​ಒಬ್ಬ ಮಾದಿಗ ಗೃಹಸ್ಥನ ಪತ್ರಕ್ಕೆ ಉತ್ತರ

Update: 2017-03-23 18:55 GMT
Editor : ಭಾಗ -2

ಇನ್ನು ತಾವು ಮಾಡಿದ ಆಪಾದನೆಗಳಿಗೆ ಉತ್ತರ ನೀಡಲು ಯತ್ನಿಸುವೆ. ತಮ್ಮ ಆಪಾದನೆಗಳು ಎರಡು ಬಗೆಯವು. ಅವುಗಳಲ್ಲಿ ಕೆಲವು ವ್ಯಕ್ತಿಗತವಾಗಿ ನನ್ನ ಮೇಲೆ ಹೊರಿಸಲಾದವುಗಳು, ಇನ್ನುಳಿದವು ಹೊಲೆಯ ಸಮುದಾಯಕ್ಕೆ ಸಂಬಂಧಪಟ್ಟವುಗಳು.

ನನ್ನ ಮೇಲಿರುವ ನೇರ ಆಪಾದನೆ ಯಾವುದೆಂಬುದು ನನಗಿನ್ನೂ ಅರ್ಥವಾಗಿಲ್ಲ. ನಾನು ಕೇವಲ ಮಹಾರಾಷ್ಟ್ರದ ಮುಂದಾಳು ಎಂಬುದಾಗಿ ಮಧ್ಯಪ್ರದೇಶದ ಮಾದಿಗ ಸಮುದಾಯದವರು ಒಂದು ಗೊತ್ತುವಳಿಯ ಮೂಲಕ ನನ್ನ ಮೇಲೆ ಆಪಾದನೆಯನ್ನು ಹೊರಿಸಿರುವುದನ್ನು ವೃತ್ತಪತ್ರಗಳಲ್ಲಿ ಓದಿದೆ. ಈ ಹೇಳಿಕೆಯನ್ನು ಕುರಿತು ನಾನು ತಾ.4 ಜನವರಿ 1941ರ ‘ಜನತಾ’ದಲ್ಲಿ ಬರೆದಿರುವುದನ್ನು ತಾವು ಅವಶ್ಯವಾಗಿ ಓದಿ ನೋಡಬೇಕು. ನಾನು ಕೇವಲ ಹೊಲೆಯರ ಮುಂದಾಳು ಎನ್ನುವುದು ಕಾಂಗ್ರೆಸ್ಸ್‌ನವರ ಕೂಗು. ಮಾದಿಗರ ಮುಂದಾಳುಗಳು ಅದಕ್ಕೆ ದನಿಗೂಡಿಸಿದ್ದಾರೆ. ಹೊಟ್ಟೆಪಾಡಿಗಾಗಿ, ಕಾಸಿಗಾಗಿ ಹೀಗೆಲ್ಲ ಬೇಕಾದ್ದನ್ನು ಮಾಡುವ ಅದೆಷ್ಟೋ ಜನ ಹೊಲೆಯರು -ಮಾದಿಗರಿರುವರು. ‘ಪುಣೆಯ ಕರಾರು’ ಆಯಿತು. ಆ ಕಾಲಕ್ಕೆ ಕಾಂಗ್ರೆಸ್ ನನ್ನನ್ನು ‘ಇಡಿಯ ಹಿಂದುಸ್ಥಾನದ ಅಸ್ಪಶ್ಯರ ನಾಯಕ’ನೆಂದು ಒಪ್ಪಿಕೊಳ್ಳುತ್ತಿತ್ತು. ತರುವಾಯ ನಾನು ಕೇವಲ ಮುಂಬೈ ಇಲಾಖೆಯ ಅಸ್ಪಶ್ಯ ಸಮುದಾಯದ ಮುಂದಾಳುವಾಗಿದ್ದೇನೆಂದು ಅನ್ನತೊಡಗಿತು. ಇನ್ನು ಕೆಲವು ದಿನಗಳ ತರುವಾಯ ನಾನು ಕೊಂಕಣಸ್ಥ ಹೊಲೆಯರ ಮುಂದಾಳು ಹಾಗೂ ಆಮೇಲೆ ನಾನು ಕೇವಲ ದಾಪೋಲಿ ತಾಲೂಕಿನ ಹೊಲೆಯರ ಮುಂದಾಳು ಎಂಬುದಾಗಿ ಕಾಂಗ್ರೆಸ್‌ಪ್ರಚಾರ ಮಾಡಬಹುದು. ಇದಕ್ಕಾಗಿ ಅವರಿಗೆ ಹೊಲೆಯ ಸಮುದಾಯದ ಜನರೇ ಸಿಕ್ಕುವರು ಎಂದೆನ್ನಲು ಅಡ್ಡಿಯಿಲ್ಲ.

ಯಾರೇ ಆಗಲಿ, ಕಾಂಗ್ರೆಸನ್ನು ವಿರೋಧಿಸಿ ನೋಡಲಿ. ಎಂದರೆ ನನ್ನ ಹೇಳಿಕೆಯ ಸತ್ಯತೆ ಅರ್ಥವಾದೀತು. ಚಮಗಾರರ ಒಬ್ಬ ಮುಂದಾಳು ಕಾಂಗ್ರೆಸನ್ನು ವಿರೋಧಿಸಲು ಹೊರಡಲಿ. ಅಂದರೆ ಇದೇ ಸಂಗತಿ ಕಂಡುಬಂದೀತು. ಅವನು ದಾಭೋಳ್ಯಾ ಜಾತಿಯವನಾಗಿದ್ದರೆ, ಅವನು ಸಮಗಾರ ಜಾತಿಯ ಮುಂದಾಳುವಾಗಿರದೆ ದಾಭೋಳ್ಯ ಜಾತಿಯ ಮುಂದಾಳು ಎಂದಾರು. ಮಾದಿಗರಲ್ಲಿ ಸುಮಾರು 12 ಉಪಜಾತಿಗಳಿವೆ ಎಂದು ತಿಳಿದುಬರುತ್ತದೆ. ಮಾದಿಗರಲ್ಲಿ ಕೂಡ ಯಾರಾದರೂ ಕಾಂಗ್ರೆಸನ್ನು ವಿರೋಧಿಸಲು ಮುಂದಾದರೆ ಅವರ ಅವಸ್ಥೆಯು ಬೇರೇನೂ ಆಗಲಿಕ್ಕಿಲ್ಲ.

‘‘ಅವನು ಕೇವಲ ತನ್ನ ಜಾತಿಯ ಮುಂದಾಳು’’ ಎಂಬ ಕೂಗಾಟ ನಡೆಯದಿರದು. ನಾನು ಈ ವಾಸ್ತವವನ್ನು ಅರಿತಿದ್ದರಿಂದ ಹೊಲೆಯರ ಮುಂದಾಳು ಎಂದರೆ ನನಗಾವ ಅಚ್ಚರಿಯೂ ಆಗದು. ಅಲ್ಲದೆ ಉಳಿದವರು ನನ್ನನ್ನು ಮುಂದಾಳುತನವನ್ನು ಬಿಟ್ಟು, ಕೇವಲ ಹೊಲೆಯ ಸಮುದಾಯದವರಷ್ಟೇ ಮನ್ನಿಸಿದರೂ ಅದರಲ್ಲಿ ಕೆಡಕೆನ್ನಿಸಿಕೊಳ್ಳುವಂಥದೇನೂ ಇಲ್ಲವೆಂದು ನನ್ನ ಭಾವನೆ. ಎಲ್ಲಾದರೂ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕರೆ ಸಾಕು. ಹೊಲೆಯರ ದುರ್ದೆಸೆಯೇನೂ ಕಮ್ಮಿಯದ್ದಲ್ಲ. ಇಷ್ಟರಲ್ಲೇ ಮಹಾರಾಷ್ಟ್ರ ಪ್ರಾಂತಿಕ ಹರಿಜನ ಸೇವಕ ಸಂಘವು ಪ್ರಕಟಿಸಿದ ರಿರ್ಪೋಟಿನಲ್ಲಿ, ‘‘ಹೊಲೆಯರ ಪರಿಸ್ಥಿತಿಯು ಎಲ್ಲಕ್ಕೂ ಹೆಚ್ಚು ದಯನೀಯವಾದುದೆ’’ ಎಂದು ಒಪ್ಪಿಕೊಳ್ಳಲಾಗಿದೆ. ನನಗೆ ಅವರ ದುಃಸ್ಥಿತಿಯನ್ನು ನಿವಾರಿಸುವ ಅವಕಾಶ ದೊರೆತರೂ ಸಾಕೆಂದು ಭಾವಿಸಿ ನಾನು ಆ ಕೆಲಸವನ್ನು ಮಾಡಲು ಸಿದ್ಧ. ‘ನಾಮ್‌ಕೇ ವಾಸ್ತೇ ಮತ್ತು ಕಾಮ್‌ಕೇ ವಾಸ್ತೇ’ (ಹೆಸರಿನ ಮಟ್ಟಿಗೆ ಹಾಗೂ ಕೆಲಸದ ಮಟ್ಟಿಗೆ) ಎಂಬುದಾಗಿ ಎರಡು ಬಗೆಯ ಮುಂದಾಳುಗಳು ಇರುವರು. ನಾನು ನಾಮ್‌ಕೇ ವಾಸ್ತೇ ಮುಂದಾಳುವಲ್ಲ. ನನಗೆ ಕೆಲಸ ಬೇಕು.

ನಾನು ಮುಂದಾಳು. ಸಮಾಜ ಸೇವಕನಲ್ಲ. ಮುಂದಾಳುವಾಗಿ ಚಾಲನೆಯನ್ನು ನೀಡುವುದು, ಜನಾಭಿಪ್ರಾಯವನ್ನು ತಯಾರಿಸುವುದಷ್ಟೇ ನನ್ನ ಕೆಲಸ. ಅದರಲ್ಲಿ ನಾನು ಜಾತಿಭೇದಕ್ಕೆ ಅವಕಾಶ ನೀಡಿದೆನೆಂದು ನನ್ನ ವೈರಿ ಕೂಡ ಹೇಳಲಾರನು. ನಾನು ಎಲ್ಲ ಅಸ್ಪಶ್ಯ ಜಾತಿಗಳ ಮನೆಗಳಲ್ಲೂ ಉಂಡಿದ್ದೇನೆ. ಅಸ್ಪಶ್ಯರಲ್ಲಿ ಸಹಭೋಜನ, ಸಹವಿವಾಹ ನಡೆಯಬೇಕೆಂಬ ಸಂಗತಿಯನ್ನು ಪುರಸ್ಕರಿಸಿದ್ದೇನೆ. ಸಹವಿವಾಹವು ಜಾರಿಗೆ ಬಂದಿಲ್ಲ. ಸಮಗಾರರು ಸಹಭೋಜನಕ್ಕೂ ಸಿದ್ಧರಿಲ್ಲ. ಆದರೆ ಹೊಲೆಯ - ಮಾದಿಗರು, ಹೊಲೆಯ-ಭಂಗಿಗಳಲ್ಲಿ ಸಹಭೋಜನ ಸಾರಾಸಗಟಾಗಿ ನಡೆಯುತ್ತಿದೆ. ಇದು ನನ್ನ ಕಲಿಸುವಿಕೆಯ ಪರಿಣಾಮ ಎಂದು ನಿರ್ಭಯತೆಯಿಂದ ಹೇಳಬಲ್ಲೆ. ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಗಳ ಮಸೂದೆಗಳು ಎಂದಿಗೊ ಹೊಲೆಯರ ಮಟ್ಟಿಗೆ ಮಾತ್ರ ಅಂಗೀಕೃತವಾಗಿಲ್ಲ. ನಾನು ಹೊಲೆಯ ಜಾತಿಗಾಗಿ ಎಂದು ಹೋರಾಡಿದವನಲ್ಲ. ಅದೇ ರೀತಿ ಈ ಬಗೆಯ ಹೋರಾಟಗಳ ಫಲವಾಗಿ ದೊರೆತ ಲಾಭದ ಹೆಚ್ಚಿನ ಪಾಲನ್ನು ಹೊಲೆಯರಲ್ಲದವರೇ ಪಡೆದುಕೊಂಡರೆಂಬುದನ್ನೂ ಸಿದ್ಧಪಡಿಸಿ ತೋರಿಸಲು ಸಾಧ್ಯ. ನಾನು ತೆರೆದ ಬೋರ್ಡಿಂಗ್‌ಗಳಲ್ಲಿ ಎಂದಿಗೂ ಜಾತಿಭೇದವನ್ನು ಇಟ್ಟುಕೊಳ್ಳಲಿಲ್ಲ. ಇತರ ಹೊಲೆಯರು ತೆರೆದವುಗಳಲ್ಲೂ ಜಾತಿಭೇದವನ್ನು ಇಟ್ಟುಕೊಂಡುದು ನನ್ನ ಕಿವಿಗೆ ಬಂದಿಲ್ಲ.

ಸ್ವತಂತ್ರ ಮಜೂರು (ಕಾರ್ಮಿಕ) ಪಕ್ಷವು ಹೊಲೆಯರ ಪಕ್ಷವಾಗಿದೆ ಎಂದು ನಂಬಲಾಗಿದೆ. ಆದರೆ ಅದು ಸುಳ್ಳು. ಸ್ವತಂತ್ರ ಮಜೂರು ಪಕ್ಷದಲ್ಲಿ ಹೊಲೆಯರು -ಹೊಲೆಯರೇತರರು, ಎಂಬ ತಾರತಮ್ಯವಿಲ್ಲ. ಸ್ವತಂತ್ರ ಮಜೂರ ಪಕ್ಷವು ಜಾತಿಪಾತಿಗಳನ್ನು ಗಮನಿಸುವುದಿಲ್ಲ, ಗುಣವತ್ತೆಯನ್ನು ಗಮನಿಸುತ್ತದೆ. ಗುಣವತ್ತೆಯನ್ನು ಹೊಂದಿದವನಿಗೆ ಅವನ ಯೋಗ್ಯತೆಗೆ ತಕ್ಕ ಸ್ಥಾನ ಸ್ವತಂತ್ರ ಮಜೂರ ಪಕ್ಷದಲ್ಲಿ ಲಭಿಸುತ್ತದೆ. ರಾಜಕೀಯ ಎಂದರೆ ಪಂಕ್ತಿಯೂಟವಲ್ಲ. ಮಾದಿಗನಿಲ್ಲವೆಂದು ಮಾದಿಗನನ್ನು ತೆಗೆದುಕೊಳ್ಳಿ, ಭಂಗಿಯವನಿಲ್ಲವೆಂದು ಭಂಗಿಯವನನ್ನು ತೆಗೆದುಕೊಳ್ಳಿ. ಸ್ವತಂತ್ರ ಪಕ್ಷವು ಇಂಥ ನಿಯಮವನ್ನು ಒಪ್ಪುವುದಿಲ್ಲ. ಯಾವ ರಾಜಕೀಯ ಪಕ್ಷವೂ ಇದನ್ನು ಒಪ್ಪಿಕೊಳ್ಳಲಾರದು. ರಾಜಕೀಯದಲ್ಲಿ ಬರೀ ಶಿಕ್ಷಣಕ್ಕೆ ಬೆಲೆಯಿಲ್ಲ. ‘‘ನಾನು ಗ್ರಾಜುಯೆಟ್, ನನ್ನನ್ನು ಕೌನ್ಸಿಲ್‌ಗೆ ತೆಗೆದುಕೊಳ್ಳಿ’’ ಎನ್ನುವ ನಿಯಮವು ಸ್ವತಂತ್ರ ಮಜೂರ ಪಕ್ಷಕ್ಕೆ ಒಪ್ಪಿತವಲ್ಲ. ಈ ನಿಯಮವು ಯಾವ ರಾಜಕೀಯ ಪಕ್ಷಕ್ಕೂ ಒಪ್ಪಿಗೆಯಾಗದು. ರಾಜಕೀಯದಲ್ಲಿ ಶಿಕ್ಷಣ ಬೇಕು, ಆದರೆ ಅದಕ್ಕಿಂತ ಶೀಲದ ಆವಶ್ಯಕತೆ ಹೆಚ್ಚಿದೆ. ಸ್ವತಂತ್ರ ಮಜೂರ ಪಕ್ಷವು ಅಭ್ಯರ್ಥಿಯ ಜಾತಿ, ಶಿಕ್ಷಣ ಹಾಗೂ ಶೀಲಗಳೆಂಬ ಮೂರೂ ಸಂಗತಿಗಳನ್ನು ಗಮನಿಸಿ ಅವನನ್ನು ಕೌನ್ಸಿಲ್‌ಗೆ ತೆಗೆದುಕೊಳ್ಳುತ್ತದೆ.

ಅಸ್ಪಶ್ಯರನ್ನು ಕುರಿತಾದ ಜಗಳಗಳನ್ನು ಕಾಯಲೆಂದು ಸ್ವತಂತ್ರ ಮಜೂರ ಪಕ್ಷವನ್ನು ಕಟ್ಟಲಾಗಿದೆ. ಅದರಲ್ಲಿ ಯಾವೊಬ್ಬ ಮಾದಿಗನಿಗೆ ಜಾಗ ಸಿಕ್ಕಿರಲಿಲ್ಲ. ಹಾಗೆ ನೋಡಿದರೆ ನಾಸಿಕ ಜಿಲ್ಲೆಯ ಅಸ್ಪಶ್ಯರ ಪೈಕಿ ಒಬ್ಬ ಸ್ಥಿತಿವಂಥ ಹಾಗೂ ಕಾರ್ಯಕರ್ತನಾದ ಅಮೃತರಾವ ರಣಖಾಂಬೆ ಅವನಂತಹ ಮನುಷ್ಯನಿಗೆ ಮತ್ತು ಸಾತಾರಾ ಜಿಲ್ಲೆಯ ಒಬ್ಬ ಸ್ಥಿತಿವಂತ ಮನುಷ್ಯನ ಮಗನಿಗೆ ಸ್ವತಂತ್ರ ಮಜೂರ ಪಕ್ಷದಲ್ಲಿ ಸ್ಥಾನ ಸಿಗಲಿಲ್ಲ. ಇಷ್ಟರಿಂದಲೇ ಸ್ವತಂತ್ರ ಮಜೂರ ಪಕ್ಷವು ಮಾದಿಗರು ಹಾಗೂ ಚಮಗಾರರ ವಿರುದ್ಧ ಎಂದು ತಿಳಿಯುವುದರಲ್ಲಿ ಯಾವ ಅರ್ಥವೂ ಇಲ್ಲ. ಸ್ವತಂತ್ರ ಮಜೂರ ಪಕ್ಷವು ಅಯೋಗ್ಯರ ವಿರುದ್ಧವಿದೆ. ಅವರು ಯಾವುದೇ ಜಾತಿಯವರಿದ್ದರೂ ಸರಿಯೇ. ಮಾದಿಗರು-ಚಮಗಾರರು ಸ್ವತಂತ್ರ ಮಜೂರ ಪಕ್ಷದಲ್ಲಿ ಇಲ್ಲವೆಂಬ ಕಾರಣದಿಂದ ಮಾದಿಗರು ಇಲ್ಲವೆ ಚಮಗಾರ ಜಾತಿಯವರಿಗೆ ಯಾವುದೇ ಬಗೆಯ ನಷ್ಟವಾಗಿದೆಯೆಂದು ನನಗೆ ಕಾಣುತ್ತಿಲ್ಲ. ಸ್ವತಂತ್ರ ಮಜೂರ ಪಕ್ಷವು ಹೊಲೆಯರದಾಗಿದ್ದರೂ ಅದು ಕೇವಲ ಹೊಲೆಯರಿಗಾಗಿ ಮಾತ್ರ ಹೋರಾಡುತ್ತಿಲ್ಲ. ಅದು ಇಡಿಯ ಅಸ್ಪಶ್ಯರಿಗಾಗಿ ಕಾದಾಡುತ್ತಿದೆ.

ಕಾದಾಟದಿಂದ ಲಭಿಸುವ ಫಲವನ್ನು ಹಂಚುವುದು ಅದರ ಕೈಯಲ್ಲಿಲ್ಲ. ಅದು ಕಾಂಗ್ರೆಸ್‌ನ ಕೈಯಲ್ಲಿದೆ. ಹೊಲೆಯರ ಕೈಗೆ ಸೊನ್ನೆ. ಕಾಂಗ್ರೆಸ್ ಈ ಬಗೆಯಾಗಿ ಪಾಲು ಮಾಡದಿದ್ದರೆ ಅದೆಂಥ ಕಾಂಗ್ರೆಸ್! ಸ್ವತಂತ್ರ ಮಜೂರ ಪಕ್ಷವು ಹಾನಿಯನ್ನು ಮಾಡದಿದ್ದರೆ, ಆ ಹಾನಿಯು ಹೊಲೆಯರದೇ. ‘‘ಹೊಲೆಯರು ಮಾದಿಗರ ಮೇಲೆ ಅನ್ಯಾಯವನ್ನು ಮಾಡುತ್ತಾರೆ’’ ಎಂದು ತಾವು ಬರೆದಿದ್ದೀರಿ. ಅದು ನಮ್ಮಲ್ಲಿಲ್ಲ. ಬದಲು ನಮ್ಮಲ್ಲಿ ತಿರುವುಮುರುವಾಗಿದೆ. ಚಮಗಾರರಾಗಲಿ ಇಲ್ಲವೆ ಮಾದಿಗರಾಗಲಿ ಕಾಲು ಕೆದರಿ ಕೆಣಕಿದರೂ ಹೊಲೆಯರು ತೆಪ್ಪಗಿರುತ್ತಾರೆ. ಈ ಬಗ್ಗೆ ನಾನು ಅವರ ಬದಿಯನ್ನು ಎತ್ತಿ ಹಿಡಿಯುವವನಲ್ಲ ಎಂಬುದು ಅವರಿಗೆ ಗೊತ್ತಿದೆ. ತಾವು ಬಹುಸಂಖ್ಯರಾದ ಕಾರಣ ತಾವದನ್ನು ಸಹಿಸಲೇಬೇಕೆಂಬ ಹೊಣೆಗಾರಿಕೆಯ ಅರಿವು ಅವರಲ್ಲಿದೆ. ಇದು ನಮ್ಮಲ್ಲಿ ತಿರುವುಮುರುವಾದುದನ್ನು ಕಂಡು ಕೆಡಕೆನ್ನಿಸುತ್ತದೆ. ತಾವು ಹೊಲೆಯರ ವಿರುದ್ಧ ನಿಜಾಮ ಸರಕಾರಕ್ಕೆ ದೂರು ಸಲ್ಲಿಸಬೇಕು ಅಥವಾ ಸತ್ಯಾಗ್ರಹವನ್ನು ಕೈಕೊಳ್ಳಬೇಕು. ಅದಕ್ಕೆ ನನ್ನ ಬೆಂಬಲವಿದ್ದೀತು.

ಕೊನೆಯಲ್ಲಿ, ಹೀಗೆ ಮಾಡಿ, ಹಾಗೆ ಮಾಡಿ, ಇಲ್ಲದಿದ್ದರೆ ತಮ್ಮ ಮಾರ್ಗ ಭಿನ್ನ ಎಂಬುದಾಗಿ ತಾವು ಬಳಸಿದ ಅವೇಶದ ಭಾಷೆಯನ್ನು ಕುರಿತು ಎರಡು ಮಾತುಗಳನ್ನು ಬರೆಯುವುದು ಆವಶ್ಯಕ. ತಾವು ಇಂಥ ಭಾಷೆಯನ್ನು ಬಳಸದಿದ್ದರೆ ಒಳ್ಳೆಯದಿತ್ತು. ಮನಬಂದಾಗ ತಡೆಹಿಡಿಯುವ ಗೋವೆಯವಳು ಅಥವಾ ಬೈಗುಳಗಳ ಮಳೆಗರೆಯುತ್ತ, ‘‘ತಗೋ ಮುಠ್ಠಾಳಾ, ನಿನ್ನ ಗುಳದಾಳಿ (ಮಾಂಗಲ್ಯ)’’ ಎಂದು ಅದನ್ನು ಕಿತ್ತೆಸೆಯಲು ಸಿದ್ಧಳಾಗುವ ಲಂಗುಲಾಗಾಮಿಲ್ಲದ ಹೆಂಡತಿಗೆ, ‘‘ಜಾಓ ಜಹನ್ನಮ್ ಮೇ (ನರಕಕ್ಕೆ ಹೋಗು)’’ ಎಂದೆನ್ನುವ ಸರದಿಬರುತ್ತದೆ. ಇಂಥ ಸನ್ನಿವೇಶ ತಲೆದೋರುವಂತೆ ಮಾಡುವುದು ಒಳ್ಳೆಯದಲ್ಲ. ಬೇರೆ ದಾರಿಯನ್ನು ಹಿಡಿದು ಹೋಗುವುದಿದ್ದರೆ ಅಗತ್ಯವಾಗಿ ಹೋಗಬಹುದು.

ನಾನು ಅದನ್ನು ತಡೆಯಲಾರೆ ಅಥವಾ ಈ ಬಗೆಗೆ ಔದಾಸೀನ್ಯ ತಳೆದು ನಾನು ಮಾಡಬೇಕೆಂದುಕೊಂಡಿರುವುದನ್ನು ನಿಲ್ಲಿಸಲಾರೆ. ಆದರೆ ಬೇರೆ ದಾರಿ ಯಾವುದು? ಎಂಬುದನ್ನು ಕುರಿತು ಯೋಚಿಸಿ ಅದನ್ನು ಸ್ವೀಕರಿಸಬೇಕು. ಮಾದಿಗರ ಏಳಿಗೆಯನ್ನು ಮಾಡಿ ಅವರ ಸ್ವಾಭಿಮಾನವನ್ನು ಎಚ್ಚರಿಸುವುದು ಈ ಭಿನ್ನ ಮಾರ್ಗದ ಗುರಿಯಾಗಿದ್ದರೆ ಅದು ಸ್ತುತ್ಯವಾದುದೇ ಸರಿ. ಆದರೆ ಹೊಲೆಯರಿಂದ ವಿಚ್ಛೇದನೆ ಪಡೆದು ಸನಾತನಿ ಹಿಂದುಗಳು ಇಲ್ಲವೆ ಕಾಂಗ್ರೆಸ್‌ನ ಗುಲಾಮಗಿರಿಯನ್ನು ಸ್ವೀಕರಿಸುವುದೇ ಈ ಭಿನ್ನ ಮಾರ್ಗದ ಗುರಿಯಾಗಿದ್ದರೆ ಅದರಿಂದ ಕೆಲವು ಜನ ಮಾದಿಗರಿಗೆ ಲಾಭ ದೊರೆಯುವುದೇನೋ ನಿಜವಾದರೂ ಅದರಿಂದ ಮಾದಿಗ ಜಾತಿಗೆ ನಷ್ಟ ತಪ್ಪಿದ್ದಲ್ಲ ಎಂಬ ಬಗೆಗೆ ನನಗಂತೂ ಯಾವುದೇ ಬಗೆಯ ಸಂದೇಹವಿಲ್ಲ. ಹೀಗಾಗಿ ಮನಬಂದ ದಾರಿಯನ್ನು ಹಿಡಿಯಬೇಕು. ಪತ್ರ ತುಂಬ ದೀರ್ಘವಾಯಿತು. ಆದರೆ ನನ್ನ ಮಾರುತ್ತರ ಸವಿಸ್ತರವಾಗಿರಬೇಕೆಂದು ತಾವು ಫರ್ಮಾನು ಹೊರಡಿಸಿದ್ದರಿಂದ ಸಂಕ್ಷಿಪ್ತವಾಗಿ ಬರೆಯಲು ಸಾಧ್ಯವಾಗಲಿಲ್ಲ.
                ತಾ. 13. 6. 1941 ತಮ್ಮ ಕೃಪಾಭಿಲಾಷಿ,
(ಸಹಿ)
ಭೀಮರಾವ್ ರಾಮಜೀ ಅಂಬೇಡ್ಕರ್


(ಕೃಪೆ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು)

Writer - ಭಾಗ -2

contributor

Editor - ಭಾಗ -2

contributor

Similar News

ಸಂವಿಧಾನ -75