ಪರಿಸರ ಮಾಲಿನ್ಯ: ನ್ಯಾಯಾಲಯದ ಮಹತ್ವ ಪೂರ್ಣ ತೀರ್ಪು

Update: 2017-04-11 18:45 GMT

ಸುಪ್ರೀಂ ಕೋರ್ಟ್ ತೀರ್ಪಿನಿಂದ ವಾಯು ಮತ್ತು ಶಬ್ದ ಮಾಲಿನ್ಯ ಪೂರ್ಣ ನಿಂತು ಹೋಗುತ್ತದೆ ಎಂದು ಹೇಳಲಾಗದು. ಈ ನಿಟ್ಟಿನಲ್ಲಿ ಇದು ನ್ಯಾಯಾಲಯದ ಮೊದಲ ಹೆಜ್ಜೆ ಎನ್ನಬಹುದು. ಈ ತೀರ್ಪು ಹೇಗೆ ಜಾರಿಗೆ ಬರುತ್ತದೆ ಎನ್ನುವುದೂ ಅಷ್ಟೇ ಮುಖ್ಯ.


ದೆೇಶದಲ್ಲಿ ವಾಯು ಮತ್ತು ಶಬ್ದ ಮಾಲಿನ್ಯದ ನಿಯಂತ್ರಣದ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ದೃಢವಾದ ನಿಲುವು ತೆಗೆದು ಕೊಂಡಿದ್ದು, ಪರಿಸರವಾದಿಗಳಲ್ಲದೆ, ಜನಸಾಮಾನ್ಯರೂ ಅದನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ. ತನ್ನ ಐತಿಹಾಸಿಕ ತೀರ್ಪಿನಲ್ಲಿ, ಎಪ್ರಿಲ್ ಒಂದರಿಂದ ಬಿ.ಎಸ್.-3 ವಾಹನಗಳ (ಭಾರತ ಸ್ಟೇಜ್-3) ಮಾರಾಟವನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ. ಮತ್ತು ಎಪ್ರಿಲ್ ಒಂದರಿಂದ ಇಂತಹ ವಾಹನಗಳ ನೋಂದಣಿಯನ್ನು ಕೂಡಾ ಮಾಡಬಾರದು ಎಂದು ಆದೇಶಿಸಿದೆ. ವಾಹನ ಉತ್ಪಾದಕರ ಕಮರ್ಷಿಯಲ್ ಹಿತಾಸಕ್ತಿಗಿಂತ ಕೋಟ್ಯಂತರ ಜನತೆಯ ಆರೋಗ್ಯ ಮುಖ್ಯ ಎಂದು ಒತ್ತಿ ಹೇಳಿದೆ.

ಎಪ್ರಿಲ್ ಒಂದರಿಂದ ಬಿ. ಎಸ್. -4 ಮಾಲಿನ್ಯ ಹೊರ ಸೂಸುವ ಹೊಸ ನಾರ್ಮ (ಎಮಿಷನ್ ನಾರ್ಮ) ಜಾರಿಗೆ ಬರಲಿದ್ದು, ದೇಶದಲ್ಲಿ ವಾಹನ ಉತ್ಪಾದಕರು ಕಡ್ಡಾಯವಾಗಿ ಈ ನಾರ್ಮನ್ನು ಪಾಲಿಸಲೇ ಬೇಕು. ‘‘ಎಪ್ರಿಲ್ 1, 2017 ಇಂತಹ ವಾಹನಗಳ ಉತ್ಪಾದನೆಗೆ ಕೊನೆಯ ದಿನವಾಗಲಿ, ಆದರೆ, ಈ ವಾಹನಗಳ ಸ್ಟಾಕ್ ಇರುವವರೆಗೆ ಮಾರಾಟಕ್ಕೆ ಅವಕಾಶ ಇರಲಿ’’ ಎನ್ನುವ ವಾಹನ ಉತ್ಪಾದಕರ ಮನವಿಗೂ ನ್ಯಾಯಾಲಯ ಸ್ಪಂದಿಸದೆ, ಮಾಲಿನ್ಯ ನಿಯಂತ್ರಣದ ಬಗೆಗಿನ ತನ್ನ ಬದ್ಧತೆಯಿಂದ ಸರಿಯಲಿಲ್ಲ. ಸರಕಾರವೂ ಉತ್ಪಾದಕರ ಮನವಿಗೆ ನ್ಯಾಯಾಲಯದಲ್ಲಿ ಸ್ಪಂದಿಸಿತ್ತು. ವಿಚಾರಣೆಯನ್ನು ಮತ್ತು ತೀರ್ಪನ್ನು ಹಳಿ ತಪ್ಪಿಸುವ ಎಲ್ಲಾ ಪ್ರಯತ್ನವನ್ನು ಮೆಟ್ಟಿನಿಂತು ನಿರ್ಣಯ ನೀಡಿದೆ. ವಾಹನ ಉತ್ಪಾದಕರು ಕಮರ್ಷಿಯಲ್ ಅಸಕ್ತಿಯ ಹೊರಗೂ ಚಿಂತಿಸಬೇಕೆಂದು ಕಟ್ಟಪ್ಪಣೆ ಮಾಡಿದೆ. ಬಿ.ಎಸ್-4 ತಂತ್ರಜ್ಞಾನದ ಈ ವಾಹನಗಳನ್ನು 2005 ಮತ್ತು 2010ರಲ್ಲಿ ಹೊಸ ಎಮಿಷನ್ ನಾರ್ಮ ಬಂದಾಗಲೇ ಮಾರಬೇಕೆಂದು ನಿರ್ದೇಶಿಸಲಾಗಿತ್ತು. ಅದರೆ, ವಾಹನ ಉತ್ಪಾದಕರು ಈ ನಿರ್ದೇಶನಗಳಿಗೆ ಕಿವಿಗೊಡಲಿಲ್ಲ.

43 ಅಟೋಮೊಬೈಲ್ ಕಂಪೆನಿಗಳು 2010ರಿಂದ ಮಾರ್ಚ್ 2017ರ ವರೆಗೆ 13 ಕೋಟಿ ಬಿ.ಎಸ್. 3 ವಾಹನಗಳನ್ನು ಉತ್ಪಾದಿಸಿದ್ದು, ಇಂತಹ ವಾಹನ ಉತ್ಪಾದಕರ ಬಳಿ ಈಗ 96,724 ಕಮರ್ಷಿಯಲ್ ವಾಹನಗಳ, 6,71,308 ದ್ವಿಚಕ್ರ ವಾಹನಗಳು, 40,408 ತ್ರಿಚಕ್ರ ಮತ್ತು 16,198 ಕಾರುಗಳು ಮಾರಾಟವಾಗದೆ ಉಳಿದಿವೆ. ಈ ಮಾರಾಟವಾಗದೆ ಉಳಿದ ಸ್ಟಾಕ್‌ನಿಂದಾಗಿ ಅಶೋಕ್ ಲೈಲ್ಯಾಂಡ್, ಹೀರೊ, ಹೊಂಡಾ, ಮಹೀಂದ್ರಾ, ಟಾಟಾದಂಥ ಕಂಪೆನಿಗಳು ಸುಮಾರು 12,000 ಕೋಟಿ ನಷ್ಟ ಅನುಭವಿಸುವ ಸಾದ್ಯತೆಗಳಿವೆ ಎಂದು ಅಂದಾಜು ಮಾಡಲಾಗುತ್ತಿದೆ. ಇವುಗಳನ್ನು ವಿಲೇವಾರಿ ಮಾಡುವುದೇ ಅವರಿಗೆ ಒಂದು ಭಾರೀ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಗೆಯೇ ಅಟೋಮೊಬೈಲ್ ಉದ್ಯಮವು ದೇಶದ ಎರಡನೆ ಅತಿದೊಡ್ಡ ಉದ್ಯೋಗದ ತಾಣವಾಗಿದ್ದು ಮತ್ತು ಅತೀ ಹೆಚ್ಚಿನ ತೆರಿಗೆಯನ್ನು ಸರಕಾರಕ್ಕೆ ನೀಡುವುದಾಗಿದ್ದು, ಇಂತಹ ವಾಹನಗಳನ್ನು ನಿಷೇಧಿಸುವ ಹೆಜ್ಜೆ ದೇಶದ ಔದ್ಯಮಿಕ ಪ್ರಗತಿಗೆ ಮಾರಕ ಎಂದು ವಾದಿಸಲಾಗುತ್ತಿದೆ.

ಬಿ.ಎಸ್.-3 ತಂತ್ರ ಜ್ಞಾನದ ವಾಹನಗಳನ್ನು ಬಿ.ಎಸ್.-4 ವಾಹನಗಳಾಗಿ ಪರಿವರ್ತಿಸುವುದು ಕಷ್ಟದಾಯಕ ಮತ್ತು ವೆಚ್ಚದಾಯಕ. ಇಂತಹ ಪರಿವರ್ತನೆಗೆ ಪ್ರತಿವಾಹನಕ್ಕೆ ರೂ. 15,000 ರಿಂದ 20,000 ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗುತ್ತಿದೆ.

ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳು ಆಧುನಿಕ ಜಗತ್ತಿನ ಎರಡು ಮಹಾ ಶಾಪಗಳು ಎಂದು ಬಣ್ಣಿಸಲಾಗುತ್ತದೆ. ಇದರಲ್ಲಿ ಸತ್ಯವಿಲ್ಲದಿಲ್ಲ. ವಾಯು ಮಾಲಿನ್ಯವು ಪುಪ್ಪುಸ ಸಂಬಂಧಿ ಅಸ್ತಮಾ ಮತ್ತು ಮೆದುಳಿನ ತೊಂದರೆಗಳಿಗೆ ಕಾರಣವಾದರೆ, ಶಬ್ದ ಮಾಲಿನ್ಯವು ಕಿವುಡುತನ ಮತ್ತು ಮಾನಸಿಕ ತೊಂದರೆಗೆ ಕಾರಣವಾಗುತ್ತದೆ ಎನ್ನುವ ಅಭಿಪ್ರಾಯವು ವೈದ್ಯಲೋಕದಲ್ಲಿ ಪರಾವೆ ಸಹಿತ ಕೇಳಿಬರುತ್ತಿದೆ. ದೇಶದ ಪ್ರಗತಿ ಮತ್ತು ಬೆಳವಣಿಗೆಯೊಂದಿಗೆ ಅವು ಜನತೆಯ ಗಮನಕ್ಕೆ ಬರದೆ ಹಾಸುಹೊಕ್ಕಾಗಿ ಬಂದಿರುತ್ತವೆ. ಅದರ ಪರಿಣಾಮದ ಬಗೆಗೆ ಸ್ವಲ್ಪಗೊತ್ತಾದರೂ ಅದರ ಬಗೆಗೆ ಚಿಂತಿಸುವಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ. ಅದು ಒಂದು ಹಂತ ಮೀರಿ, ದಿನನಿತ್ಯದ ಬದುಕು ದುಸ್ತರವಾದಾಗಲೇ ಅದರ ಬಗೆಗೆ ಗಮನ ಹರಿಸುವುದು. ವಾಹನಗಳ ಸಂಖ್ಯೆ ಹೆಚ್ಚಾದಾಗ ಅದನ್ನು ದೇಶದ ಪ್ರಗತಿಯ ಸಂಕೇತ ಮತ್ತು ಆರ್ಥಿಕ ಸುಧಾರಣೆಯ ಕುರುಹುಗಳು ಎಂದು ಭಾವಿಸಲಾಯಿತೇ ವಿನಹ ಅದರ ಪರಿಣಾಮದ ಬಗೆಗೆ ಯಾರೂ ಚಿಂತಿಸುವ ಪ್ರಯತ್ನ ಮಾಡಲಿಲ್ಲ.

   ಸುಪ್ರೀಂ ಕೋರ್ಟ್ ತೀರ್ಪಿನಿಂದ ವಾಯು ಮತ್ತು ಶಬ್ದ ಮಾಲಿನ್ಯ ಪೂರ್ಣ ನಿಂತು ಹೋಗುತ್ತದೆ ಎಂದು ಹೇಳಲಾಗದು. ಈ ನಿಟ್ಟಿನಲ್ಲಿ ಇದು ನ್ಯಾಯಾಲಯದ ಮೊದಲ ಹೆಜ್ಜೆ ಎನ್ನಬಹುದು. ಈ ತೀರ್ಪು ಹೇಗೆ ಜಾರಿಗೆ ಬರುತ್ತದೆ ಎನ್ನುವುದೂ ಅಷ್ಟೇ ಮುಖ್ಯ. ಮಾಲಿನ್ಯದ ಮೂಲ ಕಾರಣ ಕೆಲವು ವಾಹನಗಳ ತಂತ್ರಜ್ಞಾನ ಮತ್ತು ತನ್ಮೂಲಕ ಅವು ಹೊರಸೂಸುವ ಹೊಗೆ ಎಂದು ದೃಢೀಕರಿಸಲ್ಪಟ್ಟಿದ್ದು, ಅಪರಿಮಿತ ಹೊಗೆ ಸೂಸುವ ತಂತ್ರಜ್ಞಾನವನ್ನು ಕೊನೆಗೊಳಿಸುವ ಮತ್ತು ಕಡಿಮೆ ಮಾಲಿನ್ಯವನ್ನು ಮಾಡುವ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಪ್ರಯತ್ನ ಇದು. ಈ ಹೊಸ ಬಿ.ಎಸ್-4 ತಂತ್ರಜ್ಞಾನ ಮಾಲಿನ್ಯವನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತಿದ್ದು, ಜಗತ್ತಿನಾದ್ಯಂತ ವಾಹನಗಳು ಇದೇ ತಂತ್ರಜ್ಞಾನವನ್ನು ಉಪಯೋಗಿಸುತ್ತಿವೆ. 2005 ರಿಂದಲೂ ಭಾರತದಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರಕಿದರೂ, ವಾಹನ ಉತ್ಪಾದಕರ ಮತ್ತು ಕೆಲವು ಹಿತಾಸಕ್ತಿಗಳ ವಿರೋಧದಿಂದಾಗಿ ಇದರ ಅನುಷ್ಠಾನ ವಿಳಂಬವಾಯಿತು. ಸುಪ್ರೀಂ ಕೋರ್ಟನ ದೃಢವಾದ ನಿಲುವು ಈ ಗೊಂದಲವನ್ನು ನಿವಾರಿಸಿದ್ದು ನಿಟ್ಟುಸಿರು ಬಿಡುವಂತಾಗಿದೆ.

ಮಾರಾಟವಾಗದ ಸ್ಟಾಕ್‌ನಿಂದಾಗಿ ವಾಹನ ಉತ್ಪಾದಕರು ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಅವರ ಮುಂದಿನ ನಡೆಯನ್ನು ಕುತೂಹಲದಿಂದ ನೋಡಲಾಗುತ್ತಿದೆ. ಕಾನೂನಿನಲ್ಲಿಯ ನ್ಯೂನತೆಗಳನ್ನು ಉಪಯೋಗಿಸಿಕೊಂಡು ಈಗಾಗಲೇ ಅವಧಿ ಪೂರ್ಣಗೊಳ್ಳುವ ಮೊದಲೇ ಸಾಕಷ್ಟು ಶಿಲ್ಕು ಮಾರಾಟವಾಗಿದೆ. ಉತ್ಪಾದಕರು ಮತ್ತು ಗ್ರಾಹಕರು, ಇಬ್ಬರೂ ನಿಟ್ಟುಸಿರು ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಉತ್ಪಾದಕರ ಲಾಬಿ ಪ್ರಭಾವಿಯಾಗಿದ್ದು ಮತ್ತು ಬಲವಂತವಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನಿನಲ್ಲಿ ಸ್ವಲ್ಪಮಾರ್ಪಾಡಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮುಂದಿನ ಬೆಳವಣಿಗೆ ಏನಾದರೂ ಇರಲಿ, ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ, ಜನತೆ ವಾಯು ಮತ್ತು ಶಬ್ದ ಮಾಲಿನ್ಯದ ವಿಷಯದಲ್ಲಿ ಸ್ವಲ್ಪನೆಮ್ಮದಿ ಕಾಣಬಹುದೇನೋ?

Writer - ರಮಾನಂದ ಶರ್ಮಾ, ಬೆಂಗಳೂರು

contributor

Editor - ರಮಾನಂದ ಶರ್ಮಾ, ಬೆಂಗಳೂರು

contributor

Similar News