ಒಬ್ಬ ಮಾದಿಗ ಗೃಹಸ್ಥನ ಪತ್ರಕ್ಕೆ ಉತ್ತರ

Update: 2017-03-16 18:45 GMT

‘‘ದೇವೀದಾಸರಾವ ನಾಮದೇವರಾವ ಕಾಂಬಳೆ (ನಿಜಾಮ್ ಸ್ಟೇಟ್) ಎನ್ನುವ ಒಬ್ಬ ಮಾದಿಗ ಸಮಾಜಸೇವಕ ವಿದ್ಯಾರ್ಥಿಯು ಬಾಬಾಸಾಹೇಬರಿಗೆ (ಡಾ. ಅಂಬೇಡ್ಕರ) ಪತ್ರ ಬರೆದು ಹಲವಾರು ಪ್ರಶ್ನೆಗಳನ್ನು ಎತ್ತಿದನು. ಅವುಗಳಲ್ಲಿ ಮುಖ್ಯ ಪ್ರಶ್ನೆ ಎಂದರೆ ಬಾಬಾಸಾಹೇಬರು ಹೊಲೆಯ ಜಾತಿಯವರಿಗಾಗಿ ಅಷ್ಟೆ ಸಾಮಾಜಿಕ ಕಾರ್ಯವನ್ನು ಮಾಡುತ್ತಾರೆ, ಹೊಲೆಯ ಜನರನ್ನಷ್ಟೇ ಹತ್ತಿರಕ್ಕೆ ಕರೆದುಕೊಳ್ಳುತ್ತಾರೆ. ಅವರು ಈ ಧೋರಣೆಯನ್ನು ಬಿಟ್ಟು ಅಸ್ಪಶ್ಯ ಸಮಾಜದ ಎಲ್ಲ ಜಾತಿಗಳಿಗಾಗಿ ಕಾರ್ಯವನ್ನು ಮಾಡಬೇಕು, ಆ ಸಮಾಜ ಸೇವಕರನ್ನು ಹತ್ತಿರಕ್ಕೆ ಕರೆದುಕೊಳ್ಳಬೇಕು. ಬಾಬಾ ಸಾಹೇಬರು ಪತ್ರದ ಈ ಅಂಶಗಳಿಗೆ ಉತ್ತರಗಳನ್ನು ನೀಡಿದರು.

ಆ ಉತ್ತರದಲ್ಲಿ ಅವರ ಅರೆದುಃಖ ಹಾಗೂ ಅರೆಕೋಪದ ಉದ್ವೇಗಗಳ ಪಡಿನೆಳಲು ಎದ್ದು ಕುಣುವುದಲ್ಲದೆ ಹೊಲೆಯರಲ್ಲದ ಜಾತಿಯ ಸಮಾಜಸೇವಕರತ್ತ ನೋಡುವ ಅವರ ದೃಷ್ಟಿಕೋನ ಹೇಗಿತ್ತು, ಅದು ಹಾಗೇಕ್ಕಿತ್ತು, ಎನ್ನುವುದರ ಚಿತ್ರವೂ ಕಾಣಸಿಗುತ್ತದೆ. ಸಾಮಾನ್ಯವಾಗಿ ಭಾವನೆಗಳಲ್ಲಿ ಸಿಕ್ಕಿಕೊಳ್ಳದ ಬಾಬಾಸಾಹೇಬರು ತಮ್ಮ ಭಾವನೆಗಳು ಸಿಡಿದೆದ್ದು ಬರುವ ಸನ್ನಿವೇಶ ಎದುರಾದಾಗ, ಅದರಲ್ಲೂ ಅದು ಒಬ್ಬ ಕಿಡಿಗೇಡಿಯಿಂದಾಗಿ ಎದುರಾದಾಗ, ತಮ್ಮ ಭಾವನೆಗಳನ್ನು ಅನಿಯಂತ್ರಿತವಾಗಿ ಹಾಗೂ ಮನಬಂದಂತೆ ಹರಿಯಲು ಬಿಡದೆ (ವಕ್ರೋಕ್ತಿ) ಕೊಂಕುನುಡಿ, (ವ್ಯಾಜೋಕ್ತಿ) ಇನ್ನೊಬ್ಬರ ಮೇಲೆ ಹಾಯಿಸಿ ಆಡಿದ ಮಾತು, ಅಪಹಾಸ್ಯ ಮೊದಲಾದ ಸಾಹಿತ್ಯಿಕ ಅಲಂಕಾರಗಳ ಮೂಲಕ ಅವುಗಳನ್ನು ಚೆಂದವಾದ ಹಾಗೂ ಸಶಕ್ತವಾದ ಪದಗಳಲ್ಲಿ ವ್ಯಕ್ತಪಡಿಸುತ್ತಿದ್ದರು ಎನ್ನುವುದಕ್ಕೆ ಇದೊಂದು ಶ್ರೇಷ್ಠ ಮಾದರಿ. ಕಾಂಬಳೆ ಅವರ ಈ ಪತ್ರವು 14-6-1941ರ ‘ಜನತಾ’ದಲ್ಲಿ (ಪು.5) ಅಚ್ಚಾಗಿತ್ತು. ಅಲ್ಲದೆ ಬಾಬಾಸಾಹೇಬರ ಉತ್ತರವನ್ನು ಸಂಪಾದಕೀಯವೆಂದು ಅದೇ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು.’’ ಡಾ. ಬಾಬಾಸಾಹೇಬರರ ಉತ್ತರ ಹಾಗೂ ಆ ಪತ್ರಗಳು ಕೆಳಗಿನಂತಿವೆ:

‘‘ರಾಜಮಾನ್ಯ ರಾಜಶ್ರೀ, ದೇವೀದಾಸರಾವ ಕಾಂಬಳೆ ಇವರಿಗೆ ಅನೇಕ...
ತಮ್ಮನ್ನು ಏನೆಂದು ಸಂಬೋಧಿಸಬೇಕು, ಎನ್ನುವ ಬಗೆಗೆ ಗೊಂದಲಕ್ಕೆ ಈಡಾಗಿದ್ದೇನೆ. ನಮಸ್ಕಾರ ಎನ್ನಬೇಕೆಂದರೆ ನಾವಿಬ್ಬರೂ ಬ್ರಾಹ್ಮಣರಲ್ಲ. ಜೋಹಾರ್ ಎನ್ನಬೇಕೆಂದರೆ ತಾವು ಮಾದಿಗರು. ಫುರಮಾನ್ ಎನ್ನಬೇಕೆಂದರೆ ನಾನು ಹೊಲೆಯ. ಆಶೀರ್ವಾದ ಎನ್ನಬೇಕೆಂದರೆ ಮಾದಿಗನಿಗೆ ಆಶೀರ್ವಾದ ನೀಡುವ ಹೊಲೆಯ ಶ್ರೇಷ್ಠನೇ ಎನ್ನುವ ಆಪಾದನೆ ಬಂದೀತು. ಹೀಗಾಗಿ ಏನನ್ನೂ ಬರೆಯದೆ ಚಾಂಗದೇವನಂತೆ (ಹುಲಿಯ ಸವಾರಿ ಮಾಡಿ ಸಂತ ಜ್ಞಾನೇಶ್ವರರ ದರ್ಶನಕ್ಕೆ ಬಂದ ತಪಸ್ವಿ) ಖಾಲಿ ಜಾಗಬಿಟ್ಟು, ತಮ್ಮ ಪತ್ರಕ್ಕೆ ಉತ್ತರವನ್ನು ನೀಡುತ್ತಿದ್ದೇನೆ. ಹೊಲೆಯ ಸಮುದಾಯ ಹಾಗೂ ಹೊಲೆಯ ನಾಯಕರು ಮಾದಿಗ ಜಾತಿಯ ಮೇಲೆ ಅನ್ಯಾಯ ಮಾಡುತ್ತಿರುವರು ಎಂಬುದನ್ನು ಕುರಿತು ತಮ್ಮ ಮನಸ್ಸಿನಲ್ಲಿರುವ ‘‘ಖುಡಖುಡಿ’’ಯನ್ನು (ಇದು ಮರಾಠಿ ‘‘ಖುಮಖುಮೀ’’ - ಜಗಳದ ತೀಟೆ- ಶಬ್ದದ ನಿಜಾಮಶಾಹಿಯ ಅಪಭ್ರಂಶವಾಗಿರಲು ಸಾಕು) ತೆಗೆದುಹಾಕಲು ಹಾಗೂ ಒಂದೇ ಸಲಕ್ಕೆ ‘ಕೊನೆಮುಟ್ಟಿಸು’ವ ಸಲುವಾಗಿ ಪತ್ರವನ್ನು ಬರೆಯಲು ತೀರ್ಮಾನಿಸಿದೆ.

ತಾವು ಇದರಲ್ಲಿ ಅಯೋಗ್ಯವಾದುದನ್ನೇನೂ ಮಾಡಿಲ್ಲ. ತಾವು ನನ್ನನ್ನು ‘ಪರಮಪೂಜ್ಯ’ ಎಂಬ ಶಬ್ದದಿಂದ ಸಂಬೋಧಿಸಿರುವಿರಿ. ಅದಕ್ಕಾಗಿ ನಾನು ತಮಗೆ ತುಂಬ ಋಣಿಯಾಗಿದ್ದೇನೆ. ಹೊಲೆಯರು ಯಾವಾಗಲು ‘ಪರಮಪೂಜ್ಯ’ ವಿಶೇಷಣವನ್ನು ಬಳಸಿ ನನ್ನನ್ನು ಸಂಬೋಧಿಸುತ್ತಾರೆ. ಆದರೆ ಅದರಲ್ಲಿ ಅಂತಹ ವಿಶೇಷವೇನೂ ಇಲ್ಲ. ಹೊಲೆಯನು ಹೊಲೆಯನನ್ನು ಹೊಗಳಿದರೆ ಅದಕ್ಕೇನು ಬೆಲೆ? ತಾವು ಮಾದಿಗರು ಹಾಗೂ ನಾನೂ ಹೊಲೆಯನಿದ್ದು ತಾವು ನನ್ನನ್ನು ‘ಪರಮಪೂಜ್ಯ ಬಾಬಾಸಾಹೇಬ’ ಎನ್ನುವಲ್ಲಿಯ ಪ್ರೀತಿ ಹಾಗೂ ಸ್ವಾರಸ್ಯಗಳು ಹೇಳಲಾಗದಷ್ಟು ಶ್ರೇಷ್ಠ.

ಗಾಂಧಿಯವರು ನನ್ನ ಪತ್ರಕ್ಕೆ ಉತ್ತರವನ್ನು ನೀಡಲಿಲ್ಲವೆಂದು ನಾನು ಅವರನ್ನು ತಿರಸ್ಕರಿಸುತ್ತೇನೆಂದು ಯಾರು ತಮಗೆ ತಪ್ಪು ತಿಳುವಳಿಕೆಯನ್ನು ಮಾಡಿಕೊಟ್ಟರೋ ನನಗೆ ಅರ್ಥವಾಗುತ್ತಿಲ್ಲ. ನಾನು ಗಾಂಧಿಯವರನ್ನು ತಿರಸ್ಕರಿಸುತ್ತಿದ್ದರೂ ಅದರ ಕಾರಣಗಳೇ ಬೇರೆ. ಅವರು ನನ್ನ ಪತ್ರಕ್ಕೆ ಉತ್ತರ ನೀಡಲಿಲ್ಲ ಎನ್ನುವುದಲ್ಲ. ತಮ್ಮ ಹಾಗೆಯೇ ಇನ್ನೂ ಹಲವು ಜನ ನನಗೆ ಪತ್ರಗಳನ್ನು ಬರೆಯುತ್ತಾರೆ. ಆದರೆ ನಾನೆಂದಿಗೂ ಅವರಿಗೆ ಉತ್ತರಗಳನ್ನು ನೀಡುವ ಅಭ್ಯಾಸವನ್ನು ಇರಿಸಿಕೊಂಡಿಲ್ಲ. ಅದರಿಂದ ಬಹಳಷ್ಟು ಜನರಿಗೆ ಕೆಡುಕೆನಿಸುತ್ತದೆ. ಆದರೆ ಅದಕ್ಕಾಗಿ ಅವರು ನನ್ನನ್ನು ತಿರಸ್ಕರಿಸುವುದಿಲ್ಲ. ನಾನು ಹಗಲಿರುಳು ಕೆಲಸದಲ್ಲಿ ಇರುತ್ತೇನೆ, ಎನ್ನುವುದು ಅವರಿಗೆ ಗೊತ್ತು. ನನಗೆ ಚೈನಿ, ಐಷಾರಾಮು ಗೊತ್ತಿಲ್ಲ. ನಾನು ನಾಟಕ, ಸಿನೆಮಾಗಳಲ್ಲಿ ಕಾಲ ಕಳೆಯುವುದಿಲ್ಲ. ನನ್ನ ವೃತ್ತಿ, ಓದು ಇಲ್ಲವೆ ಸಾರ್ವಜನಿಕ ಕಾರ್ಯಗಳಲ್ಲಿ ಸತತವಾಗಿ ತೊಡಗಿಸಿಕೊಳ್ಳುತ್ತೇನೆ. ನನಗೆ ಗಾಂಧಿಯವರಂತೆ ಸೆಕ್ರೆಟರಿಗಳಿಲ್ಲ. ನಾನೇ ನನ್ನ ಕೆಲಸವನ್ನು ಮಾಡಿಕೊಳ್ಳಬೇಕಿದೆ. ಇದನ್ನರಿತೇ ನನ್ನ ಸ್ನೇಹಿತರು, ಸಹಕಾರಿಗಳು ನನ್ನನ್ನು ಕ್ಷಮಿಸುತ್ತಾರೆ, ತಿರಸ್ಕರಿಸುವುದಿಲ್ಲ.

‘‘ಉತ್ತರವನ್ನು ನೀಡದಿದ್ದರೆ ನಾನು ನಿಮ್ಮನ್ನು ತಿರಸ್ಕರಿಸುವೆನು’’ ಎಂದು ತಾವು ಬರೆದಿರುವುದು ಮನುಷ್ಯನ ಸ್ವಾಭಾವಕ್ಕೆ ತಕ್ಕಂತೆಯೇ ಇದೆ. ತಮ್ಮ ಯೋಗ್ಯತೆ ಎಂಥದೋ ನಾನರಿಯೆ. ‘‘ನಾನು ನಿಜಾಮ ಇಲಾಖೆಯ ಮಾರಾಠವಾಡಾ ವಿಭಾಗದವನು, ಮಾದಿಗ ಸಮುದಾಯದವನು, ಓದು ಕಲಿತವನು, ಎಲ್ಲರಲ್ಲಿ ಮೊದಲ ವಿದ್ಯಾರ್ಥಿ’’ ಎಂದು ತಮ್ಮನ್ನು ವರ್ಣಿಸಿಕೊಂಡಿರುವಿರಿ. ತಿರಸ್ಕರಿಸುವ ಹೊತ್ತು ಬರುವುದು ಕೆಟ್ಟದು, ಆದರೆ ತಾವು ಬರಿ ವಿದ್ಯಾರ್ಥಿಯಾಗಿದ್ದರೆ ತಮ್ಮ ತಿರಸ್ಕಾರವನ್ನು ಲೆಕ್ಕಿಸಬೇಕಿರಲಿಲ್ಲ. ಆದರೆ ತಾವು, ‘‘ಮಾದಿಗ ಸಮುದಾಯದ ಸುಧಾರಣೆಯ ಇಡಿಯ ಜವಾಬ್ದಾರಿ ನನ್ನ ತಲೆಯ ಮೇಲೆಯೇ ಇದೆ’’ ಎಂದು ಖಡಾಖಂಡಿತವಾಗಿ ಹೇಳಿರುವಿರಿ.

ನಾನು ತಮ್ಮನ್ನು ಒಬ್ಬ ಸಾಮಾನ್ಯ ವಿದ್ಯಾರ್ಥಿ ಎಂದು ಬಗೆದು ಪತ್ರವನ್ನು ಕಳಿಸುತ್ತಿರದೆ, ನಿಜಾಮ ಸ್ಟೇಟಿನ ಮಾದಿಗ ಸಮುದಾಯದ ಒಬ್ಬ ಭಾವಿ ಮುಂದಾಳು ಎಂದು ಬಗೆದು ಪತ್ರವನ್ನು ಕಳಿಸುತ್ತಿದ್ದೇನೆ. ಹೀಗಾಗಿ ತಾವು ಮರುತ್ತರವನ್ನು ರವಾನಿಸಲು ಅನುಮಾನಿಸಕೂಡದು. ಜ್ಯೂ ಜನರಲ್ಲಿ ಮೋಸೆಸ್ ಇದ್ದ ಹಾಗೆ ಮಾದಿಗರಲ್ಲಿ ತಾವು ಎನ್ನುವುದು ತಮ್ಮ ಭಾಷೆಯಿಂದ ಸ್ಪಷ್ಟ. ಅಂದ ಬಳಿಕ ತಮ್ಮ ಪತ್ರಕ್ಕೆ ಯಾರು ಉತ್ತರವನ್ನು ಕೊಡಲಿಕ್ಕಿಲ್ಲ! ತಮ್ಮ ಮನಸ್ಸಿನಲ್ಲಿ ನನ್ನ ಬಗೆಗೆ ತಿರಸ್ಕಾರ ಹುಟ್ಟಿಕೊಂಡರೆ ಇಡಿಯ ಮಾದಿಗ ಸಮುದಾಯ ನನ್ನನ್ನು ತಿರಸ್ಕರಿಸೀತು. ಅದನ್ನು ತಪ್ಪಿಸದಿದ್ದರೆ ಅದು ನನ್ನ ಅನರ್ಥಕ್ಕೆ ಕಾರಣವಾಗಲಿಕ್ಕಿಲ್ಲ ಎಂದು ಯಾರು ಹೇಳಬಲ್ಲರು? ನಾನಂತೂ ಹೇಳಲಾರೆ. ಅದನ್ನು ತಪ್ಪಿಸಲೆಂದು ನನ್ನ ವಾಡಿಕೆಯನ್ನು ಮುರಿದು ನಾನು ತಮ್ಮ ಪತ್ರಕ್ಕೆ ಉತ್ತರವನ್ನು ಕಳಿಸುತ್ತಿದ್ದೇನೆ.

ಮೊಟ್ಟಮೊದಲಿಗೆ, ಎರಡು ಸಂಗತಿಗಳಿಗಾಗಿ ತಮಗೆ ಅಭಿನಂದನೆಯನ್ನು ಸಲ್ಲಿಸದೆ ಇರಲಾಗದು. ಹೊಲೆಯರು ನನ್ನನ್ನು ಈಶ್ವರನ ಅವತಾರನೆಂದು ಮನ್ನಿಸಿ ನನ್ನ ಫೋಟೊಕ್ಕೆ ಪೂಜೆ ಸಲ್ಲಿಸುತ್ತಾರೆ, ಅಲ್ಲದೆ ನನ್ನ ಹೊರತು ಇನ್ನಾರೂ ಹಾಗೆ ಆಗಲಾರರೆಂದು ನಂಬುತ್ತಾರೆ ಎಂಬ ಸಂಗತಿಯ ಮೇಲೆ ತಾವು ಕಣ್ಣಿರಿಸಿದುದು ಸ್ತುತ್ಯವಾದುದು. ಇಂಥ ಅಂಧಶ್ರದ್ಧೆ ಹಾಗೂ ಭೋಳೆತನಗಳ ಅನುಕರಣೆಗಳನ್ನು ಮಾದಿಗ ಸಮುದಾಯಕ್ಕೆ ಮಾಡಗೊಡುವುದಿಲ್ಲ ಎಂದು ತಾವು ಮಾಡಿದ ನಿರ್ಧಾರವನ್ನು ತಾವು ಕೃತಿಯಲ್ಲಿ ಇಳಿಸಬೇಕೆಂದು ತಮಗೆ ನನ್ನ ಆಗ್ರಹದ ಸೂಚನೆ. ವಿಭೂತಿಪೂಜೆಯು ಮಾನವನಿಗೆ ಕೀಳುತನವನ್ನು ತಂದುಕೊಡುವ ಸಂಗತಿಯಾಗಿದೆ. ನಾನು ಸಮತೆಯನ್ನು ತುಂಬ ಇಷ್ಟಪಡುವವನಷ್ಟೇ ಅಲ್ಲ, ಅದನ್ನು ಎತ್ತಿಹಿಡಿಯುವವನು. ನಾನು ದೇವನಲ್ಲ, ಮಹಾತ್ಮನಲ್ಲ ಎಂದು ಹೇಳಿ ದಣಿದೆ. ಆದರೆ ಅದರಿಂದ ಅವರ ಮೇಲೆ ಯಾವುದೇ ಬಗೆಯ ಪರಿಣಾಮ ಆದಂತೆ ಕಾಣುತ್ತಿಲ್ಲ. ತಾವು ಮಾದಿಗ ಸಮುದಾಯದವರಿಗೆ ನನ್ನ ಫೋಟೋವನ್ನು ಪೂಜಿಸಲು ಬಿಡುವುದಿಲ್ಲ ಎನ್ನುವುದಂತೂ ಒಳ್ಳೆಯದೇ ಆಯಿತು.

ಮಾದಿಗರು ಅಮಾವಾಸ್ಯೆ (ಅವಾಸ್), ಹುಣ್ಣಿಮೆ (ಪುನವ್), ಗ್ರಹಣಗಳನ್ನು ನಂಬುವ ಬದಲು ನನ್ನ ಫೋಟೊವನ್ನು ಪೂಜಿಸುವುದು ಕೆಟ್ಟ ಸಂಗತಿ ಎಂಬ ಬಗೆಗೆ ನನ್ನಲ್ಲಿ ಯಾವುದೇ ಸಂದೇಹವಿಲ್ಲ. ತಾವು ತಮ್ಮ ದೃಷ್ಟಿಯನ್ನು ಸಂಕುಚಿತಗೊಳಿಸಿದ್ದೀರಿ ಎಂಬ ಬಗೆಗೆ ನನಗೆ ಕೆಡಕೆನಿಸುತ್ತದೆ. ತಾವು ಹೊಲೆಯ ಸಮುದಾಯದವರ ತಲೆಯಿಂದ ಈ ಫೋಟೊ ಪೂಜೆಯ ಹುಚ್ಚನ್ನು ತೆಗೆದುಹಾಕುವ ವ್ರತವನ್ನು ಆಚರಿಸಬೇಕೆಂದು ತಮಗೆ ಹೇಳುವುದು ನನಗೆ ಆವಶ್ಯಕ ಎನ್ನಿಸುತ್ತದೆ. ಇದು ತಮ್ಮ ಬಲು ದೊಡ್ಡ ಪರಾಕ್ರಮ ಎನ್ನಿಸೀತು ಎನ್ನುವಲ್ಲಿ ಯಾವುದೇ ಸಂದೇಹವಿಲ್ಲ. ಇಷ್ಟೊಂದು ಪರಾಕ್ರಮವನ್ನು ಮೆರೆದ ಬಳಿಕ ಮಾದಿಗ ಸಮುದಾಯವು ತಮ್ಮ ಫೋಟೊವನ್ನು ಪೂಜಿಸಲು ಆರಂಭಿಸೀತೆಂಬ ಹೆದರಿಕೆ ತಮ್ಮಲ್ಲಿದ್ದರೆ ಹಾಗೇನೂ ಹೆದರುವ ಕಾರಣವಿಲ್ಲ. ತಮ್ಮ ಫೋಟೊ ಪೂಜೆಯ ಸಂಪ್ರದಾಯವು ನನ್ನ ಫೋಟೊ ಪೂಜೆಯ ಸಂಪ್ರದಾಯದಷ್ಟು ಕೆಟ್ಟ ಪರಿಣಾಮವನ್ನು ಬೀರಲಿಕ್ಕಿಲ್ಲ.

 ಇನ್ನೊಂದು ಮಾತಿಗಾಗಿಯೂ ನಾನು ತಮಗೆ ಆಭಾರಿಯಾಗಿದ್ದೇನೆ. ನಾನು ಸತ್ತ ಬಳಿಕ ಹೇಗಾದೀತು? ಎನ್ನುವ ಚಿಂತೆಯನ್ನು ಹಲವು ಸಲ ಪ್ರಕಟಪಡಿಸಿದ್ದೇನೆ ಎನ್ನುವುದು ನಿಜ. ಹೊಲೆಯರ ಪೈಕಿ ಒಬ್ಬನೂ, ‘‘ಯಾವ ಅಭ್ಯಂತರವೂ ಇಲ್ಲ. ನೀವು ಸಾಯಿರಿ. ನಾವು ನಡೆಸು ತ್ತೇವೆ’’ ಎಂದು ನನಗೆ ಹೇಳಲು ಧೈರ್ಯ ಮಾಡಲಿಲ್ಲ. ತಾವು ಕೊಟ್ಟ ಮಾತಿನಿಂದ ನಮಗೆ ಸಮಾಧಾನವಾಯಿತು. ದ್ರೋಣನು ಕೌರವ, ಪಾಂಡವರಿಗೆ ಧನುರ್ವಿಧ್ಯೆಯನ್ನು ಕಲಿಸಿದ ಬಳಿಕ, ‘‘ಯಾರು ನನಗೆ ಗುರುದಕ್ಷಿಣೆ ಕೊಡುವಿರಿ?’’ ಎಂದು ಕೇಳಿದರು. ಅದಕ್ಕೆ ಯಾರೂ ಉತ್ತರವನ್ನು ನೀಡಲಿಲ್ಲ. ಗುರು ಏನು ಕೇಳುವನೋ, ಪ್ರಾಣವನ್ನು ಕೇಳಿದರೆ? ಎನ್ನುವ ಭಯದಿಂದ ಎಲ್ಲರೂ ಸುಮ್ಮನಿದ್ದರು. ಅರ್ಜುನ ಒಬ್ಬನಲ್ಲಿ ಮಾತ್ರ ಧೈರ್ಯ ಮೂಡಿತು. ಅವನು, ‘‘ಏನನ್ನು ಕೇಳುವಿರೋ, ಕೇಳಿ, ಕೊಡುವೆ’’ ಎಂದನು.

ದ್ರೋಣನ ಜಾಗದಲ್ಲಿ ನಾನು ಅರ್ಜುನನ ಜಾಗದಲ್ಲಿ ತಾವಿರುವಿರಿ, ಎಂದೆನ್ನಿಸಿ ನನ್ನ ತರುವಾಯ ಯಾರಾದರೂ ಇರುವರೆಂಬ ವಿಶ್ವಾಸದಿಂದ ನನಗೆ ಶಾಂತಿ ಲಭಿಸಿತು. ದ್ರೋಣನು ಶಿಷ್ಯನ ಕೈಯಿಂದ ದ್ರುಪದನನ್ನು ಸೆರೆ ಹಿಡಿದು ತರುವೆನೆಂದು ಪಣ ತೊಟ್ಟಿದ್ದನು. ಹಾಗೆ ಬ್ರಾಹ್ಮಣರನ್ನು ನಾಶಪಡಿಸುವುದು ನನ್ನ ಪಣವಾಗಿದೆ. ಅದು ನನ್ನ ಆಯುಷ್ಯದಲ್ಲಿ ನನ್ನ ಕೈಯಿಂದ ಪೂರ್ತಿಯಾಗುವ ಸಾಧ್ಯತೆ ಇಲ್ಲ. ತಾವು ಅದನ್ನು ಪೂರ್ತಿಗೊಳಿಸಲು ಸಿದ್ಧರಿರುವುದು ನನ್ನ ಬಲು ದೊಡ್ಡ ಭಾಗ್ಯವೆಂದು ತಿಳಿಯುತ್ತೇನೆ, ಅದಕ್ಕಾಗಿ ತಮಗೆ ಆಭಾರಿಯಾಗಿದ್ದೇನೆ. ತಮ್ಮಿಂದ ಇದನ್ನು ಮಾಡಲು ಸಾಧ್ಯವಾದರೆ ಇತಿಹಾಸದಲ್ಲಿ ಮಾದಿಗ ಸಮುದಾಯಕ್ಕೆ ದೊಡ್ಡ ಸ್ಥಾನ ಪ್ರಾಪ್ತವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75