ದಿಲ್ಲಿ ದರ್ಬಾರ್

Update: 2017-03-25 18:27 GMT

ಮುದ್ದು ಅಖಿಲೇಶ್‌ಗೆ ಗುದ್ದಿನ ಪಾಠ!
ಯೋಗಿ ಆದಿತ್ಯನಾಥ್ ಹಾಗೂ ಅವರ ಸಚಿವ ಸಂಪುಟ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಮುಖಂಡರು ಮಾತ್ರವಲ್ಲದೇ ಸಮಾಜವಾದಿ ಪಕ್ಷದ ಮುಖಂಡರೂ ಹಾಜರಿದ್ದರು. ಆದರೆ ಎಲ್ಲರ ಗಮನ ಸೆಳೆದದ್ದು ಮಾತ್ರ, ಪ್ರಧಾನಿ ಮೋದಿಯವರತ್ತ ಧಾವಿಸಿ ಕಿವಿಯಲ್ಲಿ ಪಿಸುಗುಟ್ಟಿದ ಮುಲಾಯಂ ಸಿಂಗ್ ಯಾದವ್. ತಂದೆಯನ್ನು ಅನುಸರಿಸಿದ ಅಖಿಲೇಶ್ ಯಾದವ್, ಮೋದಿಯವರತ್ತ ಬಂದು ಕೈ ಕುಲುಕಿದರು. ಇಬ್ಬರ ಹಸ್ತಲಾಘವಕ್ಕೆ ಕೈಜೋಡಿಸಿದ ಮುಲಾಯಂ, ಕೆಲ ಸೆಕೆಂಡ್‌ಗಳ ಕಾಲ ಅವರ ಕೈಹಿಡಿದುಕೊಂಡೇ, ಇನ್ಕೊ ಶಿಕ್ಷಾಯೇ (ಈತನಿಗೆ ಮಾರ್ಗದರ್ಶನ ನೀಡಿ) ಎಂದು ಮೋದಿಗೆ ಹೇಳಿದರು. ಇದನ್ನು ಕೇಳಿಸಿಕೊಂಡ ಅಮಿತ್ ಶಾ ಸಹಿತ ಎಲ್ಲರೂ ನಗೆಗಡಲಲ್ಲಿ ತೇಲಿದರು. ಮೋದಿ, ಮುಲಾಯಂ ಅವರನ್ನು ನಿರಾಸೆಗೊಳಿಸಲಿಲ್ಲ. ಮೋದಿ ಅಖಿಲೇಶ್ ಅವರಿಗೆ ಲಘುವಾಗಿ ಗುದ್ದಿದರು. ಈ ಗುದ್ದಿನಿಂದ ಅಖಿಲೇಶ್ ಏನು ಕಲಿತರು ಎನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು. ಆದರೆ ಖಂಡಿತವಾಗಿಯೂ ಚುನಾವಣೆ ಗೆಲ್ಲುವ ಕೌಶಲವನ್ನಂತೂ ಅಲ್ಲ.


ಮುಲಾಯಂ ಹೊಸ ಯೋಚನೆ
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಲ ಹಾಗೂ ಐಡೆಂಟಿಟಿ ಎರಡನ್ನೂ ಕಳೆದುಕೊಂಡ ಮುಲಾಯಂ ಸಿಂಗ್ ಯಾದವ್ ಹೊಸ ಪಕ್ಷ ಕಟ್ಟುವ ಯೋಚನೆಯಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ. ತಮ್ಮದೇ ಸಮಾಜವಾದಿ ಪಕ್ಷ ಹುಟ್ಟುಹಾಕುವುದಾಗಿ ತಮ್ಮ ಅನುಯಾಯಿಗಳ ಮುಂದೆ ಹೇಳುತ್ತಿದ್ದಾರೆ. ಆದರೆ ಕುಹಕಿಗಳು ಮಾತ್ರ ಇದು ಅವರ ಸ್ವಂತ ಯೋಚನೆಯಲ್ಲ. ಅಮರ್ ಸಿಂಗ್ ಅವರ ಕೈವಾಡ ಇದರಲ್ಲಿದೆ ಎನ್ನುತ್ತಿದ್ದಾರೆ. ಪ್ರತ್ಯೇಕ ಒತ್ತಡ ಗುಂಪಾಗಿ ಮುಲಾಯಂ ಕೇಂದ್ರದ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲಸಾಧ್ಯ ಎಂಬ ಅಭಿಪ್ರಾಯ ಹೊಂದಿದ್ದಾರೆ. ಎಲ್ಲವೂ ಸುಗಮವಾಗಿ ಸಾಗಿದರೆ ಸಂಭಾವ್ಯ ರಾಷ್ಟ್ರಪತಿಗಳ ಪಟ್ಟಿಯಲ್ಲಿ ಅವರ ಹೆಸರೂ ಸೇರ್ಪಡೆಯಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ರಾಷ್ಟ್ರಪತಿಯಾಗುವುದು ಅವರ ದೀರ್ಘಕಾಲದ ಕನಸು.


ಕೇಜ್ರಿ ಮುಂದಿನ ಸವಾಲು
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಹಾಟ್ ಫೇವರಿಟ್ ಆಗಿದ್ದ ಆಮ್ ಆದ್ಮಿ ಪಕ್ಷ ದಯನೀಯವಾಗಿ ಸೋತಿದೆ. ಗೋವಾದಲ್ಲೂ ಅದೇ ಕಥೆ. ಇದೀಗ ಅರವಿಂದ್ ಕೇಜ್ರಿವಾಲ್ ಅವರ ಮುಂದೆ ಹೊಸ ಸವಾಲು ಎದುರಾಗಿದೆ. ಎಲ್ಲರ ದೃಷ್ಟಿ ಎಪ್ರಿಲ್ 22ರಂದು ನಡೆಯುವ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯತ್ತ ಹರಿದಿದೆ. ಬಿಜೆಪಿಯ ಪ್ರಚಾರ ಹೊಣೆಯನ್ನು ಸ್ವತಃ ಅಮಿತ್ ಶಾ ಅವರೇ ವಹಿಸಿಕೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಪ್ರಾಬಲ್ಯ ಕೊನೆಗಾಣಿಸಲು ಶಾ ರಣತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್ ಕೂಡಾ ಎಚ್ಚರಗೊಂಡಿದೆ. ಸಂಪನ್ಮೂಲ ಕೊರತೆಯಿಂದ ಕಂಗೆಟ್ಟಿರುವ ಎಂಸಿಡಿ ಪುನಶ್ಚೇತನಕ್ಕೆ ಪಿ.ಚಿದಂಬರಂ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ನೀಲನಕ್ಷೆ ಅನಾವರಣಗೊಳಿಸಿದ್ದಾರೆ. ಕಾಂಗ್ರೆಸ್ ಗೆದ್ದರೆ ವಿತ್ತೀಯವಾಗಿ ಸ್ವಾವಲಂಬನೆ ಸಾಧಿಸುವ ಭರವಸೆಯನ್ನು ಪಕ್ಷದ ಮುಖಂಡರು ನೀಡಿದ್ದಾರೆ. ಇದರಿಂದಾಗಿ ಕೇಜ್ರಿ ಮುಂದೆ ಕಠಿಣ ಸವಾಲು ಇದೆ.


ದೀದಿ ಹೊಸರಾಗ!
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಆರು ವರ್ಷಗಳಿಂದ ಆಳುತ್ತಿದ್ದಾರೆ. ಅವರು ಜನಪ್ರಿಯ ನಾಯಕಿ ಕೂಡಾ. ಆದರೆ ದೀದಿಗೆ ತಾನು ಆರೆಸ್ಸೆಸ್ ಹಾಗೂ ಬಿಜೆಪಿಯ ರಾಡಾರ್‌ನಲ್ಲಿ ಇದ್ದಂತೆ ಭಾಸವಾಗುತ್ತಿದೆ. ಇದರಿಂದಾಗಿ ಕೇಂದ್ರ ಸರಕಾರ ತನ್ನ ಹಿಂದೆ ಬಿದ್ದಿದ್ದು, ದೇಶದ ಜಾತ್ಯತೀತತೆ ಮೇಲೆ ನೇರ ದಾಳಿ ಮಾಡುತ್ತಿದೆ ಎಂದು ಪ್ರತಿಯೊಬ್ಬರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ. ಇಷ್ಟಲ್ಲದೇ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಯೊಂದು ಬಿಜೆಪಿ ಸರಕಾರದ ಜತೆ ಶಾಮೀಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. ತನ್ನ ಜೀವನವನ್ನು ನರಕ ಸದೃಶಗೊಳಿಸುವ ಸಲುವಾಗಿ ಆರೆಸ್ಸೆಸ್ ಹಾಗೂ ಬಿಜೆಪಿ ಬಂಗಾಳದ ಮೇಲೆ ದೃಷ್ಟಿ ಹರಿಸಿವೆ ಎನ್ನುವುದು ಅವರ ಗುಮಾನಿ. ಧೀರ್ಘಾವಧಿಯಲ್ಲಿ ಮೋದಿ ಸರಕಾರವನ್ನು ಸೋಲಿಸಲು ವಿರೋಧಿಗಳೆಲ್ಲ ಒಗ್ಗೂಡಬೇಕು ಎಂದು ದೀದಿ ಕರೆ ನೀಡಿದ್ದಾರೆ. ಆದರೆ ಇದು ಮಾತನಾಡಲು ಸುಲಭವೇ ವಿನಃ ಇದನ್ನು ಸಾಧಿಸುವುದು ಕಷ್ಟ.

ವೀರಭದ್ರ ಸಿಂಗ್‌ಗೆ ಕುಟುಕಿದ ಸೋಶಿಯಲ್ ಮೀಡಿಯಾ
ಈ ವರ್ಷದ ಕೊನೆಗೆ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಿಗೆ ಜನರ ಕೈಗೆ ಸುಲಭವಾಗಿ ಸಿಗಬೇಕು ಎಂಬ ಜ್ಞಾನೋದಯವಾಗಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಬಯಸಿದ್ದಾರೆ. ಇದಕ್ಕಾಗಿ ಈ ಕಾಂಗ್ರೆಸ್ ಮುಖಂಡ ತಮ್ಮ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಟ್ವಿಟರ್‌ನಲ್ಲಿ ಹರಿಯಬಿಟ್ಟಿದ್ದಾರೆ. ಈ ಸಂಖ್ಯೆಯ ಮೂಲಕ ಜನ ಸುಲಭವಾಗಿ ಸಂಪರ್ಕಿಸಬಹುದು ಎಂದು ಘೋಷಿಸಿದ್ದಾರೆ. ಕಳೆದ ರವಿವಾರ ವೀರಭದ್ರ ಸಿಂಗ್ ತನ್ನ ಅಭಿಮಾನಿಗಳೊಂದಿಗೆ ಫೇಸ್‌ಬುಕ್ ಲೈವ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಮೋದಿ ಪರಿಣಾಮದಿಂದಾಗಿ ಹಿಮಾಚಲ ಪ್ರದೇಶ ಬಿಜೆಪಿಯತ್ತ ವಾಲುತ್ತಿರುವುದರಿಂದ ಕಾಂಗ್ರೆಸ್ ಈ ತಂತ್ರ ಹೆಣೆದಿದೆ ಎನ್ನಲಾಗಿದೆ. ಇದರ ಹಿಂದೆ ಕಾಂಗ್ರೆಸ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ಹೇಗೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News