ಮಾರುಕಟ್ಟೆಯಲ್ಲಿ ಬೀಫ್ ಪ್ರದರ್ಶಿಸಿದ್ದ ಮೂವರು ಕಟ್ಟಡ ಕಾರ್ಮಿಕರ ಬಂಧನ

Update: 2017-04-06 13:23 GMT

ಜೋರ್ಹಾತ್(ಅಸ್ಸಾಂ),ಎ.6: ಮಾರುಕಟ್ಟೆಯಲ್ಲಿ ಗೋಮಾಂಸವನ್ನು ಪ್ರದರ್ಶಿಸಿ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದಲ್ಲಿ ಓರ್ವ ಅಪ್ರಾಪ್ತ ವಯಸ್ಕ ಬಾಲಕ ಸೇರಿದಂತೆ ಮೂವರು ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.

ಅಕ್ರಮ ಬಾಂಗ್ಲಾದೇಶಿ ವಲಸಿಗರೆಂದು ಶಂಕಿಸಲಾಗಿರುವ ಈ ಮೂವರೂ ಜೋರ್ಹಾತ್‌ನ ಹೊರವಲಯದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿದ್ದಾರೆ. ಮಂಗಳವಾರ ಎಲ್ಲಿಂದಲೋ ಗೋಮಾಂಸವನ್ನು ಖರೀದಿಸಿದ್ದ ಅವರು ಬಳಿಕ ತರಕಾರಿ ಮಾರುಕಟ್ಟೆಗೆ ತೆರಳಿದ್ದರು. ಅಲ್ಲಿ ಯಾರೊಂದಿಗೋ ಮಾತನಾಡುತ್ತ ತಮ್ಮ ಖರೀದಿಯ ಬಗ್ಗೆ ತಿಳಿಸಿ ಚೀಲದಿಂದ ಗೋಮಾಂಸವನ್ನು ಹೊರತೆಗೆದು ಪ್ರದರ್ಶಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಲವರು ಪೊಲೀಸ್ ದೂರು ದಾಖಲಿಸಿದ್ದರು. ಬಂಧಿತರಲಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದು, ಶಾ ಝಮಾನ್ ಹಕ್ ಮತ್ತು ಆಶುರ್ ರಹ್ಮಾನ್ ಎಂಬವರಿಗೆ ನ್ಯಾಯಾಲಯವು ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಅಸ್ಸಾಂ ಜಾನುವಾರು ಸಂರಕ್ಷಣೆ ಕಾಯ್ದೆ,1950ರಡಿ ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ.

 ಈ ಬಂಧನಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯ ಗೋ ಸಂಬಂಧಿ ಘಟನೆಗಳ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News