ಕಾಟ್ರು ವೆಲಿಯಿಡೈ: ಮಣಿರತ್ನಂ ಸ್ಪರ್ಶವಿಲ್ಲದ ಪ್ರೇಮಕತೆ

Update: 2017-04-09 04:43 GMT

ಪ್ರೇಮವೆನ್ನುವುದು ಅದೆಷ್ಟು ಬಾರಿ ಹಾಡಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ರಮ್ಯ ಕಾವ್ಯ. ಪ್ರೇಮವನ್ನು ಕೇಂದ್ರೀಕರಿಸಿ ಅದೆಷ್ಟು ಕತೆಗಳು, ಸಿನೆಮಾಗಳು ಬಂದರೂ ಮತ್ತೆ ಮತ್ತೆ ಅದೇ ಪ್ರೇಮವನ್ನೇ ನಾವು ಆಲಿಸುತ್ತೇವೆ. ಬೆಳ್ಳಿಪರದೆಯ ಮೇಲೆ ಮಣಿರತ್ನಂ ಪ್ರೇಮವನ್ನು ಬಗೆ ಬಗೆಯಾಗಿ ಕಟ್ಟಿ ಕೊಟ್ಟವರು. ಮಣಿರತ್ನಂ ಪ್ರೇಮಕ್ಕಾಗಿ ಬರೇ ‘ಕಥಾವಸ್ತು’ವನ್ನು ನಂಬಿಕೂರುವವರಲ್ಲ. ಕ್ಯಾಮರಾ, ಸಂಗೀತ, ಹಾಡು, ನೆರಳು, ಬೆಳಕು, ಪ್ರಕೃತಿ ಎಲ್ಲವನ್ನೂ ಸಮರ್ಥವಾಗಿ ಬಳಸಿಕೊಂಡು ಮನುಷ್ಯನೊಳಗಿನ ಪ್ರೀತಿಯ ಒಳಸುಳಿಯನ್ನು ಕಾವ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತಾರೆ. ಪಲ್ಲವಿ ಅನುಪಲ್ಲವಿ, ವೌನರಾಗಂ, ಗೀತಾಂಜಲಿ, ರೋಜಾ, ಬಾಂಬೆ, ದಿಲ್‌ಸೆ, ಅಲೈಪಾಯುದೇ, ಕನ್ನತ್ತಿಲ್ ಮುತ್ತಮಿಟ್ಟಾಳ್, ಕಡಲ್, ರಾವಣನ್, ಓ ಕಾದಲ್ ಕಣ್ಮಣಿ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಪ್ರೇಮವನ್ನು ನಿರೂಪಿಸುತ್ತಲೇ ಬಂದಿದ್ದಾರಾದರೂ, ಪ್ರೇಮವನ್ನು ಹೇಳುವ ಅವರ ದಾಹ ಮಾತ್ರ ಮುಗಿದಂತಿಲ್ಲ. ಇದೀಗ ಅವರು ಮತ್ತೆ ಪ್ರೇಮವಸ್ತುವನ್ನೇ ಇಟ್ಟುಕೊಂಡು ‘ಕಾಟ್ರು ವೆಲಿಯಿಡೈ’ ಚಿತ್ರವನ್ನು ಮಾಡಿದ್ದಾರೆ.

 ಪ್ರೇಮವನ್ನು ಹೊಸದಾಗಿ, ಹೊಸ ಬಗೆಯಲ್ಲಿ ಕಟ್ಟಿಕೊಟ್ಟರೆ ಪ್ರೇಕ್ಷಕ ಅದನ್ನು ಯಾವತ್ತೂ ನಿರಾಕರಿಸುವುದಿಲ್ಲ. ಆದರೆ ಹಿಂದಿನ ಚಿತ್ರಗಳ ಹ್ಯಾಂಗೋವರ್‌ನಿಂದ ಹೊರಬರದೆ ಒಂದೇ ಧಾಟಿಯಲ್ಲಿ ಮತ್ತೆ ಮತ್ತೆ ಅದೇ ಪ್ರೇಮಗೀತೆಯನ್ನು ಹಾಡಿದರೆ ಅದು ಸವಕಲಾಗುತ್ತದೆ. ಮಣಿರತ್ನಂ ಇಂತಹದೊಂದು ಸಮಸ್ಯೆಗೆ ಈಗ ಸಿಕ್ಕಿ ಹಾಕಿಕೊಂಡಿದ್ದಾರೆ. ‘ಗೀತಾಂಜಲಿ’ ಮತ್ತು ‘ರೋಜಾ’ ಮಣಿರತ್ನಂನ ಶ್ರೇಷ್ಠ ಪ್ರೇಮಚಿತ್ರಗಳು. ಆದರೆ ಮತ್ತೆ ದಿಲ್‌ಸೆಯನ್ನು ಮಾಡಿದಾಗ, ಎಲ್ಲರೂ ರೋಜಾ ಚಿತ್ರವನ್ನು ಮನದಲ್ಲಿಟ್ಟುಕೊಂಡೇ ಅದನ್ನು ವೀಕ್ಷಿಸಬೇಕಾಯಿತು. ಆದರೂ ಹಾಡು, ದೃಶ್ಯ ನಿರೂಪಣೆಯಿಂದಾಗಿ ಚಿತ್ರ ಗೆದ್ದಿತು. ಆದರೆ ಕಡಲ್, ರಾವಣನ್‌ನಲ್ಲಿ ಮತ್ತೆ ಮಣಿರತ್ನಂ ಸರಕುಗಳು ಸವಕಲಾಗತೊಡಗಿದವು. ಇವೆಲ್ಲವನ್ನೂ ‘ಓ ಕಾದಲ್ ಕಣ್ಮಣಿ’ ಚಿತ್ರದಲ್ಲಿ ಮೀರಲು ಯತ್ನಿಸಿದರಾದರೂ, ‘ಕಡಲ್’ ಚಿತ್ರದಲ್ಲಿ ಮತ್ತೆ ಅವರ ದೋಣಿ ಮುಳುಗಿತು.

ಇದೀಗ ಅವರು ಮಾಡಿರುವ ‘ಕಾಟ್ರು ವೆಲಿಯಿಡೈ’ ಎಡವುದಕ್ಕಾಗಿಯೇ ಮಾಡಿದ ಇನ್ನೊಂದು ಚಿತ್ರವೆಂದು ಧಾರಾಳವಾಗಿ ಕರೆಯಬಹುದು. ಪ್ರೇಮಕ್ಕೆ ಯುದ್ಧಭೂಮಿಯನ್ನೇ ಸದಾ ವೇದಿಕೆಯನ್ನಾಗಿಸಿಕೊಂಡು ಬಂದವರು ಮಣಿರತ್ನಂ. ಮುಂಬೈಯ ಗಲಭೆಯ ನಡುವೆ ಚಿಗುರುವ ಪ್ರೇಮ, ಈಶಾನ್ಯಭಾರತ ಆತ್ಮಹತ್ಯಾ ಬಾಂಬರ್‌ಗಳ ನಡುವೆ ಮಿಡಿಯುವ ಹೃದಯ, ಕಾಶ್ಮೀರದ ಉಗ್ರರ ಅಟ್ಟಹಾಸದ ನಡುವೆ ಅರಳುವ ರೋಜಾ ಈ ಹಿಂದಿನ ಸಿನೆಮಾದ ಕತೆಗಳಾದರೆ ಈ ಬಾರಿ ಅದಕ್ಕಾಗಿ ಕಾರ್ಗಿಲ್ ಯುದ್ಧಭೂಮಿಯನ್ನು ಆರಿಸಿಕೊಂಡಿದ್ದಾರೆ.

ಚಿತ್ರದ ನಾಯಕ ಏರ್‌ಫೋರ್ಸ್ ಪೈಲಟ್. ಹೆಸರು ವರುಣ್(ಕಾರ್ತಿ). ಅಂದ ಮೇಲೆ ಆತ ಯುದ್ಧವಿಮಾನದಲ್ಲಿ ಕುಳಿತು ಶತ್ರು ದೇಶವಾದ ಪಾಕಿಸ್ತಾನದ ಕಡೆಗೆ ಬಾಂಬು ಸುರಿಯಲೇ ಬೇಕು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಈತ ಪಾಕಿಸ್ತಾನ ಸೈನಿಕರಿಗೆ ಸೆರೆಯಾಳಾಗುತ್ತಾನೆ. ಆ ಸೆರೆಮನೆಯಲ್ಲಿ ಕೂತು ತಾನು ಪ್ರೀತಿಸಿದ ಅಥವಾ ಪ್ರೀತಿಯ ಹೆಸರಲ್ಲಿ ಹಿಂಸಿಸಿದ ತನ್ನ ಪ್ರೇಮಿ ಲೀಲಾ(ಅದಿತಿ ರಾವ್)ಳನ್ನು ನೆನೆಯುತ್ತಾನೆ. ಲೀಲಾಳನ್ನು ತೀವ್ರವಾಗಿ ಪ್ರೀತಿಸುವ ಅವನು, ಪರೋಕ್ಷವಾಗಿ ತನ್ನನ್ನೇ ತಾನು ಪ್ರೀತಿಸಿಕೊಳ್ಳುವವನು. ತನ್ನ ಅಹಂ, ತನ್ನ ಹಿರಿಮೆ, ವರ್ಚಸ್ಸು ಎಲ್ಲವನ್ನು ಪ್ರೇಮಿಯ ಮೇಲೆ ಹೊರಿಸಿ, ಆಕೆಗೊಂದು ವ್ಯಕ್ತಿತ್ವವೇ ಇಲ್ಲ ಎಂದು ನಂಬಿದವನು. ತನ್ನನ್ನು ಪ್ರೀತಿಸುವುದಷ್ಟೇ ಆಕೆಯ ಹೊಣೆ ಎಂದು ತಿಳಿದುಕೊಂಡವನು.

ತನ್ನನ್ನು ತಿದ್ದಿಕೊಳ್ಳಲಾಗದೆ, ಲೀಲಾಳನ್ನು ತೊರೆಯಲಾಗದೆ ತೊಳಲಾಡುವವನು. ತನ್ನ ಸಿಟ್ಟು, ದುರಹಂಕಾರಗಳಿಂದ ಲೀಲಾಳಿಂದ ದೂರವಾಗುವ ಕಾರ್ತಿ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಪಾಕಿಸ್ತಾನದ ಶತ್ರುಗಳಿಗೆ ಸೆರೆಸಿಗುತ್ತಾನೆ. ಅಲ್ಲಿ ಆತನಿಗೆ ಲೀಲಾಳ ಪ್ರೇಮದ ಅರಿವಾಗುತ್ತದೆ. ಆತ ಬದಲಾಗುತ್ತಾನೆ. ಆಕೆಯನ್ನು ಮತ್ತೆ ಸೇರುವ ಕನಸು ಕಾಣುತ್ತಾನೆ. ಅದಕ್ಕಾಗಿ ಅಲ್ಲಿಂದ ಪರಾರಿಯಾಗುವ ಯೋಜನೆ ರೂಪಿಸುತ್ತಾನೆ ಮತ್ತು ಈ ಅವಧಿಯಲ್ಲಿ ಲೀಲಾ ಗರ್ಭಿಣಿಯಾಗಿ ಒಂದು ಮಗುವನ್ನೂ ಹೆತ್ತು ವರುಣ್‌ಗಾಗಿ ಕಾಯುತ್ತಿರುತ್ತಾಳೆ.
  
ಈ ಕತೆಯನ್ನು ಹಲವುಬಾರಿ ಸ್ವತಃ ಮಣಿರತ್ನಂ ಅವರೇ ತಮ್ಮ ಸಿನೆಮಾಗಳಲ್ಲಿ ಹೇಳಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಂತೂ ಈ ವಸ್ತುವನ್ನಿಟ್ಟುಕೊಂಡು ಬಂದಿರುವ ಚಿತ್ರಗಳಿಗೆ ಲೆಕ್ಕವಿಲ್ಲ. ಆದರೂ ತನ್ನ ಹಿಮಾಲಯದ ದೃಶ್ಯ ವೈಭವ ಮತ್ತು ನವಿರಾದ ಸಂಗೀತವನ್ನೇ ನಂಬಿಕೊಂಡು ಇಂತಹದೊಂದು ದುರ್ಬಲ ಕತೆಯನ್ನು ಕೈಗೆತ್ತಿ ನಿರೂಪಿಸಲು ಯತ್ನಿಸಿರುವುದು ಮಣಿರತ್ನಂ ಮಾಡಿರುವ ಮೊದಲ ತಪ್ಪು. ಎರಡನೆಯದು, ಇಡೀ ಚಿತ್ರ ಮಣಿರತ್ನಂ ಅವರ ಹಿಂದಿನ ಮಾಂತ್ರಿಕ ಸ್ಪರ್ಶವೇ ಇಲ್ಲದೆ ಸೊರಗಿದೆ. ಇಲ್ಲಿ ಪ್ರೇಮವಾಗಲಿ, ಯುದ್ಧವಾಗಲಿ ಅಥವಾ ಸೆರೆಮನೆಯಲ್ಲಿರುವ ನಾಯಕನೇ ಆಗಲಿ ತೀವ್ರವಾಗಿ ತಟ್ಟುವುದಿಲ್ಲ. ನಾಯಕನೊಳಗಿನ ಪ್ರೇಮಿ, ಪ್ರೇಕ್ಷಕರನ್ನು ಕಾಡುವುದಿಲ್ಲ. ಚಿತ್ರದ ನಿಧಾನಗತಿ ಚಿತ್ರಕ್ಕೆ ಬಹುದೊಡ್ಡ ಹಿನ್ನಡೆ.

ಪ್ರೇಮವನ್ನು ಮಣಿರತ್ನಂ ಬಬಲ್‌ಗಂನಂತೆ ಜಗಿದು ಉಗಿದಿದ್ದಾರೆ ಎನ್ನಬಹುದು. ಚಿತ್ರದುದ್ದಕ್ಕೂ ಕಾಶ್ಮೀರದ ಕಣಿವೆಯ ಹಿಮಪರ್ವತಗಳಷ್ಟೇ ವೀಕ್ಷಕರ ಮನದಗಲದಲ್ಲಿ ಆವರಿಸಿಕೊಳ್ಳುತ್ತದೆ. ಛಾಯಾಗ್ರಹಣ, ಸಂಗೀತ ಚಿತ್ರದ ಹೆಗ್ಗಳಿಕೆ. ಪೈಲಟ್‌ನ ವ್ಯಕ್ತಿತ್ವಕ್ಕೆ ಕಾರ್ತಿ ನ್ಯಾಯಕೊಟ್ಟಿದ್ದಾರೆ. ಲೀಲಾ ಪಾತ್ರದಲ್ಲಿ ಅದಿತಿಯ ತೊಳಲಾಟಗಳೂ ಹೃದಯಸ್ಪರ್ಶಿ. ದಿಲ್‌ಸೆ ಮತ್ತು ರೋಜಾ ಚಿತ್ರದ ಸಂಘರ್ಷಗಳು ಕಾಡಿದಂತೆ ಇಲ್ಲಿ ಕಾರ್ಗಿಲ್‌ನ ಯುದ್ಧವಾಗಲಿ, ಪಾಕಿಸ್ತಾನದ ಜೈಲಾಗಲಿ ಕಾಡುವುದಿಲ್ಲ. ಇಲ್ಲಿ ನಾಯಕ ಮತ್ತು ನಾಯಕಿಯ ಪಾತ್ರವನ್ನು ಹೊರತು ಪಡಿಸಿದರೆ, ಉಳಿದ ಪಾತ್ರಗಳಿಗೆ ಯಾವ ಸ್ವಂತಿಕೆಯೂ ಇಲ್ಲ. ಸುಮ್ಮನೆ ಬಂದು ಹೋಗುತ್ತವಷ್ಟೇ. ‘ಕಡಲ್’ ಚಿತ್ರದಲ್ಲಿ ಕಳೆದುಕೊಂಡದ್ದನ್ನು ‘ಕಾದಲ್ ಕಣ್ಮಣಿ’ಯಲ್ಲಿ ಪಡೆದುಕೊಂಡರು. ಅಲ್ಲಿ ಪಡೆದುಕೊಂಡದ್ದನ್ನು ಮಣಿ ಇಲ್ಲಿ ಮತ್ತೆ ಕಳೆದುಕೊಂಡಿದ್ದಾರೆ.

ರೇಟಿಂಗ್ - **

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News