ಕೃಷ್ಣ: ಮುಖವಾಡ ಕಳಚಿತು

Update: 2017-03-26 05:46 GMT

ಕೃಷ್ಣ ಕಾಂಗ್ರೆಸ್ ಪಕ್ಷ ಬಿಡಲು ಸ್ವತಂತ್ರರು. ಬಿಜೆಪಿ ಸೇರಲೂ ಸ್ವತಂತ್ರರು. ಅಷ್ಟರಮಟ್ಟಿಗೆ ನಮ್ಮ ದೇಶದಲ್ಲಿ ಪ್ರಜಾಸ್ವಾತಂತ್ರ್ಯವಿರುವುದು ನಮ್ಮ ಪುಣ್ಯವೇ ಸರಿ. ಹಾಗಿದ್ದಲ್ಲಿ ಅವರ ಅಭಿಮಾನಿಗಳಿಗೆ ಮತ್ತು ಮತದಾರರಿಗೆ ಏಕೆ ಭ್ರಮನಿರಸನವಾಗಬೇಕು? ಅವರೇಕೆ ಪತ್ರಿಕೆಗಳ ಮೂಲಕ ಹಾಗೂ ವೈಯಕ್ತಿಕವಾಗಿ, ಕೃಷ್ಣ ಬಿಜೆಪಿ ಸೇರುವುದರ ವಿರುದ್ಧ ಕಳಕಳಿ ವ್ಯಕ್ತಪಡಿಸಬೇಕು?ಗೆದ್ದೆತ್ತಿನ ಬಾಲ ಹಿಡಿಯುವುದು ಇಂದಿನ ರಾಜಕೀಯ ಸಂಸ್ಕೃತಿಯಾಗಿದೆ.

ಮನಸ್ಸು ಯಾವುದರ ತಾಯಿಯೂ ಅಲ್ಲ,ಯಾವುದರ ಮಗುವೂ ಅಲ್ಲ.ಮನಸ್ಸು ಮನುಷ್ಯರ ಅಹಂಗೆ ಮಾಡುವ ಕಾಲ್ಪನಿಕ ಮಾಲೀಸು. ಮನಸ್ಸು ಮನುಷ್ಯರ ಸೊಕ್ಕು ಸವಾರಿ ಮಾಡುವ ಕತ್ತೆ

-ಅಮೆರಿಕದಲ್ಲಿರುವ ನನ್ನ ‘ಗತಿಸ್ಥಿತಿ’ಯ ಮಿತ್ರ ಗಿರಿಯವರ (ಪ್ರೊ.ಎಂ.ಎನ್.ಹೆಗ್ಡೆ)ಯವರ ಇತ್ತೀಚಿನ ಕೃತಿ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಪುಸ್ತಕವನ್ನೋದುತ್ತಿದ್ದಾಗ ದೂರದರ್ಶನದ ಮೂಲಕ ಅಡ್ಡಹಾಯ್ದ ಸುದ್ದಿ: ಎಸ್.ಎಂ.ಕೃಷ್ಣ ಬಿಜೆಪಿ ಸೇರಿದರು.

ಮನುಷ್ಯನ ಘನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಮೌಲ್ಯನಿಷ್ಠೆ-ಬದ್ಧತೆ, ನಾಗರಿಕ ಮರ್ಯಾದೆ,ಶಿಷ್ಟಾಚಾರ,ಸಜ್ಜನಿಕೆ ಇವೆಲ್ಲದಕ್ಕೂ ಕೆಂಗಲ್, ಎಸ್ಸೆನ್, ಕಡಿದಾಳ್ ಮಂಜಪ್ಪ, ದೇವರಾಜ ಅರಸು ,ಗೋಪಾಲ ಗೌಡರು, ಅಬ್ದುಲ್ ನಝೀರ್ ಸಾಬ್ ಇವರುಗಳ ಪರಂಪರೆಯ ಪ್ರತಿನಿಧಿಯಂತೆ ಜನಮಾನಸದಲ್ಲಿ ಪ್ರತಿಷ್ಠಾಪಿತರಾದ ಎಸ್.ಎಂ.ಕೃಷ್ಣ ಅವರು ಜೀವನಸಂಧ್ಯೆಯಲ್ಲಿ ‘ಪೂತನಿಯ’ಮಡಿಲಲ್ಲಿ ಆಶ್ರಯ ಪಡೆಯುವಂತೆ ಯಾವ ಸೊಕ್ಕು ಅವರ ಮನಸ್ಸಿನ ಮೇಲೆ ಸವಾರಿ ಮಾಡಿತ್ತು?ಹಾಗೆ ನೋಡಿದರೆ ಇಂಥ ಸೊಕ್ಕುಗಳನ್ನು ಪಳಗಿಸಿ ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಬೇಕಾದ ಪ್ರಬುದ್ಧ ವಯಸ್ಸು ಅವರದು. ಈ ವಯಸ್ಸಿನಲ್ಲಿ ‘ಸೊಕ್ಕನ್ನು’ತಮ್ಮ ಮನಸಿನ ಮೇಲೆ ಸವಾರಿ ಮಾಡಲು ಬಿಡುವಷ್ಟು ಅವರು ಅಸ್ಥಿರರಾದುದಾರೂ ಏಕೆ?

ಒಂದು ಕ್ಷಣ ಕೃಷ್ಣ ಅವರ ಹೆಸರಿನ ಸುತ್ತ ಪರಿವೃತ್ತಗೊಂಡಿರುವ ಮುತ್ಸದ್ದಿ, ಸಜ್ಜನ ರಾಜಕಾರಣಿ, ಸುಶಿಕ್ಷಿತ ಇತ್ಯಾದಿ ಗುಣವಾಚಕಗಳೆಲ್ಲವನ್ನೂ ಬದಿಗೆ ಸರಿಸಿ ನೋಡಿದಾಗ ಈ ಹಂತದಲ್ಲಿ ಅವರೊಬ್ಬ ಗಾಯಾಳು ಸೈನಿಕನಂತೆಯೇ ತೋರುತ್ತಾರೆ. ಈ ‘ಮಹಾ ಭಾರತ’ದ ರಾಜಕಾರಣ ಅವರನ್ನು ಅವಮಾನಿಸಿದೆ, ನೋಯಿಸಿದೆ, ಹೀನಾಯವಾಗಿ ನಡೆಸಿಕೊಂಡಿದೆ, ವಯಸ್ಸು-ಅನುಭವ-ಬುದ್ಧಿ-ವಿವೇಕ ಇದಾವುದಕ್ಕೂ ಬೆಲೆಕೊಡದೆ ಅವರನ್ನು ತಿರಸ್ಕರಿಸಿದೆ. ಎಂದೇ ನೊಂದ ಮನದೊಳಗಣ ಸೊಕ್ಕು ಈಗ ಹೆಡೆಯೆತ್ತಿ ನಿಂತಿದೆ. ಮಿತ್ರರಿಗೆ ಬೇಡವಾದಾಗ ಶತ್ರು ಪಕ್ಷ ಸೇರುವ ಮಾನವ ಸಹಜ ವರ್ತನೆಯಂತಿದೆ ಅವರ ಸೊಕ್ಕಿದ ಮನಸ್ಸಿನ ವರ್ತನೆ. ಇದೊಂದು ಕನಿಕರದ ಸ್ಥಿತಿ ಎಂದು ಮನೋವಿಜ್ಞಾನಿಗಳು ವಿಶ್ಲೇಷಿಸಬಹುದು. ಕೃಷ್ಣ ಅವರು ಸಾರ್ವಜನಿಕ ಜೀವನಕ್ಕೆ ಧುಮುಕಿದಂದಿನಿಂದಲೇ ಕೇವಲ ವ್ಯಷ್ಟಿಯಲ್ಲ ಅವರೊಬ್ಬ ಸಮಷ್ಟಿ ಎಂದೇ ಅವರ ಈಗಿನ ಕನಿಕರ ಸ್ಥಿತಿ ಮತ್ತಷ್ಟು ದಾರುಣ.

ಕೃಷ್ಣ ಕಾಂಗ್ರೆಸ್ ಪಕ್ಷ ಬಿಡಲು ಸ್ವತಂತ್ರರು. ಬಿಜೆಪಿ ಸೇರಲೂ ಸ್ವತಂತ್ರರು. ಅಷ್ಟರಮಟ್ಟಿಗೆ ನಮ್ಮ ದೇಶದಲ್ಲಿ ಪ್ರಜಾಸ್ವಾತಂತ್ರ್ಯವಿರುವುದು ನಮ್ಮ ಪುಣ್ಯವೇ ಸರಿ. ಹಾಗಿದ್ದಲ್ಲಿ ಅವರ ಅಭಿಮಾನಿಗಳಿಗೆ ಮತ್ತು ಮತದಾರರಿಗೆ ಏಕೆ ಭ್ರಮನಿರಸನವಾಗಬೇಕು? ಅವರೇಕೆ ಪತ್ರಿಕೆಗಳ ಮೂಲಕ ಹಾಗೂ ವೈಯಕ್ತಿಕವಾಗಿ, ಕೃಷ್ಣ ಬಿಜೆಪಿ ಸೇರುವುದರ ವಿರುದ್ಧ ಕಳಕಳಿ ವ್ಯಕ್ತಪಡಿಸಬೇಕು?ಗೆದ್ದೆತ್ತಿನ ಬಾಲ ಹಿಡಿಯುವುದು ಇಂದಿನ ರಾಜಕೀಯ ಸಂಸ್ಕೃತಿಯಾಗಿದೆ. ಗೆದ್ದ ಪಕ್ಷದ ಬಾಲ ಹಿಡಿದು ಸೇವೆಯ ಹೆಸರಿನಲ್ಲಿ ತಮ್ಮ ಬೇಳೆಬೇಯಿಸಿಕೊಳ್ಳುವ ರಾಜಕಾರಣಿಗಳಿಗೇನೂ ಇವತ್ತು ಕಡಿಮೆ ಇಲ್ಲ. ಅವರಿಗೆ ತತ್ವಸಿದ್ಧಾಂಗಳ ಬದ್ಧತೆ ಇಲ್ಲ, ನಮ್ಮ ಸಂವಿಧಾನದ ಬದ್ಧತೆ ಇಲ್ಲ. ತತ್ವಸಿದ್ಧಾಂತಗಳಿಗೂ ಸಂವಿಧಾನಕ್ಕೂ ತಿಲಾಂಜಲಿಯಿತ್ತು ರಾಜಕೀಯ ಲಾಭ ಪಡೆದುಕೊಳ್ಳುವ ಸ್ವಾರ್ಥಪಿಪಾಸುಗಳಿವರು. ಇಂಥವರ ಬಗ್ಗೆ ಮತದಾರರಿಗೆ ಯಾವ ಭ್ರಮೆಯೂ ಇರುವುದಿಲ್ಲ. ಆದರೆ ಕೃಷ್ಣರಂಥ ರಾಜಕಾರಣಿಗಳ ಬಗ್ಗೆ ಕೆಲವೊಂದು ಭ್ರಮೆಗಳನ್ನಿಟ್ಟುಕೊಳ್ಳಲು ಕಾರಣವೆಂದರೆ ಅವರ ತಾತಿಕ್ವ-ಸೈದ್ಧಾಂತಿಕ ಹಿನ್ನೆಲೆ.

ಎಸ್.ಎಂ.ಕೃಷ್ಣ ರಾಜಕೀಯ ಜೀವನ ಶುರುಮಾಡಿದ್ದೇ ಸಮಾಜವಾದಿ ತತ್ವಸಿದ್ಧಾಂತಗಳ ನೆಲೆಯಿಂದ. ಸ್ವಾತಂತ್ರ್ಯ, ಅಂದರೆ ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ-ಇತ್ಯಾದಿ ಸಮಾಜವಾದಿ ತತ್ವಗಳಿಗೆ,ಮೌಲ್ಯಗಳಿಗೆ,ಆದರ್ಶಗಳಿಗೆ ಅವರು ಎಷ್ಟರಮಟ್ಟಿಗೆ ಬದ್ಧರಾಗಿದ್ದರು ಎಂಬುದಕ್ಕೆ ಅವರ ಇಲ್ಲಿಯವರೆಗಿನ ರಾಜಕೀಯ ಜೀವನಕ್ಕಿಂತ ಮಿಗಿಲಾದ ಸಾಕ್ಷಿಪುರಾವೆ ಮತ್ತೊಂದು ಬೇಕಾಗಿಲ್ಲ. ಅವರ ಪ್ರಜಾಸತ್ತಾತ್ಮಕ ಸಮಾಜವಾದಿ ಬದ್ಧತೆಗಳಿಗೆ, ಜನಪರ ಸೇವಾಕಾಳಜಿಗಳಿಗೆ ಸಾಕಷ್ಟು ಮಾಹಿತಿ ನೀಡುವಂಥ ಗ್ರಂಥ-ಎಸ್.ಎಂ.ಕೃಷ್ಣ: ಬದುಕು ಸಾಧನೆ. ಭಾರತದ ರಾಜಕಾರಣ ಸೈದ್ಧಾಂತಿಕ ಭಿನ್ನತೆಗಳಿಗಿಂತ ಹೆಚ್ಚಾಗಿ ವೈಯಕ್ತಿಕ ಮೇಲಾಟಗಳಿಂದಾಗಿ ವಿಘಟನೆ ಹೊಂದಿರುವುದೇ ಹೆಚ್ಚು. ಕಮ್ಯುನಿಸ್ಟರನ್ನು ಹೊರತುಪಡಿಸಿ ನೋಡಿದಲ್ಲಿ, ನೆಹರೂ ಸಮಾಜವಾದ ಢೋಂಗಿಯದೆಂದು ಬಂಡೆದ್ದು ಯಂಗ್‌ಟರ್ಕಗಳು ಕಾಂಗ್ರೆಸ್ ತ್ಯಜಿಸಿ ಸಮಾಜವಾದಿ ಪಕ್ಷ ಕಟ್ಟಿದ್ದು ಒಂದಾದರೆ, ತುರ್ತುಪರಿಸ್ಥಿತಿ ಕಾಲದಲ್ಲಿ ಒಂದುಗೂಡಿದ್ದ ಜನತಾ ಪಕ್ಷದೊಳಗಿನ ಜನಸಂಘ ಆರೆಸ್ಸೆಸ್ ನಂಟು ಕಡಿದುಕೊಳ್ಳಲಾಗದೆ ಹೊರಬಂದು ಭಾರತೀಯ ಜನತಾ ಪಕ್ಷ ಕಟ್ಟಿದ್ದು ಇನ್ನೊಂದು ಉದಾಹರಣೆ.

ಇವೆರಡು ಬಿಟ್ಟರೆ ಸೈದ್ಧಾಂತಿಕ ನೆಲೆಯಲ್ಲಿ ಪಕ್ಷಗಳು ಒಡೆದಿರುವುದು ಇಲ್ಲವೇ ಇಲ್ಲ. ಹೆಚ್ಚು ವಿಘಟನೆಗಳು ನಡೆದಿರುವುದು ಸ್ವಾರ್ಥ ರಾಜಕಾರಣದ ನೆಲೆಯಲ್ಲೇ. ಕಾಂಗ್ರೆಸ್ ಎರಡನೆಯ ಸಲ ಒಡೆದದ್ದೂ ಇಂದಿರಾಗಾಂಧಿಯವರ ಸ್ವಾರ್ಥ ರಾಜಕೀಯ ಅಧಿಕಾರ ಲಾಲಸೆಯಿಂದಲೇ.ಆಗ ಎಸ್.ನಿಜಲಿಂಗಪ್ಪ.ಕಾಮರಾಜ್, ಮೊರಾರ್ಜಿ ದೇಸಾಯಿರಂಥ ನೇತಾರರು ಕಾಂಗ್ರೆಸ್‌ನ ತತ್ವಸಿದ್ಧಾಂತಗಳ ನೆಲೆಯಲ್ಲಿ ಸಂಸ್ಥಾ ಕಾಂಗ್ರೆಸ್ ಆಗಿ ಉಳಿದುಕೊಂಡರೆ ವಿನ: ಸ್ವಾರ್ಥದ ನೆಲೆಯಲ್ಲಿ ಅಲ್ಲ. ಕೃಷ್ಣ ಆಗ ಸಮಾಜವಾದಿ ಪಕ್ಷ ತೊರೆದು ಕಾಂಗೈ ಸೇರಿದ್ದಕ್ಕೂ ಈಗ ಬಿಜೆಪಿ ಸೇರಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಸಹೋದ್ಯೋಗಿ ಮಿತ್ರ ಎನ್. ಅರ್ಜುನದೇವ ಎಸ್.ಎಂ.ಕೃಷ್ಣ-ಬದುಕು ಬರಹಗ್ರಂಥಕ್ಕೆ ಬರೆದಿರುವ ಲೇಖನದಲ್ಲಿ ಹೀಗೆ ಹೇಳುತ್ತಾರೆ:

ರಾಜಕೀಯದಲ್ಲಿ ಶ್ರೀ ಕೃಷ್ಣ ಅವರಿಗೆ ತಟ್ಟಿರುವ ಕಳಂಕವೆಂದರೆ ಪಕ್ಷಾಂತರ. ಅದು ಅವರ ಬೆಳವಣಿಗೆಯಲ್ಲಿ ಕಂಡುಬರುವ ದೃಷ್ಟಿಬೊಟ್ಟು. ಚಲಾವಣೆಯಲ್ಲಿರುವ ಒಂದು ಪಕ್ಷಕ್ಕೆ ಸಾಯುತ್ತಿರುವ ಪಕ್ಷಗಳಿಂದ ವಲಸೆಬರುವುದು ಸಾಮಾನ್ಯ, ಸ್ವಾಭಾವಿಕ. ಈ ಸ್ವಾಭಾವಿಕ ಕ್ರಿಯೆಗೆ ‘ಮಡಿವಂತಿಕೆ‘ತೋರಿದವರು ಅವರು ಎಷ್ಟೇ ದೊಡ್ಡವರಿರಲಿ ತಾವು ಅಂಟಿಕೊಂಡ ನಾವೆಗೆ ಒದಗಿದ ಗತಿಯನ್ನೇ ತಾವೂ ಅನುಭವಿಸಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣ ಅವರು ಅವರ ದೃಷ್ಟಿಯಿಂದ ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡರೆಂದರೆ ತಪ್ಪಾಗಲಾರದು. ಪರಿಣಾಮವಾಗಿ ಅವರು ಕಾಂಗ್ರೆಸ್‌ನಲ್ಲೂ ಬೆಳೆದರು....

ಅರ್ಜುನದೇವ ಅವರ ಮಾತು ಕೃಷ್ಣ ಅವರ ವಿಷಯದಲ್ಲಿ ಅಂದಿಗೆ ನಿಜ.ಇಂದು..? ನಿಜವಾದ ಪ್ರಜಾಪ್ರಭುತ್ವ ಏರ್ಪಡಬೇಕು,ಸಮಾಜವಾದಿ ವ್ಯವಸ್ಥೆ ಮೂಡಬೇಕು,ಅಸಮಾನತೆ ಹೋಗಬೇಕು,ಶೋಷಣೆ ಇಲ್ಲವಾಗ ಬೇಕು ಎಂಬ ಆಶಯದಿಂದ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸೇರಿದ ಕೃಷ್ಣ,ಆ ಪಕ್ಷ ಸಾಯುತ್ತಿದೆ ಎನಿಸಿದಾಗ, ಬ್ಯಾಂಕ್ ರಾಷ್ಟ್ರೀಕರಣ,ರಾಜಧನ ರದ್ದು ಮುಂತಾದ ಇಂದಿರಾ ಗಾಂಧಿಯವರ ಕ್ರಮಗಳಿಂದ ಆಕರ್ಷಿತರಾದರು.ತಾವು ಏನನ್ನು ಮಾಡಬೇಕೆಂದುಕೊಂಡಿದ್ದರೋ ಅದನ್ನೇ ಇಂದಿರಾ ಕಾಂಗ್ರೆಸ್ ಮಾಡುತ್ತಿರುವಾಗ ಇನ್ನೇಕೆ ಚಿಂತೆ ಎಂದುಕೊಂಡು ಕಾಂಗೈ ಸೇರಿದರು. ಕಾಂಗ್ರೆಸ್ಸಿನಲ್ಲಿ ಅಧಿಕಾರದ ಸಿಹಿಕಹಿ ಎಲ್ಲವನ್ನೂ ಅನುಭವಿಸಿದರು. ಹಿರಿಯರಿಗೆ ಸಲ್ಲಬೇಕಾದ ಗೌರವ ಸಲ್ಲುತಿಲ್ಲ ಎಂದು ಸಾಯುತ್ತಿರುವ ಕಾಂಗ್ರೆಸ್ ತ್ಯಜಿಸಿ ಈಗ ಬಿಜೆಪಿ ಸೇರಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಆಧಿಕಾರದ ಮೋಹ ಇಲ್ಲ, ಆದರೆ ರಾಜಕೀಯದಲ್ಲಿ ಇರುವೆ ಎನ್ನುವ ಕೃಷ್ಣ ಬಿಜೆಪಿಯಲ್ಲಿ ಏನು ಆಕರ್ಷಣೆ ಕಂಡಿರಬಹುದು?ಕಾಂಗ್ರೆಸ್‌ನಂತೆ ತೋರಿಕೆಗೂ ಬಿಜೆಪಿಯಲ್ಲಿ ಸಮಾಜವಾದಿ ಆಶಯಗಳ ಈಡೇರಿಕೆಗೆ ಅವಕಾಶವಿಲ್ಲ.

ಕಾಂಗ್ರೆಸ್ ಗಾಂಧಿ ಕುಟುಂಬದ ಹಿಡಿತದಲ್ಲಿರುವಂತೆ ಬಿಜೆಪಿ ಆರೆಸ್ಸೆಸ್ ಹಿಡಿತದಲ್ಲಿದೆ ಎಂಬುದು ಕೃಷ್ಣ ಅವರಿಗೆ ತಿಳಿಯದ ಗುಟ್ಟೇನಲ್ಲ. ಬಿಜೆಪಿಗೂ ಈಗ ಹಿಂದುತ್ವ-ಹಿಂದೂ ರಾಷ್ಟ್ರ ರಹಸ್ಯ ಕಾರ್ಯಸೂಚಿ ಏನಲ್ಲ. ಗೋಳ್ವಾಲ್ಕರ್ ಪ್ರಣೀತ ಹಿಂದೂ ರಾಷ್ಟ್ರವಾಗಬೇಕೆಂಬ ಆರೆಸ್ಸೆಸ್ ಆದೇಶಕ್ಕೆ ಬಿಜೆಪಿ ಕಟಿಬದ್ಧ್ದವಾಗಿದೆ. ಹಾಗಾದಲ್ಲಿ ದೇಶದ ಅಲ್ಪಸಂಖ್ಯಾತರೆಲ್ಲ ಎರಡನೆ ದರ್ಜೆ ಪ್ರಜೆಗಳಾಗುತ್ತಾರೆ. ಅವರಿಗೆ ಸಂವಿಧಾನದತ್ತವಾದ ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾತಂತ್ರ್ಯ ಇತ್ಯಾದಿ ಯಾವ ಹಕ್ಕುಗಳೂ ಇರುವುದಿಲ್ಲ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದೆ. ಕರ್ನಾಟಕದಲ್ಲೂ ಮುಸ್ಲಿಮರಿಗೆ ಟಿಕೆಟ್ ನೀಡುವುದಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಹೀಗೆ ಅಲ್ಪಸಂಖ್ಯಾತರಿಗೆ ಸಂವಿಧಾನದತ್ತ ರಾಜಕೀಯ ಹಕ್ಕು ನಿರಾಕರಿಸುವ ಪ್ರಕ್ರಿಯೆ ಆಗಲೇ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್‌ರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ಹಿಂದುತ್ವದತ್ತ ಮೊದಲ ಹೆಜ್ಜೆಯಿಟ್ಟಾಗಿದೆ.ಉತ್ತರ ಪ್ರದೇಶದ ಅಲ್ಪಸಂಖ್ಯಾತರಿಗೆ ಈಗಾಗಲೇ ಅದರ ಬಿಸಿ ತಾಕುತ್ತಿದೆ. ಇದಕ್ಕೆಲ್ಲ ಕೃಷ್ಣ ಏನೆನ್ನುತ್ತಾರೆ? ತಮ್ಮ ಸಮಾಜವಾದಿ ಕನಸುಗಳು ಬಿಜೆಪಿಯಲ್ಲಿ ಈಡೇರುತ್ತವೆ ಎಂದು ಕನಸು ಕಾಣುವಷ್ಟು ಅಪ್ರಬುದ್ಧರಲ್ಲ ಕೃಷ್ಣ.

ಹಲವು ರಾಜಕೀಯ ನಾಯಕರುಗಳಿಗಾಗಿರುವಂತೆ ಮೋದಿಯವರೊಳಗನ ಮಹಾನ್ ನಾಯಕತ್ವದ ಸಮ್ಮೋಹನಾಸ್ತ್ರ, ಅವರ ಅಭಿವೃದ್ಧಿ ಮಂತ್ರ ಕೃಷ್ಣ ಅವರನ್ನೂ ಸೆಳೆದಿರಬಹುದೆ? 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಿದೆ ಎಂಬುದು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟು ಹಾಕಿರುವ ಭ್ರಮೆ ಎಂದಿದ್ದರು ಕೃಷ್ಣ. ಸ್ವಚ್ಛತೆ ಮಾತನಾಡುವ ಮೋದಿಯವರೇನೂ ಶುದ್ಧ ಹಸ್ತರಲ್ಲ. ಅರೇಬಿಯಾದ ಎಲ್ಲರೂ ಅತ್ತರೂ ಮೋದಿಯವರ ಹಸ್ತಗಳನ್ನು ಶುಭ್ರಗೊಳಿಸಲಾರದು ಎಂಬುದು ಕೃಷ್ಣ ಅವರಂಥ ರಾಜಕೀಯ ಮುತ್ಸದ್ದಿಗಳಿಗೆ ತಿಳಿಯದ ವಿಷಯವೇನಲ್ಲ. 2002ರ ಗುಜರಾತ್ ಘಟನೆಗಳಿಗೆ ಮುಖ್ಯ ಮಂತ್ರಿಯಾಗಿ ನೈತಿಕ ಹೊಣೆಹೊತ್ತು ವಿಷಾದ ವ್ಯಕ್ತಪಡಿಸಲೂ ನಿರಾಕರಿಸುವ ಕಲ್ಲು ಹೃದಯ ನರೇಂದ್ರ ಮೋದಿಯವರದು ಎಂಬುದು ಕೃಷ್ಣ ಅವರಿಗೆ ಗೊತ್ತಿರುವ ಸಂಗತಿಯೇ. ಆದಾಗ್ಯೂ ನರೇಂದ್ರ ಮೋದಿಯವರು ಈಗ ಅವರನ್ನು ಲೋಹಚುಂಬಕದಂತೆ ಆಕರ್ಷಿಸಿದ್ದಾರೆ. ಕಳೆದ ವರ್ಷ ಉಡುಪಿಯಲ್ಲಿ ಮೋದಿ ಸರಕಾರವನ್ನು ಹೊಗಳಿದರು. ಮೋದಿಯವರ ಕೈ ಬಲಪಡಿಸಬೇಕಾದ್ದು ಅಗತ್ಯ ಎಂದು ಅವರಿಗೆ ದಿಢೀರ್ ಜ್ಞಾನೋದಯವಾಗಿತ್ತು.ಇದಕ್ಕೆ ಮೂರು ತಿಂಗಳಷ್ಟು ಹಿಂದೆ ಕಾಂಗ್ರೆಸ್ ಪಕ್ಷ ಅವರಿಗೆ ಎರಡನೆಯ ಅವಧಿಗೆ ರಾಜ್ಯಸಭಾ ಸದಸ್ಯತ್ವವನ್ನು ನಿರಾಕರಿಸಿತ್ತು ಎಂಬುದನ್ನು ಮರೆಯುವಷ್ಟು ಸಾರ್ವಜನಿಕರ ಜ್ಞಾಪಕಶಕ್ತಿ ಕುಂದಿಲ್ಲ.

ಮೋದಿಯವರ ವಿದೇಶಾಂಗ ನೀತಿಯನ್ನು ಮೆಚ್ಚಿಕೊಂಡರು, ನೋಟುಗಳ ಅಮಾನ್ಯೀಕರಣ ಕ್ರಮವನ್ನು ನಮ್ಮ ಅರ್ಥವ್ಯವಸ್ಥೆಗೆ ಅಗತ್ಯವಾಗಿತ್ತು ಎಂದು ಸ್ವಾಗತಿಸಿದರು.(ಈ ನೋಟು ಅಮಾನ್ಯತೆಯಿಂದ ರೈತಾಪಿ ಜನರಿಗೆ ಆದ ಕಷ್ಟನಷ್ಟಗಳನ್ನು ಅರಿಯದಷ್ಟು ಕೃಷ್ಣ ಅವರ ಸಂವೇದನಾಶೀಲತೆಯನ್ನು ಜಡ್ಡುಗೊಳಿಸಿತೆ ಬಿಜೆಪಿ ಮೋಹ!) ಮೋದಿಯವರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಕೃಷ್ಣ ಅವರಿಗೆ ಅನಿಸಿದೆ. ಬಿಜೆಪಿ ಸೇರಲು ಕೃಷ್ಣ ಮತ್ತು ಅವರ ಬೆಂಬಲಿಗರು ಇವೆಲ್ಲ ಕಾರಣಗಳನ್ನು ಕೊಡಬಹುದು. ಹೀಗಾಗಿ ಅವರು ಬಿಜೆಪಿ ಸೇರಿದ್ದರಲ್ಲಿ ಕೌತುಕವೇನೂ ಇಲ್ಲ. ಬಿಜೆಪಿಯೂ ಕೃಷ್ಣ ಅವರನ್ನು ಗೌರವದಿಂದ (ಅವರ ವಯಸ್ಸಿಗೆ ತಕ್ಕಂತೆ)ನಡೆಸಿಕೊಳ್ಳುವುದಾಗಿ ಹೇಳಿದೆ.

ವಯೋಮಾನದ ಅರ್ಹತೆ ಪ್ರಕಾರ ಕೃಷ್ಣ ಅವರಿಗೆ ಈಗ ಬಿಜೆಪಿಯಲ್ಲಿ ಸಿಗಬಹುದಾದ ಗೌರವ ಎಂದರೆ ಮಾರ್ಗದರ್ಶಕ ಮಂಡಳಿಯ ಆರಾಮ ಕುರ್ಚಿ.(ಸಾರ್ವಜನಿಕರು ಅವರನ್ನು ಒಬ್ಬ ತತ್ವಬದ್ಧ ಸಜ್ಜನ ರಾಜಕಾರಣಿಯೆಂದು ಗೌರವಾದರಗಳ ಸಿಂಹಾಸನದಲ್ಲೇ ಕೂರಿಸಿದ್ದರಲ್ಲ!) ಇಷ್ಟಕ್ಕಾಗಿ ಕೃಷ್ಣ ಸಮಾಜವಾದಿ ವೃತಭಂಗ ಮಾಡಿಕೊಂಡರೆ, ತತ್ವಭ್ರಷ್ಟರಾದರೆ ಎಂದು ಅಭಿಮಾನಿಗಳಿಗೆ ತಲೆಬಿಸಿಯಾಗಬಹುದು. ಇಲ್ಲ,ಕೃಷ್ಣ ಅವರು ಬಿಜೆಪಿ ಸೇರಿರುವುದರಲ್ಲಿ ರಹಸ್ಯ ಕಾರ್ಯಸೂಚಿ ಏನೋ ಇದೆ ಎನ್ನುವವರೂ ಇದ್ದಾರೆ ಇರಬಹುದು. ಪ್ರೀತಿಯ-ಪ್ರೇಮಿಗಳ ಗುಟ್ಟು ಹೇಗೆ ಹೆಚ್ಚು ದಿನ ಗುಟ್ಟಾಗಿಯೇ ಉಳಿಯುವುದಿಲ್ಲವೋ ಹಾಗೇ ರಾಜಕೀಯದಲ್ಲೂ. ಕೃಷ್ಣ ಅವರ ರಹಸ್ಯ ಕಾರ್ಯಸೂಚಿಯೂ ಇದ್ದಲ್ಲಿ, ಇಂದಲ್ಲ ನಾಳೆ ಬಹಿರಂಗವಾಗುತ್ತದೆ. ಮನುಷ್ಯನ ಅಹಂಗೆ ಯಾತನಾಮಯ ಪೆಟ್ಟು ಬಿದ್ದಾಗ ಮನಸ್ಸು ಸೊಕ್ಕುವುದು, ಕೆರಳುವುದು ಸಹಜ.

ಕಾಂಗ್ರೆಸ್‌ನ ಯುವ ನಾಯಕತ್ವದಿಂದ ಇಂಥ ಯಾತನೆ ಅನುಭವಿಸಿರಬಹುದಾದರೂ ಮಾಗಿದ ವಯಸ್ಸಿನ ಕೃಷ್ಣರ ಆತ್ಮಸಾಕ್ಷಿಯಾದರೂ ಅವರ ಮನಸ್ಸು ವ್ಯಗ್ರವಾಗುವುದನ್ನು ತಪ್ಪಿಸಲಿಲ್ಲವೇಕೇ? ಸಾಮಾಜಿಕ ನ್ಯಾಯದಂಥ ಮೌಲ್ಯಗಳ ಕಾಳಜಿ, ಶೋಷಣೆರಹಿತ ಸಮಾಜದ ಕನಸು, ಜನಾನುರಾಗ, ಸಾರ್ವಜನಿಕ ಜೀವನದಲ್ಲಿ ಜಾರದಂಥ ಘನತೆ-ಗಾಂಭೀರ್ಯ ಅವರಲ್ಲಿನ ಇವೆಲ್ಲದಕ್ಕೂ ಸಾಕ್ಷಿಯಾಗಿದ್ದ ಆತ್ಮ ರಾಜಕೀಯ ಜೀವನದ ಕೊನೆಯಲ್ಲಿ ಅವರ ಮನದ ಮೇಲಿನ ಹತೋಟಿಯನ್ನು ಏಕೆ ಬಿಟ್ಟಿತು? ಅಥವಾ ಈ ಎಲ್ಲ ಮುಖವಾಡಗಳನ್ನು ತೊಟ್ಟು ಅವರು ಆತ್ಮವಂಚನೆ ಮಾಡಿಕೊಂಡಿದ್ದರೆ? ಇಂಥ ಪ್ರಶ್ನೆಗಳು ಕೃಷ್ಣ ಅವರ ಅಭಿಮಾನಿಗಳಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ನ್ಯಾಯ-ನೀತಿ, ಮಾನವೀಯತೆ-ಸಜ್ಜನಿಕೆಗಳನ್ನು ನಿರೀಕ್ಷಿಸುವ ಪ್ರಜೆಗಳಲ್ಲಿ ಹುಟ್ಟದೇ ಇರದು. ಎಂದೇ ಅವರಿಗೆಲ್ಲ ಕೃಷ್ಣ ಅವರ ಈಗಿನ ನಡೆ ‘ಪತನ’ ಎನ್ನಿಸಿದರೆ ಅದು ಉತ್ಪ್ರೇಕ್ಷೆಯಾಗದು. ಇದು ನೈತಿಕ ಪತನವೇ ಅಥವಾ ಕೃಷ್ಣ ಅವರು ಇಷ್ಟೂದಿನ ತೊಟ್ಟಿದ್ದ ಮುಖವಾಡವನ್ನು ಕಳಚಿಟ್ಟಿದ್ದು, ಈಗಿನದು ಅವರ ನಿಜರೂಪವಾಗಿರಬಹುದೇ? ಅಥವಾ ಬಿಜೆಪಿಯ ರಾಜಕೀಯ ಕುಟಿಲ ಕಾರಸ್ಥಾನವಿರಬಹುದೆ?ಚರಿತ್ರೆಯೇ ಈ ಪ್ರಶ್ನೆಗೆ ಉತ್ತರ ಕೊಡಬೇಕಷ್ಟೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ