ಚುನಾವಣೆಗಳು, ಭಯೋತ್ಪಾದನೆ, ಭಟ್ಟಂಗಿ ಮಾಧ್ಯಮ

Update: 2017-03-27 18:58 GMT

2017ರ ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದಂತಹ ಪ್ರಚಂಡ ಗೆಲುವಿನ ಹಿಂದೆ ಅಧಿಕಾರಾರೂಢರನ್ನು ಬದಲಾಯಿಸುವ ಇಚ್ಛೆ, ಭಾರತೀಯರ ಹೀರೊ ಆರಾಧನೆಯ ದೌರ್ಬಲ್ಯ ಮೊದಲಾದ ಹತ್ತುಹಲವು ಕಾರಣಗಳನ್ನು ಕೊಡಬಹುದು. ಆದರೆ ಬಿಜೆಪಿ ಮುಖಂಡರು ‘ಹಿಂದೂತ್ವ ಅಸ್ತ್ರ’ವನ್ನು ಪರಿಣಾಮಕಾರಿಯಾಗಿ ಬಳಸಿ ಸಮಾಜವನ್ನು ಧರ್ಮದ ನೆಲೆಯಲ್ಲಿ ಧ್ರುವೀಕರಿಸಿ ಆ ಮೂಲಕ ಮತಗಳನ್ನು ಕ್ರೋಡೀಕರಿಸಿರುವುದೇ ಅತ್ಯಂತ ಪ್ರಮುಖ ಕಾರಣವೆಂದು ಅನಿಸುತ್ತದೆ. ಅಲ್ಪಸಂಖ್ಯಾತರೆಂದರೆ ಸಮಾಜವಿರೋಧಿ ಕೃತ್ಯಗಳನ್ನು ಎಸಗುವವರು, ಉಗ್ರಗಾಮಿಗಳು, ಇವರಿಂದ ಮತ್ತು ಇವರ ಹೆಚ್ಚುತ್ತಿರುವ ಸಂತತಿಗಳಿಂದ ಹಿಂದೂ ಧರ್ಮಕ್ಕೆ ದೊಡ್ಡ ಅಪಾಯವಿದೆ ಎಂದು ಬಿಂಬಿಸುತ್ತಾ ಬರಲಾಗಿದೆ. ಸಾರ್ವಜನಿಕ ಸಭೆಗಳು ಮತ್ತು ಭಟ್ಟಂಗಿ ಮಾಧ್ಯಮಗಳ ಮೂಲಕ ರೈಲು ಅಪಘಾತಗಳು, ಸ್ಫೋಟಗಳು ಮುಂತಾದ ದುಷ್ಕೃತ್ಯಗಳಿಗೆ ಮುಸ್ಲಿಂ ಮೂಲಭೂತವಾದಿಗಳೇ ಕಾರಣ ಎಂಬ ಮಿಥ್ಯೆಯನ್ನು ವ್ಯಾಪಕವಾಗಿ ಹಬ್ಬಿಸಲಾಗಿದೆ. ಒಟ್ಟಾರೆಯಾಗಿ ಅಲ್ಪಸಂಖ್ಯಾತ ಸಮುದಾಯಗಳ ಕುರಿತು ಭಯ ಹಾಗೂ ದ್ವೇಷದ ಭಾವನೆಯನ್ನು ಬಿತ್ತುವಲ್ಲಿ ಗುಜರಾತ್ ಮಾದರಿಯ ಯಶಸ್ವಿ ಬಳಕೆ ಆಗಿರುವಂತಿದೆ.

ಚುನಾವಣೆಗಳು ಮತ್ತು ಭಯೋತ್ಪಾದನೆಯ ಗುಮ್ಮ
ಇದೇ ಮಾರ್ಚ್ 7ರಂದು ಅಂದರೆ ಕೊನೆಯ ಹಂತದ ಮತದಾನದ ಮುನ್ನಾದಿನ ಭೋಪಾಲದಿಂದ ಉಜ್ಜಯಿನಿಗೆ ಹೋಗುತ್ತಿದ್ದ ರೈಲುಗಾಡಿಯಲ್ಲಿ ಮಧ್ಯ ಪ್ರದೇಶದ ಜಾಬ್ಡಿ ಎಂಬಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ ಪರಿಣಾಮವಾಗಿ ಸುಮಾರು 9 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಇದಾದ ಕೆಲವೇ ಗಂಟೆಗಳೊಳಗಾಗಿ ಇದನ್ನೊಂದು ಭಾರೀ ದೊಡ್ಡ ಭಯೋತ್ಪಾದಕ ದಾಳಿಯೆಂದು ಬಣ್ಣಿಸಲಾಯಿತು. ರಾಜ್ಯದ ಹೆಚ್ಚಿನ ಮಾಧ್ಯಮಗಳ ಹೆಡ್‌ಲೈನ್‌ಗಳು, ಬ್ರೇಕಿಂಗ್ ನ್ಯೂಸ್‌ಗಳೆಲ್ಲ ಇದು ಐಸಿಸ್ ಉಗ್ರರ ಕೃತ್ಯವೆಂದು ಹೇಳುವ ರೀತಿಯಲ್ಲಿದ್ದವು. ಉದಾಹರಣೆಗೆ: ‘‘ಐಸಿಸ್‌ನಿಂದ ಮೊತ್ತಮೊದಲ ಬಾರಿ ಭಾರತದ ಮೇಲೆ ದಾಳಿ’’, ‘‘ಉಜ್ಜಯಿನಿ ರೈಲು ಸ್ಫೋಟಕ್ಕೆ ಲಕ್ನೋ ಜತೆ ಸಂಬಂಧ’’, ‘‘ದಾಳಿಕೋರರಿಂದ ಸ್ಫೋಟ ಚಿತ್ರಗಳು ಸಿರಿಯಾಗೆ ರವಾನೆ’’ ಇತ್ಯಾದಿ.......
ಅನತಿ ಕಾಲದಲ್ಲಿ ಮತ್ತೊಂದು ಸುದ್ದಿ ಪ್ರಕಟವಾಯಿತು. ‘‘ಐಸಿಸ್ ಜತೆ ಸಂಬಂಧವಿರುವ ಉಗ್ರ ಸೈಫುಲ್ಲಾನನ್ನು ಲಕ್ನೋದಲ್ಲಿ ಪತ್ತೆಹಚ್ಚಲಾಯಿತು; ಆ ಸಂದರ್ಭದಲ್ಲಿ ಎಟಿಸ್ ತಂಡ ಮತ್ತು ಸೈಫುಲ್ಲಾ ನಡುವೆ ನಡೆದ ಶೂಟೌಟ್‌ನಲ್ಲಿ ಸೈಫುಲ್ಲಾನನ್ನು ಕೊಲ್ಲಲಾಯಿತು; ಇನ್ನೂ ಇಬ್ಬರು ಉಗ್ರರು ಲಕ್ನೋದ ಠಾಕುರ್‌ಗಂಜ್‌ನಲ್ಲಿ ಅವಿತಿರಬಹುದು ಎಂಬ ಅನುಮಾನಗಳಿವೆ.’’ 

ಮಾರ್ಚ್ 7, 8ರಂದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲೆಲ್ಲಾ ಇದನ್ನು ಬಿಟ್ಟು ಬೇರೆ ಸುದ್ದಿಯೆ ಇಲ್ಲ ಎಂಬಂತಿತ್ತು. ಮಾರ್ಚ್ 8ರಂದು ಮತದಾನ ನಡೆಯುತ್ತಿದ್ದಾಗ ಸುದ್ದಿ ವಾಹಿನಿಗಳು ಎಡೆಬಿಡದೆ ತೋರಿಸುತ್ತಿದ್ದ ಎರಡು ದೃಶ್ಯಗಳೆಂದರೆ ಲಕ್ನೋ ಶೂಟೌಟ್ ಮತ್ತು ಮೋದಿ, ಶಾ ಜೋಡಿಯ ಸೋಮನಾಥ ಮಂದಿರ ಭೇಟಿ. ವಾಹಿನಿಗಳು ಸುಮಾರು 20 ಗಂಟೆಗಳ ಕಾಲ ಇದನ್ನೇ ತೋರಿಸಿದವು. ಅನೇಕ ಟಿವಿ ಚರ್ಚೆಗಳೂ ನಡೆದವೆಂದು ಬೇರೆ ಹೇಳಬೇಕಾಗಿಲ್ಲ. ಗಮನಾರ್ಹವಾಗಿ ಅದೇ ದಿನ 2007ರ ಅಜ್ಮೀರ ಸ್ಫೋಟ ಪ್ರಕರಣದಲ್ಲಿ ಮೂವರು ಆರೆಸ್ಸೆಸ್ ಸದಸ್ಯರಿಗೆ ಶಿಕ್ಷೆಯಾಗಿ ಸ್ವಾಮಿ ಅಸೀಮಾನಂದ ಸೇರಿದಂತೆ ಉಳಿದ 7 ಮಂದಿ ಖುಲಾಸೆಗೊಂಡ ಸುದ್ದಿಯನ್ನು ಯಾವ ವಾಹಿನಿಯೂ ಪ್ರಸಾರ ಮಾಡಲಿಲ್ಲ.

ಕೇಸರಿ ಭಯೋತ್ಪಾದಕರ ಬಗ್ಗೆ ಒಂದು ಶಬ್ದವೂ ಬರೆಯಲೊಲ್ಲದ, ಸಮಾಜದ ಹಿತಕ್ಕಿಂತಲೂ ತಮ್ಮ ವಾಣಿಜ್ಯಾಸಕ್ತಿಗಳೇ ಮುಖ್ಯ ಎಂಬ ವ್ಯಾಪಾರಿ ಮನೋಭಾವದ ಇಂತಹ ಅವಕಾಶವಾದಿ, ಭಟ್ಟಂಗಿ ಮಾಧ್ಯಮಗಳಿರುವಾಗ ಜನರಿಗೆ ಪಕ್ಷಪಾತರಹಿತ, ನೈಜ ಸುದ್ದಿಗಳು ದೊರೆಯುವುದಾದರೂ ಹೇಗೆ? ಮಾರ್ಚ್ 7, 8ರ ‘ಭಯ ಬಿತ್ತುವ’ ಸುದ್ದಿಗಳ ಹಿಂದೆ ಯಾರ ಕೈವಾಡ ಇತ್ತೆಂದು ನೋಡಹೊರಟರೆ ಕೊನೆಗೆ ಬಂದು ತಲುಪುವುದೆ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಮತ್ತು ಅವರ ಗೃಹಮಂತ್ರಿ ಭೂಪೇಂದ್ರ ಸಿಂಗ್ ಕೊಟ್ಟ ಹೇಳಿಕೆಗಳಿಗೆ. ಮತದಾನದ ದಿನದಂದು ಪತ್ರಿಕಾಧರ್ಮಕ್ಕೆ ವಿರುದ್ಧವಾಗಿ ಇಂತಹ ಅನಧಿಕೃತ, ಊಹಾಪೋಹದ, ಜನರ ದಿಕ್ಕು ತಪ್ಪಿಸುವಂತಿದ್ದ ಸುದ್ದಿಗಳನ್ನು ಬಿತ್ತರಿಸುವುದರ ಹಿಂದೆ ಯಾರ ಕೈವಾಡ ಇರಬಹುದೆಂದು ಊಹಿಸುವುದು ಕಷ್ಟವಿಲ್ಲ. ಆದರೆ ಮತದಾನ ಮುಗಿದ ಬಳಿಕ ಸುದ್ದಿಗಳಲ್ಲಿ ಕೆಲವೊಂದು ಬದಲಾವಣೆಗಳಾದವು. ಸೈಫುಲ್ಲಾನಿಗಾಗಲಿ, ಉಳಿದ ಇಬ್ಬರು ‘ಉಗ್ರ’ರಿಗಾಗಲಿ ಐಸಿಸ್ ಜತೆ ಸಂಪರ್ಕ ವಿತ್ತು ಎಂಬುದನ್ನು ರಾಜ್ಯ ಪೊಲೀಸರು ಮತ್ತು ಕೇಂದ್ರ ಗೃಹಸಚಿವರು ಅಧಿಕೃತವಾಗಿ ದೃಢಪಡಿಸಿಲ್ಲ ಎಂಬ ವರದಿಗಳು ಪ್ರಕಟವಾದವು.

ಮೊನ್ನೆಯ ಲೈವ್ ಪ್ರಸಾರದ ವೇಳೆ ವರದಿಗಾರರು ಎನ್‌ಕೌಂಟರ್ ನಡೆದುದೆನ್ನಲಾದ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಭದ್ರತಾ ಸಿಬ್ಬಂದಿ ಜತೆ ಲೋಕಾಭಿರಾಮವಾಗಿ ಹರಟುತ್ತಿದ್ದರೆಂದು ತಿಳಿದುಬಂದಿದೆ. ಅಲ್ಲಿ ಯಾವ ಉದ್ವಿಗ್ನತೆಯೂ ಕಂಡುಬಂದಿಲ್ಲ. ಈ ಸಂದರ್ಭದಲ್ಲಿ 2008ರ ಮುಂಬೈ ದಾಳಿಗಳನ್ನು ಜ್ಞಾಪಿಸಿಕೊಳ್ಳಬೇಕಾಗಿದೆ. ದಾಳಿಗಳ ಬಳಿಕ ನೇಮಕವಾಗಿದ್ದ ಉನ್ನತ ಮಟ್ಟದ ಸಮಿತಿಯ ತನಿಖೆಯಲ್ಲಿ ತಿಳಿದುಬಂದಿರುವಂತೆ ಅಂದು ತಾಜ್ ಹೋಟೆಲ್ ಸುತ್ತಮುತ್ತಲಿನ ಲೈವ್ ದೃಶ್ಯಗಳನ್ನು ಬಿತ್ತರಿಸಿದ ಪರಿಣಾಮವಾಗಿ ನಮ್ಮ ಭದ್ರತಾ ಪಡೆಗಳಿಗೆ ತುಂಬಾ ಪ್ರಾಣಹಾನಿಯ ಜತೆ ಸೊತ್ತುಗಳಿಗೂ ನಷ್ಟ ಆಗಿತ್ತು.

ತದನಂತರ ಸರಕಾರ ರೂಪಿಸಿರುವ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಭಯೋತ್ಪಾದಕರ ವಿರುದ್ಧದ ಯಾವುದೇ ಕಾರ್ಯಾಚರಣೆಯನ್ನು ಲೈವ್ ಆಗಿ ಬಿತ್ತರಿಸಕೂಡದು ಎಂದಿದೆ. ಹಾಗಾದರೆ ಮೊನ್ನೆಯ ಲಕ್ನೋ ಎನ್‌ಕೌಂಟರ್ ವೇಳೆ ಭದ್ರತಾ ಪಡೆಗಳು, ಹಿರಿಯ ಅಧಿಕಾರಿಗಳು ಲೈವ್ ಚಿತ್ರೀಕರಣಕ್ಕೆ ಅನುಮತಿ ಕೊಟ್ಟುದಾದರೂ ಹೇಗೆ, ಯಾಕೆ, ಯಾರ ಆದೇಶದ ಮೇರೆಗೆ? ಮಾರ್ಗದರ್ಶಿ ಸೂತ್ರಗಳ ಉದ್ದೇಶಪೂರ್ವಕ ಉಲ್ಲಂಘನೆಗೆ ಸಮರ್ಥನೆ ಏನು? ಇದರ ಹಿಂದೆ ಯಾರ ಅಭಯಹಸ್ತ ಇದೆ? ಮೋದಿ ಸರಕಾರ ಶೂಟೌಟ್‌ಅನ್ನು ಲೈವ್ ತೋರಿಸಿದ ವಾಹಿನಿಗಳಿಗೆ ನೋಟಿಸ್ ಕಳುಹಿಸುವ ಬದಲು ಮೌನವಾಗಿರುವುದು ಸಂಶಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.


ಚುನಾವಣೆಗಳ ಸಂದರ್ಭದಲ್ಲಿ ಬಿತ್ತರವಾಗುವ ಇಂತಹ ಭಯೋತ್ಪಾದಕ ದಾಳಿಗಳ ಸುದ್ದಿಯನ್ನು ಕೇಳಿದಾಗ ಗುಜರಾತ್ ನೆನಪಾಗುವುದಿಲ್ಲವೇ? ಅಲ್ಲೂ ಭಾರೀ ನಿರ್ಣಾಯಕವಾಗಿದ್ದ ಚುನಾವಣೆಗಳ ಕಾಲದಲ್ಲಿ ಸೊಹ್ರಾಬುದ್ದೀನ್ ಶೇಕ್, ಇಶ್ರತ್ ಜಹಾನ್ ಮುಂತಾದ ಶಂಕಿತ ಉಗ್ರರು ಕಾಣಿಸಿಕೊಂಡಿದ್ದರು. ಅವರನ್ನೆಲ್ಲ ತಕ್ಷಣ ಪತ್ತೆಹಚ್ಚಿ, ಯಶಸ್ವಿ ಎನ್‌ಕೌಂಟರ್ ಕಾರ್ಯಾಚರಣೆಗಳ ಮೂಲಕ ಮುಗಿಸಿಬಿಡಲಾಗಿತ್ತು. ಆ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಭಾಷಣಗಳ ವೇಳೆ ಇದೇ ವಿಷಯವನ್ನು ಎತ್ತಿಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸಿದುದನ್ನು ಜ್ಞಾಪಿಸಿಕೊಳ್ಳಿ. ಅಂದಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಆಧುನಿಕ ಹಾಗೂ ಸಂಕೀರ್ಣ ವಿಧಾನಗಳನ್ನು ಬಳಸಿರುವ ಹಾಗಿದೆ. ಗೂಢಚರ ಇಲಾಖೆಗೆ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಸೈಫುಲ್ಲಾ ಮತ್ತಿತರರ ಚಲನವಲನಗಳ ಮಾಹಿತಿ ಇದ್ದಿರಲೆಬೇಕಲ್ಲವೆ? ಆಗಲೇ ಇವರನ್ನು ಬಂಧಿಸಿದ್ದರೆ ತಥಾಕಥಿತ ಐಸಿಸ್ ನಂಟುಗಳ ಬಗ್ಗೆ ಹೆಚ್ಚಿನ ಖಚಿತ ಮಾಹಿತಿಗಳು ಲಭ್ಯವಾಗುತ್ತಿರಲಿಲ್ಲವೇ? ಸೈಫುಲ್ಲಾನ ಬಳಿ ಒಂದು ನಾಡ ಪಿಸ್ತೂಲು ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಇದನ್ನೆಲ್ಲ ನೋಡುವಾಗ ಬಂಧಿಸುವ ಬದಲು ಸಾಯಿಸುವುದರ ಹಿಂದೆ ಯಾರದೋ ಗುಟ್ಟು ಬಯಲಾಗಬಾರದು ಎಂಬ ಉದ್ದೇಶವೆ ಇರಬಹುದೆಂದು ತೋರುತ್ತದೆ.
 ಸಿಬಿಐ, ಎನ್‌ಐಎಗಳು ಪಂಜರದ ಅರಗಿಣಿಗಳಾಗಿರುವ ಸನ್ನಿವೇಶದಲ್ಲಿ, ನಕಲಿ ಎನ್‌ಕೌಂಟರ್ ಮತ್ತು ಕೇಸರಿ ಭಯೋತ್ಪಾದನೆಯ ಆರೋಪಿಗಳಲ್ಲಿ ಹೆಚ್ಚಿನವರು ಖುಲಾಸೆಗೊಳ್ಳುತ್ತಿರುವ ಇವತ್ತಿನ ಸಂದರ್ಭದಲ್ಲಿ ಒಂದು ವೇಳೆ ತಥಾಕಥಿತ ಎನ್‌ಕೌಂಟರ್‌ಮೇಲೆ ತನಿಖೆ ನಡೆದರೂ ಅದು ಎಷ್ಟರ ಮಟ್ಟಿಗೆ ಸತ್ಯಾಂಶಗಳಿಂದ ಕೂಡಿರಬಹುದೆಂದು ನೀವೇ ಯೋಚಿಸಿ.
ಚುನಾವಣೆಗಳು ಮತ್ತು ಒಂದು ಭಟ್ಟಂಗಿ ಮಾಧ್ಯಮ
ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗಳ ಸಂದರ್ಭ. ಮತದಾನ ಮುಗಿಯುತ್ತಿದ್ದಂತೆ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬ ರಹಸ್ಯ ವರ್ತಮಾನವೊಂದು ಪಕ್ಷದ ಮುಖ್ಯಸ್ಥರಿಗೆ ಬಂದು ತಲಪಿದೆ. ಇದರ ನಂತರ ಇದ್ದಕ್ಕಿದ್ದಂತೆ ಹಿಂದಿ ದೈನಿಕ ‘ದೈನಿಕ್‌ಜಾಗರಣ್’ನಲ್ಲಿ ಚುನಾವಣೋತ್ತರ ಸಮೀಕ್ಷಾ ವರದಿಯೊಂದು ಪ್ರಕಟವಾಯಿತು. ಸದರಿ ಸಮೀಕ್ಷೆ ಬಿಜೆಪಿ ಅದರ ಎದುರಾಳಿಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ ಎಂದು ತಿಳಿಸಿತು. ನೀತಿಸಂಹಿತೆಯನ್ನು ಉಲ್ಲಂಘಿಸಿ ಪ್ರಕಟಿಸಲಾದ ಈ ಸಮೀಕ್ಷೆಯನ್ನು ಬಳಿಕ ಚುನಾವಣಾ ಆಯೋಗದ ಆದೇಶದಂತೆ ವಾಪಸ್ ಪಡೆಯಲಾಯಿತಾದರೂ ಅಷ್ಟರೊಳಗಾಗಿ ಅದನ್ನು ವಾಟ್ಸ್‌ಆ್ಯಪ್‌ನಂತಹ ಮೊಬೈಲ್ ಗುಂಪುಗಳ ಮುಖಾಂತರ ರಾಜ್ಯದಾದ್ಯಂತ ಪ್ರಚಾರ ಮಾಡಿ ಆಗಿತ್ತು. ಈಗ ತಿಳಿದುಬಂದಿರುವಂತೆ ಆ ಸಮೀಕ್ಷೆಯನ್ನು ಪತ್ರಿಕೆಗೆ ಕಳುಹಿಸಿದಾತ ಅದೇ ಪತ್ರಿಕೆಯ ವಾಣಿಜ್ಯ ವಿಭಾಗದ ಓರ್ವ ಹಿರಿಯ ಅಧಿಕಾರಿಯಾದ ತನ್ಮಯ್ ಶಂಕರ್. ಫೆಬ್ರವರಿ 10ರಂದು ಈತ "rdiindia.com  ನಡೆಸಿದಂತಹ ಈ ಸಮೀಕ್ಷೆಯನ್ನು ಪ್ರಕಟಿಸಿ’’ ಎಂಬ ಸೂಚನೆಯೊಂದನ್ನು ಇಮೇಲ್ ಮೂಲಕ ವಿವಿಧ ಸಂಪಾದಕ ವಿಭಾಗಗಳಿಗೆ ಕಳುಹಿಸಿದ್ದರು.
ತನ್ಮಯ್ ಶಂಕರ್‌ಗೆ ಸಮೀಕ್ಷೆಯ ವರದಿ ದೊರೆತಿರುವುದು ಸುನೀಲ್ ಆರ್. ಎಂಬಾತ ತನ್ನ drsrdi@gmail.com ವಿಳಾಸದಿಂದ ಕಳುಹಿಸಿದ ಇಮೇಲ್ ಮೂಲಕ. ಆರ್‌ಡಿಐ ಎಂದರೆ Resource Development International ಎಂದೂ ಆಗುತ್ತದೆ, Research and Development Initiative ಎಂದೂ ಆಗುತ್ತದೆ. ಮೊದಲಿನ ಸಂಸ್ಥೆಯ ಮುಖ್ಯಸ್ಥರು ತಾವು ಚುನಾವಣಾ ಸಮೀಕ್ಷೆಯ ವೃತ್ತಿಯಲ್ಲಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆದರೆ ಎರಡನೆಯ ಸಂಸ್ಥೆ ಈ ಹಿಂದೆ ಕೆಲವು ಚುನಾವಣಾ ಸಮೀಕ್ಷೆಗಳನ್ನು ನಡೆಸಿರುವುದಾಗಿ ತಿಳಿದುಬಂದಿದೆ. ಇದರ ಪ್ರವರ್ತಕರಾದ ದೇವೇಂದ್ರ ಕುಮಾರ್ ಈ ಹಿಂದೆ ಅರುಣ್ ಜೇಟ್ಲಿ, ವಸುಂಧರಾ ರಾಜೆ ಮುಂತಾದ ಬಿಜೆಪಿ ನಾಯಕರ ಜೊತೆ ಕೆಲಸ ಮಾಡಿದವರು.
ಆದರೆ ಚುನಾವಣಾ ಆಯೋಗಕ್ಕೆ ನೀಡಿರುವುದು Resource Development International ಸಂಸ್ಥೆಯ ಹೆಸರನ್ನು! ತನ್ಮಯ್ ಶಂಕರ್ ಯಾವ ವಿಚಾರವನ್ನೂ ಬಾಯ್ಬಿಡುತ್ತಿಲ್ಲ. ಅಂದ ಹಾಗೆ ತನ್ಮಯ್‌ರ ಫೇಸ್‌ಬುಕ್ ಪುಟಗಳಲ್ಲಿ ಆತ ಆರೆಸ್ಸೆಸ್ ಶಾಖೆಗಳಲ್ಲಿ ಭಾಗವಹಿಸಿರುವ, ಗೋಳ್ವ್ವಲ್ಕರ್‌ಗೆ ನಮಸ್ಕರಿಸುವ ಚಿತ್ರಗಳಿದ್ದವು. ಆದರೆ ಈಗ ಹಠಾತ್ತಾಗಿ ಅವನ್ನೆಲ್ಲ ಡಿಲೀಟ್ ಮಾಡಲಾಗಿದೆ. ಅತ್ತ ದೇವೇಂದ್ರ ಕುಮಾರ್ ಕೂಡಾ ಸಮೀಕ್ಷೆ ವಿಚಾರ ತನಗೇನೂ ತಿಳಿದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಸುನೀಲ್ ಆರ್. ಯಾರು? ‘ದೈನಿಕ್ ಜಾಗರಣ್’ನ ಮಾಲಕರಾದ ಸುಕ್ರಿತ್ ಮತ್ತು ಸಂಜಯ ಗುಪ್ತಾರಿಗೆ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಸಮೀಕ್ಷೆಯನ್ನು ಪ್ರಕಟಿಸುವಂತೆ ಹೇಳಿದವರಾರು?

(ಆಧಾರ: The Wire ನಲ್ಲಿ ಊರ್ಮಿಲೇಶ್ ಮತ್ತು ಸಿದ್ಧಾರ್ಥ ವರದರಾಜನ್ ಲೇಖನಗಳು)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News