ಮೂತ್ರ ವಿಸರ್ಜನೆಗೂ ಆಧಾರ್ ಕಾರ್ಡ್!?

Update: 2017-04-02 05:07 GMT

ಜನಾರ್ದನ ಪೂಜಾರಿಯ ಪ್ರೆಸ್‌ಮೀಟ್‌ಗೆಂದು ಪ್ರೆಸ್‌ಕ್ಲಬ್‌ಗೆ ಬಂದಿದ್ದ ಪತ್ರಕರ್ತ ಎಂಜಲು ಕಾಸಿಗೆ ಯಾಕೋ ತಲೆ ಧಿಂ ಎನ್ನಿಸಿತು. ಈ ಹಿಂದೆಯೂ ಹೀಗೆ ಒಂದೆರಡು ಬಾರಿ ಆದಾಗ ಡಾಕ್ಟರನ್ನು ಭೇಟಿ ಮಾಡಿದ್ದ. ಅವರು ‘‘ನೀವು ಜನಾರ್ದನ ಪೂಜಾರಿಯ ಪ್ರೆಸ್‌ಮೀಟ್‌ಗೆ ಹೋಗುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಮಂಡೆಯೊಳಗೆ ಬೇರೆಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ’’ ಎಂದು ಸಲಹೆ ನೀಡಿದ್ದರು. ಆದರೂ ಸಂಪಾದಕರ ಒತ್ತಾಯದ ಮೇರೆಗೆ ಅನಿವಾರ್ಯವಾಗಿ ಮತ್ತೆ ಪೂಜಾರಿ ಪ್ರೆಸ್‌ಮೀಟ್‌ಗೆ ಹೋಗಿ ತಲೆಕೆಡಿಸಿ ಕೊಂಡು ಬಂದಿದ್ದ. ಯಾವುದಾದರೂ ಸೆಲೂನ್‌ಗೆ ಹೋಗಿ ತನ್ನ ತಲೆಯನ್ನು ಸಂಪೂರ್ಣ ಬೋಳಿಸಬೇಕು ಎಂದು ಅವನಿಗನ್ನಿಸಿತು. ಸರಿ ಅಕ್ಕ ಪಕ್ಕ ಸೆಲೂನ್ ಅಂಗಡಿ ಹುಡುಕ ತೊಡಗಿದ. ಒಂದೇ ಒಂದು ಅಂಗಡಿ ಇಲ್ಲ.

ಯಾರೋ ಒಬ್ಬ ದಢೂತಿ ವ್ಯಕ್ತಿ ಎದುರಾದ. ಅವನ ತಲೆ ಈಗಷ್ಟೇ ಬೋಳಿಸಿದಂತೆ ಇತ್ತು. ‘‘ಸಾರ್...ಇಲ್ಲಿ ಸೆಲೂನ್ ಅಂಗಡಿ ಎಲ್ಲಿದೆ?’’ ಕಾಸಿ ಕೇಳಿದ.

‘‘ಯಾಕಪ್ಪ ಸೆಲೂನು ಅಂಗಡಿ?’’ ದಢೂತಿ ವ್ಯಕ್ತಿ ಕೇಳಿದ. ಸೆಲೂನು ಅಂಗಡಿ ಇನ್ಯಾಕೆ? ಕಾಸಿಗೆ ಪ್ರಶ್ನೆಯೇ ವಿಚಿತ್ರ ಅನ್ನಿಸಿತು ‘‘ಇನ್ಯಾಕೆ? ತಲೆ ಬೋಳಿಸ ಬೇಕಾಗಿತ್ತು...’’ ಕಾಸಿ ಉತ್ತರಿಸಿದ.

ದಢೂತಿ ವ್ಯಕ್ತಿ ತನ್ನ ಬೋಳಿಸಿದ ತಲೆಯ ನ್ನೊಮ್ಮೆ ಸವರಿ ಹೇಳಿದ ‘‘ನೋಡಪ್ಪ....ಇಲ್ಲೇ ಪಕ್ಕದಲ್ಲಿ ಎಸ್‌ಬಿಐ ಬ್ಯಾಂಕ್, ಆ ಬ್ಯಾಂಕ್...ಈ ಬ್ಯಾಂಕ್‌ಗಳೆಲ್ಲ ಇವೆ. ಅಲ್ಲಿಗೆ ಹೋದರೆ ಬಹಳ ಚೆನ್ನಾಗಿ ತಲೆ ಬೋಳಿಸುತ್ತಾರೆ. ಸೆಲೂನ್ ಅಂಗಡಿಗಳೆಲ್ಲ ಈಗ ಬಂದಾಗಿವೆ. ಬೋಳಿಸುವ ಕೆಲಸವನ್ನು ಬ್ಯಾಂಕುಗಳೇ ಮಾಡುತ್ತಿವೆ...ಈಗಷ್ಟೇ ನನ್ನ ತಲೆ ಬೋಳಿಸಿಕೊಂಡು ಬಂದೆ’’ ಎಂದು ಬೋಳು ತಲೆ ಸವರುತ್ತಾ ಬ್ಯಾಂಕಿನ ದಾರಿ ತೋರಿಸಿದ. ಅರೆ! ಮಲ್ಯ ಬ್ಯಾಂಕುಗಳನ್ನು ಮುಳುಗಿಸಿದ ಬಳಿಕ, ಅವುಗಳನ್ನು ಸೆಲೂನ್‌ಗಳನ್ನಾಗಿ ಮಾರ್ಪಾಡು ಮಾಡಲಾಗಿದೆಯೆ? ಎಂದು ಕಾಸಿ ಯೋಚಿಸ ತೊಡಗಿದ. ಯಾರಾದರೇನು, ತಲೆ ಬೋಳಿಸಿಕೊಂಡರಾಯಿತು ಎಂದು ನೇರವಾಗಿ ಹತ್ತಿರದಲ್ಲಿರುವ ಒಂದು ಬ್ಯಾಂಕ್‌ನ ಒಳಗೆ ಹೋದ. ಅಷ್ಟರಲ್ಲಿ ಓರ್ವ ಮುಖಕ್ಕೆ ಬಟ್ಟೆ ಕಟ್ಟಿದವನೊಬ್ಬ ಆತನ ಎದುರು ಪಿಸ್ತೂಲ್ ಹಿಡಿದು ನಿಂತ. ‘‘ನಿನ್ನ ಕಿಸೆಯೊಳಗಿರುವ ಎಲ್ಲ ಹಣವನ್ನು ತೆಗೆದು ಬ್ಯಾಂಕ್ ಅಕೌಂಟ್‌ಗೆ ಹಾಕು...’’

ಅರೆ! ದರೋಡೆಕೋರನಿರಬಹುದೆ? ‘ಹೆಲ್ಪ್ ಹೆಲ್ಪ್’ ಎಂದು ಕಾಸಿ ಕೂಗಿದ. ‘‘ಯಾರೂ ನಿನ್ನ ಸಹಾಯಕ್ಕೆ ಬರುವುದಿಲ್ಲ. ನಾನು ಈ ಬ್ಯಾಂಕ್ ಮ್ಯಾನೇಜರ್’’ ಎಂದು ಪಿಸ್ತೂಲ್ ಹಿಡಿದವನು ಹೇಳಿದ. ಆ ತೆರಿಗೆ, ಈ ತೆರಿಗೆ, ಪೇಟಿಎಂ, ಈಟಿಎಂ ಎಂದೆಲ್ಲ ಅವನ ಎಲ್ಲ ಜೇಬುಗಳನ್ನು ತಡಕಾಡಿ ಸಣ್ಣ ಪುಟ್ಟ ನಾಣ್ಯಗಳನ್ನೂ ಬಿಡದೆ ವಸೂಲು ಮಾಡಿ ಕಾಸಿಯನ್ನು ಸಂಪೂರ್ಣ ಕ್ಯಾಶ್‌ಲೆಸ್ ಗ್ರಾಹಕನನ್ನಾಗಿ ಮಾಡಿ, ತಲೆಯನ್ನು ನುಣ್ಣಗೆ ಬೋಳಿಸಿ ಬ್ಯಾಂಕಿನಿಂದ ಹೊರದಬ್ಬಿದರು.

ಪ್ರಾಣವಾದರೂ ಉಳಿಯಿತಲ್ಲ ಎಂದು ಕಾಸಿ ನಿರಾಳ ಉಸಿರು ಬಿಟ್ಟ. ಕಿಸೆಯನ್ನೆಲ್ಲ ತಡಕಾಡಿದರೆ ಮೂಲೆಯಲ್ಲಿ ಒಂದು ರೂಪಾಯಿ ನಾಣ್ಯ ಕೈಗೆ ಸಿಕ್ಕಿತು. ಅರೆ! ಇದನ್ನೇನು ಮಾಡುವುದು? ಒಂದು ವೇಳೆ ಇದು ಕಿಸೆಯೊಳಗೆ ಉಳಿಸಿಕೊಂಡರೆ ಕಪ್ಪು ಹಣ ಎಂದು ತನ್ನ ವಿರುದ್ಧ ಐಟಿಯವರು ದೂರು ದಾಖಲಿಸಿ ಬಂಧಿಸಿದರೆ? ಹೆದರಿಕೆಯಾಯಿತು. ನೋಡಿದರೆ ದೂರದಲ್ಲಿ ಸುಲಭ್ ಶೌಚಾಲಯ್ ಕಂಡಿತು. ಸದ್ಯಕ್ಕೆ ಈ ರೂಪಾಯಿಗೆ ಬೇರೇನೂ ಸಿಗುವುದಿಲ್ಲ. ಕನಿಷ್ಠ ನಮ್ಮಲ್ಲಿರುವುದನ್ನು ಹೊರಗೆ ಹಾಕುವುದಕ್ಕಾದರೂ ಪ್ರಯೋಜವಾದೀತು ಎಂದು ಅತ್ತ ಓಡಿದ. ಅವನಿಗೆ ತುರ್ತಾಗಿ ಮೂತ್ರ ವಿಸರ್ಜನೆ ಮಾಡಬೇಕಾಗಿತ್ತು. ಶೌಚಾಲಯದ ದ್ವಾರದಲ್ಲಿ ಕುಳಿತವನಿಗೆ ಕೈಯಲ್ಲಿರುವ ನಾಣ್ಯವನ್ನು ತೋರಿಸುತ್ತಾ ‘ಮೂತ್ರ ವಿಸರ್ಜನೆ ಮಾಡಬೇಕಾಗಿತ್ತು’ ಎಂದು ಸನ್ನೆ ಮಾಡಿದ.

ಕಾವಲುಗಾರ ಕಾಸಿಯನ್ನೇ ನೋಡಿ....‘‘ಆಧಾರ್ ಕಾರ್ಡ್ ಇದೆಯಾ?’’ ಎಂದು ಕೇಳಿದ. ‘‘ನನಗೆ ಮೂತ್ರ ವಿಸರ್ಜನೆ ಮಾಡಬೇಕಾಗಿತ್ತು’’ ಮತ್ತೊಮ್ಮೆ ಜೋರಾಗಿ ಹೇಳಿದ. ಎಲ್ಲಾದರೂ ರೇಶನ್ ಅಂಗಡಿಗೆ ಬಂದಿದ್ದೇನೆಯೋ ಎಂಬ ಅನುಮಾನ ಆತನಿಗೆ.

‘‘ನೋಡ್ರಿ, ಸ್ವಚ್ಛತಾ ಆಂದೋಲನ ಶುರುವಾದ ಬಳಿಕ ಎಲ್ಲ ಸಾರ್ವಜನಿಕ ಶೌಚಾಲಯಗಳ ಪೈಪ್ ಲೈನ್‌ಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಇದ್ದರೆ ಮಾತ್ರ ಮೂತ್ರ ವಿಸರ್ಜನೆ ಮಾಡಲು ಸಾಧ್ಯ....’’

ಕಾಸಿ ಬೆಚ್ಚಿ ಬಿದ್ದ. ಮೂತ್ರ ವಿಸರ್ಜನೆಗೂ ಆಧಾರ್ ಕಾರ್ಡ...? ಅವನಿಗೋ ತುರ್ತಾಗಿ ಒಳಗೆ ಹೋಗಬೇಕಾಗಿದೆ. ಆದರೆ ಆಧಾರ್ ಕಾರ್ಡ್ ಎಲ್ಲಿಂದ ತರುವುದು? ಅವಸರವಸರವಾಗಿ ಆತ ತನ್ನ ಜೋಳಿಗೆಯನ್ನು ಹುಡುಕಾಡಿದ. ಆಧಾರ್ ಕಾರ್ಡ್‌ನ ಒಂದು ಹಳೆಯ ಝೆರಾಕ್ಸ್ ಪ್ರತಿ ಸಿಕ್ಕಿತು. ‘‘ಅಬ್ಬಾ! ಬದುಕಿದೆ’’ ಎಂದು ಕಾಸಿ ಪ್ರತಿಯನ್ನು ಕಾವಲುಗಾರನಿಗೆ ತೋರಿಸಿದ. ಕಾವಲುಗಾರ ಕಾಸಿಯ ಎಲ್ಲ ವಿವರಗಳನ್ನು ದಾಖಲಿಸಿ ಕೊಂಡ. ಬಳಿಕ ಕೇಳಿದ ‘‘ಇವತ್ತು ಸಾರ್ವಜನಿಕ ಶೌಚಾಲಯದಲ್ಲಿ ಎಷ್ಟು ಬಾರಿ ಮೂತ್ರ ಮಾಡಿದ್ದೀರಿ...?’’

ಕಾಸಿ ಗೊಂದಲಗೊಂಡ ‘‘ಯಾಕಪ್ಪ? ನೀನೇನು ವೈದ್ಯನಾ?’’

‘‘ಹಾಗಲ್ಲ...ಡಿಮಾನಿಟೈಸೇಶನ್ ಬಳಿಕ ಮೂತ್ರ ಮಾಡುವುದಕ್ಕೆ ನಿರ್ಬಂಧಗಳಿವೆ. ಈಗ ದಿನಕ್ಕೆ ಎರಡು ಬಾರಿ ನೀವು ಮೂತ್ರ ಮಾಡಬಹುದು. ಮೂರನೆ ಬಾರಿ ಮೂತ್ರ ಮಾಡಬೇಕಾದರೆ ನಿಮ್ಮ ಅಕೌಂಟ್‌ನಿಂದ ಶೇ. 15ರಷ್ಟು ಹಣ ಕಡಿತವಾಗುತ್ತದೆ...’’

‘‘ಇಲ್ಲಾರೀ...ನಾನು ಬೆಳಗ್ಗೆ ಒಂದು ಬಾರಿ ಮಾತ್ರ ಮೂತ್ರ ಮಾಡಿರೋದು...ತಗೊಳ್ಳಿ...’’ ಎಂದು ಒಂದು ರೂಪಾಯಿ ಹಣವನ್ನು ಅವನ ಮುಂದಿಟ್ಟ.

ಆ ನಾಣ್ಯವನ್ನು ಹಿಂದೆ ಮುಂದೆ ತಿರುಗಿಸಿ ಕಾವಲುಗಾರ ಕೇಳಿದ ‘‘ಇಷ್ಟು ಕ್ಯಾಶ್ ನಿಮ್ಮ ಕೈಯಲ್ಲಿ ಹೇಗೆ ಬಂತು? ಇದರ ಐಟಿ ಕಟ್ಟಿದ್ದೀರಾ?’’

‘‘ಅಲ್ಲರೀ, ಇದು ಒಂದು ರೂಪಾಯಿ ನಾಣ್ಯ ಕಣ್ರೀ...’’ ಕಾಸಿ ಜೋರಾಗಿ ಹೇಳಿದ.

‘‘ನೋಡ್ರೀ...ಕ್ಯಾಶ್ ಮೂಲಕ ನಾವು ಏನನ್ನೂ ತೆಗೆದುಕೊಳ್ಳುವ ಹಾಗಿಲ್ಲ....ಈ ನಾಣ್ಯಕ್ಕೆ ನೀವು ಐಟಿ ದಾಖಲೆ ಮಾಡಿಸಿದ್ದರೆ ಅದರ ದಾಖಲೆಗಳನ್ನು ಕೊಡಿ. ಪಾನ್ ಕಾರ್ಡ್ ಇದೆಯಾ? ಅದರದ್ದೂ ಒಂದು ಝೆರಾಕ್ಸ್ ಕಾಪಿ ಕೊಡಿ. ಇಲ್ಲೆಲ್ಲ ಪೇಟಿಎಂ ಮೂಲಕ ವ್ಯವಹಾರ ಮಾಡುತ್ತೇವೆ...’’

ಕಾಸಿಗೆ ಸಿಟ್ಟು ಬಂತು ‘‘ಹಾಗಾದರೆ ನಾನು ಮೂತ್ರ ವಿಸರ್ಜನೆಯನ್ನು ಪೇಟಿಎಂ ಮೂಲಕವೇ ಮಾಡುವುದಾ? ಅಥವಾ ನೇರವಾಗಿ ಟಾಯ್ಲೆಟ್‌ನಲ್ಲೇ ಮಾಡುವುದಾ?’’

ಕಾವಲುಗಾರ ಜೋರಾಗಿ ಹೇಳಿದ ‘‘ನೋಡ್ರಿ...ನೀವು ಅಧಿಕಪ್ರಸಂಗ ಮಾತನಾಡಿದರೆ ಐಟಿ ಡಿಪಾರ್ಟ್‌ಮೆಂಟ್‌ನವರಿಗೆ ಫೋನ್ ಮಾಡಬೇಕಾಗುತ್ತದೆ. ನೀವು ಮೂತ್ರ ಮಾಡುವುದಿದ್ದರೆ ಅದಕ್ಕೂ ನಾವು ಎಷ್ಟು ಮಿ.ಲಿ. ಮೂತ್ರ ಮಾಡಿದ್ದಾರೆಂದು ಲೆಕ್ಕ ಕೊಡಬೇಕಾಗುತ್ತದೆ. ಯಾಕೆಂದರೆ ಇಷ್ಟು ವಿಸರ್ಜನೆಗೆ ಇಷ್ಟು ಎಂದು ನಮ್ಮ ಮೇಲೂ ತೆರಿಗೆ ಹಾಕಿದ್ದಾರೆ. ಆದುದರಿಂದ ಮಿತಿಗಿಂತ ಜಾಸ್ತಿ ನೀವು ವಿಸರ್ಜನೆ ಮಾಡಿದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ....ದಂಡ ವಿಧಿಸಬೇಕಾಗುತ್ತದೆ...’’

ಕಾವಲುಗಾರನ ಮಾತು ಕೇಳಿದ್ದೇ....ಕಾಸಿ ತಡವರಿಸುತ್ತಾ ಹೇಳಿದ ‘‘ಇನ್ನು ನಾನು ಮೂತ್ರ ಮಾಡುವ ಅಗತ್ಯನೇ ಇಲ್ಲಾರೀ...’’

‘‘ಯಾಕ್ರೀ...’’ ಅನುಮಾನದಿಂದ ಕಾವಲುಗಾರ ಕೇಳಿದ.

ನೋಡಿದರೆ ಕಾಸಿಯ ಪ್ಯಾಂಟು ಸಂಪೂರ್ಣ ಒದ್ದೆಯಾಗಿತ್ತು. ಅಷ್ಟ ರಲ್ಲಿ ಪೊಲೀಸರು ಓಡೋಡಿ ಬಂದು ‘ಸಾರ್ವಜನಿಕ ಸ್ಥಳದಲ್ಲಿ ಮಾಲಿನ್ಯ ಮಾಡಿದ ಆರೋಪ’ದಲ್ಲಿ ಕಾಸಿಯನ್ನು ಬಂಧಿಸಿ ಪೊಲೀಸ್ ಜೀಪಿಗೆ ತಳ್ಳಿದರು. ಬಳಿಕ ಅದಕ್ಕಾಗಿ ವಿವಿಧ ಬಗೆಯ ದಂಡವನ್ನು ಬ್ಯಾಂಕ್‌ನ ಅಕೌಂಟ್ ಮೂಲಕ ಕತ್ತರಿಸಲಾಯಿತು.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News