ಚಂಪಾರಣ್ಯಕ್ಕೆ ನೂರು...

Update: 2017-04-08 19:00 GMT

ಬಿಹಾರ ಸರಕಾರ ವ್ಯವಸ್ಥೆಗೊಳಿಸಿರುವ ಚಂಪಾರಣ್ಯ ಶತಮಾನೋತ್ಸವ ಸಮಾರಂಭ ಪಾಟ್ನಾದಲ್ಲಿ ನಾಳೆ ಪ್ರಾರಂಭವಾಗಲಿದೆ.ವರ್ಷಪೂರ್ತಿ ನಡೆಯಲಿರುವ ಈ ಉತ್ಸವದಲ್ಲಿ ಗಾಂಧಿಯವರ ಸಂದೇಶವನ್ನು ರಾಜ್ಯದ ಪ್ರತಿಯೊಬ್ಬರ ಮನೆಬಾಗಿಲಿಗೂ ಕೊಂಡೊಯ್ಯುವ ಉದ್ದೇಶದಿಂದ ಗಾಂಧಿ ಸ್ಮತಿಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ಮುಖ್ಯ ಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಜನತೆಗೆ ಗಾಂಧಿ ಸಂದೇಶ ಮುಟ್ಟಿಸುವ ಮುನ್ನ, ಭಾರತವನ್ನು ಪಾರುಮಾಡುವವರು ರೈತರು ಎಂದು 1916ರಲ್ಲಿ ಗಾಂಧಿಯವರು ನೀಡಿದ ಸಂದೇಶವನ್ನು ಮೋದಿಯವರಂಥ ರಾಜಕೀಯ ಧುರೀಣರು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.


ತ್ಯಾಗ್ರಹ ಈ ಭೂಮಿಯ ಮೇಲಿನ ಅತ್ಯಂತ ಪ್ರಬಲವಾದ ಅಸ್ತ್ರ ಎಂದು ಗಾಂಧೀಜಿ 1914ರಲ್ಲಿ ದಕ್ಷಿಣ ಆಫ್ರಿಕಾ ತ್ಯಜಿಸುವ ಮುನ್ನ ಘೋಷಿಸಿದ್ದರು. 1917ರಲ್ಲಿ ಭಾರತದಲ್ಲಿ ಈ ಘೋಷಣೆ ಮೊಳೆತು ದಾಂಗುಡಿ ಇಡಲಾರಂಭಿಸಿದ್ದು ಈಗ ಇತಿಹಾಸ. 1915ರ ಜನವರಿ 9ರಂದು ದಕ್ಷಿಣ ಆಫ್ರಿಕಾದಿಂದ ಗಾಂಧಿ ತಾಯ್ನಿಡಿಗೆ ಹಿಂದಿರುಗಿದ್ದರು. ‘ಅರೇಬಿಯಾ’ ಹಡಗು ಅಂದು ಅವರನ್ನು ಮುಂಬೈಯಲ್ಲಿ ತಂದಿಳಿಸಿತು. ಅನಾರೋಗ್ಯಪೀಡಿತರಾಗಿದ್ದರೂ ಗೋಖಲೆಯವರು ಗಾಂಧಿಯವರನ್ನು ಬರಮಾಡಿಕೊಳ್ಳಲು ಪುಣೆಯಿಂದ ಮುಂಬೈಗೆ ಬಂದಿದ್ದರು. ಗಾಂಧಿ ಭಾರತಕ್ಕೆ ಬಂದು ಕೇವಲ ಆರುವಾರಗಳಷ್ಟೆ ಆಗಿತ್ತು. ಇಷ್ಟು ಅಲ್ಪಅವಧಿಯಲ್ಲೇ ಅವರು ಕಾಥೇವಾಡ, ದಿಲ್ಲಿ, ದಕ್ಷಿಣ ಭಾರತಗಳಲ್ಲಿ ಸುತ್ತಾಡಿ ಬಂದಿದ್ದರು. ಅಷ್ಟರಲ್ಲಿ ಗಾಂಧಿಯವರಿಗೆ ರಾಜಕೀಯವಾಗಿ, ಆರ್ಥಿಕವಾಗಿ ಆಶ್ರಯದಾತರಾಗಿದ್ದ ಗೋಖಲೆಯವರು ದಿವಂಗತರಾದರು. ಭಾರತಕ್ಕೆ ಬಂದ ನಾಲ್ಕು ತಿಂಗಳ ನಂತರ ಮೇ 15ರಂದು ಗಾಂಧಿ ಅಹಮದಾಬಾದಿನಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು.

1915ರ ಡಿಸೆಂಬರಿನಲ್ಲಿ ಮುಂಬೈಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನದಲ್ಲಿ ಪಾಲ್ಗೊಂಡು ವಸಾಹತುಗಳಲ್ಲಿನ ಭಾರತೀಯರ ಸ್ಥಿತಿಗತಿ ಕುರಿತು ನಿರ್ಣಯವೊಂದನ್ನು ಮಂಡಿಸಿದರು. ಸ್ವದೇಶಕ್ಕೆ ವಾಪಸಾದನಂತರ ಗಾಂಧಿ ಸಾರ್ವಜನಿಕರಲ್ಲಿ ಕಂಪನ ಉಂಟುಮಾಡುವಂಥ ಧ್ವನಿಗೈದದ್ದು 1916ರ ಫೆಬ್ರವರಿ 6ರಂದು, ವಾರಾಣಸಿಯ ಹಿಂದೂ ವಿಶ್ವವಿದ್ಯಾನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ, ವೇದಿಕೆಯಲ್ಲಿ ಆಸೀನರಾಗಿದ್ದ ಸಿರಿವಂತ ಕುಲೀನ ಪುರುಷರನ್ನು ಲಕ್ಷಾಂತರ ಮಂದಿ ಬಡಬಗ್ಗರಿಗೆ ಹೋಲಿಸಿ ಮಾತನಾಡಿದ ಗಾಂಧಿಯವರು, ‘‘ಏನೇ ಆಗಲಿ ಭಾರತವನ್ನು ಪಾರುಮಾಡುವವರು ರೈತರೇ ವಿನ: ವಕೀಲರಲ್ಲ, ವೈದ್ಯರಲ್ಲ ಅಥವಾ ಶ್ರೀಮಂತ ಜಮೀನ್ದಾರರಲ್ಲ’’ ಎಂಬ ಅಪ್ರಿಯ ಸತ್ಯವನ್ನು ನುಡಿದಿದ್ದರು. ಇದನ್ನು ಕೇಳಿ ಶ್ರೀಮಂತರಿಗೆ ತೀವ್ರ ಆಘಾತವಾಗಿತ್ತು. ಭಾಷಣ ಸಾಕು ಮಾಡಿ ಎಂದು ಗಾಂಧಿಗೆ ಹೇಳಿ ಸಭೆಯನ್ನು ಏಕಾಏಕಿ ಬರ್ಖಾಸ್ತು ಮಾಡಲಾಗಿತ್ತು.

ಗಾಂಧಿಯವರ ಮಾತುಗಳನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದರಾದರೂ ರೈತರು ಅವರಲ್ಲಿ ತಮ್ಮ ವಿಮೋಚನೆಯ ಆಶಾಕಿರಣವನ್ನೇ ಕಂಡಿದ್ದರು. 1916ರ ಡಿಸೆಂಬರಿನಲ್ಲಿ ಲಕ್ನೋದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಉತ್ತರ ಬಿಹಾರದ ರೈತ ರಾಜಕುಮಾರ್ ಶುಕ್ಲಾ ಗಾಂಧಿಯವರನ್ನು ಭೇಟಿಮಾಡಿ, ಬ್ರಿಟಿಷರ ದಬ್ಬಾಳಿಕೆಯಿಂದ ತಮ್ಮನ್ನು ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡರು. ಶುಕ್ಲಾ ಬ್ರಿಟಿಷ್ ಮಾಲಕತ್ವದ ಜಮೀನಿನಲ್ಲಿ ಇಂಡಿಗೋ ಬೆಳೆಯುತ್ತಿದ್ದ ಗೇಣಿಕಾರ ರೈತನಾಗಿದ್ದ. ಬಿಹಾರಿನ ವಕೀಲ ವ್ರಜಕಿಶೋರ ಪ್ರಸಾದ್ ಈ ರೈತನನ್ನು ಗಾಂಧಿಯವರಿಗೆ ಪರಿಚಯಿಸಿದ್ದರು. ಹೀಗೆ ಭಾರತದ ಮೊಟ್ಟಮೊದಲ ರೈತ ಸತ್ಯಾಗ್ರಹ ಎನ್ನಬಹುದಾದ ಚಂಪಾರಣ್ಯ ರೈತ ಸತ್ಯಾಗ್ರಹ 1917ರಲ್ಲಿ ಗಾಂಧಿಯವರ ನಾಯಕತ್ವದಲ್ಲಿ ಶುರುವಾಯಿತು. 2017 ಚಂಪಾರಣ್ಯ ರೈತ ಸತ್ಯಾಗ್ರಹದ ನೂರನೆಯ ವರ್ಷ.

ಉತ್ತರ ಬಿಹಾರದ ಚಂಪಾರಣ್ಯ ಗೌರಿಶಂಕರಕ್ಕೆ ಅತಿದೂರದಲ್ಲೇನೂ ಇಲ್ಲ. ಗಂಗಾನದಿಗೆ ಉತ್ತರದಲ್ಲಿ, ಪರ್ವತದ ತಪ್ಪಲಿನಲ್ಲಿ ನೇಪಾಳ ಗಡಿಗೆ ಹೊಂದಿಕೊಂಡಂತಿದೆ. ಚಂಪಾರಣ್ಯದಲ್ಲಿ ಕೆಲಸಮಾಡುತ್ತಿರುವ ಇಂಡಿಗೋೀ ರೈತರ ದುರವಸ್ಥೆಯನ್ನು ಕಣ್ಣಾರೆ ಕಾಣುವಂತೆ ಶುಕ್ಲಾ ಗಾಂಧಿಗೆ ಆಗ್ರಹಪಡಿಸಿದ್ದರು. ಹದಿನೆಂಟನೆಯ ಶತಮಾನದಿಂದ ಅಲ್ಲಿ ನೀಲಿ ಮತ್ತು ಅಫೀಮು ಗಿಡಗಳನ್ನು ಬೆಳೆಯಲಾಗುತ್ತಿತ್ತು. ಬ್ರಿಟಿಷ್ ಜಮೀನ್ದಾರರಿಂದ ಗೇಣಿದಾರರು ತಾವು ಪಡೆದ ಗೇಣಿ ಭೂಮಿಯಲ್ಲಿ ನೀಲಿ ಮತ್ತು ಅಫೀಮು ಬೆಳೆಯುವುದು ಕಡ್ಡಾಯವಾಗಿತ್ತು. ಹೀಗೆ ಕಡ್ಡಾಯವಾಗಿ ಬೆಳೆದುದನ್ನು ಯೂರೋಪಿಯನ್ ಪ್ಲಾಂಟರುಗಳಿಗೆ, ಅವರು ನಿರ್ಧರಿಸಿದ ಬೆಲೆಯಲ್ಲಿ ಮಾರಬೇಕಾಗಿತ್ತು. ಈ ಬೆಳೆಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆಯಿದ್ದುದರಿಂದ ಗೇಣಿ ರೈತರು ಅದನ್ನೇ ಬೆಳೆಯಬೇಕಾಗಿತ್ತು. ಗೋಧಿ, ಜೋಳ ಇತ್ಯಾದಿ ಆಹಾರ ಧಾನ್ಯ ಬೆಳೆಯುವಂತಿರಲಿಲ್ಲ.

1917ರ ಎಪ್ರಿಲ್‌ನಲ್ಲಿ ಶುಕ್ಲಾ ಚಂಪಾರಣ್ಯಕ್ಕೆ ಭೇಟಿಕೊಡುವಂತೆ ಒತ್ತಾಯಪಡಿಸಿದಾಗ ಗಾಂಧಿ ಉತ್ತರ ಬಿಹಾರಕ್ಕೆ ಪಯಣ ಬೆಳೆಸಿದರು ಮಾರ್ಗಮಧ್ಯೆ ಶುಕ್ಲಾ ಗಾಂಧಿಯವರನ್ನು ವಕೀಲ ರಾಜೇಂದ್ರಪ್ರಸಾದರ ಮನೆಗೆ ಕರೆದೊಯ್ದರು. ಶುಕ್ಲ್ಲಾ ಮತ್ತಿತರ ಇಂಡಿಗೋ ಬೆಳೆಗಾರರು ಪ್ರಸಾದರ ಕಕ್ಷಿದಾರರಾಗಿದ್ದರು. ಗಾಂಧಿಯನ್ನು ಕರೆದೊಯ್ದಿಗ ಪ್ರಸಾದರು ಊರಲ್ಲಿರಲಿಲ್ಲ. ಗಾಂಧಿ ಕೆಳಜಾತಿಯವರೆಂದು ತಿಳಿದ ಮನೆಯವರು ಬಾವಿ, ಶೌಚಾಲಯ ಬಳಸದಂತೆ ತಡೆಯೊಡ್ಡಿದರು. ರಾಜೇಂದ್ರ ಪ್ರಸಾದರು ಊರಲ್ಲಿ ಇಲ್ಲ ಎಂದು ತಿಳಿದ ಗಾಂಧಿ ಪಾಟ್ನಾದ ಮುಸ್ಲಿಂಲೀಗ್ ನಾಯಕ ಹಕ್ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದರು. (ಹಕ್ ಲಂಡನ್ನಿನಲ್ಲಿ ಗಾಂಧಿ ಸಹಪಾಠಿಯಾಗಿದ್ದರು).

ಹಕ್ ಪಾಟ್ನಾದಲ್ಲಿ ಗಾಂಧಿ, ಶುಕ್ಲಾರನ್ನು ಮುಜಫ್ಫರ್‌ಪುರ ರೈಲು ಹತ್ತಿಸಿದರು. ಗಾಂಧಿ ಮುಜಫ್ಫರ್‌ಪುರಕ್ಕೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ವಕೀಲರು ಅವರನ್ನು ಕೂಡಿಕೊಂಡರು. ಪಾಟ್ನಾದಿಂದ ಆಗಮಿಸಿದ ರಾಜೇಂದ್ರ ಪ್ರಸಾದರೂ ವ್ರಜಕಿಶೋರ ಪ್ರಸಾದರೂ ಸೇರಿಕೊಂಡರು. ಎಲ್ಲರೂ ರೈತರ ಮೇಲೆ ನಡೆಯುತ್ತಿರುವ ಬ್ರಿಟಿಷರ ದಬ್ಬಾಳಿಕೆ-ಪೀಡನೆಗಳ ಬಗ್ಗೆ ಮಾಹಿತಿ ನೀಡಿದರು. ‘‘ನೀವು ನಿಮ್ಮ ಪಾತ್ರ ನಿರ್ವಹಿಸಲು ಸಿದ್ಧವಿದ್ದಲ್ಲಿ, ನಾನು ಇಂಡಿಗೋ ಪ್ರದೇಶದಲ್ಲೇ ನೆಲೆಸಿ ಹೋರಾಡಲು ಸಿದ್ಧ’’ ಎಂದು ಪಾಟ್ನಾ ಮತ್ತು ಉತ್ತರ ಬಿಹಾರದ ವಕೀಲರಿಗೆ ಗಾಂಧಿ ತಿಳಿಸಿದರು. ಶುಲ್ಕ ಪಡೆಯದೆ ರೈತರ ಕೆಲಸ ಮಾಡಿಕೊಡುವಂತೆ ವಕೀಲರ ಮನವೊಲಿಸಿದರು. ಚಂಪಾರಣ್ಯ ಜಿಲ್ಲೆಯಲ್ಲಿ ಇಂಡಿಗೋ ಬೆಳಯುವ ರೈತರೇ ಹೆಚ್ಚಾಗಿದ್ದರು. ಗಾಂಧಿಯವರ ಉಸ್ತುವಾರಿಯಲ್ಲಿ ರೈತರ ಹೇಳಿಕೆಗಳನ್ನು ವಕೀಲರು ಬರೆದುಕೊಂಡರು.

ಗಾಂಧಿಯವರ ಸಾನಿಧ್ಯದಿಂದ ರೈತರಲ್ಲಿ ಹೊಸ ಚೈತನ್ಯ ಮೂಡಿತ್ತು. ಗಾಂಧಿಯನ್ನು ತಮ್ಮ, ಮಾರ್ಗದರ್ಶಕನೆಂದು ರೈತರು ಒಪ್ಪಿಕೊಂಡಿದ್ದರು. ಜಮೀನ್ದಾರರು ಆಕ್ಷೇಪಣೆ ಎತ್ತಿದರು. ಗಾಂಧಿಯನ್ನು ‘ಅನಪೇಕ್ಷಿತ ಅತಿಥಿ’ ಎಂದು ಘೋಷಿಸಲಾಯಿತು. ರೈತರ ಸಮಸ್ಯೆಗಳನ್ನು ಅಧ್ಯಯನಮಾಡಿ ಸರಕಾರಕ್ಕೆ ವರದಿ ಸಲ್ಲಿಸುವುದು ತಮ್ಮ ಕರ್ತವ್ಯವೆಂದು ಗಾಂಧಿ ಸಮರ್ಥಿಸಿಕೊಂಡರು. ಚಂಪಾರಣ್ಯ ಬಿಟ್ಟು ಹೋಗುವಂತೆ ಸರಕಾರ ಗಾಂಧಿಗೆ ನೋಟಿಸು ಜಾರಿಮಾಡಿತು. ತಾವು ಈ ಆಜ್ಞೆಯನ್ನು ಪಾಲಿಸುವುದಿಲ್ಲವೆಂದು ಗಾಂಧಿ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಉತ್ತರ ಬರೆದರು. ಬ್ರಿಟಿಷ್ ಸರಕಾರ ಗಾಂಧಿಯನ್ನು ಬಂಧಿಸಲಿಲ್ಲ. ಉಚ್ಚಾಟನೆ ಆಜ್ಞೆಯನ್ನು ಹಿಂದೆಗೆದುಕೊಂಡಿತು. ರೈತರ ಅಹವಾಲುಗಳನ್ನು ಕೇಳಲು ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿಯಲ್ಲಿ ಸರಕಾರ ಗಾಂಧಿಯನ್ನು ಒಬ್ಬ ಸದಸ್ಯರನ್ನಾಗಿ ನೇಮಿಸಿತು. ಇಂಡಿಗೋ ಕೃಷಿಯನ್ನು ಕಡ್ಡಾಯಗೊಳಿಸುವುದನ್ನು ನಿಷೇಧಿಸುವಂತೆ ಸಮಿತಿ ಸರಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿತು.

ಗಾಂಧೀಜಿ ಭಾರತಕ್ಕೆ ಹಿಂದಿರುಗಿದನಂತರ ಪ್ರಪ್ರಥಮ ಹೋರಾಟಗಳಲ್ಲಿ ಮುಖ್ಯವಾದದ್ದು ಚಂಪಾರಣ್ಯ ಸತ್ಯಾಗ್ರಹ. ಮುಖ್ಯವಾಗಿ ದೇಶದ ಬೆನ್ನೆಲುಬಾದ ರೈತರ ಶೋಷಣೆ ಮತ್ತು ದಬ್ಬಾಳಿಕೆ ವಿರುದ್ಧ ನಡೆಸಿದ ಹೋರಾಟವಾದ್ದರಿಂದ ಇದಕ್ಕೆ ಸಾಂಕೇತಿಕ ಮಹತ್ವವಿದೆ. ಚಂಪಾರಣ್ಯ ಸತ್ಯಾಗ್ರಹಕ್ಕೆ ದೊರೆತ ಪ್ರಚಾರ ಭಾರತದ ರಾಜಕೀಯಕ್ಕೆ ಅಸಹಕಾರ ತತ್ವಾಧಾರಿತ ಸತ್ಯಾಗ್ರಹವನ್ನು ಪರಿಚಯಮಾಡಿಕೊಟ್ಟಿತ್ತಲ್ಲದೆ ದೇಶಾದ್ಯಂತ ಗಾಂಧಿಯವರ ಹೆಸರು ಪವನೋಪಾದಿಯಲ್ಲಿ ಹರಡಲು ಅನುವಾಯಿತು. ಮುಂದಿನ ಸತ್ಯಾಗ್ರಹಗಳಿಗೆ ನಾಂದಿಸ್ವರೂಪದ್ದಾಯಿತು.

ಮೊದಲ ಪ್ರಯತ್ನದಲ್ಲೇ ಭಾರತದಲ್ಲಿ ಗಾಂಧಿ ಹೇಗೆ ಯಶಸ್ಸನ್ನು ಸಾಧಿಸಿದರು? ಗಾಂಧಿ ಭಾರತದ ರಾಜಕಾರಣಿಗಳಲ್ಲಿ ಅಪರೂಪವಾಗಿದ್ದ ಜನಸಾಮಾನ್ಯರೊಡನೆ ಬೆರತು ಅವರ ಮನಸ್ಸು ಅರ್ಥಮಾಡಿಕೊಳ್ಳುವ ಸತ್ಯಾಗ್ರಹದ ಅಸ್ತ್ರವನ್ನು ತಮ್ಮಾಡನೆ ತಂದಿದ್ದರು. ಬಡಜನರ ಪರಿಚಯಮಾಡಿ ಕೊಳ್ಳುವುದು, ಅವರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಅರ್ಥಮಾಡಿ ಕೊಳ್ಳುವುದು ಹಾಗೂ ಅಧಿಕಾರಾರೂಢ ಜನರ ಬಗ್ಗೆಯೂ ಇದೇ ರೀತಿ ಸ್ಪಂದಿಸಿದ್ದು ಅವರ ಕಾರ್ಯಚಾಣಾಕ್ಷತೆಯ ವಿಶೇಷವಾಗಿತ್ತು. ರೈತರ ಸಮಸ್ಯೆಗಳನ್ನು ಅರಿತುಕೊಳ್ಳುವಂತೆಯೇ ಅವರಿಗೆ ಬ್ರಿಟಿಷ್ ಭೂಮಾಲಕರು ಮತ್ತು ಅಧಿಕಾರಿಗಳೊಂದಿಗೆ ಸ್ನೇಹ ಸಂಪಾದನೆ ಸಾಧ್ಯವಾಯಿತು. ಇದರಿಂದಾಗಿ ದಿಲ್ಲಿಯ ವರಿಷ್ಠ ಬ್ರಿಟಿಷ್ ಅಧಿಕಾರಿಗಳ ಸಹಾನುಭೂತಿ ಗಳಿಸುವುದು ಸಾಧ್ಯವಾಯಿತು. ರೈತರ ಶೋಷಣೆ ಮತ್ತು ಅವರ ಮೇಲಿನ ಇಂಡಿಗೋ ಬೆಳೆಯ ನಿರ್ಬಂಧ ನಿಲ್ಲಿಸದಿದ್ದಲ್ಲಿ ‘ಕೈಸರ್-ಹಿಂದ್’ ಪ್ರಶಸ್ತಿಯಿಂದ(ಯುದ್ಧಕಾಲದಲ್ಲಿ ಮಾಡಿದ ಸೇವೆಗಾಗಿ ಬ್ರಿಟಿಷ್ ಸರಕಾರ ನೀಡಿದ್ದ ಬಿರುದು)ಋಣಮುಕ್ತರಾಗುವುದಾಗಿಯೂ ಅವರು ವೈಸರಾಯ್‌ಗೆ ಪತ್ರಬರೆದಿದ್ದರು.

ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ 1917 ಮಹತ್ವದ ವರ್ಷ. 1917ರಲ್ಲಿ ಗಾಂಧಿ ಇನ್ನೂ ಎರಡು ವಿಜಯಗಳನ್ನು ಸಾಧಿಸಿದ್ದರು. ಒಂದು ವೀರಗ್ರಾಮ ಸುಂಕದ ಠಾಣೆ ಮುಚ್ಚಿಸಿದ್ದು. ಮತ್ತೊಂದು ಕೂಲಿ ಕಾರ್ಮಿಕರ ವಲಸೆ ಪದ್ಧತಿ ನಿಷೇಧಕ್ಕೆ ಸಂಬಂಧಿಸಿದ್ದು. ಗಾಂಧಿ ಮೂರನೆ ದರ್ಜೆ ಬೋಗಿಯಲ್ಲಿ ಪಯಣಿಸುತ್ತಿದ್ದಾಗ ಕಾಥೇವಾಡದ ವಧ್ವಾನ್‌ನಲ್ಲಿ ಅವರಿಗೆ ಮೋತಿಲಾಲ್ ಎಂಬ ದರ್ಜಿಯ ಪರಿಚಯವಾಗುತ್ತದೆ. ವೀರಗ್ರಾಮ್ ರೈಲುನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಿರಿಕುಳ ನೀಡುತ್ತಿದ್ದ ಸುಂಕದ ಅಧಿಕಾರಿಗಳ ವಿರುದ್ಧ ಸತ್ಯಾಗ್ರಹ ನಡೆಸುವಂತೆ ಈ ದರ್ಜಿ ಮನವಿ ಮಾಡಿಕೊಂಡ. ‘‘ಜೈಲಿಗೆ ಹೋಗಲು ಸಿದ್ಧನಿದ್ದೀಯ’’ ಎಂಬುದು ಗಾಂಧಿಯವರ ಪ್ರಶ್ನೆ. ದರ್ಜಿ ಮೋತಿಲಾಲ್ ‘‘ಸಿದ್ಧನಿರುವೆ’’ ಎಂದದ್ದೇ ತಡ ಗಾಂಧಿ ಬಹಿರಂಗ ಸಭೆಯಲ್ಲಿ ಸುಂಕದ ಅಧಿಕಾರಿಗಳು ಬಡಜನತೆಗೆ ಕೊಡುತ್ತಿರುವ ಕಷ್ಟಕೋಟಲೆಗಳನ್ನು ಬಯಲು ಮಾಡಿ ತರಾಟೆಗೆ ತೆಗೆದುಕೊಂಡರು. ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಗವರ್ನರ್ ವೆಲ್ಲಿಂಗ್ಟನ್ ಜೊತೆ ಮಾತುಕತೆ ನಡೆಸಿದರು. ಫಲವಾಗಿ ವೈಸರಾಯ್ ಲಾರ್ಡ್ ಚಾಲ್ಮ್‌ಸಫರ್ಡ್ ಸುಂಕದಕಟ್ಟೆ ತೆಗೆಯಲು ಆಜ್ಞೆ ಮಾಡಿದರು.

1918 ಗಾಂಧಿಯವರ ಸತ್ಯಾಗ್ರಹದ ಯಶಸ್ಸಿನ ಎರಡನೆಯ ಘಟ್ಟ. ಆ ವರ್ಷ ಖೇಢಾದಲ್ಲಿ ನಡೆದ ರೈತರ ಸತ್ಯಾಗ್ರಹ ಚಂಪಾರಣ್ಯ ಚಳವಳಿಯನ್ನು ಹಿಂಬಾಲಿಸಿಕೊಂಡು ಬಂದಂತಿತ್ತು. ಮಳೆಬೆಳೆ ಕಾಣದೆ ಕಂಗಾಲಾಗಿದ್ದ ಗುಜರಾತಿನ ಖೇಡ್‌ನ ರೈತರು ಬ್ರಿಟಿಷ್ ಸರಕಾರದ ಕರಭಾರದಿಂದ ಬಸವಳಿದು ಹೋಗಿದ್ದರು. ಗೋಧ್ರಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಖೇಡ್‌ನ ಮೋಹನಲಾಲ್ ಪಾಂಡ್ಯ ಮತ್ತು ಶಂಕರಲಾಲ್ ಪಾರೀಖ್ ಅತಿವೃಷ್ಟಿಯಿಂದಾಗಿ ದೈನೇಸಿಯಾಗಿರುವ ರೈತರಿಗೆ ಆ ವರ್ಷ ಭೂಕಂದಾಯ ಪಾವತಿಯಿಂದ ವಿನಾಯಿತಿ ದೊರಕಿಸಿಕೊಡುವಂತೆ ಗಾಂಧಿಯ ಮೊರೆಹೊಕ್ಕಿದ್ದರು. ಪಾಂಡ್ಯ ಮತ್ತು ಪಾರೀಖರನ್ನು ಪಾಟೀಸವಾಲಿಗೊಳಪಡಿಸಿ ರೈತರ ಕಷ್ಟ ಮನಗಂಡ ಗಾಂಧಿಯವರು ಕಂದಾಯ ಪಾವತಿಸದಂತೆ ತಾಕೀತು ಮಾಡಿದರು ಹಾಗೂ ಈ ವಿಷಯದಲ್ಲಿ ರೈತರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವನ್ನು ವಲ್ಲಭಭಾಯಿ ಪಟೇಲರಿಗೆ ವಹಿಸಿದರು. ಕಂದಾಯ ರದ್ದತಿಗೆ ಸರಕಾರ ಒಪ್ಪಲಿಲ್ಲ. ಖೇಡಾದಲ್ಲಿ ಕಲೆಕ್ಟರ್‌ಆಗಿದ್ದ ಫ್ರೆಡ್ರಿಕ್ ಪ್ರಾಟ್ ಗಾಂಧಿ ಸಮವಯಸ್ಕ. ಪ್ರಾಟ್ ಗಾಂಧಿಗಿಂತ ಹೆಚ್ಚಾಗಿ ಪಟೇಲರ ಬಗ್ಗೆ ಕಠಿಣ ಧೋರಣೆ ತಾಳಿದ್ದ. ಪ್ರಾಟ್ ಮತ್ತು ಅವನ ಮಾಮಲೇದಾರರು ರೈತರ ಬಗ್ಗೆ ತುಂಬ ಕ್ರೌರ್ಯದಿಂದ ವರ್ತಿಸುತ್ತಿದ್ದರು. ಭೂ ಕಂದಾಯ ಪಾವತಿಸುವುದಿಲ್ಲವೆಂದು ಮೂರು ಸಾವಿರಕ್ಕೂ ಹೆಚ್ಚು ರೈತರು ಪ್ರತಿಜ್ಞಾವಿಧಿಗೆ ಸಹಿ ಹಾಕಿದ್ದರು.

ಹೋರಾಟ ಐದು ತಿಂಗಳ ಕಾಲ ನಡೆಯಿತು. ರೈತರ ಧೋರಣೆ ಕಂಡು ಗಾಂಧಿ ಪುಳಕಿತರಾಗಿದ್ದರು. ಮಾಮಲೇದಾರರು ಮಹಿಳೆಯರು ಮಕ್ಕಳ ಮೇಲೆ ಕೈಮಾಡಿದರೂ ರೈತರ ತಾಳ್ಮೆ ಕಳೆದುಕೊಳ್ಳದ ‘ಶಾಂತಿಯುತ ಸಮರ’ ಗಾಂಧಿಯವರನ್ನು ವಿಸ್ಮಿತರನ್ನಾಗಿಸಿತ್ತು. ಸತ್ಯಾಗ್ರಹದ ಗುಣಾತ್ಮಕತೆಯ ಬಗ್ಗೆ ಗಾಂಧಿ ವಿಸ್ಮಿತರಾಗಿದ್ದಾಗಲೇ ಬ್ರಿಟಿಷ್ ಸರಕಾರ ಬಡ ರೈತರು ಆ ವರ್ಷ ಕಂದಾಯ ಪಾವತಿ ಮಾಡಬೇಕಿಲ್ಲವೆಂದು ಪ್ರಕಟಿಸಿತು. ಖೇಡ್ ರೈತ ಸತ್ಯಾಗ್ರಹ ಹೀಗೆ ಯಶಸ್ವಿಯಾದಂತೆ ಗಾಂಧಿಯವರು ಅಹಮದಾಬಾದ್ ಜವಳಿ ಕಾರ್ಮಿಕರ ನೆರವಿಗೆ ಧಾವಿಸಬೇಕಾಯಿತು. ಗಾಂಧಿಯವರಿಗೆ ಚಂಪಾರಣ್ಯದಲ್ಲಿದ್ದಾಗಲೇ ಅನಸೂಯಾ ಬೆನ್ ಸಾರಾಭಾಯಿಯವರಿಂದ ಜವಳಿ ಕಾರ್ಮಿಕರ ಸಮಸ್ಯೆ ತಿಳಿದಿತ್ತು.

ಕಾರ್ಮಿಕರು ಶೇ.35ರಷ್ಟು ವೇತನ ಏರಿಕೆ ಬೇಡಿಕೆಯಿಟ್ಟು ಸಂಪು ಹೂಡಿದ್ದರು. ಮುಷ್ಕರ ಎರಡು ವಾರಗಳ ಕಾಲ ನಡೆಯಿತು. ಗಾಂಧಿ ಕರಪತ್ರಗಳ ಮೂಲಕ ಕಾರ್ಮಿಕರಿಗೆ ಏಕತೆಯ ಮಂತ್ರ ಬೋಧಿಸುತ್ತಿದ್ದರು. ಆದಾಗ್ಯೂ ಕಾರ್ಮಿಕರಲ್ಲೇ ಅನಸೂಯ ಬೆನ್ ಜೊತೆ ಕಾರಿನಲ್ಲಿ ಬಂದು ಹೋಗುವ ಗಾಂಧಿಯವರಿಗೆ ಹಸಿದ ಹೊಟ್ಟೆಗಳ ಯಾತನೆ ಅರ್ಥವಾಗುವುದಿಲ್ಲವೆಂಬ ಗುಸುಗುಸು ಶುರುವಾಗಿತ್ತು. ಮುಷ್ಕರ ಪ್ರಾರಂಭಿಸಿದಾಗ ಐದು ಸಾವಿರವಿದ್ದ ಕಾರ್ಮಿಕರ ಸಂಖ್ಯೆ ಒಂದು ಸಾವಿರಕ್ಕಿಳಿದುದನ್ನು ಕಂಡಾಗ, ‘‘ನೀವು ವಚನ ಭಂಗಮಾಡುವುದನ್ನು ನಾನು ಇನ್ನೊಂದು ಕ್ಷಣವೂ ಸಹಿಸಲಾರೆ. ನಿಮಗೆ ಶೇ.35ರಷ್ಟು ಸಂಬಳ ಏರಿಕೆ ಆಗುವವರೆಗೆ ನಾನು ಊಟವನ್ನೂ ಮಾಡುವುದಿಲ್ಲ’’ ಎಂದು ಘೋಷಿಸಿದರು. ‘‘ಇದು ಮಾಲಕರು ಮತ್ತು ಕಾರ್ಮಿಕರ ನಡುವಣ ವಿಷಯ. ಇದರಲ್ಲಿ ನೀವೇಕೆ?, ನಿಮ್ಮ ಜೀವದ ಪಣವೇಕೆ?’’ ಎಂದು ಗಿರಣಿ ಮಾಲಕರು ಅಬ್ಬರಿಸಿದರು. ಕೊನೆಗೂ ಮಾಲಕರು ವೇತನ ಏರಿಕೆಗೆ ಒಪ್ಪಿಕೊಂಡರು. 1918ರ ಮಾರ್ಚ್ 19ರಂದು ಗಾಂಧೀ ಉಪವಾಸ ನಿಲ್ಲಿಸಿದರು. ಹೀಗೆ ಮೂರು ವರ್ಷಗಳಲ್ಲಿ ಗಾಂಧಿಯವರು ಗೇಣಿದಾರರು, ರೈತರು ಮತ್ತು ಕಾರ್ಮಿಕರ ಸತ್ಯಾಗ್ರಹಗಳಲ್ಲಿ ವಿಜಯಿಯಾಗಿದ್ದರು. ಮುಂದಿನ ಹೋರಾಟಕ್ಕೆ ಅಗತ್ಯವಾಗಿದ್ದ ನೈತಿಕ ಸ್ಥೈರ್ಯವನ್ನು ತಂದುಕೊಟ್ಟ ಈ ಮೂರು ಸತ್ಯಾಗ್ರಹಗಳು ಮುಂದಿನ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಬಿಂದುಗಳಾಗಿದ್ದವು.

ಬಿಹಾರ ಸರಕಾರ ವ್ಯವಸ್ಥೆಗೊಳಿಸಿರುವ ಚಂಪಾರಣ್ಯ ಶತಮಾನೋತ್ಸವ ಸಮಾರಂಭ ಪಾಟ್ನಾದಲ್ಲಿ ನಾಳೆ(10-4-2017) ಪ್ರಾರಂಭವಾಗಲಿದೆ.ವರ್ಷಪೂರ್ತಿ ನಡೆಯಲಿರುವ ಈ ಉತ್ಸವದಲ್ಲಿ ಗಾಂಧಿಯವರ ಸಂದೇಶವನ್ನು ರಾಜ್ಯದ ಪ್ರತಿಯೊಬ್ಬರ ಮನೆಬಾಗಿಲಿಗೂ ಕೊಂಡೊಯ್ಯುವ ಉದ್ದೇಶದಿಂದ ಗಾಂಧಿ ಸ್ಮತಿಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ಮುಖ್ಯ ಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಜನತೆಗೆ ಗಾಂಧಿ ಸಂದೇಶ ಮುಟ್ಟಿಸುವ ಮುನ್ನ, ಭಾರತವನ್ನು ಪಾರುಮಾಡುವವರು ರೈತರು ಎಂದು 1916ರಲ್ಲಿ ಗಾಂಧಿಯವರು ನೀಡಿದ ಸಂದೇಶವನ್ನು ಮೋದಿಯವರಂಥ ರಾಜಕೀಯ ಧುರೀಣರು ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.

ಏತನ್ಮಧ್ಯೆ, ಚಂಪಾರಣ್ಯ ಮತ್ತು ಬಿಹಾರದ ಇತರೆಡೆಗಳಲ್ಲಿ ಇಂದು ರೈತರ ಸ್ಥಿತಿ 1917ರಲ್ಲಿ ಇಂಡಿಗೋ ಕೃಷಿಮಾಡುತ್ತಿದ್ದ ರೈತರ ಸ್ಥಿತಿಗಿಂತ ಉತ್ತಮವಾಗೇನಿಲ್ಲ’ ಎನ್ನುತ್ತಾರೆ ಗಾಂಧಿತತ್ವದ ವಿದ್ವಾಂಸರುಗಳು ಮತ್ತು ಕ್ರಿಯಾವಾದಿಗಳು. ನರೇಂದ್ರ ಮೋದಿಯವರ ಕೇಂದ್ರ ಸರಕಾರವಂತೂ ಕೃಷಿ ರಾಜ್ಯದ ವಿಷಯ ಎಂದು ರೈತರ ಸಮಸ್ಯೆಗಳ ಬಗ್ಗೆ ದಿವ್ಯ ಮೌನ ತಾಳಿದೆ. ಇದು ತರವಲ್ಲ. ಇನ್ನಾದರೂ ಕೇಂದ್ರ ಸರಕಾರ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ರೈತರ ಸಾಲ ಮನ್ನಾ ಮೊದಲಾದ ಬೇಡಿಕೆಗಳಿಗೆ ಸ್ಪಂದಿಸಬೇಕು. ರೈತರು ಬೆಳೆದ ಫಸಲಿಗೆ ನ್ಯಾಯಯುತವಾದ ಬೆಲೆ ಸಿಗುವಂತಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದರಲ್ಲಿ ರಾಜ್ಯಗಳೊಂದಿಗೆ ಕೇಂದ್ರ ಕೈಜೋಡಿಸಬೇಕು. ರೈತರ ಸಮಸ್ಯೆಗಳ ಸಂಪೂರ್ಣ ನಿವಾರಣೆಯೊಂದೇ ಮಹಾತ್ಮರಿಗೆ ನಿಜವಾದ ಸ್ಮಾರಕವಾದೀತು. ಆಗ ಚಂಪಾರಣ್ಯ ಶತಮಾನೋತ್ಸವ ಆಚರಣೆಗೆ ಒಂದು ಅರ್ಥ ಬಂದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News