇದೆ. ಅಸ್ಪಶ್ಯ ವರ್ಗದ ಕಲ್ಯಾಣದ ಬಗ್ಗೆ ಹಿಂದೂಗಳಿಗೆ ನಿಜವಾದ ಕಳಕಳಿ ಇದ್ದಿದ್ದರೆ, ಅವರು, ‘‘ಇದುವರೆಗೆ ನಿಮ್ಮನ್ನು ಗುಲಾಮ ರಂತೆ ನಡೆಸಿಕೊಂಡ ಬಗ್ಗೆ ನಮಗೆ ಬೇಸರವೆನಿಸುತ್ತದೆ. ನಮ್ಮ ಕೈಯಿಂದ ನಿಮ್ಮ ಉದ್ಧಾರವಾಗುವುದು ಸಾಧ್ಯವಾಗಲಿಲ್ಲ. ಆದರೆ ಇಂದು ನಾವು ನಿಮ್ಮನ್ನು ಸ್ವತಂತ್ರರಾಗಿಸುತ್ತೇವೆ. ನಿಮ್ಮ ಉದ್ಧಾರದ ಬಗ್ಗೆ ನಮ್ಮಲ್ಲೆದ್ದಿರುವ ತಳಮಳ ಮತ್ತು ನಿಮ್ಮ ಬಗ್ಗೆ ನಮ್ಮಲ್ಲುದಿಸಿದ ಸದಿಚ್ಛೆಯಿಂದ, ರಾಜಕೀಯ ಸತ್ತೆಯ ಇಷ್ಟು ಭಾಗ ನಿಮಗೊಪ್ಪಿಸುತ್ತೇವೆ. ನಿಮ್ಮ ಇಚ್ಛೆಯಂತೆ ಮುಂದೆ ಸಾಗಿರಿ ಮತ್ತು ನಿಮ್ಮ ಸಾಮರ್ಥ್ಯದಿಂದ ಸಮಾಜದಲ್ಲಿ ಯೋಗ್ಯ ಸಮ್ಮಾನ ಪಡೆಯಿರಿ’’ ಎಂದು ತಾವಾಗಿಯೇ ಹೇಳುತ್ತಿದ್ದರು. ಆದರೆ ಹಿಂದೂಗಳ ಮನೋವೃತ್ತಿ ಹೀಗಿಲ್ಲ. ಗುಲಾಮರಿಂದ ಸೇವೆ ಮಾಡಿಸಿಕೊಳ್ಳುವಂತೆಯೇ, ಅವರಿಗೆ ಅನ್ನ ನೀಡುವಲ್ಲೂ ಮಾಲಕರ ಮನೋವೃತ್ತಿಯಂತೆಯೇ ಇದೆ.

ಅಸ್ಪಶ್ಯ ವರ್ಗದ ನಮ್ಮ ಮಿತ್ರರಿಗೆ ಹಿಂದೂಗಳ ಸಹಾನುಭೂತಿ ಬೇಕಿದ್ದರೆ, ಅವರ ಮನೋವೃತ್ತಿಯಂತೆ ನಡೆಯಲಿ. ಹಿಂದೂಗಳಿಗೆ ನಮ್ಮ ಉತ್ತರ ಸರಳವಿದೆ. ನಾವು ಸಂಪಾದಿಸಿದ ರಾಜಕೀಯ ಹಕ್ಕು, ಹಿಂದೂಗಳ ದೇಣಿಗೆಯೇನಲ್ಲ. ಅದು ನಮ್ಮ ಜನ್ಮಸಿದ್ಧ ಹಕ್ಕು. ಕ್ರಿಶ್ಚಿಯನ್, ಮುಸಲ್ಮಾನ, ಸಿಖ್ಖರಂತೆ ನಮ್ಮದೂ ನೈಸರ್ಗಿಕ ಹಕ್ಕು. ಈವರೆಗೆ ದಕ್ಕಿಲ್ಲವಾದರೆ, ಈಗ ಸಿಗಬಾರದೆಂದೇನಿಲ್ಲ. ಹಿಂದೂಗಳು ಈವರೆಗೆ ಅನ್ಯಾಯದಿಂದ ದಮನಿಸಿದ್ದನ್ನು ನಾವು ಹಕ್ಕಿನಿಂದ ಪಡೆಯೋಣ. ಅದಕ್ಕೆ ನಾವು ಅವರಿಗೆ ಕೃತಜ್ಞರಾಗಿರಬೇಕಿಲ್ಲ. ನಾವು ಕೃತಜ್ಞರಾಗಿರಬೇಕಾದ್ದು, ಬ್ರಿಟಿಷ್ ಸರಕಾರಕ್ಕೆ. ನಮ್ಮ ಸಂಕಟದ ವೇಳೆ ಅವರು ನಮ್ಮ ಸಹಾಯಕ್ಕೆ ಧಾವಿಸಿದರು. ನಮಗೆ ನ್ಯಾಯ, ಹಕ್ಕು ದೊರಕಿಸುವಲ್ಲಿ ಸಹಾಯ ಮಾಡಿದರು. ಅಸ್ಪಶ್ಯ ವರ್ಗದವರ ಸಂಬಂಧ ಮಹಾತ್ಮಾ ಗಾಂಧಿ ಅವರು ಮಾಡಿದ್ದು ಜಗಜ್ಜಾಹೀರೇ ಆಗಿದೆ. ಕಾಂಗ್ರೆಸ್ ಮತ್ತು ಮುಸಲ್ಮಾನರ ಸಂಯುಕ್ತ ಯತ್ನದಲ್ಲಿ ಅಸ್ಪಶ್ಯ ವರ್ಗದ ಬೇಡಿಕೆಯನ್ನು ಹೊಡೆದು ಹಾಕಲು ಮುಸಲ್ಮಾನರೊಡನೆ ಶಾಮೀಲಾದುದನ್ನು ಹಿಂದೂಸ್ಥಾನದ ಇತಿಹಾಸದಲ್ಲಿ ಓದಿದವರು ಲಜ್ಜೆಯಿಂದ ತಲೆ ತಗ್ಗಿಸದಿರರು. ಈ ವಿಶ್ವಾಸಘಾತಕ್ಕೆ ಸಮನಾದುದು, ಜಗತ್ತಿನ ಇತಿಹಾಸಲ್ಲೇ ಬೇರಿಲ್ಲ. ಕಾಂಗ್ರೆಸ್ ಮತ್ತು ಅಸ್ಪಶ್ಯ ವರ್ಗದ ಒಡಕು ಇನ್ನೂ ಹೆಚ್ಚಲು ಕಾರಣೀಭೂತವಾದುದು ದುಂಡುಮೇಜಿನ ಪರಿಷತ್. ಅಲ್ಲಿ ನಡೆದ ವಿಶ್ವಾಸಘಾತ! ಹಾಗೆಂದೇ ಹಿಂದೂಗಳಿಗೆ ಕೃತಜ್ಞತೆ ತೋರದಿದ್ದರೆ, ಅದರಲ್ಲೇನೂ ಆಶ್ಚರ್ಯವಿಲ್ಲ. ಅಸ್ಪಶ್ಯತೆ ತೊಲಗುವಂತೆ ಅವರು ಏನನ್ನೂ ಮಾಡಿಲ್ಲ.

ಈ ವಿಷಯದ ಬಗ್ಗೆ ಜುಲೈ 28ರ ‘ಕೇಸರಿ’ ಅಂಕಣದಲ್ಲಿ, ‘ಧರ್ಮದ ವಿಚಿತ್ರ ಹರಾಜು’ ಎಂಬ ಶೀರ್ಷಿಕೆಯಡಿ ಒಂದು ಅಗ್ರಲೇಖನ ಬರೆಯುತ್ತಾ ಸಂಪಾದಕರು ತಮ್ಮ ಬುದ್ಧಿಮತ್ತೆಯ ಪ್ರದರ್ಶನ ಮಾಡಿದ್ದಾರೆ. ಈ ಅಗ್ರಲೇಖನದಲ್ಲಿ ವ್ಯಕ್ತವಾದ ಹೀನ ಮನೋವೃತ್ತಿ ಮತ್ತು ಹಳಿಯುವಿಕೆ, ಬಗ್ಗೆ ಏನನ್ನೋಣ? ಸ್ವಂತ ಮಗನನ್ನೇ ಅವನ ಅಮ್ಮನೆದುರೇ ‘‘ಸೂ...ಮಗ’’ ಎಂದು ಕರೆಯಲು ಹೇಸದವರ ಕೊಳಕು ಭಾಷೆ ಬಗ್ಗೆ ಯಾರಿಗೇನು ಆಶ್ಚರ್ಯ ಅನಿಸಬಹುದು? ‘ಕೇಸರಿ’ಯ ಸಂಪಾದಕರು ಎತ್ತಿದ ಸಮಸ್ಯೆಗಳಲ್ಲಿ ಎರಡಕ್ಕೆ ಮಾತ್ರ ನಾವು ಉತ್ತರಿಸ ಬಯಸುತ್ತೇವೆ. ಕಮ್ಯೂನಲ್ ಅವಾರ್ಡ್ ವಿಭಾಗದಲ್ಲಿ ಅಸ್ಪಶ್ಯರಿಗಾಗಿ 71 ಸ್ಥಾನ ಕಾದಿರಿಸಲಾಗಿತ್ತು. ಅದರ ಹೊರತಾಗಿ ಪುಣೆ ಒಪ್ಪಂದದಲ್ಲಿ ಅಸ್ಪಶ್ಯರಿಗೆ 148 ಸ್ಥಾನಗಳನ್ನು ಕೊಡಬೇಕಾಗಿ ಬಂತು.

ಅಂದರೆ ಹೆಚ್ಚಿನ 71 ಸ್ಥಾನಗಳನ್ನು ಕೊಡಬೇಕಾಯಿತು. ಇದೊಂದು ದೊಡ್ಡ ತ್ಯಾಗ ಎಂದ ‘ಕೇಸರಿ’ ಸಂಪಾದಕರು, ಇದಕ್ಕಾಗಿ ಹಿಂದೂಗಳಿಗೆ ಆಭಾರವನ್ನೂ ಸಲ್ಲಿಸದ ಅಸ್ಪಶ್ಯರು ಕೃತಘ್ನರು ಎಂದು ಹೇಳಿದ್ದಾರೆ. ಅಸ್ಪಶ್ಯರಿಗೆ ಅದಕ್ಕೂ ಹೆಚ್ಚಿನ ರಾಜಕೀಯ ಹಕ್ಕನ್ನು ಕೊಡಲಾಗಿದೆ. ಮತ್ತೆ ಸಾರ್ವಜನಿಕ ಮತದಾರ ಸಂಘದಲ್ಲೂ ಮತ ನೀಡುವ ಹಕ್ಕನ್ನೂ ಅವರಿಗೆ ನೀಡಲಾಗಿದೆಯೆಂಬುದನ್ನು ಹೆಚ್ಚಿನ ಹಿಂದೂಗಳು ಮರೆಯುತ್ತಾರೆ. ಕಮ್ಯೂನಲ್ ಅವಾರ್ಡ್‌ನಲ್ಲಿ ಅಸ್ಪಶ್ಯ ಮತದಾರರಿಗೆ ಎರಡು ಮತಗಳನ್ನು ನೀಡುವ ಅವಕಾಶವಿದೆ. ಒಂದು ಸ್ವತಂತ್ರ ಮತದಾರ ಸಂಘದಲ್ಲಿ ತಮ್ಮ ಪ್ರತಿನಿಧಿಯನ್ನು ಆರಿಸಲು. ಮತ್ತಿನ್ನೊಂದು ಸರ್ವಸಾಧಾರಣ ಮತದಾರ ಸಂಘದಲ್ಲಿ ಸರ್ವಸಾಧಾರಣ ಮತದಾರರನ್ನು ಆರಿಸಿ ಕೊಡಲು. ಈ ಎರಡು ಮತಗಳ ಸವಲತ್ತು ಹಿಂದೂಸ್ಥಾನದಲ್ಲಿ, ಬೇರೆ ಯಾವುದೇ ವರ್ಗ ಮತ್ತು ಧರ್ಮದ ಜನರಿಗೆ ಕೊಡಲಾಗಿಲ್ಲ. ಪುಣೆ ಒಪ್ಪಂದದಂತೆ 77 ಅಧಿಕ ಸ್ಥಾನಗಳನ್ನು ಕೊಡಬೇಕಾಯಿತು. ಎಂಬುದು ನಿಜ. ಆದರೆ ಪುಣೆ ಕರಾರಿನಂತೆ ಅಸ್ಪಶ್ಯರ ದುಪ್ಪಟ್ಟು ಮತ ಹಾಕಬೇಕಾಯಿತೆಂಬುದೂ ಅಷ್ಟೇ ನಿಜ. ಇದರಲ್ಲಿ ಯಾರಿಗೆ ಲಾಭವಾಯಿತು, ಯಾರಿಗೆ ನಷ್ಟವಾಯಿತು ಎಂಬುದನ್ನು ತಕ್ಕಡಿಯಲ್ಲಿ ತೂಗಿ ನಿಖರವಾಗಿ ಹೇಳುವುದು ಯಾರಿಗೂ ಸಾಧ್ಯವಿಲ್ಲ.

ಡಾ. ಅಂಬೇಡ್ಕರರು ಮಂಡಿಸಿದ ಈ ಧರ್ಮದ ಹರಾಜು ಎಷ್ಟು ವಿಚಿತ್ರವೆಂಬುದನ್ನು ತೋರಲೋಸುಗ, ‘ಕೇಸರಿ’ಯ ಸಂಪಾದಕರು, ಸಿಖ್ ಮತ್ತು ಬೌದ್ಧರಾದರೆ ಅಸ್ಪಶ್ಯತೆಯ ಕಳಂಕ ಹೋಗುವುದು. ಆದರೆ ಅಸ್ಪಶ್ಯ ವರ್ಗದ ಮತದಾರ ಸಂಘಕ್ಕೆಂದು ಕಾದಿರಿಸಿದ ಸ್ಥಾನ ಮಾತ್ರ ಕೈ ತಪ್ಪಿ ಹೋಗಬಾರದೆಂದು ಡಾ.ಅಂಬೇಡ್ಕರ್‌ರ ಮರು ಬೇಡಿಕೆ... ಧರ್ಮಾಂತರದ ಬಳಿಕ, ರಾಜಕೀಯ ಹಕ್ಕಿನ ಬಗ್ಗೆ ಯಾವುದೇ ಮಹತ್ವ ಕೊಡುವುದಿಲ್ಲ ಎಂದು ಡಾ.ಅಂಬೇಡ್ಕರರು ಇತ್ತೀಚಿನ ಮಹಾರ್ ಪರಿಷತ್‌ನ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಆದರೆ ‘ಕೇಸರಿ’ ಪತ್ರಿಕೆ ಹೇಳುವಂತೆ, ಡಾ.ಅಂಬೇಡ್ಕರರಿಗೆ ಎರಡನ್ನೂ ಸಾಧಿಸಬೇಕಾಗಿದೆ ಎಂದನಿಸಿದರೆ ಅದರಲ್ಲಿ ವಿಚಿತ್ರವೇನು? ಕ್ರೈಸ್ತರ, ಮುಸ್ಲಿಮರ ಪಾಲಿಗೆ ಮೀಸಲಿಟ್ಟ ಸ್ಥಾನಗಳ ಬಗ್ಗೆ ‘ಕೇಸರಿ’ ಎಂದೂ ಆಕ್ಷೇಪವೆತ್ತಿಲ್ಲ. ಆದರೆ ಅಸ್ಪಶ್ಯರು, ಅಸ್ಪಶ್ಯತೆಯ ಕಳಂಕ ತೊಡೆದು ಮೀಸಲು ಸ್ಥಾನದ ಉಪಯೋಗ ಪಡೆಯಲು ಯತ್ನಿಸಿದರೆ ಕೇಸರಿಗೇಕೆ ಹೊಟ್ಟೆಯುರಿ?

ಮೀಸಲು ಸ್ಥಾನದ ವಿಷಯದಲ್ಲಿ ಹಿಂದೂ ಜನರ ಮನದಲ್ಲೆದ್ದಿರುವ ಭ್ರಮೆಯನ್ನು ನಾವು ಪರಿಹರಿಸಲು ಇಚ್ಛಿಸುತ್ತೇವೆ. ಧರ್ಮಾಂತರದಿಂದಾಗಿ ಅಸ್ಪಶ್ಯರಿಗೆ ದೊರಕಿದ ಸ್ಥಾನ, ಅವರ ಕೈ ಬಿಟ್ಟು ಹೋಗುವುದೆಂದು ಬೆದರಿಸುವುದು, ಅವರ ಧರ್ಮಾಂತರದ ಯತ್ನ ಯಶಸ್ವಿಯಾದರೆ, ಅವರು ಕಳೆದುಕೊಳ್ಳುವ ಸ್ಥಾನ ತಮ್ಮ ಜೋಳಿಗೆಗೆ ಬೀಳುವುದೆಂದು ಆಸೆ ಪಡುವುದು, ಇವೆರಡೂ ನಿಷ್ಫಲವೆಂಬುದನ್ನು ಹಿಂದೂಗಳು ಮರೆಯಬಾರದು. ಮಹತ್ವದ ವಿಷಯವೆಂದರೆ, ಅಸ್ಪಶ್ಯರು ಮುಸಲ್ಮಾನ ಇಲ್ಲವೇ ಕ್ರೈಸ್ತ ಧರ್ಮಾನುಯಾಯಿಗಳಾದರೆ, ಶೆಡ್ಯೂಲ್ಡ್ ಕಾಸ್ಟ್ ಕೂಟದ ಜಾತಿಯೆಂದು ತಮಗಿರುವ ಹಕ್ಕನ್ನು ಕಳಕೊಂಡರೂ, ಕ್ರೈಸ್ತ ಮತ್ತು ಮುಸಲ್ಮಾನರ ಹಕ್ಕು ಅವರಿಗೆ ಪ್ರಾಪ್ತವಾಗುತ್ತದೆ. ಹಾಗಾಗದೆಂದು ಯಾರೂ ಹೇಳುವಂತಿಲ್ಲ. ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಸೇರಿದ ಹೊಸಬರಿಗೆ, ರಾಜಕೀಯ ಹಕ್ಕು ನೀಡುವ ವ್ಯವಸ್ಥೆ ಆಗಲಿದ್ದರೆ, ಸಾಮಾನ್ಯ ಮತದಾರ ಸಂಘದ ಶೆಡ್ಯೂಲ್ಡ್ ಕಾಸ್ಟ್ ಕೂಟಕ್ಕೆ ಕೊಡಲ್ಪಟ್ಟ ಸ್ಥಾನ ಮತ್ತು ಧರ್ಮಾಂತರದ ಕಾರಣ, ಖಾಲಿಬಿದ್ದ ಸ್ಥಾನ, ಕ್ರಿಶ್ಚಿಯನ್ ಮತ್ತು ಮುಸಲ್ಮಾನ ಮತದಾರ ಸಂಘಕ್ಕೆ ಹೋಗುವುದು.

ಇಂದು ಅಸ್ಪಶ್ಯ ವರ್ಗಕ್ಕೆ ಕೊಡಲಾದ ಸ್ಥಾನವನ್ನು ಹಿಂದೆಗೆದುಕೊಳ್ಳು ವುದು ಎಂದಿಗೂ ಶಕ್ಯವಿಲ್ಲ ಮತ್ತು ಮತ್ತೆಂದೂ ಅದು ಹಿಂದೂಗಳಿಗೆ ಸಿಗು ವುದೂ ಸಾಧ್ಯವಿಲ್ಲ ಎಂಬುದನ್ನು ಎಲ್ಲ ಹಿಂದೂಗಳೂ ಲಕ್ಷದಲ್ಲಿಡಬೇಕು. ಜಾತೀಯ ಪ್ರತಿನಿಧಿತ್ವದಂತೆ ಜಮೀನಿನ ಕರಾರು ಪತ್ರವೂ ಇರುವುದು. ಅಸ್ಪಶ್ಯ ಹಿಂದೂಗಳು ಅಸ್ಪಶ್ಯರ ರಾಜಕೀಯ ಹಕ್ಕಿನ ವಿಷಯದಲ್ಲಿ ಸ್ವೀಕರಿಸಿದ ಧೋರಣೆ, ನಿಜಕ್ಕೂ ಮೂರ್ಖತನದ್ದಾಗಿದೆ. ಧರ್ಮಾಂತರದ ಚಳವಳಿಯನ್ನು ತಡೆಯಬಯಸುವ ಹಿಂದೂಗಳಿಗೆ ಈ ಧೋರಣೆಯಿಂದ ಯಾವ ಉಪಯೋಗವೂ ಇಲ್ಲ. ಈ ಧೋರಣೆಯಿಂದಾಗುವ ನಿಶ್ಚಿತ ಪರಿಣಾಮವೆಂದರೆ, ಗುಲಾಮರ ಮನದಲ್ಲಿ ತಮ್ಮ ಧನಿಗಳ ಬಗ್ಗೆ ಯಾವ ತಿರಸ್ಕಾರ ಮತ್ತು ಸಂತಾಪದ ಭಾವನೆ ಇದೆಯೋ, ಅದೇ ಭಾವನೆ ಹಿಂದೂಗಳ ಬಗ್ಗೆ ಅಸ್ಪಶ್ಯರ ಮನದಲ್ಲಿ ಉತ್ಪನ್ನವಾಗುತ್ತದೆ.

ಅಸ್ಪಶ್ಯ ವರ್ಗವು, ಹಿಂದೂಗಳು ಮತ್ತು ಅವರ ಹಿಂದೂ ಧರ್ಮ ದೊಡನೆ ಇದ್ದ ಎಲ್ಲ ಸಂಬಂಧವನ್ನೂ ಮುರಿಯಬೇಕೆಂದು ಅವರಿಗೆ ನಾವು ಸಲಹೆಯಿತ್ತಿದ್ದೇವೆ. ಹಿಂದೂಗಳ ಮತ್ತು ಅವರೊಡನೆ ಯಾವ್ಯಾವ ಜಾತಿಯ ರಾಜಕೀಯ ಭವಿತವ್ಯ ನಿಗದಿತವಾಗಿದೆಯೋ, ಅವರ ಕಲ್ಯಾಣವಾಗಲೆಂದು ಅವರು ಯಾವ ಧೋರಣೆ ತಳೆಯಬೇಕೆಂದು ಹೇಳುವ ಜವಾಬ್ದಾರಿ ನಮ್ಮ ಮೇಲೆ ಬರಲಾಗದು. ಆದರೆ ಈ ವಿಷಯದಲ್ಲಿ ಹಿಂದೂಗಳ ಕೈಯಿಂದ ಇಷ್ಟೊಂದು ಅಕ್ಷಮ್ಯ ಅಪರಾಧ ನಡೆದಿದೆಯೆಂದರೆ, ಅವರು ತಮ್ಮ ಮಾರ್ಗ ಬದಲಿಸದಿದ್ದರೆ, ಅವರ ಸರ್ವಸ್ವವೂ ನಾಶವಾಗಿ ಹೋಗುವುದೆಂದು ನಮಗೆ ಭಯವೆನಿಸುತ್ತಿದೆ. ಕೇವಲ ಈ ಭಾವನೆಯಿಂದಲೇ, ನಮ್ಮ ಹಿಂದೂಗಳಿಗೆ ಎರಡು ಉಪದೇಶದ ಮಾತು ಹೇಳಬೇಕೆಂದು ಅನಿಸುತ್ತಿದೆ ಮತ್ತು ಅವರದನ್ನು ಶಾಂತ ಚಿತ್ತದಿಂದ ಮತ್ತು ನಿರ್ವಿಕಲ್ಪ ಮನದಿಂದ ವಿಚಾರ ಮಾಡುವರೆಂದು ನಮ್ಮ ಆಕಾಂಕ್ಷೆ.

ಸಾಮಾಜಿಕ ಜೀವನ ಅವಿರೋಧದಿಂದ ಸುರಕ್ಷಿತವಾಗಿ ಸಾಗಲು ಒಂದು ಮೂಲಭೂತ ತತ್ವ ಸರ್ವಮಾನ್ಯವಾಗಬೇಕು. ಅದೆಂದರೆ, ಯಾರ್ಯಾರ ಬಳಿ ಸಂಪತ್ತು ಇದೆಯೋ, ಅವರು ಅದನ್ನು ಇಲ್ಲದವರೊಡನೆ ಹಂಚಿ ತಿನ್ನಲು ಕಲಿಯಬೇಕು. ಪುರಾತನ ಕಾಲದಿಂದಲೂ ಜಗತ್ತಿನ ಇತಿಹಾಸದಲ್ಲಿ ನಡೆದ ಬಂಡಾಯದ ಬಗ್ಗೆ ವಿಚಾರ ಮಾಡಿದಾಗ, ಸಮಾಜದಲ್ಲಿ ಅಧಿಕಾರಾರೂಢರು, ತಮ್ಮ ಕೈಯ ಅಧಿಕಾರ ಮತ್ತು ಆಡಳಿತವನ್ನು ಇಲ್ಲದವರೊಡನೆ ಹಂಚಿಕೊಳ್ಳಲು ನಿರಾಕರಿಸಿದರೋ, ಆಗೆಲ್ಲ ಕ್ರಾಂತಿ ನಡೆಯಿತು. ಕ್ರಾಂತಿಯ ಮಾರ್ಗವನ್ನು ತಡೆಯಲು ಇರುವ ಒಂದೇ ಉಪಾಯವೆಂದರೆ, ಸಮಾಜದಲ್ಲಿ ಅಧಿಕಾರ ಮತ್ತು ಆಡಳಿತೆಯ ಸಮನಾದ ಹಂಚಿಕೆಯೊಂದೇ.

ಯೂರೋಪ್ ಖಂಡದ ಕೆಲ ದೇಶಗಳಲ್ಲಿ ಕ್ರಾಂತಿಯಾದಷ್ಟು ಇಂಗ್ಲೆಂಡ್‌ನಲ್ಲಿ ಆಗಿಲ್ಲ. ಯೂರೋಪ್‌ನಲ್ಲಿ ಅರಿಸ್ಟೊಕ್ರಸಿ ನಾಶವಾಯ್ತು. ಆದರೆ ಇಂಗ್ಲೆಂಡ್‌ನಲ್ಲಿ ಅದು ಈಗಲೂ ಜೀವಂತವಿದೆ. ಕಾರಣ, ಇಂಗ್ಲೆಂಡ್‌ನಲ್ಲಿ ಅರಸೊತ್ತಿಗೆಗೆ ತನ್ನ ಅಧಿಕಾರ ಮತ್ತು ಸಂಪತ್ತನ್ನು ಉಳಿಸಿಕೊಳ್ಳುವುದೆಂತೆಂದು ಚೆನ್ನಾಗಿಯೂ ತಿಳಿದಿದೆ. ನಮ್ಮ ಹಿಂದೂ ಮಿತ್ರರಿಗೆ ನಮ್ಮ ಸೂಚನೆ ಇಷ್ಟೇ; ಅಧಿಕಾರಶಾಹಿ ವರ್ಗವು ಸ್ವಾರ್ಥಬುದ್ಧಿಗೆ ಬಲಿ ಬಿದ್ದು ರಾಜ್ಯ, ಕೋಶಗಳೆರಡನ್ನೂ ತಮ್ಮ ಜೋಳಿಗೆಗೇ ಸುರಿದುಕೊಳ್ಳುವ ಅಭಿಲಾಷೆಯಿಂದ ಸರ್ವಸ್ವವನ್ನೂ ನಾಶ ಮಾಡಿಬಿಟ್ಟರು. ಅದೇ ಗತಿ ಹಿಂದೂಗಳದ್ದೂ ಆಗದಿರುವುದಿಲ್ಲ.

Writer - ಭಾಗ- 3

contributor

Editor - ಭಾಗ- 3

contributor

Similar News