ನೋಟು ರದ್ದತಿ, ಚುನಾವಣೆಗಳು ಮತ್ತು ಜಿಡಿಪಿ
ನೋಟು ರದ್ದತಿ ಮತ್ತು ಜಿಡಿಪಿ
ಇದೇ ಫೆಬ್ರವರಿ 28ರಂದು ಕೇಂದ್ರ ಅಂಕಿಅಂಶಗಳ ಸಂಸ್ಥೆ (ಸಿಎಸ್‌ಒ) ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಪ್ರಕಟಿಸಿರುವ ಮಾಹಿತಿಗಳು ಹುಬ್ಬೇರಿಸುವಂತಿವೆ. 2016-17ರ ತೃತೀಯ ಪಾದದಲ್ಲಿ (2016ರ ಅಕ್ಟೋಬರ್‌ನಿಂದ ಡಿಸೆಂಬರ್ ತನಕ) ಖಾಸಗಿ ಉಪಭೋಗದ ವೆಚ್ಚ ದ್ವಿತೀಯ ಪಾದಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಶೇ. 10.1 ಆಗಿದೆಯಂತೆ. ಅದರ ಪೂರ್ವಭಾವಿ ಅಂದಾಜಿನಂತೆ ತೃತೀಯ ಪಾದದಲ್ಲಿ ಜಿಡಿಪಿ ಶೇ. 7 ಆಗಲಿದೆಯಂತೆ. 2016-17ರ ಇಡೀ ವರ್ಷದಲ್ಲಿ ಅದು ಶೇ. 7.1 ಆಗಲಿದೆಯಂತೆ. ಸಿಎಸ್‌ಒ ಅಂದಾಜು ಸಾರಾಂಶದಲ್ಲಿ ಹೇಳುವುದೇನೆಂದರೆ ನೋಟುರದ್ದತಿಯಿಂದ ಜಿಡಿಪಿ ಮೇಲೆ ಹೆಚ್ಚುಕಡಿಮೆ ಶೂನ್ಯ ಪರಿಣಾಮ ಆಗಿದೆ. ಅದು ಮೋದಿಯವರ ಕೈಯಲ್ಲಿ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ‘‘ನೋಟು ರದ್ದತಿಯಿಂದ ದೇಶದ ಪ್ರಗತಿಯ ಮೇಲೆ ಯಾವುದೇ ದುಷ್ಪರಿಣಾಮ ಆಗಿಲ್ಲ, ಆರ್ಥಿಕ ವ್ಯವಸ್ಥೆ ಸದೃಢವಾಗಿದೆ’’ ಎಂದು ಮೋದಿ ಟಾಂಟಾಂ ಮಾಡಲಾರಂಭಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಕಲಿತ ಅರ್ಥಶಾಸ್ತ್ರಜ್ಞರನ್ನು ಮೂದಲಿಸುವ ಮಟ್ಟಕ್ಕೂ ಹೋಗಿದ್ದಾರೆ. ಪಕ್ಷಾಧ್ಯಕ್ಷ ಅಮಿತ್ ಶಾ, ವಿತ್ತಸಚಿವ ಜೇಟ್ಲಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಮುಂತಾದವರೂ ದೇಶದ ಆರ್ಥಿಕ ಪರಿಸ್ಥಿತಿ ಸರಿಹೋಗಿದೆ ಎಂದು ಹೇಳುತ್ತಿದ್ದಾರೆ. ಇವರ ಮಾತುಗಳನ್ನು ಕೇಳಿದರೆ ನೋಟು ರದ್ದತಿಯ ಸಂಕಷ್ಟಗಳೆಲ್ಲ ಜನರ ಕಲ್ಪನಾವಿಹಾರವೆಂದು ಭಾವಿಸಬೇಕು!
ಸಿಎಸ್‌ಒ ಅಂಕಿಅಂಶಗಳ ಒಳಗುಟ್ಟೇನಿರಬಹುದು?
‘‘ನೋಟುರದ್ದತಿಯಿಂದ ಆರ್ಥಿಕ ಬೆಳವಣಿಗೆಗೆ ಏನೂ ತೊಂದರೆ ಯಾಗಿಲ್ಲ’’ ಎಂಬರ್ಥ ನೀಡುವ ಈ ಅಂಕಿಅಂಶಗಳನ್ನು ನಂಬಬಹುದೇ? ಇಲ್ಲಿ ಕೆಲವೊಂದು ವಿಷಯಗಳನ್ನು ಗಮನಿಸಬೇಕಾಗಿದೆ. * ಅಂದಾಜುಗಳನ್ನು ತಯಾರಿಸುವಾಗ ನಗದು ವಹಿವಾಟೇ ಜಾಸ್ತಿ ಇರುವ ಅನೌಪಚಾರಿಕ ಮತ್ತಿತರ ವಲಯಗಳ ದತ್ತಾಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಭಾರತದಲ್ಲಿರುವ ಒಟ್ಟು ಕಾರ್ಮಿಕರ ಪೈಕಿ ಸುಮಾರು ಶೇ. 75ರಷ್ಟು ಅನೌಪಚಾರಿಕ ವಲಯದಲ್ಲಿ ದುಡಿಯುತ್ತಾರೆ. ಜಿಡಿಪಿಯ ಸುಮಾರು ಶೇ. 40ರಷ್ಟು ಅನೌಪಚಾರಿಕ ಕ್ಷೇತ್ರದಿಂದ ಬರುತ್ತದೆ.
* ಜಿಡಿಪಿ ದರ ನಿರ್ಣಯಿಸಲು ಎರಡು ವಿಧಾನಗಳಿವೆ. ಉಪಭೋಗದ ವಿಧಾನದಲ್ಲಿ ಖಾಸಗಿ ಉಪಭೋಗ, ಸರಕಾರಿ ಉಪಭೋಗ, ಹೂಡಿಕೆ ಮತ್ತು ನಿವ್ವಳ ರಫ್ತುಗಳನ್ನು (ಆಮದು-ರಫ್ತು) ಒಟ್ಟು ಸೇರಿಸಿ ಜಿಡಿಪಿಯನ್ನು ಲೆಕ್ಕ ಹಾಕಲಾಗುತ್ತದೆ. ಈ ವಿಧಾನದಲ್ಲಿ ಖಾಸಗಿ ಉಪಭೋಗದ ಪ್ರಮಾಣವೇ ಹೆಚ್ಚಿರುತ್ತದೆ. ಸಿಎಸ್‌ಒ ಪ್ರಕಾರ ತೃತೀಯ ಪಾದದಲ್ಲಿ ಖಾಸಗಿ ಉಪಭೋಗದ ವೆಚ್ಚ ಏರಿಕೆಯಾಗಿ ಶೇ. 10.1ಕ್ಕೆ ತಲುಪಿದೆ. ನೆನಪಿರಲಿ, ಇದು ಆಗಿರುವುದು ನೋಟು ರದ್ದತಿಯ ಕಾಲದಲ್ಲಿ. ಅಂದರೆ ಶೇ. 86ರಷ್ಟು ನಗದನ್ನು ಚಲಾವಣೆಯಿಂದ ಹಿಂದೆಗೆದ ಕಾಲದಲ್ಲಿ. ಗಮನಿಸಬೇಕಿರುವ ಅಂಶ ಏನೆಂದರೆ ಇಂತಹ ಅಂದಾಜುಗಳನ್ನು ತಯಾರಿಸುವಾಗ ಉಪಭೋಗದ ಅಂಕಿಅಂಶ ಲಭ್ಯವಿರುವುದಿಲ್ಲ. ಅದನ್ನು ಗೃಹಬಳಕೆ ವಸ್ತುಗಳ ಉತ್ಪಾದನೆ ಮೇರೆಗೆ ಅಂದಾಜಿಸಲಾಗುತ್ತದೆ. ಸರಕು ಉತ್ಪಾದನಾ ಸಂಸ್ಥೆಗಳು ಕೊಟ್ಟಿರುವ ವರದಿಗಳ ಪ್ರಕಾರ ತೃತೀಯ ಪಾದದಲ್ಲಿ ಸರಕುಗಳ ಮಾರಾಟ ಕಡಿಮೆಯಾಗಿದೆ; ಜನ ಜಾಗರೂಕತೆಯಿಂದ ಖರ್ಚು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನವೆಂಬರ್ 8ರಿಂದ ಡಿಸೆಂಬರ್ ಕೊನೆಯ ವಾರದ ತನಕ ಆಹಾರೇತರ ವಸ್ತುಗಳಿಗಾಗಿ ಬ್ಯಾಂಕು ಸಾಲಗಳ ಪ್ರಮಾಣವೂ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಉಪಭೋಗ ಹೆಚ್ಚಾಗಿರುವುದು ತುಂಬಾ ಕುತೂಹಲಕಾರಿಯಾಗಿದೆ.
ಜೂನ್ 2011ರ ನಂತರದಲ್ಲಿ ಖಾಸಗಿ ಉಪಭೋಗ ಇಷ್ಟೊಂದು ವೇಗವಾಗಿ ಬೆಳೆದಿರುವುದು ಇದೇ ಮೊದಲ ಬಾರಿ! ಚಲಾವಣೆಯಲ್ಲಿರುವ ನಗದಿನ ಪ್ರಮಾಣದಲ್ಲಿ ಭಾರಿ ಕುಸಿತ ಆಗಿದ್ದ ಕಾಲದಲ್ಲಿ ಹೀಗಾಗಿರುವುದು ನಂಬಲಸಾಧ್ಯವಾಗಿದೆ. ಏಕೆಂದರೆ ಭಾರತದಲ್ಲಿ ಶೇ. 78ರಿಂದ 98ರಷ್ಟು ವಹಿವಾಟುಗಳು ನಗದು ರೂಪದಲ್ಲಿ ನಡೆಯುತ್ತವೆ. ಉಪಭೋಗದಲ್ಲಿ ಹೆಚ್ಚಳಕ್ಕೆ ವಿವಿಧ ಸಾಧ್ಯತೆಗಳಿದ್ದು ಅವುಗಳನ್ನು ಒಂದೊಂದಾಗಿ ಪರಿಶೀಲಿಸೋಣ. ಸರಕುಗಳನ್ನು ಕೇವಲ ಕಂಪೆನಿ ಗೋದಾಮುಗಳಿಂದ ವಿತರಕರ ಗೋದಾಮುಗಳಿಗೆ ವರ್ಗಾಯಿಸಲಾಗಿದೆ ಅಷ್ಟೆ. ಬಳಕೆದಾರರು ಖರೀದಿಸಿಲ್ಲವಾದರೂ ಇದನ್ನೇ ಉಪಭೋಗವೆಂದು ಪರಿಗಣಿಸಲಾಗಿದೆ.
ಜನ ಸಾಲ ಎತ್ತಿರಬಹುದೇ? ಆದರೆ ಬ್ಯಾಂಕುಗಳು ವಿತರಿಸಿದ ಚಿಲ್ಲರೆ ಸಾಲಗಳ ಪ್ರಮಾಣ ಏಕಪ್ರಕಾರವಾಗಿತ್ತು (ಶೇ.0.5). ಅಷ್ಟು ಮಾತ್ರವಲ್ಲ ಕಳೆದ 5 ವರ್ಷಗಳ ಅವಧಿಯಲ್ಲಿ ಆಗಿರುವ ಅತ್ಯಂತ ನಿಧಾನ ಬೆಳವಣಿಗೆ ಇದಾಗಿದೆ.
ಜನ ಚಿನ್ನ ಖರೀದಿಸಿರಬಹುದೇ? ಆದರೆ ಈ ಪಾದದಲ್ಲಿ ಚಿನ್ನದ ಆಮದು ಹೆಚ್ಚಾಗುವ ಬದಲು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ.
ಐಫೋನ್ ಮಾರಾಟದಲ್ಲೂ ಹೆಚ್ಚಳವಾಗಿಲ್ಲ. ಗೃಹಬಳಕೆಯ ವಸ್ತುಗಳನ್ನು ಉತ್ಪಾದಿಸುವ ಸಂಸ್ಥೆಗಳ ಮಾರಾಟವೂ ಕಡಿಮೆ ಆಗಿದೆ.
ಉತ್ಪಾದನೆಯ ಅಂದಾಜುಗಳು ಪ್ರಶ್ನಾರ್ಹವಿರುವಾಗ ಅದನ್ನು ಆಧರಿಸಿ ತಯಾರಿಸಲಾಗುವ ಉಪಭೋಗದ ಅಂದಾಜುಗಳೂ ಪ್ರಶ್ನಾರ್ಹವಾಗುತ್ತವೆ. ಇದನ್ನೆಲ್ಲ ಪರಿಗಣಿಸಿದಾಗ ಖಾಸಗಿ ಉಪಭೋಗದಲ್ಲಿ ಹೆಚ್ಚಳದ ಸಿದ್ಧಾಂತವನ್ನು ನಂಬಲು ಕಷ್ಟವಿದೆ. ಖಾಸಗಿ ಉಪಭೋಗದಲ್ಲಿ ಹೆಚ್ಚಳ ಆಗದಿರುವಾಗ ಜಿಡಿಪಿ ದರ ಹೆಚ್ಚಾಗುವುದಾದರೂ ಹೇಗೆ? ಆದುದರಿಂದಲೇ ವಾಸ್ತವಕ್ಕೆ ದೂರವಾಗಿರುವ ಈ ಸಿಎಸ್‌ಒ ಅಂಕಿಅಂಶಗಳು ನಂಬಲರ್ಹವಲ್ಲ.
ಕೈಗಾರಿಕಾ ಉತ್ಪಾದನೆ
ಕೈಗಾರಿಕಾ ಉತ್ಪಾದನೆ ಶೇ. 10.3ರ ದರದಲ್ಲಿ (ಪ್ರಚಲಿತ ಬೆಲೆಗಳಲ್ಲಿ) ಬೆಳೆದಿದೆ ಎಂದು ಸಿಎಸ್‌ಒ ಹೇಳುತ್ತಿದೆ. ಅದು ಈ ಅಂದಾಜಿಗೆ ಬಂದಿರುವುದು ಹೇಗೆ? ವಾಸ್ತವವಾಗಿ ಸಿಎಸ್‌ಒ ಇಂದು ಉತ್ಪಾದನೆಯ ಜಿಡಿಪಿಯನ್ನು ಅಳೆಯಲು ಹೊಸ ವಿಧಾನವೊಂದನ್ನು ಬಳಸತೊಡಗಿದೆ. ಜಿಡಿಪಿಯನ್ನು ಹಿಂದೆ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ (Index of Industrial Production, II²) ಆಧಾರದ ಮೇಲೆ ಲೆಕ್ಕ ಹಾಕುತ್ತಿದ್ದರೆ ಈಗ ಅದರ ಲೆಕ್ಕಾಚಾರಗಳು ಕಂಪೆನಿ ವ್ಯವಹಾರಗಳ ಸಚಿವಾಲಯ ನೀಡುವ ದತ್ತಾಂಶಗಳನ್ನು ಆಧರಿಸಿವೆ. ಈ ದತ್ತಾಂಶಗಳು ಕೇವಲ ಶೇರು ಮಾರುಕಟ್ಟೆಯಲ್ಲಿ ದಾಖಲಿತವಾದ ಸಂಸ್ಥೆಗಳಿಗಷ್ಟೆ ಸೀಮಿತವಾಗಿವೆ. ಇದರರ್ಥ ಸಿಎಸ್‌ಒ ಲೆಕ್ಕಾಚಾರದಲ್ಲಿ ಶೇರು ಮಾರುಕಟ್ಟೆಯ ಪಟ್ಟಿಯಲ್ಲಿರದ ಸಂಸ್ಥೆಗಳು, ಅನೌಪಚಾರಿಕ ವಲಯದ ಸಂಸ್ಥೆಗಳು ಮತ್ತು ನೋಂದಾಯಿತವಾಗದ ಸಂಸ್ಥೆಗಳ ದತ್ತಾಂಶಗಳನ್ನು ಪರಿಗಣಿಸಲಾಗಿಲ್ಲ. ನೋಟು ರದ್ದತಿಯ ನೇರ ಪರಿಣಾಮವಾಗಿ ಈ ವಲಯಗಳಲ್ಲಿರುವ ಅನೇಕ ಸಂಸ್ಥೆಗಳು ಬಾಗಿಲು ಹಾಕಿವೆ. ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸಾಲದುದಕ್ಕೆ ಕಂಪೆನಿಗಳ ತೃತೀಯ ಪಾದದ ಫಲಿತಾಂಶಗಳು ಕೂಡಾ ಸರಕಾರಿ ಅಂಕಿಅಂಶಗಳಿಗೆ ವಿರುದ್ಧವಿರುವಂತೆ ಕಾಣುತ್ತದೆ.
ಶೇರು ಮಾರುಕಟ್ಟೆಯ ದತ್ತಾಂಶಗಳ ಪ್ರಕಾರ ತೃತೀಯ ಪಾದದಲ್ಲಿ 4,220 ಸಂಸ್ಥೆಗಳ ಮಾರಾಟದಲ್ಲಿ ಕೇವಲ 5.74 ಪ್ರತಿಶತ ಏರಿಕೆಯಾಗಿದೆ. 2016ರ ಡಿಸೆಂಬರ್ ಕೊನೆಯಲ್ಲಿ ಕೈಗಾರಿಕಾ ವಲಯಕ್ಕೆ ಬ್ಯಾಂಕುಗಳು ನೀಡಿರುವ ಸಾಲದ ಪ್ರಮಾಣ ಶೇ. 4.3ರಷ್ಟು ಕಡಿಮೆಯಾಗಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಕಳೆದ ಡಿಸೆಂಬರ್‌ಗಿಂತ ಶೇ. 0.4ರಷ್ಟು ಕಡಿಮೆಯಾಗಿದೆ. ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ ಆಧಾರದಲ್ಲಿ ನೋಡಿದಾಗ ಈ ಬಾರಿಯ ತೃತೀಯ ಪಾದದಲ್ಲಿ ಉತ್ಪಾದನೆಯಲ್ಲಿ ಆಗಿರುವ ಶೇ. 0.2 ಹೆಚ್ಚಳ ತೀರ ನಗಣ್ಯವಿದೆ. ಹಾಗಾದರೆ ಸಿಎಸ್‌ಒ ಹೇಳುತ್ತಿರುವ ಶೇ. 10.3ರ ಸಂಖ್ಯೆ ಎಲ್ಲಿಂದ ಬಂದಿದೆ, ಹೇಗೆ ಬಂದಿದೆ??!!
ಕೃಷಿ ಉತ್ಪಾದನೆ
ಶೇ. 4.4ರ ಪ್ರಗತಿ ಕಂಡಿರುವ ಕೃಷಿ ಉತ್ಪಾದನೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಹೂಡಿಕೆ ಸಿಎಸ್‌ಒ ನೀಡಿರುವ ಹೂಡಿಕೆ ಅಂಕಿಅಂಶಗಳು ಸಮೇತ ವಿಸ್ಮಯ ಮೂಡಿಸುತ್ತವೆ. ಅದು ಹೇಳುವಂತೆ ಕಳೆದ ವರ್ಷದ ಮಧ್ಯಭಾಗದಿಂದ ಇಳಿಮುಖವಾಗಿದ್ದ ಒಟ್ಟು ಸ್ಥಿರ ಬಂಡವಾಳ ರಚನೆ ತೃತೀಯ ಪಾದದ ಹೊತ್ತಿಗೆ ಮತ್ತೆ ಮೇಲ್ಮುಖವಾಗಿ ಶೇ. 3.5 ಆಗಿದೆಯಂತೆ! ಆದರೆ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ ಪ್ರಕಾರ ತಯಾರಿಕಾ ವಸ್ತುಗಳ ಉತ್ಪಾದನೆಯಲ್ಲಿ ಶೇ. 7.8 ಇಳಿಕೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಹೂಡಿಕೆ ಹೆಚ್ಚಾಗುವುದು ಹೇಗೆ?
ಅಂತಿಮವಾಗಿ ಸಿಎಸ್‌ಒ ಕೊಟ್ಟಿರುವ ಉತ್ಪ್ರೇಕ್ಷಿತ ಹಾಗೂ ದೋಷಪೂರಿತ ಅಂಕಿಅಂಶಗಳ ಹಿಂದೆ ಈ ಕೆಳಗಿನ ಕಾರಣಗಳಿರುವಂತಿದೆ.
1) ಪೂರ್ವಭಾವಿ ಅಂದಾಜಿನ ನಂತರ ಬರುವ ಪರಿಷ್ಕೃತ ಅಂದಾಜಿನ ಆಧಾರದಲ್ಲಿ ಮುಂದಿನ ಪೂರ್ವಭಾವಿ ಅಂದಾಜನ್ನು ತಯಾರಿಸಲಾಗುತ್ತದೆ. ಹೀಗಾಗಿ ಈ ಪರಿಷ್ಕೃತ ಅಂದಾಜುಗಳನ್ನು ಕಡಿಮೆ ಮಾಡಿದಷ್ಟೂ ಅನುಕೂಲ. ಏಕೆಂದರೆ ಆಗ ಮುಂದಿನ ಪೂರ್ವಭಾವಿ ಅಂದಾಜುಗಳಲ್ಲಿ ಹೆಚ್ಚು ಪ್ರಗತಿ ತೋರಿಸಲು ಸಾಧ್ಯವಾಗುತ್ತದಲ್ಲವೆ! ಸದ್ಯ ಆಗಿರುವುದೂ ಇದೇ. ಅತ್ತ 2015-16ರ ತೃತೀಯ ಪಾದದ ಪರಿಷ್ಕೃತ ಜಿಡಿಪಿ ಅಂದಾಜನ್ನು ರೂ. 28,30,760 ಕೋಟಿಗೆ ಇಳಿಸಲಾಗಿದೆ. ಇತ್ತ 2016-17ರ ಜಿಡಿಪಿ ರೂ. 30,27,893 ಕೋಟಿ ಎಂದು ಅಂದಾಜಿಸಲಾಗಿದೆ. 2015-16ರ ಈ ಹೊಸ ಅಂಕಿಅಂಶವನ್ನು ಆಧರಿಸಿ 2016-17ರ ತೃತೀಯ ಪಾದದ ಜಿಡಿಪಿಯಲ್ಲಿ ಶೇ. 7 ಹೆಚ್ಚಳವಾಗಿದೆ ಎಂದು ಲೆಕ್ಕ ಹಾಕಲಾಗಿದೆ!
2) ಉತ್ಪಾದಕರು ಸರಕುಗಳನ್ನು ವಿತರಕರಿಗೆ, ಸಗಟು ವ್ಯಾಪಾರಿಗಳಿಗೆ ಮಾರಿ ಅವರಿಂದ ರದ್ದಾದ ನೋಟುಗಳನ್ನು ಪಡೆದು ಎಂದಿಗಿಂತ ಹೆಚ್ಚು ತೆರಿಗೆ ಕಟ್ಟಿದ್ದಾರೆ. ಈ ಮೂಲಕ ಪರೋಕ್ಷ ತೆರಿಗೆ ಪ್ರಮಾಣದಲ್ಲಿ ಹೆಚ್ಚಳವಾಗಿರಬಹುದು. ನೆನಪಿಡಿ, ನೋಟುರದ್ದತಿಯಿಂದ ಅತ್ಯಧಿಕ ಸಂಕಷ್ಟಕ್ಕೀಡಾದ ಅನೌಪಚಾರಿಕ ಕ್ಷೇತ್ರ, ಶೇರು ಮಾರುಕಟ್ಟೆಯ ಪಟ್ಟಿಯಲ್ಲಿರದ ಸಂಸ್ಥೆಗಳು, ದಾಖಲಿತವಾಗದ ಸಂಸ್ಥೆಗಳು, ಮಧ್ಯಮ ಮತ್ತು ಸಣ್ಣ ಸಂಸ್ಥೆಗಳ ಅಂಕಿಅಂಶಗಳು ಇನ್ನು ಲಭ್ಯವಾಗಬೇಕಷ್ಟೆ. ವಾಸ್ತವದಲ್ಲಿ ಇವೆಲ್ಲವನ್ನು ಪರಿಗಣಿಸಿದಾಗ ಅಸಲಿ ಜಿಡಿಪಿ ಕೇವಲ ಶೇ. 2 ಆಗಬಹುದಷ್ಟೆ! ಮೋದಿಯವರ ಸರಕಾರ ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಏನು ಮಾಡಲೂ ಹೇಸದು ಎಂಬುದಕ್ಕೆ ಬೇರೆ ನಿದರ್ಶನ ಬೇಕೆ?
(ಆಧಾರ: ವಿವಿಧ ಮೂಲಗಳಿಂದ)