ಜೆಎನ್‌ಯು ವಿದ್ಯಾರ್ಥಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲು
ಹೊಸದಿಲ್ಲಿ,ಮಾ.15: ಜೆಎನ್‌ಯುದ ದಲಿತ ಸಂಶೋಧನಾ ವಿದ್ಯಾರ್ಥಿ ಮುತ್ತು ಕೃಷ್ಣನ್(28) ಸಾವಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಬುಧವಾರ ಅಪರಿಚಿತ ವ್ಯಕ್ತಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿಕೊಂಡಿ ದ್ದಾರೆ. ಫೇಸ್‌ಬುಕ್‌ನಲ್ಲಿ ‘ಕೃಷ್ ರಜಿನಿ ’ಎಂದು ಗುರುತಿಸಿಕೊಂಡಿದ್ದ ಮುತ್ತು ಕೃಷ್ಣನ್ ಮಾ.13ರಂದು ದಕ್ಷಿಣ ದಿಲ್ಲಿಯ ಮುನಿರ್ಕಾದಲ್ಲಿರುವ ತನ್ನ ದ.ಕೊರಿಯಾ ಸ್ನೇಹಿತನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಏಮ್ಸ್‌ನ ಐವರು ವೈದ್ಯರ ತಂಡವು ಬುಧವಾರ ಮುತ್ತು ಕೃಷ್ಣನ್ ಶವಪರೀಕ್ಷೆಯನ್ನು ನಡೆಸಿದ್ದು, ಅದನ್ನು ಸಂಪೂರ್ಣವಾಗಿ ವೀಡಿಯೊದಲ್ಲಿ ದಾಖಲಿಸಲಾಗಿದೆ.
ತನ್ನ ಪುತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದ ಮುತ್ತು ಕೃಷ್ಣನ್ ತಂದೆ ಜೀವಾನಂದಂ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆಯೂ ಅವರು ಆಗ್ರಹಿಸಿದ್ದರು.
ಜೆಎನ್‌ಯುದ ಇತಿಹಾಸ ಅಧ್ಯಯನ ಕೇಂದ್ರದಲ್ಲಿ ಎಂ.ಫಿಲ್ ವಿದ್ಯಾರ್ಥಿಯಾಗಿದ್ದ ಮುತ್ತು ಕೃಷ್ಣನ್ ಹೈದರಾಬಾದ್ ವಿವಿ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಬಳಿಕ ನಡೆದಿದ್ದ ವಿದ್ಯಾರ್ಥಿ ಆಂದೋಲನದ ಮುಂಚೂಣಿಯಲ್ಲಿದ್ದರು.