ಮೊದಲು ಕಳಶ, ಬಳಿಕ ಅಡಿಪಾಯ

Update: 2017-04-06 18:53 GMT

ಈ ದೇಶದಲ್ಲಿ ಕಮ್ಯುನಿಸ್ಟರ ಕಾರ್ಮಿಕ ಚಳವಳಿಯ ಓನಾಮ ಹಾಕಲು ನಡೆದ ಮುಂಬೈ ಗಿರಣಿ ಕಾರ್ಮಿಕರ ಕಳೆದ ಬಾರಿಯ ದೊಡ್ಡ ಮುಷ್ಕರದ ಪರಿಣಾಮವಾಗಿ, ಕಾರ್ಮಿಕರಲ್ಲಿ ತಮ್ಮ ಚಳವಳಿಯ ಸೂತ್ರವನ್ನು ಕಮ್ಯುನಿಸ್ಟ್ ಧೋರಣೆಯ ನಾಯಕರ ಕೈಗೆ ಒಪ್ಪಿಸಬೇಕೇ ಬೇಡವೇ ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿ ಎದ್ದು ನಿಂತಿದೆ. ಸರಕಾರವು ನ್ಯಾಯಮೂರ್ತಿ ಪಿಯರ್ಸನ್ ಅವರ ನಾಯಕತ್ವದಲ್ಲಿ ನೇಮಿಸಲಾದ ನ್ಯಾಯಾ ಪೀಠವು ಗಿರಣಿ ಕಾರ್ಮಿಕರ ಯೂನಿಯನ್ ವಿರುದ್ಧ ತೀರ್ಪಿತ್ತಿದೆ. ಪ್ರಸಕ್ತ ಯೂನಿಯನ್, ತನ್ನ ಕಡೆಗೆ ಸಾಕ್ಷಿಗಳನ್ನು ಒದಗಿಸಿಕೊಳ್ಳಲು ವಿಫಲವಾಯಿತೆಂದು ಕೋರ್ಟ್ ಸಾರಿದ್ದರಿಂದ, ಈ ಯೂನಿಯನ್‌ನ ನಾಯಕರು, ವಾಡಿಯಾ ಮ್ತತು ಸಸೂನ್‌ನ ಕಾರ್ಮಿಕರು ಮತ್ತು ಜಾಬರ್ಸ್ ವತಿಯಿಂದ ಮಾಡಲಾದ ಕರಾರಿಗೆ ಬದ್ಧವಾಗಿಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಕಳೆದ ಬಾರಿ ಸದರಿ ಯೂನಿಯನ್ ಎಲ್ಲ ಗಿರಣಿಗಳಲ್ಲಿ ಮುಷ್ಕರ ನಡೆಸಿ ಗಿರಣಿ ಮುಚ್ಚಲು ನಿರ್ಧರಿಸಿದಾಗ ಆ ಮೊದಲಲ್ಲಿ ಧುರೀಣರ ಮಾತಿಗೆ ಬೆಲೆಯಿತ್ತು ಮತ್ತು ಯೂನಿಯನ್‌ನ ಕಮಿಟಿಯ ಸಭಾಸದರು ಮತ್ತು ಸ್ವಯಂಸೇವಕರ ಪ್ರಾಭಾವದಿಂದ ಜನರು ಗಿರಣಿಗಳಿಂದ ಹೊರಬಿದ್ದರು. ಆದರೆ ಈ ಬಾರಿ ಜನರಲ್ಲಿ ಮುಷ್ಕರದ ಉತ್ಸಾಹ ಇರಲಿಲ್ಲ, ಕುಟುಂಬ ಪೋಷಣೆಯ ಜವಾಬ್ದಾರಿ ತಮ್ಮ ಮೇಲಿದೆಯೆಂದು, ಮುಷ್ಕರ ಅವರಿಗೆ ಬೇಕಿರಲಿಲ್ಲ. ಕಳೆದ ಬಾರಿ ನಡೆದ ಆರು ತಿಂಗಳ ಮುಷ್ಕರದಲ್ಲಿ ಹೊಟ್ಟೆಯ ಪ್ರಶ್ನೆ ಇರಲಿಲ್ಲ; ಕಾರ್ಮಿಕರ ಮಧ್ಯೆ ಮತಭೇದವೂ ಇರಲಿಲ್ಲ. ಈ ಬಾರಿ ಹೀಗೆ ದೀರ್ಘಕಾಲ ಮುಷ್ಕರ ನಡೆಸುವುದು ಅಸಾಧ್ಯವೆಂದೇ ನಾವಿದನ್ನು ವಿರೋಧಿಸಿದ್ದೇವೆ. ಕಾರ್ಮಿಕ ಚಳವಳಿ ನಮಗೆ ಅವಶ್ಯ ಬೇಕು. ಕಾರ್ಮಿಕರ ಹಿತಸಂಬಂಧದ ಸಂರಕ್ಷಣೆಗಾಗಿ ಕಾರ್ಮಿಕ ಸಂಘವೂ ಅವಶ್ಯ ಬೇಕು ಎಂದೇ ನಮ್ಮ ಅಭಿಮತ.

ಆದರೆ ಕಾರ್ಮಿಕ ಚಳವಳಿಯು ನಿಷ್ಕಾರಣವಾಗಿ ಉಪವಾಸ ಮತ್ತು ಸಾಲಸೋಲಗಳ ಮಧ್ಯೆ ಪರ್ಯಾವಸಾನವಾಗುವುದು ನಮಗೆ ಇಷ್ಟವಿಲ್ಲ. ಗಿರಣಿ ಕಾರ್ಮಿಕರಲ್ಲಿ ಅಸ್ಪಶ್ಯರು ಸಾವಿರಾರು ಮಂದಿಯಿದ್ದು, ಅವರ ಸ್ಥಿತಿ ಇತರ ಕಾರ್ಮಿಕರಿಗಿಂತ ಭಿನ್ನವಾಗಿದೆ. ಮೊದಲಿಗೆ ಅವರಿಗೆ ಎಲ್ಲರಿಗಿಂತ ಕಡಿಮೆ ವೇತನದ ಕೆಲಸವೇ ಸಿಗುತ್ತದೆ ಮತ್ತು ಇವರಲ್ಲಿ ಬಹಳಷ್ಟು ಮಂದಿಗೆ ಊರಿನಲ್ಲಿ ಹೊಲಗದ್ದೆಯ ಆಧಾರವೂ ಇಲ್ಲ. ಬಹಳಷ್ಟು ಜನ ಕೈಯಿಂದ ಬಾಯಿಗೆ ಎಂಬಂತಿರುವುದರಿಂದ ಮತ್ತು ಕಳೆದ ಬಾರಿಯ ದೊಡ್ಡ ಮುಷ್ಕರ ಮತ್ತು ಈ ಬಾರಿ ಅಲ್ಲಿ ಇಲ್ಲಿ ಎಂಬಂತೆ ನಡೆದ ಸಣ್ಣಪುಟ್ಟ ಮುಷ್ಕರಗಳು ಅವರ ಸಾಲದ ಬೇಡಿಯನ್ನು ಬಿಗಿದುದರಿಂದ ಈಗಿನ್ನು ಮುಷ್ಕರಕ್ಕೆ ಅವರಲ್ಲಿ ತ್ರಾಣವೇ ಇರಲಿಲ್ಲ. ಆದರೆ ಈ ವಿಷಯದ ಬಗ್ಗೆ ಯೋಚಿಸದೆ ಗಿರಣಿ ಕಾರ್ಮಿಕ ಯೂನಿಯನ್‌ನ ಧುರೀಣರು ದೊಡ್ಡ ಮುಷ್ಕರದ ಕರೆಯನ್ನೇ ಇತ್ತರು. ಅದರಿಂದ ಆಗಬೇಕಾದ ಪರಿಣಾಮವೇ ಆಯ್ತು.

ಮುಷ್ಕರವು ಕಾರ್ಮಿಕರ ದೊಡ್ಡ ಅಸ್ತ್ರ. ಆದರೆ ಅದರ ಉಪಯೋಗವನ್ನು ಜಾಗರೂಕತೆಯಿಂದಲೇ ಮಾಡಬೇಕಾಗುತ್ತದೆ. ಶುದ್ಧ ಕಾರ್ಮಿಕ ಸಂಘದ ಚಳವಳಿಯಲ್ಲೇ ಮುಷ್ಕರ ನಡೆಯಬೇಕಾಗುತ್ತದೆ ಹಾಗೂ ಆ ಮುಷ್ಕರದ ಉದ್ದೇಶ ಕಾರ್ಮಿಕರ ದುಃಖವನ್ನು ದೂರ ಮಾಡುವುದೇ ಆಗಿರುತ್ತದೆ. ಕ್ರಾಂತಿವಾದಿ ಚಳವಳಿಯಲ್ಲಿ ಕಾರ್ಮಿಕರ ದುಃಖವನ್ನು ದೂರ ಮಾಡುವುದಷ್ಟೇ ಅಲ್ಲ, ಕ್ರಾಂತಿಯ ತಯಾರಿಯ ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಕಾರ್ಮಿಕ ಚಳವಳಿಯಲ್ಲಿ ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಿಸುವತ್ತ ಲಕ್ಷ ಕೊಡಲಾಗುತ್ತದೆ, ಆದರೆ ಕ್ರಾಂತಿವಾದಿ ಚಳವಳಿಯಲ್ಲಿ ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಿಸುವುದು ಕೇವಲ ತೋರಿಕೆಗಾಗಿಯಷ್ಟೇ ಇರುತ್ತದೆ.

ಇದರ ಒಳಗಣ ಹೇತು, ಕಾರ್ಮಿಕರ ಮಧ್ಯೆ ಅಸಂತೋಷ ಹೆಚ್ಚಿಸಿ, ಕ್ರಾಂತಿವಾದಕ್ಕೆ ಅವರ ಮನವನ್ನು ಅನುಗೊಳಿಸಿಕೊಳ್ಳುವುದೇ ಆಗಿರುತ್ತದೆ. ಅರ್ಥಾತ್, ಕಾರ್ಮಿಕರು ಉಪವಾಸ ಬಿದ್ದಷ್ಟೂ, ಅವರು ಪಾಡು ಪಟ್ಟಷ್ಟೂ, ಅವರ ಮೇಲಿನ ದೌರ್ಜನ್ಯ ಹೆಚ್ಚಿದಷ್ಟೂ ಕ್ರಾಂತಿವಾದಕ್ಕೆ ಒಳ್ಳೆಯದೇ. ಕಾರಣ, ಬೇಸತ್ತು ಹೋದುದಲ್ಲದೆ ಕ್ರಾಂತಿಗಾಗಿ ಯಾರೂ ಮುಂದಾಗುವುದಿಲ್ಲ. ಅಲ್ಪಕಾಲದಲ್ಲೇ ಕ್ರಾಂತಿಯಾಗಿ ನಮ್ಮ ಸಮಾಜ ವ್ಯವಸ್ಥೆ ಪೂರ್ಣ ಬದಲಾಗುವುದು ಮತ್ತು ಕಾರ್ಮಿಕರ ರಾಜ್ಯ ಅಸ್ತಿತ್ವಕ್ಕೆ ಬರುವುದೆಂದು ಕ್ರಾಂತಿವಾದಿಗಳಿಗೆ ಭರವಸೆ ಇರುವುದರಿಂದ ಕಾರ್ಮಿಕರ ಈಗಿನ ಸ್ಥಿತಿಯ ಬಗ್ಗೆ ಅವರಿಗೆ ಪರಿವೆಯಿಲ್ಲ. ಇಂತಹ ಝಟ್‌ಪಟ್ ಕ್ರಾಂತಿ ಇಷ್ಟ ಹಾಗೂ ಸಾಧ್ಯ ಎಂದು ನಿರ್ಧರಿಸಿದರೆ, ಕ್ರಾಂತಿವಾದಿ ನಾಯಕರ ಧೋರಣೆ ಸರಿಯೆಂದೇ ಹೇಳಬೇಕು. ಆದರೆ ಅಂತಹ ಝಟ್‌ಪಟ್ ಕ್ರಾಂತಿ ಶಕ್ಯವಲ್ಲ, ಇಷ್ಟವೂ ಅಲ್ಲ ಎಂದೇ ನಮ್ಮ ಪ್ರಾಮಾಣಿಕ ಅಭಿಪ್ರಾಯ.

ಇಂದಿನ ಸಮಾಜ ವ್ಯವಸ್ಥೆ ಸಮಾಧಾನಕರವಾಗಿಲ್ಲ, ಸಮಾಜದಲ್ಲಿ ಸಂಪತ್ತಿನ ಹಂಚಿಕೆ ಅತ್ಯಂತ ವಿಷಮತರದ್ದಾಗಿದೆ. ಮತ್ತು ಬೊಗಸೆಯಷ್ಟು ಜನರ ಕೈಯಲ್ಲಿ ಕೋಟ್ಯಂತರ ಜನರ ಜೀವವಿದೆಯೆಂಬುದು ನಿರ್ವಿವಾದ. ಮತಭೇದವಿದ್ದರೆ ಸಮಾಜ ವ್ಯವಸ್ಥೆಯಲ್ಲಿ ಆ ರೋಗ ನಿರ್ಮೂಲನಕ್ಕೆ ಸರಿಯಾದ ಚಿಕಿತ್ಸೆ ಆಗಬೇಕು, ನಿಜ, ಆದರೆ ಹಾಗೆಂದು ರೋಗಿಗೆ ಅಪಾಯವಾದರೂ ಸರಿ, ಎಂದಲ್ಲ. ಹಿಂದುಸ್ಥಾನದ ಸದ್ಯದ ಸ್ಥಿತಿಯಲ್ಲಿ ಕಮ್ಯುನಿಸಮ್ ಎಷ್ಟು ಹಿತಕರ, ಅವಸರದಲ್ಲಿ ರಾಜ್ಯಕ್ರಾಂತಿ ತರುವುದು ಎಷ್ಟರ ಮಟ್ಟಿಗೆ ಸಾಧ್ಯ, ಎಂಬುದನ್ನೆಲ್ಲಾ ನಾವು ಸ್ವಲ್ಪ ಬದಿಗಿಟ್ಟು ದೇಶದ ಕಾರ್ಮಿಕರ ಮನೋಭೂಮಿಕೆ ಎಷ್ಟರಮಟ್ಟಿಗೆ ಸಿದ್ಧವಾಗಿದೆ ಎಂಬ ಬಗ್ಗೆ ಮೊದಲು ವಿಚಾರ ಮಾಡಬೇಕು. ಮೊದಲಿಗೆ ನಮಗೆ ಕಂಡುಬಂದ ವಿಚಾರವೆಂದರೆ ನಾಯಕರು ಕಮ್ಯುನಿಸ್ಟ್‌ರೇ ಆಗಿದ್ದರೂ, ಅನುಯಾಯಿಗಳು ಕಮ್ಯುನಿಸ್ಟರಲ್ಲ. ಕಮ್ಯುನಿಸ್ಟರನ್ನು ಯಾವ ಕಾರ್ಮಿಕರು ತಮ್ಮ ನಾಯಕರೆಂದು ಗಣಿಸುತ್ತಾರೋ, ಆ ಕಮ್ಯುನಿಸ್ಟರ ಎಲ್ಲ ವಿಚಾರಗಳ ಅರಿವು ಅವರಿಗಿಲ್ಲವೆಂದನ್ನು ಮರೆಯಬಾರದು. ಕಮ್ಯುನಿಸಮ್‌ನಲ್ಲಿ ದೇವರು, ಧರ್ಮ ಮತ್ತು ರಾಷ್ಟ್ರವನ್ನು ಗಡೀಪಾರು ಮಾಡಲಾಗಿದೆ.

ದೇವರು, ಧರ್ಮ ಮತ್ತು ರಾಷ್ಟ್ರ ಎಂಬ ಸಂಬಂಧದ ಕಲ್ಪನೆ, ಸ್ವಾರ್ಥಿ ಜನರು, ತಮ್ಮ ಶ್ರೇಷ್ಟತ್ವವನ್ನು ಶಾಶ್ವತವಾಗಿರಿಸುವ ಉದ್ದೇಶದಿಂದ ಬಹುಜನ ಸಮಾಜದಲ್ಲಿ ಪಸರಿಸಿದ್ದಾಗಿದೆ. ಈ ಕಲ್ಪನೆಯ ಲಾಭ, ಬಂಡಾಳಶಾಹಿ, ಜಮೀನ್ದಾರ್‌ಶಾಹಿ ಮತ್ತು ಸಮ್ರಾಜ್ಯಶಾಹಿಗೆ ಸಿಗುವಂತಹುದು ಮತ್ತು ಆ ಕಲ್ಪನೆಯ ನಿರ್ಮೂಲನವಾಗದ ಹೊರತು, ಜಗತ್ತಿನಲ್ಲಿ ಶಾಶ್ವತ ಶಾಂತಿ ನೆನಪಿಸುವಂತಿಲ್ಲ ಮತ್ತು ಬಹುಜನ ಸಮಾಜ ಸುಖಿಯಾಗಿರುವಂತಿಲ್ಲ, ಎಂಬುದು ಕಮ್ಯುನಿಸ್ಟರ ಸಿದ್ಧಾಂತ. ಆದರೆ ಅದರ ಕಲ್ಪನೆ ಎಷ್ಟು ಮಂದಿ ಕಾರ್ಮಿಕರಿಗೆ ಇದೆ? ದೇವರು ಹಾಗೂ ಧರ್ಮದ ಸಂಬಂಧ ಕಮ್ಯುನಿಸ್ಟರ ವಿಚಾರ ಸ್ಪಷ್ಟವಾಗಿ ಪ್ರತಿಪಾದಿಸಲ್ಪಟ್ಟಿದ್ದರೂ, ಕಮ್ಯುನಿಸ್ಟರಿಗೆ ಸದ್ಯದ ಸ್ಥಿತಿಯಲ್ಲಿ ಒಬ್ಬನಾದರೂ ಅನುಯಾಯಿ ಸಿಗುವಂತಿಲ್ಲ. ಲೆನಿನ್‌ನ ಪುತ್ಥಳಿ ಹಾಗೂ ಚಿತ್ರವನ್ನು ಗೌರವಿಸುವ ಕಮ್ಯುನಿಸ್ಸ್ಟ್ ಧುರೀಣರು, ಶಿವಾಜಿ ಮಹಾರಾಜರ ಚಿತ್ರವನ್ನು ಯೂನಿಯನ್ ಕಾರ್ಯಾಲಯದಲ್ಲಿ ಇಡುವುದನ್ನು ವಿರೋಧಿಸಿದಾಗ, ಅವರ ಪ್ರತಿಯೊಬ್ಬ ಮರಾಠಾ ಅನುಯಾಯಿ ಅವರ ಮೇಲೆ ಮುಗಿಬಿದ್ದರು. ಜಾತಿಭೇದ ಹಾಗೂ ಸ್ಪಶ್ಯಾಸ್ಪಶ್ಯತೆ ಕಾರ್ಮಿಕರಲ್ಲಿ ಕಡಿಮೆಯಿಲ್ಲ.

ಆದರೂ, ಗಿರಣಿಯ ನೀರಿನ ನಲ್ಲಿಯ ಬಳಿಗೆ ಅಸ್ಪಶ್ಯರನ್ನು ಬಿಡದಿರುವಲ್ಲಿ ಕೆಂಪು ಬಾವುಟದ ಕಾರ್ಮಿಕರ ಪಾತ್ರವೂ ಇದೆ. ಜಾತಿಭೇದ ಹಾಗೂ ಅಸ್ಪಶ್ಯತೆ ಕಮ್ಯುನಿಸಮ್‌ನ ಮೂಲತತ್ವಕ್ಕೆ ಪೂರ್ತಿ ಭಿನ್ನವಾಗಿದೆ. ಲೆನಿನ್ ಎಲ್ಲಾದರೂ ಹಿಂದುಸ್ಥಾನದಲ್ಲಿ ಜನಿಸಿದ್ದರೆ, ಮೊದಲಿಗೆ ಜಾತಿಭೇದ ಹಾಗೂ ಅಸ್ಪಶ್ಯತೆಯನ್ನು ಸಂಪೂರ್ಣ ಕಿತ್ತು ಹಾಕುತ್ತಿದ್ದರು ಮತ್ತು ಹಾಗೆ ಮಾಡಿದ್ದಲ್ಲದೆ, ಕ್ರಾಂತಿಯ ಕಲ್ಪನೆಯನ್ನು ಮನಸ್ಸಿಗೂ ತರುತ್ತಿರಲಿಲ್ಲ. ವಾದಕ್ಕಾಗಿ ನಾವು ಒಂದು ಕ್ಷಣ, ಈ ದೇಶದಲ್ಲಿ ಕ್ರಾಂತಿ ತರುವಲ್ಲಿ ಕಮ್ಯುನಿಸ್ಟರು ಯಶಸ್ವಿಯಾದರೆಂದುಕೊಳ್ಳೋಣ. ಆದರೆ, ಆ ಕ್ರಾಂತಿ ಬಹುಜನ ಸಮಾಜಕ್ಕೆ ಸುಖ ತಂದೀತೇ? ಕಮ್ಯುನಿಸ್ಟರ ಧ್ಯೇಯದ ಸಮಾಜ ವ್ಯವಸ್ಥೆ ರೂಢಿಯಲ್ಲಿ ಬರುವುದು ಸಾಧ್ಯವೇ? ಎಂದಾದರೂ ಸಮಾಜದಲ್ಲಿ ವಿಶೇಷ ಗೊಂದಲವೆದ್ದು, ಅಂತಃಕಲಹ ಹೆಚ್ಚಿದರೆ, ಸದ್ಯದ ದುರ್ಬಲ ವರ್ಗವು ಜಾತಿ ದುರಭಿಮಾನಿ ಪ್ರಬಲ ವರ್ಗದ ದೌರ್ಜನ್ಯಕ್ಕೆ ಬಲಿಯಾಗುವುದು.

ರಶ್ಯಾದಂತೆ ಹಿಂದುಸ್ಥಾನದಲ್ಲೂ ಸೋವಿಯೆತ್ ರಾಜ್ಯ ವ್ಯವಸ್ಥೆ ಆರಂಭವಾದರೆ, ಜಾತಿಭೇದವು ತನ್ನಷ್ಟಕ್ಕೇ ದೂರವಾಗುವುದು; ಯಕ್ಷಿಣಿಯ ಮಂತ್ರದಂಡದಂತೆ ಪರಿಣಾಮವಾಗಿ ವಿಷಮತೆ ತನ್ನಷ್ಟಕ್ಕೇ ಅದೃಶ್ಯವಾಗುವುದು ಎಂದು ಹಿಂದೀ ಕಮ್ಯುನಿಸ್ಟರು ತಿಳಿದ್ದಿದ್ದಾರೆಯೇ? ದೇಶದ ಎಲ್ಲ ಬಂಡವಾಳ ಮತ್ತು ಎಲ್ಲ ಜಮೀನು ಸಮಾಜದ ಮಾಲಕತ್ವಕ್ಕೆ ಸೇರಿದ್ದೆಂಬ ಕಮ್ಯುನಿಸ್ಟರ ತತ್ವ, ಈ ದೇಶದ ರೈತರಿಗೆ ಸುಲಭದಲ್ಲಿ ಅರಗಿಸಿ ಕೊಳ್ಳುವಂತಹದೆಂದು ಕಮ್ಯುನಿಸ್ಟರು ತಿಳಿದಿರುವರೇ? ರಶ್ಯನ್ ರೈತರ ಕೊರಳಲ್ಲೂ ಈ ತತ್ವ ಇಳಿಯುವುದಿಲ್ಲವಾಗಿ, ಸೋವಿಯೆತ್ ಸರಕಾರ, ತತ್ವವನ್ನು ಬಿಟ್ಟು ಕೊಟ್ಟು ಒಪ್ಪಂದದ ಧೋರಣೆ ಅನುಸರಿಸಿದ್ದು ಪ್ರಸಿದ್ಧವೇ ಇದೆ.

ಸ್ವಲ್ಪದರಲ್ಲಿ ಹೇಳಬೇಕೆಂದರೆ ದೇಶದ ಕಾರ್ಮಿಕರಿಗೆ ಮತ್ತು ರೈತರಿಗೆ ಕಮ್ಯುನಿಸ್ಟರ ತತ್ವ ಇಂದೂ ರುಚಿಸುವುದಾಗಲೀ, ಪಚನವಾಗುವುದಾಗಲೀ ಶಕ್ಯವಿಲ್ಲ. ಕಮ್ಯುನಿಸ್ಟರ ಆದರ್ಶ ಸಮಾಜವನ್ನು ಅಸ್ತಿತ್ವಕ್ಕೆ ತರಲು, ಬಹುಜನ ಸಮಾಜದ ಯಾವ ಮನೋಭೂಮಿಕೆ ತಯಾರಾಗಬೇಕೋ ಅದು ಒಂದಿಷ್ಟೂ ಸಿದ್ಧವಾಗಿಲ್ಲ. ಹಾಗೆಂದೇ ಈ ದೇಶದಲ್ಲಿನ ಕಮ್ಯುನಿಸ್ಟರ ಪ್ರಸಕ್ತ ಚಳವಳಿ, ‘‘ಮೊದಲು ಕಳಶ, ಬಳಿಕ ಅಡಿಪಾಯ’’ ಎಂಬಂಥ ವಿಪರೀತ ಕ್ರಮದ್ದಾಗಿದೆ, ಎಂದೇ ನಾನು ಹೇಳುವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News