ಗುಜರಾತ್ ನಲ್ಲಿ ಶೇ.80ಕ್ಕೂ ಅಧಿಕ ಇಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳು
ಅಹ್ಮದಾಬಾದ್, ಮಾ.29: ಗುಜರಾತ್ ನಲ್ಲಿ ಕೇವಲ ಶೇ.20 ಇಂಜಿನಿಯರಿಂಗ್ ಪದವೀಧರರು ಮಾತ್ರ ಉದ್ಯೋಗದಲ್ಲಿದ್ದಾರೆ. ಶೇ.80ರಷ್ಟು ಇಂಜಿನಿಯರ್ ಗಳು ನಿರುದ್ಯೋಗಿಗಳಾಗಿ ಪರದಾಡುತ್ತಿದ್ದಾರೆ ಎಂಬ ಅಘಾತಕಾರಿ ಮಾಹಿತಿ ಹೊರಬಿದ್ದಿದೆ.
ಸಿವಿಲ್ ಇಂಜಿನಿಯರಿಂಗ್ ಪದವೀಧರರಲ್ಲಿ ಶೇ.5ಕ್ಕಿಂತ ಕಡಿಮೆ ಮಂದಿಗೆ ಉದ್ಯೋಗ ಲಭಿಸಿದೆ. ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಮಾಹಿತಿ ಪ್ರಕಾರ 2015-16ರಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಉತ್ತೀರ್ಣರಾದ 11,190 ವಿದ್ಯಾರ್ಥಿಗಳ ಪೈಕಿ ಕೇವಲ 3,407 ಮಾತ್ರ ಉದ್ಯೋಗ ಪಡೆದಿದ್ದಾರೆ.
ಇದೇ ವೇಳೆ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತೀರ್ಣರಾದ 17,028 ವಿದ್ಯಾರ್ಥಿಗಳಲ್ಲಿ ಕೇವಲ 4,524 ಮಂದಿಗೆ ಉದ್ಯೋಗ ಸಿಕ್ಕಿದೆ. ರಾಜ್ಯಾದ್ಯಂತ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ 71,000 ಇಂಜಿನಿಯರಿಂಗ್ ಸೀಟುಗಳಲ್ಲಿ 27,000 ಸೀಟುಗಳು ಭರ್ತಿಯಾಗದೆ ಉಳಿದಿರುವುದಾಗಿ ಮೂಲಗಳು ತಿಳಿಸಿದೆ.
ತಜ್ಞರ ಪ್ರಕಾರ ಬೇಡಿಕೆಗಿಂತ ಹೆಚ್ಚಿನ ಇಂಜಿನಿಯರಿಂಗ್ ಪದವೀಧರರು ಇಲ್ಲಿದ್ದಾರೆ. ಶಿಕ್ಷಣದ ಗುಣಮಟ್ಟ, ಕಂಪೆನಿಗೆ ಬೇಕಾದ ವೃತ್ತಿ ಕೌಶಲ್ಯ ಅವರಲ್ಲಿ ಇಲ್ಲದಿರುವುದು ಇದಕ್ಕೆಲ್ಲ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.